ಎಂ.ಎಸ್.ಭಾರದ್ವಾಜ್
ಪರಿಚಯ
ಬದಲಾಯಿಸಿ'ಸ್ನೇಹಜೀವಿ ಶ್ಯಾಮಸುಂದರ್ ಭಾರದ್ವಾಜ್' - '`ನಿರಂಜನ''''
"ಸ್ನೇಹಜೀವಿ" ವಿಶೇಷಣ ಕಳುವಿನ ಮಾಲು. "ಕನ್ನಡಪ್ರಭ" ಸಂಪಾದಕರ ಶ್ರದ್ಧಾಂಜಲಿಯಿಂದ ಅನಾಮತ್ತಾಗಿ ಎತ್ತಿಕೊಂಡಿದ್ದು. "ಬರಿಗೈಯ ಸಿರಿವಂತ" ಎನ್ನಬಹುದು. "ಸಂಘಜೀವಿ" ಎಂದೂ ಕರೆಯಬಹುದು. ಆದರೆ, ಅಗಲಿದ ಭಾರದ್ವಾಜರಿಗೆ ಸಂಬಂಧಿಸಿ ಇಂಥ ಯಾವ ಬಣ್ಣನೆಯೂ "ಸ್ನೇಹಜೀವಿ" ಎಂಬ ಪದಕ್ಕೆ ಸರಿಹೋಗುವುದಿಲ್ಲ. 1945ರ ಬೇಸಿಗೆಯಲ್ಲಿ ಒಂದು ದಿನ "ಪ್ರಜಾಮತ-ಜನವಾಣಿ" ಕಾರ್ಯಾಲಯಕ್ಕೆ ಒಬ್ಬ ಎಳೆ ಯುವಕ ಬಂದರು. ತೆಳ್ಳಗೆ ಬೆಳ್ಳಗಿನ ಸ್ಫುರುದ್ರೂಪಿ. ಅರಳಿದ ಕಣ್ಣುಗಳು. ಸದಾ ಸನ್ನದ್ಧ ನಸುನಗೆ. ಮೈಸೂರಿನಿಂದ ಹೊಸ ಪದವೀಧರ. ಭಾರದ್ವಾಜ್ ಬೆಂಗಳೂರಿಗೆ ಬಂದದ್ದು ಪ್ರಜಾಮತ-ಜನವಾಣಿಗಳ ಸಂಸ್ಥಾಪಕ ಸಂಪಾದಕ ಬಿ.ಎನ್.ಗುಪ್ತರ ಭೇಟಿಗೆ. ಬರಿಯ ನೋಟದಿಂದಲೇ ವ್ಯಕ್ತಿಯ ಯೋಗ್ಯತೆ ಅಳೆಯುವ ಅನುಭವಿ ಗುಪ್ತರು. ಸಂಜೆ ದಿನಪತ್ರಿಕೆ "ಜನವಾಣಿ"ಯ ಸಂಪಾದಕ ವರ್ಗಕ್ಕೆ ಭಾರದ್ವಾಜ್ ಸೇರ್ಪಡೆಯಾದರು. ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳತ್ತ ಒಲವು. ವಿ.ಸೀ. ಆ ಎಳೆಯನ ಅಧ್ಯಾಪಕರು. ಭಾರತ ಸ್ವಾತಂತ್ರ್ಯ ಸಮರದ ನಿರ್ಣಾಯಕ ಘಟ್ಟ ಮುಗಿದು, ಕೊರಡು ಕೊನರುವ ವಾತಾವರಣ ಸುತ್ತಲೂ. ಸಹಪಾಠಿಗಳಿಯೋ, ಒಂದು ವರ್ಷ ಹಿಂದೆಯೋ, ಮುಂದೆಯೋ ಇದ್ದವರು ಅಸಾಧಾರಣ ವಿದ್ಯಾರ್ಥಿಗಳು: ಹೆಚ್.ವೈ.ಶಾರದಾ ಪ್ರಸಾದ್, ಎಂ.ವಿ.ಕೃಷ್ಣಸ್ವಾಮಿ, ಎನ್.ವಿ.ಕೃಷ್ಣಮೂರ್ತಿ, ಆರ್.ಕೆ.ಲಕ್ಷ್ಮಣ್, ಟಿ.ಎಸ್.ಸತ್ಯನ್, ಸಂಪೆಮನೆ ಕೃಷ್ಣಮೂರ್ತಿ, ಎಚ್.ಕೆ.ರಂಗನಾಥ್, ಎಸ್.ಅನಂತನಾರಾಯಣ ಮೊದಲಾದವರು. ಆ ಅವಧಿಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಾಗಿದ್ದವರು ಎಂ.ಬಿ.ಸಿಂಗ್. ಭಾರದ್ವಾಜರ ತಂದೆ ಮೃದು ಹೃದಯದ ನಿಷ್ಠಾವಂತ ಪೊಲೀಸ್ ಅಧಿಕಾರಿ ಜೆ.ಎಂ.ಮೂರ್ತಿಯವರಿಗೆ ತಮ್ಮ ಹಿರಿಯ ಮಗ ಸರಕಾರೀ ಅಧಿಕಾರಿಯಾಗಲೆಂಬ ಆಸೆ. ಆದರೆ ಭಾರದ್ವಾಜರ ಪೀಳಿಗೆ ಆದರ್ಶದ ಹುಚ್ಚಿನ ಗುಂಗಿನಲ್ಲಿ ಬೆಳೆದದ್ದು. ಪತ್ರಿಕೋದ್ಯಮಿಯಾಗಬೇಕೆನ್ನುವುದು ಯಾವುದೋ ಘಳಿಗೆಯಲ್ಲಿ ಮೂಡಿ ಅವರಲ್ಲಿ ಬಲಿತ ಹಂಬಲ. ಅದರ ಈಡೇರಿಕೆಯೇ ಸರಿ ಎಂದು ಛಲ ತೊಟ್ಟರು. ಆ ಹೊಸ ಬದುಕು ನಾಲ್ವತ್ತು ರೂಪಾಯಿ ಮಾಸಿಕ ವೇತನದಿಂದ ಆರಂಭ. ಆಗಲೇ ವಿವಾಹ. ಒಲವಿನ ಗೂಡಿನಲ್ಲಿ ಬದುಕು. ಅವರ ಧೈರ್ಯವೇ ಧೈರ್ಯ. ಈ ಲೇಖಕ ಆಗ ಪ್ರಜಾಮತ ದ ಸಹ ಸಂಪಾದಕ. ಈತನ ಮಟ್ಟಿಗೆ ಅದು ಪ್ರಯೋಗಶಾಲೆಯಾಗಿತ್ತು. ಪತ್ರಿಕೆಯ ಪ್ರಸಾರ ಹೆಚ್ಚಿತು - 6 ಸಾವಿರದಿಂದ 13 ಸಾವಿರಕ್ಕೆ. ಪತ್ರಿಕೆ "ಕೆಂಪ"ಗಿದೆ ಎಂದು ಗುಪ್ತರೊಡನೆ ದೂರಿದವರುಂಟು. ಪ್ರಸಾರ ಸಂಖ್ಯೆಯನ್ನು ಗಮನಿಸುತ್ತಲೇ ಇದ್ದ ಗುಪ್ತರು ಕಿವುಡರಾದರು. ಪ್ರೇಮದ ರಾಸಾಯನಿಕ ಕ್ರಿಯೆ ಏನು? ಇಷ್ಟು ವಯಸ್ಸಾದ ಮೇಲೂ ನನಗೆ ಅದು ಅರ್ಥವಾಗಿಲ್ಲ. ಸ್ನೇಹದ ವಿಷಯವೂ ಹೆಚ್ಚು ಕಡಿಮೆ ಅಷ್ಟೆ. ಭಾರದ್ವಾಜರ ಬದುಕಿನ ಗಟ್ಟಿ ದ್ರವ್ಯ ಮಾನವೀಯತೆ. ಅಂಥವರೊಡನೆ ಗೆಳೆತನವಲ್ಲದೆ ಬೇರೆ ಯಾವ ಸಂಬಂಧವೂ ಅಸಾಧ್ಯ. ಸಹ ಸಂಪಾದಕನ ಜತೆಗೆ ದುಡಿಯಲು ಇವರು ದೊರೆತರೆ? ಗುಪ್ತರು "ಆಗಲಿ" ಎಂದರು. ಸೂಕ್ಷ್ಮಗ್ರಾಹಿ ಭಾರದ್ವಾಜರು ಎರಡೇ ವಾರಗಳಲ್ಲಿ ಸಾಪ್ತಾಹಿಕದ ಅಂಗರಚನೆಯನ್ನೂ, ನಾಡಿ ಮಿಡಿತವನ್ನೂ ಅರಿತರು. ಈ ಲೇಖಕ ಬೇರೆ ಊರಿಗೆ ಹೋದ, ಅಪ್ಪಟ ಕೆಂಪು ಪತ್ರಿಕೆಯ ಸಂಪಾದಕನಾಗಲು. ಭಾರದ್ವಾಜರ ಸಾಮರ್ಥ್ಯದ ವಿಷಯದಲ್ಲಿ ಗುಪ್ತರಿಗೆ ಗಾಢ ನಂಬಿಕೆ. 1946-1947 ದೇಶದ ಇತಿಹಾಸದಲ್ಲಿ ಸಂಧಿಕಾಲ. ದಿಲ್ಲಿ-ಸಿಮ್ಲಗಳಲ್ಲಿ ಅಧಿಕಾರದ ಹಸ್ತಾಂತರದ ಬಗ್ಗೆ ಸೂಕ್ಷ್ಮ ಸ್ವರೂಪದ ಮಾತುಕತೆಗಳು. ಅದನ್ನು "ಜನವಾಣಿ"ಗಾಗಿ ವರದಿ ಮಾಡಲು ಭಾರದ್ವಾಜರನ್ನು ಗುಪ್ತರು ದಿಲ್ಲಿಗೆ ಕಳಿಸಿದರು. ಇಂಥ ವಿಶೇಷ ಸುದ್ದಿಗಾರಿಕೆ ಕನ್ನಡದಲ್ಲೇ ಪ್ರಪ್ರಥಮ. ಗಾಂಧೀಜಿಯ ಶಿಷ್ಯರು ಗುರುವಿಗೆ ತಿರುಮಂತ್ರ ಹೇಳಿದರು. ದೇಶದ ವಿಭಜನೆಗೆ ಒಪ್ಪಿದರು. ಮತೀಯ ಗಲಭೆಗಳ ದಳ್ಳುರಿಯಲ್ಲಿ ಭಾರತ ಬೆಂದಿತು. ಆರಿಸಲು ಇದ್ದುದು ಏಕಸದಸ್ಯ ಅಗ್ನಿಶಾಮಕ ದಳ, ಖಿನ್ನ ಮನಸ್ಕ ಗಾಂಧೀಜಿ. ಅವರು ಧಗಧಗಿಸುತ್ತಿದ್ದ ನವಖಲಿಗೆ ಯಾತ್ರೆ ಹೊರಟರು. ಆ ಐತಿಹಾಸಿಕ ಯಾತ್ರೆಯನ್ನು ಕುರಿತು ಕನ್ನಡದಲ್ಲಿ ವರದಿ ಮಾಡಿದವರು ಭಾರದ್ವಾಜ್.
ಪತ್ರಿಕೋದ್ಯೋಗಿ ಭಾರದ್ವಾಜರಿಗೆ ಮುಂದಿನ ಬದುಕು ರಾಜಮಾರ್ಗವಾಗಬೇಕಿತ್ತು. ಆಗಲಿಲ್ಲ. ಉದ್ದಕ್ಕೂ ಕಾಲ್ತೊಡಕು. ಗುಪ್ತರು ತಮ್ಮ ಪತ್ರಿಕೆಗಳನ್ನು ಮಾರಿದರು. ಭಾರದ್ವಾಜರು ಎಚ್.ಕೆ.ವೀರಣ್ಣಗೌಡರ ನೇತೃತ್ವದಲ್ಲಿ ನಡೆಯುತ್ತಿದ್ದ "ವಾರ್ತಾ" ದೈನಿಕ "ಚಿತ್ರಗುಪ್ತ" ಸಾಪ್ತಾಹಿಕಗಳಲ್ಲಿ ದುಡಿಯಲು ಹೊರಟರು. ಅಲ್ಲಿ ಅವರ ನೇಹಿಗರು ನಿಷ್ಠಾವಂತ ಜಿ.ನಾರಾಯಣ ಮತ್ತು ಹವ್ಯಾಸೀ ನಟ ಶ್ರೇಷ್ಠ ಬಿ.ಕೃಷ್ಣ. ಮುಂದೆ "ಚಿತ್ರಗುಪ್ತ" ಪಿ.ಆರ್.ರಾಮಯ್ಯನವರ "ತಾಯಿನಾಡು" ಕಾರ್ಯಾಲಯಕ್ಕೆ ಬಂತು. ಅದಾದ ಮೇಲೆ ಸ್ವತಂತ್ರ ಅಸ್ತಿತ್ವ. ಎಲ್ಲ ಹೊಣೆಯೂ ಭಾರದ್ವಾಜರ ಮೇಲೆ. ಆಗ ಅವರ ವಿಶಿಷ್ಠ ಸ್ನೇಹಿತರು ವಶಿಷ್ಟ್ ಮತ್ತು ವಿ.ಎಸ್.ಕೃಷ್ಣ ಅಯ್ಯರ್. ಬರಹಗಾರರ ವಲಯದಲ್ಲಿ ರಾಜಕಾರಣಿಗಳ ಕ್ಷೇತ್ರದಲ್ಲಿ ಸಮಾಜದ ಗಣ್ಯ ವರ್ತುಲದಲ್ಲಿ ವ್ಯಾಪಕ ಸಂಪರ್ಕ. ಆದರೆ ವ್ಯವಹಾರ ಜ್ಞಾನ ಸವಾಲೆಸೆಯಿತು. ಮನೆಯಲ್ಲಿ ತುತ್ತಿನ ಚೀಲ ಬರಿದು. ಅಚ್ಚುಕೂಟದ ಕೆಲಸಗಾರರಿಗೆ ಸಂಪಾದಕ ಮಂಡಳಿಯ ಸದಸ್ಯರಿಗೆ (ವಿ.ಆರ್.ಶ್ಯಾಮ್, ವೆಂಕಟರಾಜ ಪಾನಸೆ, ಶೇಷನಾರಾಯಣ) ಪ್ರತಿ ತಿಂಗಳೂ ಸಾಲ ಮಾಡಿಯೇ "ವೇತನ ಸಂದಾಯ". "ಪ್ರಜಾವಾಣಿ" ಸಂಪಾದಕ ಟಿಎಸ್ಸಾರ್ ನೆರವಾಗಬೇಕೆಂದು ಮುಂದಾದರು. ಸಹಕಾರ ತತ್ವದ ಮೇಲೆ ಪತ್ರಿಕೆ ನಡೆಸಿದರೆ ಹೇಗೆ, ಯಾಕಾಗಬಾರದು? ರೂಪಿಸಿದ ಸಹಕಾರ ಸಂಸ್ಥೆಯನ್ನು ಕರ್ನಾಟಕದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಉದ್ಘಾಟಿಸಿದರು. ಸಹಕಾರೀ ಆಂದೋಲನ ನಮ್ಮಲ್ಲಿ ಬಲಿಯುವುದು ಕಷ್ಟ. ಉಗ್ರ ಪರೀಕ್ಷೆಗೊಳಗಾದ ಭಾರದ್ವಾಜರು ಸೋತರು.
ದುರಂತ ನಾಟಕವೇ ಆದರೂ ಅವರು ವಹಿಸಿದ್ದು ನಾಯಕ ಪಾತ್ರ. ಕಂಪನಿ ಮುಳುಗಿದ ಮೇಲೆ ಅನಿವಾರ್ಯವಾಗಿ ಅವರು ಸೇರಿದ್ದು ಸರಕಾರೀ ಸರ್ಕಸ್ಸನ್ನು. ಅಲ್ಲಿ ಮೆರೆಯುವ ಪಾತ್ರಧಾರಿಯಲ್ಲ, ಮೆರಸುವ ಆಡಳಿತಗಾರ. ಅಲ್ಲಿ ಅವರು ಕೇಂದ್ರ ವಾರ್ತಾ ಪ್ರಸಾರ ಸಚಿವ ಖಾತೆಯಲ್ಲಿ ಅಧಿಕಾರಿ. ಮೊದಲು ಬೆಂಗಳೂರಿನಲ್ಲಿ, ಬಳಿಕ ದಿಲ್ಲಿಯಲ್ಲಿ. ಪ್ರೆಸ್ ಇನ್‍ಫರ್‍ಮೇಶನ್ ಬ್ಯೂರೋದಲ್ಲಿ, ಆಕಾಶವಾಣಿಯಲ್ಲಿ, ಪ್ರಕಾಶನ ವಿಭಾಗದಲ್ಲಿ. ಮರಳಿ ಕರ್ನಾಟಕಕ್ಕೆ ಕ್ಷೇತ್ರ ಪ್ರಸಾರ ವ್ಯವಸ್ಥೆಯ ಪ್ರಾದೇಶಿಕ ಅಧಿಕಾರಿಯಾಗಿ. ಕಾಯಕವೇ ಕೈಲಾಸ. ದುಡಿಯುತ್ತಿದ್ದಾಗಲೇ ಮೆದುಳಿನ ರಕ್ತಸ್ರಾವ. ಮೆಚ್ಚುಗೆಯ ಹೀರೋ ಪಾತ್ರದ ಧೀಮಂತ ಜೀವವನ್ನು ಸ್ನೇಹ ವಲಯದ ಪ್ರೇಕ್ಷಕರೆದುರು ಸುಮಾರು ಮೂರು ದಿನ ಹಾಗೆಯೇ ಬಿಟ್ಟು ಕೊನೆಯ ಬಿಳಿ ಪರದೆ, ಬೇಕೋ ಬೇಡವೋ ಎನ್ನುವಂತೆ, ಇಳಿಯಿತು. ೦೦ ೦೦ ೦೦ ೦೦ ೦೦ ೦೦ ಕಷ್ಟಪಟ್ಟು ಇಷ್ಟು ಬರೆದದ್ದಾಯಿತು. ಕಷ್ಟಕ್ಕೆ ಕಾರಣ - ಈ ಲೇಖಕನಿಗೂ ಭಾರದ್ವಾಜರಿಗೂ ಇದ್ದ ಆತ್ಮೀಯ ಬಂಧುತ್ವ. ಯಾವುದೇ ತಾತ್ವಿಕ ಪ್ರಣಾಳಿಕೆಗೆ ಸಂಬಂಧಿಸದ ಶುದ್ಧ ಮಾನವೀಯ ಬಂಧುತ್ವ. ಈ ಕಷ್ಟ ನನ್ನೊಬ್ಬನದೇ ಅಲ್ಲ. ಕೆ.ಬಿ.ಶ್ರೀನಿವಾಸನ್, ಎಸ್.ವಿ.ಜಯಶೀಲರಾವ್, ಹೆಚ್.ಆರ್.ನಾಗೇಶರಾವ್, ಶಾ.ಬಾಲುರಾವ್, ಸೇವ ನಮಿರಾಜಮಲ್ಲ, ಸಿ.ಹೆಚ್.ಪ್ರಹ್ಲಾದರಾವ್, ಕೆ.ಎಸ್.ನಿಸಾರ್ ಅಹಮದ್, ಎಸ್.ಎಲ್.ಭೈರಪ್ಪ, ಎಂ.ಹೆಚ್.ಕೌಜಲಗಿ, ವಿ.ಎಂ.ಇನಾಮದಾರ್, ಬಸವರಾಜ್ ಇನ್ನೂ ಹಲವರು - ಹಲವರು ಸ್ನೇಹಜೀವಿ ಭಾರದ್ವಾಜರನ್ನು ಕುರಿತು ಬರೆದರೂ ಕಷ್ಟ ಅನುಭವಿಸಲೇಬೇಕು. ಬಹಳವೆಂದರೆ ಸ್ವಲ್ಪ ಹೆಚ್ಚು, ಸ್ವಲ್ಪ ಕಮ್ಮಿ. ಒಂದು ಮಾತು. ಬದುಕಿನ ಉದ್ದಕ್ಕೂ ಅವರು ಕಹಿಯನ್ನೇ ಉಂಡರು ಎನ್ನುವುದು ಸರಿಯಲ್ಲ. ತಡವಾಗಿಯಾದರೂ ಬೆರಗು ನೋಟ ಬೀರುತ್ತ ಆಗಮಿಸಿದ ಮಗಳು ಮಾಯಾ. ಅವಳನ್ನು ಅನುಸರಿಸಿ ಬಂದ ತಂಗಿ ಮಮತಾ ಭಾರದ್ವಾಜ ದಂಪತಿ ಪಾಲಿಗೆ ಹೂಮಳೆ. ಗಂಡನ ಜೀವನದೊಡನೆ ಪೂರ್ಣ ಸಾಮರಸ್ಯ ಸಾಧಿಸಿ ಜೀವ ತೇಯ್ದ ವೃಂದಾದೇವಿಗೆ ಮಕ್ಕಳ ಆಗಮನದೊಂದಿಗೆ ತಾವು ಸಲ್ಲಿಸುವ ಸೇವೆಯ ಪರಿಧಿ ಹೆಚ್ಚು ವಿಸ್ತಾರಗೊಂಡಿತೆಂದು ಹರ್ಷ. ದಿಲ್ಲಿಯಲ್ಲಿ ಭಾರದ್ವಾಜರು ಕನ್ನಡ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದರು. ಆ ನಗರದಲ್ಲಿ ಅವರನ್ನು ಚಕಿತಗೊಳಿಸಿದ ಒಂದು ಸಂಗತಿ ಪತ್ನಿ ವೃಂದಾ ಬರಹಗಾರ್ತಿಯಾದದ್ದು. ಹಿಂದೆ ವಿಫುಲ ಪತ್ರಿಕಾ ಬರವಣಿಗೆಯ ಮಧ್ಯೆ ಒಂದು ಸ್ವತಂತ್ರ ಕಾದಂಬರಿಯನ್ನು ಭಾರದ್ವಾಜರು (ಗೆಳತಿಯ ಉಡುಗೊರೆ) ಬರೆದಿದ್ದರು. ಶರಚ್ಚಂದ್ರರ ಒಂದೆರಡು ಕಾದಂಬರಿಗಳನ್ನು ಕನ್ನಡಿಸಿದ್ದರು. ಮುಂದುವರಿಸದೆ ಬಿಟ್ಟ ಆ ಕೆಲಸವನ್ನು ಈಗ ವೃಂದಾ ಕೈಗೆತ್ತಿಕೊಂಡಂತಿತ್ತು. "ಕರ್ಮವೀರ"ದಲ್ಲಿ ಅವರ ಕೆಲವು ಕತೆಗಳು ಪ್ರಕಟವಾದವು. ಇತ್ತೀಚೆಗೆ ತಂದೆಗೂ ತಾಯಿಗೂ ವಿಶೇಷ ತೃಪ್ತಿ ನೀಡಿದ್ದು - ಮಾಯಾ (ಪತ್ರಕರ್ತೆ ಮಾಯಾ ಜಯದೀಪ್) ಪತ್ರಿಕೋದ್ಯಮದ ಬಗೆಗೆ ತೋರಿದ ಒಲವು ಮಮತಾ ಚಿತ್ರ ಕಲೆಯ ಜತೆಗೆ ಲೇಖನ ಕಲೆಯನ್ನೂ ಮೈಗೂಡಿಸಿಕೊಂಡದ್ದು. ೦೦ ೦೦ ೦೦ ೦೦ ೦೦ ೦೦ ಕೊನೆಯದಾಗಿ ಹೇಳಲೇಬೇಕಾದದ್ದು: ಈ ಲೇಖಕ 1948-49-50 ಈ ಮೂರು ವರ್ಷ "ಭೂಗತ"ನಾಗಿದ್ದ. ಆ ಅವಧಿಯಲ್ಲಿ ಒಂದು ವರ್ಷವನ್ನು ಆತ ಬೆಂಗಳೂರಿನಲ್ಲಿ ಕಳೆದಿದ್ದ. ಆಗಿನ "ಕಳ್ಳವಾಸ"ದ ವೇಳೆ ಹಲವು ಸಲ ಭಾರದ್ವಾಜರ ಮನೆಯಲ್ಲಿ ಆಶ್ರಯ ದೊರೆತಿತ್ತು. ತಮಗಾಗಿರಬಹುದಾದ ಮುಜುಗರವನ್ನು, ಅನನುಕೂಲತೆಯನ್ನು ಅವರು ಒಮ್ಮೆಯೂ ವ್ಯಕ್ತಪಡಿಸಿದವರಲ್ಲ. ಇರುಳು ಸೈಕಲನ್ನೇರಿ ಹೊರಡುವವರೆಗೂ ಈ ಲೇಖಕನಿಗೆ ನೀಡುತ್ತಿದ್ದ ರಕ್ಷಣೆಯಲ್ಲಿ ಆ ಸ್ನೇಹಜೀವಿಯ ಪ್ರಿಯ ಸೋದರರೂ (ನಾರಾಯಣ್, ಕೇಶವ್, ದ್ವಾರಕನಾಥ್) ಶಾಮೀಲಾಗಿರುತ್ತಿದ್ದರು. 1951ರಲ್ಲಿ ಹೊರಗೆ ಬಂದೆ. "ಬೇಡಿ" ಕಾದಿತ್ತು. ವಿಚಾರಣೆಯ ನಾಟಕ ಮುಗಿಸಿ ಬರವಣಿಗೆಯ ಬದುಕಿಗೆ ಮರಳಿದೆ. ಕಥೆ ಬರೆಯುತ್ತಿದ್ದ ಒಬ್ಬಳು ಹುಡುಗಿಯಲ್ಲಿ ಅನುರಕ್ತನಾದೆ. ಐದು ವರ್ಷ ಕಾದ ಮೇಲೆ "ಕಳ್ಳ ಮದುವೆ", ಗೋಪ್ಯದಲ್ಲಿ ಹುಡುಗಿಯನ್ನು "ಧಾರೆ" ಎರೆದು ಕೊಡುವವರು ಯಾರು? ಸ್ನೇಹಜೀವಿಗಳಾದ ವೃಂದಾ ಮತ್ತು ಭಾರದ್ವಾಜ್. ಆ ನನ್ನ ಸಂಬಂಧಿ ಈಗ ಇಲ್ಲ. ನನಪುಗಳು ಇವೆ-ಧಂಡಿಯಾಗಿ. ಅವು ಉರುಳುತ್ತ ಹೋಗುತ್ತವೆ. ಪೀಳಿಗೆಯಿಂದ ಪೀಳಿಗೆಗೆ, ಕಾಲದ ಹೆಬ್ಬಂಡೆ ಅಡ್ಡಗಟ್ಟುವವರೆಗೂ. (ಕೃಪೆ: `ನಿರಂಜನ', ಕನ್ನಡಪ್ರಭ ಪತ್ರಿಕೆ, ದಿನಾಂಕ 02-08-1981)
ಸಂಪಾದಕರ ಮೇಜಿನಿಂದ
ಬದಲಾಯಿಸಿಚಿತ್ರಗುಪ್ತ ಪತ್ರಿಕೆಗಾಗಿ ಎಂ.ಎಸ್.ಭಾರದ್ವಾಜ್ ಬರೆಯುತ್ತಿದ್ದ ಅಂಕಣದ ಹೆಸರು `ಸಂಪಾದಕರ ಮೇಜಿನಿಂದ'. ಮಿತ್ರ ಹೆಚ್.ಆರ್.ನಾಗೇಶರಾವ್ ಅವರ ಬಗ್ಗೆ ಈ ಸಂಪಾದಕೀಯಗಳಲ್ಲಿನ ಉಲ್ಲೇಖ ಹೀಗಿದೆ: ’ಚಿತ್ರಗುಪ್ತ’ಕ್ಕಾಗಿ ಬರೆಯಲು ಮುಂದೆ ಬಂದಿದ್ದಾರೆ ಇನ್ನೊಬ್ಬ ಮಿತ್ರರು ಶ್ರೀ ಹೆಚ್.ಆರ್.ನಾಗೇಶರಾವ್- ವಿನೋದ ವಿಹಾರಕ್ಕೆ ಲೇಖನಗಳನ್ನು ಒದಗಿಸುತ್ತಿರುವ ’ಎನ್‍ಎ’. ’ತಾಯಿನಾಡು’ ಪತ್ರಿಕೆಯಲ್ಲಿ 8-10 ವರ್ಷಗಳಿಂದಲೂ ಶ್ರದ್ಧೆಯಿಂದ ದುಡಿಯುತ್ತಿರುವ ಈ ಮಿತ್ರರು ಪತ್ರಿಕೋದ್ಯೋಗಿಗಳ ಸಂಘದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ತಮಗೆ ಒಪ್ಪಿಸಿದ ಕೆಲಸವನ್ನು ಪೂರ್ಣ ಜವಾಬ್ದಾರಿಯಿಂದ ನಿರ್ವಹಿಸುವವರೆಗೂ ಇವರ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅಂತೆಯೇ ಇವರ ಪಾಲಿಗೆ ಬರುವ ಜವಾಬ್ದಾರಿಗಳೂ ಹೆಚ್ಚು. ಆಸಾಮಿಯನ್ನು ನೋಡಿದರೆ ಮಾತ್ರ ಕಣ್ಣು ಕಣ್ಣು ಬಿಡಬೇಕಾದೀತು. ಅಂಥ ಕಡ್ಡಿ ಪೈಲ್ವಾನರು! ಲೇಖನಗಳ ಮಟ್ಟಿಗಷ್ಟೇ ಅಲ್ಲ, ತಮ್ಮ ಪೈಲ್ವಾನಗಿರಿಯಲ್ಲೂ ಎನ್‍ಎ ಮತ್ತು ಎಸ್.ಕೆ.ನಾಡಿಗ್ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಇಬ್ಬರ ಲೇಖನಗಳೂ ’ಚಿತ್ರಗುಪ್ತ’ದ ವಿನೋದ ವಿಹಾರಕ್ಕೆ ಮೀಸಲು. [3ನೇ ಜೂನ್ 1956] 00 00 00 00 "ನಮ್ಮ ಶುಭಾಶಯಗಳ ಸಂಕೇತವಾಗಿ ಈ ಚೆಕ್ ಸ್ವೀಕರಿಸಿ", ಎಂದು ಹೇಳಿ ತಾಯಿನಾಡು ಉಪಸಂಪಾದಕರಾದ ಶ್ರೀ ಹೆಚ್.ಆರ್.ನಾಗೇಶರಾಯರು [ಎನ್‍ಎ] ಮುಂದೆ ಬಂದರು. "ನೀವು ಲೇಖನಗಳನ್ನು ಬರೆಯುತ್ತಿದ್ದೀರಿ. ಹೇಗಿದ್ದರೂ ನಿಮಗೊಂದು ಪ್ರತಿ ಬಂದೇ ಬರುತ್ತದೆ. ನೀವೇಕೆ ಚಂದಾಹಣ ಕೊಡಬೇಕು. ಬೇಡಿ", ಎಂದು ಹೇಳಿದರೂ ಒಪ್ಪದೇಹೋದ ವ್ಯಕ್ತಿ ಅವರು. ಹೀಗಾಗಿ, ಚಿತ್ರಗುಪ್ತದ ಹೊಸ ರಸೀದಿ ಪುಸ್ತಕದಲ್ಲಿ ಅವರದೇ ಮೊದಲ ಹಾಳೆ. [10ನೇ ಜೂನ್ 1956] ‘ಚಿತ್ರಗುಪ್ತ’ದ ವಾಚಕರಿಗೆ ‘ಎನ್‍ಎ’ ಎಂಬ ಹೆಸರು ಸುಪರಿಚಿತವಾದುದು. ಆ ‘ಎನ್‍ಎ’ಯವರೇ ಹೆಚ್.ಆರ್.ನಾಗೇಶರಾವ್. ಅವರ ಬರಹಗಳಲ್ಲಿ ನಾವು ಕಾಣುವುದು ಶುದ್ಧವಾದ ಲಘುಹಾಸ್ಯ. ಅದರೊಂದಿಗೆ ವಾಸ್ತವತೆಯ ವಿಡಂಬನೆಯನ್ನು ನೋಡಬಹುದು. ಆ ಹಾಸ್ಯದ ಹಿಂದೆ ಸತ್ಯದ ಚಿತ್ರಣವೂ ಇರಬಹುದು. ‘ರೆಡ್ ಟೇಪಿಸಂ ಗೆಲ್ಗೆ’, ‘ಮುಂದಿನ ನೆಹ್ರೂ ನಾನೇ’, ‘ಅಖಿಲ ಭಾರತ ಅಳಿಯಂದಿರ ಸಮ್ಮೇಳನ’ ಇವುಗಳನ್ನು ತಕ್ಷಣವೇ ಇಲ್ಲಿ ಹೆಸರಿಸಬಹುದು. ಪುಟ್ಟ ಪುಸ್ತಕದ ಹೆಸರು ‘ನಗೆ-ಬಾಂಬು’ ಎಂದಿದ್ದರೂ ಇಲ್ಲಿರುವುದು ಹುಚ್ಚು ‘ನಗೆ-ಬಾಂಬು’ ಅಲ್ಲ. ಲೇಖನಗಳಿಗೊಂದು ಗಾಂಭೀರ್ಯವಿದೆ. ಕೆಲವು ಬಲು ಕ್ರೂರವಾದವು. ಅಂಥವಕ್ಕೆ ‘ನೀವೆಂಥ ಗಾಂಧಿ ಭಕ್ತರು?’ ಎಂದು ನೋಡಬೇಕು. ‘ನಿಮ್ಮ ಹೆಂಡತಿಯೊಡನೆ ಜಗಳ ಆಡಿ!’ ಒಂದು ಉತ್ತಮ ಲಘು ಹಾಸ್ಯದ ಬರಹ. ಗಾಳಿ ಬಿಟ್ಟರೆ ತೂರಿಕೊಂಡು ಹೋಗುವಂತೆ ಲಘುವಾಗಿರುವ ‘ಎನ್‍ಎ’ ತಾವೊಬ್ಬ ಉತ್ತಮ ಲಘು ಲೇಖಕರೆಂಬುದನ್ನೂ ಎಂದೋ ತೋರಿಸಿ ಕೊಟ್ಟಿದ್ದಾರೆ. ಅವರಿಂದ ನಮ್ಮ ಲಘು ಸಾಹಿತ್ಯಕ್ಕೆ ಇನ್ನು ಹೆಚ್ಚಿನ ಹಾಗೂ ಉತ್ತಮ ಮಟ್ಟದ ಸೇವೆ ಸಲ್ಲಬೇಕಾಗಿದೆ. ತಮ್ಮ ಪಾಲಿನ ಈ ಕಾರ್ಯವನ್ನು ಅವರು ಪೂರೈಸುತ್ತಾರೆಂದೂ ನಾವು ನಂಬಿದ್ದೇವೆ. - ಎಂ.ಎಸ್.ಭಾರದ್ವಾಜ್ `ಪುಸ್ತಕ ಪ್ರಪಂಚ’ ಅಂಕಣ ‘ಚಿತ್ರಗುಪ್ತ’ [14-4-1957]