(೧೯೧೩, ಮಾರ್ಚ್, ೫-೨೦೦೯, ಜುಲೈ, ೨೧)

ಗಂಗೂಬಾಯಿ ಹಾನಗಲ್
ಗಂಗೂಬಾಯಿ ಹಾನಗಲ್
ಹಿನ್ನೆಲೆ ಮಾಹಿತಿ
ಜನ್ಮನಾಮಗಂಗೂಬಾಯಿ ಹಾನಗಲ್
ಮೂಲಸ್ಥಳಹುಬ್ಬಳ್ಳಿ, ಕರ್ನಾಟಕ
ಸಂಗೀತ ಶೈಲಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ವೃತ್ತಿಗಾಯಕಿ

ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ್ದು ಹಾನಗಲ್ಲಿನಲ್ಲಿ, ೧೯೧೩ಮಾರ್ಚ್ ೫ರಂದು. ಆದರೆ ಬೆಳೆದಿದ್ದು ಧಾರವಾಡದಲ್ಲಿ. ಇವರ ತಂದೆ ಚಿಕ್ಕೂರಾವ್ ನಾಡಗೀರ, ತಾಯಿ ಅಂಬಾಬಾಯಿ. ನರಗುಂದದಲ್ಲಿ ವಾಸವಾಗಿದ್ದ ಇವರ ಅಜ್ಜಿಯ ಅಜ್ಜ, ನರಗುಂದ ಬಾಬಾಸಾಹೇಬರ ಆಳ್ವಿಕೆಯಲ್ಲಿ ಕೋರ್ಟಿನ ಮುನ್ಸೀಫರಾಗಿದ್ದರು. ಬ್ರಿಟಿಷರ ವಿರುದ್ಧ ಬಾಬಾಸಾಹೇಬ ಸಮರ ಸಾರಿದಾಗ, ಗಂಗೂಬಾಯಿಯವರ ಅಜ್ಜಿಯ ಅಜ್ಜಿ ಬ್ರಿಟಿಷ್ ಸೈನಿಕರ ಕೈಸೆರೆಯಿಂದ ತಪ್ಪಿಸಿಕೊಂಡು, ಹಾನಗಲ್ಲಿಗೆ ಓಡಿ ಬಂದು ನೆಲೆಸಿದರು. ಅಲ್ಲಿಂದ ಇವರ ಮನೆ ಹೆಸರು ಹಾನಗಲ್ ಆಯಿತು.[]

'ಗಂಗೂಬಾಯಿ ಹಾನಗಲ್, ತಮ್ಮ ಬದುಕಿನಲ್ಲಿ ಎರಡುಬಾರಿ ಹೆಸರನ್ನು ಬದಲಾಯಿಸಿಕೊಂಡರು. ಮೂಲ ಹೆಸರು, 'ಗಾಂಧಾರಿ ಹಾನಗಲ್,' ಎಂದಿತ್ತು. ಸಂಗೀತವಲಯದಲ್ಲಿ ಪ್ರಸಿದ್ಧರಾದಂತೆ, ಅವರ ಪರಿಚಯ 'ಗಂಗೂಬಾಯಿ ಹುಬ್ಳೀಕರ,' ಎಂದಾಯಿತು. ೧೯೩೬ ರಲ್ಲಿ ಅವರ ಸಂಗೀತ ಜೀವನದಲ್ಲಿ ಅತ್ಯಮೂಲ್ಯವಾದ ಸಮಯವಾಗಿದ್ದು ಅವರನ್ನು ಕೀರ್ತಿ ಶಿಖರಕ್ಕೆ ಕೊಂಡೊಯ್ಯುವ ಮಾರ್ಗವಾಯಿತು. ಅದೇ ವರ್ಷದಲ್ಲಿ 'ಮಿಯಾ ಕೀ ಮಲ್ಹಾರ್, ' ರಾಗವನ್ನು ಹಾಡಿದಾಗ, ಆಕಾಶವಾಣಿಯಲ್ಲಿ ಅದನ್ನು ಪ್ರಸಾರಮಾಡುವ ಸಮಯದಲ್ಲಿ ಬಾಯಿಯವರ ಸೋದರಮಾವ ಕೃಷ್ಣಪ್ಪನವರ ಇಚ್ಛೆಯಂತೆ, 'ಗಂಗೂಬಾಯಿ ಹಾನಗಲ್,' ಎಂದು ಘೋಶಿಸಲಾಯಿತು. 'ಹಾನಗಲ್' ಎನ್ನುವುದು ಬಾಯಿಯವರ ಪೂರ್ವಜರ ಊರು, ಅದನ್ನು ಖ್ಯಾತಿಗೊಳಿಸುವ ಸದಭಿಲಾಷೆಯಿಂದ ತಮ್ಮ ಸಮ್ಮತಿಯನ್ನು ನೀಡಿದರು.

