ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಲ್ಮಾಷಪಾದ : ಸೂರ್ಯವಂಶದ ದೊರೆ ಋತುಪರ್ಣನ ಮೊಮ್ಮಗ. ಸುದಾಸನ ಮಗ. ಮಿತ್ರಸಹ, ಸೌದಾಸ ಇವನ ಇತರ ಹೆಸರುಗಳು. ಮದಯಂತಿ ಇವನ ಹೆಂಡತಿ. ಇವನ ವೃತ್ತಾಂತ ರಾಮಾಯಣ, ವಿಷ್ಣುಪುರಾಣಾದಿಗಳಲ್ಲಿ ಬಂದಿದೆ.

ಕಲ್ಮಾಷಪಾದನ ಕಥೆ

ಬದಲಾಯಿಸಿ

ಬೇಟೆಯ ಕಾಲದಲ್ಲಿ ಕಲ್ಮಾಷಪಾದ ತನ್ನನ್ನೆದುರಿಸಿದ ಇಬ್ಬರು ರಾಕ್ಷಸರಲ್ಲಿ ಒಬ್ಬನನ್ನು ಕೊಂದ. ಮತ್ತೊಬ್ಬ ಓಡಿಹೋಗಿ ಸೇಡುತೀರಿಸಿಕೊಳ್ಳಲು ಹೊಂಚುಹಾಕುತ್ತಿದ್ದ.

ಒಮ್ಮೆ ಕಲ್ಮಾಷಪಾದ ತನ್ನ ಕುಲಗುರು ವಸಿಷ್ಠನ ಪೌರೋಹಿತ್ಯದಲ್ಲಿ ಯಜ್ಞ ಮಾಡುತ್ತಿದ್ದ. ವಸಿಷ್ಠ ಮೀಯಲು ಹೋದ ಸಮಯವನ್ನು ಸಾಧಿಸಿ ಅವನ ರೂಪತಾಳಿ ಆ ರಾಕ್ಷಸ ತನಗೆ ಮಾಂಸಭೋಜನ ಮಾಡಿಸಲು ಹೇಳಿದ. ರಾಜ ಹಾಗೇ ಮಾಡಿಸಿದ. ಅದನ್ನುಂಡ ಆ ರಾಕ್ಷಸ ಅದರ ಸ್ಥಳದಲ್ಲಿ ನರಮಾಂಸವನ್ನಿಟ್ಟು ಹೋದ. ಸ್ನಾನಮಾಡಿ ಬಂದ ವಸಿಷ್ಠನಿಗೆ ಆ ನರಮಾಂಸವನ್ನು ಬಡಿಸಿದಾಗ ಅವನು ರೇಗಿ ೧೨ ವರ್ಷ ಕಾಲ ನರಭಕ್ಷಕ ರಾಕ್ಷಸನಾಗಿ ಬಾಳುವಂತೆ ಕಲ್ಮಾಷಪಾದನಿಗೆ ಶಾಪ ಕೊಟ್ಟ.. ವಸಿಷ್ಠನಿಗೆ ಪ್ರತಿಶಾಪ ಕೊಡಲು ರಾಜ ಕೈಯಲ್ಲಿ ನೀರು ತೆಗೆದುಕೊಂಡಾಗ ಮದಯಂತಿ ಅವನನ್ನು ತಡೆದಳು. ಆಗ ರಾಜ ಆ ನೀರನ್ನು ತನ್ನ ಕಾಲ ಮೇಲೆ ಸುರಿದುಕೊಂಡ. ಅದರಿಂದ ಅವನ ಕಾಲು ಕಪ್ಪಾಗಿ ಅಂದಿನಿಂದ ಅವನಿಗೆ ಕಲ್ಮಾಷಪಾದನೆಂಬ ಹೆಸರು ಬಂತು.

ವಸಿಷ್ಠದ್ವೇಷಿಯಾದ ವಿಶ್ವಾಮಿತ್ರಮುನಿ ಕಿಂಕರ ಎಂಬ ಇನ್ನೊಬ್ಬ ರಾಕ್ಷಸನನ್ನು ರಾಕ್ಷಸಭವದಲ್ಲಿನ ಕಲ್ಮಾಷಪಾದನಲ್ಲಿ ಆವೇಶಗೊಳಿಸಿ ಅವನ ಮೂಲಕ ವಸಿಷ್ಠನ ನೂರು ಮಕ್ಕಳನ್ನೂ ಕೊಲ್ಲಿಸಿದ. ಇನ್ನೊಂದು ಸಲ ಕಾಡಿನಲ್ಲಿ ಬ್ರಾಹ್ಮಣ ದಂಪತಿಗಳು ಕ್ರೀಡಾಸಕ್ತರಾಗಿದ್ದಾಗ ಅವರಲ್ಲಿ ಗಂಡನನ್ನು ತಿಂದದ್ದರಿಂದ ಅವನ ಹೆಂಡತಿ ‘ಸ್ತ್ರೀಸಂಪರ್ಕದಿಂದ ನಿನಗೆ ಸಾವು ಬರಲಿ’ ಎಂದು ಕಲ್ಮಾಷಪಾದನಿಗೆ ಶಾಪಕೊಟ್ಟಳು. ಶಾಪದ ೧೨ ವರ್ಷಗಳು ಕಳೆದ ಬಳಿಕ ಕಲ್ಮಾಷಪಾದರಾಯ ತನ್ನ ಪೂರ್ವ ರೂಪವನ್ನು ಹೊಂದಿ ವಸಿಷ್ಠನ ಅನುಗ್ರಹದಿಂದ ಅಶ್ಮಕನೆಂಬ ಮಗನನ್ನು ಪಡೆದ. ಗೌತಮಶಿಷ್ಯನಾದ ಉದಂಕ ಕಲ್ಮಾಷಪಾದನ ಹೆಂಡತಿಯಾದ ಮದಯಂತಿಯಿಂದ ಗುರುದಕ್ಷಿಣಾರೂಪದಲ್ಲಿ ಕುಂಡಲಗಳನ್ನು ಬೇಡಿಪಡೆದುಕೊಂಡ.