ಕುಕರ್ಬಿಟೇಸೀ

ಸಸ್ಯಗಳ ಕುಟುಂಬ
Cucurbitaceae
Hodgsonia heteroclita male.jpg
Hodgsonia male plant
Egg fossil classification
Kingdom:
Plantae
(unranked):
(unranked):
Eudicots
(unranked):
Order:
Family:
Cucurbitaceae

ಕುಕರ್ಬಿಟೇಸೀದ್ವಿದಳಸಸ್ಯಗಳ ಗುಂಪಿಗೆ ಸೇರಿದ ಒಂದು ಪ್ರಮುಖ ಕುಟುಂಬ. ಇದರಲ್ಲಿ ಸುಮಾರು 100 ಜಾತಿಗೆ ಸೇರಿದ 850 ಪ್ರಭೇದಗಳಿವೆ. ಇವುಗಳಲ್ಲಿ ಬಹುಪಾಲು ಪ್ರಭೇದಗಳು ಉಷ್ಣದೇಶಗಳ ನಿವಾಸಿಗಳು. ಸಾಮಾನ್ಯವಾಗಿ ಎಲ್ಲ ಪ್ರಭೇದಗಳೂ ಮೃದುಕಾಂಡವುಳ್ಳ ವಾರ್ಷಿಕ ಬಳ್ಳಿಗಳು. ಅಪೂರ್ವವಾಗಿ ಕೆಲವು ಬಗೆಗಳು ಚಿಕ್ಕ ಮರಗಳಾಗಿ ಬೆಳೆಯುವುದುಂಟು. ಉದಾಹರಣೆಗೆ ಸೊಶೋತ್ರ ದ್ವೀಪದಲ್ಲಿ ಬೆಳೆಯುವ ಟೆಂಟ್ರೋಸಿಯಾಸ್ ಮತ್ತು ನೈಋತ್ಯ ಆಫ್ರಿಕಮರುಭೂಮಿಯಲ್ಲಿ ಬೆಳೆಯುವ ಅಕ್ಯಾಂತೊಸಿಯಾಸ್ ಎಂಬ ಜಾತಿಯ ಸಸ್ಯಗಳು.

ಲಕ್ಷಣಗಳುಸಂಪಾದಿಸಿ

 
Pumpkins and squashes displayed in a show competition

ಈ ಕುಟುಂಬದ ಸಸ್ಯಗಳ ಕಾಂಡಕ್ಕೆ ಸಾಮಾನ್ಯವಾಗಿ ಐದು ಮೂಲೆಗಳಿವೆ. ಇವುಗಳ ಗೆಣ್ಣುಗಳು ಗಟ್ಟಿ, ಅಂತರಗೆಣ್ಣುಗಳು ಟೊಳ್ಳು, ಎಲೆಗಳ ಕಂಕುಳಲ್ಲಿ ಒಂದು ಪಕ್ಕದಿಂದ ಕುಡಿಬಳ್ಳಿಗಳು (ಟೆಂಡ್ರಿಲ್ಸ್) ಹುಟ್ಟುತ್ತವೆ. ಇವುಗಳ ಸಹಾಯದಿಂದ ಸಸ್ಯಗಳು ಆಸರೆಯನ್ನು ಸುತ್ತಿಕೊಂಡು ಬೆಳೆಯುತ್ತವೆ. ಕುಡಿಬಳ್ಳಿಗಳ ನಿಜವಾದ ಪ್ರಕೃತಿಯ ಬಗ್ಗೆ ಅಭಿಪ್ರಾಯಭೇದವಿದೆ. ಇವನ್ನು ಮಾರ್ಪಾಡಾದ ಬೇರು, ಕಾಂಡ, ಎಲೆ, ರೆಂಬೆ, ಹೂತೊಟ್ಟು ಮುಂತಾಗಿ ವಿವಿರಿಸಲಾಗಿದೆ. ಸೇನ್ ಶರ್ಮ ಎಂಬುವರ ಪ್ರಕಾರ (1955) ಇವು ಬಳ್ಳಿ ಹಬ್ಬಲು ಅನುಕೂಲವಾಗುವಂತೆ ಮಾರ್ಪಾಡಾದ ವೃಂತಪರ್ಣಗಳು, ಮೆಡಿಟರೇನಿಯನ್ ಪ್ರದೇಶದಲ್ಲಿ ಬೆಳೆಯುವ ಎಕ್‍ಬಾಲಿಯಮ್ ಎಂಬ ಜಾತಿಯ ಸಸ್ಯದಲ್ಲಿ ಮಾತ್ರ ಕುಡಿಬಳ್ಳಿಗಳಿಲ್ಲ. ಕುಡಿಬಳ್ಳಿಗಳು ಕವಲೊಡೆದಿರಬಹುದು ಅಥವಾ ಇಲ್ಲದಿರಬಹುದು. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವಕ್ಕೆ ಉದ್ದವಾದ ತೊಟ್ಟುಗಳಿವೆ. ಎಲೆಗಳ ಆಕಾರ ಹೃದಯದಂತೆ. ಅದರ ಮೇಲೆ ಸ್ಪಷ್ಟವಾದ ನಾಳಗಳೂ ಕೂದಲುಗಳೂ ಇವೆ. ಹೂಗಳು ಎಲೆಗಳು ಕಂಕುಳಲ್ಲಿ ಒಂಟೊಂಟಿಯಾಗಿಯೊ ಹೂಗೊಂಚಲುಗಳಲ್ಲಿಯೊ ಹುಟ್ಟುತ್ತವೆ, ಹೂಗಳು ಸಾಮಾನ್ಯವಾಗಿ ಏಕಲಿಂಗಿಗಳು. ಅಪೂರ್ವವಾಗಿ ದ್ವಿಲಿಂಗಿಗಳು. ಒಂದೊಂದು ಹೂವಿನಲ್ಲೂ 5 ಪುಷ್ಪಗಳೂ 5 ದಳಗಳೂ ಇವೆ. ಸಾಧಾರಣವಾಗಿ ಎರಡೂ ಸಂಯುಕ್ತ ಮಾದರಿಯವು. ಗಂಡುಹೂವಿನಲ್ಲಿ 5 ಕೇಸರಗಳಿವೆ. ಕೇಸರಗಳು ತಮ್ಮ ರಚನೆಯಲ್ಲಿ ವೈವಿಧ್ಯವನ್ನು ಪ್ರದರ್ಶಿಸುತ್ತವೆ. ಫೆವಿಲಿಯ ಎಂಬ ಜಾತಿಯ ಸಸ್ಯದಲ್ಲಿ ಐದು ಕೇಸರುಗಳೂ ಬಿಡಿಬಿಡಿಯಾಗಿದ್ದರೆ ಕುಕರ್ಬಿಟ, ಕುಕು ಮಿಸ್, ಬ್ರೈಯೋನಿಯ ಮುಂತಾದವುಗಳಲ್ಲಿ ಕೇಸರದಂಡಗಳು ಒಂದರೊಡನೊಂದು ಕೂಡಿದ್ದು ತಮ್ಮ ರಚನೆಯಲ್ಲಿ ಜಟಿಲತೆಯನ್ನು ಪ್ರದರ್ಶಿಸುತ್ತವೆ. ಕೊನೆಗೆ ಸೈಕ್ಲಾಂತಿರ ಎಂಬ ಜಾತಿಯಲ್ಲಿ ಕೇಸರಗಳು ಒಂದರೊಡನೊಂದು ಸಂಪೂರ್ಣವಾಗಿ ಕೂಡಿಕೊಂಡು ಸ್ತಂಭಾಕೃತಿಯ ಬುಡವನ್ನೂ ಉಂಗುರಾಕಾರದ ಪರಾಗಕೋಶವನ್ನೂ ಒಳಗೊಂಡಿವೆ. ಹೆಣ್ಣು ಹೂವಿನಲ್ಲಿ 3 ಕಾರ್ಪೆಲ್‍ಗಳಿಂದಾದ ನೀಚಸ್ಥಾನದ ಅಂಡಾಶಯವಿದೆ. ಅಂಡಕೊಶದಲ್ಲಿ ಸಾಧಾರನವಾಗಿ ಒಂದೇ ಕೋಣೆಯಿದ್ದು ಅದರೊಳಗೆ ಒಳಗೋಡೆಗೆ ಅಂಟಿಕೊಂಡ ಹಲವಾರು ಅಂಡಕಗಳಿವೆ. ಅಂಡಕೋಶದಲ್ಲಿ ಅಪೂರ್ವವಾಗಿ 3 ಕೋಣೆಗಳಿರಬಹುದು. ಶಲಾಕೆ ಕೊಳವೆಯಂತಿದೆ. ಶಲಾಕಾಗ್ರ ಕವಲೊಡೆದಿದೆ. ಬಹುಪಾಲು ಪ್ರಭೇದಗಳಲ್ಲಿ ಫಲ ಬೆರಿಯಂತೆ ಕಾಣುವ ರಸಭರಿತ ಫಲ. ಇದನ್ನು ಪೆಪೊ ಎಂದು ಕರೆಯಲಾಗುತ್ತದೆ. ಕೆಲವು ಪ್ರಭೇದಗಳಲ್ಲಿ ಸಂಪುಟ ಮಾದರಿಯ ಫಲವಿರುವುದುಂಟು. ಬೀಜಗಳು ಅಸಂಖ್ಯವಾಗಿದೆ. ಆದರೆ ಸೀಚಿಯಮ್ ಎಡ್ಯೂಲ್ (ಸೀಮೆಬದನೆ) ಎಂಬ ಪ್ರಭೇದದಲ್ಲಿ ಒಂದೇ ಬೀಜ ಇದೆ.

ಕುಟುಂಬದ ಸಸ್ಯಗಳುಸಂಪಾದಿಸಿ

ಕುಕರ್ಬಿಟೇಸೀ ಕುಟುಂಬಕ್ಕೆ ಹಲವಾರು ಉಪಯುಕ್ತ ಸಸ್ಯಗಳು ಸೇರಿವೆ. ಫಲಸಸ್ಯಗಳಾದ ಕುಕುಮಿಸ್ ಮೆಲೊ (ಕರಬೂಜ), ಕುಕುಮಿಸ್ ಸಟೈವಸ್ (ಸೌತೆ), ಸಿಟ್ರಲಸ್ ವಲ್ಗ್ಯಾರಿಸ್ (ಕಲ್ಲಂಗಡಿ), ಕುಕರ್ಬಿಟ ಮಾಸ್ಕೇಟ ( ಸೀಗುಂಬಳ), ಬೆನಿನ್ ಕಾಸ ಸೆರಿಫೆರ (ಬೂದುಗುಂಬಳ) ಲ್ಯಾಜೆನೇರಿಯ (ಸೋರೆ) ಲೂಫ ಅಕ್ಯುಟ್ಯಾಂಗ್ಯುಲ (ಹೀರೆ), ಮೊಮೊರ್ಡಿಕ ಚರಂಶಿಯ (ಹಾಗಲ), ಸಿಫಲ್ಯಾಂಡ್ರ ಇಂಡಿಕ (ತೊಂಡೆ), ಸೀಚಿಯಮ್ ಎಡ್ಯೂಲ್ (ಸೀಮೆಬದನೆ), ಟ್ರೈಕೊಸ್ಯಾಂತಸ್ ( ಪಡವಲ) ಇತ್ಯಾದಿ ಸಸ್ಯಗಳು ಮುಖ್ಯವಾದವು.

ಉಲ್ಲೇಖಗಳುಸಂಪಾದಿಸಿ

  1. Angiosperm Phylogeny Group (2009). "An update of the Angiosperm Phylogeny Group classification for the orders and families of flowering plants: APG III" (PDF). Botanical Journal of the Linnean Society. 161 (2): 105–121. doi:10.1111/j.1095-8339.2009.00996.x. Retrieved 2013-07-06.

ಬಾಹ್ಯ ಸಂಪರ್ಕಗಳುಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: