ಒಡನಾಡಿ ಸೇವಾ ಸಂಸ್ಥೆ

ಒಡನಾಡಿ ಸೇವಾ ಸಂಸ್ಥೆ  ಒಂದು ಸಾಮಾಜಿಕ, ಸರ್ಕಾರೇತರ ಸಂಸ್ಥೆ. ಇದು ಭಾರತ ದೇಶದ ಮೈಸೂರಿನಲ್ಲಿದೆ. ಈ ಸಂಸ್ಥೆ ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣ, ಇತ್ಯಾದಿಗಳನ್ನು ಮಾಡುತ್ತಿದೆ.  ಈ ಸಂಸ್ಥೆಯನ್ನು ೧೯೮೪ರಲ್ಲಿ ಶ್ರೀ ಕೆ. ವಿ ಸ್ಟಾನ್ಲಿ ಮತ್ತು ಶ್ರೀ ಎಂ. ಎಲ್. ಪರಶುರಾಮ ಅವರು ಪ್ರಾರಂಭಿಸಿದರು. ಅದನ್ನು ೧೯೯೩ರಲ್ಲಿ ಅಧಿಕೃತ ಸಂಸ್ಥೆಯಾಗಿ ನೋಂದಾಯಿಸಲಾಯಿತು. ಒಡನಾಡಿಯ ಕಾರ್ಯಾಚರಣೆಗಳು ದಕ್ಷಿಣ ಭಾರತದಲ್ಲಿ ಹಬ್ಬಿದೆ. ಅವರ ಪುನರ್ವಸತಿ ಕೇಂದ್ರ ಕರ್ನಾಟಕ ರಾಜ್ಯದ ಮೈಸೂರು ನಗರದಲ್ಲಿದೆ.

ಸ್ಟಾನ್ಲಿ ಮತ್ತು ಪರಶು ಅವರು ಸರಕಾರದ ಸಂಪೂರ್ಣ ಸಾಕ್ಷರತೆ ಯೋಜನೆಯಲ್ಲಿ ಜಿಲ್ಲಾ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರು. ಹಾಗೆ ಕೆಲಸ ಮಾಡುತ್ತಿದ್ದಾಗ ಮೈಸೂರು ಜಿಲ್ಲೆಯಲ್ಲಿ ಕೆಲವು ಮಹಿಳೆಯರನ್ನು ಜನರು ದೂರವಿಟ್ಟದ್ದನ್ನು ಕಂಡರು. ಅವರು ಅದಕ್ಕೆ ಕಾರಣ ಹುಡುಕಿದಾಗ ಆ ಮಹಿಳೆಯರು ಲೈಂಗಿಕ ಕಾರ್ಯಕರ್ತೆಯರಾಗಿದ್ದರು ಎಂಬದು ಅವರಿಗೆ ತಿಳಿದು ಬಂತು. ಅವರಿಬ್ಬರು ಆಗ ಅಂತಹ ಮಹಿಳೆಯರ ಉದ್ಧಾರಕ್ಕಾಗಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಒಡನಾಡಿ ಸಂಸ್ಥೆಯನ್ನು ಸ್ಥಾಪಿಸಿದರು.

ಸಂಪರ್ಕ ಮಾಹಿತಿ

ಬದಲಾಯಿಸಿ

ಎಸ್ ಆರ್ ಎಸ್ ಕಾಲೋನಿ
ಹೂಟಗಳ್ಳಿ ಗ್ರಾಮ
ಬೆಳವಾಡಿ ಪೋಸ್ಟ್
ಮೈಸೂರು ೫೭೧ ೧೮೬

ಚಟುವಟಿಕೆಗಳು

ಬದಲಾಯಿಸಿ

ಲೈಂಗಿಕ ಕಾರ್ಯಕರ್ತೆಯರ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಒಡನಾಡಿ ಸಂಸ್ಥೆ ಹಲವು ಸಂತ್ರಸ್ತೆಯರನ್ನು ಕಾಪಾಡುವ ಕಾರ್ಯಾಚರಣೆಗಳನ್ನು ನಡೆಸಿದೆ. ಕರ್ನಾಟಕ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಹುಡುಗಿಯರನ್ನು ಈ ಸಂಸ್ಥೆ ರಕ್ಷಿಸಿದೆ. ಈ ಸಂಸ್ಥೆ ಸುಮಾರು ೭೫ ರಕ್ಷಿಸಲ್ಪಟ್ಟ ಮಹಿಳೆ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದೆ ಹಾಗೂ ಅವರು ಮತ್ತೆ ಲೈಂಗಿಕ ಕಾರ್ಯಕರ್ತೆಯರಾಗದಂತೆ ನೋಡಿಕೊಳ್ಳುತ್ತಿದೆ. ಸುಮಾರು ೨೨ಕ್ಕಿಂತ ಹೆಚ್ಚು ಹುಡುಗಿಯರು ಮದುವೆಯಾಗಿ ಸಂಸಾರ ನಡೆಸುವುದರಲ್ಲೂ ಈ ಸಂಸ್ಥೆ ಸಹಾಯ ಮಾಡಿ ಯಶಸ್ವಿಯಾಗಿದೆ.

ತನ್ನಲ್ಲಿರುವವರಿಗೆ ಆಶ್ರಯ, ಆಹಾರ, ಶಿಕ್ಷಣ, ವೃತ್ತಿ, ತರಬೇತಿ, ಆರೋಗ್ಯ ಮತ್ತು ಆಪ್ತಸಮಾಲೋಚನೆ, ಅರಿವು ಮೂಡಿಸುವುದು ಹಾಗೂ ನೀತಿ ನಿಯಮಗಳನ್ನು ರೂಪಿಸುವಾಗ ಅದಕ್ಕೆ ಕೊಡುಗೆ ನೀಡುವುದು -ಈ  ಗುರಿಗಳನ್ನು ಈ ಸಂಸ್ಥೆ ಹೊಂದಿದೆ. ಲೈಂಗಿಕ ಕಾರ್ಯಕರ್ತೆಯರಾಗಿದ್ದು ರಕ್ಷಿಸಲ್ಪಟ್ಟವರ ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಈ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.[]

ಒಡನಾಡಿ ಸೇವಾ ಸಂಸ್ಥೆಯ ಕೆಲಸಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು  ಮಾನ್ಯತೆ ನೀಡಿವೆ. ಮಹಿಳೆಯರ ಮತ್ತು ಮಕ್ಕಳ ಪುನರ್ವಸತಿಗಾಗಿ ಕರ್ನಾಟಕ ಸರಕಾರ  ಮೈಸೂರಿನಲ್ಲಿ ಎರಡು ನಿವೇಶನಗಳನ್ನು ನೀಡಿದೆ. ಇತರ ರಾಜ್ಯ ಸರ್ಕಾರಗಳು (ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ) ತಾವು ಕಾಪಾಡಿದ ಹುಡುಗಿಯರನ್ನು ಪುನರ್ವಸತಿಗಾಗಿ ಒಡನಾಡಿಗೆ ಕಳುಹಿಸುತ್ತಿದ್ದಾರೆ. ಒಡನಾಡಿ ಸಂಸ್ಥೆಯು ಇತರೆ ಸರಕಾರೇತರ ಸಂಸ್ಥೆಗಳಿಂದ ಸತತವಾಗಿ ಸಹಾಯವನ್ನು ಪಡೆಯುತ್ತಿದೆ.

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