ಕ್ರಿಸ್ಮಸ್

(ಕ್ರಿಸ್‍ಮಸ್ ಹಬ್ಬ ಇಂದ ಪುನರ್ನಿರ್ದೇಶಿತ)

ಕ್ರಿಸ್ಮಸ್ ಎಂದರೆ ಕ್ರಿಸ್ತಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸುವಾರ್ತೆ(ಗಾಸ್ಪೆಲ್)ಯ ಪ್ರಕಾರ ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಇಂದು ಇಸ್ರೇಲ್ನಲ್ಲಿರುವ ಬೆತ್ಲಹೆಮ್ ಎಂಬ ಊರಿನಲ್ಲಿ ಹುಟ್ಟಿದ. ಆಗ ಮೇರಿ ಮತ್ತು ಜೋಸೆಫ್ ದಂಪತಿಯು ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಅಲ್ಲಿಗೆ ಹೋಗಿದ್ದರು. ಜುಡಾಯಿಸಮ್ನ (ಯಹೂದ್ಯ ಧರ್ಮ) ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್ನ ವಂಶದಲ್ಲಿ ಮೆಸ್ಸಾಯ (ದೇವರ ದೂತ / ರಕ್ಷಕ) ಬರುವನೆಂಬ ನಂಬಿಕೆಯಿದೆ. ಆ ಮೆಸ್ಸಾಯ ಬೇರಾರೂ ಅಲ್ಲ ಸ್ವತಃ ಯೇಸುಕ್ರಿಸ್ತನೇ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ಮಸ್ ಅನ್ನು ಎಕ್ಸ್ ಮಸ್ ಎಂದೂ ಬರೆಯುತ್ತಾರೆ.

ಬ್ರಾಂಜಿನೋ ಕೃತಿ: ಕುರುಬರ ಆರಾಧನೆ

ದಿನಾಂಕ

ಬದಲಾಯಿಸಿ

ಕ್ರಿಸ್ಮಸ್ ಒಂದು ಸಾರ್ವತ್ರಿಕ ರಜಾದಿನವೂ ಹೌದು. ಕ್ರೈಸ್ತ ಜನಸಂಖ್ಯೆ ಕಡಿಮೆ ಇರುವ ಜಪಾನ್ನಂತಹ ದೇಶಗಳನ್ನೂ ಒಳಗೊಂಡು ವಿಶ್ವದ ಹಲವೆಡೆ ಕ್ರಿಸ್ಮಸ್ ವರ್ಷದ ರಜಾದಿನ. ಜೀಸಸ್ನ ನಿಜವಾದ ಹುಟ್ಟಿದ ದಿನಾಂಕ ಹಾಗೂ ಐತಿಹಾಸಿಕತೆಯ ಬಗ್ಗೆ ಹಲವು ವಾದಗಳಿವೆ. ಕ್ರಿಸ್ತನ ಹುಟ್ಟುಹಬ್ಬವನ್ನು ನಿರ್ಧರಿಸುವ ಯತ್ನ ಕ್ರಿಸ್ತಶಕ ಎರಡನೆ ಶತಮಾನದಿಂದ ಆರಂಭವಾಯಿತು. ಕ್ರೈಸ್ತ ಚರ್ಚ್ ಇದೇ ಕಾಲದಲ್ಲಿ ತನ್ನ ಸಂಪ್ರದಾಯಗಳನ್ನು ಸ್ಥಾಪಿಸಲು ಯತ್ನಿಸುತ್ತಿತ್ತು. ಆಗಿನ ಕಾಲದ ಸುಮಾರು ಎಲ್ಲ ಮುಖ್ಯ ಚರ್ಚ್ಗಳೂ ಕ್ರಿಸ್ತ ಹುಟ್ಟಿದ ದಿನಾಂಕ ಡಿಸೆಂಬರ್ ೨೫ ಎಂದು ಒಪ್ಪಿಕೊಂಡವು. ಸಾಮಾನ್ಯವಾಗಿ ಎಲ್ಲ ಕ್ರೈಸ್ತ ದೇಶಗಳಲ್ಲೂ ಕ್ರಿಸ್ಮಸ್ ಹಬ್ಬವನ್ನು ಕ್ರಿಸ್ಮಸ್ ದಿನ ಮಾತ್ರವಲ್ಲದೆ ಅದರ ಆಚೀಚೆ ಕೆಲವು ದಿನಗಳನ್ನೂ ಸೇರಿಸಿಕೊಂಡು ಆಚರಿಸಲಾಗುತ್ತದೆ.

ಕ್ರಿಸ್ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ನಂತರದ ಹನ್ನೆರಡನೆ ದಿನವನ್ನು ಎಪಿಫನಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

 
ಯೇಸುಕ್ರಿಸ್ತ ಹುಟ್ಟಿದ ಹನ್ನೆರಡನೆಯ ದಿನದಂದು ಮೂರು ವಿವೇಕಿಗಳು ನೋಡಲು ಬಂದಿರುವುದು. ಹೊರನಾಡಿಗರಿಗೆ ಯೇಸು ಪ್ರಕಟಗೊಂಡ ಈ ಬಗೆಯನ್ನು ’ಎಪಿಫನಿ’ ಎನ್ನುತ್ತಾರೆ.

ಕ್ರಿಸ್ಮಸ್ ಹೊಸ ವರ್ಷದ ಸಮೀಪ ಬರುವುದರಿಂದ ಕ್ರಿಸ್ಮಸ್ ಮೊದಲುಗೊಂಡು ಹೊಸ ವರ್ಷದವರೆಗೂ ಹಲವು ದೇಶಗಳಲ್ಲಿ ರಜಾ ಇರುವುದು.

ನಂಬಿಕೆಗಳು ಮತ್ತು ಆಚರಣೆಗಳು

ಬದಲಾಯಿಸಿ

ಹಲವು ದೇಶಗಳಲ್ಲಿ ಅನೇಕ ಧಾರ್ಮಿಕ, ರಾಷ್ಟ್ರೀಯ ಮತ್ತು ಜಾತ್ಯತೀತ ಸಂಪ್ರದಾಯಗಳು ಹಾಗೂ ಆಚರಣೆಗಳು ಕ್ರಿಸ್ಮಸ್ಸಿನೊಂದಿಗೆ ಸಂಬಂಧ ಹೊಂದಿವೆ. ಕ್ರಿಸ್ಮಸ್ ಜೊತೆಗೆ ಈ ಕೆಳಕಂಡ ಆಚರಣೆಗಳೂ ರೂಢಿಯಲ್ಲಿವೆ.

  • ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು
  • ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುವುದು
  • ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು
  • ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು

ಸಾಂಟಾ ಕ್ಲಾಸ್

ಬದಲಾಯಿಸಿ

ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ. "ಸಾಂಟಾ ಕ್ಲಾಸ್" ಎಂಬುದು "ಸಂತ ನಿಕೋಲಾಸ್" ಎಂಬುದರ ಅಪಭ್ರಂಶ.

 
ಸಾಂಟಾ ಕ್ಲಾಸ್

ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.

ಅಲಂಕಾರಗಳು

ಬದಲಾಯಿಸಿ
 
ಕ್ರಿಸ್ಮಸ್ ಮರ

ಎಲ್ಲ ಮನೆಗಳಲ್ಲೂ ಒಂದು ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಮನೆಯ ಹೊರಗೆ "ಹಿಮದ ಮನುಷ್ಯ" ಮೊದಲಾದ ಅಲಂಕಾರಗಳೂ ಸಾಮಾನ್ಯ. ಹಾಗೆಯೇ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು (ಅಮರಿಲ್ಲಿಸ್, ಕ್ರಿಸ್ಮಸ್ ಕ್ಯಾಕ್ಟಸ್) ಮೊದಲಾದವುಗಳನ್ನು ತರಲಾಗುತ್ತದೆ.

ಸಾಮಾಜಿಕ ಆಚರಣೆಗಳು

ಬದಲಾಯಿಸಿ

ಕ್ರಿಸ್ಮಸ್ಗೆ ಸಂಬಂಧಪಟ್ಟ ಆಚರಣೆಗಳು ಡಿಸೆಂಬರ್ ತಿಂಗಳ ಆರಂಭದಲ್ಲಿ ಅಡ್ವೆಂಟ್ ನಿಂದ ಆರಂಭವಾಗುತ್ತವೆ - ಇದು ಕ್ರಿಸ್ತನ ಜನ್ಮವನ್ನು ಎದುರು ನೋಡುವ ಹಬ್ಬ. ಯೇಸುಕ್ರಿಸ್ತನನ್ನು ಬರಮಾಡಿಕೊಳ್ಳುವ ಪ್ರಕ್ರಿಯೆಯಾಗಿ ಮನೆಮನೆಗೂ ತೆರಳಿ ಹಾಡುಗಳನ್ನು ಹಾಡಲಾಗುತ್ತದೆ (ಕ್ರಿಸ್ಮಸ್ ಕ್ಯಾರಲ್). ಕ್ರಿಸ್ಮಸ್ ಔತಣ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಅನೇಕ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ವಿಶಿಷ್ಟವಾದ ತಿನಿಸುಗಳುಂಟು. ಈ ತಿನಿಸುಗಳನ್ನು ಪರಸ್ಪರ ಹಂಚಿಕೊಳ್ಳುವುದರಲ್ಲಿ ಒಂದಿ ವಿಶಿಷ್ಟ ಅನುಭೂತಿ ಇದೆ.

ಧಾರ್ಮಿಕ ಆಚರಣೆಗಳು

ಬದಲಾಯಿಸಿ

ಅಡ್ವೆಂಟ್ ಶುರುವಾಗುತ್ತಿದ್ದಂತೆ ಚರ್ಚುಗಳು ಕ್ರಿಸ್ಮಸ್ಸಿಗೆ ತೆರೆದುಕೊಳ್ಳುತ್ತವೆ. ಕ್ರಿಸ್ಮಸ್ ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಚರ್ಚ್ಗಳಲ್ಲಿ ನಡೆಯುತ್ತವೆ. ಕ್ರಿಸ್ಮಸ್ ನಂತರ ಹನ್ನೆರಡನೆ ದಿನದಂದು "ಎಪಿಫನಿ" ಆಚರಣೆಗಳ ನಂತರ ಕ್ರಿಸ್ಮಸ್ ಕಾಲ ಮುಗಿಯುತ್ತದೆ.

ಹೊರಗಿನ ಸಂಪರ್ಕಗಳು

ಬದಲಾಯಿಸಿ