ಕಪಟರಾಳ ಕೃಷ್ಣರಾವ್
ದಿ. ಶ್ರೀ ಕಪಟರಾಳ ಕೃಷ್ಣರಾವ್ ( ೧೮೮೯-೧೯೯೬) - ಹೈದ್ರಾಬಾದ್ ಕರ್ನಾಟಕದ ಹಿರಿಯ ಕನ್ನಡ ಸಾಹಿತಿ, ಸಂಶೋಧಕರು, ಕಟ್ಟಾ ಕನ್ನಡಾಭಿಮಾನಿ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಹಾಗೂ ಸಂಶೋಧನೆಗಾಗಿ ತಮ್ಮ ಬದುಕನ್ನೆ ಮುಡುಪಾಗಿಟ್ಟವರು.
ಶಿಕ್ಷಣ
ಬದಲಾಯಿಸಿಬರಹಗಳು
ಬದಲಾಯಿಸಿಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳು ಗ್ರಂಥಗಳು
ಜೀವನ
ಬದಲಾಯಿಸಿಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟ ಈ ಭಾಗ ಬೌದ್ಧ, ಶೈವ, ಜೈನ, ವೈಷ್ಣವ, ವೀರಶೈವ, ಇಸ್ಲಾಂ ಮುಂತಾದ ಧರ್ಮಗಳ ಸಾಮರಸ್ಯದ ಪ್ರದೇಶ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಕಲ್ಬುರ್ಗಿ ಜಿಲ್ಲೆ ಬಹುಕಾಲ ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟು ಉರ್ದು ಮಾಧ್ಯಮದ ಮೂಲಕವಾಗಿ ಕನ್ನಡದ ಪರಿಸ್ಥಿತಿ ಅತ್ಯಂತ ದಯನೀಯವಾಗಿ, ಜೊತೆಗೆ ಮಹಾರಾಷ್ಟ್ರದ ಪ್ರಭಾವಕ್ಕೆ ಸಿಕ್ಕು ಮರಾಠಿ ಭಾಷೆ ಅತ್ಯಂತ ಪ್ರಬಲವಾಗಿರುವಾಗ ಕಲಬುರ್ಗಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಿದ ಕೆಲವು ಮಹನೀಯರಲ್ಲಿ ಕಪಟರಾಳ ಕೃಷ್ಣರಾಯರು ಒಬ್ಬರು. ಕಲಬುರ್ಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ‘ಹಾಲಗಡಲಿ’ ಎಂಬ ಗ್ರಾಮದಲ್ಲಿ 1889ರಲ್ಲಿ ಜನಿಸಿದ ಕಪಟರಾಳರು ಕಲಬುರ್ಗಿಯಲ್ಲಿ ನೆಲಸಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಆರಂಭಿಕ ಅಧ್ಯಯನವು ಆ ಕಾಲದಲ್ಲಿ ಅನಿವಾರ್ಯ ಮಾಧ್ಯಮಗಳಾಗಿದ್ದ ಉರ್ದು, ಪಾರಸಿ ಭಾಷೆಯಲ್ಲಿಯೇ ಆಯಿತು. ಮರಾಠಿಯ ಪ್ರಭಾವದಿಂದಾಗಿ ಮರಾಠಿಯನ್ನು ಕಲಿಯುವುದು ಅನಿವಾರ್ಯವಾಯಿತು. ಶ್ರೀಯುತ ಕಪಟರಾಳರು ಬಹುಭಾಷಾ ಬಲ್ಲಿದರಾಗಿರುವಂತೆ ಭಾಷಾಪ್ರೇಮಿಗಳೂ ಆಗಿದ್ದರಯ. ಪುಣೆಗೆ ಹೋಗಿ ಇಂಗ್ಲೀಷ್‍ನಲ್ಲಿ ಕಾನೂನು ಅಭ್ಯಾಸ ಮಾಡಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಪ್ರಯತ್ನಿಸಿದರು. ಕಲಬುರ್ಗಿ ಜಿಲ್ಲೆಯಲ್ಲಿ ಆ ಕಾಲದಲ್ಲಿ ಆಂಗ್ಲ ಭಾಷೆಯಲ್ಲಿ ವಕೀಲ ಶಿಕ್ಷಣವನ್ನು ಪಡೆದವರು ಇವರೊಬ್ಬರೆ ಆಗಿದ್ದರೆಂಬುದು ಗಮನಿಸಬೇಕಾದ ಸಂಗತಿ. ಇಂಗ್ಲೀಷ್, ಮರಾಠಿ, ಉರ್ದು ಮತ್ತು ಫಾರಸಿ ಭಾಷೆಗಳಲ್ಲಿ ನೈಪುಣ್ಯತೆಯನ್ನು ಪಡೆದಿದ್ದರೂ ರಾಯರ ಮನಸ್ಸಿನಲ್ಲಿ ಕನ್ನಡ ಭಾಷಾಭಿಮಾನಕ್ಕೇನೂ ಕೊರತೆ ಇರಲಿಲ್ಲ. ಕನ್ನಡದ ಗಂಡುಮಟ್ಟಿನ ಸ್ಥಳವಾದ ಕಲಬುರ್ಗಿಯಲ್ಲಿ ಇತರ ಭಾಷೆಗಳ ಪ್ರಾಬಲ್ಯದಿಂದಾಗಿ ಕನ್ನಡಕ್ಕೆ ಬಂದೊದಗಿದ ಅಧೋಗತಿಗೆ ಕಪಟರಾಳರ ಮನ ಮಿಡುಕುತ್ತಿತ್ತು. ಹೀಗಾಗಿ ಅವರು ಕನ್ನಡದ ಸಂಘಟನೆ, ಸಾಂಸ್ಕøತಿಕ ಚಟುವಟಿಕೆಗಳ ಕಾರ್ಯದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು. ಕನ್ನಡ ಸಾಹಿತ್ಯ ಸಂಘದ ಕ್ರೀಯಾಶೀಲ ಸದಸ್ಯರಾಗಿ ವೈಭವದಿಂದ ನಾಡ ಹಬ್ಬಗಳನ್ನು ಸಂಘಟಿಸಿ ಕನ್ನಡ ಭಾಷೆ ಮತ್ತು ಸಂಸ್ಕøತಿಗೆ ಪ್ರಚೋದನೆಯನ್ನು ಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಸಮಿತಿಯ ಸದಸ್ಯರಾಗಿ ಕನ್ನಡ ಪರ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಮರಾಠಿ ಮತ್ತು ಉರ್ದು ಮಾಧ್ಯಮಗಳ ಕಪಿಮುಷ್ಠಿಯಲ್ಲಿ ಸಿಲುಕಿದ ಕನ್ನಡವನ್ನು ಹೊರತಂದ ಕೀರ್ತಿ ಕಪಟರಾಳರಿಗೆ ಸಲ್ಲುತ್ತದೆ. ಕೇವಲ, ಸಂಘ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಂದ ಕನ್ನಡಭಾಷೆ ಶ್ರೀಮಂತವಾಗಲಾರದು ಎಂಬ ಸತ್ಯವನ್ನು ಮನಗಂಡ ಕೃಷ್ಣರಾಯರು ಕನ್ನಡ ಸಾಹಿತ್ಯದ ಕೃಷಿಯಲ್ಲಿ ಅದು ಮುಖ್ಯವಾಗಿ ಸಂಶೋಧನೆಯ ಮಾರ್ಗದಲ್ಲಿ ಸಾಗುತ್ತ, ಕನ್ನಡ ಸಾಹಿತ್ಯದ ಇತಿಹಾಸದ ಮೇಲೆ ಹೊಸ ಬೆಳಕನ್ನು ಬೀರಬಲ್ಲ ಉತ್ಕøಷ್ಟವಾದ ಕೃತಿಗಳನ್ನು ಕನ್ನಡಕ್ಕೆ ಕಾಣಿಕೆಯಾಗಿ ನೀಡಿದರು. ಕನ್ನಡದ ಕಾರ್ಯಕ್ಕಾಗಿ ತಮ್ಮ ವಕೀಲ ವೃತ್ತಿಯನ್ನು ತ್ಯಜಿಸುವುದಕ್ಕೆ ರಾಯರು ಹಿಂದೆ ಮುಂದೆ ನೋಡಿಲಿಲ್ಲ. ಆ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಕರೆಕೊಟ್ಟ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿಯೂ ಕೃಷ್ಣರಾಯರು ಭಾಗವಹಿಸಿದರು. ವಕೀಲರಾಗಿ, ಬಹುಭಾಷಾ ವಿದ್ವಾಂಸರಾಗಿ, ಗಾಂಧೀವಾದಿಗಳಾಗಿ, ದೇಶಭಕ್ತರಾಗಿ, ಕನ್ನಡದ ಸೇವಕರಾಗಿ, ಕಲಬುರ್ಗಿಯ ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿ, ಹಿರಿಯ ಚಿಂತಕರಾಗಿ, ಕನ್ನಡಿಗರ ಸಂಘಟಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸದಸ್ಯರಾಗಿ, ಕನ್ನಡ ಚಟುವಟಿಕೆಗಳ ಸ್ಪೂರ್ತಿ-ಪ್ರೇರಣೆಯ ಶಕ್ತಿಯಾಗಿ ಹೀಗೆ ಶ್ರೀಯುತ ಕಪಟರಾಳ ಕೃಷ್ಣರಾಯರು ವಿವಿಧ ಮುಖಗಳ ಸುಸಂಸ್ಕøತ, ಸೌಜನ್ಯಪೂರ್ಣ, ಸ್ನೇಹಪರ ಜೀವಿಯಾಗಿದ್ದರು.ಕನ್ನಡ ಇತಿಹಾಸ ಸಂಶೋಧಕರಲ್ಲಿ ಅಗ್ರಗಣ್ಯರು ಮತ್ತು ಪ್ರಾತಃ ಸ್ಮರಣೀಯರು. ಇಂತಹ ಕನ್ನಡದ ಹಿರಿಯ ಚೇತನ ತನ್ನ ಬದುಕಿನುದ್ದಕ್ಕೂ ಕನ್ನಡ ಸಾಹಿತ್ಯ ಸರಸ್ವತಿಯ ಸೇವೆಯನ್ನು ಮಾಡುತ್ತ 1996ರಲ್ಲಿ ನಮ್ಮಿಂದ ಅಗಲಿದರು. ಯಾವ ವರ್ಗ-ವರ್ಣ, ಲಿಂಗ ಭೇದವಿಲ್ಲದೆ ಅವರು ಮಾಡಿದ ಕಾರ್ಯ ಸಮಾಜಕ್ಕೆ ಅವರು ನೀಡಿದ ವಿಚಾರಪೂರ್ಣ ಮತ್ತು ಸಂಶೋಧನಾ ಕೃತಿಗಳು ತಮ್ಮದೆ ಆದ ಮಹತ್ವವನ್ನು ಹೊಂದಿವೆ ಎಂಬುದರಲ್ಲಿ ಎರಡು ಮಾತಿಲ್ಲ.
ಗ್ರಂಥಗಳು
ಬದಲಾಯಿಸಿಕೃಷ್ಣರಾಯರ ಬಹುಮಟ್ಟಿನ ಸಂಶೋಧನಾ ಲೇಖನಗಳು ”ಕರ್ನಾಟಕ ಸಂಸ್ಕøತಿ ಸಂಶೋಧನೆ” ಎಂಬ ಕೃತಿಯಲ್ಲಿ ಅಡಕವಾಗಿವೆ. ಹೆಚ್ಚಾಗಿ ಸಾಮಾಜಿಕ ಕಾರ್ಯಕರ್ತರಾಗಿ ಕಾರಣರಾದ ಕಪಟರಾಳರಿಗೆ ಹೆಚ್ಚು ಬರವಣಿಗೆ ಮಾಡಲು ಭಾಷೆಯ ಬೆಳವಣಿಗೆಗೆ ಕಾರಣರಾದ ಕಪಟರಾಳರಿಗೆ ಹೆಚ್ಚು ಬರವಣಿಗೆ ಮಾಡಲು ಸಾಧ್ಯವಾಗಲಿಲ್ಲ ಎಂಬ ವಿಷಯ ತಿಳಿದು ಬರುತ್ತದೆ. ಆರ್ಥಿಕ ಪರಿಸ್ಥಿತಿಯ ದುಸ್ಥಿತಿಯಿಂದಾಗಿ ಕೃತಿಗಳನ್ನು ಪ್ರಕಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇವರ ಹರಿತವಾದ ಲೇಖನಿಯನ್ನು, ದಾಖಲಿಸಬೇಕಾದ ಮಹತ್ವದ ಸಂಶೋಧನಾ ಕಾರ್ಯವನ್ನು ಗಮನಿಸಿದ ಕೆಲವು ಅಭಿಮಾನಿಗಳು ಇವರ ಕೃತಿಗಳನ್ನು ಹೊರತರುವಲ್ಲಿ ಪ್ರಯತ್ನಿಸಿದ್ದಾರೆ. ಪ್ರಕಟವಾದ ಕೃತಿಗಳು ನಮಗೆ ದೊರೆತಿರುವ ಮಾಹಿತಿಯ ಪ್ರಕಾರ ನಾಲ್ಕು:
- ಕರ್ನಾಟಕದ ಲಾಕುಳ ಶೈವರ ಇತಿಹಾಸ: (ಕನ್ನಡ ಅಧ್ಯಯನ ಸಂಸ್ಥೆ; ಮೈಸೂರು, 1958)
- ತಂದೆ ಮಗಳಿಗೆ ಬರೆದ ಪತ್ರಗಳು: (ಭಾಷಾಂತರ ಗ್ರಂಥ)
- ಕರ್ನಾಟಕ ಸಂಸ್ಕøತಿ ಸಂಶೋಧನೆ: (28 ಲೇಖನಗಳ ಸಂಗ್ರಹ): ಉಷಾ ಸಾಹಿತ್ಯ ಮಾಲೆ; ಮೈಸೂರು, 1970
- ಸುರಪುರ ಸಂಸ್ಥಾನದ ಇತಿಹಾಸ: ಪ್ರಕಾಶಕರು, ಮಂಜುನಾಥ ಪ್ರಕಾಶನ, ರಾಜಾಜಿನಗರ ಬೆಂಗಳೂರು, 1977
ಈ ಪ್ರಕಟವಾದ ಕೃತಿಗಳಲ್ಲದೆ ಶರಣಸಾಹಿತ್ಯ ಸಂಪುಟ -ಸಂಚಿಕೆ- 47 ರಲ್ಲಿ ಚೈತನ್ಯ ಸಂಪ್ರದಾಯ ಮತ್ತು ಶರಣಸಾಹಿತ್ಯದ ನವೆಂಬರ್-ಡಿಸೆಂಬರ್ ಸಂಚಿಕೆಯಲ್ಲಿ ‘ಸಿದ್ಧ ಮಾರ್ಗವೂ ಮತ್ತು ವೀರಶೈವ ಸಂಪ್ರದಾಯವೂ’ ಎಂಬ ಲೇಖನಗಳು ಪ್ರಕಟವಾಗಿರುವುದಾಗಿ ತಿಳಿದು ಬರುತ್ತದೆ.
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://kn.wikipedia.org/wiki/%E0%B2%95%E0%B2%B2%E0%B2%AC%E0%B3%81%E0%B2%B0%E0%B2%97%E0%B2%BF_%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%8697%E0%B2%BF_%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86[ಶಾಶ್ವತವಾಗಿ ಮಡಿದ ಕೊಂಡಿ] ಕಲಬುರ್ಗಿ]
- ↑ https://kn.wikipedia.org/wiki/%E0%B2%95%E0%B2%B2%E0%B2%AC%E0%B3%81%E0%B2%B0%E0%B2%97%E0%B2%BF_%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%8697%E0%B2%BF_%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86[ಶಾಶ್ವತವಾಗಿ ಮಡಿದ ಕೊಂಡಿ]