“ಸಿರಿಗನ್ನಡಂ ಗೆಲ್ಗೆ” ಮಂತ್ರದೃಷ್ಟಾರರಾದ ರಾ.ಹ.ದೇಶಪಾಂಡೆ ಎಂದೇ ಎಲ್ಲೆಡೆ ಪ್ರಸಿದ್ಧರಾದ ರಾಮಚಂದ್ರ ಹಣಮಂತರಾವ ದೇಶಪಾಂಡೆ[] (1861 - 1931). ಶಿಕ್ಷಣವೇತ್ತ, ಗ್ರಂಥಕರ್ತ ಮತ್ತು ಕನ್ನಡ ಚಳುವಳಿಯ ಸಂಘಟಕ.

ಇವರು ೧೮೬೧ ಮಾರ್ಚ ೨೦ರಂದು ಧಾರವಾಡ ಪಟ್ಟಣದಿಂದ ಸುಮಾರು ೧೫ ಕಿ.ಮೀ.ದೂರವಿರುವ ನರೇಂದ್ರ ಗ್ರಾಮದಲ್ಲಿ ಜನಿಸಿದರು[].ತಂದೆ ವತನದಾರ ಮನೆತನದ ಹಣಮಂತರಾವ್ ದೇಶಪಾಂಡೆ. ಇವರು ತೀರಿಕೊಂಡದ್ದು 25-6-1931 ರಂದು.

ರಾ.ಹ.ದೇಶಪಾಂಡೆ

ಶಿಕ್ಷಣ

ಬದಲಾಯಿಸಿ

ರಾಮಚಂದ್ರ ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿ. ನರೇಂದ್ರದಲ್ಲಿಯೇ ಇದ್ದ ಪ್ರಾಥಮಿಕ ಶಾಲೆಯಲ್ಲಿ ೪ನೆಯ ತರಗತಿಯವರೆಗೆ ಓದಿದನು. ನಂತರ ಧಾರವಾಡದಲ್ಲಿ, ಮೊದಲು ಬಾಸೆಲ್ ಮಿಶನ್ ಹಾಯ್‌ಸ್ಕೂಲಿನಲ್ಲಿ, ಆ ಬಳಿಕ ಸರಕಾರಿ ಹಾಯ್‌ಸ್ಕೂಲಿನಲ್ಲಿ ಓದಿ ೧೮೭೮ರಲ್ಲಿ ಮ್ಯಾಟ್ರಿಕ್ ಪರೀಕ್ಷೆಯಲ್ಲಿ , ಧಾರವಾಡ ಕೇಂದ್ರಕ್ಕೆ ಪ್ರಥಮನಾಗಿ ಹಾಗು ಮುಂಬಯಿ ವಿಭಾಗಕ್ಕೆ ೨೧ನೆಯನವನಾಗಿ , ಉತ್ತೀರ್ಣನಾದನು. ಧಾರವಾಡದ ಕಲೆಕ್ಟರ್ ಈ.ಪಿ.ರಾಬರ್ಟ್ಸನ್ ಅವರಿಂದ ಕಾಲೇಜು ಶಿಕ್ಷಣಕ್ಕಾಗಿ ಶಿಷ್ಯವೇತನ ದೊರೆಯಿತು. ಕಾಲೇಜು ಶಿಕ್ಷಣಕ್ಕಾಗಿ ಆಗ ಪುಣೆಗೆ ಹೋಗುವದು ಅನಿವಾರ್ಯವಾಗಿತ್ತು. ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಸೇರಿಕೊಂಡು ಕಿರಿಯ ವಿದ್ಯಾರ್ಥಿವೇತನ ಪಡೆದನು. ಇಂಟರ್ಮೀಡಿಯಟ್ ತರಗತಿಯಲ್ಲಿ ಮುಂಬಯಿ ವಿಶ್ವವಿದ್ಯಾಲಯಕ್ಕೆ ಎರಡನೆಯ ಸ್ಥಾನ ಪಡೆದು ಹಿರಿಯ ವಿದ್ಯಾರ್ಥಿ ವೇತನ ಪಡೆದನು. ೧೮೮೧ರಲ್ಲಿ ಇಂಗ್ಲಿಶ್ ಭಾಷೆಯಲ್ಲಿಯ ಪರಿಣಿತಿಗಾಗಿ ಹ್ಯಾವಲಾಕ್ ಬಹುಮಾನ ದೊರೆಯಿತು. ಸಂಸ್ಕೃತ ಭಾಷೆಯಲ್ಲಿಯ ಜಾಣ್ಮೆಗಾಗಿ ಮೇಜರ್ ಥಾಮಸ್ ಕ್ಯಾಂಡಿ ಶಿಷ್ಯವೇತನ ದೊರೆಯಿತು. ೧೮೮೨ರಲ್ಲಿ ಬಿ.ಏ. (ಆನರ್ಸ್) ಪರೀಕ್ಷೆಯಲ್ಲಿ ಉಚ್ಚ ತರಗತಿಯಲ್ಲಿ ತೇರ್ಗಡೆ ಹೊಂದಿದ್ದಕ್ಕಾಗಿ ಮುಂಬಯಿಸರಕಾರ ಇವರನ್ನು “ದಕ್ಷಿಣಾ ಫೆಲೊ” ಎಂದು ನಿಯಮಿಸಿ ಗೌರವಿಸಿತು. ೧೮೮೪ರಲ್ಲಿ ಎಮ್.ಏ. ಪರೀಕ್ಷೆಯಲ್ಲಿ ವಿಶಿಷ್ಟತೆಯಿಂದ ಉತ್ತೀರ್ಣರಾದ ಇವರಿಗೆ ಧಾರವಾಡ ವಿಭಾಗದ ಕಮಿಶನರ್ ಈ.ಪಿ. ರಾಬರ್ಟ್ಸನ್ ಇಟ್ಟಿದ್ದ ಬಂಗಾರದ ಪದಕ ಹಾಗು ೫೦೦ ರೂಪಾಯಿಗಳಷ್ಟು ಗ್ರಂಥಗಳ ಬಹುಮಾನ ದೊರೆಯಿತು. ಕನ್ನಡ ಪ್ರದೇಶದಲ್ಲಿ ಇವರೇ ಪ್ರಥಮ ಎಮ್.ಏ. ಆಗಿದ್ದರಿಂದ ಇವರು “ಎಮ್.ಏ. ದೇಶಪಾಂಡೆ” ಎಂದೇ ಪ್ರಸಿದ್ಧರಾದರು.

ಉದ್ಯೋಗ ಪರ್ವ

ಬದಲಾಯಿಸಿ

೧೮೬೫ರಲ್ಲಿ ದಕ್ಷಿಣ ಮುಂಬಯಿ ಭಾಗದ ಶಿಕ್ಷಣಾಧಿಕಾರಿಗಳಾಗಿ ಬಂದ,ರಸೆಲ್ ಅವರು ರಾ.ಹ.ದೇಶಪಾಂಡೆಯವರ ಉಜ್ವಲ ಶೈಕ್ಷಣಿಕ ಸಾಧನೆಯನ್ನು ಗಮನಿಸಿ, ಅವರನ್ನು, ಶಿಕ್ಷಣ ಇಲಾಖೆಯ ನಿರ್ದೇಶಕ ಚಾಟ್ಫೀಲ್ಡ್ರವರ ಮುಖಾಂತರ ಬೆಳಗಾವಿಯಲ್ಲಿಯ ಸರದಾರ ಹಾಯ್ಸ್ಕೂಲಿಗೆ ಸಹಾಯಕ ಹೆಡ್ ಮಾಸ್ತರ ಎಂದು ನಿಯಮಿಸಿದರು. ಅಲ್ಲಿ ಒಂದೆರಡು ತಿಂಗಳು ಕೆಲಸ ಮಾಡುವಷ್ಟರಲ್ಲಿ, ಅಲ್ಲಿಯ ಹೆಡ್ ಮಾಸ್ತರ ಹೂಗ್ವರ್ಫ್ ಇವರು ದೇಶಪಾಂಡೆಯವರನ್ನು ಧಾರವಾಡ ಹಾಯ್ಸ್ಕೂಲಿನಲ್ಲಿ ಖಾಲಿ ಇದ್ದ ಹೆಡ್ ಮಾಸ್ತರ ಹುದ್ದೆಗೆ ನಿಯಮಿಸಲು ಶಿಫಾರಸು ಮಾಡಿದರು. ಆದರೆ ಕೇವಲ ಯುರೋಪಿಯನ್ರನ್ನು ಮಾತ್ರ ಹೆಡ್ ಮಾಸ್ತರ ಎಂದು ನಿಯಮಿಸುವ ರೂಢಿಯಿದ್ದುದರಿಂದ, ಇವರನ್ನು ಸಮಾನ ಶ್ರೇಣಿಯ ಹುದ್ದೆಯಾದ ಉಪ ಶಿಕ್ಷಣ ನಿರೀಕ್ಷಕ ಹುದ್ದೆಗೆ ಬಡ್ತಿ ಕೊಟ್ಟು ಕಾರವಾರಕ್ಕೆ ನಿಯಮಿಸಲಾಯಿತು.( ಮೇ ೧೮೮೫).

ರಾ.ಹ.ದೇಶಪಾಂಡೆಯವರು ಉಪ ಶಿಕ್ಷಣ ನಿರೀಕ್ಷಕರಾಗಿ, ಟ್ರೇನಿಂಗ ಕಾಲೇಜಿನ ಉಪ ಪ್ರಿನ್ಸಿಪಾಲರಾಗಿ, ಪ್ರಿನ್ಸಿಪಾಲ ಆಗಿ, ಕನ್ನಡ ಭಾಷಾಂತರಕಾರರಾಗಿ, ಮುಂಬಯಿಯಲ್ಲಿಯ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿ, ಪಠ್ಯಪುಸ್ತಕಗಳ ಪರಿಷ್ಕರಣ ಸಮಿತಿಯ ಸದಸ್ಯರಾಗಿ, ಪ್ಲೇಗ ಹಾವಳಿಯಲ್ಲಿ ಅಧೀಕ್ಷಕರಾಗಿ ದಕ್ಷ ಅಧಿಕಾರಿಯೆಂದು ಪ್ರಶಂಸೆ ಪಡೆದರೂ ಸಹ, ಕೊನೆಯವರೆಗೂ ಹೆಡ್ ಮಾಸ್ತರ ಶ್ರೇಣಿಯಲ್ಲಿಯೇ ಉಳಿದರು. ರಾ.ಹ.ದೇಶಪಾಂಡೆಯವರು ಕನ್ನಡಕ್ಕಾಗಿ ನಡೆಸಿದ ಹೋರಾಟವನ್ನು ಸಹಿಸದ ಮರಾಠಿ ಅಧಿಕಾರಿಗಳ ಕನ್ನಡ ವಿರೋಧಿ ಯೋಜನೆಗಳಿಂದಾಗಿ, ಇವರು ೨೦ ವರ್ಷಗಳ ಅವಧಿಯಲ್ಲಿ (೧೮೮೭ರಿಂದ ೧೯೦೭ರವರೆಗೆ) ೨೨ ಸಲ ಹುದ್ದೆಯಿಂದ ಹುದ್ದೆಗೆ, ಊರಿಂದ ಊರಿಗೆ ಅಲೆದಾಡಬೇಕಾಯಿತು. ಉಳಿದ ಕನ್ನಡ ಶಿಕ್ಷಕರ ಪಾಡೂ ಇವರಂತೆಯೇ ಇತ್ತು.

ಸ್ವಾತಂತ್ರ್ಯ ಚಳುವಳಿ ಬಗ್ಗೆ ಇವರಿಗಿದ್ದ ಒಲವಿನ ಮರದಿಗಳು ಸರ್ಕಾರಕ್ಕೆ ಹೋಯಿತಾಗಿ ಇವರಿಗೆ ಸಿಗಬೇಕಾದ ಬಡತಿಗಳು ತಪ್ಪಿದವೆಂದು ಹೇಳಲಾಗಿದೆ.

ಸರ್ಕಾರಿ ಸೇವೆಯಲ್ಲಿರುವಾಗಲೇ ಇವರು ಕನ್ನಡದಲ್ಲಿ ಗ್ರಂಥರಚನೆ ಮಾಡತೊಡಗಿದ್ದರು. ನಿವೃತ್ತರಾದ ಮೇಲೆ, ಆಗ ಮೈಸೂರು ದಿವಾನರಾಗಿದ್ದ ವಿಶ್ವೇಶ್ವರಯ್ಯನವರಿಂದ ಅಲ್ಲಿನ ಶಿಕ್ಷಣ ಶಾಖೆ ಸೇರಲು ಕರೆ ಬಂದಿದ್ದರೂ ಅದಕ್ಕೆ ಒಪ್ಪದೆ ಕನ್ನಡ ಗ್ರಂಥರಚನೆಗೇ ತಮ್ಮ ಸಮಯವನ್ನು ಮೀಸಲಿರಿಸಿದರು.

ಕನ್ನಡ ಸೇವೆ

ಬದಲಾಯಿಸಿ

ಕರ್ನಾಟಕ ವಿದ್ಯಾವರ್ಧಕ ಸಂಘ

ಬದಲಾಯಿಸಿ

ಉತ್ತರ ಕರ್ನಾಟಕದಲ್ಲಿ ಕನ್ನಡದ ಧ್ವನಿಯಾಗುವಂತಹ ಸಂಸ್ಥೆಯೊಂದನ್ನು ಕಟ್ಟಲು ಸತತ ಮೂರು ವರ್ಷಗಳವರೆಗೆ ಪರಿಶ್ರಮಪಟ್ಟ ರಾ.ಹ.ದೇಶಪಾಂಡೆಯವರು ೧೮೯೦ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ, ಅದರ ಪ್ರಥಮ ಕಾರ್ಯದರ್ಶಿಯಾದರು. ಮೊದಮೊದಲು ತಮ್ಮ ಪತ್ರವ್ಯವಹಾರಗಳಲ್ಲೆಲ್ಲ 'ಕನ್ನಡ ಬೆಳೆಯಲಿ' ಎನ್ನುವ ಶೀರ್ಷಕ ಘೋಷವಾಕ್ಯವನ್ನು ಬರೆಯುತ್ತಿದ್ದ ರಾ.ಹ.ದೇಶಪಾಂಡೆಯವರು 'ಸಿರಿಗನ್ನಡಂ ಗೆಲ್ಗೆ' ಎನ್ನುವ ಶೀರ್ಷಕೆಯ ಘೋಷವಾಕ್ಯವನ್ನು ೧೮೯೩ರಲ್ಲಿ ಬಳಸಲು ಪ್ರಾರಂಭಿಸಿದರೆಂದು ಹೇಳಲಾಗುತ್ತಿದೆ. ಆದರೆ, ೧೮೯೩ರ ಅವರ ಪತ್ರಗಳು ದೊರೆತಿಲ್ಲ. ಅವರು ಬರೆದ ೧೮೯೫ರ ಒಂದು ಪತ್ರ ದೊರೆತಿದ್ದು ಅದರಲ್ಲಿ ಈ ಶೀರ್ಷಕ ಘೋಷವಾಕ್ಯ ಕಂಡು ಬಂದಿದೆ. ಆದುದರಿಂದ ರಾ.ಹ.ದೇಶಪಾಂಡೆಯವರನ್ನು “ಸಿರಿಗನ್ನಡಂ ಗೆಲ್ಗೆ” ಮಂತ್ರದ ದೃಷ್ಟಾರರೆನ್ನಬಹುದು. ಆ ನಂತರ ಈ ಘೋಷವಾಕ್ಯದಿಂದ ತುಂಬ ಪ್ರಭಾವಿತರಾದ ಬಿ.ಎಮ್.ಶ್ರೀಕಂಠಯ್ಯನವರು ಇದನ್ನು ತಾವೂ ಬಳಸಿ ಜನಪ್ರಿಯಗೊಳಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಪುಸ್ತಕ ಪಾರಿತೋಷಕ ಯೋಜನೆಯನ್ನು ಪ್ರಾರಂಭಿಸಿತು. ೧೮೯೬ರಲ್ಲಿ ವಾಗ್ಭೂಷಣವೆನ್ನುವ ಸಾಹಿತ್ಯಕ ಹಾಗು ವಿಮರ್ಶಾತ್ಮಕ ಮಾಸಿಕವನ್ನು ಪ್ರಾರಂಭಿಸಿತು. ೧೯೦೭ರಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಮೊಟ್ಟ ಮೊದಲನೆಯದಾಗಿ ಸಂಘಟಿಸಿತು. ಈ ರೀತಿಯಾಗಿ ರಾ.ಹ.ದೇಶಪಾಂಡೆಯವರು ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ಉತ್ತರ ಕರ್ನಾಟಕದಲ್ಲಿ ಕನ್ನಡವನ್ನು ಪುನರುಜ್ಜೀವನಗೊಳಿಸಿದರು ಎಂದು ಹೇಳಬಹುದು.

ಕನ್ನಡ ಸಾಹಿತ್ಯ ಪರಿಷತ್ತು

ಬದಲಾಯಿಸಿ

ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಗಾಗಿ ಕನ್ನಡ ಭಾಷಾಭಿವೃದ್ಧಿಗಾಗಿ ೧೯೧೫ ಮೇದಲ್ಲಿ ಬೆಂಗಳೂರಿನಲ್ಲಿ ಕರೆದ ಸಭೆಯಲ್ಲಿ ರಾ.ಹ.ದೇಶಪಾಂಡೆಯವರು ಭಾಗವಹಿಸಿದ್ದರು. ಆ ಸಭೆಯಲ್ಲೆ ಕನ್ನಡ ಲೇಖಕರ ಸಂಘವೊಂದನ್ನು ಕಟ್ಟುವ ಸಲಹೆಯನ್ನಿತ್ತರು. ಮರು ವರ್ಷ ಮೈಸೂರು ಸರಕಾರದವರು ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಗಾಗಿ ಸಂವಿಧಾನ ರಚಿಸುವ ಉಪಸಮಿತಿ ನೇಮಿಸಿದಾಗ ಅದರಲ್ಲಿ ಸಕ್ರಿಯ ಪಾತ್ರ ವಹಿಸಿದರು.

ಸಾಹಿತ್ಯಸೇವೆ

ಬದಲಾಯಿಸಿ
  • ಚೈತನ್ಯ ಚರಿತ್ರೆ
  • ಗ್ರೇಟ ಬ್ರಿಟನ್ ಅಯರ್ಲ್ಯಾಂಡ ದೇಶಗಳ ಸಂಕ್ಷಿಪ್ತ ವರ್ಣನೆ
  • ಚರಿತ್ರ ಸಂಗ್ರಹ
  • ಅಕ್ಬರ ಚಕ್ರವರ್ತಿಯ ಚರಿತ್ರೆ
  • ಮೊಗಲ ಬಾದಶಾಹಿ
  • ಭರತಖಂಡದ ಧರ್ಮಸ್ಥಾಪಕರೂ ಧರ್ಮಸುಧಾರಕರೂ
  • ಬಾಯಿಲೆಕ್ಕದ ಮೊದಲನೆಯ ಪುಸ್ತಕ
  • ಕಥೆಗಳನ್ನೊಳಗೊಂಡ ಬೀರಬಲ್ಲನ ಚರಿತ್ರೆ (ಪೂರ್ವಾರ್ಧ)
  • ಛತ್ರಪತಿ ಶಿವಾಜಿ ಮಹಾರಾಜ
  • ಕರ್ನಾಟಕ ಸಾಮ್ರಾಜ್ಯ (ಸಂಪುಟ ೧, ಸಂಪುಟ ೨, ಸಂಪುಟ ೩)


ಇವರು ಕನ್ನಡದಲ್ಲಿ ಬರೆದ 30 ಗ್ರಂಥಗಳಲ್ಲಿ ಇತಿಹಾಸ, ಜೀವನಚರಿತ್ರೆಗಳಿಗೆ ಸಂಬಂಧಿಸಿದವೇ ಹೆಚ್ಚು. ಅವುಗಳಲ್ಲಿ ಕರ್ನಾಟಕ ಸಾಮ್ರಾಜ್ಯ ಎಂಬ ಮೂರು ಭಾಗಗಳ ಇತಿಹಾಸ ಪ್ರಮುಖವಾದದ್ದು. ಅದರ ಮೊದಲಿನೆರಡು ಭಾಗಗಳು (ಬಾದಾಮಿ ಚಾಳುಕ್ಯರ ವರೆಗಿನ ಇತಿಹಾಸವನ್ನೊಳಗೊಂಡವು) 1926 ರಲ್ಲಿ ಪ್ರಕಟವಾದವು. ವಿಜಯನಗರ ಕಾಲದ ವರೆಗಿನ ಮೂರನೆಯ ಭಾಗ ಅಪ್ರಕಟಿತವಾಗಿ ಉಳಿಯಿತು. ಛತ್ರಪತಿ ಶಿವಾಜಿ ಮಹಾರಾಜ (1923) ಅಕಬರ ಚರಿತ್ರ, ಚೈತನ್ಯ ಚರಿತ್ರ, ಟೀಪೂಸುಲ್ತಾನನ ಚರಿತ್ರ, ರಣಜಿತ್ ಸಿಂಗನ ಚರಿತ್ರ ಮೊದಲಾದ ಅನೇಕ ಜೀವನಚರಿತ್ರೆಗಳನ್ನೂ ಒಂದೆರಡು ಪಠ್ಯಗಳನ್ನು ಇವರು ಬರೆದಿದ್ದರು. ಇವರ ಗ್ರಂಥಗಳಲ್ಲಿ ಸಮಗ್ರ ಅಧ್ಯಯನ, ಶೈಲಿಯಲ್ಲಿ ಕನ್ನಡಿಗರನ್ನು ಹುರಿದುಂಬಿಸುವ ಭಾವನಾಪರತೆ ಎದ್ದು ಕಾಣುತ್ತದೆ.

ವ್ಯಕ್ತಿತ್ವ

ಬದಲಾಯಿಸಿ

ರಾ.ಹ.ದೇಶಪಾಂಡೆಯವರು ಕುಟುಂಬವತ್ಸಲರು ಹಾಗು ಜನಸ್ನೇಹಿಗಳು. ಮೈಸೂರಿನಿಂದ ಧಾರವಾಡಕ್ಕೆ ಬರುತ್ತಿದ್ದ ಅನೇಕ ಸಾಹಿತಿಗಳಿಗೆ ದೇಶಪಾಂಡೆಯವರ ಮನೆ ಅತಿಥಿಗೃಹವಾಗಿತ್ತು. ಬಾಲ ಗಂಗಾಧರ ತಿಲಕ ಹಾಗು ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೆ ಒಳಗಾದ ದೇಶಪಾಂಡೆಯವರು ಖಾದಿ ಹಾಗು ಸ್ವದೇಶಿ ವ್ರತವನ್ನು ಅಖಂಡವಾಗಿ ಪಾಲಿಸಿದರು. ಆದರೆ ಅವರ ವ್ಯಕ್ತಿತ್ವದ ಅತ್ಯಂತ ಪ್ರಮುಖವಾದ ಗುಣವೆಂದರೆ ಅವರ ಕನ್ನಡಪ್ರೇಮ. ಕನ್ನಡ ಪುಸ್ತಕಗಳ ಮಾರಾಟದ ಉದ್ದೇಶದಿಂದ, ತಮ್ಮ ವಿಜ್ಞಾನ ಪದವಿಧರ ಮಗನನ್ನು ಉಪನ್ಯಾಸಕ ಹುದ್ದೆಗೆ ಹೋಗಗೊಡದೆ, ತಮ್ಮ ಮನೆಯಲ್ಲಿಯೆ ಪ್ರಾರಂಭಿಸಿದ “ಶಂಕರ ಪುಸ್ತಕ ಭಾಂಡಾರ”ದಲ್ಲಿ ತೊಡಗಿಸಿದ್ದರು. ರಾ.ಹ.ದೇಶಪಾಂಡೆಯವರು ೧೯೩೧ ಎಪ್ರಿಲ ೨೬ರಂದು ನಿಧನರಾದರು.

ಉಲ್ಲೇಖ

ಬದಲಾಯಿಸಿ
  1. http://www.sobagu.in/%E0%B2%B0%E0%B2%BE-%E0%B2%B9-%E0%B2%A6%E0%B3%87%E0%B2%B6%E0%B2%AA%E0%B2%BE%E0%B2%82%E0%B2%A1%E0%B3%86-%E0%B2%B0%E0%B2%BE%E0%B2%AE%E0%B2%9A%E0%B2%82%E0%B2%A6%E0%B3%8D%E0%B2%B0-%E0%B2%B9%E0%B2%A3/
  2. https://www.vishwavani.news/its-a-great-deal-to-say-that-mantra