ಖದೀಜ
ಖದೀಜ ಬಿಂತ್ ಖುವೈಲಿದ್ (ಅರಬ್ಬಿ: خديجة بنت خويلد) (ಕ್ರಿ.ಶ 556 – 619) — ಮುಹಮ್ಮದ್ ಪೈಗಂಬರರ ಮೊದಲನೇ ಪತ್ನಿ ಮತ್ತು ಇಸ್ಲಾಂ ಧರ್ಮದಲ್ಲಿ ಮೊತ್ತಮೊದಲು ನಂಬಿಕೆಯಿಟ್ಟ ಮಹಿಳೆ.[೧] ಮಕ್ಕಾದ ಪ್ರಸಿದ್ಧ ವರ್ತಕಿ. ಇವರನ್ನು ಮುಸಲ್ಮಾನರು ಉಮ್ಮುಲ್ ಮೂಮಿನೀನ್ (ಅರಬ್ಬಿ: أم المؤمنين - ಅನುವಾದ. ವಿಶ್ವಾಸಿಗಳ ಮಾತೆ) ಎಂದು ಕರೆಯುತ್ತಾರೆ. ಖದೀಜರ ಮರಣದ ತನಕ ಮುಹಮ್ಮದ್ ಬೇರೆ ವಿವಾಹವಾಗಿರಲಿಲ್ಲ.[೨]
ಉಮ್ಮುಲ್ ಮೂಮಿನೀನ್ ಖದೀಜ ಬಿಂತ್ ಖುವೈಲಿದ್ | |
---|---|
خديجة بنت خويلد | |
ವೈಯಕ್ತಿಕ | |
ಜನನ | ಕ್ರಿ.ಶ. 556 |
ಮರಣ | ಕ್ರಿ.ಶ. 619 |
ಧರ್ಮ | ಇಸ್ಲಾಂ ಧರ್ಮ |
ಸಂಗಾತಿ |
|
ಮಕ್ಕಳು |
|
ಹೆತ್ತವರು |
|
ವಂಶಾವಳಿ | ಬನೂ ಅಸದ್ |
ವಂಶಾವಳಿ:
ಬದಲಾಯಿಸಿಖದೀಜ ಬಿಂತ್ ಖುವೈಲಿದ್ ಬಿನ್ ಅಸದ್ ಬಿನ್ ಅಬ್ದುಲ್ ಉಝ್ಝ ಬಿನ್ ಕುಸೈ ಬಿನ್ ಕಿಲಾಬ್ ಬಿನ್ ಮುರ್‍ರ ಬಿನ್ ಕಅಬ್ ಬಿನ್ ಲುಅಯ್ ಬಿನ್ ಗಾಲಿಬ್ ಬಿನ್ ಫಿಹ್ರ್ ಬಿನ್ ಮಾಲಿಕ್ ಬಿನ್ ನದ್ರ್ (ಕುರೈಷ್) ಬಿನ್ ಕಿನಾನ ಬಿನ್ ಖುಝೈಮ ಬಿನ್ ಮುದ್ರಿಕ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ದ್ ಬಿನ್ ಅದ್ನಾನ್.
ಜನನ ಮತ್ತು ಬೆಳವಣಿಗೆ:
ಬದಲಾಯಿಸಿಖದೀಜ ಹಿಜರಿ ಪೂರ್ವ 68 ರಲ್ಲಿ (ಕ್ರಿ.ಶ. 556, ಮುಹಮ್ಮದ್‌ರ ಜನನಕ್ಕಿಂತ ಸುಮಾರು 14 ವರ್ಷ ಮುಂಚೆ) ಖುವೈಲಿದ್ ಬಿನ್ ಅಸದ್ ಮತ್ತು ಫಾತಿಮ ಬಿಂತ್ ಝಾಯಿದ ದಂಪತಿಯ ಮಗಳಾಗಿ ಮಕ್ಕಾದಲ್ಲಿ, ಅತ್ಯಂತ ಶ್ರೀಮಂತ, ಕುಲೀನ, ಶೃದ್ಧಾವಂತ ಕುಟುಂಬದಲ್ಲಿ ಜನಿಸಿದರು.[೩] ಇಸ್ಲಾಮೀ ಪೂರ್ವ ಕಾಲದಲ್ಲೇ ಅವರು 'ತಾಹಿರ' (ಪರಿಶುದ್ಧೆ) ಎಂದು ಹೆಸರುವಾಸಿಯಾಗಿದ್ದರು.[೪] ಅವರಿಗೆ ಉಮ್ಮು ಹಿಂದ್ ಎಂಬ ಉಪನಾಮವಿತ್ತು.[೫] ಅವರ ತಂದೆ ಖುವೈಲಿದ್ ಕುರೈಷರ ಮುಖಂಡರೂ, ಮಕ್ಕಾದ ಯಶಸ್ವಿ ಉದ್ಯಮಿಯೂ ಆಗಿದ್ದರು. ಖದೀಜ ಚಿಕ್ಕಂದಿನಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದು ಬಂದರು.[೩]
ವಿವಾಹ:
ಬದಲಾಯಿಸಿಮುಹಮ್ಮದ್ರನ್ನು ವಿವಾಹವಾಗುವುದಕ್ಕೆ ಮೊದಲು ಖದೀಜ ಎರಡು ಬಾರಿ ವಿವಾಹಿತೆಯಾಗಿದ್ದರು.[೬] ಮೊದಲು ಅವರಿಗೆ ವರಕ ಬಿನ್ ನೌಫಲ್‌ರ ವಿವಾಹ ಪ್ರಸ್ತಾಪ ಬಂದಿತ್ತು. ಆದರೆ ಕಾರಣಾಂತರಗಳಿಂದ ಆ ವಿವಾಹ ಕೈಗೂಡಲಿಲ್ಲ.[೪][೫] ಅವರ ಪ್ರಪ್ರಥಮ ವಿವಾಹವು ಅಬೂ ಹಾಲ ಬಿನ್ ಝುರಾರರೊಂದಿಗೆ ಜರುಗಿತು. ಇವರು ಬನೂ ತಮೀಮ್ ಗೋತ್ರಕ್ಕೆ ಸೇರಿದವರು. ಇವರಿಗೆ ಹಿಂದ್ ಮತ್ತು ಹಾಲ ಎಂಬ ಇಬ್ಬರು ಮಕ್ಕಳು ಹುಟ್ಟಿದರು. ಈ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವೇ ವರ್ಷದಲ್ಲಿ ಅಬೂ ಹಾಲ ನಿಧನರಾದರು.[೩]
ನಂತರ ಖದೀಜ ಅತೀಕ್ ಬಿನ್ ಆಯಿದ್‌ರನ್ನು (ಉತಯ್ಯಿಕ್ ಬಿನ್ ಆಯಿದ್ ಎಂದೂ ಹೇಳಲಾಗುತ್ತದೆ)[೬] ವಿವಾಹವಾದರು. ಇವರು ಬನೂ ಮಖ್‌ಝೂಮ್ ಗೋತ್ರಕ್ಕೆ ಸೇರಿದವರು. ಇವರಿಂದ ಖದೀಜರಿಗೆ ಹಿಂದ್ ಎಂಬ ಮಗು ಹುಟ್ಟಿತು. ಆದರೆ ಕಾರಣಾಂತರಗಳಿಂದ ಈ ದಾಂಪತ್ಯದಲ್ಲಿ ಬಿರುಕು ಉಂಟಾಗಿ ವಿಚ್ಛೇದನದಲ್ಲಿ ಕೊನೆಗೊಂಡಿತು.[೩] ಅತೀಕ್ ನಿಧನರಾದರು ಎಂದೂ ಹೇಳಲಾಗುತ್ತದೆ.[೪]
ಮೂರನೆಯದಾಗಿ ಖದೀಜ ತನ್ನ ಸೋದರ ಸಂಬಂಧಿ ಸೈಫ್ ಬಿನ್ ಆಮಿರ್‌ರನ್ನು ವಿವಾಹವಾದರು ಮತ್ತು ಕೆಲವೇ ವರ್ಷದಲ್ಲಿ ಸೈಫ್ ಕೂಡ ಇಹಲೋಕ ತ್ಯಜಿಸಿದರು ಎಂದು ಕೆಲವರು ಹೇಳಿದ್ದಾರೆ.[೫] ಆದರೆ ಇದಕ್ಕೆ ಸರಿಯಾದ ಪುರಾವೆಯಿಲ್ಲ. ನಂತರ ಖದೀಜ ಮುಹಮ್ಮದ್‌ರನ್ನು ವಿವಾಹವಾದರು.
ವೃತ್ತಿ:
ಬದಲಾಯಿಸಿಎರಡನೇ ಗಂಡನ ವಿಚ್ಛೇದನದ ಬಳಿಕ ಖದೀಜ ಬೇರೆ ವಿವಾಹದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಅವರು ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಮತ್ತು ತಂದೆಯಿಂದ ಉತ್ತರಾಧಿಕಾರವಾಗಿ ಪಡೆದ ವ್ಯಾಪಾರವನ್ನು ಮುನ್ನಡೆಸುವುದರಲ್ಲಿ ಗಮನ ಕೇಂದ್ರೀಕರಿಸಿದರು.[೩] ಅವರು ಬಹಳ ಚಾಣಾಕ್ಷೆ ಮತ್ತು ಚತುರೆ. ಉದ್ಯಮವನ್ನು ಯಶಸ್ವಿಯಾಗಿ ನಿಭಾಯಿಸುವ ಕಲೆ ಅವರಿಗೆ ಕರಗತವಾಗಿತ್ತು. ಆದರೆ ತನ್ನ ಸರಕುಗಳನ್ನು ಸಿರಿಯಾದಲ್ಲಿ ಮಾರಾಟ ಮಾಡಲು ಅವರಿಗೆ ಪುರುಷರ ಅಗತ್ಯವಿತ್ತು.[೫] ಆದ್ದರಿಂದ ಅವರು ತಮ್ಮ ಸರಕುಗಳ ರಫ್ತು ಮತ್ತು ಆಮದನ್ನು ನೋಡಿಕೊಳ್ಳಲು ಬುದ್ಧಿವಂತ, ವಿಶ್ವಾಸಯೋಗ್ಯ ಮತ್ತು ಶ್ರಮಜೀವಿಗಳಾದ ಉದ್ಯೋಗಿಗಳನ್ನು ನೇಮಿಸುತ್ತಿದ್ದರು. ಮಕ್ಕಾದಿಂದ ಸರಕುಗಳನ್ನು ಒಯ್ದು ಸಿರಿಯಾ ಮುಂತಾದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದು ಮತ್ತು ಅಲ್ಲಿನ ಸರಕುಗಳನ್ನು ತಂದು ಮಕ್ಕಾದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದು ಆ ಉದ್ಯೋಗಿಗಳ ಕೆಲಸ. ಇದರಿಂದ ಬರುವ ಲಾಭದಲ್ಲಿ ಅರ್ಧ ಪಾಲನ್ನು ಖದೀಜ ಅವರಿಗೆ ಕೊಡುತ್ತಿದ್ದರು.[೭]
ಖದೀಜರಿಗೆ ಸಂಪತ್ತು ಮತ್ತು ಸ್ಥಾನಮಾನಗಳಿದ್ದರೂ ಅದರಿಂದ ಅವರಿಗೆ ಸಂತೃಪ್ತಿಯಿರಲಿಲ್ಲ. ಅವರು ಎರಡು ಬಾರಿ ವಿವಾಹವಾಗಿದ್ದರೂ ಸಹ ಆ ವಿವಾಹಗಳು ಹೆಚ್ಚು ಬಾಳ್ವಿಕೆ ಬಂದಿರಲಿಲ್ಲ. ವಿಧವೆಯಾಗಿದ್ದ ಅವರಿಗೆ ಒಂಟಿತನವನ್ನು ನಿವಾರಿಸಲು ಮತ್ತು ವ್ಯಾಪಾರ ವಹಿವಾಟುಗಳನ್ನು ನೋಡಿಕೊಳ್ಳಲು ಒಬ್ಬ ಅರ್ಹ ಬಾಳಸಂಗಾತಿಯ ಆಗತ್ಯವಿತ್ತು.[೭]
ಹೀಗಿರುವಾಗ, ಒಮ್ಮೆ ಖದೀಜರಿಗೆ ಮುಹಮ್ಮದ್‌ರ ಪ್ರಾಮಾಣಿಕತೆ, ಎದೆಗಾರಿಕೆ, ನಿಷ್ಠೆ ಮುಂತಾದ ಉತ್ತಮ ಗುಣಗಳ ಬಗ್ಗೆ ಮತ್ತು ವ್ಯಾಪಾರದ ಬಗ್ಗೆಯೂ ಅವರಿಗೆ ಸಾಕಷ್ಟು ಜ್ಞಾನವಿದೆಯೆಂಬ ಸುದ್ದಿ ತಿಳಿಯುತ್ತದೆ.[೩] ಆಗ ಅವರಲ್ಲಿದ್ದ ವ್ಯವಹಾರ ಚಾತುರ್ಯವು ಎಚ್ಚೆತ್ತುಕೊಂಡು, ಮುಹಮ್ಮದ್‌ರನ್ನು ತಮ್ಮ ಸರಕುಗಳ ನಿರ್ವಾಹಕರನ್ನಾಗಿ ನೇಮಿಸಲು ನಿರ್ಧರಿಸಿದರು.[೮] ಅವರು ಅಬೂ ತಾಲಿಬ್‌ರ ಬಳಿಗೆ ದೂತರನ್ನು ಕಳುಹಿಸಿ, "ನನ್ನ ಸರಕುಗಳನ್ನು ಸಿರಿಯಾದಲ್ಲಿ ಮಾರಾಟ ಮಾಡುವಂತಹ ಒಬ್ಬ ನಂಬಿಗಸ್ಥ ಉದ್ಯೋಗಿಯ ಅಗತ್ಯವಿದೆ. ಮುಹಮ್ಮದ್ ಈ ಕೆಲಸವನ್ನು ವಹಿಸಿಕೊಳ್ಳುವುದಾದರೆ, ನಾನು ಅವರಿಗೆ ಇತರರಿಗಿಂತ ಇಮ್ಮಡಿ ಪಾಲು ನೀಡುವೆ" ಎಂದು ಹೇಳಿದರು.[೭] ಅಬೂ ತಾಲಿಬ್ ಬಡವರು. ಸಾಲದ್ದಕ್ಕೆ ಅನೇಕ ಮಕ್ಕಳು ಬೇರೆ. ಜೀವನ ಬಹಳ ಕಷ್ಟವಾಗಿ ಸಾಗುತ್ತಿತ್ತು. ಆದ್ದರಿಂದ ಮುಹಮ್ಮದ್ ಈ ಕೊಡುಗೆಯನ್ನು ಸ್ವೀಕರಿಸಿ ಖದೀಜರ ಬಳಿ ನೌಕರಿ ಮಾಡಲು ಒಪ್ಪಿಕೊಂಡರು. ಅಬೂ ತಾಲಿಬ್‌ರ ಹೊರೆಯನ್ನು ಸ್ವಲ್ಪ ಮಟ್ಟಿಗಾದರೂ ಇಳಿಸುವುದು ಅವರ ಉದ್ದೇಶವಾಗಿತ್ತು.
