ಉದಯಕುಮಾರ್

ಭಾರತೀಯ ನಟ
(ಉದಯಕುಮಾರ ಇಂದ ಪುನರ್ನಿರ್ದೇಶಿತ)

"ಕಲಾ ಕೇಸರಿ" ಮತ್ತು "ನಟ ಸಾಮ್ರಾಟ್" ಎಂದು ಪ್ರಸಿದ್ಧರಾಗಿದ್ದ ಉದಯ್ ಕುಮಾರ್ (ಮಾರ್ಚ್ ೧೬, ೧೯೩೫) ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆ. ರಾಜಕುಮಾರ್, ಕಲ್ಯಾಣಕುಮಾರ್ ಮತ್ತು ಉದಯಕುಮಾರ್, ಹೀಗೆ ಕುಮಾರ ತ್ರಯರಿದ್ದ ಕಾಲ, ಕನ್ನಡ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳು ನಿರ್ಮಾಣವಾದವು.

ಉದಯಕುಮಾರ್
ಜನನ
ಸೂರ್ಯನಾರಾಯಣ ಶಾಸ್ತ್ರಿ

ಮಾರ್ಚ್ ೧೬, ೧೯೩೫
ಮರಣಡಿಸೆಂಬರ್ ೨೮, ೧೯೮೫
ವೃತ್ತಿಚಲನಚಿತ್ರ ನಟ

ಕನ್ನಡ ಚಲನಚಿತ್ರರಂಗದ ಅಪ್ರತಿಮ ಪ್ರತಿಭೆಗಳಲ್ಲಿ ಒಬ್ಬರಾಗಿದ್ದ ಕಲಾಕೇಸರಿ ಉದಯ್ ಕುಮಾರ್ ಅವರು ಮಾರ್ಚ್ 16, 1933ರಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸಯ್ಯ ಶ್ಯಾನುಭೋಗರಾಗಿದ್ದರು. ಉದಯ್ ಕುಮಾರ್ ಅವರ ಮೂಲ ಹೆಸರು ಸೂರ್ಯನಾರಾಯಣ ಮೂರ್ತಿ ಕಾಲಾನುಕ್ರಮದಲ್ಲಿ ಅವರೇ ತಮ್ಮನ್ನು ಕೆಲ ಕಡೆ ಸೂರ್ಯನಾರಾಯಣ ಶಾಸ್ತ್ರಿ ಎಂತಲೂ ಹೇಳಿಕೊಳ್ಳುತ್ತಿದ್ದರು. ಸ್ವಯಂಸೇವಕರಾಗಿ ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಕಮಲಮ್ಮನವರೊಂದಿಗಿನ ವಿವಾಹದ ನಂತರ ಹಿರಿಯ ಪುತ್ರ ರವಿಯ ಅನಾರೋಗ್ಯದ ಕಾರಣ ಚಿಕಿತ್ಸೆಯ ನಿಮಿತ್ತ ಬೆಂಗಳೂರಿನ ಬಂಧುಗಳ ಮನೆಯಲ್ಲಿ ಉಳಿದುಕೊಂಡು ಸಣ್ಣ ಕೆಲಸಗಳಿಗಾಗಿ ಹುಡುಕಾಡುತ್ತಿರುತ್ತಾರೆ. ತಂದೆ ಶ್ರೀನಿವಾಸಯ್ಯ ಅವರ ಮಿತ್ರರಾದ ಆನೇಕಲ್ಲಿನ ಹಾರ್ಮೋನಿಯಂ ಕೃಷ್ಣಮೂರ್ತಿ ಅವರು ಗುಬ್ಬಿ ಕಂಪನಿಯಲ್ಲಿ ಸಣ್ಣ ಕೆಲಸವನ್ನು ಕೊಡಿಸುತ್ತಾರೆ. ಇಷ್ಟವಿಲ್ಲದಿದ್ದರೂ ಕೆಲಸಕ್ಕೆ ಒಪ್ಪಿ ನಾಟಕ ಕಂಪೆನಿಗೆ ಸೇರಿ ಬಹುಬೇಗ ವೀರಣ್ಣ ದಂಪತಿಗಳ ವಿಶ್ವಾಸ ಗಳಿಸುತ್ತಾರೆ. ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ನಾಟಕಗಳಲ್ಲಿ ಪಾತ್ರಗಳನ್ನ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ನಂತರ ಖ್ಯಾತ ಬರಹಗಾರರಾದ ಕಣಗಾಲ್ ಪ್ರಭಾಕರ ಶಾಸ್ತ್ರಿ (ಪುಟ್ಟಣ್ಣ ಕಣಗಾಲ್ ಅವರ ಹಿರಿಯಣ್ಣ) ಅವರ ಸಹಕಾರದೊಂದಿಗೆ ‘ಭಾಗ್ಯೋದಯ’ ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆಯಾಗಿ ಜನವರಿ ೨೬ ೧೯೫೬ರಲ್ಲಿ ಮೊದಲ ಬಾರಿಗೆ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಾರೆ. (ಭಗವಾನ್ ಆ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸಿರುತ್ತಾರೆ). ಅದೇ ದಿನ ಚಿತ್ರ ಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ, ಚಿತ್ರ ನಿರ್ಮಾಪಕರಾದ ಭಕ್ತವತ್ಸಲಂ ಮತ್ತು ಎ.ಸಿ.ನರಸಿಂಹಮೂರ್ತಿಯವರು ಹಾಗು ಚಿತ್ರತಂಡ ತಮ್ಮ ಉದಯ ಪ್ರೊಡಕ್ಷನ್ಸ್ ಲಾಂಛನಕ್ಕೆ ಹೊಂದುವಂತೆ ಇವರಿಗೆ ಉದಯಕುಮಾರ್ ಎಂದು ಮರುನಾಮಕರಣ ಮಾಡುತ್ತಾರೆ.

ಚಿತ್ರಂಗದಲ್ಲಿ ಜನಪ್ರಿಯತೆ

ಬದಲಾಯಿಸಿ

‘ರತ್ನಗಿರಿ ರಹಸ್ಯ’ ಚಿತ್ರದ ಟಾರ್ಜಾನ್ ಮಾದರಿಯ ಪಾತ್ರ ಉದಯ್ ಕುಮಾರ್ ಅವರಿಗೆ ಅಪಾರ ಜನಪ್ರಿಯತೆ ತಂದಿತು. ಅಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರರಂಗದಲ್ಲಿನ ಜನಪ್ರಿಯತೆಯ ಜೊತೆಗೆ ತಮಿಳು, ತೆಲುಗು ಮತ್ತು ಹಲವು ಹಿಂದಿ ಚಲನಚಿತ್ರಗಳಲ್ಲೂ ಅಭಿನಯಿಸಿ ಎಲ್ಲೆಡೆ ಜನಪ್ರಿಯರಾಗಿದ್ದರು. ಅವರು ನಟಿಸಿದ್ದ ಚಿತ್ರಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚಿನದು. ಭಾಗ್ಯೋದಯ, ರತ್ನಗಿರಿ ರಹಸ್ಯ, ಚಂದವಳ್ಳಿಯ ತೋಟ, ವೀರಕೇಸರಿ, ಬೆಟ್ಟದ ಹುಲಿ, ಚಂದ್ರಕುಮಾರ, ವಿಜಯನಗರದ ವೀರಪುತ್ರ, ಶ್ರೀ ರಾಮಾಂಜನೇಯ ಯುದ್ಧ, ಸರ್ವಜ್ಞ, ಸ್ಕೂಲ್ ಮಾಸ್ಟರ್, ಮಿಸ್ ಲೀಲಾವತಿ, ಮಧುಮಾಲತಿ, ಸತ್ಯ ಹರಿಶ್ಚಂದ್ರ, ತ್ರಿವೇಣಿ, ಕಲಾವತಿ, ಹೇಮಾವತಿ ಮುಂತಾದವು ಅವರ ನೆನಪಿಗೆ ಬರುವ ಕೆಲವು ಚಿತ್ರಗಳು. ಚಲನಚಿತ್ರರಂಗದ ಏಳು ಬೀಳುಗಳಲ್ಲಿ ಪ್ರಖ್ಯಾತ ನಾಯಕನಟ, ಪೋಷಕನಟ, ಖಳನಟ ಹೀಗೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ ಉದಯ್ ಕುಮಾರ್ ತಮ್ಮ ಅಭಿನಯದಲ್ಲಿದ್ದ ತನ್ಮಯತೆಯಿಂದ ಚಿತ್ರಪ್ರೇಮಿಗಳ ಕಣ್ಮಣಿಯಾಗಿದ್ದರು. ಅದರಲ್ಲೂ ಬಿರುಸು ಮಾತಿನ ನಿಷ್ಟುರವಾದಿ ಪಾತ್ರಗಳಿಗೆ ಅವರಂತಹ ಕಲಾವಿದ ಅಪರೂಪ ಎಂದರೂ ಸರಿಯೇ. ವಿಶ್ವಾಮಿತ್ರನ ಪಾತ್ರಧಾರಿಯಾಗಿ ಅವರು ನಟಿಸಿದ್ದ ‘ಸತ್ಯ ಹರಿಶ್ಚಂದ್ರ’ದ ಪಾತ್ರ ಅವಿಸ್ಮರಣೀಯವಾದದ್ದು. ಸಂಧ್ಯಾರಾಗದಲ್ಲಿ ರಾಜ್ ಕುಮಾರ್ ಅಣ್ಣನಾಗಿ ನಿಷ್ಠುರಗುಣದ ವ್ಯಕ್ತಿಯಾಗಿ ನಟಿಸಿದ ಅವರ ಪಾತ್ರ ಕೂಡ ಮನಸ್ಸಿನಲ್ಲಿ ಉಳಿಯುವಂತದ್ದು. ರಾಮಾಂಜನೇಯ ಯುದ್ಧ ಚಿತ್ರದಲ್ಲಿ ಹನುಮನಪ್ರಾಣ ಹಾಡಿನಲ್ಲಿ ಚಿತ್ರಣ ಮುಗಿದ ಎಷ್ಟೋ ಸಮಯವಾದರೂ ಅವರು ತಮ್ಮ ಪಾತ್ರದಲ್ಲಿ ಪೂರ್ಣ ತನ್ಮಯರಾಗಿಬಿಟ್ಟಿದ್ದರೆಂದು ಅಂದಿನ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರು ಸ್ಮರಿಸುತ್ತಿದ್ದರು. ಮುಂದೆ ಹೇಮಾವತಿ ಚಿತ್ರದಲ್ಲಿನ ಪ್ರಧಾನ ಪಾತ್ರ ಮತ್ತು ಬಿಳಿ ಹೆಂಡ್ತಿ ಚಿತ್ರದ ಸಣ್ಣ ಪೋಷಕ ಪಾತ್ರಗಳಲ್ಲಿ ಅವರು ನೀಡಿದ ಅಮೋಘ ಅಭಿನಯ ಅಮರವಾದದ್ದು.. ಸೇಡಿಗೆ ಸೇಡು ಇವರ ನೂರನೆಯ ಚಿತ್ರ. ವರ್ಣಚಕ್ರ ಇವರ ಕೊನೆಯ ಚಿತ್ರ. ತಮ್ಮ ೨೯ವರ್ಷಗಳ ನಟನಾ ಜೀವನದಲ್ಲಿ, ಉದಯಕುಮಾರ್ ಸುಮಾರು ೧೫೩ ಕನ್ನಡ ಚಿತ್ರಗಳಲ್ಲೂ, ೧೫ ತೆಲುಗು, ೬ ತಮಿಳು ಹಾಗೂ ೧ ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದರು. ರಾಜ್ ಕುಮಾರ್ ಜೊತೆಯೇ ೩೬ ಚಿತ್ರಗಳಲ್ಲಿ ನಟಿಸಿದ್ದರು. "ಚಂದ್ರಕುಮಾರ" ಚಿತ್ರದಲ್ಲಿ ಉದಯಕುಮಾರ್ ನಾಯಕನಾಗಿದ್ದರೆ, ರಾಜ ಕುಮಾರ್ ಖಳನಾಯಕನಾಗಿ ಅಭಿನಯಿಸಿದ್ದರು.

ಚಿತ್ರ ನಿರ್ಮಾಣ, ಬರಹ, ರಂಗತಂಡ

ಬದಲಾಯಿಸಿ

1965ರಲ್ಲಿ ಇದೇ ಮಹಾಸುದಿನ ಎಂಬ ಚಿತ್ರ ನಿರ್ಮಿಸಿದ್ದರು. ಸ್ವತಃ ಬರಹಗಾರರಾದ ಉದಯಕುಮಾರ್‌ರವರು ದ್ವಿಪದಿಗಳು, ನಾಟಕಗಳು ಹಾಗೂ ಚಿತ್ರಗೀತೆಗಳನ್ನು ಸಹಾ ರಚಿಸಿದ್ದರು. ಸಿನಿಮಾ ಮತ್ತು ರಂಗತರಬೇತಿಗಾಗಿ ಕಲಾ ಶಾಲೆಯನ್ನು ಕೊಡಾ ತೆರೆದಿದ್ದರು. ರಂಗತಂಡವನ್ನು ಕಟ್ಟಿ ಬೆಳೆಸಿದ್ದರು ಒಂದು ಕಾಲದಲ್ಲಿ ಅಪಾರ ವೈಭವದಿಂದ ಬದುಕಿ ಚಿತ್ರರಂಗದ ಬೇಡಿಕೆಯ ಶೃಂಗದಲ್ಲಿದ್ಧ ಉದಯ್ ಕುಮಾರ್ ಇಳಿಮುಖದ ರೇಖೆಯಲ್ಲಿ ಸಣ್ಣಪುಟ್ಟ ಪಾತ್ರಗಳ ಮೊರೆಹೊಗುವಂತಹ ಸ್ಥಿತಿಯಲ್ಲಿ ತಮ್ಮ ಕೊನೆಯ ವರ್ಷಗಳನ್ನು ಕಳೆದರು.

ಕಲಾವಿದರ ಬವಣೆ ವೈದ್ಯರಿಗೇನು ಗೊತ್ತು?

ಬದಲಾಯಿಸಿ

ಉದಯಕುಮಾರ್ ತಮ್ಮ ಸಾವಿನ ಹಿಂದಿನ ದಿನ ಒಂದು ಕಾಗದದ ಚೂರಿನ ಮೇಲೆ ಬರೆದಿದ್ದರಂತೆ – “ಭಗವಂತ ಎತ್ತಿಕೊಂಡಿರುವ ಕೂಸು ನಾನು; ನನ್ನ ಭವಿಷ್ಯ ಏನು ಎಂಬುದು ಅವನಿಗೊಬ್ಬನಿಗೇ ಗೊತ್ತಿದೆ.” ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದಾಗ ಉದಯಕುಮಾರ್ ವ್ಯಕ್ತಮಾಡಿದ ಪ್ರತಿಕ್ರಿಯೆ: “ಕಲಾವಿದನ ಬಾಳ ಬವಣೆ ಏನು ಎಂಬುದು ವೈದ್ಯರಿಗೇನು ಗೊತ್ತು? ನನ್ನ ಬದುಕು ನಿತ್ಯ ಸಂಗ್ರಾಮವಾಗಿರುವಾಗ ಒಂದು ಕ್ಷಣವಾದರೂ ಪುರುಸೊತ್ತು ಹೇಗೆ ಸಾಧ್ಯ?”. ಉದಯಕುಮಾರ್ ಅವರಿಗೆ ಶ್ರದ್ಧಾಂಜಲಿ ಹೇಳುತ್ತಾ ಡಾ. ಹಾ. ಮಾ. ನಾಯಕ್ ಬರೆದಿದ್ದಾರೆ “ಇದು ನಾವು ನಮ್ಮ ಕಲಾವಿದರನ್ನು ನೋಡಿಕೊಳ್ಳುವ ಬಗೆಗೊಂದು ವ್ಯಾಖ್ಯಾನ. ಕೆಲವು ಅತಿರೇಕಗಳನ್ನುಳಿದರೆ ಉದಯಕುಮಾರ್ ಒಬ್ಬ ಶ್ರೇಷ್ಠ ನಟ. ಅವರಿಗೆ ಬದುಕು ಸಂಗ್ರಾಮ! ರಾಜಕೀಯವಿಲ್ಲದೆ ಜನರು ಕಲಾವಿದರನ್ನು ಕಾಣಬೇಕು; ಕಲಾವಿದರೂ ತಮ್ಮ ಬದುಕನ್ನು ಒಂದು ಶಿಸ್ತಿಗೆ ಒಳಪಡಿಸಬೇಕು. ಇದು ಉದಯಕುಮಾರರ ಜೀವನ ಕಲಿಸುವ ಒಂದು ಪಾಠ.”

ಕನ್ನಡಾಭಿಮಾನಿ

ಬದಲಾಯಿಸಿ

ಉದಯಕುಮಾರ್ ಕನ್ನಡದ ಕಟ್ಟಾಭಿಮಾನಿ. ಜನರನ್ನು ಉದ್ರೇಕಿಸುವಂತೆ, ನಿರಭಿಮಾನಕ್ಕಾಗಿ ನಾಚುವಂತೆ ಮಾಡಬಲ್ಲ ಮಾತುಗಾರಿಕೆ ಅವರಲ್ಲಿತ್ತು.

ಡಿಸೆಂಬರ್ ೨೮, ೧೯೮೫ರ ವರ್ಷದಲ್ಲಿ, ತಮ್ಮ ಐವತ್ತು ವರ್ಷಗಳ ಬದುಕಿನ ಆಸುಪಾಸಿನಲ್ಲಿ ನಿಧನರಾದ ಉದಯ್ ಕುಮಾರ್ ಕನ್ನಡ ಚಿತ್ರರಂಗದ ಸ್ಮರಣೀಯ ಗಣ್ಯರಲ್ಲಿ ಪ್ರಮುಖರಾಗಿ ನಿಲ್ಲುವವರು.

ಕಲಾವಿದ ಮಕ್ಕಳು

ಬದಲಾಯಿಸಿ

ಕನ್ನಡ ಚಿತ್ರನಟ ಮತ್ತು ಕಿರುತೆರೆ ನಟ ವಿಕ್ರಮ್ ಉದಯ್ ಕುಮಾರ್(೧೯೫೬), ಶ್ಯಾಮಲತಾ(೧೯೫೮), ಕನ್ನಡ ಚಿತ್ರನಟ ವಿಶ್ವವಿಜೇತ, ಕಿರುತೆರೆ ನಟಿ ರೇಣುಕಾ ಬಾಲಿ.

ಇವರು ಅಭಿನಯಿಸಿದ ಕೆಲವು ಚಿತ್ರಗಳು

ಬದಲಾಯಿಸಿ

ಪ್ರಶಸ್ತಿಗಳು

ಬದಲಾಯಿಸಿ
  • ಹೇಮಾವತಿ ಚಿತ್ರದ ಪಾತ್ರಕ್ಕೆ ಅತ್ಯುತ್ತಮ ಪೋಷಕನಟ ಪ್ರಶಸ್ತಿ.
  • ೧೯೮೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