ಬಾಲ್ಯ, ಶಿಕ್ಷಣ

ಬದಲಾಯಿಸಿ

ಗಂಗೂಬಾಯಿಯವರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಐದನೆಯ ಇಯತ್ತೆಯವರೆಗೆ ಆಯಿತು. ಹೀಗಾಗಿ ಸರಕಾರಿ ಶಾಲೆಗಳಲ್ಲಿಯ ವಿದ್ಯಾರ್ಥಿಗಳು “ದೇವಾರೂ ನಮ್ಮ ಈ ಧೀರೋದಾತ್ತಾವರಾದ ರಕ್ಷಿಸಲಿ ದೊರೆಗಳನು” ಎನ್ನುವ ಪ್ರಾರ್ಥನೆ ಹೇಳುವಾಗ ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಾದ ತಾವು “ಮಾತೃಭೂಮಿ ನಿನ್ನ ಚರಣಸೇವೆಯನ್ನು ಮಾಡುವಾ” ಹಾಗೂ “ವಂದೇ ಮಾತರಂ” ಹಾಡುತ್ತಿದ್ದೆವೆಂದು ಗಂಗೂಬಾಯಿಯವರು ಹೇಳುತ್ತಿರುತ್ತಾರೆ. ೧೯೨೪ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಗಂಗೂಬಾಯಿಯವರು ಮಹಾತ್ಮಾ ಗಾಂಧೀಜಿಯವರೆದುರಿಗೆ “ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ” ಎಂದು ಸ್ವಾಗತಗೀತೆಯನ್ನು ಹಾಡಿ ಗಾಂಧೀಜಿಯವರ ಹಾಗೂ ಸಭಿಕರ ಮೆಚ್ಚುಗೆ ಗಳಿಸಿದ್ದರು.

ಸಂಗೀತ ಶಿಕ್ಷಣ

ಬದಲಾಯಿಸಿ

ಗಂಗೂಬಾಯಿಯವರ ತಾಯಿ ಅಂಬಾಬಾಯಿಯವರು ಸ್ವತಃ ಕರ್ನಾಟಕ ಸಂಗೀತದ ಗಾಯಕಿ. ಹಿಂದುಸ್ತಾನಿ ಸಂಗೀತ ಗಾಯಕರಾದ ಹೀರಾಬಾಯಿ ಬಡೋದೆಕರ, ಅಬ್ದುಲ್ ಕರೀಮ ಖಾನರು ಧಾರವಾಡ, ಹುಬ್ಬಳ್ಳಿಗಳಿಗೆ ಬಂದಾಗಲೊಮ್ಮೆ ಅಂಬಾಬಾಯಿಯವರ ಮನೆಗೆ ಹೋಗಿ ಅವರ ಹಾಡುಗಾರಿಕೆ ಕೇಳುತ್ತಿದ್ದರು. ಬಾಲಿಕೆ ಗಂಗೂಬಾಯಿಯ ಹಾಡುಗಾರಿಕೆಯನ್ನೂ ಅವರು ಮೆಚ್ಚಿದ್ದರು. ಇವೆಲ್ಲ ಕಾರಣವಾಗಿ ಅಂಬಾಬಾಯಿಯವರಿಗೆ ತಮ್ಮ ಮಗಳಿಗೆ ಹಿಂದುಸ್ತಾನಿ ಸಂಗೀತ[ [೧] ಕಲಿಸುವ ಆಸೆಯಿತ್ತು. ಈ ಕಾರಣದಿಂದ ಮನೆಯನ್ನು ಧಾರವಾಡದಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಮೊದಲಲ್ಲಿ ದತ್ತೋಪಂತ ದೇಸಾಯಿ, ಕೃಷ್ಣಾಚಾರ್ಯ ಹುಲಗೂರ ಇವರಿಂದ ಸಂಗೀತ ಶಿಕ್ಷಣ ಪಡೆದ ಗಂಗೂಬಾಯಿ, ಬಳಿಕ ಸುಪ್ರಸಿದ್ಧ ಕಿರಾನಾ ಘರಾನಾ ಗಾಯಕರಾದ ಸವಾಯಿ ಗಂಧರ್ವ ಯಾನೆ ರಾಮಭಾವು ಕುಂದಗೋಳಕರ ಅವರ ಶಿಷ್ಯೆಯಾದರು. ತನ್ನ ಕರ್ನಾಟಕ ಸಂಗೀತ ಪದ್ಧತಿಯು ಮಗಳ ಮೇಲೆ ವಿಪರೀತ ಪರಿಣಾಮ ಬೀರಬಾರದೆನ್ನುವ ಉದ್ದೇಶದಿಂದ ಅಂಬಾಬಾಯಿಯವರು ಹಾಡುವದನ್ನೇ ನಿಲ್ಲಿಸಿಬಿಟ್ಟರು! ಇಂತಹ ತ್ಯಾಗಮಯಿ ತಾಯಿ ೧೯೩೨ರಲ್ಲಿ ತೀರಿಕೊಂಡದ್ದು ಗಂಗೂಬಾಯಿಯವರಿಗೆ ತೀವ್ರ ಆಘಾತದ ಘಟನೆಯಾಯಿತು. ವರ್ಷಾರು ತಿಂಗಳಲ್ಲಿ ತಂದೆ ಚಿಕ್ಕೂರಾಯರೂ ಸಹ ನಿಧನರಾದರು. == ಸಂಗೀತ ಯಾತ್ರೆ == ೧೯೨೯ರಲ್ಲಿ ಹುಬ್ಬಳ್ಳಿಯ ಗುರುನಾಥ ಕೌಲಗಿ ಎನ್ನುವ ವಕೀಲರು ಗಂಗೂಬಾಯಿಯವರ ಕೈ ಹಿಡಿದರು. ೧೯೩೨ರಲ್ಲಿ ಎಚ್.ಎಮ್.ವಿ. ಗ್ರಾಮಾಫೋನ ಕಂಪನಿಯವರ ಆಹ್ವಾನದ ಮೇರೆಗೆ ಗಂಗೂಬಾಯಿಯವರು ಮುಂಬಯಿಗೆ ತೆರಳಿದರು. ಅಲ್ಲಿಂದ ಗಂಗೂಬಾಯಿಯವರ ಸಂಗೀತ ದಿಗ್ವಿಜಯ ಪ್ರಾರಂಭವಾಯಿತು. ಮುಂಬಯಿಯಲ್ಲಿ ಕಚೇರಿಗಳನ್ನು ನೀಡಿದ ಗಂಗೂಬಾಯಿಯವರು ಮುಂಬಯಿ ಆಕಾಶವಾಣಿಯಲ್ಲಿ ಸಹ ಹಾಡತೊಡಗಿದರು. ಎಚ್.ಎಮ್.ವಿ. ಕಂಪನಿಯವರು ಗಂಗೂಬಾಯಿಯವರ ಮೊದಲ ಗಾನಮುದ್ರಿಕೆಯಲ್ಲಿ ಅವರ ಹೆಸರನ್ನು ಗಂಗೂಬಾಯಿ ಹುಬಳೀಕರ ಎಂದು ಪ್ರಕಟಿಸಿದ್ದರು. ಅದಕ್ಕೆ ಆಕ್ಷೇಪಿಸಿದಾಗ ಆ ಬಳಿಕ ಗಾಂಧಾರಿ ಹಾನಗಲ್ ಎಂದು ಹೆಸರು ನೀಡಿದ್ದರು. ಆದರೆ ಮುಂಬಯಿ ಆಕಾಶವಾಣಿಯಲ್ಲಿ ಮಾತ್ರ ಗಂಗೂಬಾಯಿ ಹಾನಗಲ್ ಎಂದು ಸರಿಯಾಗಿ ಉದ್ಘೋಷಿಸಲಾಯಿತು.

ಗಂಗೂಬಾಯಿಯವರ ಹಾಡುಗಾರಿಕೆಯನ್ನು ಆ ಕಾಲದ ಎಲ್ಲಾ ಉದ್ದಾಮ ಸಂಗೀತಕಾರರಾದ ಬಡೆ ಗುಲಾಮ ಅಲಿ ಖಾನ, ಉಸ್ತಾದ ಫಯಾಜ ಖಾನ, ಪಂಡಿತ ಓಂಕಾರನಾಥ, ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ ಮೊದಲಾದವರು ಮೆಚ್ಚಿಕೊಂಡರು. ಖ್ಯಾತ ಚಿತ್ರನಟಿ ನರ್ಗೀಸಳ ತಾಯಿಯಾದ ಜದ್ದನಬಾಯಿಯವರ ಪ್ರೋತ್ಸಾಹದಿಂದಲೇ ಗಂಗೂಬಾಯಿಯವರು ಕೊಲಕತ್ತಾದಲ್ಲಿಯ ಅಖಿಲ ಭಾರತ ಸಂಗೀತ ಸಮ್ಮೇಲನಕ್ಕೆ ಹೋಗಿ ಬಂದರು.

ಗಾನಮುದ್ರಿಕೆ ಹಾಗೂ ಆಕಾಶವಾಣಿ ಕಾರ್ಯಕ್ರಮಗಳಲ್ಲದೆ, ಗಂಗೂಬಾಯಿಯವರು ಮುಂಬಯಿಯಲ್ಲಿಯ ಅನೇಕ ಸಂಗೀತ ಕಚೇರಿಗಳಲ್ಲಿ ಸಹ ಭಾಗವಹಿಸತೊಡಗಿದರು.