ಮುಹಮ್ಮದ್ ಸರಕುಗಳೊಂದಿಗೆ ಬಸ್ರಾಗೆ ಹೊರಟರು. ಬಸ್ರಾ ಅಂದು ಸಿರಿಯಾದ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಮುಹಮ್ಮದ್‌ರ ಜೊತೆಗೆ ಸಹಾಯಕ್ಕಾಗಿ ಮೈಸರ ಎಂಬ ತನ್ನ ನಿಷ್ಠಾವಂತ ಗುಲಾಮನನ್ನು ಖದೀಜ ಕಳುಹಿಸಿದರು. ಈ ವ್ಯಾಪಾರವು ಬಹಳ ಯಶಸ್ವಿ ಮತ್ತು ಲಾಭದಾಯಕವಾಗಿತ್ತು.[೬] ಸರಕುಗಳೆಲ್ಲವೂ ಅತ್ಯುತ್ತಮ ಬೆಲೆಗೆ ಮಾರಾಟವಾದವು.[೭] ಮುಹಮ್ಮದ್‌ರ ಪ್ರಾಮಾಣಿಕತೆ, ಸತ್ಯಸಂಧತೆ, ಗುಣನಡತೆ, ನಿಷ್ಠೆ ಮತ್ತು ವ್ಯವಹಾರ ಚಾತುರ್ಯ ಕಂಡು ಮೈಸರ ಆವಕ್ಕಾದರು. ಅವರು ಇಂತಹ ಉದಾತ್ತ ಗುಣಗಳನ್ನು ಹೊಂದಿರುವ ಬೇರೆ ವ್ಯಕ್ತಿಯನ್ನು ನೋಡಿರಲಿಲ್ಲ.[೯]
ಮುಹಮ್ಮದ್‌ರೊಂದಿಗೆ ವಿವಾಹ:
ಬದಲಾಯಿಸಿಮಕ್ಕಾ ತಲುಪಿದ ನಂತರ ಮೈಸರ ಖದೀಜರ ಬಳಿ ನಡೆದ ಸಂಗತಿಯನ್ನೆಲ್ಲಾ ವಿವರಿಸಿದರು. ದಾರಿ ಮಧ್ಯೆ ಮುಹಮ್ಮದ್ ಒಂದು ಮರದ ನೆರಳಲ್ಲಿ ವಿಶ್ರಮಿಸಿದಾಗ ಅಲ್ಲಿಗೆ ಬಂದ 'ನಸ್ತೂರ' (Nestora) ಎಂಬ ಯಹೂದ ಪುರೋಹಿತ ಪ್ರವಾದಿಗಳಲ್ಲದೆ ಇನ್ನಾರೂ ಈ ಮರದ ಕೆಳಗೆ ವಿಶ್ರಮಿಸುವುದಿಲ್ಲ, ಈ ವ್ಯಕ್ತಿ ಪ್ರವಾದಿಯಾಗಿರಬಹುದು ಎಂದು ಹೇಳಿದ್ದನ್ನೂ ವಿವರಿಸಿದರು.[೯] ಮೋಡಗಳು ಮುಹಮ್ಮದ್‌ರಿಗೆ ನೆರಳು ನೀಡಿದ ಸಂಗತಿಯನ್ನೂ ಸುಂದರವಾಗಿ ಬಣ್ಣಿಸಿದರು.[೯] ಮೈಸರನ ಮಾತು ಕೇಳಿ ಖದೀಜ ಬಹಳ ಪ್ರಭಾವಿತರಾದರು. ಅವರಿಗೆ ಮುಹಮ್ಮದ್‌ರಲ್ಲಿ ಪ್ರೀತಿ ಅಂಕುರಿಸಿತು. ಅವರನ್ನು ವಿವಾಹವಾಗುವ ಆಸೆ ಮೂಡಿತು. ಆದರೆ ವಿವಾಹ ಪ್ರಸ್ತಾಪವನ್ನು ಮುಂದಿಡುವುದು ಹೇಗೆ? ನಾನು ಈಗಾಗಲೇ ಕುರೈಷ್ ಮುಖಂಡರು ಕಳುಹಿಸಿದ ವಿವಾಹ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದೇನೆ. ಹೀಗಿರುವಾಗ ನಾನೇ ಖುದ್ದಾಗಿ ಮುಹಮ್ಮದ್‌ಗೆ ವಿವಾಹ ಪ್ರಸ್ತಾಪ ಕಳುಹಿಸುವುದು ಹೇಗೆ? ಇನ್ನು ಕಳುಹಿಸಿದರೂ ಅವರು ನನ್ನನ್ನು ವಿವಾಹವಾಗಲು ಒಪ್ಪುವರೇ?[೯] ಖದೀಜರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವರು ತನ್ನ ಬಾಲ್ಯ ಗೆಳತಿ[೧೦] (ಕೆಲವರ ಪ್ರಕಾರ ಸೇವಕಿ)[೮] ನಫೀಸಳಿಗೆ ವಿಷಯ ತಿಳಿಸಿದರು. ನಫೀಸ ಖದೀಜರ ಪರವಾಗಿ ಮುಹಮ್ಮದ್‌ರ ಮುಂದೆ ವಿವಾಹ ಪ್ರಸ್ತಾಪವನ್ನಿಟ್ಟರು. ಮುಹಮ್ಮದ್ ಒಪ್ಪಿಕೊಂಡರು. ನಂತರ ಅವರು ಸಂಗತಿಯನ್ನು ದೊಡ್ಡಪ್ಪ ಅಬೂ ತಾಲಿಬ್ ಮತ್ತು ಚಿಕ್ಕಪ್ಪ ಹಂಝರಿಗೆ ತಿಳಿಸಿದರು. ಅವರಿಬ್ಬರು ಖದೀಜರ ಚಿಕ್ಕಪ್ಪ ಅಮ್ರ್ ಬಿನ್ ಅಸದ್‌ರನ್ನು ಭೇಟಿಯಾಗಿ ವಿವಾಹ ನಿಶ್ಚಯ ಮಾಡಿಕೊಂಡರು.[೧೦] ಏಕೆಂದರೆ ಖದೀಜರ ತಂದೆ ಖುವೈಲಿದ್ ಜೀವಂತವಿರಲಿಲ್ಲ. ಅವರು ಫಿಜಾರ್ ಯುದ್ಧದಲ್ಲಿ ಮಡಿದಿದ್ದರು.[೧೧] ಮುಹಮ್ಮದ್ ಮತ್ತು ಖದೀಜರ ವಿವಾಹ ನೆರವೇರಿತು.
ದಾಂಪತ್ಯ ಜೀವನ:
ಬದಲಾಯಿಸಿವಿವಾಹವಾಗುವಾಗ ಖದೀಜರ ವಯಸ್ಸು 40 ಮತ್ತು ಮುಹಮ್ಮದ್‌ರ ವಯಸ್ಸು 25.[೧][೮] ಆದರೂ ಇವರಿಬ್ಬರ ದಾಂಪತ್ಯವು ಅತ್ಯಂತ ಯಶಸ್ವಿ ಮತ್ತು ಮಾದರೀಯೋಗ್ಯವಾಗಿತ್ತು. ಖದೀಜರ ಮರಣದ ತನಕ ಮುಹಮ್ಮದ್ ಬೇರೆ ವಿವಾಹವಾಗಿರಲಿಲ್ಲ.[೧೨] ಈ ದಾಂಪತ್ಯದಲ್ಲಿ ಅವರಿಗೆ ಆರು ಮಕ್ಕಳು ಹುಟ್ಟಿದರು. ಕಾಸಿಮ್, ಝೈನಬ್, ರುಕಯ್ಯ, ಉಮ್ಮು ಕುಲ್ಸೂಮ್, ಫಾತಿಮ ಮತ್ತು ಅಬ್ದುಲ್ಲಾ.[೧೩] ಕಾಸಿಮ್ ಎಳೆಯ ಪ್ರಾಯದಲ್ಲೇ ಅಸುನೀಗಿದರು. ಆಗ ಇನ್ನೂ ಅಬ್ದುಲ್ಲಾ ಹುಟ್ಟಿರಲಿಲ್ಲ. ಅಬ್ದುಲ್ಲಾ ಹುಟ್ಟಿದ್ದು ಮುಹಮ್ಮದ್ ಪ್ರವಾದಿಯಾದ ಬಳಿಕ. ಅಬೂ ತಾಲಿಬ್‌ರ ಮಕ್ಕಳಲ್ಲಿ ಒಬ್ಬರಾದ ಅಲೀ ಬಿನ್ ಅಬೂತಾಲಿಬ್‌ರನ್ನು ಮುಹಮ್ಮದ್ ಸಾಕತೊಡಗಿದರು. ಅಬೂ ತಾಲಿಬ್‌ರ ಹೊರೆಯನ್ನು ಇಳಿಸುವುದು ಅವರ ಉದ್ದೇಶವಾಗಿತ್ತು. ಖದೀಜರ ಸಹೋದರ ಅವ್ವಾಮ್ ನಿಧನರಾದಾಗ ಅವರ ಮಗ ಝುಬೈರ್ ಎರಡೂವರೆ ವರ್ಷದ ಮಗುವಾಗಿದ್ದರು. ಆ ಮಗು ಖದೀಜರ ಮನೆಯಲ್ಲೇ ಬೆಳೆಯತೊಡಗಿತು. ಝಬೈರ್‌ರ ತಾಯಿ ಸಫಿಯ್ಯ ಅಬೂ ತಾಲಿಬ್‌ರ ಮಗಳು. ಈ ಮಧ್ಯೆ ಖದೀಜರ ಸಹೋದರ ಪುತ್ರ ಹಕೀಂ ಬಿನ್ ಹಿಝಾಂ ಸಿರಿಯಾದಿಂದ ಮರಳುವಾಗ ಅನೇಕ ಗುಲಾಮರನ್ನು ಖರೀದಿಸಿ ತಂದಿದ್ದರು. ಅವರಲ್ಲಿ ಒಬ್ಬರನ್ನು ಆರಿಸಿಕೊಳ್ಳುವಂತೆ ಅತ್ತೆ ಖದೀಜರನ್ನು ವಿನಂತಿಸಿದರು. ಖದೀಜ ಗುಲಾಮರಲ್ಲಿ ಒಬ್ಬರಾದ ಝೈದ್ ಬಿನ್ ಹಾರಿಸರನ್ನು ಆರಿಸಿದರು.[೬] ಗಂಡು ಮಕ್ಕಳಿಲ್ಲದ ಕಾರಣ ಮುಹಮ್ಮದ್ ಝೈದ್ ರನ್ನು ಗುಲಾಮಗಿರಿಯಿಂದ ಸ್ವತಂತ್ರಗೊಳಿಸಿ ದತ್ತುಪುತ್ರನಾಗಿ ಸ್ವೀಕರಿಸಿದರು.
ಪ್ರವಾದಿತ್ವ:
ಬದಲಾಯಿಸಿಮುಹಮ್ಮದ್ರಿಗೆ 40 ವರ್ಷವಾದಾಗ ಅವರಿಗೆ ಏಕಾಂತವಾಸ ಇಷ್ಟವಾಗತೊಡಗಿತು. ಅವರು ಮನೆಯ ಸಮೀಪದ ಬೆಟ್ಟದಲ್ಲಿರುವ ಹಿರಾ ಗುಹೆಯಲ್ಲಿ ಏಕಾಂತವಾಗಿ ವಾಸ ಮಾಡತೊಡಗಿದರು. ಗಂಡನಿಗೆ ಬೇಕಾದ ಆಹಾರ ಮುಂತಾದ ಎಲ್ಲಾ ವ್ಯವಸ್ಥೆಗಳನ್ನು ಖದೀಜ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.[೧೩] ಕೆಲವೊಮ್ಮೆ ಅವರು ಅನೇಕ ದಿನಗಳ ಕಾಲ ಗುಹೆಯಲ್ಲೇ ತಂಗಿರುತ್ತಿದ್ದರು. ಆಗ ಖದೀಜ ಸ್ವತಃ ಗುಹೆಗೆ ತೆರಳಿ ಗಂಡನ ಇಷ್ಟಾನಿಷ್ಟಗಳನ್ನು ವಿಚಾರಿಸಿ ಅವರ ಸೇವೆ ಮಾಡುತ್ತಿದ್ದರು.[೧೪]
ಒಮ್ಮೆ ಗುಹೆಯಲ್ಲಿ ಇದ್ದಕ್ಕಿದ್ದಂತೆ ದೇವದೂತ ಗೇಬ್ರಿಯಲ್ ಮುಹಮ್ಮದ್‌ರ ಮುಂದೆ ಪ್ರತ್ಯಕ್ಷರಾಗಿ ಪವಿತ್ರ ಕುರ್‌ಆನಿನ ಶ್ಲೋಕಗಳನ್ನು ಓದಿಕೊಟ್ಟರು. ಈ ಘಟನೆಯಿಂದ ಮುಹಮ್ಮದ್ ಎಷ್ಟು ಗಾಬರಿಯಾಗಿದ್ದರೆಂದರೆ ಅವರು ಗುಹೆಯಿಂದ ನೇರವಾಗಿ ಖದೀಜರ ಬಳಿಗೆ ಓಡಿದರು. "ನನ್ನನ್ನು ಹೊದಿಯಿರಿ ನನ್ನನ್ನು ಹೊದಿಯಿರಿ" ಎಂದು ಕೂಗುತ್ತಿದ್ದರು. ಖದೀಜ ನಡುಗುತ್ತಿದ್ದ ಗಂಡನನ್ನು ಹೊದಿಕೆಯಿಂದ ಹೊದ್ದು ಮಲಗಿಸಿ ಸಾಂತ್ವನ ಪಡಿಸಿದರು.[೧೩] ನಂತರ ಅವರ ಭಯ ನಿವಾರಣೆಯಾದಾಗ ಸಂಗತಿಯೇನೆಂದು ವಿಚಾರಿಸಿದರು. ಮುಹಮ್ಮದ್ ನಡೆದ ಘಟನೆಯನ್ನು ವಿವರಿಸಿದಾಗ ಖದೀಜ ಗಾಬರಿಯಾಗಲಿಲ್ಲ, ಎದೆಗುಂದಲಿಲ್ಲ.[೧೪] ಅವರು ಗಂಡನನ್ನು ಸಮಾಧಾನಪಡಿಸುತ್ತಾ ಹೇಳಿದರು: "ಇಲ್ಲ, ಖಂಡಿತ ಇಲ್ಲ. ದೇವರಾಣೆ! ದೇವರು ಖಂಡಿತ ನಿಮ್ಮನ್ನು ನಿಂದಿಸಲಾರ. ನೀವು ಕುಟುಂಬ ಸಂಬಂಧ ಜೋಡಿಸುತ್ತೀರಿ, ಜನರ ಹೊರೆಗಳನ್ನು ಹೊರುತ್ತೀರಿ, ಇತರರ ಕಷ್ಟಗಳಿಗೆ ಸ್ಪಂದಿಸುತ್ತೀರಿ, ಅತಿಥಿಗಳನ್ನು ಗೌರವಿಸುತ್ತೀರಿ ಮತ್ತು ವಿಕೋಪಗಳಿಗೆ ತುತ್ತಾದವರ ನೆರವಿಗೆ ಧಾವಿಸುತ್ತೀರಿ."[೧೪] ನಂತರ ಖದೀಜ ಗಂಡನನ್ನು ತನ್ನ ಸೋದರ ಸಂಬಂಧಿ ವರಕ ಬಿನ್ ನೌಫಲ್‌ರ ಬಳಿಗೆ ಕರೆದೊಯ್ದರು. ನಡೆದ ಸಂಗತಿಯನ್ನು ತಿಳಿದಾಗ, ಅದು ಮೋಶೆಯವರ ಬಳಿಗೆ ಬಂದ ಅದೇ ದೇವದೂತರು ಎಂದು ವರಕ ಹೇಳಿದರು.[೬] ಮುಹಮ್ಮದ್ ಪ್ರವಾದಿಯಾಗುತ್ತಾರೆ ಮತ್ತು ಮಕ್ಕಾ ನಿವಾಸಿಗಳು ಅವರನ್ನು ಊರಿನಿಂದ ಹೊರಗಟ್ಟುತ್ತಾರೆ ಎಂದರು.[೧೫]
ನಂತರ ಮುಹಮ್ಮದ್‌ರಿಗೆ ಕುರ್‌ಆನ್ ಶ್ಲೋಕಗಳು ಅವತೀರ್ಣವಾಗತೊಡಗಿದವು. ಅವರು ಆ ಸಂದೇಶವನ್ನು ತಮ್ಮ ಮಡದಿಯ ಮುಂದಿಟ್ಟರು. ಖದೀಜ ಒಂದು ಕ್ಷಣ ಕೂಡ ಚಿಂತಿಸದೆ ಆಹ್ವಾನವನ್ನು ಸ್ವೀಕರಿಸಿದರು.[೮] ಹೀಗೆ ಅವರು ಮುಹಮ್ಮದ್‌ರಲ್ಲಿ ನಂಬಿಕೆಯಿಟ್ಟ ಮೊತ್ತಮೊದಲ ವ್ಯಕ್ತಿಯಾದರು.
ಧೈರ್ಯ, ಸ್ಥೈರ್ಯ ಮತ್ತು ಸಹನೆ:
ಬದಲಾಯಿಸಿಇಷ್ಟರ ತನಕ ಗಂಡನ ಸೇವೆ ಮಾಡುತ್ತಾ ಸುಖವಾಗಿದ್ದ ಖದೀಜ ಈಗ ಹೊಸ ಕರ್ತವ್ಯವನ್ನು ನಿಭಾಯಿಸಬೇಕಾಗಿತ್ತು. ಅವರು ಗಂಡನೊಡನೆ ಧರ್ಮ ಪ್ರಚಾರದಲ್ಲಿ ಭಾಗಿಯಾದರು. ಪ್ರತಿಕ್ಷಣವೂ ಗಂಡನಿಗೆ ಆಸರೆಯಾಗಿ ನಿಂತರು. ಕುರೈಷರ ಅಣಕು ಮಾತು, ಕೊಂಕು ನುಡಿ, ಕೀಟಲೆಗಳಿಂದ ನೊಂದು ಕಣ್ಣೀರಿಡುತ್ತಾ ಮನೆಗೆ ಬರುತ್ತಿದ್ದ ಗಂಡನನ್ನು ಸಮಾಧಾನಪಡಿಸುತ್ತಿದ್ದರು. ಅವರಲ್ಲಿ ಧೈರ್ಯ ತುಂಬುತ್ತಿದ್ದರು. ಅವರ ಮನಸ್ಸಿಲ್ಲಿದ್ದ ಭಯವನ್ನು ನಿವಾರಿಸುತ್ತಿದ್ದರು. ಅವರು ಸತ್ಯ ಮಾರ್ಗದಲ್ಲಿದ್ದಾರೆಂದು ಪದೇ ಪದೇ ಹೇಳುತ್ತಾ ಅವರನ್ನು ಹುರಿದುಂಬಿಸುತ್ತಿದ್ದರು.
ಖದೀಜರ ಇಬ್ಬರು ಹೆಣ್ಣು ಮಕ್ಕಳು ರುಕಯ್ಯ ಮತ್ತು ಉಮ್ಮು ಕುಲ್ಸೂಮ್‌ರನ್ನು ಮುಹಮ್ಮದ್‌ರ ದೊಡ್ಡಪ್ಪ ಅಬೂ ಲಹಬ್‌ರ ಇಬ್ಬರು ಮಕ್ಕಳಿಗೆ ವಿವಾಹ ಮಾಡಿಕೊಡಲಾಗಿತ್ತು. ಮುಹಮ್ಮದ್ ಪ್ರವಾದಿಯಾದ ನಂತರ ಅಬೂಲಹಬ್ ಮುಹಮ್ಮದ್‌ರ ಬದ್ಧ ವೈರಿಯಾಗಿ ಇಬ್ಬರು ಸೊಸೆಯರನ್ನು ವಿಚ್ಛೇದನ ಮಾಡಿಸಿ ಮುಹಮ್ಮದ್‌ರ ಮನೆಯಲ್ಲಿ ಬಿಟ್ಟರು. ಖದೀಜರಿಗೆ ಆಘಾತವಾದರೂ ಧೈರ್ಯಗುಂದಲಿಲ್ಲ. ನಂತರ ರುಕಯ್ಯರನ್ನು ಉಸ್ಮಾನ್ ಬಿನ್ ಅಫ್ಫಾನ್ ವಿವಾಹವಾದರು. ಮಗಳನ್ನು ಉಸ್ಮಾನ್‌ರೊಂದಿಗೆ ದೂರದ ಇಥಿಯೋಪಿಯಾ ಎಂಬ ಅಪರಿಚಿತ ಊರಿಗೆ ಕಳುಹಿಸುವಾಗಲೂ ಖದೀಜ ವಿಚಲಿತರಾಗಲಿಲ್ಲ. ಅವರು ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡರು.
ಮುಹಮ್ಮದ್‌ರ ಧರ್ಮ ಪ್ರಚಾರವು ಕಾವು ಪಡೆಯುತ್ತಿದ್ದಂತೆ ಅನೇಕ ಮಂದಿ ಇಸ್ಲಾಂ ಸ್ವೀಕರಿಸಿದರು. ಹೊಸದಾಗಿ ಮುಸಲ್ಮಾನರಾದವರಿಗೆ ಕುರೈಷರು ನಾನಾ ರೀತಿಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದರು. ಅನೇಕ ಬಾರಿ ಅವರು ಮುಹಮ್ಮದ್‌ರ ಮೇಲೂ ಕೈ ಮಾಡಿದ್ದರು. ಒಮ್ಮೆ ಮುಹಮ್ಮದ್ ಕಅಬಾಲಯದಲ್ಲಿ ನಮಾಝ್ ಮಾಡುತ್ತಿದ್ದಾಗ ಅವರು ಕೊಳೆತ ಒಂಟೆಯ ಕರುಳನ್ನು ತಂದು ಅವರ ಕುತ್ತಿಗೆಯ ಮೇಲೆ ಹಾಕಿದ್ದರು. ಅದರ ಭಾರದಿಂದಾಗಿ ಮುಹಮ್ಮದ್‌ಗೆ ತಲೆಯೆತ್ತಲಾಗಲಿಲ್ಲ. ಆಗ ಮಗಳು ಫಾತಿಮ ಬಂದು ಸಹಾಯ ಮಾಡಿದರು. ಇಂತಹ ಘಟನೆಗಳು ದಿನನಿತ್ಯ ನಡೆಯುತ್ತಿದ್ದವು. ಮುಹಮ್ಮದ್‌ರ ಜೀವ ಪ್ರತಿದಿನವೂ ಅಪಾಯದಲ್ಲಿತ್ತು. ಎಲ್ಲವೂ ಖದೀಜರ ಕಿವಿಗೆ ಬೀಳುತ್ತಿತ್ತು. ಆದರೂ ಅವರು ಗಂಡನಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದರು.
ಕುರೈಷರ ಬಹಿಷ್ಕಾರ:
ಬದಲಾಯಿಸಿದಿನಗಳೆದಂತೆ ಕುರೈಷರ ಹಿಂಸೆ ಅತಿಯಾಗುತ್ತಿತ್ತು. ಬನೂ ಹಾಶಿಂ ಮತ್ತು ಬನೂ ಮುತ್ತಲಿಬ್ ಗೋತ್ರಗಳು ಮುಹಮ್ಮದ್‌ರ ಬೆಂಬಲಕ್ಕೆ ನಿಂತಿದ್ದವು. ಆದ್ದರಿಂದ ಆ ಎರಡು ಗೋತ್ರಗಳಿಗೆ ಬಹಿಷ್ಕಾರ ಹಾಕಲು ಕುರೈಷರು ನಿರ್ಧರಿಸಿದರು.[೧೬] ಈ ಎರಡು ಗೋತ್ರಗಳು ಮುಹಮ್ಮದ್‌ರನ್ನು ತಮ್ಮ ವಶಕ್ಕೆ ಒಪ್ಪಿಸುವ ತನಕ ಅವರೊಂದಿಗೆ ವಿವಾಹ ಮಾಡಿಕೊಳ್ಳಬಾರದು, ಅವರಿಂದ ಏನನ್ನೂ ಖರೀದಿಸಬಾರದು, ಏನನ್ನೂ ಮಾರಾಟ ಮಾಡಬಾರದು, ಅವರೊಂದಿಗೆ ಮಾತನಾಡಬಾರದು, ಅವರನ್ನು ನೋಡಬಾರದು ಎಂದು ಘೋಷಣೆಯನ್ನು ಬರೆದು ಕಅಬಾಲಯದಲ್ಲಿ ತೂಗಿ ಹಾಕಲಾಯಿತು.[೧೭] ಬಹಿಷ್ಕಾರ ಜಾರಿಗೆ ಬಂತು. ಬನೂ ಅಸದ್ ಗೋತ್ರದವರಾದ ಖದೀಜ ಮುಹಮ್ಮದ್‌ರ ಬನೂ ಹಾಶಿಂ ಗೋತ್ರದೊಡನೆ ಸೇರಿಕೊಂಡರು. ಮೂರು ವರ್ಷಗಳ ಕಾಲ ಮುಹಮ್ಮದ್‌ರೊಂದಿಗೆ ಶಿಅಬ್ ಅಬೂ ತಾಲಿಬ್ ಕಣಿವೆಯಲ್ಲಿ ವಾಸ ಮಾಡಿದರು.[೧೨] ಅಲ್ಲಿ ತಿನ್ನಲು ಆಹಾರವಿಲ್ಲದೆ ಮರದ ಎಲೆಗಳನ್ನು ಮತ್ತು ಗಿಡಗಂಟಿಗಳನ್ನು ತಿಂದು ಹಸಿವು ನೀಗಿಸಿಕೊಂಡರು. ಹೆಚ್ಚಿನ ಸಂದರ್ಭಗಳಲ್ಲೂ ಅವರು ಉಪವಾಸವೇ ಇರುತ್ತಿದ್ದರು. ಮಕ್ಕಳ ಆಕ್ರಂದನ ಕಣಿವೆಯಲ್ಲಿ ಪ್ರತಿಧ್ವನಿಸುತ್ತಿದ್ದರೂ ಕುರೈಷರಿಗೆ ಮರುಕವುಂಟಾಗಲಿಲ್ಲ. ಕೆಲವೊಮ್ಮೆ ಖದೀಜರ ಸೋದರ ಪುತ್ರ ಹಕೀಂ ಬಿನ್ ಹಿಝಾಂ ರಹಸ್ಯವಾಗಿ ಆಹಾರ ತಲುಪಿಸಲು ಪ್ರಯತ್ನಿಸುತ್ತಿದ್ದರು. ಆದರೆ ಕುರೈಷರು ಅದಕ್ಕೂ ತಡೆಯೊಡ್ಡುತ್ತಿದ್ದರು. ಕೊನೆಗೆ ಕೆಲವು ಕುರೈಷ್ ಯುವಕರು ಮುಂದೆ ಬಂದು ಬಹಿಷ್ಕಾರವನ್ನು ಹಿಂದೆಗೆಯಲು ಒತ್ತಾಯಿಸಿದಾಗ, ಬಹಿಷ್ಕಾರವನ್ನು ಹಿಂದೆಗೆಯಲಾಯಿತು. ಆವಾಗಲೇ ಖದೀಜ ಬಹಳ ದಣಿದಿದ್ದರು.[೧೭]
ಮರಣ:
ಬದಲಾಯಿಸಿಬಹಿಷ್ಕಾರ ಹಿಂದೆಗೆದ ಬಳಿಕ ಖದೀಜ ಸೇರಿದಂತೆ ಬನೂ ಹಿಶಾಂ ಮತ್ತು ಬನೂ ಮುತ್ತಲಿಬ್ ಗೋತ್ರಗಳು ಶಿಅಬ್ ಅಬೂ ತಾಲಿಬ್ ಕಣಿವೆಯಿಂದ ವಿಮೋಚಿತರಾದರು. ಬಳಿಕ ಕೆಲವೇ ಸಮಯದಲ್ಲಿ ಮುಹಮ್ಮದ್‌ರ ದೊಡ್ಡಪ್ಪ ಅಬೂ ತಾಲಿಬ್ ಕಾಯಿಲೆ ಬಿದ್ದು ನಿಧನರಾದರು. ಅವರು ನಿಧನರಾದ ಸುದ್ದಿಯನ್ನು ಅರಗಿಸಿಕೊಳ್ಳುವುದಕ್ಕೆ ಮೊದಲೇ ಮುಹಮ್ಮದ್‌ರಿಗೆ ಇನ್ನೊಂದು ಆಘಾತ ಕಾದಿತ್ತು. ಅದು ತನ್ನ ನೆಚ್ಚಿನ ಮಡದಿ ಖದೀಜರ ಮರಣ. ಅಬೂ ತಾಲಿಬ್ ನಿಧನರಾಗಿ ಮೂರು ದಿನಗಳ ನಂತರ ಖದೀಜ ನಿಧನರಾದರು ಎಂದು ಹೇಳಲಾಗುತ್ತದೆ.[೧೮] ಹಿಜರಿ ಪೂರ್ವ 3ನೇ ವರ್ಷದಲ್ಲಿ ರಮದಾನ್ ತಿಂಗಳ 11ರಂದು[೧೨] (ಕ್ರಿ.ಶ. 619 ಡಿಸೆಂಬರ್ ತಿಂಗಳು)[೧] ಖದೀಜ ಇಹಲೋಕಕ್ಕೆ ವಿದಾಯ ಹೇಳಿದರು.[೧೯] ಇದರಿಂದ ಮುಹಮ್ಮದ್ ಎಷ್ಟು ನೊಂದುಕೊಂಡರೆಂದರೆ ಅವರಿಗೆ ಆ ಆಘಾತದಿಂದ ಹೊರಬರಲು ಕೆಲವು ತಿಂಗಳುಗಳೇ ಹಿಡಿದಿತ್ತು. ಈ ವರ್ಷವನ್ನು ಮುಹಮ್ಮದ್ 'ಶೋಕ ವರ್ಷ' ಎಂದು ಕರೆಯುತ್ತಿದ್ದರು. ಖದೀಜ 64 ವರ್ಷ 6 ತಿಂಗಳು ಬದುಕಿದರು.[೧೨] 25 ವರ್ಷ ಮುಹಮ್ಮದ್‌ರ ಪತ್ನಿಯಾಗಿದ್ದರು. ಮುಹಮ್ಮದ್‌ರ ಜೀವನದ ಅತ್ಯಂತ ಸಂದಿಗ್ಧ ಘಟ್ಟದಲ್ಲಿ ಅವರು ಇಹಲೋಕ ತೊರೆದರು.[೨೦] ಮಕ್ಕಾದ ಸಮೀಪ ಹುಜೂನ್‌ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಸ್ವತಃ ಮುಹಮ್ಮದ್ ಸಮಾಧಿಯೊಳಗೆ ಇಳಿದು ದಫನ ಕಾರ್ಯ ನೆರವೇರಿಸಿದರು.[೧೯]
ಅಕ್ಕರೆಯ ಮಡದಿ:
ಬದಲಾಯಿಸಿಮುಹಮ್ಮದ್ ಖದೀಜರನ್ನು ಬಹಳ ಪ್ರೀತಿಸುತ್ತಿದ್ದರು. ತಮ್ಮ ಮರಣದವರೆಗೂ ಅವರನ್ನು ನೆನಪಿಸಿಕೊಳ್ಳುತ್ತಿದ್ದರು. ಖದೀಜಗಿಂತಲೂ ಸುಂದರಿ ಮತ್ತು ಎಳೆಯ ಪ್ರಾಯದ ಆಯಿಶರನ್ನು ವಿವಾಹವಾದ ಬಳಿಕವೂ ಅವರು ಖದೀಜರನ್ನು ಮರೆಯಲಿಲ್ಲ. ಅವರು ತಮ್ಮ ಮನೆಯಲ್ಲಿ ಮಾಂಸದ ಅಡುಗೆ ಮಾಡುವಾಗಲೆಲ್ಲಾ ಖದೀಜರ ಸವಿನೆನಪಿಗಾಗಿ ಅವರ ಗೆಳತಿಯರಿಗೆ ಕಳುಹಿಸಿಕೊಡುತ್ತಿದ್ದರು. ಬದ್ರ್ ಯುದ್ಧದಲ್ಲಿ ಸೆರೆ ಸಿಕ್ಕ ತನ್ನ ಗಂಡನನ್ನು ಬಿಡಿಸಿಕೊಳ್ಳಲು ಮಗಳು ಝೈನಬ್ ಪರಿಹಾರವಾಗಿ ಕಳುಹಿಸಿಕೊಟ್ಟ ಸರವನ್ನು ಕಂಡಾಗ ಮುಹಮ್ಮದ್ ಬಾವುಕರಾದರು. ಏಕೆಂದರೆ ಅದು ಖದೀಜರ ಸರವಾಗಿತ್ತು. ತಮ್ಮ ಅಚ್ಚುಮೆಚ್ಚಿನ ಮಡದಿ ಆಯಿಶರಿಗೆ ಇಷ್ಟವಿಲ್ಲದಿದ್ದರೂ ಸಹ ಅವರು ಆಯಿಶರ ಮುಂದೆ ಖದೀಜರನ್ನು ಹಾಡಿ ಹೊಗಳುತ್ತಿದ್ದರು.
ಆಯಿಶ ಹೇಳುತ್ತಿದ್ದರು: "ಖದೀಜರನ್ನು ನಾನು ನೋಡಿಲ್ಲ. ಆದರೆ ನನಗೆ ಅವರಲ್ಲಿ ಇದ್ದಷ್ಟು ಅಸೂಯೆ ಮುಹಮ್ಮದ್‌ರ ಇತರ ಪತ್ನಿಯರಲ್ಲಿರಲಿಲ್ಲ. ಮುಹಮ್ಮದ್ ಯಾವಾಗಲೂ ಅವರ ಬಗ್ಗೆ ಮಾತನಾಡುತ್ತಿದ್ದರು. ಅವರು ಕುರಿಯನ್ನು ಕೊಯ್ದರೆ ಅದರ ಕೆಲವು ಮಾಂಸಗಳನ್ನು ಖದೀಜರ ಗೆಳತಿಯರಿಗೆ ಕಳುಹಿಸಿಕೊಡುತ್ತಿದ್ದರು. ಮುಹಮ್ಮದ್ ಖದೀಜರನ್ನು ಹೊಗಳುವುದು ಕೇಳುವಾಗ ಜಗತ್ತಿನಲ್ಲಿ ಅವರನ್ನು ಬಿಟ್ಟು ಬೇರೆ ಮಹಿಳೆಯೇ ಇಲ್ಲವೇ ಎಂದು ನಾನು ಕೇಳುತ್ತಿದ್ದೆ. ಆಗ ಮುಹಮ್ಮದ್ ಅವರನ್ನು ಮತ್ತೂ ಪ್ರಶಂಸಿಸುತ್ತಿದ್ದರು."[೨೧]
ಖದೀಜರ ಗುಣಗಾನ ಕೇಳುವಾಗ ಆಯಿಶ ಸಿಡಿಮಿಡಿಗೊಳ್ಳುತ್ತಿದ್ದರು. "ಖದೀಜ ಒಬ್ಬ ಮುದುಕಿ. ದೇವರು ನಿಮಗೆ ಅವಳಿಗಿಂತಲೂ ಉತ್ತಮ ಹೆಂಡತಿಯರನ್ನು ನೀಡಿದ್ದಾನೆ. ಹಾಗಿದ್ದೂ ಅವರನ್ನೇಕೆ ಸ್ಮರಿಸುತ್ತೀರಿ?" ಎಂದು ಆಯಿಶ ಕೇಳುವಾಗ ಮುಹಮ್ಮದ್ ಹೀಗೆ ಉತ್ತರಿಸುತ್ತಿದ್ದರು: "ನನಗೆ ಆಕೆಗಿಂತಲೂ ಉತ್ತಮ ಮಡದಿ ಸಿಕ್ಕಿಲ್ಲ. ಯಾರೂ ನನ್ನನ್ನು ನಂಬದೇ ಇದ್ದಾಗ ಆಕೆ ನನ್ನನ್ನು ನಂಬಿದಳು.[೨೨] ಯಾರೂ ನನಗೆ ಸಹಾಯ ಮಾಡಲು ಮುಂದೆ ಬರದೇ ಇದ್ದಾಗ ಆಕೆ ನನಗೆ ಸಹಾಯ ಮಾಡಿದಳು. ಅವಳು ನನಗೆ ಸಾಂತ್ವನ ಹೇಳುತ್ತಿದ್ದಳು. ನನ್ನಲ್ಲಿ ಧೈರ್ಯ ತುಂಬುತ್ತಿದ್ದಳು. ಅವಳ ಸಂಪತ್ತು ನನಗೆ ನೆರವಾದಂತೆ ಇನ್ನಾರ ಸಂಪತ್ತು ನನಗೆ ನೆರವಾಗಲಿಲ್ಲ. ದೇವರು ನನಗೆ ಅವಳಿಂದಲ್ಲದೆ ಮಕ್ಕಳನ್ನು ಕರುಣಿಸಿಲ್ಲ."[೨೩][೧೨]
ಒಮ್ಮೆ ಮುಹಮ್ಮದ್ ನೆಲದಲ್ಲಿ ನಾಲ್ಕು ಗೆರೆಗಳನ್ನು ಎಳೆದು, "ಇವು ಏನೆಂದು ಗೊತ್ತೇ?" ಎಂದು ಅನುಯಾಯಿಗಳೊಡನೆ ಕೇಳಿದಾಗ ಅವರು ಗೊತ್ತಿಲ್ಲವೆಂದರು. ಆ ಮುಹಮ್ಮದ್, "ಇವು ಜಗತ್ತಿನ ನಾಲ್ವರು ಶ್ರೇಷ್ಠ ಮಹಿಳೆಯರನ್ನು ಸೂಚಿಸುತ್ತವೆ. ಖದೀಜ ಬಿಂತ್ ಖುವೈಲಿದ್, ಫಾತಿಮ ಬಿಂತ್ ಮುಹಮ್ಮದ್ (ಮುಹಮ್ಮದ್‌ರ ಮಗಳು), ಮರ್ಯಮ್ ಬಿಂತ್ ಇಮ್ರಾನ್ (ಯೇಸುಕ್ತಿಸ್ತರ ತಾಯಿ) ಮತ್ತು ಆಸಿಯ ಬಿಂತ್ ಮುಝಾಹಿಮ್ (ಈಜಿಪ್ಟಿನ ಫರೋಹನ ಪತ್ನಿ)" ಎಂದು ಹೇಳಿದರು.[೨೧][೨೪]
ಕುಟುಂಬ
ಬದಲಾಯಿಸಿಪತಿಯಂದಿರು ಮತ್ತು ಮಕ್ಕಳು:
ಬದಲಾಯಿಸಿ- ಅಬೂ ಹಾಲ ಬಿನ್ ಝುರಾರ
- ಹಿಂದ್ ಬಿನ್ ಅಬೂ ಹಾಲ. ಅಬೂ ಹಾಲ ಬಿನ್ ಝುರಾರರ ಹಿರಿಯ ಪುತ್ರ. ಮುಹಮ್ಮದ್ ಇವರಿಗೆ ಸಾಕುತಂದೆಯಾಗಿದ್ದರು. ಇವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು ಮತ್ತು ಮುಹಮ್ಮದ್‌ರೊಡನೆ ಬದ್ರ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಉಹುದ್ ಯುದ್ಧದಲ್ಲೂ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತದೆ. ಮುಸ್ಲಿಮರ ಎರಡು ಬಣಗಳ ಮಧ್ಯೆ ಜರುಗಿದ ಜಮಲ್ ಯುದ್ಧದಲ್ಲಿ ಇವರು ಅಲಿ ಬಿನ್ ಅಬೂ ತಾಲಿಬ್‌ರ ಪಕ್ಷದಲ್ಲಿ ಹೋರಾಡಿ ಸಾವನ್ನಪ್ಪಿದರು. ಇವರು ಒಬ್ಬ ಶ್ರೇಷ್ಠ ಚಿಂತಕ ಮತ್ತು ಸಾಹಿತಿಯಾಗಿದ್ದರು. ಮುಹಮ್ಮದ್‌ರನ್ನು ಪ್ರಶಂಸಿಸುತ್ತಾ ಅನೇಕ ಕಾವ್ಯಗಳನ್ನು ರಚಿಸಿದ್ದರು.[೨೫]
- ಹಾಲ ಬಿನ್ ಅಬೂ ಹಾಲ. ಅಬೂ ಹಾಲ ಬಿನ್ ಝುರಾರರ ಎರಡನೇ ಪುತ್ರ.
- ಅತೀಕ್ ಬಿನ್ ಆಯಿದ್
- ಹಿಂದ್ ಬಿಂತ್ ಅತೀಕ್.
- ಮುಹಮ್ಮದ್ ಬಿನ್ ಅಬ್ದುಲ್ಲಾ
- ಕಾಸಿಂ ಬಿನ್ ಮುಹಮ್ಮದ್. ಮುಹಮ್ಮದ್‌ರ ಹಿರಿಯ ಪುತ್ರ. ಕಾಸಿಂ ಎಳೆಯ ಪ್ರಾಯದಲ್ಲೇ ದೈವಾಧೀನರಾದರು. ಈ ಮಗುವಿನಿಂದಲೇ ಮುಹಮ್ಮದ್‌ಗೆ ಅಬುಲ್ ಕಾಸಿಮ್ (ಕಾಸಿಮ್‌ನ ತಂದೆ) ಎಂಬ ಉಪನಾಮ ಬಂದಿತ್ತು.
- ಅಬ್ದುಲ್ಲಾ ಬಿನ್ ಮುಹಮ್ಮದ್. ಮುಹಮ್ಮದ್‌ರ ಎರಡನೇ ಪುತ್ರ. ಈ ಮಗುವಿಗೆ ತಾಹಿರ್ ಮತ್ತು ತಯ್ಯಿಬ್ ಎಂಬ ಹೆಸರುಗಳೂ ಇವೆ. ಈ ಮಗು ಕೂಡ ಎಳೆಯ ಪ್ರಾಯದಲ್ಲೇ ತೀರಿಹೋಯಿತು.
- ಝೈನಬ್ ಬಿಂತ್ ಮುಹಮ್ಮದ್. ಮುಹಮ್ಮದ್‌ರ ಹಿರಿಯ ಪುತ್ರಿ. ಇವರನ್ನು ಖದೀಜರ ಸಹೋದರಿ ಪುತ್ರ ಅಬುಲ್ ಆಸ್ ಬಿನ್ ರಬೀಅರಿಗೆ ವಿವಾಹ ಮಾಡಿಕೊಡಲಾಯಿತು.[೧೪] ಇವರು ಹಿಜರಿ 8ನೇ ವರ್ಷದಲ್ಲಿ (ಕ್ರಿ.ಶ. 630) ನಿಧನರಾದರು.
- ರುಕಯ್ಯ ಬಿಂತ್ ಮುಹಮ್ಮದ್. ಮುಹಮ್ಮದ್‌ರ ಎರಡನೇ ಪುತ್ರಿ. ಇವರನ್ನು ಮತ್ತು ಇವರ ತಂಗಿ ಉಮ್ಮು ಕುಲ್ಸೂಮ್‌ರನ್ನು ಮುಹಮ್ಮದ್‌ರ ದೊಡ್ಡಪ್ಪ ಅಬೂ ಲಹಬ್‌ರ ಇಬ್ಬರು ಮಕ್ಕಳಾದ ಉತ್ಬ ಮತ್ತು ಉತೈಬರಿಗೆ ವಿವಾಹ ಮಾಡಿಕೊಡಲಾಯಿತು. ಆದರೆ ಮುಹಮ್ಮದ್ ಪ್ರವಾದಿಯಾದ ನಂತರ ಅಬೂ ಲಹಬ್ ಅವರ ಬದ್ಧ ವೈರಿಯಾಗಿ ಇಬ್ಬರು ಸೊಸೆಯಂದಿರಿಗೆ ವಿಚ್ಛೇದನ ಕೊಡಿಸಿದನು. ನಂತರ ರುಕಯ್ಯರನ್ನು ಉಸ್ಮಾನ್ ಬಿನ್ ಅಫ್ಫಾನ್ ವಿವಾಹವಾದರು.[೧೪] ಇವರು ಬದ್ರ್ ಯುದ್ಧದ ಸಂದರ್ಭದಲ್ಲಿ ನಿಧನರಾದರು.
- ಉಮ್ಮು ಕುಲ್ಸೂಮ್ ಬಿಂತ್ ಮುಹಮ್ಮದ್. ಮುಹಮ್ಮದ್‌ರ ಮೂರನೇ ಪುತ್ರಿ. ರುಕಯ್ಯರ ಮರಣಾನಂತರ ಉಸ್ಮಾನ್ ಬಿನ್ ಅಫ್ಫಾನ್ ಉಮ್ಮು ಕುಲ್ಸೂಮ್‌ರನ್ನು ವಿವಾಹವಾದರು. ಹಿಜರಿ 9ನೇ ವರ್ಷದಲ್ಲಿ ಇವರು ನಿಧನರಾದರು.
- ಫಾತಿಮ ಬಿಂತ್ ಮುಹಮ್ಮದ್. ಮುಹಮ್ಮದ್‌ರ ಕೊನೆಯ ಮತ್ತು ಮುದ್ದಿನ ಪುತ್ರಿ. ಇವರನ್ನು ಮುಹಮ್ಮದ್‌ರ ದೊಡ್ಡಪ್ಪ ಅಬೂ ತಾಲಿಬ್‌ರ ಮಗ ಅಲಿ ವಿವಾಹವಾದರು.[೨೫] ಮುಹಮ್ಮದ್‌ರ ನಿಧನದ ಆರು ತಿಂಗಳ ಬಳಿಕ ಇವರು ನಿಧನರಾದರು.
ಸಹೋದರರು:
ಬದಲಾಯಿಸಿ- ಅದೀ ಬಿನ್ ಖುವೈಲಿದ್.
- ಅವ್ವಾಂ ಬಿನ್ ಖುವೈಲಿದ್.
- ನೌಫಲ್ ಬಿನ್ ಖುವೈಲಿದ್ (ಇವರು ಮುಸ್ಲಿಮರ ಬದ್ಧ ಶತ್ರುವಾಗಿದ್ದು ಉಹುದ್ ಯುದ್ಧದಲ್ಲಿ ಮಡಿದರು).
- ಹಿಝಾಂ ಬಿನ್ ಖುವೈಲಿದ್ (ಹಕೀಂ ಬಿನ್ ಹಿಝಾಂರ ತಂದೆ).
- ಅಮ್ರ್ ಬಿನ್ ಖುವೈಲಿದ್.
ಸಹೋದರಿಯರು:
ಬದಲಾಯಿಸಿ- ಹಾಲ ಬಿಂತ್ ಖುವೈಲಿದ್ (ಇವರ ಮಗ ಅಬುಲ್ ಆಸ್ ಬಿನ್ ರಬೀಅ್ ಮುಹಮ್ಮದ್‌ರ ಮಗಳು ಝೈನಬ್‌ರ ಗಂಡ)
- ರುಕೈಕ ಬಿಂತ್ ಖುವೈಲಿದ್
- ಖಾಲಿದ ಬಿಂತ್ ಖುವೈಲಿದ್
- ತಾಹಿರ ಬಿಂತ್ ಖುವೈಲಿದ್
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ Hughes, Thomas Patrick (1995). Dictionary of Islam (in English). Munshiram Manoharlal Publishers Pvt. Ltd. p. 262. ISBN 8121507065.
{{cite book}}
: CS1 maint: unrecognized language (link) - ↑ Zeidan, Adam. "Khadijah: Wife of Muhammad". britannica.com. Retrieved 07-03-2023.
{{cite web}}
: Check date values in:|access-date=
(help) - ↑ ೩.೦ ೩.೧ ೩.೨ ೩.೩ ೩.೪ ೩.೫ Ghadanfar, Mahmood Ahmad. Great Women of Islam (in English). Darussalam Publishers. p. 23.
{{cite book}}
: CS1 maint: unrecognized language (link) - ↑ ೪.೦ ೪.೧ ೪.೨ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು (in Kannada). ಶಾಂತಿ ಪ್ರಕಾಶನ, ಮಂಗಳೂರು. p. 5.
{{cite book}}
: CS1 maint: unrecognized language (link) - ↑ ೫.೦ ೫.೧ ೫.೨ ೫.೩ ಭಟ್ಟಿ, ಮುಹಮ್ಮದ್ ಇಸ್‌ಹಾಕ್ (2012). ಪ್ರವಾದಿ ಪತ್ನಿಯರು (in Kannada). ದಾವಾ ಪಬ್ಲಿಕೇಶನ್ಸ್, ಮಂಗಳೂರು. p. 5.
{{cite book}}
: CS1 maint: unrecognized language (link) - ↑ ೬.೦ ೬.೧ ೬.೨ ೬.೩ ೬.೪ The Encyclopedia of Islam. Vol. 4. Brill. 1997. p. 898. ISBN 9004057455.
- ↑ ೭.೦ ೭.೧ ೭.೨ ೭.೩ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು (in Kannada). ಶಾಂತಿ ಪ್ರಕಾಶನ, ಮಂಗಳೂರು. p. 6.
{{cite book}}
: CS1 maint: unrecognized language (link) - ↑ ೮.೦ ೮.೧ ೮.೨ ೮.೩ ಭಟ್ಟಿ, ಮುಹಮ್ಮದ್ ಇಸ್‌ಹಾಕ್ (2012). ಪ್ರವಾದಿ ಪತ್ನಿಯರು (in Kannada). ದಾವಾ ಪಬ್ಲಿಕೇಶನ್ಸ್, ಮಂಗಳೂರು. p. 6.
{{cite book}}
: CS1 maint: unrecognized language (link) - ↑ ೯.೦ ೯.೧ ೯.೨ ೯.೩ Ghadanfar, Mahmood Ahmad. Great Women of Islam (in English). Darussalam Publishers. p. 24.
{{cite book}}
: CS1 maint: unrecognized language (link) - ↑ ೧೦.೦ ೧೦.೧ Ghadanfar, Mahmood Ahmad. Great Women of Islam (in English). Darussalam Publishers. p. 25.
{{cite book}}
: CS1 maint: unrecognized language (link) - ↑ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು (in Kannada). ಶಾಂತಿ ಪ್ರಕಾಶನ, ಮಂಗಳೂರು. p. 7.
{{cite book}}
: CS1 maint: unrecognized language (link) - ↑ ೧೨.೦ ೧೨.೧ ೧೨.೨ ೧೨.೩ ೧೨.೪ ಭಟ್ಟಿ, ಮುಹಮ್ಮದ್ ಇಸ್‌ಹಾಕ್ (2012). ಪ್ರವಾದಿ ಪತ್ನಿಯರು (in Kannada). ದಾವಾ ಪಬ್ಲಿಕೇಶನ್ಸ್, ಮಂಗಳೂರು. p. 7.
{{cite book}}
: CS1 maint: unrecognized language (link) - ↑ ೧೩.೦ ೧೩.೧ ೧೩.೨ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು (in Kannada). ಶಾಂತಿ ಪ್ರಕಾಶನ, ಮಂಗಳೂರು. p. 8.
{{cite book}}
: CS1 maint: unrecognized language (link) - ↑ ೧೪.೦ ೧೪.೧ ೧೪.೨ ೧೪.೩ ೧೪.೪ Ghadanfar, Mahmood Ahmad. Great Women of Islam (in English). Darussalam Publishers. p. 26.
{{cite book}}
: CS1 maint: unrecognized language (link) - ↑ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು (in Kannada). ಶಾಂತಿ ಪ್ರಕಾಶನ, ಮಂಗಳೂರು. p. 9.
{{cite book}}
: CS1 maint: unrecognized language (link) - ↑ Ghadanfar, Mahmood Ahmad. Great Women of Islam (in English). Darussalam Publishers. p. 28.
{{cite book}}
: CS1 maint: unrecognized language (link) - ↑ ೧೭.೦ ೧೭.೧ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು (in Kannada). ಶಾಂತಿ ಪ್ರಕಾಶನ, ಮಂಗಳೂರು. p. 11.
{{cite book}}
: CS1 maint: unrecognized language (link) - ↑ The Encyclopedia of Islam. Vol. 4. Brill. 1997. p. 899. ISBN 9004057455.
- ↑ ೧೯.೦ ೧೯.೧ Ghadanfar, Mahmood Ahmad. Great Women of Islam (in English). Darussalam Publishers. p. 29.
{{cite book}}
: CS1 maint: unrecognized language (link) - ↑ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು (in Kannada). ಶಾಂತಿ ಪ್ರಕಾಶನ, ಮಂಗಳೂರು. p. 12.
{{cite book}}
: CS1 maint: unrecognized language (link) - ↑ ೨೧.೦ ೨೧.೧ Hughes, Thomas Patrick (1995). Dictionary of Islam (in English). Munshiram Manoharlal Publishers Pvt. Ltd. p. 263. ISBN 8121507065.
{{cite book}}
: CS1 maint: unrecognized language (link) - ↑ Ghadanfar, Mahmood Ahmad. Great Women of Islam (in English). Darussalam Publishers. pp. 22–23.
{{cite book}}
: CS1 maint: unrecognized language (link) - ↑ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು (in Kannada). ಶಾಂತಿ ಪ್ರಕಾಶನ, ಮಂಗಳೂರು. p. 7.
{{cite book}}
: CS1 maint: unrecognized language (link) - ↑ Ghadanfar, Mahmood Ahmad. Great Women of Islam (in English). Darussalam Publishers. p. 22.
{{cite book}}
: CS1 maint: unrecognized language (link) - ↑ ೨೫.೦ ೨೫.೧ ಭಟ್ಟಿ, ಮುಹಮ್ಮದ್ ಇಸ್‌ಹಾಕ್ (2012). ಪ್ರವಾದಿ ಪತ್ನಿಯರು (in Kannada). ದಾವಾ ಪಬ್ಲಿಕೇಶನ್ಸ್, ಮಂಗಳೂರು. p. 9.
{{cite book}}
: CS1 maint: unrecognized language (link)