ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆ

ಕರ್ನಾಟಕದಲ್ಲಿನ ಶಿಕ್ಷಣ ವ್ಯವಸ್ಥೆ

ಉನ್ನತ ಶಿಕ್ಷಣ ಮತ್ತು ಸಂಶೋಧನೆ: ಪದವಿಪೂರ್ವ ಶಿಕ್ಷಣದ ಅನಂತರ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣವನ್ನು ಕರ್ನಾಟಕದಲ್ಲಿ ಉನ್ನತ ಶಿಕ್ಷಣವೆಂದು ಪರಿಗಣಿಸಲಾಗಿದೆ. ಎಂದರೆ ಏಳು ವರ್ಷ ಪ್ರಾಥಮಿಕ ಶಿಕ್ಷಣವೂ 3+2 ವರ್ಷ ಪ್ರೌಢಶಿಕ್ಷಣವೂ ಸೇರಿದಂತೆ ಒಟ್ಟು ಹನ್ನೆರಡು ವರ್ಷಗಳ ಶಾಲಾಶಿಕ್ಷಣದ ಅನಂತರದ ಶಿಕ್ಷಣಕ್ಕೆ ಸಾಮಾನ್ಯವಾಗಿ ಈ ಹೆಸರನ್ನು ಬಳಸಲಾಗುತ್ತದೆ. ಇದು ವಿಶ್ವವಿದ್ಯಾಲಯಗಳಲ್ಲೂ ಅದರ ಆಂಗಿಕ ಮತ್ತು ಅಂಗೀಕೃತ ಕಾಲೇಜುಗಳಲ್ಲೂ ಸ್ನಾತಕೋತ್ತರ ವಿಭಾಗ ಅಥವಾ ಕೇಂದ್ರಗಳಲ್ಲೂ ಪರಿಗಣಿತ ವಿಶ್ವವಿದ್ಯಾಲಯಗಳಲ್ಲೂ ಇತರ ವಿಶಿಷ್ಟ ಶಿಕ್ಷಣ ಸಂಸ್ಥೆಗಳಲ್ಲೂ ವ್ಯವಸ್ಥೆಗೊಂಡಿದೆ. ಬೋಧನೆ, ಸಂಶೋಧನೆ, ವಿಸ್ತರಣೆ-ಈ ಸಾಂಪ್ರದಾಯಿಕ ಅಂಶಗಳು ಇಲ್ಲಿನ ಉನ್ನತ ಶಿಕ್ಷಣದ ಕರ್ತವ್ಯಗಳಾಗಿವೆ..[] 

ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆ

ಬದಲಾಯಿಸಿ

ಆಧುನಿಕ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿರುವ ಉನ್ನತ ಶಿಕ್ಷಣ ವ್ಯವಸ್ಥೆ ಕರ್ನಾಟಕದಲ್ಲಿ 1853ರಲ್ಲಿ ಆರಂಭವಾಯಿತೆನ್ನಬಹುದು. ಆ ವರ್ಷ ಮೈಸೂರಿನ ಮಹಾರಾಜ ಕಾಲೇಜು ಅನಂತರ 1858ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಅಸ್ತಿತ್ವಕ್ಕೆ ಬಂದವು. ಅವೆರಡೂ ಆಗ ಮದರಾಸು ವಿಶ್ವವಿದ್ಯಾಲಯದ ಅಂಗೀಕಾರ ಪಡೆದಿದ್ದವು. ಮದ್ರಾಸ್ ಸರ್ಕಾರ 1869ರಲ್ಲಿ ಮಂಗಳೂರಿನಲ್ಲಿ ಎರಡನೆಯ ದರ್ಜೆ ಕಾಲೇಜನ್ನು ಸ್ಥಾಪಿಸಿತು. 1879ರಲ್ಲಿ ಮಂಗಳೂರಿನಲ್ಲಿ ಸೇಂಟ್ ಅಲಾಸಿಯಸ್ ಕಾಲೇಜು ಮತ್ತು 1882ರಲ್ಲಿ ಬೆಂಗಳೂರಿನಲ್ಲಿ ಸೇಂಟ್ ಜೋಸೆಫ್ರ ಕಾಲೇಜು ಅಸ್ತಿತ್ವಕ್ಕೆ ಬಂದವು. 1902ರಲ್ಲಿ ಮೈಸೂರಿನ ಮಹಾರಾಜ ಕಾಲೇಜನ್ನು ಪ್ರಥಮ ದರ್ಜೆಗೆ ಏರಿಸಲಾಯಿತು. ಮೈಸೂರು ಸಂಸ್ಥಾನದಲ್ಲಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸಲು ನಡೆಸಿದ ಪ್ರಯತ್ನದ ಫಲವಾಗಿ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಆರಂಭವಾಯಿತು. ಅನಂತರ 1950ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವೂ 1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ಅಸ್ತಿತ್ವಕ್ಕೆ ಬಂದವು. ಇವುಗಳ ಅಂಗ ಕಾಲೇಜು ಗಳು ಪ್ರತಿ ಜಿಲ್ಲೆಯಲ್ಲೂ ಅಸ್ತಿತ್ವಕ್ಕೆ ಬಂದವು. 1963ರಲ್ಲಿ ಹೆಬ್ಬಾಳಿನ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಹಿಂದೆ ರಾಜ್ಯದ ಸಾಮಾನ್ಯ ಶಿಕ್ಷಣದ ಮೂರು ವಿಶ್ವವಿದ್ಯಾಲಯಗಳೆಂದರೆ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಪ್ರತ್ಯೇಕ ರಾಜ್ಯ ಶಾಸನಗಳಿಂದ ಸಂಘಟಿತವಾಗಿ ತಮ್ಮದೇ ಆದ ರೀತಿಯ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದವು. ಆಡಳಿತದಲ್ಲಿ ಏಕತೆಯನ್ನು ತರಲು ರಾಜ್ಯಸರ್ಕಾರ 1975ರ ಕರ್ನಾಟಕ ವಿಶ್ವವಿದ್ಯಾಲಯಗಳ ಶಾಸನ ರೀತ್ಯಾ, ತಾರೀಖು 25-09-1975 ರಂದು ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿ, ಮೂರು ವಿಶ್ವವಿದ್ಯಾಲಯಗಳಿಗೂ ಏಕರೂಪದ ಶಾಸನವನ್ನು ರೂಪಿಸಿತು..[] 

ಕರ್ನಾಟಕ ಸರ್ಕಾರ ತಂದ ವಿವಿಧ ಕಾಯಿದೆ ತಿದ್ದುಪಡಿ

ಬದಲಾಯಿಸಿ

ಕ್ರಮೇಣ ಸರ್ಕಾರ ತಂದ ವಿವಿಧ ಕಾಯಿದೆ ತಿದ್ದುಪಡಿಗಳಿಂದಾಗಿ ವಿಶ್ವವಿದ್ಯಾಲಯದ ಆಡಳಿತ ವ್ಯವಹಾರಗಳ ಬಗ್ಗೆ ಸರ್ಕಾರದ ನಿಯಂತ್ರಣ ಹೆಚ್ಚಿದೆ. ವಿಶ್ವವಿದ್ಯಾಲಯದ ಪ್ರಮುಖ ಅಂಗವಾಗಿದ್ದ ಸೆನೆಟ್ ರದ್ದಾಗಿದ್ದು ಶಿಕ್ಷಣ ಮಂಡಳಿಯ ಸ್ವರೂಪವೂ ತೀವ್ರವಾಗಿ ಬದಲಾಗಿದೆ. ಕುಲಪತಿಗಳ ನೇಮಕದಲ್ಲೂ ಸರ್ಕಾರ ಹೆಚ್ಚಿನ ಅಧಿಕಾರ ಹೊಂದಿದೆ. ಮುಂದೆ ವಿಶ್ವವಿದ್ಯಾಲಯ ಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾದವು. ಮಂಗಳೂರು ವಿಶ್ವವಿದ್ಯಾಲಯ (1980), ಗುಲ್ಬರ್ಗಾ ವಿಶ್ವವಿದ್ಯಾಲಯ (1980), ಕುವೆಂಪು ವಿಶ್ವವಿದ್ಯಾಲಯ (1987), ಕನ್ನಡ ವಿಶ್ವವಿದ್ಯಾಲಯ (1991)-ಇವು ಪ್ರಾರಂಭವಾಗಿ ಸ್ನಾತಕೋತ್ತರ ಶಿಕ್ಷಣವು ವಿವಿಧ ಕೇಂದ್ರಗಳಲ್ಲಿ ಪ್ರಾರಂಭವಾಗಲು ಅವಕಾಶ ಕಲ್ಪಿತವಾಯಿತು. ತುಮಕೂರು (ಈಗ ವಿಶ್ವವಿದ್ಯಾಲಯ) ಹಾಸನ, ಮಂಡ್ಯ, ದಾವಣಗೆರೆ, ಬಳ್ಳಾರಿ, ಬೆಳಗಾಂವಿ ಮೊದಲಾದವು ಸ್ನಾತಕೋತ್ತರ ಶಿಕ್ಷಣಗಳ ಕೇಂದ್ರಗಳನ್ನು ಪಡೆದಿವೆ. ಮೈಸೂರಿನ ಜೆ.ಎಸ್.ಎಸ್.ನಂತಹ ಶಿಕ್ಷಣ ಸಂಸ್ಥೆಗಳು ಕೆಲವು ವಿಷಯಗಳಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿವೆ. ಚಾಮರಾಜನಗರದಲ್ಲಿ ಈ ಸಂಸ್ಥೆಯ ಸ್ನಾತಕೋತ್ತರ ಕೇಂದ್ರವಿದೆ. ಮಣಿಪಾಲ ಶಿಕ್ಷಣ ಸಂಸ್ಥೆ ಸಂಭಾವ್ಯ (ಡೀಮ್ಡ್‌) ವಿಶ್ವವಿದ್ಯಾಲಯದ ಸ್ಥಾನಮಾನ ಪಡೆದಿದೆ. ರಾಜ್ಯಾದ್ಯಂತ ಕಾನೂನು ಶಿಕ್ಷಣ ಕಾಲೇಜುಗಳು ಪ್ರಾರಂಭಗೊಂಡಿವೆ.ವೈದ್ಯಕೀಯ, ದಂತವೈದ್ಯ ವಿಜ್ಞಾನ, ಆಯುರ್ವೇದ ಯುನಾನಿ, ಹೋಮಿಯೋಪತಿ, ದಾದಿವೃತ್ತಿ ಶಿಕ್ಷಣ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಶಿಕ್ಷಣ, ಅರಿವಳಿಕೆ ಹಾಗೂ ಔಷಧ ವಿಜ್ಞಾನಶಾಸ್ತ್ರದಲ್ಲಿ ಅನೇಕ ಪದವಿ ಮತ್ತು ಸ್ನಾತಕೋತ್ತರ ಕೇಂದ್ರಗಳು ಸ್ಥಾಪನೆಗೊಂಡಿವೆ. ರಾಜ್ಯದಲ್ಲಿ ಸು.258 ಸಂಸ್ಥೆಗಳು ವಿವಿಧ ಆರೋಗ್ಯ ವಿಜ್ಞಾನ ವಿಷಯಗಳಲ್ಲಿ ಶಿಕ್ಷಣ ನೀಡುತ್ತಿವೆ (2000). ಈ ಸಂಸ್ಥೆಗಳ ಪರೀಕ್ಷೆಗಳ ನಿರ್ವಹಣೆ ಮತ್ತು ಉಸ್ತುವಾರಿಗಾಗಿ ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ (1996). ಹಾಗೆಯೇ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮುನ್ನೂರಕ್ಕೂ ಹೆಚ್ಚು ಎಂಜಿನಿಯರಿಂಗ್, ತಾಂತ್ರಿಕ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್ಗಳನ್ನು ನಿರ್ವಹಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ (1999). ಪಶುವೈದ್ಯ ವಿಶ್ವವಿದ್ಯಾಲಯವೂ ಸ್ಥಾಪನೆಗೊಂಡಿದೆ (2004).

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ಬದಲಾಯಿಸಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿದ್ದು ಇದು ಹಿಂದೆ ಮೈಸೂರು ವಿಶ್ವವಿದ್ಯಾನಿಲಯ ನಡೆಸುತ್ತಿದ್ದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಕಾರ್ಯಭಾರವನ್ನು ವಹಿಸಿಕೊಂಡಿರುವುದಲ್ಲದೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇತ್ತೀಚೆಗೆ ಬಿಜಾಪುರದಲ್ಲಿ ಮಹಿಳಾ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ (2004). ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ಶ್ರವಣ ಸಂಸ್ಥೆ, ಮೈಸೂರಿನ ಪ್ರಾದೇಶಿಕ ಕಾಲೇಜು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌, ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕಾನಾಮಿಕ್ ಚೇಂಜ್ ಮೊದಲಾದವು ವಿಶಿಷ್ಟ ವಿಷಯಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣ ನೀಡುತ್ತಿವೆ. ಸಾಫ್ಟ್‌ವೇರ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಪ್ರಗತಿಯಾಗಿದ್ದು ಅವುಗಳಲ್ಲಿ ಶಿಕ್ಷಣ ನೀಡಲು ಹಲವಾರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದಾಗಿವೆ.ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಜನಸಾಮಾನ್ಯರಲ್ಲಿ ಉನ್ನತ ಶಿಕ್ಷಣದ ಪ್ರಸಾರಕಾರ್ಯ ವನ್ನು ನಿರ್ವಹಿಸುತ್ತಿವೆ. ಪ್ರಚಾರೋಪನ್ಯಾಸ ಮತ್ತು ಪ್ರಕಟಣೆಗಳ ಮೂಲಕ ವಿಶ್ವವಿದ್ಯಾಲಯದ ನಿಯತ ವಿದ್ಯಾರ್ಥಿಗಳು ಪಡೆಯುತ್ತಿರುವ ಜ್ಞಾನಾರ್ಜನೆಯ ಸೌಲಭ್ಯವನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ ಜನಸಾಮಾನ್ಯರಿಗೂ ಒದಗುವಂತೆ ಅವಕಾಶ ಕಲ್ಪಿಸಿದೆ. ಅದಕ್ಕಾಗಿ ಒಂದು ಪ್ರತ್ಯೇಕ ವಿಭಾಗವನ್ನೇ ವ್ಯವಸ್ಥೆಗೊಳಿಸಿಕೊಂಡಿವೆ.

