ಕೈಗಾರಿಕಾ ಶಿಲ್ಪ
ತಯಾರಿಕಾ ಕಾರ್ಯಾಚರಣೆಗಳ ತಾಂತ್ರಿಕ ಅಂಶಗಳನ್ನು ವ್ಯವಸ್ಥೆಗೊಳಿಸುವ ಮತ್ತು ಅಧ್ಯಯಿಸುವ ಕಡೆಗೆ ವಿಶೇಷ ಲಕ್ಷ್ಯ ನೀಡುವ ಶಿಲ್ಪ ವಿಜ್ಞಾನ (ಇಂಡಸ್ಟ್ರಿಯಲ್ ಎಂಜಿನಿಯರಿಂಗ್). ಇದರಲ್ಲಿ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರಗಳನ್ನು ಮಾತ್ರವಲ್ಲದೆ ಸಾಮಾಜಿಕ ವಿಜ್ಞಾನಗಳನ್ನೂ (ಅರ್ಥಶಾಸ್ತ್ರವೂ ಸೇರಿ), ಶಿಲ್ಪವಿಶ್ಲೇಷಣೆ ಮತ್ತು ಸಂಶ್ಲೇಷಣೆಗಳನ್ನೂ ಬಳಸಿಕೊಳ್ಳಲಾಗುತ್ತದೆ. ತಯಾರಿಕಾ ವ್ಯವಸ್ಥೆಗಳನ್ನು ಸರಿಯಾಗಿ ನಿಯೋಜಿಸುವುದು ಮತ್ತು ಅಂಥ ವ್ಯವಸ್ಥೆಗಳಿಂದ ಬರುವ ಫಲವನ್ನು ಪೂರ್ವಭಾವಿಯಾಗಿ ತಿಳಿದು ನಿಯಂತ್ರಿಸಿ, ಮೌಲ್ಯ ಮಾಪನ ಮಾಡುವುದು ಕೈಗಾರಿಕಾಶಿಲ್ಪದ ಕರ್ತವ್ಯಗಳು. ಈ ವಿಜ್ಞಾನದ ಮುಖ್ಯವಾದ ಚಟುವಟಿಕೆಗಳೆಂದರೆ ಚಲನ ಅಧ್ಯಯನ, ಕಾಲದ ಅಧ್ಯಯನ, ಉತ್ಪಾದನಾ ನಿಯೋಜನೆ ಮತ್ತು ನಿಯಂತ್ರಣ ಕಾರ್ಯವಿಧಾನ ವಿಶ್ಲೇಷಣೆ ವ್ಯವಸ್ಥೆಗಳ ನಿಯೋಜನೆ, ಗುಣನಿಯಂತ್ರಣ, ಕೆಲಸದ ಮೌಲ್ಯಮಾಪನ, ಕೂಲಿ ಪ್ರೋತ್ಸಾಹಗಳು, ಕಾರ್ಯಾಗಾರದ ಜೋಡಣೆ, ಸಂಘಟನಾ ವಿಶ್ಲೇಷಣೆ, ಕಾರ್ಯ ಅಧ್ಯಯನ ಇತ್ಯಾದಿ.[೧]
ಒಂದು ಕೈಗಾರಿಕಾ ಸಂಸ್ಥೆಯಲ್ಲಿ ಸಾಮಾನ್ಯವಾಗಿ ಮೂರು ಕಾರ್ಯನಿರ್ವಾಹಕ ಗುಂಪುಗಳಿರುತ್ತವೆ (ಮೆನೆಜೇರಿಯಲ್ ಗ್ರೂಪ್ಸ್)
ಬದಲಾಯಿಸಿ1 ನಿರ್ವಾಹಕ ಮಂಡಲಿ: ಇದು ಕಾರ್ಯಾಚರಣೆಯ ವಿಭಾಗಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧಾರಗಳನ್ನು ನೇರವಾಗಿ ಕೈಗೊಳ್ಳುತ್ತದೆ. 2 ಕೈಗಾರಿಕಾ ನಿರ್ಮಾಣ ವಿಜ್ಞಾನಿಗಳು: ಇವರು ತಯಾರಿಕಾ ವಿಧಾನದಲ್ಲಿರುವ ಕೆಲಸವನ್ನು ನಿಯಂತ್ರಿಸಲು ಮತ್ತು ಮೌಲ್ಯಮಾಪನಗಳನ್ನು ಮಾಡಲು ಯೋಜನೆಗಳನ್ನು ರೂಪಿಸುತ್ತಾರೆ. ಅಲ್ಲದೆ ಮುಂದೆ ಮಾಡಬೇಕಾಗಿರುವ ಕೆಲಸದ ಆಲೇಖ್ಯಗಳನ್ನು ವಿಧಿಸುತ್ತಾರೆ. 3 ಕೈಗಾರಿಕಾ ಶಿಲ್ಪದ ತಂತ್ರಜ್ಞರು ಅಥವಾ ಕಾರ್ಯನಿರ್ವಾಹಕ ತಂತ್ರಜ್ಞರು: ಇವರು ಕೈಗಾರಿಕಾಶಿಲ್ಪದ ಯೋಜನೆಗಳಿಗೆ ಆಧಾರವಾದ ಅಂಶಗಳನ್ನು ಸಂಗ್ರಹಿಸುತ್ತಾರೆ. ಕೈಗಾರಿಕಾ ಶಿಲ್ಪದ ತಂತ್ರಕೌಶಲಗಳನ್ನು (ಟೆಕ್ನೀಕ್ಸ್) ಅವುಗಳ ಪ್ರಧಾನ ತಯಾರಿಕಾ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ಇನ್ನೂ ವಿಶಾಲವಾದ ಕ್ಷೇತ್ರಗಳಲ್ಲಿ, ವೈದ್ಯಕೀಯ ಮತ್ತು ದಂತಚಿಕಿತ್ಸಾ ಕಾರ್ಯಗಳಲ್ಲಿ, ಬೇಸಾಯರಂಗದಲ್ಲಿ ನೌಕಾಯಾನ ಕಾರ್ಯಕ್ರಮದಲ್ಲಿ ಮತ್ತು ಮನೆಕೆಲಸಗಳಲ್ಲಿ ಕೂಡ ಉಪಯೋಗಿಸಲಾಗುತ್ತಿದೆ. ಪ್ರಾರಂಭದ ಪ್ರಗತಿ: ಕೈಗಾರಿಕಾ ಶಿಲ್ಪ ಒಂದು ಸ್ವತಂತ್ರವಾದ ತಂತ್ರ ವಿಜ್ಞಾನವಾಗಿ (ಟೆಕ್ನಾಲಜಿ) 20ನೆಯ ಶತಮಾನದಲ್ಲಿ ಹುಟ್ಟಿಕೊಂಡಿತು. 1930ರ ಹೊತ್ತಿಗೆ ಅದು ಪಾಶ್ಚಾತ್ಯ ದೇಶಗಳಲ್ಲಿ ಕೈಗಾರಿಕಾ ದಿನಚರಿಯ ಒಂದು ಆವಶ್ಯಕ ಮತ್ತು ಅವಿಭಾಜ್ಯ ಅಂಗವಾಗಿ ಬಿಟ್ಟಿತ್ತು. ಪಿರಮಿಡ್ಡುಗಳ ನಿರ್ಮಾಣದಲ್ಲಿ ರೋಮನ್ ರಸ್ತೆ ಮತ್ತು ಮೇಲ್ಗಾಲುವೆಗಳ ರಚನೆಗಳಲ್ಲಿ, ಯುದ್ಧ ಮತ್ತು ನೌಕಾಸಮರ ಯೋಜನೆಗಳಲ್ಲಿ ಮತ್ತು ಹೆಚ್ಚು ಮೊತ್ತದ ಗಣಿಕೆಲಸಗಳಲ್ಲಿ ಬಹಳ ಹಿಂದಿನಿಂದಲೂ ಅಗಾಧ ಮೊತ್ತಗಳಲ್ಲಿ ಜನರನ್ನೂ ವಸ್ತುಗಳನ್ನೂ ಉಪಯೋಗಿಸಿದ್ದರೂ 20ನೆಯ ಶತಮಾನದ ಕೈಗಾರಿಕೋದ್ಯಮಗಳಲ್ಲಿ ಬಳಸಲಾಗುತ್ತಿರುವ ಬೃಹತ್ಪರಿಮಾಣದ ಅತ್ಯಂತ ಜಟಿಲವಾದ ಸಲಕರಣೆಗಳ ಮುಂದೆ ಅವೆಲ್ಲ ಕಡಿಮೆಯೇ ಎನ್ನಬಹುದು. ಜೊತೆಗೆ ಹಿಂದಿನಕಾಲದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಒತ್ತಡಗಳು ಕಡಿಮೆಯಿದ್ದು, ಸಾಮುದಾಯಿಕ ಯೋಜನೆಗಳಿಗೆ ಬೇಕಾಗುತ್ತಿದ್ದ ಸಂಘಟನೆ ಈಗಿನಷ್ಟು ಸಂಕೀರ್ಣವಾಗಿರಲಿಲ್ಲ.[೨]
ಪರಿಮಾಣಾತ್ಮಕ ಮಾಪನಗಳ ಇಲಾಖೆ (ಡಿಪಾರ್ಟ್‍ಮೆಂಟ್ ಆಫ್ ಕ್ವಾಂಟಿಟೇಟಿವ್ ಮೆಷóರ್ಸ್)
ಬದಲಾಯಿಸಿಕೆಲಸಗಾರರು, ವಸ್ತುಗಳು ಮತ್ತು ಉಪಕರಣಗಳ ನಡುವಣ ಸಂಘಟನೆಯನ್ನು ನಿಯೋಜಿಸುವಂಥ ಪರಿಮಾಣಾತ್ಮಕ ಮಾಪನಗಳ ಇಲಾಖೆ (ಡಿಪಾರ್ಟ್‍ಮೆಂಟ್ ಆಫ್ ಕ್ವಾಂಟಿಟೇಟಿವ್ ಮೆಷóರ್ಸ್) ಕೈಗಾರಿಕಾಕ್ರಾಂತಿಯೊಂದಿಗೇ ಉದ್ಭವವಾಯಿತೆನ್ನಬಹುದು. ಆಗ ಉಪಯೋಗಿಸುತ್ತಿದ್ದ ಯಂತ್ರಗಳ ಮೇಲಿನ ಬಂಡವಾಳ ಬಹಳ ಜಾಸ್ತಿಯಿರುತ್ತಿದ್ದುದರಿಂದ ಆ ಬಂಡವಾಳವನ್ನು ಆದಷ್ಟು ಎಚ್ಚರಿಕೆಯಿಂದಲೂ ದಕ್ಷತೆಯಿಂದಲೂ ಉಪಯೋಗಿಸುವುದು ಅನಿವಾರ್ಯವಾಗಿತ್ತು. ಒಂದು ಗೊತ್ತಾದ ಕೆಲಸಕ್ಕೆ ಎಷ್ಟು ವ್ಯಕ್ತಿ-ಗಂಟೆಗಳು ಬೇಕಾಗುತ್ತವೆ ಎಂಬುದನ್ನು ನಿರ್ಧರಿಸಲು ಮೊದಲ ಪ್ರಯತ್ನಗಳನ್ನು ನಡೆಸಿದವರೆಂದರೆ ಫ್ರಾನ್ಸಿನ ಜೀನ್ ಪೆರೋನೆ (1760) ಮತ್ತು ಇಂಗ್ಲೆಂಡಿನ ಚಾರಲ್ಸ್ ಬ್ಯಾಬೇಜ್ (1820). ಇಬ್ಬರೂ ಸೂಜಿಗಳ ತಯಾರಿಕೆಯ ಬಗ್ಗೆಯೇ ಅಧ್ಯಯನ ನಡೆಸಿದರು. ಮಾನವ ಅಂಶಕ್ಕೆ ಸಾಕಷ್ಟು ಗಮನವನ್ನು ಕೊಡಬೇಕೆಂಬುದನ್ನು 1813ರಲ್ಲಿ ರಾಬರ್ಟ್ ಓವನ್ ಎಂಬಾತ ಒತ್ತಿ ಹೇಳಿದ. ನಿರ್ಜೀವ ಯಂತ್ರಗಳ ಬಗ್ಗೆ ಎಚ್ಚರವಹಿಸಿದಾಗಲೇ ಅಷ್ಟೊಂದು ಉತ್ತಮ ಫಲಗಳು ಬರುವುದಾದರೆ ಜೀವವಿರುವ ಮಾನವಯಂತ್ರಗಳ ಬಗ್ಗೆ ಸರಿಯಾದ ಗಮನವಿತ್ತರೆ ಇನ್ನೆಷ್ಟು ಉಪಯೋಗಗಳು ಬರುವುದಿಲ್ಲ? ಇವುಗಳ ಬಗ್ಗೆ ನಿಜವಾದ ಜ್ಞಾನವನ್ನು ಪಡೆದು, ಅವುಗಳ ವಿಚಿತ್ರ ಕ್ರಿಯಾವಿನ್ಯಾಸವನ್ನೂ ಸ್ವಯಂ ಅನುಸರಣ ಶಕ್ತಿಗಳನ್ನೂ ತಿಳಿದುಕೊಳ್ಳಬೇಕು.
1900ರ ಅನಂತರದ ಮಾರ್ಪಾಡುಗಳು
ಬದಲಾಯಿಸಿಸಂಯುಕ್ತಸಂಸ್ಥಾನಗಳಲ್ಲಿ 1790ರ ದಶಕದಲ್ಲಿ ಎಲಿ ಹಿೃಟ್ನಿ ಮತ್ತು ಸಿಮೀಯನ್ ನಾರ್ತ್ ಎಂಬುವರು ಬಳಕೆಗೆ ತಂದ ಪರಸ್ಪರ ವಿನಿಮಯಾತ್ಮಕ ತಯಾರಿಕೆ ಎಂಬ ವ್ಯವಸ್ಥೆಯಿಂದಾಗಿ ವ್ಯಕ್ತಿಗಳು, ವಸ್ತುಗಳು ಮತ್ತು ಉಪಕರಣಗಳು ಇವನ್ನು ಸಂಘಟಿಸುವಂಥ ವ್ಯವಸ್ಥೆಯನ್ನು ಎಚ್ಚರಿಕೆಯಿಂದ ನಿಯೋಜಿಸುವುದರ ಆವಶ್ಯಕತೆ ಹೆಚ್ಚು ತುರ್ತು ಗಮನವನ್ನು ಪಡೆಯಿತು. ವ್ಯಕ್ತಿಗಳು, ವಸ್ತುಗಳು ಮತ್ತು ಉಪಕರಣಗಳ ಕಾಲಸಂಘಟಿತ ವ್ಯವಸ್ಥೆಯನ್ನು ಸುಸಂಬದ್ಧವಾಗಿ ನಿಯೋಜಿಸುವುದನ್ನು 1903ರಲ್ಲಿ ಫ್ರೆಡೆರಿಕ್ ಡಬ್ಲ್ಯೂ. ಟೇಲರ್ ಪ್ರತಿಪಾದಿಸಿದ. ಟೇಲರ್ ಈ ಕಾರ್ಯವನ್ನು 1881ರಲ್ಲಿ ಪ್ರಾರಂಭಿಸಿದ್ದು. ಫಿಲಡೆಲ್ಫಿಯದ ಮಿಡ್‍ನೇಲ್ ಉಕ್ಕಿನ ಕಾರ್ಖಾನೆಯಲ್ಲಿ ಕಚ್ಚಾವಸ್ತುಗಳನ್ನು ಅಗೆದುಹಾಕುವುದು, ಲೋಹಗಳ ಮೇಲೆ ಯಂತ್ರ ಕಾರ್ಯ ನಡೆಸುವುದು ಮುಂತಾದವಕ್ಕೆ ಸಂಬಂಧಿಸಿದ ಅನೇಕ ಅಂಶಗಳನ್ನು ಆತ ಸುವ್ಯವಸ್ಥಿತ ರೀತಿಯಲ್ಲಿ ಅಳೆದು ನಿಯೋಜಿಸಲಾರಂಭಿಸಿದ. ಅವನ ಕೃತಿಯಿಂದ ಮುಂದೆ ಕಾಲಾಧ್ಯಾಯನವೆಂಬ ವಿಧಾನ ಹುಟ್ಟಿಕೊಂಡಿತು. 1911ರಲ್ಲಿ ಫ್ರ್ಯಾಂಕ್ ಮತ್ತು ಲಿಲಿಯನ್ ಎಂ.ಗಿಲ್‍ಬ್ರೆತ್ ಎಂಬುವರು ಮಾನವಕಾರ್ಯಗಳನ್ನು ನಿಯೋಜಿಸಲು (ಮಾನವ ಸಮಸ್ಯೆಗಳಿಗೆ ಸಾಕಷ್ಟು ಪರಿಗಣನೆಯನ್ನು ನೀಡಿ) ಒಂದು ವಿಧಾನವನ್ನು ಕಂಡುಹಿಡಿದರು. ಇದಕ್ಕೆ ಚಲನಾಧ್ಯಯನವೆಂದು ಹೆಸರು. ಇದು ಕಾರ್ಯ ಸರಳೀಕರಣ, ವಿಧಾನಗಳನ್ನು ಉತ್ತಮಪಡಿಸುವಿಕೆ ಮುಂತಾದ ಅನೇಕ ಕೈಗಾರಿಕಾ ಚಟುವಟಿಕೆಗಳಿಗೆ ಮೂಲವಾಯಿತು.
ಕೈಗಾರಿಕಾ ಶಿಲ್ಪದ ಉಪಯೋಗ
ಬದಲಾಯಿಸಿ1903-1917ರ ಅವಧಿಯಲ್ಲಿ ಕೈಗಾರಿಕಾ ಶಿಲ್ಪದ ಉಪಯೋಗಕ್ಕೆ ವೈಜ್ಞಾನಿಕ ಕಾರ್ಯನಿರ್ವಹಣ (ಸೈಂಟಿಫಿಕ್ ಮ್ಯಾನೇಜ್‍ಮೆಂಟ್) ಎಂಬ ಹೆಸರಿದ್ದಿತು. 1917ರಲ್ಲಿ ಪ್ರಕಟವಾದ ಒಂದು ಪ್ರಕಟಣೆಯ ಪ್ರಕಾರ 1911-15ರ ಅವಧಿಯಲ್ಲಿ ಮೆಯಿನ್ ಮೇರಿಲ್ಯಾಂಡ್ ಮತ್ತು ಇಲಿನಾಯ್‍ಗಳ ನಡುವಣ 12 ರಾಜ್ಯಗಳಲ್ಲಿ ಸುಮಾರು 172 ಕಡೆಗಳಲ್ಲಿ ಕೈಗಾರಿಕಾ ಶಿಲ್ಪದ ತತ್ತ್ವಗಳನ್ನು ಉಪಯೋಗಿಸಲಾಗಿತ್ತು. ಕಾರ್ಖಾನೆಗಳು, ರೈಲುರಸ್ತೆಗಳು, ಉಗಿ ಜಹಜು ಕಂಪನಿಗಳು, ಸಾರ್ವಜನಿಕ ಸೇವಾಸಂಸ್ಥೆಗಳು, ಆಡಳಿತ ಸಂಗ್ರಹಗೃಹಗಳು (ಡಿಪಾರ್ಟ್‍ಮೆಂಟಲ್ ಸ್ಟೋರ್ಸ್), ಬ್ಯಾಂಕುಗಳು, ಪ್ರಕಟಣನಿಲಯಗಳು, ಗೃಹನಿರ್ಮಾಣ ಕಂಪನಿಗಳು ಮುಂತಾದವೆಲ್ಲ ಇವುಗಳಲ್ಲಿ ಮುಖ್ಯವಾದವು.ಕೈಗಾರಿಕಾ ಶಿಲ್ಪ 1910-30ರ ಅವಧಿಯಲ್ಲಿ ಗ್ರೇಟ್ ಬ್ರಿಟನ್ ಮತ್ತು ಸಂಯುಕ್ತ ಸಂಸ್ಥಾನಗಳಲ್ಲಿ ತನ್ನ ಪ್ರಮುಖವಾದ ಪ್ರಗತಿಯನ್ನು ಸಾಧಿಸಿತ್ತು. 1908ರಲ್ಲಿ ಪೆನ್ಸೀಲ್ವೇನಿಯ ರಾಜ್ಯದ ಕಾಲೇಜಿನಲ್ಲಿ ಹ್ಯೂಗೋ ಡೀಮರ್ ಎಂಬಾತನ ನಿರ್ದೇಶನದಲ್ಲಿ ಕೈಗಾರಿಕಾಶಿಲ್ಪವನ್ನು ಕುರಿತು ವಿಶ್ವವಿದ್ಯಾಲಯದ ಎರಡು ವರ್ಷಗಳ ಮೊಟ್ಟಮೊದಲ ಪಠ್ಯಕ್ರಮ ಪ್ರಾರಂಭವಾಯಿತು. 1960ರ ದಶಕದ ಮೊದಮೊದಲು ಸಂಯುಕ್ತ ಸಂಸ್ಥಾನಗಳ ಸುಮಾರು 33 ವಿಶ್ವವಿದ್ಯಾಲಯಗಳು ಕೈಗಾರಿಕಾಶಿಲ್ಪದಲ್ಲಿ ಸ್ನಾತಕಪೂರ್ವ ಪದವಿಗಳಿಗೆ ತರಬೇತಿ ನೀಡುತ್ತಿದ್ದುವು.
ಗಣಿತಶಾಸ್ತ್ರೀಯ ಮಾದರಿ
ಬದಲಾಯಿಸಿಎರಡನೆಯ ಮಹಾಯುದ್ಧದ ಸಮಯದಲ್ಲಿ ಕಾರ್ಯನಿರ್ವಾಹಕ ಸಮಸ್ಯೆಗಳ ಗಣಿತಶಾಸ್ತ್ರೀಯ ಮಾದರಿಗಳನ್ನು ರಚಿಸುವ ವಿಧಾನಗಳನ್ನು ತರಲಾಯಿತು. ಇವಕ್ಕೆ ಪರಿಕರ್ಮಗಳ ಸಂಶೋಧನೆ (ಆಪರೇಶನ್ಸ್ ರಿಸರ್ಚ್) ಎಂಬ ಹೆಸರು ಬಂದಿತು. ಇದರಿಂದಾಗಿ ಕೈಗಾರಿಕಾ ಶಿಲ್ಪದ ಚಟುವಟಿಕೆಗಳಿಗೆ ಬಹಳ ಅನುಕೂಲವಾಗಿ, ವ್ಯವಸ್ಥೆಗಳ ನಿಯೋಜನೆ ಮತ್ತು ಅವು ಹೇಗೆ ನಡೆಯುತ್ತವೆ ಎಂಬುದನ್ನು ಪೂರ್ವಭಾವಿಯಾಗಿ ಅರಿಯುವುದು ಮುಂತಾದವು ನಿಖರವಾಗಿ ಜರುಗಲು ಸಾಧ್ಯವಾಯಿತು. ಹಾಲಿ ಸಂಪ್ರದಾಯದಲ್ಲಿ ಕೈಗಾರಿಕಾ ಶಿಲ್ಪಕ್ಕೆ ಒಂದು ಉತ್ಪನ್ನದ ನಿಯೋಜನೆಯಿಂದ ಹಿಡಿದು ಅದು ಬಳಕೆದಾರನ ಕೈ ಸೇರುವ ತನಕ ಕೈತುಂಬ ಕೆಲಸವಿರುತ್ತದೆ: ಪ್ರಕ್ರಿಯೆಗಳ ಯೋಜನೆ, ಸಲಕರಣೆಗಳ ಸಮರ್ಪಕ ಜೋಡಣೆ, ಕೆಲಸದ ಸಮರ್ಥ ವಿತರಣೆ, ಕೆಲಸಗಾರರಿಗೆ ತರಬೇತಿ, ಗುಣನಿಯಂತ್ರಣ ಇತ್ಯಾದಿ.
ಉಲ್ಲೇಖಗಳು
ಬದಲಾಯಿಸಿ- ↑ http://www.kannadaprabha.com/districts/mysore/%E0%B2%97%E0%B2%BE%E0%B2%82%E0%B2%A7%E0%B2%BF-%E0%B2%B6%E0%B2%BF%E0%B2%B2%E0%B3%8D%E0%B2%AA-%E0%B2%AC%E0%B2%9C%E0%B2%BE%E0%B2%B0%E0%B3%8D-%E0%B2%B6%E0%B3%81%E0%B2%B0%E0%B3%81/124495.html
- ↑ http://vijaykarnataka.indiatimes.com/district/raichuru/-/articleshow/32429446.cms