ಐಸಾಕ್ ಅಸಿಮೋವ್ ಆಂಗ್ಲ ಭಾಷೆಯ ಹೆಸರಾಂತ ಸಾಹಿತಿ. ಇವರನ್ನು ಆರ್ಥರ್ ಸಿ ಕ್ಲಾರ್ಕ್ ಮತ್ತು ರಾಬರ್ಟ್ ಎ ಹೈಲೈನ್ ರವರೊಡನೆ ವೈಜ್ಞಾನಿಕ ಕಾದಂಬರಿ ಕ್ಷೇತ್ರದ ಮಹಾರಥಿಗಳೆಂದು (ಗ್ರ್ಯಾಂಡ್ ಮಾಸ್ಟರ್) ಪರಿಗಣಿಸಲಾಗಿದೆ. ಸುಮಾರು ೫೦೦ ಪುಸ್ತಕಗಳು ಮತ್ತು ೯,೦೦೦ ಪತ್ರ ಮತ್ತು ಅಂಚೆ ಕಾರ್ಡ್ ಗಳನ್ನೊಳಗೊಂಡ ಅವರ ಲೇಖನ ವ್ಯವಸಾಯ ಸುಸಮೃದ್ಧ - ಈ ಉತ್ಪತ್ತಿಯ ವ್ಯಾಪ್ತಿಯು ವೈಜ್ಞಾನಿಕ ಕಾದಂಬರಿಗಳು, ಜನಪ್ರಿಯ ವಿಜ್ಞಾನ, ಪಠ್ಯಪುಸ್ತಕಗಳು, ಸಾಹಿತ್ಯ ವಿಮರ್ಶೆಗಳೇ ಮೊದಲಾದ ವೈವಿಧ್ಯಮಯ ವಿಷಯಗಳನ್ನೊಳಗೊಂಡಿದ್ದಿತು. ಅವರು ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಜೈವರಾಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಲಘುಗ್ರಹ (ಆಸ್ಟರಾಯ್ಡ್) ೫೦೨೦ ಅಸಿಮೋವ್ ಅನ್ನು, ಅಸಿಮೋವ್ ಸೈನ್ಸ್ ಫಿಕ್ಷನ್ ಎಂಬ ನಿಯತಕಾಲಿಕೆಯನ್ನು, ನ್ಯೂಯಾರ್ಕಿನ ಬ್ರುಕ್ಲಿನ್ ನಲ್ಲಿನ ಒಂದು ಪ್ರಾಥಮಿಕ ಶಾಲೆಯನ್ನು, ಅಸಿಮೋವ್ ಸಾಹಿತ್ಯ ಪುರಸ್ಕಾರಗಳನ್ನು ಅವರ ಗೌರವಸ್ಮೃತಿಯಲ್ಲಿ ಹೆಸರಿಸಲಾಗಿದೆ.

ಐಸಾಕ್ ಅಸಿಮೋವ್*
೧೯೬೫ರಲ್ಲಿ ಅಸಿಮೋವ್
ಜನನಅಕ್ಟೋಬರ್ ೪ ೧೯೧೯ ಮತ್ತು ಜನವರಿ ೨ ೧೯೨೦ರ ನಡುವೆ*
ಪೆಟ್ರೋವಿಚಿ, ಬೆಲರೂಸಿಯನ್ ಒಕ್ಕೂಟ
ಮರಣ6 April 1992(1992-04-06) (aged 72)
ನ್ಯೂಯಾರ್ಕ್ ನಗರ
ವೃತ್ತಿಕಾದಂಬರಿಕಾರ, ಕಥಾಕಾರ, ಪ್ರಬಂಧಕಾರ, ಇತಿಹಾಸಜ್ಞ, ಜೈವರಾಸಯನತಜ್ಞ, ಪಠ್ಯಪುಸ್ತಕಕಾರ, ವಿನೋದಕಾರ*
ರಾಷ್ಟ್ರೀಯತೆರಷ್ಯಾ/ಅಮೆರಿಕಾ
ಪ್ರಕಾರ/ಶೈಲಿವೈಜ್ಞಾನಿಕ ಕಾದಂಬರಿ, ಜನಪ್ರಿಯ ವಿಜ್ಞಾನ, ನಿಗೂಢ ಕಥಾವಳಿ, ಪ್ರಬಂಧ, ಸಾಹಿತ್ಯ ವಿಮರ್ಶೆ
ಸಾಹಿತ್ಯ ಚಳುವಳಿವೈಜ್ಞಾನಿಕ ಕಾದಂಬರಿಗಳ ಸುವರ್ಣಯುಗ

ಅಸಿಮೋವ್ ರವರು ಹಿಂದಿನ ಬೆಲರೂಸಿಯನ್ ಸೋವಿಯತ್ ಸಮಾಜವಾದಿ ಒಕ್ಕೂಟದಲ್ಲಿ ೧೯೧೯ ಮತ್ತು ೧೯೨೦ರಲ್ಲಿ (ನಿಖರ ದಿನಾಂಕವು ತಿಳಿದು ಬಂದಿಲ್ಲ) ಜೂಡಾ ಮತ್ತು ಆನ ಬರ್ಮನ್ ಎಂಬ ಯಹೂದ್ಯ ದಂಪತಿಗಳಿಗೆ ಜನಿಸಿದರು. ಅವರು ಮೂರು ವರ್ಷದವರಾಗಿದ್ದಾಗ ಅವರ ತಂದೆತಾಯಿ ಅಮೆರಿಕಕ್ಕೆ ವಲಸೆ ಬಂದರು ಮತ್ತು ನ್ಯೂಯಾರ್ಕ್ ನಗರದ ಬ್ರುಕ್ಲಿನ್ ಎಂಬ ಪ್ರದೇಶದಲ್ಲಿ ವಾಸಮಾಡಿದರು.

ವಾಙ್ಮಯ

ಬದಲಾಯಿಸಿ

ಅಸಿಮೋವ್ ರವರ ಲೇಖನ ಶೈಲಿ ಸರಳ ಮತ್ತು ಜಾಟಿಲ್ಯರಹಿತವಾದುದು. ಅವರು ತಮ್ಮ ವೈಜ್ಞಾನಿಕ ಕಾದಂಬರಿಗಳಲ್ಲಿ ಅನೇಕ ಕಾಲ್ಪನಿಕ ವೈಜ್ಞಾನಿಕ ನಿಯಮಗಳು ಅಥವಾ ಪ್ರಮೇಯಗಳನ್ನು ಪ್ರಸ್ತಾಪಿಸಿರುವರು - ಇವುಗಳಲ್ಲಿ ಪ್ರಮುಖವಾದ ಕೆಲವುಗಳೆಂದರೆ - ಯಂತ್ರಶಾಸ್ತ್ರದ(ರೋಬಾಟಿಕ್ಸ್) ಮೂರು ನಿಯಮಗಳು, ಪಾಸಿಟ್ರಾನ್, ಮಾನಸಿಕ-ಇತಿಹಾಸಶಾಸ್ತ್ರ (ಸೈಕೋಹಿಸ್ಟರಿ). ಸ್ವತಃ ಅಸಿಮೋವ್ ರವರೇ ಯಂತ್ರಶಾಸ್ತ್ರದ ಮೂರು ನಿಯಮಗಳು ಮತ್ತು ಪ್ರತಿಷ್ಠಾನ (ಫೌಂಡೇಷನ್) ಕಾದಂಬರಿಗಳನ್ನು ತಮ್ಮ ಗಣನೀಯ ಕೊಡುಗೆಗಳೆಂದು ಪರಿಗಣಿಸುತ್ತಾರೆ. ವೈಜ್ಞಾನಿಕ ಕಾಲ್ಪನಿಕ ಸಾಹಿತ್ಯಕ್ಕೆ ಮೀಸಲಾದ ಹ್ಯೂಗೋ ಮತ್ತು ನೆಬ್ಯುಲ ಪುರಸ್ಕಾರಗಳನ್ನು ಹಲವುಬಾರಿ ಪಡೆದುಕೊಳ್ಳುವುದಲ್ಲದೆ, ನೆಬ್ಯುಲ ಗ್ರ್ಯಾಂಡ್ ಮಾಸ್ಟರ್ ಪುರಸ್ಕಾರವನ್ನು ಜೀವಮಾನ ಸಾಧನೆಗಳಿಗಾಗಿ ಪಡೆದುಕೊಂಡರು. ಅವರ ಕೆಲವು ಪುಸ್ತಕಗಳನ್ನು ಕೆಳಗೆ ಪಟ್ಟಿಮಾಡಲಾಗಿರುವುದು: