ಎಪಾಕ್ಸಿ ರಾಳವು ಎಪಾಕ್ಸೈಡ್ ಪುಂಜಗಳ ಪಟುತ್ವದ ಆಧಾರದ ಮೇಲೆ ನಿರ್ಮಿತವಾದ ಉಷ್ಣದಿಂದ ಘನೀಭೂತವಾಗುವ (ಥರ್ಮೊಸೆಟ್ಟಿಂಗ್) ರಾಳ.

ಎಪಾಕ್ಸೈಡ್ ಗುಂಪಿನ ರಚನೆ

ಎಪಾಕ್ಸಿ ರಾಳಗಳ ಬಗೆಗಳು

ಬದಲಾಯಿಸಿ

೧. ಔದ್ಯೋಗಿಕವಾಗಿ ಎಪಿಕ್ಲೊರೋಹೈಡ್ರಿನ್ ಮತ್ತು ಬಿಸ್‌ಫೀನಾಲ್ A ಗಳ ಸಂಸ್ಕರಣದಿಂದ ತಯಾರಾಗುವ ರಾಳ ಹೆಚ್ಚು ಬಳಕೆಯಲ್ಲಿದೆ. ಆರೋಮ್ಯಾಟಿಕ್ ಸಂಯುಕ್ತವಾದ A ಬದಲು ಗ್ಲಿಸರಾಲ್ ಮುಂತಾದ ಆಲಿಫ್ಯಾಟಿಕ್ ಪಾಲಿಯಾಲುಗಳನ್ನು [ಒಂದಕ್ಕಿಂತ ಹೆಚ್ಚು ಸಂಖ್ಯೆಯ (OH) ಗುಂಪುಳ್ಳ ಆಲ್ಕೊಹಾಲ್] ಉಪಯೋಗಿಸಬಹುದು.

ಇಂಥ ರಾಳಗಳ ಕೊನೆಯಲ್ಲಿ ಗ್ಲೈಸಿಟೈಲ್ ಈಥರ್ –O—CH2-CH2O-CH2-- ಗಳಿರುತ್ತದೆ. ಇವುಗಳಲ್ಲಿ (OH) ಪುಂಜಗಳ ಸಂಖ್ಯೆಯೂ ಹೆಚ್ಚು. ಇವನ್ನು ಅಮೀನುಗಳಿಂದ ಪಕ್ವಮಾಡಬಹುದು (ಕ್ಯೂರ್).

೨. ಕುರ್ ಅಸಿಟಿಕ್ ಆಮ್ಲದಿಂದ (CH3CO.O.OH) ಉತ್ಕರ್ಷಿತವಾದ ಬಹುಓಲಿಫಿನುಗಳಿಂದ ಬಳಕೆಯಲ್ಲಿರುವ ಇನ್ನೊಂದು ಬಗೆಯ ಎಪಾಕ್ಸಿರಾಳಗಳು ತಯಾರಾಗುತ್ತವೆ. ಈ ಅಣುಗಳ ಕೊನೆಯಲ್ಲಿಯೂ ಒಳಭಾಗದಲ್ಲಿಯೂ ಅನೇಕ ಎಪಾಕ್ಸೈಡ್ ಗುಂಪುಗಳಿವೆ. ಇವನ್ನು ಅನ್‌ಹೈಡ್ರೈಡುಗಳಿಂದ (ತಮ್ಮ ಘಟಕಗಳಿಂದ ನೀರಿನ ಅಂಶಗಳನ್ನು ಕಳೆದುಕೊಂಡಿರುವ ಅಣುಗಳು) ಪಕ್ವಮಾಡಬಹುದಾದರೂ ಹೆಚ್ಚಿನ ಉಷ್ಣತೆಯನ್ನು ಒದಗಿಸಬೇಕಾಗುವುದು.

ಇತರ ವಿವರಗಳು

ಬದಲಾಯಿಸಿ

ಮಾರುಕಟ್ಟೆಯ ದೃಷ್ಟಿಯಿಂದ ಈ ಎರಡು ತರಹೆಯ ರಾಳಗಳನ್ನು ಅನೇಕ ಬಗೆಯ ಮಾರ್ಪಾಟುಗಳಿಗೆ ಗುರಿಮಾಡಲಾಗಿದೆ. ಈ ರಾಳಗಳಿಗೆ ಅಗ್ನಿ ನಿರೋಧಕ ಗುಣಗಳನ್ನು ಕೊಡಲು ಕ್ಲೋರೋಬಿಸ್‌ಫಿನಾಲ್ A ಯನ್ನು ಉಪಯೋಗಿಸುತ್ತಾರೆ. ಎಪಾಕ್ಸಿನೋವೋಲಾಕ್ ರಾಳಗಳನ್ನು ಎಪಿಕ್ಲೋರೋಹೈಡ್ರಿನ್ ಮತ್ತು ಫೀನಾಲ್ ಫಾರ್ಮಾಲ್ಡೀಹೈಡುಗಳ (ನೋವೋಲಾಕ್) ಪ್ರತಿಕ್ರಿಯೆಯಿಂದ ಪಡೆಯುತ್ತಾರೆ. ಈ ಬೃಹದಣುಗಳಲ್ಲಿ ಎಪಾಕ್ಸೈಡ್ ಗುಂಪು ಪುನರಾವೃತ್ತಿಗೊಳ್ಳುವುದರಿಂದ ಇವು ಎಪಿಕ್ಲೋರೋಹೈಡ್ರಿನ್ ರಾಳಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಉಷ್ಣವನ್ನು ತಡೆದುಕೊಳ್ಳಬಲ್ಲವು. ಆದ್ದರಿಂದ ಇವು ಉತ್ತಮದರ್ಜೆಯ ಅಂಟುಪದಾರ್ಥಗಳು (ಅಡ್ಹೇಸ್ಯೂಸ್).

ರಾಸಾಯನಿಕ ಪಟುತ್ವವುಳ್ಳ ಎಪಾಕ್ಸಿರಾಳಗಳು, ಸುಭದ್ರವಾದ ಅಡ್ಡಬಂಧಗಳಿರುವ (ಕ್ರಾಸ್ ಲಿಂಕೇಜಸ್), ಬಹ್ವಣು ಪಂಜರಗಳನ್ನು ರಚಿಸುತ್ತವೆಯಾದ್ದರಿಂದ ಇವು ಗಡುಸಾಗಿವೆ. ಉತ್ತಮದರ್ಜೆಯ ಅಂಟುವಸ್ತುಗಳು ರಾಸಾಯನಿಕ ಕ್ರಿಯೆಗಳಿಂದ ಹಾನಿಹೊಂದುವುದಿಲ್ಲ; ತುಕ್ಕು ಹಿಡಿಯುವುದಿಲ್ಲ. ಘನೀಭೂತವಾಗಿ ಪಕ್ವವಾಗುವುದರಿಂದ ಹೊರಹೊರಡುವ ವಸ್ತುಗಳ ಅಥವಾ ಅನಿಲಗಳ ಸಮಸ್ಯೆ ಇರುವುದಿಲ್ಲ. ಆದ್ದರಿಂದ ಎರಕಹೊಯ್ಯುವಾಗ ಶೂನ್ಯಪ್ರದೇಶಗಳ ಅಥವಾ ಅನಿಲದ ಗುಳ್ಳೆಗಳ ಬಂಧಕವಿಲ್ಲದೆ ದೊಡ್ಡ ಪ್ರಮಾಣದಲ್ಲಿ ಅಚ್ಚುಗಳನ್ನು ತಯಾರಿಸಬಹುದು. ಎರಕಹೊಯ್ದ ತರುವಾಯ ಕುಗ್ಗುವುದೂ ಇಲ್ಲ.

ಉಪಯೋಗಗಳು

ಬದಲಾಯಿಸಿ

ಮನೆಯಲ್ಲಿ ಉಪಯೋಗಿಸುವ ಸಲಕರಣೆಗೆ ಮೇಲ್ಮೈ ಲೇಪನೆಗೆ, ಅಂಟುಪದಾರ್ಥಗಳಂತೆ,[][][] ಟ್ಯಾಂಕುಗಳು, ಕೊಳವೆಗಳು, ವಿಮಾನದ ಭಾಗಗಳೂ-ಅದರಲ್ಲೂ ಲೋಹ, ಗಾಜು ಮತ್ತು ಪಿಂಗಾಣೀವಸ್ತುಗಳ-ಪದರಗಳನ್ನು ಜೋಡಿಸಲು, ಲೋಹಗಳನ್ನು ರೂಪಿಸುವ ಆಯುಧಗಳನ್ನು ಮತ್ತು ಅಚ್ಚುಗಳನ್ನು ಎರಕಹಾಕಲು, ವಿದ್ಯುತ್ ಸಲಕರಣೆಗಳನ್ನು ಹೊದಿಸಲು (ಎನ್‌ಕ್ಯಾಪ್ಸುಲೇಟ್) ಉಪಯೋಗಿಸುತ್ತಾರೆ.[] ಗಾಜಿನ ನೂಲೆಗಳ ಒತ್ತಾಸೆಯನ್ನು ಕೊಟ್ಟು ಒತ್ತಡ ಪಾತ್ರೆಗಳು (ಪ್ರೆಶ್ಯರ್ ವೆಸಲ್ಸ್), ರಾಕೆಟ್ಟಿನ ಕವಚ, ನೆಲಗಳ ಮತ್ತು ಗೋಡೆಗಳ ಮೇಲ್ಮೈ ವಸ್ತುವಾಗಿ ಮತ್ತು ನ್ಯೂಟ್ರಾನುಗಳಿಂದ ರಕ್ಷಿಸುವ ಕವಚವಸ್ತುವಾಗಿಯೂ ಉಪಯೋಗವಾಗುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Miturska, Izabela; Rudawska, Anna; Müller, Miroslav; Hromasová, Monika (January 2021). "The Influence of Mixing Methods of Epoxy Composition Ingredients on Selected Mechanical Properties of Modified Epoxy Construction Materials". Materials (in ಇಂಗ್ಲಿಷ್). 14 (2): 411. Bibcode:2021Mate...14..411M. doi:10.3390/ma14020411. ISSN 1996-1944. PMC 7830189. PMID 33467604.
  2. "US Patent Application for FIRE-RESISTANT GLAZING Patent Application (Application #20130196091 issued August 1, 2013) - Justia Patents Search". patents.justia.com. Retrieved 2022-04-27.
  3. Sukanto, Heru; Raharjo, Wijang Wisnu; Ariawan, Dody; Triyono, Joko; Kaavesina, Mujtahid (2021-01-01). "Epoxy resins thermosetting for mechanical engineering". Open Engineering (in ಇಂಗ್ಲಿಷ್). 11 (1): 797–814. Bibcode:2021OEng...11...78S. doi:10.1515/eng-2021-0078. ISSN 2391-5439. S2CID 235799133.
  4. May, Clayton A. (1987). Epoxy Resins: Chemistry and Technology (2nd ed.). New York: Marcel Dekker Inc. p. 794. ISBN 0-8247-7690-9.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: