ಕ್ಯಾಸನೂರು ಕಾಡಿನ ಕಾಯಿಲೆ

ಮಾನವರ ಖಾಯಿಲೆ

Photo

ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ

ಬದಲಾಯಿಸಿ

ಕ್ಯಾಸನೂರು ಅಡಿಕೆ ಸಸಿಗಳಿಗೆ ಬಹಳ ಹೆಸರುವಾಸಿ.ಇಲ್ಲಿನ ಅಡಿಕೆ ಪ್ರಪಂಚದಲ್ಲಿಯೇ ಅಧಿಕ ಇಳುವರಿ ಮತ್ತು ಉತ್ಕೃಷ್ಟ ಸರಕು. ಹಾಗಾಗಿ ಗುಜರಾತ್‌ನ ಗುಟ್ಕಾ ಕಂಪನಿಗಳು ಬಹಳ ಒತ್ತು ಕೊಟ್ಟು ಖರೀದಿಸುತ್ತಾರೆ. ಇಂತಹ ನೆಲದಲ್ಕಿ ಭಾರತಕ್ಕೆ ಸ್ವಾತಂತ್ರ್ಯ ಬಂದು ಹತ್ತು ವರ್ಷಗಳಾದಾಗ, ಅಂದರೆ 1957ನೇ ಇಸವಿಯ ಬೇಸಗೆಯಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿಗೆ ಸೇರಿದ ಕ್ಯಾಸನೂರು ಎಂಬ ಗ್ರಾಮದಲ್ಲಿ ಹೊಸ ಕಾಯಿಲೆಯೊಂದು ಹುಟ್ಟಿಕೊಂಡಿತು. ಕಾಡಿನ ಮಂಗಗಳು ಸತ್ತು ಬೀಳುವುದರೊಂದಿಗೆ ಈ ಕಾಯಿಲೆ ಆರಂಭಗೊಳ್ಳುತ್ತಿದ್ದರಿಂದ ಹಳ್ಳಿಗರು ಈ ಕಾಯಿಲೆಗೆ `ಮಂಗನ ಕಾಯಿಲೆ ಎಂದೇ ಕರೆದರು. ಜಗತ್ತಿನಲ್ಲೆಲ್ಲೂ ಕಾಣದ ಕಾಯಿಲೆ ಕ್ಯಾಸನೂರಿನಲ್ಲಿ ಮಾತ್ರ ಕಂಡಿರುವುದರಿಂದ ವೈದ್ಯ ವಿಜ್ಞಾನಿಗಳು ಈ ಕಾಯಿಲೆಗೆ ಕ್ಯಾಸನೂರು ಕಾಡಿನ ಕಾಯಿಲೆ ಎಂದು ನಾಮಕರಣ ಮಾಡಿದರು.

ಹೊಸ ರೋಗ ಹುಟ್ಟಿ ಎರಡು ದಶಕಗಳಾದರೂ, ಈ ಕಾಯಿಲೆ ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಹೀಗೆ ಮಲೆನಾಡಿನ ಕೆಲವೇ ಪ್ರದೇಶಕ್ಕೆ (600 ಚ.ಕಿ.ಮೀ.) ಸೀಮಿತ ಗೊಂಡಿತ್ತು. ಮಾನವನ ಅರಣ್ಯ ನಾಶ ಕೃತ್ಯದಿಂದಾಗಿ, ರೋಗಪೀಡಿತ ಕೋತಿಗಳು ಹೊಸ ಹೊಸ ಕಾಡನ್ನು ಹುಡುಕುತ್ತಾ ಹೋದಂತೆ ರೋಗಪೀಡಿತ ಪ್ರದೇಶವೂ ವಿಸ್ತರಿಸುತ್ತಾ ಹೋಯಿತು. ಹೀಗಾಗಿ ಈಗ ಕ್ಯಾಸನೂರು ಕಾಡಿನ ಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ವ್ಯಾಪಿಸಿದೆ. ಆರು ಸಾವಿರ ಚದರು ಕಿಲೋ ಮೀಟರ್ ಪ್ರದೇಶವನ್ನು ಆಕ್ರಮಿಸಿರುವ ಕಾಯಿಲೆ ಪ್ರತಿವರ್ಷದ ಬೇಸಗೆಯಲ್ಲಿ ಮರುಕಳಿಸುತ್ತಿದ್ದು, ಪ್ರತಿವರ್ಷ ನೂರರಷ್ಟು ಬಲಿ ತೆಗೆದುಕೊಂಡು, ಒಂದೆರಡು ಸಾವಿರ ಜನರನ್ನು ಪೀಡಿಸುತ್ತಿದೆ.

ಕ್ಯಾಸನೂರ ಕಾಡಿನ ಕಾಯಿಲೆಗೆ ಮುಖ್ಯ ಕಾರಣ ಒಂದು ವೈರಸ್. ಸೈಬೀರಿಯದಿಂದ ವಲಸೆ ಬಂದ ಹಕ್ಕಿಗಳು ಈ ವೈರಸ್ ಅನ್ನು ಇಲ್ಲಿಗೆ ತಂದಿದೆ ಎಂದು ವೈದ್ಯ ವಿಜ್ಞಾನಿಗಳು ಹೇಳುತ್ತಾರೆ. ಬಹುತೇಕ ಈ ವೈರಸ್‍ಗಳನ್ನೇ ಹೋಲುವ ವೈರಸ್‍ಗಳು ನಮ್ಮ ದೇಶದ ಇತರೆ ಭಾಗಗಳಲ್ಲೂ ಕಂಡಿವೆ. ಕಾಡಿನಲ್ಲಿ ವಾಸಿಸುವ ಇಲಿ, ಅಳಿಲು, ಬಾವಲಿಗಳೇ ಈ ವೈರಸ್‍ಗಳ ಮೂಲ ಅಗರವಾದರೂ ಪಕ್ಷಿಗಳಲ್ಲಿಗೂ ಈ ವೈರಸ್ ಸೋಂಕುತ್ತದೆ.

ಪ್ರಾಣಿಗಳ ರೊಗ

ಬದಲಾಯಿಸಿ

ಕ್ಯಾಸನೂರ ಕಾಡಿನ ಕಾಯಿಲೆ ಮೂಲತಃ ಪ್ರಾಣಿಗಳ ರೋಗ. ಕಾಡಿನ ರಕ್ತಹೀರುವ ಉಣ್ಣೆಗಳು ರೋಗಕಾರಕ ವೈರಸ್‍ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಅಂಟಿಸುತ್ತವೆ. ಕಾಡಿನಲ್ಲಿ ವಾಸಿಸುವ ಕಪ್ಪು ಮೂತಿಯ ಲಾಂಗರ್ (ಮುಸ್ಯ) ಹಾಗೂ ಬಾನೆಟ್ ಜಾತಿಯ ಮಂಗಗಳು ಸೋಂಕಿಗೆ ಬಲಿಯಾಗುತ್ತವೆ. ರೋಗಗ್ರಸ್ತ ಉಣ್ಣೆಗಳು ಮಾನವನನ್ನು ಕಚ್ಚುವುದರಿಂದ ಆಕಸ್ಮಿಕವಾಗಿ ಮಾನವನಿಗೆ ಸೋಂಕು ತಗಲುತ್ತದೆ. ಆದರೆ ಮಾನವನಿಂದ ಮಾನವನಿಗೆ ಈ ಸೋಂಕು ಹರಡುವುದಿಲ್ಲ.

ರೋಗಗ್ರಸ್ತ ಪ್ರಾಣಿಯ ರಕ್ತ ಹೀರಿದ ಉಣ್ಣೆಗಳು ರೋಗವಾಹಕಗಳಾಗಿ ಪ್ರಾಣಿಯಿಂದ ಪ್ರಾಣಿಗೆ ರೋಗ ತಗಲಿಸುವ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲ. ರೋಗಾಣುಯುಕ್ತ ಉಣ್ಣೆಗಳು ಇಡುವ ಮೊಟ್ಟೆ ಮತ್ತು ಮರಿಗಳೂ ಸಹ ವೈರಸ್ ಸಂತತಿಯನ್ನು ಮುಂದುವರೆಸುತ್ತವೆ. (ಏಯ್ಡ್ಸ್ ಪೀಡಿತ ತಾಯಿಗೆ ಏಯ್ಡ್ಸ್ ಸೋಂಕಿನ ಮಗು ಜನಿಸುವಂತೆ.)

ಕ್ಯಾಸನೂರು ಕಾಡಿನ ಕಾಯಿಲೆ ಪೀಡುಗಾಗಿ ಸ್ಛೋಟಿಸುವುದು ಬೇಸಿಗೆ ದಿನಗಳಲ್ಲಿ. ಜನವರಿಯಿಂದ ಜೂನ್ ತಿಂಗಳವರೆಗೆ ಉಣ್ಣೆಗಳ ಸಂತತಿ ವಿಪರೀತವಾಗಿ ಹೆಚ್ಚಾಗಿರುತ್ತದೆ. ಅಲ್ಲದೆ. ರೈತರು ಕಾಡಿಗೆ ಭೇಟಿ ನೀಡುವುದು (ಸೌದೆಗೆ, ಜಾನುವಾರುಗಳ ಮೇವಿಗೆ) ಸಹ ಈ ಬೇಸಿಗೆ ದಿನಗಳಲ್ಲಿಯೇ. ಮಂಗಗಳು ಸತ್ತುಬೀಳಲಾರಂಭಿಸಿದಾಗ ಮಂಗನ ಮೈಮೇಲೆ ನೆಲಸಿದ್ದ ಉಣ್ಣೆಗಳು ಹೊರಬಿದ್ದು ಕಾಡಿಗೆ ಬಂದ ಮಾನವನನ್ನು ಕಚ್ಚುವ ಸಂಭವ ಬೇಸಗೆಯಲ್ಲಿ ಹೆಚ್ಚಾಗಿರುತ್ತದೆ.

ಅರಣ್ಯಕ್ಕೆ ಭೇಟಿ ನೀಡುವ ಕೃಷಿಕ ಗಂಡಸರೇ ಹೆಚ್ಚಾಗಿ ಈ ಕಾಯಿಲೆಗೆ ತುತ್ತಾಗುತ್ತಾರೆ. ಕಾಡಿಗೆ ಹೋದ ಜಾನುವಾರುಗಳ ಮೇಲೆ ಸವಾರಿ ಮಾಡಿಕೊಂಡ ಊರಿಗೆ ಬಂದ ಉಣ್ಣೆಗಳಿಂದ ಊರಿನ ಇತರರಿಗೂ (ಕಾಡಿಗೆ ಹೋಗದವರಿಗೆ) ಕಾಯಿಲೆ ತಗಲುವ ಸಾಧ್ಯತೆ ಉಂಟು.

ರೋಗ ಲಕ್ಷಣಗಳು

ಬದಲಾಯಿಸಿ

ಉಣ್ಣೆಗಳ ಕಡಿತದಿಂದ ವೈರಸ್‍ಗಳು ದೇಹ ಸೇರಿದ ಒಂದು ವಾರದ ಅನಂತರ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ವಿಪರೀತ, ಜ್ವರ, ಅಸಾಧ್ಯ ಮೈಕೈ, ತಲೆನೋವು, ನರದೌರ್ಬಲ್ಯ, ಆಯಾಸ ಉಂಟಾಗುವುದಲ್ಲದೆ ಬಾಯಿ, ವಸಡು ಮೂಗು ಹಾಗೂ ಕರುಳಿನಲ್ಲಿ ರಕ್ತಸ್ರಾವವಾಗುವುದುಂಟು. ಮಿದುಳಿನ ಉರಿಯೂತದಿಂದಾಗಿ ಮಂಪರು ಕವಿಯುವುದು, ಪ್ರಜ್ಞೆ ನಾಶವಾಗುವುದು ಹಾಗೂ ಲಕ್ವಾ ಮುಂತಾದ ತೊಂದರೆಗಳೂ ಕಾಡಬಹುದು. ಹದಿನೈದು ಇಪ್ಪತ್ತು ದಿನಗಳವರೆಗೆ ರೋಗಿಯ ಸ್ಥಿತಿ ಗಂಭೀರವಾಗಿರುವುದಾದರೂ, ಶೇಕಡಾ 90 ರಷ್ಟು ರೋಗಿಗಳು ನಿಧಾನವಾಗಿ ಚೇತರಿಸಿ ಕೊಳ್ಳುತ್ತಾರೆ.

ನಿವಾರಣೋಪಾಯಗಳು

ಬದಲಾಯಿಸಿ

ಆರೋಗ್ಯ ಮಂತ್ರಾಲಯವು ಕ್ಯಾಸನೂರು ಕಾಯಿಲೆ ಆರಂಭಗೊಳ್ಳುವ ಮೊದಲೇ ಚುರುಕುಗೊಂಡು ಕಾಯಿಲೆ ಬಗ್ಗೆ ವಿಶೇಷ ನಿಗಾ ಹರಿಸಬೇಕಲ್ಲದೆ ಹಳ್ಳಿಗರಿಗೆ ಕಾಯಿಲೆ ಬಗ್ಗೆ ನಿವಾರಣೋಪಾಯಗಳನ್ನು ತಿಳಿಯಪಡಿಸಬೇಕು.

ಮಂಗಗಳು ಸತ್ತು ಬೀಳುತ್ತಿವುದು ಗೊತ್ತಾದ ತಕ್ಷಣ ಅ ಪ್ರದೇಶದ ಕಾಡಿಗೆ ಹೆಲಿಕ್ಯಾಪ್ಟರ್ ಮೂಲಕ ಉಣ್ಣೆ ನಾಶಕ ಔಷಧಿ ಸಿಂಪಡಿಸಬೆಕು.

ಕ್ಯಾಸನೂರು ಕಾಡಿನ ಕಾಯಿಲೆಯಿಂದ ರಕ್ಷಣೆ ನೀಡುವ ಲಸಿಕೆ ಲಭ್ಯವಿದೆ. ರೋಗ ಆರಂಭವಾದ ಅನಂತರ ಈ ಲಸಿಕೆ ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ರೋಗ ಆರಂಭಗೊಳ್ಳುವ ಮೂರು ತಿಂಗಳ ಮುಂಚೆ ತಿಂಗಳಿಗೆ ಒಂದು ಇಂಜೆಕ್ಷನ್ ಅಂತೆ ಎರಡು ಇಂಜೆಕ್ಷನ್ ತೆಗೆದುಕೊಂಡಲ್ಲಿ ಮಾತ್ರ ಲಸಿಕೆಯಿಂದ ರಕ್ಷಣೆ ದೊರೆಯುತ್ತದೆ.

ಕಾಯಿಲೆ ಆರಂಭಗೊಂಡಾಗ ಕೃಷಿಕರು ಕಾಡಿಗೆ ಹೋಗುವುದನ್ನು ಬಿಡಬೇಕು. ಅನಿವಾರ್ಯವಾಗಿ ಕಾಡಿಗೆ ಹೊಗಲೇಬೇಕಾದರೆ ಮೈತುಂಬಾ ಬಟ್ಟೆ ಕಾಲಿಗೆ ಬೂಟು, ಕೈಗೆ ಗ್ಲೌಸ್, ತಲೆಗೆ ಟೋಪಿ ಧರಿಸಿಕೊಳ್ಳಬೇಕು. ತಮ್ಮ ಮತ್ತು ತಮ್ಮ ಜಾನುವಾರುಗಳ ಮೈಗೆ ಉಣ್ಣೆ ನಾಶಕ ಪುಡಿ ಲೇಪಿಸಿಕೊಳ್ಳಬೇಕು. ಕಾಡಿನಲ್ಲಿ ಕೂರುವುದು, ಮಲಗುವುದು, ಅನಾವಶ್ಯಕ ತಿರುಗಾಡುವುದು ಸಲ್ಲದು. ಕಾಡಿನಿಂದ ಹಿಂದಿರುಗಿದ ತಕ್ಷಣ ಸ್ನಾನ ಮಾಡಬೇಕು. ಜಾನುವಾರುಗಳ ಮೈಗೆ ಹತ್ತಿದ ಉಣ್ಣೆಗಳನ್ನು ಕಿತ್ತೆಸೆಯಬೇಕು.

ಅರಣ್ಯ ನಾಶವನ್ನು ತಡೆಗಟ್ಟಬೇಕು. ನಮ್ಮ ಅರಣ್ಯ ನಾಶ ಪ್ರವೃತ್ತಿ ಮುಂದುವರೆದರೆ ಕ್ಯಾಸನೂರು ಕಾಡಿನ ಕಾಯಿಲೆ ಕೇರಳ ಮತ್ತು ಗೋವಾಕ್ಕೂ ವ್ಯಾಪಿಸೀತು.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  • 2019 ಜನವರಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲಾ ಸಾಗರ ತಾಲೂಕು ವ್ಯಾಪ್ತಿಯ ಹಲವು ಭಾಗಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡು ಸುಮಾರು 25ಕೂ ಹೆಚ್ಚು ಜನ ಮೃತಪಟ್ಟಿದ್ದು 500ಕ್ಕೂ ಜನಕ್ಕಿಂತಲೂ ಹೆಚ್ಚಿನವರು ಸೋಂಕಿಗೆ ತುತ್ತಾಗಿದ್ದರು

ಹೊರ ಸಂಪರ್ಕ

ಬದಲಾಯಿಸಿ