ಏಷ್ಯದ ವಾಸ್ತುಶಿಲ್ಪ, ಕಲೆ

ಕಲೆ ಮತ್ತು ವಾಸ್ತುಶಿಲ್ಪಗಳ ಅಧ್ಯಯನ ದೃಷ್ಟಿಯಿಂದ ಏಷ್ಯವನ್ನು ಪಶ್ಚಿಮ ಪುರ್ವ, ದಕ್ಷಿಣ, ಉತ್ತರ, ಆಗ್ನೇಯ, ಮಧ್ಯ ಎಂದು ವಿಭಾಗಿಸಬಹುದು. ಪ್ರ.ಶ.ಪು. 5ನೆಯ ಸಹಸ್ರಮಾನದಿಂದ ಪ್ರಾರಂಭವಾಗಿ ಇಂದಿನವರೆಗೂ ಏಷ್ಯದಲ್ಲಿ ಕಲೆಗಳು ಉಜ್ವಲವಾಗಿ ಬೆಳೆದುಬಂದಿವೆ. ವಿಶ್ವದ ಪ್ರಮುಖ ಸಂಸ್ಕೃತಿಗಳು ಇಲ್ಲಿಯೇ ಜನ್ಮ ತಳೆದು ವಾಸ್ತುಶಿಲ್ಪ ಮತ್ತು ಇತರ ಕಲೆಗಳಿಗೆ ಸುಭದ್ರ ಬುನಾದಿ ಹಾಕಿದುವು. ಈ ದೃಷ್ಟಿಯಿಂದ ಮೆಸೊಪೊಟೇಮಿಯ, ಸಿಂಧೂ ಕೊಳ್ಳ ಮುಂತಾದವು ಗಮನಾರ್ಹವಾದವು.

ಪಶ್ಚಿಮ ಏಷ್ಯ ಬದಲಾಯಿಸಿ

ಅನೇಕ ಪ್ರಾಚೀನ ನಾಗರಿಕತೆಗಳಿಗೆ ಜನ್ಮವಿತ್ತ ಪಶ್ಷಿಮ ಏಷ್ಯ ಕಲೆಯ ದೃಷ್ಟಿಯಿಂದಲೂ ಪ್ರಮುಖಸ್ಥಾನ ಪಡೆದಿದೆ. ಇದರಲ್ಲಿ ಮೆಸೊಪೊಟೇಮಿಯ, ಅನಟೋಲಿಯ ಮತ್ತು ಸಿರಿಯ ಮುಖ್ಯ. ಪ್ರ.ಶಪು. 4ನೆಯ ಸಹಸ್ರಮಾನದಿಂದ ಪ್ರಾರಂಭವಾದ ಕಲಾಪರಂಪರೆ ಪಶ್ಚಿಮ ಏಷ್ಯದಲ್ಲಿ ಈಗ ಅನೇಕ ರೂಪಾಂತರ ಹೊಂದಿ ಮುಂದುವರಿದಿದೆ. ಮೆಸೊಪೊಟೀಮಿಯದ ಉರೂಕ್ ಸಂಸ್ಕೃತಿಯ ಕಾಲದಲ್ಲಿ ವಾಸ್ತುಕಲೆ ಚೆನ್ನಾಗಿ ಅಭಿವೃದ್ಧಿ ಹೊಂದಿತ್ತು. ಈರೆಕ್ನಲ್ಲಿ ದೊರಕಿರುವ ಅರಮನೆಯೂ ದೇವಾಲಯಗಳೂ ಮನೆಗಳೂ ಉರೂಕ್ ಸಂಸ್ಕೃತಿಯ ಪ್ರತಿನಿಧಿಗಳಾಗಿದ್ದು ಅವುಗಳ ಬೃಹತ್ಪ್ರಮಾಣ ಮತ್ತು ಆಂತರಿಕ ಅಲಂಕಾರಗಳಿಂದ ಮೆಚ್ಚಿಗೆಗೆ ಅರ್ಹವಾಗಿವೆ. ಜಂಡಟ್ನಾಸ್ರ್‌ನಲ್ಲಿ ಈ ಸಂಸ್ಕೃತಿಯೂ ಕಲೆಗಳೂ ಮುಂದುವರಿದವು. ವರ್ಣಚಿತ್ರಗಳು ವಿಶೇಷವಾಗಿ ಬಳಕೆಗೆ ಬಂದುವು. ಶಿಲ್ಪ ಕಲೆಯಲ್ಲೂ ಗಮನಾರ್ಹ ಬೆಳೆವಣಿಗೆಗಳಾದವು. ಈ ಕಾಲದ ಶಿಲ್ಪವೆಲ್ಲವೂ ಧಾರ್ಮಿಕ ಮತ್ತು ಮತೀಯ ಉದ್ದೇಶಗಳಿಗೇ ಮೀಸಲಾಗಿದ್ದುರಿಂದ, ರಾಜರೂ ಪುರೋಹಿತರೂ ನಿರ್ದೇಶಿಸಿದಂತೆ ಶಿಲ್ಪಗಳನ್ನು ತಯಾರಿಸಬೇಕಾಗಿತ್ತು. ಶಿಲ್ಪಿಗೆ ತನ್ನ ಕಲ್ಪನೆಗೆ ತಕ್ಕಂತೆ ಶಿಲ್ಪಗಳನ್ನು ತಯಾರಿಸುವ ಅವಕಾಶವಿಲ್ಲದಿದ್ದರೂ ಆ ಕಾಲದ ಶಿಲ್ಪಗಳು ಬಹು ಮನೋಹರವಾಗಿವೆ. ಕಲ್ಲಿನ ಶಿಲ್ಪಗಳ ಜೊತೆಗೆ ಜೇಡಿಮಣ್ಣಿನ ವಿಗ್ರಹ ತಯಾರಿಸುವ ಕಲೆಯೂ ಬೆಳೆದು ಬಂತು. ಮುದ್ರೆಗಳ ತಯಾರಿಕೆಯಲ್ಲಿ ಈ ಕಾಲದ ಕಲಾಕಾರನಿಗೆ ಹೆಚ್ಚಿನ ಪರಿಶ್ರಮವಿತ್ತು. ಸಾರ್ಗನಾಯಿಡ್ ಕಾಲದಲ್ಲಿ ಆಕ್ಕಾಡ್ ನಗರ ಚೆನ್ನಾಗಿ ಅಭಿವೃದ್ಧಿಯಾಯಿತು (ನೋಡಿ- ಅಕ್ಕಾಡ್). ಬ್ಯಾಬಿಲೋನಿಯನ್ ಸಂಸ್ಕೃತಿಯ ಕಾಲದಲ್ಲಿ ಬೃಹತ್ಪ್ರಮಾಣದಲ್ಲಿ ಜಿಗುರೇಟ್ ದೇವಾಲಯಗಳ ನಿರ್ಮಾಣ ಪ್ರಾರಂಭವಾಯಿತು. ಅರ್ನಲ್ಲಿ ನಿರ್ಮಿಸಿದ ದೇವಾಲಯ ಆ ಕಾಲದ ವಾಸ್ತುಕಲೆಗೆ ಉತ್ತಮ ನಿದರ್ಶನ. ಪ್ರ.ಶ.ಪು. 2ನೆಯ ಸಹಸ್ರಮಾನದ ಕೊನೆಯಲ್ಲಿ ಅಸ್ಸೀರಿಯನ್ ಸಂಸ್ಕೃತಿ ಅಭಿವೃದ್ಧಿ ಹೊಂದಿತು. ಈ ಕಾಲದ ಕಟ್ಟಡಗಳಿಗಿಂತ ಶಿಲ್ಪ ಹೆಚ್ಚು ಕಾಣಸಿಗುತ್ತವೆ. ಮೆಸೊಪೊಟೇಮಿಯದ ಕಲಾಸಂಪ್ರದಾಯಗಳಿಂದ ಪ್ರಭಾವಿತಗೊಂಡು ಅಭಿವೃದ್ಧಿಹೊಂದಿದ ಕಲೆಗಳಲ್ಲಿ ಅನಟೋಲಿಯ ಮತ್ತು ಆರ್ಮೀನಿಯದ ಕಲೆಗಳು ಮುಖ್ಯ. ಪ್ರ.ಶ.ಪು. 2ನೆಯ ಸಹಸ್ರಮಾನದಿಂದ ಹಿಟ್ಟೈಟ್ ಸಂಸ್ಕೃತಿಯ ಆಶ್ರಯದಲ್ಲಿ ಅನಟೋಲಿಯದಲ್ಲಿ ವಾಸ್ತುಶಿಲ್ಪ ಕಲೆ ಉಚ್ಛ್ರಾಯ ಸ್ಥಿತಿ ಮುಟ್ಟಿತು. ಹಿಟ್ಟೈಟ್ ಸಂಸ್ಕೃತಿಯ ಪತನಾನಂತರ ಆರ್ಮೀನಿಯದಲ್ಲಿ ಕಲೆ ಅಭಿವೃದ್ಧಿ ಹೊಂದಿದ್ದು. ಹಿಟ್ಟೈಟ್ ಕಾಲದ ಕಟ್ಟಡಗಳು ವಿಶೇಷವಾಗಿ ಕಲ್ಲಿನಿಂದ ನಿರ್ಮಾಣವಾದವು. ಹಿಟ್ಟೈಟ್ ರಾಜ ಹತ್ಹುಯುಕ್ ಪ್ರ.ಶ.ಪು. 14ನೆಯ ಶತಮಾನದಲ್ಲಿ ಉತ್ತರ ಸಿರಿಯದ ಭಾಗಗಳನ್ನು ತನ್ನ ವಶಮಾಡಿಕೊಂಡು ಹತ್ತುಶಾಶ್ ಎಂಬ ರಾಜಧಾನಿಯನ್ನು ಸ್ಥಾಪಿಸಿದ. ಈತ ಇಲ್ಲಿ ಎತ್ತರವಾದ ತೋರಣಗಳನ್ನೂ ಸಿಂಹದ ಶಿಲ್ಪಗಳನ್ನೂ ನಿರ್ಮಿಸಿ ವಿಶಾಲವಾದ ಕಟ್ಟಡಗಳನ್ನು ಕಟ್ಟಿಸಿದ. ವಾಸ್ತುಶಿಲ್ಪದೃಷ್ಟಿಯಿಂದ ಇದೊಂದು ಪರ್ವಕಾಲ. ಈ ರಾಜ್ಯದ ಪತನವಾದ ಅನಂತರ ಉರರ್ತು ಎಂಬ ರಾಜ್ಯ ಪ್ರ.ಶ.ಪು. 7ನೆಯ ಶತಮಾನದಲ್ಲಿ ತಲೆಯೆತ್ತಿತ್ತು. ಈ ಕಾಲದಲ್ಲಿ ಲೋಹಶಿಲ್ಪಕಲೆ ಉಚ್ಛ್ರಾಯ ಸ್ಥಿತಿ ಮುಟ್ಟಿತು. ಕಂಚು, ತಾಮ್ರ ಮೊದಲಾದ ಲೋಹಗಳಲ್ಲಿ ಮಾಡಿದ ಬೃಹತ್ ಪ್ರಮಾಣದ ಸಿಂಹದ ಮುಖಗಳೂ ಪಾತ್ರೆಗಳೂ ಕಲಾತ್ಮಕವಾಗಿವೆ. ಈ ಪಾತ್ರೆಗಳ ಮೇಲೆ ರೇಖಾಚಿತ್ರಗಳೂ ತಗ್ಗುಮಾದರಿಯ ಶಿಲ್ಪಗಳೂ ವಿಶೇಷವಾಗಿವೆ. ಇದರಲ್ಲಿ ಅಸ್ಸೀರಿಯನ್ ಸಂಸ್ಕೃತಿಯ ಪ್ರಭಾವಗಳನ್ನು ಗುರುತಿಸಬಹುದು.

ಸಿರಿಯದಲ್ಲಿ ಪ್ರ.ಶ.ಪು. 2ನೆಯ ಸಹಸ್ರಮಾನದಿಂದಲೇ ಅರಮನೆ ಮತ್ತು ದೇವಾಲಯಗಳ ನಿರ್ಮಾಣ ಕಲೆ ಪ್ರಾರಂಭವಾಯಿತು. ಸಿರಿಯನ್ ಕಲೆಯಲ್ಲಿ ವಿಶೇಷವಾಗಿ ಅನಟೋಲಿಯ ಮತ್ತು ಹಿಟ್ಟೈಟ್ ಕಲಾಪ್ರಭಾವಗಳನ್ನೇ ಕಾಣಬಹುದು. ಆದ್ದರಿಂದ ಪ್ರಾಚೀನ ಸಿರಿಯನ್ ಕಲೆ ಮಿಶ್ರಜಾತಿಯದು. ಅಲಲಖ್ ಮತ್ತು ಉಗರಿಟ ಪ್ರದೇಶಗಳಲ್ಲಿ ಪ್ರಾಚೀನತಮ ಕಟ್ಟಡಗಳ ಅವಶೇಷಗಳು ದೊರಕಿವೆ. ಆದರೆ ಈ ಕಾಲದಲ್ಲಿ ಶಿಲ್ಪ ಇನ್ನೂ ಚೆನ್ನಾಗಿ ಅಭಿವೃದ್ಧಿಯಾಗಿರಲಿಲ್ಲ. ಇದು ವಿಕಾಸ ಹೊಂದಿದ್ದು ಪ್ರ.ಶ.ಪು. 15ನೆಯ ಶತಮಾನದ ಹೊತ್ತಿಗೆ. ಇದನ್ನು ಸಿರೋ-ಫಿನೀಷಿಯನ್ ಕಲಾಶೈಲಿಯೆನ್ನಬಹುದು. ಇದ್ರಿಮಿ ರಾಜನ ಶಿಲ್ಪವಾಗಲಿ ಅದರ ಸಮೀಪದಲ್ಲಿ ದೊರಕಿರುವ ಸಿಂಹಗಳ ಶಿಲ್ಪಗಳೇ ಆಗಲಿ ಪ್ರಬುದ್ಧಶೈಲಿಗೆ ಸೇರಿದವುಗಳಲ್ಲವೆನ್ನುವುದು ಸುಲಭವಾಗಿ ಗೊತ್ತಾಗುತ್ತದೆ. ಮೆದುಕಲ್ಲಿನಲ್ಲಿ ಮಾಡಲಾದ ಈ ಶಿಲ್ಪಗಳಲ್ಲಿ ಮೆರಗು ಕೊಟ್ಟು ಮಾಡಿರುವ ಕಣ್ಣುಗಳು ಗಮನಾರ್ಹ, ಈ ಕಾಲದ ಕಂಚಿನ ವಿಗ್ರಹಗಳೂ ಪಾತ್ರೆಗಳೂ ಆಗಿನ ಶಿಲ್ಪಶೈಲಿಯನ್ನೇ ಅನುಸರಿಸಿವೆ. ಆದರೆ ಚಿನ್ನದ ಪಾತ್ರೆಗಳು ಬಹಳ ನಾಜೂಕಾಗಿ ತಯಾರಿಸಿದವು. ಇವುಗಳ ಮೇಲೆ ಕೆತ್ತಲಾದ ರೇಖಾಚಿತ್ರಗಳು ಬಹು ರಮ್ಯ. ದಂತದಲ್ಲಿ ತಯಾರಿಸಲಾದ ಸಣ್ಣ ಸಣ್ಣ ಶಿಲ್ಪಗಳು ಚಿನ್ನದ ಕೆಲಸದಂತೆಯೇ ಉತ್ತಮ ಮಟ್ಟದಲ್ಲಿವೆ.

ಪ್ರ.ಶ.ಪು. 1200ರ ಸಮಯಕ್ಕೆ ಉಂಟಾದ ರಾಜಕೀಯ ಬದಲಾವಣೆಗಳಿಂದ ಮತ್ತೊಂದು ಶೈಲಿಯ ಕಲೆ ಸಿರಿಯದಲ್ಲಿ ಪ್ರಾರಂಭವಾಯಿತು. ಇದು ಸಿರೋ-ಹಿಟ್ಟೈಟ್ ಶೈಲಿ. ಇದು ಸಿರೋ-ಫಿನೀಷಯನ್ ಶೈಲಿಗಿಂತ ಹೆಚ್ಚು ವಿಕಾಸ ಹೊಂದಿದ್ದು, ಇದರಲ್ಲಿ ಉತ್ತಮ ಶಿಲ್ಪಗಳಿವೆ.

ಪಶ್ಚಿಮ ಏಷ್ಯದಲ್ಲಿ ಪ್ರಾಚೀನ ಸಂಸ್ಕೃತಿಗಳು ಪತನವಾದ ಅನಂತರ ಈ ಪ್ರದೇಶದ ಬಹು ಭಾಗಗಳನ್ನು ಅರಬರು ಆಕ್ರಮಿಸಿಕೊಂಡರು. ಈ ಆಕ್ರಮಣದೊಂದಿಗೆ ಕಲೆಯಲ್ಲಿಯೂ ಬದಲಾವಣೆಗಳುಂಟಾದವು (ನೋಡಿ- ಇಸ್ಲಾಮೀ-ವಾಸ್ತುಶಿಲ್ಪ,-ಕಲೆ).

ಪೂರ್ವ ಏಷ್ಯ ಬದಲಾಯಿಸಿ

ಪೂರ್ವ ಏಷ್ಯದಲ್ಲಿ ಕಲೆಯ ದೃಷ್ಟಿಯಿಂದ ಮುಖ್ಯವಾದ ರಾಜ್ಯಗಳೆಂದರೆ ಚೀನ, ಜಪಾನ್ ಮತ್ತು ಕೊರಿಯ. ಈ ಮೂರು ದೇಶಗಳ ವಾಸ್ತುಶಿಲ್ಪ ಮತ್ತು ಕಲೆಗಳಲ್ಲಿ ಪರಸ್ಪರ ಸಂಬಂಧಗಳೂ ಪ್ರಭಾವಗಳೂ ಕಾಣಬರುತ್ತವೆ. ಚೀನೀಯರು ಪ್ರ.ಶ.ಪು. 12ನೆಯ ಶತಮಾನದಿಂದಲೇ ಕಟ್ಟಡಗಳ ನಿರ್ಮಾಣದಲ್ಲಿ ಪರಿಣತರಾಗಿದ್ದರು. ಪ್ರ.ಶ.ಪು. 214ರಲ್ಲಿ ಪ್ರಾರಂಭಿಸಲಾದ ಬೃಹತ್ ಗೋಡೆ (2400ಕಿಮೀ ಉದ್ದ) ಅಲ್ಲಿನ ಪ್ರಾಚೀನ ಅವಶೇಷಗಳಲ್ಲಿ ಮುಖ್ಯವಾದದ್ದು. ಮಿಂಗ್ ರಾಜವಂಶಕ್ಕೆ ಪುರ್ವದ ಕಟ್ಟಡಗಳು ಅಷ್ಟಾಗಿ ಉಳಿದಿಲ್ಲ. ಮಿಂಗ್ ರಾಜರ ಅರಮನೆಗಳು ಚೌಕವಾದ ಮತ್ತು ವೃತ್ತಾಕಾರದ ವಿವಿಧ ಭಾಗಗಳನ್ನೊಳಗೊಂಡು ಬಹಳ ರಮಣೀಯವಾದುವೆಂದು ಹೆಸರು ಪಡೆದಿವೆ. ಈ ಅರಮನೆಗಳು ಬಣ್ಣ ಬಣ್ಣದ ಹೆಂಚುಗಳಿಂದಲೂ ಅಮೃತಶಿಲೆಯ ಆಲಂಕಾರಿಕ ಬಳ್ಳಿಗಳಿಂದಲೂ ಚಿನ್ನದ ತಗಡುಗಳಿಂದಲೂ ಕೂಡಿವೆ. ಕಿರಿದೂ ಎತ್ತರವೂ ಆದ ಮತ್ತು ಅಂತಸ್ತುಗಳುಳ್ಳ ಗೋಪುರಗಳ ನಿರ್ಮಾಣ ಚೀನೀ ವಾಸ್ತುಕಲೆಯ ಒಂದು ವೈಶಿಷ್ಟ್ಯ. ಬೌದ್ಧ ದೇವಾಲಯಗಳನ್ನು ಮೊದಮೊದಲು ಈ ರೀತಿಯಲ್ಲೇ ಕಟ್ಟಲಾಗುತ್ತಿದ್ದು, ಕಾಲ ಕ್ರಮದಲ್ಲಿ ಅರಮನೆಯ ಗೋಪುರಗಳೂ ಈ ರೀತಿಯಲ್ಲೇ ನಿರ್ಮಾಣವಾಗತೊಡಗಿದವು. 17ನೆಯ ಶತಮಾನದಲ್ಲಿ ಪೀಕಿಂಗಿನಲ್ಲಿ ನಿರ್ಮಿಸಲಾದ ಸಿಂಹಾಸನ ಭವನ, ಚಿಯನ್ಮೆನನ ಹೆಬ್ಬಾಗಿಲು ಮುಂತಾದವು ಈ ರೀತಿಯ ವಾಸ್ತುಕಲೆಗೆ ಉತ್ತಮ ಉದಾಹರಣೆಗಳು. ಇದು ಚೀನೀಯರ ರಾಷ್ಟ್ರೀಯ ವಾಸ್ತುಕಲೆಯಾಗಿ ಮುಂದುವರಿಯುತ್ತಿದೆ.

ಚೀನದಲ್ಲಿ ಬೌದ್ಧಧರ್ಮದ ಪ್ರಭಾವ ಬೆಳೆದ ಮೇಲೆ ಭಾರತೀಯ ಮತ್ತು ಚೀನೀ ಸಂಪ್ರದಾಯಗಳೆರಡೂ ಬೆರೆತುವು. ಆಗ ನಿರ್ಮಿತವಾದ ಬುದ್ಧವಿಗ್ರಹಗಳೂ ಗುಹಾಲಯಗಳೂ ಈ ಮಿಶ್ರಶೈಲಿಯಲ್ಲಿ ಅಭಿವ್ಯಕ್ತವಾಗಿವೆ. ಇದನ್ನು ಚೀನೀ-ಭಾರತೀಯ ಶೈಲಿ ಎಂದು ಕರೆಯಬಹುದು. ಮರ, ಕಂಚು ಮತ್ತು ಇತರ ಲೋಹಗಳಲ್ಲಿ ವಿಗ್ರಹಗಳನ್ನು ಮಾಡುವುದರಲ್ಲಿ ಚೀನೀಯರು ಪರಿಶ್ರಮ ಹೊಂದಿದ್ದರೂ ಕಲ್ಲಿನಿಂದ ವಿಗ್ರಹಗಳನ್ನು ಮಾಡುವುದು ಅಷ್ಟಾಗಿ ಜನಾನುರಾಗಿಯಾಗಿರಲಿಲ್ಲ. ಚೀನೀಯಾತ್ರಿಕರು ಭಾರತದಿಂದ ಹಿಂದಿರುಗುವಾಗ ಬುದ್ಧನ ಪ್ರತಿಮೆಗಳನ್ನು ತಮ್ಮೊಡನೆ ತೆಗೆದುಕೊಂಡು ಹೋಗಿದ್ದರು. ಇವುಗಳ ಆಧಾರದ ಮೇಲೆ ಚೀನದಲ್ಲಿ ಶಿಲ್ಪಗಳು ತಯಾರಾದುವು. ಯುನ್ಕಾಂಗ್ ಮತ್ತು ಲಾಂಗ್ಮನ್ ಪ್ರದೇಶಗಳಲ್ಲಿ ಬೌದ್ಧ ಕಲೆಯನ್ನು ವಿಶೇಷವಾಗಿ ಕಾಣುತ್ತೇವೆ. 414ರಲ್ಲಿ ತಾನ್ಯಾವೊ ಎಂಬ ಬೌದ್ಧ ಭಿಕ್ಷುವಿನ ನೇತೃತ್ವದಲ್ಲಿ ತೈ-ತ್ಸಾಂಗ್ ದೊರೆಯ ಕಾಲದಲ್ಲಿ ಇವು ನಿರ್ಮಾಣವಾದವು. ಭಾರತದ ಬುದ್ಧಗಯಾ ದೇವಾಲಯದ ಮಾದರಿಯಲ್ಲಿ ಕಿನ್ಗೈಸ್ಸೆಯಲ್ಲಿ 665ರಲ್ಲಿ ಒಂದು ದೇವಾಲಯದ ನಿರ್ಮಾಣವಾಯಿತು. ವರ್ಣಚಿತ್ರ ಕಲೆಯಲ್ಲೂ ಭಾರತೀಯ ಪ್ರಭಾವಗಳನ್ನು ಸುಲಭವಾಗಿ ಗುರುತಿಸಬಹುದು. ಭಾರತೀಯ ಚಿತ್ರಕಾರರಾದ ಶಾಕ್ಯಬುದ್ಧ, ಬುದ್ಧಕೀರ್ತಿ, ಕುಮಾರಬೋಧಿ ಮುಂತಾದವರು ಅನೇಕ ಬೌದ್ಧ ಚಿತ್ರಗಳನ್ನು ಬರೆದರು. ಜೇಡಿಮಣ್ಣಿನ ಪಾತ್ರೆಗಳನ್ನು ತಯಾರಿಸುವುದರಲ್ಲಿ ಚೀನೀಯರು ಅದ್ಭುತ ಪ್ರಗತಿ ಸಾಧಿಸಿದ್ದಾರೆ. ನೂರಾರು ವರ್ಷಗಳಿಂದ ಚೀನೀಯರು ಇವುಗಳನ್ನು ಪ್ರಪಂಚದ ಎಲ್ಲ ಕಡೆಗಳಿಗೂ ರಫ್ತು ಮಾಡುತ್ತಿದ್ದಾರೆ. ಉತ್ತಮ ರೇಷ್ಮೆ ಬಟ್ಟೆಗಳ ತಯಾರಿಕೆಗೂ ಚೀನೀಯರು ಪ್ರಾಚೀನ ಕಾಲದಿಂದಲೂ ಪ್ರಸಿದ್ಧರಾಗಿದ್ದಾರೆ.

ಜಪಾನಿನ ವಾಸ್ತುಶಿಲ್ಪ ವಿಶೇಷವಾಗಿ ಚೀನೀ ವಾಸ್ತುಶಿಲ್ಪವನ್ನೇ ಅನುಸರಿಸಿದೆ. ಅಲ್ಲಿ ರಾಷ್ಟ್ರೀಯ ಭಾವನೆ ಜಾಗೃತವಾದಾಗ, ಜಪಾನೀಯರೂ ಚೀನೀ ಸಂಪ್ರದಾಯಕ್ಕೆ ಭಿನ್ನವಾದ ಪರಂಪರೆಯನ್ನು ರೂಢಿಸಿಕೊಂಡರು. ಜಪಾನಿನಲ್ಲಿ ಒಳ್ಳೆಯ ಮರಗಳ ಕಾಡುಗಳಿವೆ. ಭೂಕಂಪಗಳ ಹೆದರಿಕೆಯಿಂದ ಅಲ್ಲಿನ ಜನ ಮರಗಳನ್ನು ವಿಶೇಷವಾಗಿ ಬೆಳೆಸುತ್ತಾರೆ. ಕಟ್ಟಡಗಳ ನಿರ್ಮಾಣದಲ್ಲಿ ಬೊಂಬುಗಳ ಬಳಕೆ ಹೆಚ್ಚು. ಷಿಂಟೋಧರ್ಮಕ್ಕೆ ಸಂಬಂಧಪಟ್ಟ ದೇವಾಲಯಗಳೆಲ್ಲವೂ ಸಾಮಾನ್ಯವಾಗಿ ಬೊಂಬುಗಳಿಂದ ಕಟ್ಟಲಾದ ಮತ್ತು ತಡಿಕೆಯಿಂದ ಮುಚ್ಚಿದ್ದ ಒಂದಂತಸ್ತಿನ ಸರಳ ಕಟ್ಟಡಗಳು. ಬೌದ್ಧ ಧರ್ಮ ಚೀನದಿಂದ ಜಪಾನಿಗೆ ಬಂದ ಮೇಲೆ ಇಲ್ಲಿ ಚೀನೀ ಪ್ರಭಾವ ಹೆಚ್ಚಿತು. ಆಗ ಬೌದ್ಧ ದೇವಾಲಯಗಳು ಚೀನೀ ವಾಸ್ತುಶೈಲಿಯಲ್ಲೂ ಷಿಂಟೋ ದೇವಾಲಯಗಳು ಹಳೆಯ ಜಪಾನ್ ಶೈಲಿಯಲ್ಲೂ ನಿರ್ಮಾಣವಾಗುತ್ತಿದ್ದವು.

ಕಾಲಕ್ರಮೇಣ ಈ ಎರಡು ಶೈಲಿಗಳೂ ಪರಸ್ಪರ ಬೆರೆತವು. ತಾಂತ್ರಿಕ ಬೌದ್ಧಧರ್ಮ ಜಪಾನಿನಲ್ಲಿ ತಲೆಯೆತ್ತಿದ ಅನಂತರ ಕಟ್ಟಡ ನಿರ್ಮಾಣದಲ್ಲೂ ಬದಲಾವಣೆಗಳಾದವು. ಬೆಟ್ಟಗಳ ಮೇಲೆ ದೇವಾಲಯ ಕಟ್ಟುವ ಪದ್ಧತಿ ಪ್ರಾರಂಭವಾಯಿತು. 9ನೆಯ ಶತಮಾನದಿಂದ 12ನೆಯ ಶತಮಾನದವರೆಗೆ ಜಪಾನಿನ ವಿಶಿಷ್ಟ ಶೈಲಿಯೊಂದು ಬೆಳೆಯಿತೆನ್ನಬಹುದು. ಇದನ್ನು ಷಿಂಡೆನ್ಜುಕಾರಿ ಶೈಲಿ ಎಂದು ಕರೆಯುತ್ತಾರೆ. ಅಕ್ಕಪಕ್ಕದಲ್ಲಿ ಕಟ್ಟಲಾದ ಅನೇಕ ಕಟ್ಟಡಗಳಿಗೆ ಸೇರಿಕೊಂಡಂತೆ ಅಂಗಳಗಳನ್ನೂ ಮಧ್ಯದಲ್ಲಿ ಒಂದು ಸರೋವರವನ್ನೂ ನಿರ್ಮಿಸುವುದು ಈ ಶೈಲಿಯ ಮುಖ್ಯ ಲಕ್ಷಣ. ಇದು ಮೂರು-ನಾಲ್ಕು ಶತಮಾನಗಳವರೆಗೆ ಜಪಾನಿನ ವಾಸ್ತುಕಲೆಯ ವೈಶಿಷ್ಟ್ಯವಾಗಿತ್ತು. ಹನ್ನೆರಡನೆಯದರಿಂದ ಹದಿನಾರನೆಯ ಶತಮಾನದವರೆಗೆ ಮತ್ತು ವಿಶೇಷವಾದ ಚೀನೀ ಪ್ರಭಾವಕ್ಕೆ ಇದು ಒಳಗಾಯಿತು. 16ನೆಯ ಶತಮಾನದ ಕೊನೆಯ ಭಾಗದಲ್ಲಿ ಮೊಮೊಯಾಮ ಎಂಬ ರಾಷ್ಟ್ರೀಯ ಶೈಲಿ ವಿಕಾಸ ಹೊಂದಿತು. ಇದು ಜಪಾನಿನ ವಾಸ್ತುಕಲೆಯಲ್ಲಿ ವೈಭವದ ಕಾಲ. ಮೂರು ಶತಮಾನಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಈ ಶೈಲಿ 19ನೆಯ ಶತಮಾನದಿಂದ ಪಾಶ್ಚಾತ್ಯ ಪ್ರಭಾವಕ್ಕೊಳಗಾಯಿತು.

ಕಲ್ಲಿಗಿಂತ ಮರವನ್ನೇ ವಿಶೇಷವಾಗಿ ಶಿಲ್ಪಕ್ಕೂ ಬಳಸುವುದು ಜಪಾನಿನ ವೈಶಿಷ್ಟ್ಯ 8ನೆಯ ಶತಮಾನ ಶಿಲ್ಪಕಲೆಯ ದೃಷ್ಟಿಯಿಂದ ಮಹತ್ತರ ಕಾಲ. ಕಂಚು, ಮರ, ದಂತಗಳಿಂದ ಮಾಡಲಾದ ಬುದ್ಧನ ವಿಗ್ರಹಗಳು ವಿಶೇಷವಾಗಿ ದೊರಕಿವೆ. ತೋಡೈಜಿ ದೇವಾಲಯಗಳಲ್ಲಿರುವ 16 ಮೀಗಳು ಕಂಚಿನ ವಿರೋಚನ ಬುದ್ಧನ ವಿಗ್ರಹ ಜಪಾನಿನ ಶಿಲ್ಪಕಲೆಯ ಔನ್ನತ್ಯಕ್ಕೆ ಉತ್ತಮ ಉದಾಹರಣೆ. 10ನೆಯ ಶತಮಾನದಲ್ಲಿ ಇಳಿಮುಖವಾದ ಈ ಕಲೆ ಮತ್ತೆ ಹದಿಮೂರನೆಯ ಶತಮಾನದಲ್ಲಿ ಅಭಿವೃದ್ಧಿ ಹೊಂದಿತು.

ಜಪಾನೀಯರು ಶಿಲ್ಪಕಲೆಗಿಂತ ಹೆಚ್ಚಾಗಿ ವರ್ಣಚಿತ್ರಕಲೆಯಲ್ಲಿ ಪರಿಶ್ರಮ ಪಡೆದರು. ಬೌದ್ಧಧರ್ಮದ ಬೆಳೆವಣಿಗೆಯೊಂದಿಗೆ ವರ್ಣಚಿತ್ರಕಲೆಯೂ ಜಪಾನಿನಲ್ಲಿ ಅಭಿವೃದ್ಧಿಯಾಯಿತು. ಜಪಾನಿನ ವರ್ಣಚಿತ್ರಗಳು ವಿಶೇಷವಾಗಿ ರೇಷ್ಮೆ ಬಟ್ಟೆಗಳ ಮೇಲೆ ಮಾಡಿದವು. ಇವು ಗಳನ್ನು ಬೌದ್ಧ ದೇವಾಲಯ ಗಳಲ್ಲಿ ಪುಜೆಗಾಗಿ ತೂಗು ಹಾಕುವ ಪದ್ಧತಿ ಬೆಳೆಯಿತು. ವರ್ಣಚಿತ್ರಕಲೆಯಲ್ಲೂ ಚೀನೀ ಪ್ರಭಾವಗಳ ಮತ್ತು ರಾಷ್ಟ್ರೀಯ ಶೈಲಿಯ ಲಕ್ಷಣಗಳ ಮಿಶ್ರಣವನ್ನು ಕಾಣಬಹುದು.

ಕೊರಿಯದ ವಾಸ್ತುಶಿಲ್ಪ ಮತ್ತು ಇತರ ಕಲೆಗಳಲ್ಲಿ ಚೀನೀ ಸಂಪ್ರದಾಯಗಳೇ ವಿಶೇಷ. ಒಂದು ದೃಷ್ಟಿಯಲ್ಲಿ ಅದು ಚೀನೀ ಶೈಲಿಯ ಒಂದು ಸ್ಥಳೀಯ ವೈವಿಧ್ಯವಷ್ಟೆ. ಕೊರಿಯದಲ್ಲಿ ಬೌದ್ಧ ಧರ್ಮದೊಂದಿಗೆ ಬೌದ್ಧ ಕಲೆಯೂ ಬೆಳೆಯಿತು.

ದಕ್ಷಿಣ ಏಷ್ಯ ಬದಲಾಯಿಸಿ

ದಕ್ಷಿಣ ಏಷ್ಯದಲ್ಲಿ ಭಾರತವೇ ಅತಿ ಮುಖ್ಯ ರಾಷ್ಟ್ರ. ವಾಸ್ತುಶಿಲ್ಪ ಮತ್ತು ಕಲೆಗಳ ದೃಷ್ಟಿಯಿಂದಲೂ ಭಾರತ ಪ್ರಾಮುಖ್ಯ ಗಳಿಸಿದೆ. ಪ್ರ.ಶ.ಪು.3ನೆಯ ಸಹಸ್ರಮಾನ ದ ಸಿಂಧೂ ನಾಗರಿಕತೆಯಿಂದ ಭಾರತೀಯ ವಾಸ್ತುಶಿಲ್ಪ ಮತ್ತು ಇತರ ಕಲೆಗಳ ಚರಿತ್ರೆ ಪ್ರಾರಂಭವಾಗುತ್ತದೆ. ಬೃಹದಾಕಾರದ ಕೋಟೆಗಳು, ಮನೆಗಳು, ಸ್ನಾನಗೃಹ, ಕಂಚಿನ ವಿಗ್ರಹ, ಇತರ ಶಿಲ್ಪಗಳು, ಶಾಸನವುಳ್ಳ ಮುದ್ರೆಗಳು, ವಿವಿಧ ವರ್ಣಗಳ ಮಡಕೆಗಳು ಮುಂತಾದವು ಭಾರತೀಯ ಕಲಾಕೃತಿಯ ಸಂಪ್ರದಾಯಕ್ಕೆ ಭದ್ರ ಬುನಾದಿ ಹಾಕಿವೆ. ಮೌರ್ಯರ ಕಾಲದಲ್ಲಿ ಕಲ್ಲಿನಿಂದ ವಾಸ್ತುಶಿಲ್ಪ ಕೃತಿಗಳನ್ನು ನಿರ್ಮಿಸುವ ಕಲೆ ಅಭಿವೃದ್ಧಿ ಹೊಂದಿತು. ಅಶೋಕ ನಿರ್ಮಿಸಿದ ಕಲ್ಲುಕಂಬಗಳು ಪರ್ಷಿಯನ್ ಪ್ರಭಾವವನ್ನು ವ್ಯಕ್ತಪಡಿಸಿದರೂ ಉತ್ತಮ ಕೃತಿಗಳಾಗಿವೆ. ಗುಪ್ತರ ಕಾಲದಲ್ಲಿ ವಾಸ್ತುಶಿಲ್ಪ ಮತ್ತು ಚಿತ್ರಕಲೆಗಳು ಉಚ್ಛ್ರಾಯಸ್ಥಿತಿ ಮುಟ್ಟಿದುವು. ದಕ್ಷಿಣದಲ್ಲಿ ಗುಹಾದೇವಾಲಯಗಳ ಪರಂಪರೆ ಪ್ರಾರಂಭವಾಗಿ ಕಾರ್ಲ, ಭೇಡ್ಸ ಮುಂತಾದಲ್ಲಿ ಗುಹೆಗಳು ನಿರ್ಮಾಣವಾಗಿ ಅಜಂತ, ಎಲ್ಲೋರದಂಥ ವಿಶ್ವವಿಖ್ಯಾತ ಕೃತಿಗಳ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟವು. ನಾಗರ, ದ್ರಾವಿಡ ಮತ್ತು ವೇಸರ ಎಂಬ ಮೂರು ಪ್ರಕಾರದ ದೇವಾಲಯಗಳ ನಿರ್ಮಾಣ ಪ್ರಾರಂಭವಾಗಿ ದೇಗುಲನಿರ್ಮಾಣಕಲೆ ಅಭಿವೃದ್ಧಿ ಹೊಂದಿತು. ಬಾದಾಮಿ, ಪಟ್ಟದಕಲ್ಲು, ಐಹೊಳೆ, ಕಂಚಿ, ತಂಜಾವೂರು, ಭುವನೇಶ್ವರ ಮೊದಲಾದ ಕಡೆಗಳಲ್ಲಿ ವಿವಿಧ ಶೈಲಿಗಳ ದೇಗುಲಗಳು ತಲೆ ಎತ್ತಿದುವು.

ಕರ್ನಾಟಕದಲ್ಲಿ ಚಾಳುಕ್ಯ, ಹೊಯ್ಸಳ ಮತ್ತು ವಿಜಯನಗರ ರಾಜ್ಯಗಳ ಕಾಲದಲ್ಲಿ ಕಟ್ಟಲಾದ ದೇವಾಲಯಗಳು ಪ್ರಸಿದ್ಧವಾಗಿವೆ. ವಿಜಯನಗರ ಸಾಮ್ರಾಜ್ಯದ ಅನಂತರ ದಕ್ಷಿಣ ಭಾರತದ ನಾಯಕರು ದೇವಾಲಯ ನಿರ್ಮಾಣ ಕಾರ್ಯಕ್ಕೆ ವಿಶೇಷ ಪ್ರೋತ್ಸಾಹ ಕೊಟ್ಟರು.

ಗುಜರಾತಿನಲ್ಲಿನ ಜೈನ ದೇವಾಲಯಗಳು ನಿರ್ಮಾಣವಾದವು.

ಭಾರತದಲ್ಲಿ ಮಹಮ್ಮದೀಯರ ರಾಜ್ಯ ಸ್ಥಾಪನೆಯಾದ ಮೇಲೆ ಇಂಡೋ-ಸಾರ್ಸ್ನಿಕ್ ಶೈಲಿಯ ಕಟ್ಟಡಗಳು ನಿರ್ಮಾಣವಾಗಲು ಪ್ರಾರಂಭವಾದುವು. ಮೊಗಲ್ ರಾಜರು ಕಟ್ಟಡನಿಮಾರ್ಣಕಾರ್ಯಗಳಲ್ಲಿ ವಿಶೇಷ ಆಸಕ್ತಿ ವಹಿಸಿದರು. ದೆಹಲಿ, ಅಗ್ರಾ, ಲಖ್ನೌ, ಫತೇಪುರ್-ಸಿಕ್ರಿ ಮುಂತಾದ ಕಡೆಗಳಲ್ಲಿ ಉತ್ತಮ ವಾಸ್ತುಕೃತಿಗಳು ನಿರ್ಮಾಣವಾದವು. ಡಚ್, ಪೋರ್ಚುಗೀಸ್ ಮತ್ತು ಬ್ರಿಟಿಷರ ಆಗಮನದಿಂದ ಆಯಾ ಶೈಲಿಗಳ ಚರ್ಚುಗಳು ಮತ್ತು ಇತರ ಕಟ್ಟಡಗಳು ನಿರ್ಮಾಣವಾದವು.

ದಕ್ಷಿಣ ಭಾರತದಲ್ಲೂ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಆಂಧ್ರ ಮುಂತಾದ ಕಡೆಗಳಲ್ಲೂ ಆದಿಮ ಜನ ವಾಸಿಸುತ್ತಿದ್ದಾರೆ. ಇವರ ಕುಶಲಕಲೆಗಳಾದ ವರ್ಣಚಿತ್ರ, ಚಾಪೆ ಹೆಣೆಯುವುದು, ಬುಟ್ಟಿ ಹೆಣೆಯುವುದು, ಕಂಚಿನ ಪ್ರತಿಮೆಗಳ ನಿರ್ಮಾಣ ಮುಂತಾದವು ಪ್ರಚಲಿತವಾಗಿದ್ದು ಉನ್ನತ ಮಟ್ಟದಲ್ಲಿವೆ. ಪ್ರಾಚೀನ ಕಾಲದಿಂದಲೂ ಭಾರತೀಯರು ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಒಂದು ವಿಶಿಷ್ಟ ಸಂಗೀತ ಪರಂಪರೆಯನ್ನು ಬೆಳೆಸಿಕೊಂಡಿದ್ದಾರೆ. ವೇದಕಾಲದಿಂದ ಹಿಡಿದು ಇಂದಿನವರೆಗೆ ಸಂಗೀತ ಕಲೆ ಅವಿಚ್ಛಿನ್ನವಾಗಿ ಬೆಳೆದುಬಂದಿದೆ. ಅನೇಕ ಪ್ರಾಚೀನ ಕಲೆಗಳು ತಮ್ಮ ಉಚ್ಛ್ರಾಯಸ್ಥಿತಿಯನ್ನು ಕಳೆದುಕೊಂಡು ಗ್ರಾಮಗಳಲ್ಲಿ ಕುಶಲ ಕಲೆಗಳಾಗಿ ಮುಂದುವರಿಯುತ್ತಿವೆ.

ಪ್ರಾಚೀನ ಭಾರತ ತನ್ನ ಕಲೆಯನ್ನು ತಾನು ರೂಪಿಸಿಕೊಂಡಿದ್ದುದೇ ಅಲ್ಲದೆ, ಅಕ್ಕಪಕ್ಕದ ರಾಜ್ಯಗಳಾದ ಶ್ರೀಲಂಕ, ಆಫ್ಘಾನಿಸ್ತಾನ ಮತ್ತು ಆಗ್ನೇಯ ಏಷ್ಯನ್ ರಾಜ್ಯಗಳ ಕಲಾಪರಂಪರೆಯನ್ನು ರೂಢಿಸಿಕೊಳ್ಳಲು ಸಹಾಯಮಾಡಿತು. ಈ ದೃಷ್ಟಿಯಿಂದ ಈ ರಾಜ್ಯಗಳೆಲ್ಲವೂ

ಸಾಂಸ್ಕೃತಿಕ ಭಾರತದ ಅವಿಭಾಜ್ಯ ಅಂಗಗಳಾಗಿದ್ದುವೆಂದು ಖಚಿತವಾಗಿ ಹೇಳಬಹುದು. ಅದರಿಂದಲೇ ಈ ರಾಜ್ಯಗಳನ್ನು ಬೃಹದ್ಭಾರತ ಎಂದು ಕರೆಯುತ್ತಾರೆ. ಭಾರತಕ್ಕೆ ಬಹು ಸಮೀಪವಾಗಿರುವ ಶ್ರೀಲಂಕದ್ವೀಪ ದಕ್ಷಿಣ ಭಾರತದ ಪಲ್ಲವರು ಮತ್ತು ಚೋಳರೊಂದಿಗೆ ರಾಜಕೀಯ ಸಂಪರ್ಕ ಹೊಂದಿತ್ತು. ಕ್ರಿಸ್ತಶಕದ ಆರಂಭದ ಸಮಯಕ್ಕೆ ಇಲ್ಲಿ ಅನೇಕ ವಿಹಾರಗಳೂ ಚೈತ್ಯಗಳೂ ನಿರ್ಮಾಣವಾದವು. ಮೊದಲನೆಯ ಕಾಶ್ಯಪರಾಜನಿಂದ ನಿರ್ಮಿತವಾದ ಸೀಗಿರಿಯ ಗುಹಾದೇವಾಲಯಗಳಲ್ಲಿ ವರ್ಣಚಿತ್ರಗಳಿವೆ. ಇವು ಅಜಂತ ಶೈಲಿಗೆ ಸೇರಿದವು. ಕುಂಚದ ಅತಿಸೂಕ್ಷ್ಮ ಕೆಲಸವನ್ನು ಇಲ್ಲಿ ಕಾಣಬಹುದು. ಪೊಲನ್ನಾರುವದಲ್ಲಿರುವ ಕಟ್ಟಡಗಳು ದ್ರಾವಿಡ ಸಂಪ್ರದಾಯಕ್ಕೆ ಸೇರಿದವು. ಚೋಳರು ಇಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಇಲ್ಲಿರುವ ಶಿವದೇವಾಲಯದಲ್ಲಿ ಗರ್ಭಗೃಹ, ಅಂತರಾಳ, ಅರ್ಧ ಮಂಡಪ, ಮಂಡಪ ಮುಂತಾದ ಭಾಗಗಳಿವೆ. ಸಿಂಹಳದ ಮೂರ್ತಿಶಿಲ್ಪಗಳಲ್ಲಿ ಅಮರಾವತಿ ಮತ್ತು ನಾಗಾರ್ಜುನಕೊಂಡದ ಶಿಲ್ಪಪ್ರಭಾವಗಳನ್ನು ಸುಲಭವಾಗಿ ಗುರುತಿಸಬಹುದು. ಕಂಚು ಮತ್ತು ತಾಮ್ರದಿಂದ ವಿಗ್ರಹಗಳನ್ನು ಮಾಡುವ ಕಲೆ 5ನೆಯ ಶತಮಾನದಿಂದ ಪ್ರಾರಂಭವಾಗಿ 12ನೆಯ ಶತಮಾನದವರೆಗೆ ಉಚ್ಛ್ರಾಯಸ್ಥಿತಿಯಲ್ಲಿತ್ತು. ಶಿವ, ನಟರಾಜ, ಗಣೇಶ, ಪಾರ್ವತಿ, ವಿಷ್ಣು, ಲಕ್ಷ್ಮಿ ಮುಂತಾದ ದೇವತೆಗಳ ವಿಗ್ರಹಗಳು ದಕ್ಷಿಣ ಭಾರತದ ಶೈಲಿಯಲ್ಲಿವೆ.

ಚೀನೀ ಯಾತ್ರಿಕರಾದ ಫಾಹಿಯಾನ್ ಮತ್ತು ಹ್ಯುಯೆನ್ತ್ಸಾಂಗರ ಬರೆವಣಿಗೆಯ ಪ್ರಕಾರ ಆಫ್ಘಾನಿಸ್ತಾನದ ಹೆಚ್ಚು ಭಾಗ ಪ್ರಾಚೀನ ಭಾರತಕ್ಕೆ ಸೇರಿತ್ತು. ಆದ್ದರಿಂದ ಇಲ್ಲೂ ಭಾರತೀಯ ಪ್ರಭಾವಿತ ವಾಸ್ತುಶಿಲ್ಪಗಳನ್ನು ಕಾಣಬಹುದು. ಬಮಿಯಾನ್, ಕಪಿಶಾ, ಬೆಗ್ರಾಮ್ಗಳು ಇಲ್ಲಿನ ಮುಖ್ಯ ಕಲಾಕೇಂದ್ರಗಳು. 4-5ನೆಯ ಶತಮಾನಗಳಿಗೆ ಸೇರಿದ 4.50-5 ಮೀಗಳ ಎರಡು ಕಲ್ಲಿನ ಬುದ್ಧವಿಗ್ರಹಗಳು ಬಮಿಯಾನ್ನಲ್ಲಿ ದೊರಕಿವೆ. ಇವುಗಳಲ್ಲಿ ಭಾರತೀಯ, ಇರಾನೀ, ಮತ್ತು ಗಾಂಧಾರ ಪ್ರಭಾವಗಳು ಮಿಳಿತವಾಗಿವೆ. ಕಪಿಶಾದಲ್ಲಿ ಅನೇಕ ವಿಹಾರಗಳೂ ವೈದಿಕ ದೇವಾಲಯಗಳೂ ಇದ್ದವು. ಹಡ್ಡದಲ್ಲಿ 531 ಸ್ತೂಪಗಳು ಅವಶೇಷಗಳೂ 500ಕ್ಕೂ ಹೆಚ್ಚು ಬೌದ್ಧಶಿಲ್ಪಗಳೂ ದೊರಕಿವೆ. ಬಮಿಯಾನಿನಲ್ಲಿ ಬುದ್ಧನ ವಿಗ್ರಹಗಳು ಮಾತ್ರವಲ್ಲದೆ, ಅನೇಕ ಭಿತ್ತಿ ಚಿತ್ರಗಳು ದೊರಕಿವೆ. ಗುಪ್ತಶೈಲಿಯ ಅನೇಕ ದೇವಾಲಯಗಳನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ. ಬೆಗ್ರಾಮಿನಲ್ಲಿ ದೊರಕಿರುವ ದಂತದ ವಿಗ್ರಹಗಳು ಭಾರತದ ಮಥುರಾ ಶಿಲ್ಪಶೈಲಿಗಳಿಗೆ ಸೇರಿದವೆಂದು ಸುಲಭವಾಗಿ ಗುರುತಿಸಬಹುದು. ಜೇಡಿಮಣ್ಣಿನ ವಿಗ್ರಹಗಳು ಇಲ್ಲಿ ವಿಶೇಷವಾಗಿ ದೊರಕಿವೆ. ಇವು ಗುಪ್ತಸಂಪ್ರದಾಯಕ್ಕೆ ಸೇರಿದವು. ಬೆಗ್ರಾಮ್ನಲ್ಲಿ ದೊರಕಿರುವ ವರ್ಣಚಿತ್ರಗಳಲ್ಲಿ ಗುಪ್ತ ಮತ್ತು ಪಾಲರ ಕಾಲದ ಪ್ರಭಾವಗಳನ್ನು ವಿಶೇಷವಾಗಿ ಕಾಣಬಹುದು. ಇಸ್ಲಾಮೀ ಕಲಾಸಂಪ್ರದಾಯಕ್ಕೆ ಸೇರಿದ ಕಟ್ಟಡಗಳನ್ನು ಹೆರಾತ್, ಕಾಂದಹಾರ್, ಘಜ್ನಿ ಮುಂತಾದಲ್ಲಿ ಕಾಣಬಹುದು (ನೋಡಿ- ಆಫ್ಘಾನಿಸ್ತಾನ). ಆಗ್ನೇಯ ಏಷ್ಯ: ಆಗ್ನೇಯ ಏಷ್ಯದ ವಿವಿಧ ರಾಜ್ಯಗಳಲ್ಲಿ ಪ್ರಸಕ್ತಶಕದ ಆರಂಭದಿಂದ ಹಿಂದೂ ರಾಜ್ಯಗಳು ಸ್ಥಾಪನೆಯಾದವು. ಇವುಗಳ ಆಶ್ರಯದಲ್ಲಿ ಭಾರತೀಯ ಸಂಸ್ಕೃತಿ ಈ ರಾಜ್ಯಗಳಲ್ಲಿ ಅಭಿವೃದ್ಧಿ ಹೊಂದಿತು. ಪ್ರಾಚೀನ ಸಂಸ್ಕೃತಿಯ ದೃಷ್ಟಿಯಿಂದ ಆಗ್ನೇಯ ಏಷ್ಯವನ್ನು ಬೃಹದ್ಭಾರತ ಎಂದು ಕರೆಯಬಹುದು. ಸಾಮಾಜಿಕ, ಮತೀಯ ಮತ್ತು ಧಾರ್ಮಿಕ ಸ್ಥಿತಿಗಳಲ್ಲಿ ಭಾರತೀಯ ಪ್ರಭಾವ ಆಗ್ನೇಯ ಏಷ್ಯದ ರಾಜ್ಯಗಳಲ್ಲಿ ಯಾವ ರೀತಿ ಬೆಳೆಯಿತೋ ಅದಕ್ಕೂ ವಿಶೇಷವಾಗಿ ಭಾರತೀಯ ವಾಸ್ತುಶಿಲ್ಪ ಮತ್ತು ಕಲೆಗಳು ಅಲ್ಲಿ ವಿಕಾಸಹೊಂದಿದವು.

ಆದ್ದರಿಂದ ಆಗ್ನೇಯ ಏಷ್ಯದ ಪ್ರಾಚೀನ ವಾಸ್ತುಶಿಲ್ಪಕಲೆ ಭಾರತೀಯ ವಾಸ್ತುಶಿಲ್ಪ ಪಂಥಕ್ಕೇ ಸೇರಿದ್ದವು. ದೇವಾಲಯಗಳ ನಿರ್ಮಾಣದಲ್ಲಂತೂ ಚಾಳುಕ್ಯ, ಪಲ್ಲವ ಮುಂತಾದ ಶೈಲಿಗಳನ್ನು ಅನುಸರಿಸಲಾಯಿತು. ಮೊದಮೊದಲು ಭಾರತೀಯ ಶೈಲಿಯ ಪುರ್ಣಪ್ರಭಾವಗಳನ್ನು ಕಾಣಬಹುದಾದರೂ ಕಾಲಕ್ರಮದಲ್ಲಿ ಸ್ಥಳೀಯ ಲಕ್ಷಣಗಳು ತಲೆದೋರಿದವು. ಕಾಂಬೋಡಿಯದಲ್ಲಿ ಭಾರತೀಯ ಶೈಲಿ, ಇಂಡೋ-ಖ್ಮೆರ್ ಶೈಲಿ ಮತ್ತು ಖ್ಮೆರ್ ಶೈಲಿ ಎಂದು ಮೂರು ಶೈಲಿಗಳನ್ನು ಸುಲಭವಾಗಿ ಗುರುತಿಸಬಹುದು. ಇವೇ ರೀತಿಯ ಶೈಲಿಗಳು ಜಾವಾದಲ್ಲೂ ಇವೆ. ಈ ವಾಸ್ತುಶಿಲ್ಪ ಕೃತಿಗಳೆಲ್ಲವೂ ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ಆಧಾರಿತವಾಗಿದ್ದುದರಿಂದ ಇವು ಆಂತರಿಕವಾಗಿ ಹಿಂದೂ ಶೈಲಿಗೆ ಸಂಬಂಧಿಸಿದರೂ ಬಾಹ್ಯರೂಪದಲ್ಲಿ ಸ್ಥಳೀಯ ಲಕ್ಷಣಗಳನ್ನೇ ಹೊಂದಿದ್ದುವು. ಮುಖದಲ್ಲಿ ಈ ಲಕ್ಷಣಗಳು ಎದ್ದು ಕಾಣುತ್ತವೆ.

ಪೂರ್ಣ ಭಾರತೀಯ ಶೈಲಿಯ ಕಾಂಬೋಡಿಯದ ಶಿಲ್ಪದಲ್ಲಿಯೂ ದೇವತೆಗಳ ಮುಖ್ಯಲಕ್ಷಣಗಳು ಭಾರತೀಯವಾಗಿರದೆ ಖ್ಮೇರ್ ಲಕ್ಷಣಗಳನ್ನೇ ಹೊಂದಿ ನಮ್ಮ ಗಮನ ಸೆಳೆಯುತ್ತವೆ. ಆಗ್ನೇಯ ಏಷ್ಯದಲ್ಲಿ ನಿರ್ಮಾಣವಾದ ವಾಸ್ತುಶಿಲ್ಪ ಕಲಾಕೃತಿಗಳಲ್ಲಿ ಆಂಗ್ಕೋರ್ವಾಟ್, ಬೊರಬೊದೂರ್, ಆನಂದ ದೇವಾಲಯ, ಬೆಲ್ಹನನ ವಿಷ್ಣು ಮುಂತಾದವು ಗಮನಾರ್ಹ (ನೋಡಿ- ಆಗ್ನೇಯ-ಏಷ್ಯ). ಮಧ್ಯ ಏಷ್ಯ : ಪ್ರಾಚೀನ ಪ್ರಪಂಚದಲ್ಲಿ ಮಧ್ಯ ಏಷ್ಯ ಅನೇಕ ಸಂಸ್ಕೃತಿಗಳ ಸಂಗಮಸ್ಥಾನವಾಗಿತ್ತು. ಸೋವಿಯತ್ ಪುರಾತತ್ತ್ವಜ್ಞರು ಮಧ್ಯ ಏಷ್ಯದ ಅನೇಕ ಸ್ಥಳಗಳಲ್ಲಿ ನಡೆಸಿರುವ ಉತ್ಖನನಗಳಿಂದ, ಈ ಪ್ರದೇಶದಲ್ಲಿ ನೂತನ ಶಿಲಾಯುಗದ ಕಾಲದಲ್ಲಿಯೇ ಮಡಕೆಗಳ ಮೇಲೆ ವಿವಿಧ ರೀತಿಯ ವರ್ಣಚಿತ್ರಗಳನ್ನು ಬರೆಯುವ ಪರಂಪರೆ ಪ್ರಾರಂಭವಾಯಿತೆಂದು ಗೊತ್ತಾಗುತ್ತದೆ. ಪ್ರ.ಶ.ಪು. 1ನೆಯ ಸಹಸ್ರಮಾನದ ಕರಸುಕ್ ಸಂಸ್ಕೃತಿಯ ಕಂಚಿನ ವಿಗ್ರಹಗಳು ಒಳ್ಳೆಯ ಕಲಾತ್ಮಕ ವಸ್ತುಗಳು. ಪ್ರಸಕ್ತಶಕದ ಆರಂಭದ ಹೊತ್ತಿಗೆ ಬೌದ್ಧಧರ್ಮ ಈ ಪ್ರದೇಶಗಳಲ್ಲೆಲ್ಲ ಹರಡಿ, ಕುಶಾನರ ಆಸಕ್ತಿಯಿಂದ ಗಾಂಧಾರ ಶೈಲಿ ಪ್ರಾರಂಭವಾಯಿತು. ಇದು ಭಾರತೀಯ ಶೈಲಿಯಿಂದ ಪ್ರಭಾವಿತಗೊಂಡ ಒಂದು ನೂತನ ಶೈಲಿ. ಸೊಗ್ಡಿಯಾನದಲ್ಲಿ ಈ ಪಂಥಕ್ಕೆ ಸೇರಿದ ಅನೇಕ ಪ್ರಾಚೀನ ನೆಲೆಗಳನ್ನು ಶಹರಿಸ್ತಾನ್, ವರಖ್ಷ ಮುಂತಾದ ಕಡೆಗಳಲ್ಲಿ ಗುರುತಿಸಲಾಗಿದೆ. ಎತ್ತರವಾದ ಮತ್ತು ವಿಶಾಲವಾದ ಕೋಟೆಗಳೂ ಅರಮನೆಗಳೂ ದೇವಾಲಯಗಳೂ ಅವುಗಳಲ್ಲಿನ ಭಿತ್ತಿಚಿತ್ರಗಳೂ ಇವುಗಳಲ್ಲಿ ಮುಖ್ಯವಾದವು. ಪ್ರ.ಶ. 5ನೆಯ ಶತಮಾನದ ಸಮಯದಲ್ಲಿ ಕುಶಾನರ ಪ್ರಭಾವ ಕಡಿಮೆಯಾದಾಗ ಹೊರಗಡೆಯಿಂದ ಇಲ್ಲಿಗೆ ಬಂದ ಎಫ್ತಲೈಟ್ ಜನರು ಬೌದ್ಧಧರ್ಮವನ್ನೂ ಅದರಿಂದ ಪ್ರಭಾವಿತಗೊಂಡಿದ್ದ ಕಲೆಯನ್ನೂ ನಾಶಮಾಡಿದರು. ದೇವಾಲಯಗಳನ್ನು ಕೆಡವಿಸಿದರು. ಹೀಗಾಗಿ ಈ ಪ್ರದೇಶದಲ್ಲಿ ಬೌದ್ಧ ವಾಸ್ತುಶಿಲ್ಪ ಅಥವಾ ವರ್ಣಚಿತ್ರಕಲೆ ಮತ್ತೆ ಅಭಿವೃದ್ಧಿಯಾಗಲಿಲ್ಲ.

ಅರಬರು ಈ ದೇಶದಲ್ಲಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದ ಮೇಲೆ ಇಸ್ಲಾಮಿ ಕಲೆ ಇಲ್ಲಿ ಅಭಿವೃದ್ಧಿಯಾಯಿತು.

ಸರಿಂಡಿಯ ಎಂದು ಪ್ರಸಿದ್ಧವಾಗಿರುವ ಚೀನೀ ಮತ್ತು ಸೋವಿಯತ್ ತುರ್ಕಿಸ್ತಾನಗಳಲ್ಲಿ ವಿಶ್ವವಿಖ್ಯಾತವಾದ ಬೌದ್ಧಕಲಾಪರಂಪರೆ ಅಭಿವೃದ್ಧಿಹೊಂದಿತು. 1ನೆಯ ಶತಮಾನದಿಂದ ಮಹಮ್ಮದೀಯರ ದಾಳಿಗಳವರೆಗೆ ಇಲ್ಲಿ ನಿರ್ಮಿತವಾದ ಕಲೆ ಮತ್ತು ವಾಸ್ತುಶಿಲ್ಪಗಳಲ್ಲಿ ಗಾಂಧಾರ ಮತ್ತು ಪಶ್ಚಿಮ ಏಷ್ಯದ ಪ್ರಭಾವಗಳನ್ನೂ ಅನಂತರ ಬಂದ ಚೀನೀ ಪ್ರಭಾವಗಳನ್ನೂ ಕಾಣಬಹುದು. ಭಾರತೀಯ ಪ್ರಭಾವ ಇಲ್ಲಿ ನಿಂತು ಹೋದ ಮೇಲೆ ಚೀನೀ ಸಂಪ್ರದಾಯಗಳು ವಿಶೇಷವಾದವು. ಕೊನೆಗೆ ಮಹಮ್ಮದೀಯರ ದಾಳಿಗಳ ಅನಂತರ ಇಸ್ಲಾಮೀ ಕಲಾಪ್ರಭಾವ ಬೆಳೆಯಿತು. ಸರ್ ಆರಲ್ ಸ್ಟೇನ್ ಎಂಬ ವಿಖ್ಯಾತ ಪುರಾತತ್ತ್ವಜ್ಞ ಇಲ್ಲಿ ನಡೆಸಿದ ಸಂಶೋಧನೆಗಳಿಂದಾಗಿ ಈ ಪ್ರದೇಶದಲ್ಲಿದ್ದ ವಾಸ್ತುಶಿಲ್ಪಕೃತಿಗಳು ಬೆಳಕಿಗೆ ಬಂದಿವೆ. ಮಿರನ್ ಎಂಬಲ್ಲಿ ಒಂದು ದೊಡ್ಡ ಸ್ತೂಪ ದೊರಕಿದ್ದು. ಅದರ ಸುತ್ತಲೂ ಇರುವ ಕಟ್ಟಡಗಳಲ್ಲಿ

ವರ್ಣಚಿತ್ರಗಳಿವೆ. ತುರ್ಕಿಸ್ತಾನದಲ್ಲೆ ಅತ್ಯಂತ ಪ್ರಾಚೀನವಾದ ವರ್ಣಚಿತ್ರವಿದು. ಇದರ ಕಾಲ 3ನೆಯ ಶತಮಾನ. ಇದರಲ್ಲಿ ಕಾಣಬರುವ ವಿಶ್ವಂತರ ಜಾತಕದ ವರ್ಣಚಿತ್ರದಲ್ಲಿ ಗಾಂಧಾರಶೈಲಿಯ ಪ್ರಭಾವವನ್ನು ಕಾಣಬಹುದು. ತಿತ ಎಂಬ ಕಲಾಕಾರ ಈ ಚಿತ್ರಗಳನ್ನು ಬರೆದವನೆಂದು ಗೊತ್ತಾಗುತ್ತದೆ. ಈತ ಏಷ್ಯದಲ್ಲಿ ನೆಲೆಸಿದ ರೋಮನ್ ಪ್ರಜೆಯಿರಬೇಕು. ಈ ವರ್ಣಚಿತ್ರಗಳಲ್ಲಿ ರೋಮನ್ ಮತ್ತು ಗ್ರೀಕ್ ಪ್ರಭಾವಗಳನ್ನು ಕಾಣಬಹುದು. ಈ ಪ್ರಭಾವಗಳು ಇಲ್ಲಿಗೆ ಹೇಗೆ ಬಂದವು ಎಂಬ ವಿಚಾರದಲ್ಲಿ ಖಚಿತವಾದ ಮಾಹಿತಿ ದೊರಕಿಲ್ಲ.

5-8ನೆಯ ಶತಮಾನಗಳವರೆಗೆ ಬೌದ್ಧಧರ್ಮದಿಂದ ಪ್ರಭಾವಗೊಂಡ ಕಲೆ ಖೊಟಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಭಿವೃದ್ಧಿ ಹೊಂದಿತು. ಸ್ತೂಪಗಳು, ವಿಹಾರಗಳು ಮತ್ತು ವರ್ಣಚಿತ್ರಗಳು ಭಾರತೀಯ ಕಲಾ ಸಂಪ್ರದಾಯಕ್ಕೆ ಸೇರಿದವು. ಕಾಶ್ಮೀರದ ಮೂಲಕ ಈ ಪ್ರಭಾವಗಳು ಖೋಟಾನಿಗೆ ಬಂದುವು. ಗುಪ್ತರ ಕಾಲದ ಕಲಾಶೈಲಿಗೆ ಸೇರಿದ ಅನೇಕ ಪ್ರಭಾವಗಳನ್ನು ಇಲ್ಲಿ ಸುಲಭವಾಗಿ ಗುರುತಿಸಬಹುದು.

ಯೋತ್ಕಾನ್ ಪ್ರದೇಶದಲ್ಲಿ ದಂದನ್ ಉಯಿಲಿಕ್ ಎಂಬಲ್ಲಿ ಅನೇಕ ವಿಹಾರಗಳು ಕಾಣಬಂದಿವೆ. ಈ ವಿಹಾರಗಳಲ್ಲಿನ ವರ್ಣಚಿತ್ರಗಳು ಮುಖ್ಯವಾದುವು. ಇಲ್ಲಿ ಬೋಧಿ ಸತ್ವ, ಗಂಧರ್ವ, ಯಕ್ಷ, ಧರ್ಮಚಕ್ರ, ಅಷ್ಟದಳಪದ್ಮ, ನಾಗ, ನರ್ತನ ಮಾಡುತ್ತಿರುವ ಸ್ತ್ರೀಯರು ಮುಂತಾದ ವರ್ಣಚಿತ್ರಗಳುಂಟು. ರವಾಕ್ನಲ್ಲಿರುವ ಮಹಾವಿಹಾರದ ಅವಶೇಷಗಳು ವಾಸ್ತುಕಲೆಗೆ ಪ್ರಸಿದ್ಧವಾಗಿವೆ. 3ನೆಯ ಶತಮಾನದಲ್ಲಿ ನಿರ್ಮಿತವಾದ ಈ ವಿಹಾರದಲ್ಲಿ ಮೂರು ಅಂತಸ್ತಿನ ಸ್ತೂಪವೂ ಅದರ ಸುತ್ತಲೂ ಇರುವ ಗೋಡೆಗಳಲ್ಲಿ ಎತ್ತರದ ಬುದ್ಧನ ವಿಗ್ರಹಗಳೂ ಇವೆ. ಈ ವಿಗ್ರಹಗಳಿಗೆ ಆ ಕಾಲದಲ್ಲಿ ವಿವಿಧ ವರ್ಣಗಳನ್ನು ಹಚ್ಚಲಾಗಿತ್ತು. ಈ ವರ್ಣಗಳು ಈಗ ಬಹಳಮಟ್ಟಿಗೆ ಮಾಸಿವೆ.

ನಿಯ ಎಂಬಲ್ಲಿ ವಿಹಾರಗಳೂ ಸ್ತೂಪಗಳೂ ಕಂಡುಬಂದಿವೆ. ಇವು ಮೇಲೆ ಹೇಳಿದ ವಿಹಾರಗಳಿಗಿಂತ ಬೃಹತ್ ಪ್ರಮಾಣದವು. ಇಲ್ಲಿ ಭಾರತೀಯ, ಗಾಂಧಾರ ಮತ್ತು ಚೀನೀ ಪ್ರಭಾವಗಳನ್ನು ಗುರುತಿಸಬಹುದು. ಖರೋಷ್ಠೀ ಮತ್ತು ಚೀನೀ ಲಿಪಿಗಳ ಶಾಸನಗಳು ಇಲ್ಲಿ ದೊರಕಿರುವುದು ಇದನ್ನು ಸಮರ್ಥಿಸುತ್ತದೆ. ತುಮ್ಷುಕ್ ಎಂಬಲ್ಲಿಯೂ ಇದೇ ರೀತಿಯ ವಾಸ್ತುಶಿಲ್ಪಕೃತಿಗಳು ದೊರಕಿವೆ. ಮಧ್ಯ ಏಷ್ಯದಲ್ಲಿನ ಕುಚಿದ್ವೀಪ ವಾಸ್ತುಶಿಲ್ಪ ಮತ್ತು ವರ್ಣಚಿತ್ರ ಕಲೆಗೆ ಹೆಸರಾದದ್ದು. ಕಿಜಿಲ್ ಮತ್ತು ಕುಂತುರು ಎಂಬಲ್ಲಿ ಪತ್ತೆಹಚ್ಚಲಾಗಿರುವ ಗುಹಾದೇಗುಲಗಳು ಭಾರತೀಯ ಗುಹಾದೇವಾಲಯಗಳನ್ನು ಹೋಲುತ್ತವೆ. 4ನೆಯ ಶತಮಾನದಿಂದ 8ನೆಯ ಶತಮಾನದವರೆಗೆ ಬಳಕೆಯಲ್ಲಿದ್ದ ಈ ಗುಹೆಗಳು ವರ್ಣಚಿತ್ರಕ್ಕೆ ಪ್ರಸಿದ್ಧವಾದವು. ವರ್ಣಚಿತ್ರದಲ್ಲಿ ಗುಪ್ತರ ಶೈಲಿಯ ಪ್ರಭಾವಗಳನ್ನು ವಿಶೇಷವಾಗಿ ಕಾಣಬಹುದು, ಬುದ್ಧನ ಜೀವನಕ್ಕೆ ಸಂಬಂಧಿಸಿದ ಕಥೆಗಳನ್ನು ಚಿತ್ರಿಸಿರುವ ಭಿತ್ತಿಚಿತ್ರಗಳು ಬಹು ಗಮನಾರ್ಹ. ಕುಂತುರುದಲ್ಲಿರುವ ಗುಹಾಲಯಗಳ ಭಿತ್ತಿ ಚಿತ್ರಗಳು ಕಿಜಿಲ್ ಚಿತ್ರಶೈಲಿಗೇ ಸೇರಿದವು, ಆದರೆ ಇಲ್ಲಿನ ವರ್ಣಚಿತ್ರಗಳು ಹೆಚ್ಚು ಶ್ರೀಮಂತವಾಗಿವೆ. ನಾಗರಾಜಗುಹೆ ಮತ್ತು ನಿರ್ವಾಣಗುಹೆಗಳಲ್ಲಿರುವ ಅಪ್ಸರೆಯರು, ನವಿಲುಗಳು ಮತ್ತು ಇತರ ಪ್ರಾಣಿಗಳು ಬಹಳ ಉತ್ತಮವಾಗಿವೆ 6ನೆಯ ಶತಮಾನದ ಅನಂತರದ ಇಲ್ಲಿನ ಗುಹೆಗಳಲ್ಲಿನ ವರ್ಣಚಿತ್ರಗಳಲ್ಲಿ ಚೀನೀ ಪ್ರಭಾವಗಳನ್ನು ಕಾಣಬಹುದು. ದುಲ್ದುರ್, ಅಖುರ್, ಸುಬಾಷಿ ಮತ್ತು ಹಿಸಾರ್ಗಳಲ್ಲಿ ದೊರಕಿರುವ ವಿಹಾರಗಳೂ ವರ್ಣಚಿತ್ರಗಳೂ ಕಿಜಿಲ್ ಶೈಲಿಗೇ ಸೇರಿದವು.

ಕರಶಹರ್ ಮತ್ತೊಂದು ಮುಖ್ಯ ಕಲಾಕೇಂದ್ರ ಇಲ್ಲಿಯೂ ಅನೇಕ ದೇವಾಲಯಗಳೂ ಬುದ್ಧನ ಶಿಲ್ಪಗಳಿರುವ ಗುಹೆಗಳೂ ದೊರಕಿವೆ. ಈ ಶಿಲ್ಪಗಳಲ್ಲಿ ಬುದ್ಧನ ಪರಿನಿರ್ವಾಣ ಮುಖ್ಯವಾದದ್ದು. ಇಲ್ಲಿನ ವರ್ಣಚಿತ್ರಗಳು ಉತ್ತಮವಾಗಿವೆ. ಇವು ಕಿಜಿಲ್ ಶೈಲಿಗಿಂತ ಭಿನ್ನ, ಚಿತ್ರಗಳಲ್ಲಿ ರೂಪಿತವಾಗಿರುವ ಮನುಷ್ಯರ ಭಾವಭಂಗಿಗಳೂ ಮುದ್ರೆಗಳೂ ಗಮನಾರ್ಹ, ಮೆದುಗಾರೆಯಿಂದ ವಿಗ್ರಹಗಳನ್ನು ತಯಾರು ಮಾಡಲು ಉಪಯೋಗಿಸುತ್ತಿದ್ದ ಜೇಡಿಮಣ್ಣಿನ ಸುಟ್ಟ ಅಚ್ಚುಗಳು ಇಲ್ಲಿ ದೊರಕಿವೆ. ಈ ವಿಗ್ರಹಗಳಲ್ಲೂ ಗುಪ್ತಶೈಲಿಯ ಪ್ರಭಾವವೇ ಹೆಚ್ಚು.

ತುರ್ಫಾನ್ ಮಿಕ್ಕ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಕಾಲ ಬೌದ್ಧಧರ್ಮದ ಪ್ರಭಾವಕ್ಕೆ ಒಳಗಾಗಿತ್ತು. ಇಲ್ಲಿ 15ನೆಯ ಶತಮಾನದಲ್ಲೂ ಬೌದ್ಧಧರ್ಮ ಪ್ರಚಲಿತವಿತ್ತೆಂದು ತಿಳಿದುಬರುತ್ತದೆ. ತುರ್ಫಾನಿನಲ್ಲಿ ದೇವಾಲಯಗಳು ಮಾತ್ರವಲ್ಲದೆ ಕೋಟೆಗಳು, ಅರಮನೆಗಳು, ಮನೆಗಳು,

ಬುರುಜುಗಳು ಮುಂತಾದವೂ ಬೆಳಕಿಗೆ ಬಂದಿವೆ. ತುರ್ಫಾನಿನ ಈ ಅವಶೇಷಗಳನ್ನು ಮುಖ್ಯವಾಗಿ ಇದಿಕುತ್ಶಹರಿ, ಖೊಜೊ, ಮುರ್ತುಕ್, ಬೆಜೆಕ್ಲಿಕ್ ಮುಂತಾದ ಕಡೆಗಳಲ್ಲಿ ನೋಡಬಹುದು. ವಾಸ್ತು ಕಲೆಯ ದೃಷ್ಟಿಯಿಂದ ಖೋಜೊ ಮತ್ತು ಇದಿಕುತ್ಶಹರಿ ಮುಖ್ಯ.

ಕೋಶ್ಗುಂಬಜ್ ವೃತ್ತಾಕಾರದ ತಲವಿನ್ಯಾಸ ಮತ್ತು ಗುಮ್ಮಟವನ್ನುಳ್ಳ ಒಂದು ಕಟ್ಟಡ ಇದರೊಳಗಿನ ಗೋಡೆಯ ಚಿತ್ರಗಳು ಬಹಳಮಟ್ಟಿಗೆ ನಾಶವಾಗಿವೆ. ಈ ಚಿತ್ರಗಳಲ್ಲಿ ಚೀನೀ ಪ್ರಭಾವವೇ ವಿಶೇಷ.

ಮಧ್ಯ ಏಷ್ಯದ ಭಾಗಗಳೇ ಆದರೂ ಇನ್ನೂ ಪುರ್ವಕ್ಕಿರುವ ಲೌ-ಲಾನ್, ತಾನ್-ಹುವಾಂಗ್ ಮತ್ತು ಕರಖೋಟೊಗಳಲ್ಲಿ ಉಪಲಬ್ಧವಾಗಿರುವ ಅವಶೇಷಗಳಲ್ಲಿ ಚೀನೀ ಪ್ರಭಾವಗಳೇ ವಿಶೇಷವಾಗಿ ಕಾಣಬರುತ್ತವೆ. ತೌ-ಲಾನಿನಲ್ಲಿ ದೊರಕಿರುವ ಕಂಚಿನ, ಚಿನ್ನದ ಮತ್ತು ಇತರ ಲೋಹಗಳ ಪಾತ್ರೆಗಳು ಕಲಾತ್ಮಕವಾದವು. ತಾನ್-ಹುವಾಂಗ್ ಗುಹೆಗಳಲ್ಲಿನ ವರ್ಣಚಿತ್ರಗಳು ಬುದ್ಧನ ಜೀವನಕ್ಕೆ ಸಂಬಂಧಿಸಿದವುಗಳಾದರೂ ಅವುಗಳಲ್ಲಿ ಕಾಣಬರುವ ಮುಖಲಕ್ಷಣ, ಅಲಂಕಾರಿಕ ನಮೂನೆಗಳು, ಪ್ರಾಣಿಗಳು ಮತ್ತು ವರ್ಣಸಂಯೋಜನೆ-ಇವೆಲ್ಲವೂ ಚೀನೀ ವರ್ಣಚಿತ್ರ ಶೈಲಿಗೆ ಸೇರಿದವು; ಇವು 5-8ನೆಯ ಶತಮಾನಗಳ ಅವಧಿಯಲ್ಲಿ ನಿರ್ಮಿತವಾದವು. ಒಟ್ಟಿನಲ್ಲಿ ಮಧ್ಯ ಏಷ್ಯದಲ್ಲಿ ಇಸ್ಲಾಮೀ ಕಲೆ ಪ್ರಾರಂಭವಾಗುವವರೆಗೂ ವಿಶೇಷವಾಗಿ ಭಾರತೀಯ ಶಿಲ್ಪಶೈಲಿಯಿಂದ ಪ್ರಭಾವಿತವಾದ ಕಲೆಯೇ ಪ್ರಚಲಿತವಾಗಿತ್ತೆಂದು ಗೊತ್ತಾಗುತ್ತದೆ.

ಉತ್ತರ ಏಷ್ಯ ಬದಲಾಯಿಸಿ

ಉತ್ತರ ಏಷ್ಯದಲ್ಲಿ ಸೈಬೀರಿಯ ಅತಿ ಮುಖ್ಯ ದೇಶ ಇದು 17ನೆಯ ಶತಮಾನದವರೆಗೆ ಪ್ರಾಗೈತಿಹಾಸಿಕ ಸಂಸ್ಕೃತಿಯ ನೆಲೆಯಾಗಿತ್ತು. ರಷ್ಯನ್ ವಸಾಹತುಗಳು ಇಲ್ಲಿ ಸ್ಥಾಪನೆಯಾಗುವವರೆಗೆ ಇಲ್ಲಿ ಯಾವ ಗಮನಾರ್ಹವಾದ ವಾಸ್ತುಶಿಲ್ಪಗಳೂ ನಿರ್ಮಿತವಾಗಲಿಲ್ಲ. ಸೈಬೀರಿಯದ ಪ್ರಾಗೈತಿಹಾಸಿಕ ಕಲೆಯ ವಿಚಾರವಾಗಿಯೂ ವಿಶೇಷವಾದ ಮಾಹಿತಿಗಳು ದೊರಕಿಲ್ಲ. (ಎ.ವಿ.ಎನ್.)

ಉಲ್ಲೇಖಗಳು ಬದಲಾಯಿಸಿ