ಸಂಶೋಧನೆ

ಬದಲಾಯಿಸಿ

ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಸಂಶೋಧನೆಗೆ ಅವಕಾಶವಿದ್ದರೂ ಅದು ಮುಖ್ಯವಾಗಿ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗಗಳಲ್ಲೂ ಸ್ನಾತಕೋತ್ತರ ಕೇಂದ್ರಗಳಲ್ಲೂ ನಡೆಯುತ್ತಿವೆ. ಇವುಗಳ ಜೊತೆಗೆ ಸಂಶೋಧನೆಗೆಂದೇ ಮೀಸಲಾಗಿರುವ ಸಂಸ್ಥೆಗಳೂ ವಿಶಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿವೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶಿಷ್ಟ ಕ್ಷೇತ್ರಗಳಲ್ಲಿ ಶಿಕ್ಷಣವೀಯುವುದರ ಜೊತೆಗೆ ಉದ್ಯೋಗ ಮತ್ತು ರಕ್ಷಣೆಯ ಕಾರ್ಯಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಕುರಿತು ಫಲದಾಯಕವಾದ ಸಂಶೋಧನೆ ನಡೆಸುತ್ತಿದೆ. ವಿವಿಧ ಉದ್ಯೋಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಡಿಸಿಕೊಡುವುದರಲ್ಲೂ ಇದು ಗಣನೀಯ ಪಾತ್ರ ನಿರ್ವಹಿಸುತ್ತಿದೆ. ಭಾರತೀಯ ಉದ್ಯಮಗಳೂ ರಕ್ಷಣಾಪಡೆಗಳೂ ಈ ಸಂಸ್ಥೆಯಿಂದ ಅನೇಕ ನೂತನ ವಿಧಾನಗಳನ್ನು ಪಡೆದುಕೊಂಡು ಕಾರ್ಯಕ್ಷೇತ್ರದಲ್ಲಿ ಬಳಸಿಕೊಳ್ಳುತ್ತಿವೆ. ಇದರಂತೆ ದಿವಂಗತ ಸರ್.ಸಿ.ವಿ. ರಾಮನ್ ಬೆಂಗಳೂರಿನಲ್ಲಿ ಸ್ಥಾಪಿಸಿರುವ ರಾಮನ್ ಸಂಶೋಧನಾ ಸಂಸ್ಥೆಯೂ ಭೌತಶಾಸ್ತ್ರದ ಸಂಶೋಧನೆಗಳಲ್ಲಿ ನಿರತವಾಗಿದೆ. ಔದ್ಯೋಗಿಕ ಮತ್ತು ವೈಜ್ಞಾನಿಕ ಸಂಶೋಧನ ಮಂಡಳಿಯ ನೇತೃತ್ವದಲ್ಲಿ ಏರ್ಪಟ್ಟಿರುವ ಎರಡು ಸಂಶೋಧನ ಸಂಸ್ಥೆಗಳು ಕರ್ನಾಟಕದಲ್ಲಿವೆ. ಮೈಸೂರಿನ ಕೇಂದ್ರ ಆಹಾರ ಸಂಶೋಧನ ಸಂಸ್ಥೆ ಜನತೆಯ ಹಾಗೂ ಸೈನ್ಯದ ಆಹಾರ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಸಂಶೋಧನೆ ನಡೆಸುತ್ತದೆ. ಇದು ಭಾರತದ ಅನೇಕ ಕಡೆ ತನ್ನ ಪ್ರಾದೇಶಿಕ ಸಂಶೋಧನ ಕೇಂದ್ರಗಳನ್ನು ಸ್ಥಾಪಿಸಿಕೊಂಡಿದೆ. ಆಹಾರ ತಯಾರಿಕೆಗೆ ಸಂಬಂಧಿಸಿದಂತೆ ಇದು ರೂಪಿಸಿದ ಅನೇಕ ವಿಧಾನಗಳು ಆಗಲೇ ವಾಣಿಜ್ಯ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿವೆ. ಬೆಂಗಳೂರಿನ ರಾಷ್ಟ್ರೀಯ ವಾಯುಯಾನ ಸಂಶೋಧನ ಸಂಸ್ಥೆಯೂ ವಿಮಾನಗಳ ವಿನ್ಯಾಸ ಮತ್ತು ಚಲನೆಗೆ ಸಂಬಂಧಿಸಿದಂಥ ಹಲವು ಪ್ರಧಾನ ಸಂಶೋಧನೆಗಳನ್ನು ನಡೆಸಿದೆ.

ಬೆಂಗಳೂರು ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳು

ಬದಲಾಯಿಸಿ

ಬೆಂಗಳೂರು ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳು ವ್ಯವಸಾಯ ಮತ್ತು ವ್ಯವಸಾಯೋದ್ಯಮಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿವೆ. ಬತ್ತ, ಜೋಳ, ರಾಗಿ, ಹತ್ತಿ ಮುಂತಾದವುಗಳ ನೂತನ ತಳಿಗಳ ನಿರ್ಮಾಣದ ಮೂಲಕ ರಾಜ್ಯದ ವ್ಯವಸಾಯದ ಪ್ರಗತಿಗೆ ಸಹಾಯ ಮಾಡಿವೆ. ಇವು ಹೆಬ್ಬಾಳ, ಮಂಡ್ಯ, ಮೂಡಿಗೆರೆ, ಧಾರವಾಡ, ರಾಯಚೂರು- ಈ ಸ್ಥಳಗಳಲ್ಲಿ ಪ್ರಾದೇಶಿಕ ಸಂಶೋಧನ ಕೇಂದ್ರಗಳನ್ನು ಹೊಂದಿವೆ. ಬೆಂಗಳೂರಿನ ಆಗ್ನೇಯದಲ್ಲಿ ಹೊಸೂರು ರಸ್ತೆಯ ಬಳಿ ಇರುವ ರಾಷ್ಟ್ರೀಯ ಕ್ಷೀರೋದ್ಯಮಕ್ಕೆ ಸಂಬಂಧಿಸಿದ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ನಡೆಸುವುದರ ಜೊತೆಗೆ ಕ್ಷೀರೋದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಅದು ಹರಿಯಾಣದ ಕರ್ನಾಲ್ನಲ್ಲಿರುವ ಕ್ಷೀರೋದ್ಯಮ ಸಂಶೋಧನ ಸಂಸ್ಥೆಯ ಅಂಗವಾಗಿ ನಡೆದುಕೊಂಡುಬರುತ್ತಿದೆ.