ಜೀವನ ಯಾತ್ರೆ

ಬದಲಾಯಿಸಿ

ಸಂಗೀತಯಾತ್ರೆ ಉತ್ಸಾಹದಿಂದಲೇ ಸಾಗಿತಾದರೂ, ಜೀವನಯಾತ್ರೆಯಲ್ಲಿ ಅನೇಕ ಎಡರು ತೊಡರುಗಳು ಎದುರಾದವು. ಗಂಗೂಬಾಯಿಯವರ ಮೂವರು ಮಕ್ಕಳಾದ ಕೃಷ್ಣಾ, ಬಾಬೂ, ನಾರಾಯಣ ಇವರು ಬೆಳೆಯತೊಡಗಿದ್ದರು. ಈ ನಡುವೆ ಗಂಗೂಬಾಯಿಯವರ ಪತಿ ಶ್ರೀ ಗುರುನಾಥ ಕೌಲಗಿಯವರು ವ್ಯವಹಾರದಲ್ಲಿ ನಷ್ಟ ಮಾಡಿಕೊಂಡಿದ್ದರಿಂದ ಹುಬ್ಬಳ್ಳಿಯಲ್ಲಿ ತೆಗೆದುಕೊಂಡ ಮನೆಯನ್ನು ಒತ್ತೆ ಹಾಕಿದ್ದು, ಸಾಲ ಮರಳಿಸಲಾಗದೆ ಮನೆಯು ಲಿಲಾವಿಗೆ ಬಂದಿತು. ಸುದೈವದಿಂದ ಲಿಲಾವಿನಲ್ಲಿ ಮನೆಯನ್ನು ತೆಗೆದುಕೊಂಡ ಉಪೇಂದ್ರ ನಾಯಕ ಎನ್ನುವ ಸದ್ಗೃಹಸ್ಥರು ಇವರಿಗೇ ಅದನ್ನು ಮರಳಿಸಿ, ಲಿಲಾವಿನ ಹಣವನ್ನು ಅನುಕೂಲತೆಯ ಮೇರೆಗೆ ಕೊಡಲು ಹೇಳಿದರು. ಇದೇ ಸಮಯದಲ್ಲಿ ಗುರುನಾಥ ಕೌಲಗಿಯವರಿಗೆ ತೀವ್ರ ಅಸ್ವಾಸ್ಥ್ಯವಾಯಿತು. ಗಂಗೂಬಾಯಿಯವರು ಒಂದು ಸಂಗೀತ ಕಾರ್ಯಕ್ರಮಕ್ಕಾಗಿ ದಿಲ್ಲಿಗೆ ಹೋದಾಗಲೇ, ಶ್ರೀ ಗುರುನಾಥ ಕೌಲಗಿಯವರು ೧೯೬೬ ಮಾರ್ಚ ೬ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಜೈತ್ರಯಾತ್ರೆ

ಬದಲಾಯಿಸಿ

ಗಂಗೂಬಾಯಿಯವರು ಸಂಗೀತ ಕಚೇರಿಗಳಿಗಾಗಿ ಭಾರತದ ಉದ್ದಗಲದಲ್ಲೆಲ್ಲ ಸುತ್ತಿದ್ದಾರೆ. ಎಲ್ಲೆಡೆಗೂ ಶ್ರೋತೃಗಳ ಮನಸ್ಸನ್ನು ಗೆದ್ದಿದ್ದಾರೆ. ಅಲ್ಲದೆ ೧೯೫೮ರಲ್ಲಿ ನೇಪಾಳ,೧೯೬೧ರಲ್ಲಿ ಪಾಕಿಸ್ತಾನ, ೧೯೭೯ರಲ್ಲಿ ಅಮೇರಿಕಾ ಮತ್ತು ಕೆನಡಾ ಹಾಗು ೧೯೮೪ರಲ್ಲಿ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೂ ಪ್ರಯಾಣಿಸಿ ಭಾರತೀಯ ಸಂಗೀತದ ಸವಿಯನ್ನು ಅಲ್ಲೆಲ್ಲ ಉಣಬಡಿಸಿದ್ದಾರೆ.ಗುರುಗಳಾದ ಸವಾಯಿ ಗಂಧರ್ವರ ಹೆಸರಿನಲ್ಲಿ ಕುಂದಗೋಳದಲ್ಲಿ ಪ್ರತಿವರ್ಷ "ಸಂಗೀತೋತ್ಸವ" ನಡೆಸುತ್ತಿದ್ದಾರೆ.

ಶಿಷ್ಯವೃಂದ

ಬದಲಾಯಿಸಿ

ಗಂಗೂಬಾಯಿಯವರು ತಮ್ಮ ಸಂಗೀತವನ್ನು ಶಿಷ್ಯರಿಗೆ ಧಾರೆ ಎರೆದು ಬೆಳೆಸಿದ್ದಾರೆ. ಅವರಲ್ಲಿ ಅವರ ಮಗಳೆ ಆದ ಕೃಷ್ಣಾಳನ್ನು ಹಾಗು ಸೀತಾ ಹಿರೆಬೆಟ್ಟ, ಸುಲಭಾ ನೀರಲಗಿ ಮತ್ತು ನಾಗನಾಥ ಒಡೆಯರ ಇವರನ್ನು ಹೆಸರಿಸಬಹುದು.

ಪ್ರಶಸ್ತಿಗಳು

ಬದಲಾಯಿಸಿ
 
ಗಂಗುಬಾಯಿ ಹಂಗಲ್, 2014 ಭಾರತದ ಅಂಚೆಚೀಟಿ

ಗಂಗೂಬಾಯಿ ಹಾನಗಲ್ಲರಿಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು ಕೆಲವನ್ನು ಇಲ್ಲಿ ಹೆಸರಿಸಬಹುದು:

  • ೧೯೬೨—ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
  • ೧೯೭೧—ಪದ್ಮಭೂಷಣ ಪ್ರಶಸ್ತಿ
  • ೧೯೭೩—ಕೇಂದ್ರ ಸಂಗೀತ ನಾಟಕ ಅಕಾಡೆಮಿ
  • ೧೯೮೪—ಮಧ್ಯಪ್ರದೇಶ ಸರಕಾರದಿಂದ ತಾನಸೇನ ಪ್ರಶಸ್ತಿ
  • ೧೯೮೭—ರೂಹೆ ಘಜಲ್ ಪ್ರಶಸ್ತಿ
  • ೧೯೮೯—ಹಫೀಝ ಅಲಿಖಾನ ಪ್ರಶಸ್ತಿ
  • ೧೯೯೦—ಭುವಾಲಿಕಾ ಪ್ರಶಸ್ತಿ
  • ೧೯೯೨—ಕರ್ನಾಟಕ ಸರಕಾರದಿಂದ ಕನಕ-ಪುರಂದರ ಪ್ರಶಸ್ತಿ
  • ೧೯೯೩—ಸುಜನ ಗೌರನ ಪುರಸ್ಕಾರ
  • ೧೯೯೩—ಗೋದಾವರಿ ಪ್ರಶಸ್ತಿ
  • ೧೯೯೩—ಅಸ್ಸಾಮ ಸರಕಾರದಿಂದ ಶ್ರೀಮಂತ ಶಂಕರದೇವ ಪ್ರಶಸ್ತಿ
  • ೧೯೯೪-೯೫—ಸಂಗೀತರತ್ನ ಟಿ.ಚೌಡಯ್ಯ ಸ್ಮಾರಕ ರಾಷ್ಟ್ರ ಪ್ರಶಸ್ತಿ
  • ೧೯೯೭—ದೀನಾನಾಥ ಮಂಗೇಶಕರ ಪ್ರಶಸ್ತಿ
  • ೧೯೯೭—ಗಾನಯೋಗಿ ಪಂಚಾಕ್ಷರಿ ಪ್ರಶಸ್ತಿ
  • ೧೯೯೭—ವರದರಾಜ ಆದ್ಯ ಪ್ರಶಸ್ತಿ
  • ೧೯೯೮—ಮಾಣಿಕರತ್ನ ಪ್ರಶಸ್ತಿ
  • ೨೦೦೦—ಎಸ್.ಆರ್.ಪಾಟೀಲ ಪ್ರತಿಷ್ಠಾನ ಪ್ರಶಸ್ತಿ
  • ೨೦೦೦—ಆಚಾರ್ಯ ಪಂಡಿತ ರಾಮನಾರಾಯಣ ಪ್ರತಿಷ್ಠಾನ ಪ್ರಶಸ್ತಿ
  • ಬೇಗಮ್ ಅಖ್ತರ ಪ್ರಶಸ್ತಿ
  • ಕಾಶೀ ನಾಗರೀ ಪ್ರಚಾರಕೀ ಸಭಾ ಪ್ರಶಸ್ತಿ

ಡಾಕ್ಟರೇಟ್/ಪದವಿ

ಬದಲಾಯಿಸಿ

ಫೆಲೋಶಿಪ್

ಬದಲಾಯಿಸಿ
  • ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಫೆಲೊಶಿಪ್

ಬಿರುದುಗಳು

ಬದಲಾಯಿಸಿ
  • ೧೯೪೮— ಬನಾರಸದಲ್ಲಿ ಭಾರತೀಕಂಠ ಬಿರುದು
  • ೧೯೬೯—ಪ್ರಯಾಗದಲ್ಲಿ ಸ್ವರಶಿರೋಮಣಿ ಬಿರುದು.
  • ಗಾಯನ ಸಮಾಜ, ಬೆಂಗಳೂರು ನೀಡಿದ ಸಂಗೀತ ಕಲಾರತ್ನ ಬಿರುದು
  • ತ್ಯಾಗರಾಜ ಉತ್ಸವ ಸಮಿತಿ, ತಿರುಪತಿ ನೀಡಿದ ಸಪ್ತಗಿರಿ ಸಂಗೀತ ವಿದ್ವನ್ಮಣಿ ಬಿರುದು

ಸಂಭಾವನಾ ಗ್ರಂಥ

ಬದಲಾಯಿಸಿ

೧೯೮೮ರಲ್ಲಿ ಗಂಗೂಬಾಯಿ ಹಾನಗಲ್ಲರವರಿಗೆ ೭೫ನೆಯ ವರ್ಷ ತುಂಬಿದ ಸಂಭ್ರಮದಲ್ಲಿ ಸಂಭಾವನಾ ಗ್ರಂಥ ಪ್ರಕಟವಾಯಿತು. ಇದರ ಪ್ರಕಾಶಾಕರು ಡಾ|ಎಸ್.ಎಸ್.ಗೋರೆ.

ಇದೇ ಸಂದರ್ಭದಲ್ಲಿ ಡಾ| ವಿಜಯಾ ಮುಳೆಯವರು ಗಂಗೂಬಾಯಿಯವರ ಬಗೆಗೆ ಒಂದು ಸಾಕ್ಷ್ಯಚಿತ್ರ ನಿರ್ಮಿಸಿದರು.

ಗಂಗೂಬಾಯಿಯವರು ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣಗೊಂಡ ಸದಸ್ಯೆಯಾಗಿದ್ದರು.

ಜೀವನ ದರ್ಶನ

ಬದಲಾಯಿಸಿ

ಗಂಗೂಬಾಯಿಯವರು ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ವರಕವಿ ದ.ರಾ.ಬೇಂದ್ರೆಯವರು ಇವರ ಗುರುಗಳಾಗಿದ್ದರು. ಈ ಗುರು ಶಿಷ್ಯ ಸಂಬಂಧ ಬೇಂದ್ರೆಯವರ ಜೀವಿತದ ಕೊನೆಯವರೆಗೂ ಮುಂದುವರಿದಿತ್ತು. ಬೇಂದ್ರೆಯವರ ಒಂದು ಗೀತವನ್ನೆ ಗಂಗೂಬಾಯಿ ಹಾನಗಲ್ ಅವರ ಜೀವನ ದರ್ಶನವೆಂದು ಹೇಳಬಹುದು:

“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ

ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ!”

ಆಕರ: ಎನ್.ಕೆ.ಕುಲಕರ್ಣಿಯವರಿಂದ ನಿರೂಪಿತವಾದ ಗಂಗೂಬಾಯಿ ಹಾನಗಲ್ ಅವರ ಆತ್ಮಚರಿತ್ರೆ: “ನನ್ನ ಬದುಕಿನ ಹಾಡು.”

ಹೃದಯ ಸಂಬಂಧೀ ಉಸಿರಾಟದ ತೊಂದರೆಯಿಂದ ದೀರ್ಘಕಾಲದಿಂದ ಬಳಲುತ್ತಿದ್ದ ೯೭ ವರ್ಷಪ್ರಾಯದ ಜನಪ್ರಿಯ ಹಿಂದೂಸ್ತಾನಿ ಸಂಗೀತಕಾರರಾದ ಗಂಗೂಬಾಯಿಯವರು, ೨೧, ಜುಲೈ, ೨೦೦೯ ರ ಮಂಗಳವಾರದ ಬೆಳಗ್ಗೆ ೭-೧೦ ಕ್ಕೆ 'ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆ'ಯಲ್ಲಿ ಅವರ ಪರಿವಾರದವರನ್ನೂ ಹಾಗೂ ಅಪಾರ ಸಂಗೀತಪ್ರೇಮಿಗಳನ್ನೂ ಅಗಲಿದರು. ಶ್ರೀಮತಿ. ಗಂಗೂಬಾಯಿಯವರ ಗೌರವಾರ್ಥವಾಗಿ ಹುಬ್ಬಳ್ಳಿ, ಧಾರವಾಡದ ಶಾಲಾ-ಕಾಲೇಜುಗಳಿಗೆ ರಜಾ ಘೋಶಿಸಲಾಗಿತ್ತು.

ತಮ್ಮ ಎರಡೂ ಕಣ್ಣುಗಳ ದಾನ

ಬದಲಾಯಿಸಿ

'ಗಂಗೂಬಾಯಿ ಹಾನಗಲ್, ತಮ್ಮ ಮರಣಾನಂತರ ಕಣ್ಣುಗಳನ್ನು ದಾನಮಾಡುವ ವಾಗ್ದಾನಮಾಡಿದ್ದರು. ಅದರಂತೆ 'ಗಂಗೂಬಾಯಿಯವರ, ಕಣ್ಣುಗಳನ್ನು 'ಎಂ. ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ' ಯ ಖ್ಯಾತ ನೇತ್ರತಜ್ಞ ಡಾ. ಎಂ. ಎಂ ಜೋಶಿ, ಡಾ. ಸತ್ಯಮೂರ್ತಿಯವರ ನೇತೃತ್ವದ ವೈದ್ಯರ ತಂಡ ಆಗಮಿಸಿ, ಎರಡೂ ಕಣ್ಣುಗಳನ್ನು ಪಡೆದರು.

'ಸಂಗೀತ ವಿದ್ಯಾಲಯ ಸ್ಥಾಪನೆಯ ಆಸೆ'

ಬದಲಾಯಿಸಿ

ಪ್ರಾಥಮಿಕ ಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಶಾಸ್ತ್ರೀಯ ಸಂಗೀತದ ಪಾಠಕ್ರಮವನ್ನು ಆಳವಡಿಸಿ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುವ ಆಸೆಯಿಂದ ಸಮಾರಂಭಗಳಲ್ಲಿ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಮತ್ತಿತರ ಅಧಿಕಾರಿಗಳಮೇಲೆ ಒತ್ತಡ ಹೇರುತ್ತಿದ್ದರು, ಹಾಗೂ,ತಮ್ಮ ನಿಲವನ್ನು ಪ್ರತಿಪಾದಿಸುತ್ತಿದ್ದರು. ಅದರಂತೆ ಕರ್ನಾಟಕ ಸರ್ಕಾರ ವಚನನೀಡಿದ್ದು, 'ಉಣಕಲ್' ಹತ್ತಿರ, ಗುರುಕುಲದ ಮಾದರಿಯ ಸಂಗೀತ ವಿದ್ಯಾಲಯವನ್ನು ನಿರ್ಮಿಸುವ ಕಾರ್ಯ ಆರಂಭವಾಗಿದೆ. ಆದರೆ, ತಮ್ಮ ಹೆಸರಿನಲ್ಲಿ ಕಟ್ಟಲಾಗುತ್ತಿರುವ ಶಾಲೆಯ ವಿದ್ಯಾರ್ಥಿಗಳನ್ನು ತಾವು ತಮ್ಮ ಕಣ್ಣೆದುರಿಗೇ ಆಶೀರ್ವದಿಸುವ ಮಹದಾಶೆ, ಅವರ ಜೀವಿತಸಮಯದಲ್ಲಿ ಕನಸಾಗಿಯೇ ಉಳಿಯಿತು.

ಉಲ್ಲೇಖಗಳು

ಬದಲಾಯಿಸಿ