ಪಿ.ಆರ್.ರಾಮಯ್ಯ ಪತ್ರಿಕೋದ್ಯಮಿ, ‘ತಾಯಿನಾಡು’ ಪತ್ರಿಕೆಯ ಸಂಪಾದಕರು.

ಜನನ, ವಿದ್ಯಾಭ್ಯಾಸ ಬದಲಾಯಿಸಿ

ಇವರು ೧೮೯೪ರಲ್ಲಿ ಪಾಲಹಳ್ಳಿಯಲ್ಲಿ ಜನಿಸಿದರು. ಇವರ ಶಿಕ್ಷಣ ಮೈಸೂರು ಹಾಗು ಕಾಶಿಯಲ್ಲಿ ನಡೆಯಿತು.

ಪತ್ರಿಕೋದ್ಯಮ ಬದಲಾಯಿಸಿ

೧೯೨೭ರಲ್ಲಿ ಇವರು ತಾಯಿನಾಡು ಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿದ್ದರು.

ಸಮದರ್ಶಿ, ಪತ್ರಿಕಾ ಭೀಷ್ಮ ಬದಲಾಯಿಸಿ

ಸಮದರ್ಶಿ ಪತ್ರಿಕಾ ಭೀಷ್ಮ - ಹೆಚ್.ಆರ್.ನಾಗೇಶರಾವ್ [ಪಿ.ಆರ್.ರಾಮಯ್ಯ ಅವರ ಜನ್ಮ ಶತಾಬ್ದಿ ಸ್ಮರಣ ಸಂಚಿಕೆಗೆಂದು ನಾಗೇಶರಾವ್ ಅವರು ಬರೆದ ಲೇಖನವಿದು. ಅಂದಿನ ತಾಯಿನಾಡು ದಿನಗಳನ್ನು ಈ ಲೇಖನ ನೆನಪಿಸುತ್ತದೆ]

‘ತಾಯಿನಾಡು’ ಪತ್ರಿಕೆಯ ನಾಮ ಲಾಂಛನ ಬದಲಾಯಿಸಿ

"ಸುಖ ದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ| ತತೋ ಯುದ್ಧಾಯ ಯುಜಸ್ವ ನೈವಮ್ ಪಪಮವಾಪ್ಸ್ಯಸಿ ||ಗೀತಾ||" - ಇದು ‘ತಾಯಿನಾಡು’ ಪತ್ರಿಕೆಯ ನಾಮ ಲಾಂಛನದಡಿ ಮುಖಪುಟದಲ್ಲಿ ಮುದ್ರಿತವಾಗುತ್ತಿದ್ದ ಶ್ಲೋಕ ವಾಕ್ಯ; ಇದೇ ಕೀರ್ತಿಶೇಷ ಪಿ.ಆರ್.ರಾಮಯ್ಯ ನವರನ್ನು ಎಂತಹ ಸತ್ವಪರೀಕ್ಷೆ-ಸಂಕಷ್ಟ-ಸವಾಲುಗಳ ಎದುರಿನಲ್ಲೂ ಧೃತಿಗೆಡದೆ ಮುನ್ನಡೆಸುತ್ತಿದ್ದ ನಿಷ್ಕಾಮ ಕರ್ಮಸೂತ್ರ. ಜತೆಗೆ "ವಂದೇ ಮಾತರಮ್" ಎಂಬ ದೇಶಭಕ್ತಿ ಘೋಷವೂ ‘ತಾಯಿನಾಡು’ ಅಂಕಿತದ ಮೇಲೆ ಅನ್ವರ್ಥವಾಗಿ ರಾರಾಜಿಸುತ್ತಿತ್ತು.

ಸಾರ್ವಜನಿಕ ಕುಂದುಕೊರತೆಗಳ ಪ್ರಚಾರಕನಾಗಿ ಬದಲಾಯಿಸಿ

 • ಮೂರು ದಶಕಗಳ ಕಾಲ ಮೈಸೂರು ಸಂಸ್ಥಾನದ ಜನತೆಯ ನೆಚ್ಚಿನ ಸುದ್ದಿ ಸಾಧನವಾಗಿ, ಸಾರ್ವಜನಿಕ ಕುಂದುಕೊರತೆಗಳ ಪ್ರಚಾರಕನಾಗಿ, ರಾಜಕೀಯ ಚಟುವಟಿಕೆಗಳ ಯಥಾರ್ಥದರ್ಶಿಯಾಗಿ, ಜಾಗತಿಕ ಪ್ರಗತಿ ವರ್ತಮಾನಗಳ ವಾಹಕವಾಗಿ ‘ತಾಯಿನಾಡು’ ವಿಜೃಂಭಿಸಿದ್ದೇನೋ ನಿಜ. ನಾನು ಈ ಪತ್ರಿಕೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಾಗ, ಪತ್ರಿಕೆಯನ್ನು ಕಟ್ಟುವ ಕಾಲದಲ್ಲಿ ಪಟ್ಟಿದ್ದ ಅವ್ಯಾಹತ ಪರಿಶ್ರಮ-ಸಾಹಸಗಳ ಕಷ್ಟಾನುಭವವೇನೂ ನನಗೆ ಆಗಲಿಲ್ಲ. 1946ರ ಜನವರಿಯಲ್ಲಿ ನಾನು ಸೇರಿದಾಗ ಪತ್ರಿಕೆ ಒಳ್ಳೆಯ ಏರುದೆಶೆಯಲ್ಲಿದ್ದಿತು; *ರಾಜ್ಯದ ಮುಖ್ಯ ನಗರಗಳಲ್ಲೂ, ಮೂಲೆ ಮೂಲೆಯ ಹಳ್ಳಿ-ಪಟ್ಟಣಗಳಲ್ಲೂ ಒಳ್ಳೆಯ ಪ್ರಸಾರವಿದ್ದಿತು; ಸ್ವಾತಂತ್ರ್ಯಾಂದೋಲನದ ಕೊನೆಯ ಹೋರಾಟ ಮುಗಿದಿದ್ದು ಅದರ ಫಲಶ್ರುತಿಯ ಕುತೂಹಲಕರ ವಾರ್ತೆಗಳನ್ನು ಅರಿಯುವ ತವಕ-ಉತ್ಸಾಹ ಜನರಲ್ಲಿ ಪುಟಿಯುತ್ತಿತ್ತು. ಈಗಿನಷ್ಟು ಮಿಂಚಿನ ವೇಗದಲ್ಲಿ ಸುದ್ದಿ ಬಿತ್ತರಿಸುವ ಸಾಧನಗಳು ಆಗ ಇರಲಿಲ್ಲ. ಸಾಮ್ರಾಜ್ಯಶಾಹಿಯ ಹಿಡಿತದಲ್ಲಿದ್ದ ಆಕಾಶವಾಣಿಗಿಂತ ತಮ್ಮ ಮೆಚ್ಚಿನ ಪತ್ರಿಕೆಗಳಲ್ಲಿ ಬರುತ್ತಿದ್ದ ಮುದ್ರಿತ ಸಮಾಚಾರವನ್ನು ಮಾತ್ರವೇ ಜನರು ನಂಬುತ್ತಿದ್ದರು.
 • ಪತ್ರಿಕೆಗಳ ಪ್ರಸಾರ ಸಂಖ್ಯೆ ಆಗಿನ ಮಟ್ಟಕ್ಕೆ ತಕ್ಕಂತೆ ಅನುದಿನ ಹೆಚ್ಚುತ್ತಲೇ ಇದ್ದಿತು. ಬೆಂಗಳೂರಿನ ಪತ್ರಿಕೆಗಳಲ್ಲಿ ‘ತಾಯಿನಾಡು’ವಿಗೇ ಅಗ್ರಮಾನ್ಯತೆ. ಸಿಬ್ಬಂದಿಗೆ ನಿಗದಿತ ದಿನದಲ್ಲಿ ತಿಂಗಳ ಸಂಬಳ ತಪ್ಪದೆ ಬರುತ್ತಿತ್ತು. ಕೊನೆಯ ಕೆಲವು ವರ್ಷಗಳಲ್ಲಿ ಬೋನಸ್ ಕೂಡ ಲಭಿಸಿತು. ಕಾನೂನಿನಲ್ಲಿ ಇಲ್ಲದಿದ್ದರೂ, ಶ್ರೀ ರಾಮಯ್ಯನವರೇ ನೌಕರರಿಗೆ ಪ್ರಾವಿಡೆಂಡ್ ಫಂಡ್ ಸೌಲಭ್ಯ ಆರಂಭಿಸಿದ್ದರು.

ಆರಂಭಿಕ ವೃತ್ತಿ ಜೀವನ ಬದಲಾಯಿಸಿ

*ತುಮಕೂರು ಇಂಟರ್‌ಮೀಡಿಯೆಟ್ ಕಾಲೇಜ್ ಇಂದ ತೇರ್ಗಡೆಯಾಗಿ ಪದವಿ ತರಗತಿಗೆ ಸೇರಲು ಬೆಂಗಳೂರಿಗೆ ಬಂದಿದ್ದೆ. ವೈಯಕ್ತಿಕ ಅಡಚಣೆಯಿಂದಾಗಿ ಇಲ್ಲಿಗೆ ಬರುವುದು ವಿಳಂಬವಾಗಿ ಆ ವರ್ಷದ ಪ್ರವೇಶಾವಕಾಶ ತಪ್ಪಿತು. ಮುಂದಿನ ವರ್ಷದ ವರೆಗೆ ಕಾಯಬೇಕು. ಅಲ್ಲಿಯವರೆಗೆ ಕಾಲ ದೂಡಲು ಇಲ್ಲಿಯೇ ಖಾಸಗಿ ಕೆಲಸ ಹಿಡಿದೆ. ಕೆಲ ತಿಂಗಳು ಕಳೆದಾಗ ತುಮಕೂರಿನ ಪ್ರೌಢಶಾಲೆಯಲ್ಲಿ ಆತ್ಮೀಯ ಶಿಕ್ಷಕರಾಗಿದ್ದು, ಬೆಂಗಳೂರಿನಲ್ಲಾಗ ನೆಲೆಸಿದ್ದ ನನ್ನ ಹಿತೈಷಿ ಗುರುಗಳು ದಾರಿಯಲ್ಲಿ ಸಿಕ್ಕು ನನ್ನ ಪರಿಸ್ಥಿತಿ ಅರಿತರು;

 • ‘ಅಲ್ಲಿ ಯಾಕೆ ಜೀವನ ವ್ಯರ್ಥ ಮಾಡಿಕೊಳ್ಳುತ್ತೀಯೆ? ನಿನ್ನ ಮನಸ್ಸಿಗೆ ಸರಿ ಹೋಗುವ ವೃತ್ತಿ ದೊರೆತರೆ ಸೇರಿಕೊಳ್ಳುವೆಯಾ?" ಎಂದರು. ತಾವು ಕೆಲಸ ಮಾಡುತ್ತಿರುವ ಪತ್ರಿಕಾ ಕಚೇರಿಯಲ್ಲೋ ಅಥವಾ ತಮಗೆ ಸಂಪಾದಕರು ಪರಿಚಯವಿರುವ ’ತಾಯಿನಾಡು‘ ಪತ್ರಿಕೆಯಲ್ಲೋ ಉದ್ಯೋಗ ಕೊಡಿಸುವುದಾಗಿ ಹೇಳಿದರು. ನನಗೆ ಆಕಾಶವೇ ಕೈಗೆಟುಕಿದಂತಾಯಿತು. ಕೆಲಸ ಸಿಕ್ಕೇ ಬಿಟ್ಟಿತೆಂದು ಇದ್ದ ನೌಕರಿಗೆ ರಾಜೀನಾಮೆ ಕೊಟ್ಟೆ. ಆದರೆ ಅವರ ಕಚೇರಿಯಲ್ಲಿ ಕೆಲಸ ಖಾಲಿ ಇರಲಿಲ್ಲ.
 • ಒಂದೆರಡು ತಿಂಗಳು ಸಾಗಿದವು. ಅವರಿದ್ದುದು ವಿಶ್ವೇಶ್ವರಪುರದಲ್ಲಿ; ನಾನಿದ್ದುದು ಶೇಷಾದ್ರಿಪುರದಲ್ಲಿ. ನನ್ನ ವಿಳಾಸವನ್ನೂ ಅವರಿಗೆ ಕೊಟ್ಟಿರಲಿಲ್ಲ. 1946ರ ಜನವರಿಯಲ್ಲಿ ಕೊನೆಯ ಯತ್ನವೆಂದು ಹತಾಶೆಯಿಂದ ಅವರನ್ನು ಮತ್ತೆ ನೋಡಲು ಹೋದೆ. ನನ್ನನ್ನು ನೋಡಿ ಖುಷಿಯಾದ ಗುರುಗಳು, 5-6 ದಿನಗಳಿಂದ ನನ್ನನ್ನೇ ಹುಡುಕುತ್ತಿದ್ದುದಾಗಿ ಹೇಳಿದರು. ಮಾರನೆ ದಿನವೇ ನಾನು ’ತಾಯಿನಾಡು‘ ಕಚೇರಿಗೆ ಹೋಗಬೇಕೆಂದು ಹೇಳಿ, ಸಂಪಾದಕರಿಗೆ ಒಂದು ಪತ್ರ ಬರೆದು ಕೊಟ್ಟರು.
 • 1946ರ ಜನವರಿ 4ನೇ ತಾರೀಖು - ಮುಂಜಾನೆ 8 ಗಂಟೆಗೇ ಚಾಮರಾಜಪೇಟೆ ಮೊದಲನೇ ರಸ್ತೆಯಲ್ಲಿದ್ದ ’ತಾಯಿನಾಡು‘ ಕಚೇರಿಗೆ ಹೋದೆ. ಸಂಪಾದಕರಿನ್ನೂ ಬಂದಿರಲಿಲ್ಲ. ನನ್ನ ಗುರುಗಳು ಕೊಟ್ಟಿದ್ದ ಪತ್ರವನ್ನು ಸಂಪಾದಕರ ಸಹಾಯಕರಿಗೆ ಕೊಟ್ಟೆ. 9 ಗಂಟೆಗೆ ಸರಿಯಾಗಿ ಮೋಟಾರ್ ಸೈಕಲ್‍ನಲ್ಲಿ ದಟ್ಟಿ ಪಂಚೆ - ಕೋಟುಧಾರಿ ವ್ಯಕ್ತಿಯೊಬ್ಬರು ಬಂದಿಳಿದು ಸರಸರನೆ ಸಂಪಾದಕರ ಕೋಣೆಗೆ ಹೋದರು. ಮೇಜಿನ ಮೇಲಿದ್ದ ಕಾಗದ ನೋಡಿದ ತಕ್ಷಣ ನನ್ನನ್ನು ಒಳಗೆ ಕರೆಸಿದರು.
 • ಅವರ ಸರಳ ವ್ಯಕ್ತಿತ್ವ ನೋಡಿ ನನಗೆ ಅಚ್ಚರಿಯಾಯಿತು. ಹಲವಾರು ಬಾರಿ ವಿದೇಶ ಪ್ರವಾಸ ಮಾಡಿ ಬಂದಿದ್ದ ಸಂಪಾದಕರಾದ ಶ್ರೀ ಪಿ.ಬಿ.ಶ್ರೀನಿವಾಸನ್‌ರೇ ಅವರು! ನನ್ನ ಶಿಕ್ಷಣ, ಬರಹದ ಗೀಳೂ, ನನ್ನ ಕಾಲೇಜು ಲೇಖನ ಸಂಕಲನದ ಪ್ರತಿ ಇವೆಲ್ಲಾ ನೋಡಿ "ಅನುವಾದ ಮಾಡಲು ಬರುತ್ತದೆಯೆ? ಸರಿಯಾಗಿ ಮಾಡಬೇಕು. ಕ್ರಮವಾಗಿ ಕಚೇರಿಗೆ ಬರಬೇಕು" ಇತ್ಯಾದಿ ಹೇಳಿ, "35 ರೂ. ಮಾತ್ರ ಸಂಬಳ" ಎಂದರು. (ನನ್ನ ಹಿಂದಿನ ಕಚೇರಿಯಲ್ಲಿ ಕೊಡುತ್ತಿದ್ದ ಸಂಬಳದ ಅರ್ಧದಷ್ಟು!), ನನಗೆ ಏನು ಹೇಳಲೂ ತೋಚಲಿಲ್ಲ.
 • ಬಿಟ್ಟರೆ ಪತ್ರಕರ್ತನಾಗಬೇಕೆಂಬ ಇಷ್ಟಾರ್ಥ ಈಡೇರದೇ ಹೋಗಬಹುದು. ಹೀಗೆ ಯೋಚಿಸುತ್ತಿದ್ದಂತೆ "ಪ್ರೊಪ್ರೈಟರ್ ಬರುತ್ತಾರೆ; 11ಕ್ಕೆ ಬಂದು ನೋಡಿ" ಎಂದರು. ವಂದನೆ ಹೇಳಿ ಹೊರಗಡೆ ಸುತ್ತಾಡಿಕೊಂಡು ಹಿಂದಿರುಗಿದಾಗ ಶ್ರೀ ಪಿ.ಆರ್.ರಾಮಯ್ಯನವರು ಬಂದಿದ್ದರು. ಗಾಂಧಿ ಟೋಪಿ ಧರಿಸಿದ್ದ, ಹಿರಿತನ ಸೂಸುವ, ಆಕರ್ಷಕ ವ್ಯಕ್ತಿ. ಕಿರುನಗೆ ಬೀರಿ ನನ್ನನ್ನು ಬರಮಾಡಿಕೊಂಡರು. ಶ್ರೀನಿವಾಸನ್ ಅಷ್ಟರೊಳಗಾಗಿ ಅವರಿಗೆ ನನ್ನ ವಿಷಯ ಹೇಳಿದ್ದರೆಂದು ಕಾಣುತ್ತೆ. ನನ್ನ ವಿಚಾರವೆಲ್ಲಾ ಕೇಳಿ, ಚುರುಕಾಗಿ ಮುತುವರ್ಜಿಯಿಂದ ಕೆಲಸ ಮಾಡಬೇಕು.
 • ಸಮರ್ಪಕವಾಗಿದ್ದರೆ ಒಂದು ತಿಂಗಳ ನಂತರ ಸಂಬಳ ನಿಗದಿ ಮಾಡುತ್ತೇವೆ. ಆದರೆ ಈ ತಿಂಗಳ ಸಂಬಳಕ್ಕೇನೂ ಯೋಚಿಸಬೇಕಾಗಿಲ್ಲ - ಕೊಡುತ್ತೇವೆ. ನೀವು ಬೇಕಾದರೆ ಜುಲೈ ಆದ ಮೇಲೆ ಕಾಲೇಜಿಗೆ ಸೇರಿಕೊಂಡು ವ್ಯಾಸಂಗ ಮುಂದುವರಿಸಬಹುದು; ಅಭ್ಯಂತರವಿಲ್ಲ ಎಂದರು. "ನನಗೆ ಪತ್ರಿಕೋದ್ಯಮವೇ ಜೀವನದ ಪರಮಾಕಾಂಕ್ಷೆ. ಈ ಉದ್ಯೋಗ ದೊರಕಿದರೆ ನನಗೆ ಮತ್ತೆ ವ್ಯಾಸಂಗ ಬೇಕಾಗಿಲ್ಲ" ಎಂದೆ.
 • "ಅದು ನಿಮ್ಮಿಷ್ಟ; ಈಗ ಕೆಲಸ ಕಲಿತುಕೊಳ್ಳಿ" ಎಂದು ಹೇಳಿ, ಹಿರಿಯ ಉಪಸಂಪಾದಕರಾಗಿದ್ದ ಶ್ರೀ ಕೆ.ಅನಂತಸುಬ್ಬರಾವ್ ಅವರನ್ನು ಕರೆಸಿ, ನನಗೆ ಎಲ್ಲಾ ತಿಳಿಸುವಂತೆ ಹೇಳಿದರು. ಅವರೂ ತುಂಬಾ ಒಳ್ಳೆಯವರು. ಪತ್ರಿಕೋದ್ಯಮದ ’ಓ ನಾಮ‘ ಅವರಿಂದ ಆಯಿತು. ಅವರು ಆತ್ಮೀಯತೆಯಿಂದ ವಿಚಾರಿಸಿ, ಯಾವುದಕ್ಕೂ ಚಿಂತಿಸದಂತೆ ಮತ್ತು ತಿಳಿಯದ್ದನ್ನು ಕೇಳುವಂತೆ ಧೈಯವಿತ್ತರು; ಮಧ್ಯಾಃನ ಊಟ ಮಾಡಿ ಬರಲು ಕಳಿಸಿದರು.
 • ಮತ್ತೆ 3 ಗಂಟೆಗೆ ಬರುವುದರೊಳಗಾಗಿ ಶ್ರೀ ರಾಮಯ್ಯನವರು ನನ್ನ ಕಾರ್ಯಾಸಕ್ತಿಯನ್ನು ಕುರಿತು ಅನಂತಸುಬ್ಬರಾಯರನ್ನು ವಿಚಾರಿಸಿ ತಿಳಿದುಕೊಂಡಿದ್ದರು. ಮಾರನೆಯ ದಿನದಿಂದ ಬೆಳಿಗ್ಗೆ 11ಕ್ಕೆ ಸರಿಯಾಗಿ ಕಚೇರಿಗೆ ಬರಬೇಕೆಂದು ಆದೇಶಿಸಿದರು. ಸಂಜೆಯೇ ನನ್ನ ಗುರುಗಳ ಬಳಿಗೆ ಹೋಗಿ ವಿಷಯ ತಿಳಿಸಿದೆ; ಅವರು ಶುಭ ಹಾರೈಸಿದರು. ಮಾರನೆಯ ದಿನದಿಂದ ಅನುವಾದ, ಶೀರ್ಷಿಕೆ, ಅಕ್ಷರ ನಮೂನೆಗಳು-ಗಾತ್ರಗಳು, ಕರಡು ತಿದ್ದುವ ಕ್ರಮ, ಫೋನಿನಲ್ಲಿ ವರದಿ ತೆಗೆದುಕೊಳ್ಳುವ ವಿಧಾನ ಮುಂತಾದವುಗಳ ಪರಿಚಯ ಪಾಠ ನಡೆಯಿತು.
 • ಕಚೇರಿಯ ಹಿರಿಯ ಸಹೋದ್ಯೋಗಿಗಳ ಆತ್ಮೀಯ ಜತೆಗಾರಿಕೆಯೂ ಲಭಿಸಿತು. ಸಂಪಾದಕರು ಆಗಿಂದಾಗ್ಗೆ ಬಂದು ನೋಡಿಕೊಂಡು ಹೋಗುತ್ತಿದ್ದರು. ಅಗತ್ಯವಿದ್ದರೆ ಹಿರಿಯ ಉಪಸಂಪಾದಕರನ್ನು ಕರೆಸಿ ಸೂಚನೆಗಳನ್ನು ನೀಡುತ್ತಿದ್ದರು. ಮುಂದಿನ ದಿನ ಭಾನುವಾರ - ಪತ್ರಿಕೆಗೆ ರಜಾ. ಆಗ ‘ತಾಯಿನಾಡು’ ವಾರಕ್ಕೆ ಆರು ದಿನ ಮಾತ್ರ ಪ್ರಕಟವಾಗುತ್ತಿದ್ದ ಸಂಜೆಯ ದಿನಪತ್ರಿಕೆ.

ತಾಯಿನಾಡು ಪತ್ರಿಕಾ ಬಳಗ ಬದಲಾಯಿಸಿ

 • ಜನವರಿ 11ರಿಂದ ನನ್ನ ಎರಡನೆಯ ವಾರ ಪ್ರಾರಂಭವಾಯಿತು. ಆ ವೇಳೆಗೆ ನಾನು ಬರೆದ ಅಥವಾ ಅನುವಾದಿಸಿದ ಹಲವು ತುಣಕುಗಳು ಪ್ರಕಟವಾಗಿ ನನ್ನ ಉತ್ಸಾಹ ಹೆಚ್ಚಿಸಿದವು. ಹಿರಿಯ ಉಪಸಂಪಾದಕರಾಗಿ ಶ್ರೀ ಎಂ.ಎಸ್.ಆರ್.ಅಯ್ಯಂಗಾರ್, ಶ್ರೀ ಸಿ.ಸುಬ್ಬ ರಾವ್ , ಹಿರಿಯ ವರದಿಗಾರರಾಗಿದ್ದ ಶ್ರೀ ಎಸ್.ವ್ಯಾಸರಾವ್, ಶ್ರೀ ಆರ್.ಎಸ್.ನಾರಾಯಣ್ (`Daily News'; - ಯಜಮಾನರ ಹಿರಿಯ ತಮ್ಮ), ಶ್ರೀ ಪಿ.ಆರ್.ವೆಂಕಟೇಶನ್ (ಯಜಮಾನರ ಇನ್ನೊಬ್ಬ ತಮ್ಮ), ಕ್ರೀಡಾ ವರದಿಗಾರ ಹಾಗೂ ಛಾಯಾಗ್ರಾಹಕ ಶ್ರೀ ಎನ್.ಕೃಷ್ಣಸ್ವಾಮಿ ಮುಂತಾದವರು ನನ್ನನ್ನು ಮಮತೆಯಿಂದ ವಿಚಾರಿಸಿ, ಕೆಲಸ ಹೇಳಿ ಕೊಡುತ್ತಿದ್ದರು; ತಿದ್ದುತ್ತಿದ್ದರು.
 • ಜನವರಿ 21ರಂದು ನಾನು ಹಿಂದೆ ತಿಳಿಸಿದ ಗುರುಗಳಾದ ಶ್ರೀ ಎ.ಟಿ.ಶಾಮಾಚಾರ್‌ರವರೂ ಈ ಪತ್ರಿಕೆಗೆ ಹಿರಿಯ ಉಪಸಂಪಾದಕರಾಗಿ ಬಂದು ಸೇರಿಕೊಂಡುದು ನನಗೆ ಇನ್ನಷ್ಟು ಒತ್ತಾಸೆಯಾಯಿತು. ದಿನಕಳೆದಂತೆ ಕಾರ್ಯಕಾರಿ ಅನುಭವ ಹೆಚ್ಚಿತು; ಆತ್ಮ ವಿಶ್ವಾಸ ಕುದುರಿತು.

ಫೆಬ್ರವರಿ 1ರಿಂದ ಶ್ರೀ ಅನಂತಸುಬ್ಬರಾಯರು ಹತ್ತು ದಿನ ರಜಾದ ಮೇಲೆ ಹೋದರು. ಆಗ ನಾನೇ ಎ.ಪಿ.ಐ. (A.P.I.) ಸುದ್ದಿಗಳನ್ನು ಕ್ರಮವಾಗಿ ಅನುವಾದಿಸಿ, ಶಿರೋನಾಮೆಯಿತ್ತು ಪ್ರಕಟನೆಗೆ ಕೊಡಲು ಪ್ರಾರಂಭಿಸಿದೆ.

 • ಆಗ ದೇಶೀಯ ವಾರ್ತೆಗಳು A.P.I. ನಿಂದ, ಮತ್ತು ವಿದೇಶಿ ವಾರ್ತೆಗಳು ರಾಯಿಟರ್ ಸಂಸ್ಥೆಯಿಂದ ತಂತಿ ಮೂಲಕ ಬರುತ್ತಿದ್ದವು. ಬೆಂಗಳೂರಿನಲ್ಲಿ A.P.I. ಕಚೇರಿ ಕ್ವೀನ್ಸ್ ರಸ್ತೆಯಲ್ಲಿತ್ತು, (ಮುಂದೆ ಅದೇ P.T.I. ಆಯಿತು) ಆಗ ಟೆಲಿಪ್ರಿಂಟರ್ ಸೌಲಭ್ಯವಿರಲಿಲ್ಲ. ತಂತಿಯ ಮೂಲಕ ಅವರ ಕಚೇರಿಗೆ ಬಂದುದನ್ನು, ಚಂದಾದಾರರಾದ ಸ್ಥಳೀಯ ಪತ್ರಿಕೆಗಳಿಗೆ, ಬಹು ಮುಖ್ಯ ಮತ್ತು ಜರೂರಾದುದನ್ನು ಫೋನ್ ಮೂಲಕ ತಿಳಿಸುತ್ತಿದ್ದರು.
 • ಉಳಿದ ವಾರ್ತೆಗಳನ್ನು ಟೈಪ್ ಮಾಡಿ ಪ್ರತಿ 2 ಗಂಟೆಗೊಮ್ಮೆ ತಮ್ಮ ದೂತರ ಮೂಲಕ ಎಲ್ಲ ಕಚೇರಿಗಳಿಗೂ ಕಳಿಸುತ್ತಿದ್ದರು. ಎಷ್ಟೋ ವೇಳೆ ಅತ್ಯಂತ ಪ್ರಾಮುಖ್ಯದ ಸುದ್ದಿಗಳನ್ನು (FLASH NEWS) ಆ ಸಂಸ್ಥೆಯ ಮುಂಬಯಿ ಮತ್ತು ಮದ್ರಾಸ್ ಪ್ರಾದೇಶಿಕ ಕಚೇರಿಯವರು ನೇರವಾಗಿ ಪತ್ರಿಕಾ ಕಚೇರಿಗಳಿಗೆ ತಂತಿ ಮೂಲಕ ಕಳಿಸಿದ್ದೂ ಉಂಟು. ಅಂದರೆ ಫೋನ್ ಬಳಿ ಚುರುಕಾಗಿ, ಶೀಘ್ರವಾಗಿ, ತಪ್ಪಿಲ್ಲದೆ, ಉತ್ಸಾಹದಿಂದ ಬರೆದುಕೊಳ್ಳುವ ಹುಮ್ಮಸ್ಸಿನ ಸಿಬ್ಬಂದಿಯವರು ಇರಬೇಕು.
 • ಸಾಮಾನ್ಯವಾಗಿ ವಯಸ್ಸಾದ ಹಾಗೂ ಹಿರಿಯ ಉದ್ಯೋಗಿಗಳು ಹೊಸಬರಿಗೆ ಹಾಗೂ ಕಿರಿಯರಿಗೆ ಈ ಫೋನ್ ಕಿರಿಕಿರಿಯನ್ನು ವರ್ಗಾಯಿಸಿ, ಅವರು ಬರೆದುಕೊಂಡಾದ ಮೇಲೆ ವಾರ್ತೆಗಳನ್ನು ಯಾವ ರೀತಿ ಪತ್ರಿಕೆಗೆ ಕೊಡಬೇಕೆಂಬುದಾಗಿ ನಿರ್ದೇಶಿಸುತ್ತಿದ್ದರು; ಹೀಗೆ ನಡೆದುಕೊಳ್ಳುವುದು ಹೆಚ್ಚುಗಾರಿಕೆಯೆಂದು ಭಾವಿಸಿದ್ದರು. ನಾನಂತೂ ಈ ‘ಫೋನಾಯಣ‘ಕ್ಕೆ ಉತ್ಸುಕನಾಗಿರುತ್ತಿದ್ದುದರಿಂದ ಕೆಲವು ದಿನಗಳ ನಂತರ ಫೋನ್ ಪಕ್ಕದಲ್ಲೇ ನನಗೆ ಆಸನ ವ್ಯವಸ್ಥೆಯಾಯಿತು;
 • ಆಡಳಿತ ಇಲಾಖೆಗೆ ಪ್ರತ್ಯೇಕ ಫೋನ್ ಇದ್ದುದರಿಂದ, ಸಂಪಾದಕೀಯ ವಿಭಾಗದಲ್ಲಿದ್ದ ಫೋನ್ ಸ್ಥಳೀಯ ಹಾಗೂ ಹೊರಗಿನ ವರದಿಗಾರರಿಂದ ಬರುತ್ತಿದ್ದ ತುರ್ತು ವರ್ತಮಾನಗಳ ಸ್ವೀಕಾರಕ್ಕೆಂದು ಮೀಸಲಾಗಿರುತ್ತಿತ್ತು. 1946ರಲ್ಲಿ ರಾಜ್ಯದ ಸಿರಾ - ಮಧುಗಿರಿ ತಾಲ್ಲೂಕುಗಳಲ್ಲಿ ಭೀಕರ ಕ್ಷಾಮ - ನೂರಾರು ಜನ ಹೊಟ್ಟೆಗಿಲ್ಲದೆ ಪ್ರಾಣಬಿಟ್ಟರು. ಪತ್ರಿಕೆಗಳಲ್ಲಿ ದಾರುಣ ವರದಿಗಳು ಬಂದು ಭಾರತವನ್ನೇ ತಲ್ಲಣಗೊಳಿಸಿದವು.

ಸ್ವಾತಂತ್ರ್ಯಕ್ಕಾಗಿ ಒತ್ತಾಯ ಬದಲಾಯಿಸಿ

 • ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿದ್ದ ಕಾಂಗ್ರೆಸ್ ಮತ್ತಿತರ ರಾಜಕೀಯ ಪಕ್ಷಗಳು ಬ್ರಿಟಿಷರ ಬೇಜವಾಬ್ದಾರಿತನವನ್ನು ಖಂಡಿಸಿ ಪ್ರದರ್ಶನಗಳನ್ನು ನಡೆಸಿದರು. ಆಗ ಜನರನ್ನು ಸಾಂತ್ವನಗೊಳಿಸಲು ವೈಸ್‌ರಾಯ್‌ರವರೇ ಸಿರಾದ ಕ್ಷಾಮ ಪ್ರದೇಶಗಳ ಪ್ರತ್ಯಕ್ಷ ದರ್ಶನಕ್ಕೆ ಬಂದರು. ಅಮೆರಿಕ ದ ಮಾಜಿ ಅಧ್ಯಕ್ಷ ಹರ್ಬರ್ಟ್ ಹೂವರ್ ಅವರು ಮಧುಗಿರಿಯ ಕ್ಷಾಮ ಪ್ರದೇಶಕ್ಕೆ ಭೇಟಿಕೊಟ್ಟರು. ಆ ವರದಿಗಳನ್ನು ನಮ್ಮ ವಿಶೇಷ ಪ್ರತಿನಿಧಿಗಳೂ, A.P.I. ಸಂಸ್ಥೆಯ ವರದಿಗಾರರು ಫೋನ್ ಮೂಲಕವೇ ಕೊಟ್ಟರು.
 • ಪತ್ರಿಕೆಗೆ ಬೇಗನೆ ಸುದ್ದಿಗಳನ್ನು ಅಳವಡಿಸಿ, ಆಯಾ ಸ್ಥಳಗಳಿಗೆ ಹೋಗುವ ಸಂಚಿಕೆಗಳಲ್ಲಿ ಇಂತಹ ವಿಶೇಷ ವಾರ್ತೆಗಳು ಮನಸೆಳೆದಂತೆ ಪ್ರಕಟವಾಗುವ ಹಾಗೆ ಮಾಡುವುದು ಸಂಪಾದಕೀಯ ಸಿಬ್ಬಂದಿಯ ಮಹತ್ವದ ಹೊಣೆಗಾರಿಕೆ. ‘ತಾಯಿನಾಡು’ ಪತ್ರಿಕೆ ಈ ದಿಶೆಯಲ್ಲಿ ಮುಂಚೂಣಿ ಯಲ್ಲಿದ್ದಿತು; ಇಂತಹ ಪ್ರಸಂಗಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನೂ - ಸಾಧ್ಯವಾದರೆ ಮಾರನೇ ದಿನವೇ - ಪ್ರಕಟಿಸುವ ವಿಶಿಷ್ಟ ವೈಖರಿಯೂ ಜನರನ್ನು ಮೆಚ್ಚಿಸುತ್ತಿತ್ತು. ಇಂದಿನ ಪತ್ರಿಕೆಗಳಲ್ಲಿ ಇದೇನೂ ಅತಿಶಯದ ವಿಷಯವಲ್ಲ.
 • ಈಗಿನಂತಹ ಆಧುನಿಕ ಸೌಕಯವಿಲ್ಲದ ಅಂದಿನ ಯುಗದಲ್ಲಿ ಇದೊಂದು ಮಹಾ ಸಾಧನೆಯೇ ಸರಿ. ಶ್ರೀ ರಾಮಯ್ಯನವರಿಗೆ ಶ್ರದ್ಧೆಯಿಂದ ಕೆಲಸ ಮಾಡುವವರ ಮೇಲೆ ಅತಿ ವಿಶ್ವಾಸ. ತಾವು ಇಂಗ್ಲಿಷ್‍ನಲ್ಲಿ ಬರೆದ ವಿಶೇಷ ಲೇಖನಗಳನ್ನೂ, ಪ್ರವಾಸ ವರದಿಗಳನ್ನೂ ಭಾಷಾಂತರಿಸಿ ಕೊಡಲು ಅಂತಹವರಿಗೆ ವಹಿಸುತ್ತಿದ್ದರು. ಉಪಸಂಪಾದಕರಾಗಿ ಕೆಲಸ ಮಾಡುತ್ತಿದ್ದವರು ವರದಿಗಾರರ ಕಷ್ಟ-ಹೊಣೆಗಾರಿಕೆಗಳನ್ನೂ, ವರದಿಗಾರರು ಉಪಸಂಪಾದಕರ ಹೊರೆಯನ್ನು ಪರಸ್ಪರ ಅರಿತುಕೊಳ್ಳಲು, ಎರಡು ಶಾಖೆಗಳಲ್ಲೂ ಅನುಭವ ಪಡೆಯುವಂತೆ ಸಂಪಾದಕರ ಮುಖೇನ ಅವಕಾಶ ಕಲ್ಪಿಸುತ್ತಿದ್ದರು. ಕಾಂಗ್ರೆಸ್ ಅಧಿವೇಶನಗಳಿಗೆ, ದೆಹಲಿಯ ಐತಿಹಾಸಿಕ ಸಮಾರಂಭ-ಅಧಿವೇಶನಗಳಿಗೆ, ಸಂಸತ್ ಕಾರ್ಯಕಲಾಪಗಳಿಗೆ ಸಂಪಾದಕರಾಗಲೀ ಅಥವಾ ಉತ್ಸಾಹಿ ಸಿಬ್ಬಂದಿಗಳಾಗಲೀ ಹೋಗಲು ಸೌಲಭ್ಯ ಒದಗಿಸುತ್ತಿದ್ದರು.
 • ‘ತಾಯಿನಾಡು‘ ಸೇರಿದ ಪ್ರಥಮ ವರ್ಷದಲ್ಲೇ ನಾನು ಬೆಂಗಳೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧಾಯಕ ಸಭೆಯ ಅಧಿವೇಶನಗಳಿಗೂ, ಅನಂತರ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆಯ ಅಧಿವೇಶನಕ್ಕೂ (ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕಗೊಂಡ ಸರ್ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್‌ರವರು ಭಾಗವಹಿಸಿದ ಪ್ರಥಮ ಕೋಲಾಹಲಕಾರಿ ಅಧಿವೇಶನ) ವರದಿ ಮಾಡಲು ಹೋಗಿದ್ದುದು ಅವಿಸ್ಮರಣೀಯ ಅನುಭವ. ಸಂಸ್ಥಾನದ ಅನೇಕ ಹಿರಿಯ ಪತ್ರಿಕೋದ್ಯಮಿಗಳ ಪರಿಚಯ ಇಲ್ಲಿ ಆಯಿತು.

ಸಂಪಾದಕೀಯ ವಿಭಾಗ ಬದಲಾಯಿಸಿ

*ಶ್ರೀ ರಾಮಯ್ಯನವರು ಸರ್ಕಾರದ ಮೇಲಾಗಲೀ, ಅಧಿಕಾರಿಗಳ ಮೇಲಾಗಲೀ ಪತ್ರಿಕೆಯ ಹೆಸರು ಹೇಳಿಕೊಂಡು ಸ್ವಕೀಯ ಲಾಭ ಮಾಡಿಕೊಳ್ಳಲು ಎಂದೂ ಪ್ರಯತ್ನಿಸಲಿಲ್ಲವೆಂಬುದು ಜನಜನಿತ ಸತ್ಯ. ಅವರ ಆರ್ಥಿಕ ಸಂಕಷ್ಟದ ದಿನಗಳಲ್ಲೂ ಸರ್ಕಾರಿ ಕೃಪಾಶಯಕ್ಕೆ ಕೈ ಒಡ್ಡಿದವರಲ್ಲ. ಸಂಪಾದಕೀಯ ವಿಭಾಗಕ್ಕೆ ಸೇರುವ ಹೊಸಬರಿಗೆ ಅವರು ಸ್ಪಷ್ಟವಾಗಿ ಎಚ್ಚರಿಕೆಯ ಮಾತು ಹೇಳುತ್ತಿದ್ದರು: "ನೀವು ಯಾವ ಕಚೇರಿಗೆ ಹೋದರೂ ‘ತಾಯಿನಾಡು’ ಪತ್ರಿಕೆಯಲ್ಲಿರುವುದಾಗಿ ಹೇಳಿಕೊಂಡು ಯಾವುದೇ ಅಹವಾಲು-ಬೇಡಿಕೆ-ಒತ್ತಾಯಗಳನ್ನು ಮಾಡಕೂಡದು.

 • ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಈ ಪತ್ರಿಕೆಯ ಹೆಸರು ಹೇಳಿಕೊಂಡು ಹೋಗಿ ವಿಶೇಷ ಆಸನಗಳಲ್ಲಿ ಮಂಡಿಸುವುದಾಗಲೀ, ಸಂಪಾದಕರಿಂದ ನಿಯೋಜಿಸಲ್ಪಡದೆ ಯಾವುದೇ ಕಲಾಪಗಳ, ಸಂಗೀತ-ನೃತ್ಯ-ಚಲಚ್ಚಿತ್ರ ಕಾಯಕ್ರಮಗಳ ವರದಿಗಳನ್ನು, ವಿಮರ್ಶೆಗಳನ್ನು ಕೊಡುವುದು ನಿಷಿದ್ಧ". ವರದಿಗಳಿಗೆ ಅವನ್ನು ಬರೆದವರೂ, ಲೇಖನಗಳಿಗೆ-ಅನುವಾದಗಳಿಗೆ ಉಪಸಂಪಾದಕರೂ ಹೆಸರು ಹಾಕಿಕೊಳ್ಳುವುದನ್ನು ಅವರು ಒಪ್ಪುತ್ತಿರಲಿಲ್ಲ. ಪತ್ರಕರ್ತ ಯಾವಾಗಲೂ ಅನಾಮಿಕನಾಗಿರಬೇಕು; ಆದರೆ ಸರ್ವಾಂತಯಾಮಿಯಾಗಿ ಇರಬೇಕು.
 • ಪತ್ರಿಕೆಗಳಲ್ಲಿ ಸಂಗತಿಗಳ ವರದಿಗಳೂ ಪ್ರಕಟವಾಗುವುದು ಮುಖ್ಯವೇ ಹೊರತು, ಅವುಗಳನ್ನು ಒಕ್ಕಣಿಸಿದವನ ಹೆಸರಿನ ಹೆಚ್ಚುಗಾರಿಕೆಲ್ಲವೆಂಬುದು ಅವರ ಕಟ್ಟುಪಾಡು. ಪತ್ರಿಕೆಯಲ್ಲಿನ ಭಾಷೆ ನೇರವಾಗಿರಬೇಕು, ಸರಳವಾಗಿರಬೇಕು; ಶಬ್ದಾಡಂಬರವಾಗಲೀ, ವಿದ್ವತ್ಪ್ರದರ್ಶನವಾಗಲೀ ಸುದ್ದಿಯ ಅಂಕಣದಲ್ಲಿ ಅನಗತ್ಯ. ಬೇಕಾದರೆ ವಿಶೇಷ ಲೇಖನಗಳಲ್ಲಿ ಪದ ಪಾಂಡಿತ್ಯ ವಿಜೃಂಭಿಸಬಹುದು. ಅನುವಾದಗಳು ಸಾಮಾನ್ಯರಿಗೆ ಅರ್ಥವಾಗುವುದೇ ಎಂದು ಖಚಿತ ಪಡಿಸಿಕೊಳ್ಳದೆ ಪತ್ರಿಕೆಯಲ್ಲಿ ಪ್ರಕಟಿಸಿದರೆ ಅಪಾರ್ಥ-ಅನರ್ಥವಾಗುವುದೆಂದು ಅವರ ವಾದ.
 • ನಿಮಗೇ ಅರ್ಥವಾಗದ ವಿಷಯಗಳನ್ನು ಅನುವಾದ ಮಾಡಿ ತುರುಕಬೇಡಿ, ತಿಳಿಯದಿದ್ದರೆ ಇನ್ನೊಬ್ಬರನ್ನು ಕೇಳಿ, ಸರಿಯಾಗಿ ಗೊತ್ತಾದಲ್ಲಿ ಮಾತ್ರ ಪತ್ರಿಕೆಗೆ ಕೊಡಿ ಎಂಬುದವರ ಉಪದೇಶ. ಕೋರ್ಟ್ ಸುದ್ದಿಗಳು, ನಿಧನ ವಾರ್ತೆಗಳು, ಕೊಲೆ ವರದಿಗಳು - ಇವುಗಳನ್ನು ಪ್ರಕಟಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕೆಂದು ಬುದ್ಧಿವಾದ ಹೇಳುತ್ತಿದ್ದರು. ಫೋನಿನಲ್ಲಿ ನಿಧನ ವಾರ್ತೆಯನ್ನು ತೆಗೆದುಕೊಂಡು ಪ್ರಕಟಿಸುವಂತಿಲ್ಲ;
 • ಮೃತರ ಸಮೀಪ ಬಂಧುಗಳಿಂದ ಲಿಖಿತವಾಗಿ, ತಮ್ಮ ಹೆಸರು-ವಿಳಾಸ, ಸಹಿ ಸಮೇತ ಕಳಿಸಿಕೊಟ್ಟಲ್ಲಿ ಮಾತ್ರ ಪ್ರಕಟಿಸಲು ಅವಕಾಶ. ವಿವಾಹ ಸುದ್ದಿಗಳ ಜತೆಗೆ ಮುದ್ರಿತ ಆಮಂತ್ರಣ ಪತ್ರಿಕೆಗಳೂ ಮತ್ತು ಕಳಿಸಿದವರ ಹೆಸರು-ವಿಳಾಸಗಳೂ ಇರಲೇಬೇಕು. ಪರ ಊರಿನವರು ಅಲ್ಲಿನ ‘ತಾಯಿನಾಡು‘ ಏಜೆಂಟರ ಮೂಲಕ ಇಂತಹ ಸಮಾಚಾರಗಳನ್ನು ಕಳಿಸಬೇಕಾಗಿತ್ತು.

ವಿಶೇಷ ಸಂದರ್ಭಗಳಲ್ಲಿ ಬದಲಾಯಿಸಿ

 • ವಿಶೇಷ ಸಂದರ್ಭಗಳಲ್ಲಿ ‘ತಾಯಿನಾಡು’ ಅಂತಹ ಸುದ್ದಿ ಬಂದ ತಕ್ಷಣ ‘ಸ್ಪೆಷಲ್‘ ಸಂಚಿಕೆಗಳನ್ನು ಪ್ರಕಟಿಸಿ, ಬೆಂಗಳೂರು, ಮೈಸೂರು ಮತ್ತು ಹತ್ತಿರದ ಪಟ್ಟಣಗಳಲ್ಲಿ ಉಚಿತವಾಗಿ ಅಥವಾ ಸಾಂಕೇತಿಕ ಬೆಲೆಗೆ ಹಂಚಿ ವಾಚಕರ ವಿಶ್ವಾಸಗಳಿಸುತ್ತಿತ್ತು. ಇಂತಹ ಮಿಂಚಿನ ವಿತರಣಾ ವ್ಯವಸ್ಥೆಯಲ್ಲಿ ಆಗ ಬಳೇಪೇಟೆ ಚೌಕದಲ್ಲಿ ವಿಶಾಲ ಅಂಗಡಿಯನ್ನು ಹೊಂದಿದ್ದ ಬೆಂಗಳೂರಿನ ಮುಖ್ಯ ಏಜೆಂಟ್ ಶ್ರೀ ಎಮ್.ಎ.ಆಚಾರ್ಯ ಮತ್ತು ಕಂಪನಿಯ ಮಾಲೀಕರ ಮತ್ತು ಅವರ ಶ್ರದ್ಧಾಳು ಸಿಬ್ಬಂದಿಯ ಪಾದರಸಸದೃಶ ಚಟುವಟಿಕೆ ಉಲ್ಲೇಖನೀಯ.
 • ರಾಜ್ಯದ ಎಲ್ಲೆಡೆ ಇಂತಹ ವಿಶ್ವಾಸಾರ್ಹ ಏಜೆಂಟರ ಒತ್ತಾಸೆ ಮತ್ತು ಸಹಕಾರ ಶ್ರೀ ರಾಮಯ್ಯನವರಿಗಿದ್ದ ದೊಡ್ಡ ಆಸ್ತಿ. ಮುಂದೆ ಪ್ರಾತಃಕಾಲದ ಮುದ್ರಣ ಪ್ರಾರಂಭವಾದ ಮೇಲಂತೂ, ಸಂಜೆಯ ವಿಶೇಷ ಸಂಚಿಕೆಗಳನ್ನು ಹೊರಡಿಸಿ ಮತ್ತಷ್ಟು ಜನಪ್ರಿಯವಾಗುವ ನೂರಾರು ಸಂದರ್ಭಗಳು ‘ತಾಯಿನಾಡು’ವಿಗೆ ಒದಗಿ ಬಂದವು. ಇದರಿಂದ ಪತ್ರಿಕೆಯ ವಿಶ್ವಾಸಾರ್ಹತೆ ವಿಸ್ತೃತಗೊಳ್ಳುತ್ತಿತ್ತು. ‘ಬೆಳಗಿನ ಮುದ್ರಣ‘ ಪ್ರಾರಂಭವಾದ ಮೇಲೆ, ಭಾನುವಾರದ ರಜಾ ರದ್ದಾಗಿ ವಾರದ ಏಳೂ ದಿನಗಳಲ್ಲೂ ಪತ್ರಿಕೆ ಪ್ರಕಟವಾಗುವುದು ರೂಢಿಗೆ ಬಂದಿತು.
 • ಪತ್ರಿಕೆಯಲ್ಲಿ ಕ್ರೀಡಾವಾರ್ತೆ, ಹವಾಮಾನ ವರದಿ, ಚಿನ್ನ-ಬೆಳ್ಳಿ ಧಾರಣೆ, ಸಂಗೀತ ವಿಮರ್ಶೆ, ಚಲಚ್ಚಿತ್ರ-ನಾಟಕಗಳ ಅವಲೋಕನ, ಗ್ರಂಥ ವಿಮರ್ಶೆ ಮುಂತಾದವೆಲ್ಲಾ ವಿವಿಧ ಆಸಕ್ತ ಜನರನ್ನು ಆಕರ್ಷಿಸುತ್ತಿದ್ದವು. ಪ್ರಥಮ ಸ್ವಾತಂತ್ರ್ಯೋತ್ಸವ ಸಂಚಿಕೆ, ಮಹಾತ್ಮ ಗಾಂಧೀಜಿ ಹತ್ಯೆಯ ಶೋಕ ಸಂಚಿಕೆ, ಮೈಸೂರು ಜವಾಬ್ದಾರಿ ಸರ್ಕಾರ ಸ್ಥಾಪನೆಯ ವಿಶೇಷಾಂಕ, ಪ್ರಥಮ ಗಣರಾಜ್ಯೋತ್ಸವ ಪುರವಣಿ, ಹೈದರಾಬಾದ್ ಕಾರ್ಯಾಚರಣೆ ವಿಶೇಷಾಂಕ, ದಸರಾ ಸಂಚಿಕೆ ಮುಂತಾದವು ನೆನಪಿನಲ್ಲಿಡುವಂತಹ ಸಂಚಿಕೆಗಳು.
 • ಸಚಿತ್ರ ವರ್ಣರಂಜಿತ ಪುರವಣಿಗಳನ್ನು ತರುತ್ತಿದ್ದಾಗ ‘ತಾಯಿನಾಡು’ವಿನ ಇಂಗ್ಲಿಷ್ ಸೋದರ ಪತ್ರಿಕೆ `Daily News' ಕೂಡ, ತನ್ನ ಇತಿ-ಮಿತಿಗಳಲ್ಲಿ ಕೆಲವು ಬಾರಿ ವಿಶೇಷ ಸಂಚಿಕೆಗಳನ್ನು ಹೊರಡಿಸಿದ್ದಿತು. ಮುಂಬಯಿ, ದೆಹಲಿ ಮತ್ತು ಹೈದರಾಬಾದ್‍ಗಳಿಗೆ ಪತ್ರಿಕೆಯ `AIR MAIL Edition' ಪ್ರತಿಗಳನ್ನು ಕೆಲವು ವರ್ಷಗಳ ಕಾಲ ಕಳಿಸಿದ್ದು ವೈಶಿಷ್ಟ್ಯಪೂರ್ಣ ಸಾಹಸ.

ಭಾವನಾತ್ಮಕ ಸಂಬಂಧಗಳು ಬದಲಾಯಿಸಿ

 • ಸಂಪಾದಕ ಶ್ರೀ ಪಿ.ಬಿ. ಶ್ರೀನಿವಾಸನ್‌ರು ಶ್ರೀ ರಾಮಯ್ಯನವರಿಗೆ ಬಂಧುವಿಗಿಂತ ಹೆಚ್ಚಾಗಿದ್ದರು. ಶ್ರೀಮತಿ ಪಿ.ಆರ್.ಜಯಲಕ್ಷ್ಮಮ್ಮನವರು ಹಲವಾರು ಮಹಿಳಾ ಸಂಸ್ಥೆಗಳು, ಸಮಾಜ ಸೇವಾ ಸಂಘಗಳು, ಧಾರ್ಮಿಕ ಸಂಘಟನೆಗಳ ನಿಕಟ ಸಂಪರ್ಕವಿಟ್ಟುಕೊಂಡಿದ್ದುದರಿಂದ ತಮ್ಮ ಪತಿಯ ಸಾರ್ವಜನಿಕ ಸೇವೆ ಮತ್ತು ಪತ್ರಿಕಾ ಜೀವನದ ಹಾಗೂ ಪತ್ರಿಕೆಯ ವರ್ಚಸ್ಸಿನ ಸಂವರ್ಧನೆಗೆ ನೆರವಾಗಿ, ಆದರ್ಶ ಸಹಧರ್ಮಿಣಿಯಾಗಿ ಬೆಳಗಿದರು.
 • ಶ್ರೀ ರಾಮಯ್ಯನವರು ಎರಡು ಬಾರಿ ಬೆಂಗಳೂರು ಕಾರ್ಪೊರೇಷನ್ ಸದಸ್ಯರಾಗಿದ್ದರೆ, ಶ್ರೀಮತಿ ಜಯಲಕ್ಷ್ಮಮ್ಮನವರಂತೂ ಉಪಮೇಯರ್‌ರಾಗಿ ನಾಗರೀಕ ಸೇವೆಗೆ ಪ್ರಸಿದ್ಧರಾದರು. ಶ್ರೀ ರಾಮಯ್ಯನವರು ವಿಶಾಲ ರಾಷ್ಟೀಯ ಮನೋಭಾವದವರೂ, ಜಾತ್ಯತೀತ ಧೋರಣೆ ಯವರೂ, ಹಿಂದುಳಿದ ವರ್ಗಗಳ ಹಿತೈಷಿಯೂ ಆಗಿದ್ದರು; ಹರಿಜನ ಸೇವಾ ಸಂಘ, ಗೋಪಾಲಸ್ವಾಮಿ ಅಯ್ಯರ್ ಸ್ಮಾರಕ ದಲಿತ ವಿದ್ಯಾರ್ಥಿ ನಿಲಯ, ಆದಿವಾಸಿ ಸಂಘ, ಹಿಂದಿ ಪ್ರಚಾರ ಪರಿಷತ್ ಮುಂತಾದ ಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ದುಡಿದು, ಈ ಸಂಸ್ಥೆಗಳ ಚಟುವಟಿಕೆಗಳಿಗೆ ಪತ್ರಿಕೆಯಲ್ಲಿ ಸಾಕಷ್ಟು ಪ್ರಚಾರ ನೀಡುತ್ತಿದ್ದರು. ತರುಣ ಪತ್ರಿಕೋದ್ಯಮಿಗಳಿಗೆ, ವೃತ್ತಿಯನ್ನು ಕಲಿಯಬೇಕೆನ್ನುವ ಉತ್ಸಾಹಿಗಳಿಗೆ ಶ್ರೀ ರಾಮಯ್ಯನವರು ಉತ್ತೇಜನ ಕೊಡುತ್ತಿದ್ದರು.
 • ಇಲ್ಲಿ ಆರಂಭಿಕ ತರಪೇತಿ ಪಡೆದು ಮುಂದೆ ಬೇರೆ ಬೇರೆ ಪತ್ರಿಕೆಗಳಲ್ಲಿ ಅಥವಾ ಪ್ರಸರಣಾ ರಂಗಗಳಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದವರು ಅನೇಕ; ಶ್ರೀ ಕೆ.ಸತ್ಯನಾರಾಯಣ, ಶ್ರೀಮತಿ ನಾಗಮಣಿ ಎಸ್.ರಾವ್, ದಿ|| ಎಸ್.ಆರ್.ಕೃಷ್ಣಮೂರ್ತಿಯವರನ್ನು ಇಲ್ಲಿ ಉಲ್ಲೇಖಿಸಬಹುದು. ಹೀಗೆ ಅತ್ಯುಚ್ಛ್ರಾಯ ಸ್ಥಿತಿಯಲ್ಲಿದ್ದ ‘ತಾಯಿನಾಡು‘ ಪತ್ರಿಕೆ ಹಾರ್ಡಿಂಜ್ ರಸ್ತೆಯಲ್ಲಿ (ಈಗ ಪಂಪ ಮಹಾಕವಿ ರಸ್ತೆ) 1947ರಲ್ಲಿ ಸ್ವಂತ ಕಟ್ಟಡ ಕೊಂಡು, ತನ್ನ ಪ್ರಸಾರ ಹೆಚ್ಚಳವನ್ನು ಪೂರೈಸುವ ಸಲುವಾಗಿ ಅಲ್ಲಿ ರೋಟರಿ ಮುದ್ರಣ ಯಂತ್ರವನ್ನು ಸ್ಥಾಪನೆ ಮಾಡಿತು. ಸದೃಢ ತಳಹದಿಯ ಮೇಲೆ ಆಧುನಿಕವಾಗಿ ಪತ್ರಿಕೆಯನ್ನು ವಿಸ್ತರಿಸುವ ಯೋಜನೆಗಳನ್ನು ಶ್ರೀ ರಾಮಯ್ಯನವರು ಹಮ್ಮಿಕೊಳ್ಳುತ್ತಿರುವಾಗಲೇ ಅನಿರೀಕ್ಷಿತ ಶ್ರೀಮಂತ ಪೈಪೋಟಿ ಅವರಿಗೆದುರಾಯಿತು.

ರಜತ ಮಹೋತ್ಸವ ಆಚರಣೆ ಬದಲಾಯಿಸಿ

 • 1952ರಲ್ಲಿ ಅವರು ಪತ್ರಿಕೆಯ ಅದ್ಧೂರಿ ರಜತ ಮಹೋತ್ಸವವನ್ನು ನಡೆಸಿದರು. ಆ ವರ್ಷ ‘ತಾಯಿನಾಡು’ ಮುಖಪುಟ ಲಾಂಛನದಲ್ಲಿ ಅದರ ಹೆಸರಿನ ಅಕ್ಷರಗಳಿಗೆ ಸುತ್ತು ಗೆರೆಯನ್ನು ಹಾಕಿ ಆಕರ್ಷಕವಾಗಿ ಕಾಣುವಂತೆ ಮಾಡಲಾಯಿತು; ಒಂದು ವರ್ಷ ಕಾಲ ಪತ್ರಿಕೆಯ ಮೇಲುಗಡೆ `JUBILEE YEAR' ಎಂದೂ ಛಾಪಿಸಿ ಸಂಭ್ರಮಿಸಿದ್ದಾಯಿತು. ಪತ್ರಿಕೆಯ ಸುಧಾರಣೆಗೆ, ಪ್ರಸರಣ ವಿಸ್ತರಣೆಗೆ ಹಲವಾರು ವಿನೂತನ ತಂತ್ರಗಳನ್ನು ರೂಪಿಸಿದ್ದೂ ಆಯಿತು.
 • ಆದರೆ, ಅಧಿಕ ಸಾಧನ-ಸಂಪತ್ತು-ಬಂಡವಾಳವನ್ನು ಹೊಂದಿದ್ದ, ಯಥೇಚ್ಚ ಧನಬಲ-ರಾಜಕೀಯ ಪ್ರಭಾವವನ್ನುಳ್ಳ ಹಾಗೂ ತಮಗಿಂತ ನವನವೀನ ಮುದ್ರಣಯಂತ್ರಗಳಿಂದ ಸಜ್ಜಾದ ಹಾಗೂ ವಿತರಣಾ ವ್ಯವಸ್ಥೆಗೆ ಸ್ವಂತ ವಾಹನಗಳ ಶ್ರೇಣಿಯನ್ನೇ ಹೊಂದಿದ್ದ ಭಾರೀ ಪತ್ರಿಕಾ ಸಮೂಹವೊಂದು, ಹಿಂದೆಂದೂ ಧೃತಿಗೆಡದ ಶ್ರೀ ರಾಮಯ್ಯನವರನ್ನು ತಲ್ಲಣಗೊಳಿಸಿತು.
 • ಅರ್ಥಿಕ ಚೈತನ್ಯ ಕುಂದಿ, ಸಾಲದ ಹೊರೆ ಏರುತ್ತಿದ್ದ ಹಾಗೂ ಸಿಬ್ಬಂದಿ ಮತ್ತು ನಿರ್ವಹಣಾ ವೆಚ್ಚಗಳು ಮಿತಿ ಮೀರುತ್ತಾ ತಮ್ಮ ಸೀಮಿತ ಸಾಧನ ಸಂಪತ್ತು ಕರಗುತ್ತಾ ಬಂದಾಗ ತಮ್ಮ ಒಂಟಿ ಹೋರಾಟ ಇನ್ನು ನಿರರ್ಥಕವೆಂದು ಶ್ರೀ ರಾಮಯ್ಯನವರು ವಿಧಿಯಿಲ್ಲದೆ ಗ್ರಹಿಸಿದರು. ಸಮಬಲದ ಪೈಪೋಟಿಯಿಂದ ಪತ್ರಿಕೆಯನ್ನು ನಡೆಸಬಲ್ಲ ಸಮೃದ್ಧ ಹಣ-ಜನ ಬೆಂಬಲವುಳ್ಳ ಶ್ರೀಮಂತರೊಬ್ಬರು ಮುಂದೆ ಬಂದಾಗ, ಅವರ ಮಡಿಲಲ್ಲಾದರೂ ‘ತಾಯಿನಾಡು‘ ಪ್ರವರ್ಧಮಾನಕ್ಕೆ ಬಂದು ಶಾಶ್ವತವಾಗಿ ತಲೆ ಎತ್ತಿ ನಿಲ್ಲುವುದೆಂದು ನೆರೆ ನಂಬಿ ಅವರಿಗೆ ತಮ್ಮ ಪ್ರೀತಿಯ ಸಂಸ್ಥೆಯನ್ನು ಶ್ರೀ ಪಿ.ಆರ್.ರಾಮಯ್ಯನವರು ಹಸ್ತಾಂತರಿಸಿದರು; ಈ ಹೊಂಗನಸು ಮರೀಚಿಕೆಯಾದುದೊಂದು ವಿಧಿಯ ದುರ್ವಿಲಾಸ! (17-08-1995)

ಸಾಹಿತ್ಯ ಕೃತಿಗಳು ಬದಲಾಯಿಸಿ

 • ಆಧುನಿಕ ರಷ್ಯಾ
 • ಎಂ.ವೆಂಕಟಕೃಷ್ಣಯ್ಯನವರ ಜೀವನ ಚರಿತ್ರೆ
 • ದಯಾಸಾಗರ
 • ಫ್ರಾನ್ಸಿನ ಮಹಾಕ್ರಾಂತಿ
 • Political Evolution of Mysore

ರಾಜಕೀಯ ಬದಲಾಯಿಸಿ

ಪಿ.ಆರ್.ರಾಮಯ್ಯನವರು ೧೯೫೨ರಿಂದ ೧೯೫೭ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು. ಪಿ.ಆರ್.ರಾಮಯ್ಯನವರು ೧೯೭೦ರಲ್ಲಿ ನಿಧನರಾದರು.

ಪಿ.ಆರ್.ರಾಮಯ್ಯ ಪ್ರಶಸ್ತಿ ಬದಲಾಯಿಸಿ

ಪಿ.ಆರ್.ರಾಮಯ್ಯನವರ ಹೆಸರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿವರ್ಷ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡುತ್ತದೆ.

ಪುರಸ್ಕಾರ ಬದಲಾಯಿಸಿ

ಕರ್ನಾಟಕ ಸರಕಾರವು ೧೯೬೯ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.

ಇವುಗಳನ್ನೂ ಓದಿ ಬದಲಾಯಿಸಿ