ಇತಿಹಾಸ

ಬದಲಾಯಿಸಿ

ಪ್ರಾಚೀನ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ವ್ಯಾಪಕವಾದ ವ್ಯವಸ್ಥೆಯಿತ್ತು. ಪ್ರ.ಶ.ಪು.4ನೆಯ ಶತಮಾನದ ಕೊನೆಯಲ್ಲಿ ಇಲ್ಲಿಗೆ ಆಗಮಿಸಿದ ಚಂದ್ರಗುಪ್ತ ಮೌರ್ಯ ಮತ್ತು ಅವನ ಗುರು ಭದ್ರಬಾಹುವಿನೊಡನೆ ಜೈನಧರ್ಮವೂ ಜೈನಸಂಸ್ಥೆಗಳೂ ಆಗಮಿಸಿದುವು. ನಾಡಿನ ಬೇರೆ ಬೇರೆ ಭಾಗಗಳಲ್ಲಿ ಜೈನಬಸದಿಗಳು ಆರಂಭವಾಗಿ ಮೋಕ್ಷಸಾಧನೆಗೆ ನಂಬಿಕೆ, ಭಕ್ತಿ, ಪೂಜೆ ಪುನಸ್ಕಾರಗಳಂತೆ ಸುಜ್ಞಾನವೂ ಅಗತ್ಯವೆಂದು ಸಾರಿ ಉನ್ನತ ಶಿಕ್ಷಣಕ್ಕೆ ಧಾರ್ಮಿಕ ಮನ್ನಣೆಯನ್ನೂ ಪ್ರೋತ್ಸಾಹವನ್ನೂ ನೀಡಿದುವು. ಅಶೋಕನ ಕಾಲದಲ್ಲಿ ಕರ್ನಾಟಕಕ್ಕೆ ಬೌದ್ಧ ಧರ್ಮದೊಡನೆ ಸಂಘಾರಾಮಗಳೂ ವಿಹಾರಗಳೂ ಆಗಮಿಸಿ ವ್ಯವಸ್ಥಿತ ರೀತಿಯ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದುವು. ಕ್ರಿಸ್ತಶಕದ ಆರಂಭದ ವೇಳೆಗೆ ದೇಶದ ಅನೇಕ ಕಡೆ ಬೌದ್ಧ ಮಠಗಳೂ ವಿಹಾರಗಳೂ ಏರ್ಪಟ್ಟವು. ಪ್ರಪಕ್ತಶಕ ಮೂರನೆಯ ಶತಮಾನದಲ್ಲಿ ಚುಟುಕುಲದ ಶಿವಸ್ಕಂದ ನಾಗಶ್ರೀ ಬನವಾಸಿಯಲ್ಲಿ ಒಂದು ಬೌದ್ಧವಿಹಾರವನ್ನು ಸ್ಥಾಪಿಸಿದ ವಿಷಯ ಅಲ್ಲಿನ ಮಧುಕೇಶ್ವರ ದೇವಾಲಯದ ನಾಗಶಿಲೆಯ ಶಾಸನವೊಂದರಿಂದ ತಿಳಿದುಬರುತ್ತದೆ. ನಮಗೆ ದೊರೆತಿರುವ ಸಾಕ್ಷ್ಯಾಧಾರಗಳ ಪ್ರಕಾರ ಇದು ಕರ್ನಾಟಕದಲ್ಲಿ ಮೊಟ್ಟ ಮೊದಲು ಆರಂಭವಾದ ಉನ್ನತ ಶಿಕ್ಷಣ ಸಂಸ್ಥೆ. ಜೈನ ಬೌದ್ಧ ಧರ್ಮಗಳು ಆರಂಭಿಸಿದ ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳು ಇಲ್ಲಿ ಪೌರಾಣಿಕ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಗುರುಕುಲ ಮತ್ತು ಆಶ್ರಮ ಶಿಕ್ಷಣ ಪದ್ಧತಿಗಳ ಮೇಲೆ ಪರಿಣಾಮ ಬೀರಿ ಶಿಕ್ಷಣಕ್ಕೆ ಸಂಘ ಸಂಸ್ಥೆಗಳ ನಿಯಂತ್ರಣ ಆರಂಭವಾಯಿತು. ಅವುಗಳಲ್ಲಿ ಘಟಿಕ ಎಂಬುವು ಅತ್ಯಂತ ಪ್ರಾಚೀನತಮ ಸಂಸ್ಥೆಗಳು. ಕದಂಬ ಮಯೂರಶರ್ಮ ಉನ್ನತ ಶಿಕ್ಷಣದ ಪ್ರೇಮಿಯಾಗಿದ್ದು ಅಂದು ಕಾಂಚೀಪುರದಲ್ಲಿದ್ದ ಘಟಿಕಾಲಯದ ಮಾದರಿಯಲ್ಲಿ ತನ್ನ ರಾಜ್ಯದಲ್ಲೂ ಘಟಿಕಗಳನ್ನು ಸ್ಥಾಪಿಸಿದ್ದ ಎಂದು ಕೆಲವರ ಊಹೆ. ನಾಗಾಯಿ, ಹೆಂಜಾರಪುರ, ಕಾಡಿಯೂರು, ಕುಕ್ಕೂರು, ಮೋರಿಗೆರೆ, ರಾಯಬಾಗ್ ಮುಂತಾದೆಡೆ ಖ್ಯಾತಿಪಡೆದ ಘಟಿಕಾಲಯಗಳು ಬೇರೆ ಬೇರೆ ಕಾಲಗಳಲ್ಲಿ ಅಸ್ತಿತ್ವದಲ್ಲಿದ್ದವು. ಅಲ್ಲಿ ಶಿಕ್ಷಣ ಮುಗಿಸಿದವರಿಗೆ, ಸಮಾರಂಭವೊಂದನ್ನು ನಡೆಸಿ ಘಟಿಕಸಾಹಸ ಎಂಬ ಪ್ರಶಸ್ತಿ ನೀಡುತ್ತಿದ್ದರು. ಘಟಿಕಗಳಂತೆ ಅಗ್ರಹಾರಗಳೂ ಬ್ರಹ್ಮಪುರಿಗಳೂ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಅಸ್ತಿತ್ವದಲ್ಲಿದ್ದವು. ಅವು ಬ್ರಾಹ್ಮಣಪಂಡಿತರ ವಸತಿಗಳಾಗಿದ್ದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಒದಗಿಸುತ್ತಿದ್ದವು. ತಾಳಗುಂದ, ಬಾದಾಮಿ, ಉಮ್ಮಚಿಗೆ, ದೇಗಾಂವಿ, ಕಾಡಿಯೂರು, ಸರ್ವಜ್ಞಪುರ ಮುಂತಾದ ಅಗ್ರಹಾರಗಳೂ ಬಳ್ಳಿಗಾವೆ, ತಲಕಾಡು, ವಿಕ್ರಮಪುರ ಮುಂತಾದ ಬ್ರಹ್ಮಪುರಿಗಳೂ ಉನ್ನತ ಶಿಕ್ಷಣದ ಪ್ರಸಿದ್ಧ ಕೇಂದ್ರಗಳಾಗಿದ್ದುವು.

ಬೌದ್ಧವಿಹಾರಗಳ ಮಾದರಿ

ಬದಲಾಯಿಸಿ

10ನೆಯ ಶತಮಾನದ ವೇಳೆಗೆ ಬೌದ್ಧವಿಹಾರಗಳ ಮಾದರಿಯಲ್ಲಿ ವ್ಯವಸ್ಥೆಗೊಂಡ ಹಿಂದು ಮಠಗಳು ವೈವಿಧ್ಯಮಯವೆನ್ನಬಹುದಾದ ರೀತಿಯಲ್ಲಿ ಉನ್ನತ ಶಿಕ್ಷಣ ಕೊಡುತ್ತಿದ್ದುವು. ಕೋಡಿಮಠ, ನಾಗಾಯಿಮಠ, ಊರೂರಿಗೂ ವ್ಯಾಪಿಸಿದ್ದ ವೀರಶೈವ ಮಠಗಳು ಇವೆಲ್ಲ ಉನ್ನತ ಶಿಕ್ಷಣವನ್ನು ಪ್ರಸಾರ ಮಾಡುತ್ತಿದ್ದವು. 10ನೆಯ ಶತಮಾನದ ಸುಮಾರಿಗೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ದೇವಾಲಯದ ವಿದ್ಯಾಪೀಠಗಳು ಅನೇಕ ಸ್ಥಳಗಳಲ್ಲಿ ಅಸ್ತಿತ್ವಕ್ಕೆ ಬಂದುವು. ಅದುತನಕ ಸಂಸ್ಕೃತ ಉನ್ನತ ಶಿಕ್ಷಣದಲ್ಲಿ ಬೋಧನ ಮಾಧ್ಯಮವಾಗಿತ್ತು. ಈಗ ಕನ್ನಡವೂ ಆ ಕಾರ್ಯಕ್ಕೆ ಬಳಕೆಯಾಗುವುದು ಆರಂಭವಾಯಿತು. ಆ ಸುಮಾರಿಗೆ ಕನ್ನಡದಲ್ಲಿ ಸಾಹಿತ್ಯಿಕ, ಶಾಸ್ತ್ರೀಯ ಮತ್ತು ಇತರ ಗ್ರಂಥಗಳೂ ರಚನೆಯಾಗಿ ಅವುಗಳ ಅಧ್ಯಯನವೂ ನಡೆಯುತ್ತಿತ್ತು. ಸಾಲೊಟಿಗೆ, ಹರಿಹರದ ಹರಿಹರೇಶ್ವರ ದೇವಾಲಯ, ತಾಳಗುಂದದ ಪ್ರಣವೇಶ್ವರ ದೇವಾಲಯ, ಮನಗೋಳಿಯ ವ್ಯಾಕರಣ ವಿದ್ಯಾಪೀಠ, ಹೆಬ್ಬಾಳಿನ ಬುಜವ್ವೇಶ್ವರ ದೇವಾಲಯ, ಜಟಿಂಗ ರಾಮೇಶ್ವರದ ವಿದ್ಯಾಪೀಠ, ಬಿಜಾಪುರದ ಮೀಮಾಂಸೆ ವಿದ್ಯಾಪೀಠ, ಕೂಡಲ ಸಂಗಮದೇವಾಲಯದ ವಿದ್ಯಾಪೀಠ-ಇವೆಲ್ಲ ಪ್ರಸಿದ್ಧ ಉನ್ನತ ಶಿಕ್ಷಣ ಕೇಂದ್ರಗಳಾಗಿದ್ದವು. ಸಾಮಾನ್ಯವಾಗಿ ಪಠ್ಯಕ್ರಮದಲ್ಲಿ ವ್ಯಾಕರಣ, ಪುರಾಣ, ವೇದ, ಆಗಮ, ಕಾವ್ಯ, ನಾಟಕ ಮುಂತಾದುವು ಸೇರಿದ್ದುವು. ಆದರೆ ಒಂದೊಂದು ಕೇಂದ್ರವೂ ತನ್ನದೇ ಆದ ವಿಶೇಷ ವಿಷಯದಲ್ಲಿ ಶಿಕ್ಷಣವೀಯಲು ಹೆಸರಾಗಿತ್ತು. ಕೋಡಿಮಠದಲ್ಲಿ ಷಡ್ದರ್ಶನಗಳೂ ಕುಪ್ಪತ್ತೂರು ಮಠದಲ್ಲಿ ವಾತ್ಸಾಯನನ ಕಾಮಸೂತ್ರವೂ ವಿಶಿಷ್ಟ ಅಧ್ಯಯನ ವಿಷಯಗಳಾಗಿದ್ದುವು. ಸರ್ವಜ್ಞಪುರ ಭಾಷಾಶಾಸ್ತ್ರದಲ್ಲೂ ಉಮ್ಮಚಿಗೆ ವ್ಯಾಕರಣ, bsÀಂದಸ್ಸು, ಕಾವ್ಯರಚನೆ-ಇವುಗಳಲ್ಲೂ ವಿಶೇಷ ಶಿಕ್ಷಣ ನೀಡುತ್ತಿದ್ದುವು. ನಾಗಾಯಿಮಠ ಮನುಧರ್ಮಶಾಸ್ತ್ರ, ಶುಕ್ರಶಾಸ್ತ್ರ ಮತ್ತು ವ್ಯಾಸಕೃತಿಗಳ ಬೋಧನೆಗೆ ಹೆಸರು ಗಳಿಸಿತ್ತು.

ಮುಸಲ್ಮಾನರ ದಾಳಿ

ಬದಲಾಯಿಸಿ

12-13ನೆಯ ಶತಮಾನಗಳಲ್ಲಿ ಆರಂಭವಾದ ಮುಸಲ್ಮಾನರ ದಾಳಿಯಿಂದ ಭಾರತದ ಇತರೆಡೆಗಳಂತೆ ಕರ್ನಾಟಕದಲ್ಲೂ ಉನ್ನತ ಶಿಕ್ಷಣಕ್ಕೆ ಧಕ್ಕೆಯೊದಗಿತು. ಅವರ ದಾಳಿಗೆ ಸಿಕ್ಕಿದ ದೇವಾಲಯದ ವಿದ್ಯಾಪೀಠಗಳು ಮುಚ್ಚಿಹೋದವು. ಅಗ್ರಹಾರ, ಬ್ರಹ್ಮಪುರಿ ಮುಂತಾದ ಇತರ ಉನ್ನತ ವಿದ್ಯಾವಸತಿಗಳು ಹಿಂದಿನ ಪ್ರೋತ್ಸಾಹವಿಲ್ಲದೆ ಹಿಂಬದಿಗೆ ಬಿದ್ದುವು. ನಾಡಿನ ಎಲ್ಲೊ ಕೆಲವೆಡೆ ದಾಳಿಗೆ ಸಿಕ್ಕದೆ ಉಳಿದುಕೊಂಡಿದ್ದ ಹಲವು ಮಠಗಳು ತಮ್ಮ ವಿದ್ಯಾಪ್ರಸಾರವನ್ನು ಹಾಗೂ ಹೀಗೂ ಕೆಲಕಾಲ ಮುಂದುವರೆಸಿದುವು. ವಿಜಯನಗರ ಸ್ಥಾಪನೆಯಾದ ಮೇಲೆ ಮುಖ್ಯನಗರಗಳಲ್ಲಿ ಮತ್ತೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹವೇನೋ ದೊರೆಯಿತು. ಆದರೆ ಅದರ ಪತನಾನಂತರ ಸಣ್ಣಪುಟ್ಟ ಪಾಳೆಯಪಟ್ಟುಗಳು ಏರ್ಪಟ್ಟು ನಾಡು ನಿತ್ಯಕದನಗಳ ಬೀಡಾಗಿ ವ್ಯವಸ್ಥಿತ ರೀತಿಯಲ್ಲಿ ಶಿಕ್ಷಣ ಪ್ರಸಾರ ಇಲ್ಲವಾಯಿತು. ಮುಸಲ್ಮಾನರು ಆಕ್ರಮಿಸಿದ ಪ್ರದೇಶಗಳಲ್ಲಿ ತಮ್ಮವರಿಗಾಗಿ ಮದ್ರಾಸಗಳೆಂಬ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಹದಿನಾಲ್ಕನೆಯ ಶತಮಾನದ ಮಧ್ಯಭಾಗದ ವೇಳೆಗೆ ಉತ್ತರ ಕರ್ನಾಟಕದಲ್ಲಿ ಅವು ಅಸ್ತಿತ್ವಕ್ಕೆ ಬಂದುವು. ಮಸೀದಿಗಳ ಅಂಗವಾಗಿ ಏರ್ಪಟ್ಟಿದ್ದ ಆ ಸಂಸ್ಥೆಗಳಲ್ಲಿ ಮುಸ್ಲಿಂ ಧರ್ಮಗ್ರಂಥಗಳನ್ನು ಬೋಧಿಸುತ್ತಿದ್ದರು. ಹೊನ್ನಾವರ ಪ್ರದೇಶದಲ್ಲಿದ್ದ ಕೆಲವು ಸಂಸ್ಥೆಗಳನ್ನು ಅಲ್ಲಿ ಸಂಚರಿಸುತ್ತಿದ್ದ ಇಬ್ನ ಬತೂತ ಕೊಂಡಾಡಿರುವನು. ಬಹಮನೀ ಅರಸರು ಉನ್ನತ ಶಿಕ್ಷಣದ ಪ್ರಚಾರದಲ್ಲಿ ತುಂಬ ಆಸಕ್ತಿ ವಹಿಸಿದ್ದರು. ಗುಲ್ಬರ್ಗಾ, ಬಿದರ್ ಮುಂತಾದೆಡೆ ಸ್ಥಾಪಿಸಿದ್ದ ಸಂಸ್ಥೆಗಳು ಪ್ರಸಿದ್ಧಿ ಪಡೆದಿದ್ದುವು. 15ನೆಯ ಶತಮಾನದ ಕೊನೆಯಲ್ಲಿ ಆ ರಾಜ್ಯದ ಮಂತ್ರಿಯಾಗಿದ್ದ ಮಹಮ್ಮದ್ ಗವಾನ್ ಬಿದರೆಯಲ್ಲಿ ವಿದ್ಯಾಲಯ ವೊಂದನ್ನು ಕಟ್ಟಿಸಿ ಧರ್ಮಶಾಸ್ತ್ರಗಳ ಜೊತೆಗೆ ಲೌಕಿಕ ವಿದ್ಯೆಗಳ ಬೋಧನೆಗೂ ವ್ಯವಸ್ಥೆಗೊಳಿಸಿದ. ಅಲ್ಲಿನ ಗ್ರಂಥಾಲಯಕ್ಕೆ ದೇಶವಿದೇಶಗಳಿಂದ ಅಮೂಲ್ಯ ಕೃತಿಗಳನ್ನು ತರಿಸಿ ಒದಗಿಸಿದ್ದ. ಅನಂತರ ಅಧಿಕಾರಕ್ಕೆ ಬಂದ ಆದಿಲ್ ಷಾಹೀ ಅರಸರು ಬಿಜಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಪ್ರಾಥಮಿಕ ಸಾರ್ವತ್ರಿಕ ಶಿಕ್ಷಣಕ್ಕಾಗಿ ಮಕ್ತಾಬ್ಗಳೆಂದು ಶಾಲೆಗಳನ್ನು ಆರಂಭಿಸಿ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುವ ಅವಕಾಶ ಕಲ್ಪಿಸಿದರು. ಅರಬ್ಬೀ ಮತ್ತು ಪಾರಸೀ ಭಾಷೆಗಳ ವ್ಯಾಸಂಗಕ್ಕೂ ಶಿಲ್ಪ, ವೈದ್ಯ ಮುಂತಾದ ವೃತ್ತಿಶಿಕ್ಷಣಕ್ಕೂ ಪ್ರೋತ್ಸಾಹವಿತ್ತರು. ಕರ್ನಾಟಕದಲ್ಲಿ ಮುಸಲ್ಮಾನ ಆಳರಸರು ತಮ್ಮ ಮತದವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರೂ ದೇಶೀಯ ಶಿಕ್ಷಣದ ಪುನರುಜ್ಜೀವನದ ಕಡೆಗೆ ಆಸಕ್ತಿ ತೋರಲಿಲ್ಲ. ಅಲ್ಲದೆ, ರಾಜಾಸ್ಥಾನದಲ್ಲಿ ಪುರಸ್ಕಾರವಿಲ್ಲದೆ ಜನತೆಗೂ ಅದರಲ್ಲಿ ಆಸಕ್ತಿ ತಪ್ಪಿತ್ತು. ಮೈಸೂರಿನ ಒಡೆಯರ ಕಾಲದಲ್ಲಿ ಅವರ ಆಡಳಿತ ಕ್ಷೇತ್ರದಲ್ಲೂ ರಾಜಧಾನಿಯಲ್ಲೂ ಸಂಗೀತ, ಶಾಸ್ತ್ರ, ಸಾಹಿತ್ಯ ಮುಂತಾದವಕ್ಕೆ ಪ್ರೋತ್ಸಾಹವನ್ನು ನೀಡಿದ್ದರು. 18ನೆಯ ಶತಮಾನದ ಆಡಳಿತ ಹೈದರ್ ಮತ್ತು ಅನಂತರ ಅವನ ಮಗ ಟಿಪ್ಪುವಿನ ಕೈಸೇರಿದಾಗ ಆ ಪ್ರೋತ್ಸಾಹ ಇಲ್ಲವಾಯಿತು. ಒಟ್ಟಿನಲ್ಲಿ ಸುಮಾರು ಎರಡು ಸಹಸ್ರ ವರ್ಷಗಳಿಂದ ಬೆಳೆದು ಬಂದಿದ್ದ ಉನ್ನತ ಶಿಕ್ಷಣದ ದೇಶೀಯ ಸಂಪ್ರದಾಯ ಕ್ರಮಕ್ರಮವಾಗಿ ಕುಂದುತ್ತ ಬಂದು ಮುಂದೆ ತಲೆಯೆತ್ತಲು ಅವಕಾಶವಿಲ್ಲವಾಯಿತು.

ಕರ್ನಾಟಕದಲ್ಲಿ ಈ ಶತಮಾನದ ಸವಾಲುಗಳು

ಬದಲಾಯಿಸಿ
  • ಸಂಪನ್ಮೂಲಗಳ ಕೊರತೆಗಳ ನಡುವೆಯೂ ನಾವು ಸಮರ್ಥವಾದ ಶಿಕ್ಷಣವನ್ನು ನೀಡುವಲ್ಲಿ ಯಶಸ್ಸನ್ನು ಕಂಡಿಲ್ಲ; ಉನ್ನತ ಶಿಕ್ಷಣ ಕ್ಷೇತ್ರವು ನಮ್ಮ ಸಮಾಜದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂಬ ಅಭಿಪ್ರಾಯವಿದೆ. ಸಂಪನ್ಮೂಲಗಳ ಕೊರತೆಗಳೂ ಇವೆ.
  • "ಇಂದು ನಾವು ನೀಡುತ್ತಿರುವ ಶಿಕ್ಷಣದ ಗುಣಮಟ್ಟವು ಅಷ್ಟೇನು ಉತ್ತಮವಾದುದಲ್ಲ ಹಾಗೂ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಮಟ್ಟಿಗೆ ಒಳ್ಳೆಯ ಸಂಸ್ಥೆಗಳಲ್ಲ ಎನ್ನುವುದು ಸಹ ಎಲ್ಲರಿಗೂ ಗೊತ್ತಿರುವ ವಿಚಾರಗಳೆ. ಈ ಸಂಸ್ಥೆಗಳಲ್ಲಿ ಬೋಧಿಸುವ ಅಧ್ಯಾಪಕರು ಶೈಕ್ಷಣಿಕವಲ್ಲದ ವಿಚಾರಗಳಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿರುವವರು. ಅವರ ಬದ್ಧತೆಯಷ್ಟೆ ಸಮಸ್ಯಾತ್ಮಕವಾಗಿದೆ ಅವರ ಶೈಕ್ಷಣಿಕ ಸಾಮರ್ಥ್ಯ ಮತ್ತು ಜ್ಞಾನಾರ್ಜನೆಯ ಸಂಕಲ್ಪ.
  • ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಸಾಕಷ್ಟು ಸಂಪನ್ಮೂಲಗಳು, ಅದರಲ್ಲೂ ವಿದ್ಯಾರ್ಥಿವೇತನಗಳು, ಸಂಶೋಧಕರಿಗೆ ಲಭ್ಯವಿದೆ. ಆದರೂ ಸಂಶೋಧನೆಯ ಗುಣಮಟ್ಟ ಸಂಪೂರ್ಣ ಕುಸಿದಿದೆ. ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ವಿಶ್ವವಿದ್ಯಾನಿಲಯಗಳು ತಮ್ಮ ಮೂಲ ಕರ್ತವ್ಯವಾದ ಜ್ಞಾನದ ಉತ್ಪಾದನೆ ಮತ್ತು ಪ್ರಸರಣಗಳಲ್ಲಿ ಶೋಚನೀಯವಾಗಿ ಸೋತಿವೆ. ಉನ್ನತ ಶಿಕ್ಷಣ ಕ್ಷೇತ್ರದ ಹಲವು ರಾಚನಿಕ ಸಮಸ್ಯೆಗಳು ಸಹ ಎದ್ದು ಕಾಣುತ್ತವೆ".ಎನ್ನುತ್ತಾರೆ ಕರ್ನಾಟಕ ಮುಕ್ತವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಪೃಥ್ವಿ ದತ್ತ ಚಂದ್ರ ಶೋಭಿ,

ಕ್ರಿಯಾಶೀಲ ಅಧ್ಯಾಪಕರ ಅಗತ್ಯ

ಬದಲಾಯಿಸಿ
  • ಹಿಂದೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ಜ್ಞಾನ ಸೃಷ್ಟಿಸುವ ಶ್ರೇಷ್ಠ ಕೇಂದ್ರಗಳಾಗಿರಲಿಲ್ಲ. ಆದರೂ 1970-80ರ ದಶಕದ ತನಕ ಒಂದು ಮಟ್ಟದ ಸಂಶೋಧನಾ ಮತ್ತು ಜ್ಞಾನಸೃಷ್ಟಿಯ ಸಾಮರ್ಥ್ಯ ಮೈಸೂರು, ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿದ್ದವು.ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ್ದ, ಜಾಗತಿಕ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಿದ್ದ ಪ್ರಾಧ್ಯಾಪಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಿದ್ದರು. ಆದರೆ 1980ರ ನಂತರ ಜಾಗತಿಕ ಬೌದ್ಧಿಕ ಬೆಳವಣಿಗೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ.
  • ನಾವು ಮಾಡಲೇಬೇಕಾಗಿರುವ ಬಹುಮುಖ್ಯ ಕೆಲಸವೆಂದರೆ ಅಧ್ಯಾಪಕರ ನೇಮಕಾತಿಯನ್ನು ಸರಿಯಾಗಿ ನಿರ್ವಹಿಸುವುದು. ಅಧ್ಯಾಪಕರ ನೇಮಕಾತಿಯಲ್ಲಿ ಒಂದು ಸರಳ ಸೂತ್ರವನ್ನು ಅನುಸರಿಸುವುದು ಬಹಳ ಮುಖ್ಯ. ಅದೇನೆಂದರೆ ತಮ್ಮ ಅಧ್ಯಯನ ಶಿಸ್ತಿನಲ್ಲಿ ಜಾಗತಿಕ ಮಟ್ಟಿದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥೈಸಿಕೊಂಡು, ಪ್ರತಿಕ್ರಿಯಿಸುವ ಸಾಮರ್ಥ್ಯ ಇರುವವರನ್ನು ಆದ್ಯತೆಯ ಮೇರೆಗೆ ನಮ್ಮ ವಿಶ್ವವಿದ್ಯಾನಿಲಯಗಳೊಳಗೆ ಎಲ್ಲ ಹಂತಗಳಲ್ಲಿಯೂ ತರಬೇಕು.

ಉನ್ನತ ಶಿಕ್ಷಣ ಕ್ಷೇತ್ರದ ಪುನಾರಚನೆ

ಬದಲಾಯಿಸಿ

ಉನ್ನತ ಶಿಕ್ಷಣ ಕ್ಷೇತ್ರದ ಪುನಾರಚನೆ ದೃಢ ನೈತಿಕತೆ ಮತ್ತು ವೃತ್ತಿಪರತೆಯನ್ನು ಆಧರಿಸಿದ ಹೊಸ ಸಂಸ್ಕೃತಿಯ ಆಧಾರದ ಮೇಲೆ ಮಾತ್ರ ಸಾಧ್ಯ.

  • ಉನ್ನತ ಶಿಕ್ಷಣ ಕ್ಷೇತ್ರದ ನೈತಿಕ ಅಧಃಪತನವನ್ನು ಒಪ್ಪಿಕೊಂಡು ಪರಿಹಾರಗಳನ್ನು ರೂಪಿಸಬೇಕು.
  • ದೃಢ ನೈತಿಕತೆ ಮತ್ತು ವೃತ್ತಿಪರತೆಯನ್ನು ನೆಲಗಟ್ಟಾಗಿಸಿಕೊಂಡ ಸಾಂಸ್ಥಿಕ ಸಂಸ್ಕೃತಿ ನೆಲೆಯಾಗಬೇಕು.
  • ಶ್ರೇಣೀಕರಣದ ಸಾಂಸ್ಥಿಕ ವ್ಯವಸ್ಥೆ ಬದಲಾಗಬೇಕು.
  • ನಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೊಂದು ಶೈಕ್ಷಣಿಕ ಗುರಿಯನ್ನು ಕಂಡುಕೊಳ್ಳಬೇಕು.
  • ಜ್ಞಾನಶಿಸ್ತಿನ ಜಾಗತಿಕ ಬೆಳವಣಿಗೆಗಳಿಗೆ ಸ್ಪಂದಿಸುವ ಶಿಕ್ಷಕರ ನೇಮಕವಾಗಬೇಕು.

ಕರ್ನಾಟಕರಾಜ್ಯದಲ್ಲಿ ಉನ್ನತ ಶಿಕ್ಷಣದ ನೋಟ

ಬದಲಾಯಿಸಿ
ಸ್ನಾತಕೋತ್ತರ ಶಿಕ್ಷಣ
ಕೇಂದ್ರಿಯ ವಿಶ್ವವಿದ್ಯಾಲಯ ಖಾಸಗಿ ವಿಶ್ವವಿದ್ಯಾಲಯಗಳು ಸರ್ಕಾರಿ ವಿಶ್ವವಿದ್ಯಾಲಯಗಳು ಡೀಮ್ಡ ವಿಶ್ವವಿದ್ಯಾಲಯಗಳು ಒಟ್ಟು ವಿಶ್ವವಿದ್ಯಾಲಯಗಳು
1 11 17 23 52

ರಾಜ್ಯದಲ್ಲಿರುವ ಪದವಿ ಶಿಕ್ಷಣ

ಬದಲಾಯಿಸಿ
ಪದವಿ ಶಿಕ್ಷಣ
ಪ್ರಥಮ ದರ್ಜೆಕಾಲೇಜು ಸಕಾರಿ ಕಾಲೇಜುಗಳು ಅನುದಾನಿತ ಕಾಲೇಜುಗಳು ಖಾಸಗಿ ಕಾಲೇಜುಗಳು ವಿ.ವಿ.ಸಂಯೊಜಿತ ಕಾಲೇಜುಗಳು ಬಿ.ಇಡಿ ಕಾಲೇಜುಗಳು
2560 412 32 1,803 24 433

ಇಂಜನೀರಿಂಗ್ ಕಾಲೇಜುಗಳು

ಬದಲಾಯಿಸಿ
ಇಂಜನೀಯರಿಂಗ್ ಕಾಲೇಜುಗಳು
ಒಟ್ಟು ಇಂಜನೀಯರಿಂಗ್ ಕಾಲೇಜುಗಳು ಸಕಾರಿ ಕಾಲೇಜುಗಳು ಅನುದಾನಿತ ಕಾಲೇಜುಗಳು ಖಾಸಗಿ ಕಾಲೇಜುಗಳು ವಿ.ವಿ.ಸಂಯೊಜಿತ ಕಾಲೇಜುಗಳು ಬಿ.ಇಡಿ ಕಾಲೇಜುಗಳು
219 11 11 187 44
ಪಾಲಿಟೆಕ್ನಿಕ್
ಒಟ್ಟು ಪಾಲಿಟೆಕ್ನಿಕ್ ಕಾಲೇಜುಗಳು ಸರ್ಕಾರಿ ಕಾಲೇಜುಗಳು ಅನುದಾನಿತ ಕಾಲೇಜುಗಳು ಖಾಸಗಿ ಕಾಲೇಜುಗಳು
304 81 44 169 (179)

[]

ಕರ್ನಾಟಕ ಬಜೆಟ್ ನಲ್ಲಿ ಧನ ಯೋಜನೆ

ಬದಲಾಯಿಸಿ
  • ಕರ್ನಾಟಕ ಬಜೆಟ್‍ಗಳಲ್ಲಿ ಉನ್ನತ ಶಿಕ್ಷಣಕ್ಕೆ ಕೊಡಿಗೆ:
ಸಾಲು ಬಜೆಟ್‍ನಲ್ಲಿ ನಿಗದಿತ ಹಣ
2013-14 . 3,242 ಕೋಟಿ ರೂ.
2014-15 3,880 ಕೋಟಿ ರೂ.
2015-16 3,896 ಕೋಟಿ ರೂ.
2016-17 4,651 ಕೋಟಿ ರೂ.

ಪ್ರಾಂಶುಪಾಲರ ನೇಮಕಾತಿ

ಬದಲಾಯಿಸಿ
  • ರಾಜ್ಯದ 412 ಕಾಲೇಜುಗಳ ಪೈಕಿ 42 ಕಾಲೇಜುಗಳಿಗೆ ಮಾತ್ರ ಕಾಯಂ ಪ್ರಾಂಶುಪಾಲರಿದ್ದಾರೆ. ರಾಜ್ಯದ ವಿವಿಧ ಕಾಲೇಜುಗಳಲ್ಲಿ 3,200 ಸಹಾಯಕ ಪ್ರಾಧ್ಯಾಪಕರ ಹುದ್ದೆ ಖಾಲಿ ಇದೆ.[]


  1. ಕರ್ನಾಟಕದ ವಿಶ್ವವಿದ್ಯಾಲಯಗಳು
  2. ಕರ್ನಾಟಕದಲ್ಲಿ ಶಿಕ್ಷಣ ಮತ್ತು ವಿದ್ಯಾರ್ಥಿಗಳು
  3. ಕರ್ನಾಟಕದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ
  4. ಸ್ಕೌಟ್ ಚಳುವಳಿ
  5. ನ್ಯಾಷನಲ್ ಕೆಡೆಟ್ ಕೋರ್-ಎನ್.ಸಿ.ಸಿಎನ್ ಸಿ ಸಿ--ಎನ್.ಸಿ.ಸಿ
  6. ಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆ
  7. ಕರ್ಣಾಟಕದಲ್ಲಿ ವೈಜ್ಞಾನಿಕ ಶಿಕ್ಷಣ
  8. ಕರ್ನಾಟಕದಲ್ಲಿ ಶಿಕ್ಷಣ

ಏಕರೂಪ ಉನ್ನತಶಿಕ್ಷಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಗುಣಾತ್ಮಕ ಉನ್ನತ ಶಿಕ್ಷಣ: ಹೊಸ ಸಾಧ್ಯತೆ, ಸವಾಲುಗಳು". m.prajavani.net accessdate 24 Oct 2016.[ಶಾಶ್ವತವಾಗಿ ಮಡಿದ ಕೊಂಡಿ]
  2. "ಭಾರತದ ಉನ್ನತ ಶಿಕ್ಷಣದ ಪ್ರಗತಿ: ಒಂದು ಅವಲೋಕನ". socialworkniratanka.blogspot.in accessdate 24 Oct 2016.
  3. "ವಿಶ್ವವಿದ್ಯಾಲಯಗಳೊಳಕ್ಕೆ ಶಿಕ್ಷಣ ಪ್ರವೇಶ ಪಡೆಯಲಿ;ಪೃಥ್ವಿ ದತ್ತ ಚಂದ್ರ ಶೋಭಿ;16 Nov, 2016". Archived from the original on 2016-11-16. Retrieved 2016-11-17.
  4. ಪ್ರಾಂಶುಪಾಲರ ನೇಮಕಾತಿಗೆ ಅಗತ್ಯ ಕ್ರಮ;ಪ್ರಜಾವಾಣಿ ವಾರ್ತೆ;23 Dec, 20