16ನೆಯ ಶತಮಾನದ ಆರಂಭದಿಂದ ಸುಮಾರು 150 ವರ್ಷಗಳ ಕಾಲ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಆಳಿದ ಇಕ್ಕೇರಿ ರಾಜವಂಶದ ಚರಿತ್ರೆ ಕನ್ನಡನಾಡಿನ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಈ ವಂಶದ ರಾಜರನ್ನು ಬಿದನೂರು ಅಥವಾ ಕೆಳದಿ ಅರಸರು ಎಂದೂ ಕರೆಯುವುದುಂಟು. ಮೊದಲು ವಿಜಯನಗರದ ಸಾಮಂತರಾಗಿದ್ದ ಇವರು ಆ ಸಾಮ್ರಾಜ್ಯದ ಪತನಾನಂತರ ಸ್ವತಂತ್ರರಾದರು. ಕ್ರಮೇಣ ಸುತ್ತಮುತ್ತಲಿನ ಅನೇಕ ಪಾಳೆಯಗಾರರನ್ನು ಸೋಲಿಸಿ ರಾಜ್ಯವಿಸ್ತರಣೆ ಮಾಡಿದರು. ಒಂದು ಸಂದರ್ಭದಲ್ಲಿ ಔರಂಗಜೇಬನನ್ನೂ ಇವರು ಯುದ್ಧದಲ್ಲಿ ಎದುರಿಸಿದರೆಂದ ಮೇಲೆ ಇವರ ಪ್ರಾಬಲ್ಯ ಎಷ್ಟಿತ್ತೆಂಬುದನ್ನು ಊಹಿಸಬಹುದು. ಅಲ್ಲದೆ ಪೋರ್ಚುಗೀಸ್, ಡಚ್ ಮತ್ತು ಇಂಗ್ಲಿಷ್ ವಸಾಹತುಗಾರರೊಡನೆಯೂ ಇವರು ರಾಜತಾಂತ್ರಿಕ ಸಂಬಂಧ ಬೆಳೆಸಿದ್ದರು. ಇಕ್ಕೇರಿ ರಾಜ್ಯ ತನ್ನ ಉಚ್ಛ್ರಾಯ ಕಾಲದಲ್ಲಿ ಕರ್ನಾಟಕದ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಬಹು ಭಾಗಗಳನ್ನಲ್ಲದೆ, ಕರಾವಳಿಯ ಉತ್ತರದಲ್ಲಿ ಗೋವಾದಿಂದ ಹಿಡಿದು ದಕ್ಷಿಣದಲ್ಲಿ ಕೇರಳದ ಚಂದ್ರಗಿರಿ ನದಿಯವರೆಗಿನ ಪ್ರದೇಶವನ್ನೆಲ್ಲ ಒಳಗೊಂಡಿತ್ತು. ಮೊದಲು ರಾಜಧಾನಿ ಇಕ್ಕೇರಿಯಾಗಿತ್ತು. 1639ರಲ್ಲಿ ಇದನ್ನು ಬಿದನೂರಿಗೆ ಬದಲಾಯಿಸಲಾಯಿತು.

ಮಾಹಿತಿಯ ಮೂಲಗಳು

ಬದಲಾಯಿಸಿ

ಇಕ್ಕೇರಿಯ ಇತಿಹಾಸದ ಬಗ್ಗೆ ಅಲ್ಲಿನ ಅನೇಕ ಶಿಲಾ ಮತ್ತು ತಾಮ್ರಶಾಸನಗಳೂ ಕೈಫಿಯತ್ತುಗಳೂ ಹೆಚ್ಚು ಮಾಹಿತಿ ಒದಗಿಸುತ್ತವೆ. ಜೊತೆಗೆ ಕೆಳದಿಯ ರಾಜವಂಶದ ಬಸವಪ್ಪನಾಯಕನಿಂದ ರಚಿತವಾದ ಸಂಸ್ಕೃತಗ್ರಂಥ ಶಿವತತ್ತ್ವರತ್ನಾಕರ ಮತ್ತು ಲಿಂಗಣ್ಣ ಕವಿಯ ಕನ್ನಡ ಕಾವ್ಯ ಕೆಳದಿನೃಪವಿಜಯ ಎಂಬ ಕೃತಿಗಳೂ ಡೆಲ್ಲವೆಲ್ಲೆ, ವೀಟರ್ ಮಂಡಿ, ಡಾ. ಫ್ರೆಯರ್, ಪಿಂಕರ್ಟನ್, ಅಬ್ಬೆಕೆರಿ ಮುಂತಾದ ವಿದೇಶಿ ನಿವಾಸಿಗಳ ಇತಿವೃತ್ತಗಳೂ ಬಹಳ ಸಹಾಯಕವಾಗಿವೆ. ಇವಲ್ಲದೆ ಪೋರ್ಚುಗೀಸ್ ಮತ್ತು ಡಚ್ಚರ ರಾಜಕೀಯ ದಾಖಲೆಗಳೂ ಅಮೂಲ್ಯ ವಿಷಯಗಳನ್ನು ಒದಗಿಸುತ್ತವೆ.

ರಾಜರುಗಳು

ಬದಲಾಯಿಸಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಹಳ್ಳಿಬೈಲಿನ ಚೌಡಪ್ಪ, ಭದ್ರಪ್ಪ ಎಂಬ ಸಹೋದರರ ಧೈರ್ಯ ಶೌರ್ಯಗಳೇ ಈ ರಾಜ್ಯಸ್ಥಾಪನೆಗೆ ಕಾರಣ. ಈ ಸಾಹಸದ ಬಗ್ಗೆ ಅನೇಕ ಕಥೆಗಳಿವೆ. ಎಲ್ಲೋ ದೊರೆತ ಗುಪ್ತದ್ರವ್ಯದ ಬಲದಿಂದ ಅವರು ಕೆಳದಿಯ ಸುತ್ತಮುತ್ತ ಒಂದು ಪಾಳೆಯಪಟ್ಟನ್ನು ಕಟ್ಟಿ ಕ್ರಮೇಣ ತಮ್ಮ ಸ್ವಭಾವ ಬೆಳೆಸಿಕೊಂಡರೆಂಬುದು ಎಲ್ಲ ಆಧಾರಗಳಿಂದಲೂ ಖಚಿತವಾಗಿ ತಿಳಿದುಬರುತ್ತದೆ. ಚೌಡಗೌಡನ ಏಳ್ಗೆ ವಿಜಯನಗರದ ಅರಸರ ಗಮನವನ್ನು ಸೆಳೆಯಿತು. ಈತ ಅವರಿಂದ ಬಹುಮಾನಿತನಾಗಿ ಅವರೊಡನೆ ಉತ್ತಮ ಸಂಬಂಧ ಬೆಳೆಸಿಕೊಂಡ.

ಚೌಡಗೌಡನ ಸದಾಶಿವನಾಯಕ ವಿಜಯನಗರದ ಕೃಷ್ಣದೇವರಾಯನ ಅತ್ಯಂತ ಧೈರ್ಯಶಾಲಿ ದಳವಾಯಿಗಳಲ್ಲಿ ಒಬ್ಬನೆಂದು ಹೆಸರು ಪಡೆದ. ಇವನು ವಿಜಯನಗರದ ಅರಸರ ಪರವಾಗಿ ಅನೇಕ ದಂಗೆಕೋರರನ್ನು ಸದೆಬಡಿದು, ಕಲ್ಯಾಣಿ ಕಲ್ಬುರ್ಗಿಗಳ ಮೇಲೆ ದಂಡೆತ್ತಿ ಹೋಗಿ ಬೀದರಿನ ಬರೀದ್‍ಷಾಹಿ ಅರಸರನ್ನೂ ಎದುರಿಸಿದ. ಇವನ ಸೇವೆಯನ್ನು ಮೆಚ್ಚಿದ ವಿಜಯನಗರದ ರಾಮರಾಯ ಅರಗ, ಗುತ್ತಿ, ಬಾರಕೂರು ಮತ್ತು ಮಂಗಳೂರು ವಿದೇಶಗಳ ಅಧಿಕಾರವನ್ನು ಇವನಿಗೆ ವಹಿಸಿಕೊಟ್ಟ.

ಸದಾಶಿವನಾಯಕ ಮಗ ದೊಡ್ಡಸಂಕಣ್ಣನಾಯಕ (1566-1570) ಕೇವಲ ನಾಲ್ಕು ವರ್ಷ ರಾಜ್ಯವಾಳಿ, ತನ್ನ ತಮ್ಮ ಚಿಕ್ಕಸಂಕಣ್ಣನಾಯಕನಿಗೆ (1570-1580) ಅಧಿಕಾರ ವಹಿಸಿಕೊಟ್ಟು ತೀರ್ಥಯಾತ್ರೆಗೆ ಹೋದ.

ಚಿಕ್ಕಸಂಕಣ್ಣನಾಯಕನೂ ಇವನ ಅಣ್ಣನ ಮಗ ರಾಮರಾಜಯ್ಯನೂ ಸು. 1570ರ ವರೆಗೆ ಜೊತೆಯಾಗಿ ರಾಜ್ಯಭಾರ ಮಾಡುತ್ತಿದ್ದರು.

ನಂತರ ರಾಮರಾಜಯ್ಯನೊಬ್ಬನೇ ಸು. 1586ರವರೆಗೆ ಆಳಿದ. ರಕ್ಕಸತಂಗಡಿ ಕಾಳಗದಲ್ಲಿ ವಿಜಯನಗರದ ಪತನಾನಂತರ ಇಕ್ಕೇರಿಯ ನಾಯಕರು ರಾಜ್ಯಾಡಳಿತದಲ್ಲಿ ಸ್ವತಂತ್ರರಾದರು. ಆದರೂ ವಿಜಯನಗರದ ವಂಶೀಕರಾದ ಸದಾಶಿವ, ತಿರುಮಲ, ಶ್ರೀರಂಗ ಇವರುಗಳನ್ನು ತಮ್ಮ ಸಾರ್ವಭೌಮರೆಂದು ಗೌರವಿಸುತ್ತಿದ್ದರು.

ರಾಮರಾಜಯ್ಯನ ಅನಂತರ ಪಟ್ಟಕ್ಕೆ ಬಂದವನು ಇವನ ತಮ್ಮ ಒಂದನೆಯ ವೆಂಕಟಪ್ಪನಾಯಕ (ಕ್ರಿ.ಶ. ಸು. 1585-1629). ಈತ ತನ್ನ ಆಳ್ವಿಕೆಯಲ್ಲಿ ಮಲಬಾರಿನವರೆಗೆ ರಾಜ್ಯ ವಿಸ್ತರಿಸಿದ. ಉತ್ತರದಲ್ಲಿ ಬಿಜಾಪುರದ ಆದಿಲ್ ಷಾಹಿ ದೊರೆಗಳ ಸಾಮಂತಳಾಗಿದ್ದ ಗೇರುಸೊಪ್ಪೆಯ ಭೈರಾದೇವಿಯನ್ನು ಸೋಲಿಸಿದ್ದಲ್ಲದೆ, ಇವನ ರಾಜ್ಯದ ಮೇಲೆ ದಾಳಿಮಾಡಿದ ಬಿಜಾಪುರದ ದಂಡನಾಯಕ ಮಂಜೂಲಷಾನನ್ನೂ ಹಿಮ್ಮೆಟ್ಟಿಸಿ ಇಕ್ಕೇರಿ ರಾಜ್ಯವನ್ನೂ ರಾಜವಂಶದ ಪ್ರಾಬಲ್ಯವನ್ನೂ ವರ್ಧಿಸಿದ. ಪೋರ್ಚುಗೀಸರು ಸಂಧಾನಕ್ಕಾಗಿ ಇವನ ಆಸ್ಥಾನಕ್ಕೆ ರಾಯಭಾರವೊಂದನ್ನು ಕಳುಹಿಸಿದ್ದರು. ಇದೇ ಕಾಲದಲ್ಲಿ ಇಕ್ಕೇರಿ ರಾಜ್ಯವನ್ನು ಸಂದರ್ಶಿಸಿದ ಇಟಲಿಯ ಪ್ರವಾಸಿ ಪಿಯೆಟ್ರೋ ಡೆಲ್ಲವೆಲ್ಲೆ, ಆ ಕಾಲದ ಪ್ರಾಮಾಣಿಕನೆಂದು ಪರಿಗಣಿತವಾದ ವರದಿಯೊಂದನ್ನು ಬರೆದಿಟ್ಟಿದ್ದಾನೆ.

ರಾಜ್ಯಾಡಳಿತದಲ್ಲಿ ವೆಂಕಟಪ್ಪನಾಯಕನೊಡನೆ ಮೊದಲಿನಿಂದಲೂ ಸಹಕರಿಸುತ್ತಿದ್ದ ಇವನ ಮೊಮ್ಮಗ ವೀರಭದ್ರನಾಯಕ 1629ರಲ್ಲಿ ಪಟ್ಟಕ್ಕೇರಿದ. 1631ರಲ್ಲಿ ಪೋರ್ಚುಗೀಸರೊಡನೆ ಒಂದು ಒಪ್ಪಂದಕ್ಕೆ ಬಂದು ಕಂಬೋಲಿ ದ್ವೀಪವನ್ನು ಅವರಿಗೆ ಒಪ್ಪಿಸಿದ್ದಲ್ಲದೆ ತನ್ನ ರಾಜ್ಯದ ಬಾರಕೂರು ಮುಂತಾದ ಊರುಗಳಲ್ಲಿ ಅವರ ವ್ಯಾಪಾರಕ್ಕಾಗಿ ವಿಶೇಷ ವಿವರಗಳನ್ನು ವಹಿಸಿಕೊಟ್ಟ. ಬಿಜಾಪುರದ ರಣದುಲ್ಲಾಖಾನ್ ಎಂಬ ಸೇನಾಪತಿಯ ಆಕ್ರಮಣದಿಂದಾಗಿ ಈತ 1638ರಲ್ಲಿ ತನ್ನ ರಾಜಧಾನಿಯಲ್ಲಿ ಇಕ್ಕೇರಿಯಿಂದ ಬಿದನೂರಿಗೆ ವರ್ಗಾಯಿಸಿದ್ದ. ವೀರಭದ್ರನಾಯಕನಿಗೆ ಮಕ್ಕಳಿಲ್ಲದಿದ್ದರಿಂದ ತನ್ನ ದಾಯಾದಿಯಾದ ಶಿವಪ್ಪನಾಯಕ ಮತ್ತು ವೆಂಕಟಪ್ಪನಾಯಕ ಎಂಬುವವರಿಗೆ ರಾಜ್ಯಾಧಿಕಾರವನ್ನು ಒಪ್ಪಿಸಿ, ಶಿವಪ್ಪನಾಯಕನನ್ನು ಪಟ್ಟಕ್ಕೇರಿಸಿದನೆಂದು ಬಸವಪ್ಪನಾಯಕನ ಶಿವ ರತ್ನಾಕರ ತಿಳಿಸುತ್ತದೆ. ಆದರೆ ಚಿಕ್ಕದೇವರಾಜ ವಂಶಾವಳಿಯಲ್ಲಿ ಶಿವಪ್ಪನಾಯಕ ವೀರಭದ್ರನಾಯಕನನ್ನು ಕೊಂದು ರಾಜ್ಯವನ್ನು ವಹಿಸಿಕೊಂಡನೆಂದೂ ಆ ಕಾರಣದಿಂದಾಗಿ ಶಿವಪ್ಪನಾಯಕ ಕಳುಹಿಸಿದ ಉಡುಗೊರೆಗಳನ್ನು ಅವು ದುಷ್ಟನ ಕೊಡುಗೆಯೆಂದು ಮೈಸೂರು ದೊರೆ ತೆಗೆದುಕೊಳ್ಳಲಿಲ್ಲವೆಂದೂ ಹೇಳಿದೆ.

ಶಿವಪ್ಪನಾಯಕನ ಆಡಳಿತದ ಕಾಲ 1645-1660. ಅದು ಇಕ್ಕೇರಿ ಇತಿಹಾಸದಲ್ಲಿ ಉಚ್ಛ್ರಾಯ ಕಾಲ. ಅವನು ಮೆರೆದ ಸಾಹಸ ವೈಭವಗಳಿಂದಲೂ ರಾಜ್ಯಾಡಳಿತದಲ್ಲಿ ಜಾರಿಗೆ ತಂದ ಕಟ್ಟುಪಾಡುಗಳಿಂದಲೂ ಶಿವಪ್ಪನಾಯಕನ ಹೆಸರು ಇಂದಿಗೂ ಆ ನಾಯಕತ್ವದಲ್ಲಿ ಮನೆಮಾತಾಗಿದೆ. ಇವನ ಕಾಲದಲ್ಲಿ ವೆಲ್ಲೂರಿನಿಂದ ರಾಜ್ಯವಾಳುತ್ತಿದ್ದ ವಿಜಯನಗರವಂಶದ ಅರಸು ಶ್ರೀರಂಗರಾಯ ಬಿಜಾಪುರ-ಗೋಲ್ಕೊಂಡ ಸುಲ್ತಾನರ ಸಂಯುಕ್ತ ದಾಳಿಯಿಂದ ಪದಚ್ಯುತನಾಗಿದ್ದ. ಶಿವಪ್ಪನಾಯಕ ದೊಡ್ಡ ಸೈನ್ಯದೊಡನೆ ಹೋಗಿ ವೆಲ್ಲೂರನ್ನು ಗೆದ್ದು, ನೆಲೆಯಿಲ್ಲದೆ ಅಲೆಯುತ್ತಿದ್ದ ಶ್ರೀರಂಗರಾಯನಿಗೆ ಅದನ್ನು ಪುನಃ ಒಪ್ಪಿಸಿ, ಅವನಿಂದ ಅನೇಕ ಬಿರುದುಗಳನ್ನೂ ಬಹುಮಾನಗಳನ್ನೂ ಪಡೆದ. 1653ರಲ್ಲಿ ಡಚ್ಚರ ಸಹಾಯದಿಂದ ಪೋರ್ಚುಗೀಸರನ್ನು ಹೊನ್ನಾವರದಿಂದ ಓಡಿಸಿದ್ದಲ್ಲದೆ, ಅವರಿಂದ ಇಕ್ಕೇರಿ, ಸೊರಬ, ಉಡಗಣಿ ಮುಂತಾದ ಅನೇಕ ಹೊಸ ಕೋಟೆಗಳನ್ನು ಕಟ್ಟಿದ. ಮತ್ತೆ 1657ರಲ್ಲಿ ಪೋರ್ಚುಗೀಸರೊಡನೆ ಯುದ್ಧಮಾಡಿ ಕುಂದಾಪುರ, ಗಂಗೊಳ್ಳಿ ಮತ್ತು ಮಂಗಳೂರುಗಳನ್ನು ಸ್ವಾಧೀನಪಡಿಸಿಕೊಂಡ. ಮೈಸೂರು ಅರಸರೊಡನೆ ಇವನು ಅನೇಕ ಯುದ್ಧಗಳನ್ನು ಮಾಡಿದ್ದಲ್ಲದೆ, ಒಮ್ಮೆ ಅವರ ರಾಜಧಾನಿ ಶ್ರೀರಂಗಪಟ್ಟಣಕ್ಕೂ ಮುತ್ತಿಗೆ ಹಾಕಿದ. ಪಶ್ಚಿಮ ಸಮುದ್ರಕ್ಕೆ ಸೇರಿದಂತಿರುವ ಅರಗ, ಗುತ್ತಿ, ಬಾರಕೂರು ಮತ್ತು ಮಂಗಳೂರು ರಾಜ್ಯಗಳು ಇವನ ಅಧೀನದಲ್ಲಿದ್ದುವೆಂದು ಇವನ ಶಾಸನವೊಂದರಿಂದ ತಿಳಿಯುತ್ತದೆ. ಈ ಕಾಲದಲ್ಲಿ ಇಲ್ಲಿ ಸಂಚರಿಸಿದ ಲಿಯೊನಾರ್ಡೊ ಪಯೆಸ್‍ನ ಪ್ರಕಾರ ಇವನ ರಾಜ್ಯ ಉತ್ತರದಲ್ಲಿ ತುದ್ರಿ ನದಿಯಿಂದ ದಕ್ಷಿಣದಲ್ಲಿ ಕಾಸರಗೋಡು ಅಥವಾ ನೀಲೇಶ್ವರದವರೆಗೂ ಹಬ್ಬಿತ್ತು. ಅಲ್ಲದೆ ಈತ ಮಹಾಶ್ರೀಮಂತ, ಸಾಹಸಿ ಎಂದೂ, 40-50 ಸಾವಿರ ಜನರಿದ್ದ ಸೈನ್ಯವನ್ನು ಸದಾಕಾಲದಲ್ಲೂ ಸಜ್ಜಾಗಿ ಇಟ್ಟಿರುತ್ತಿದ್ದನೆಂದೂ ಪಯೆಸ್ ತಿಳಿಸುತ್ತಾನೆ. ಇವನು ಜಾರಿಗೆ ತಂದ ಭೂ ಸುಧಾರಣೆಗಳು ಶಿವಪ್ಪನಾಯಕನ ಶಿಸ್ತು ಎಂದು ಪ್ರಸಿದ್ಧವಾಗಿ ಇತ್ತೀಚಿನವರೆಗೂ ಪ್ರಚಲಿತವಾಗಿದ್ದವು.

ಶಿವಪ್ಪನಾಯಕನ ಸಾಧನೆಗಳೆಲ್ಲವೂ ಇವನ ಮಕ್ಕಳ ಕಾಲದಲ್ಲಿ ಕರಗಲಾರಂಭಿಸಿದುವು. ಮಗ ಭದ್ರಪ್ಪನಾಯಕನ ಕಾಲದಲ್ಲಿ (1662-64) ರಾಜಧಾನಿ ಬಿದನೂರು ಮತ್ತು ಭುವನಗಿರಿಗಳನ್ನು ಬಿಜಾಪುರದ ಸುಲ್ತಾನರು ಆಕ್ರಮಿಸಿದರು. 1664ರಲ್ಲಿ ಶಿವಾಜಿ ಕುಂದಾಪುರವನ್ನು ಆಕ್ರಮಿಸಿ ರಾಜ್ಯದ ಉತ್ತರ ಭಾಗವನ್ನೆಲ್ಲ ಕೊಳ್ಳೆ ಹೊಡೆದ. ಅನಂತರ ಪಟ್ಟಕ್ಕೆ ಬಂದ ಸೋಮಶೇಖರನಾಯಕ ವಿಲಾಸಿಯೂ ಕ್ರೂರನೂ ಆಗಿದ್ದುದರಿಂದ, 1671ರಲ್ಲಿ ಜನರೇ ಇವನನ್ನು ಕೊಲೆ ಮಾಡಿದರು. ಇವನಿಗೆ ಮಕ್ಕಳು ಇಲ್ಲದ್ದರಿಂದ ರಾಜ್ಯದಲ್ಲಿ ಅನಾಯಕತ್ವವುಂಟಾಯಿತು.

ಈ ಕಷ್ಟ ಸಮಯದಲ್ಲಿ ಸೋಮಶೇಖರನಾಯಕನ ಹೆಂಡತಿ ಚೆನ್ನಮ್ಮಾಜಿ ರಾಜ್ಯಸೂತ್ರವನ್ನು ಸ್ವತಃ ವಹಿಸಿಕೊಂಡು ಪರಿಸ್ಥಿತಿಯನ್ನು ತಹಬಂದಿಗೆ ತಂದಳು. ಬಸವಪ್ಪನಾಯಕನೆಂಬುವನನ್ನು ದತ್ತು ತೆಗೆದುಕೊಂಡು ಆಡಳಿತದಲ್ಲಿ ತರಬೇತಿ ನೀಡಿದಳು. ರಾಜ್ಯದ ಪೂರ್ವಭಾಗದಲ್ಲಿದ್ದ ಬಸವಾಪಟ್ಟಣ ಮುಂತಾದ ಪ್ರಾಂತ್ಯಗಳನ್ನು ವಶಪಡಿಸಿಕೊಂಡು, ಅಲ್ಲಿ ತನ್ನ ಹೆಸರಿನಲ್ಲಿ ಚನ್ನಗಿರಿ ಎಂದು ಕೋಟೆ ಕಟ್ಟಿಸಿದಳು. ಮೊರೆಹೊಕ್ಕ ಶಿವಾಜಿಯ ಮಗ ರಾಜಾರಾಮನಿಗೆ ಇವಳು ಆಶ್ರಯ ನೀಡಿ, ಔರಂಗಜೇಬನನ್ನೂ ಯುದ್ಧದಲ್ಲಿ ಎದುರಿಸಿದಳು. ಬಹಳ ಕ್ಲಿಷ್ಟಪರಿಸ್ಥಿತಿಯಲ್ಲಿ ಆಡಳಿತವನ್ನು ವಹಿಸಿಕೊಂಡ ಚೆನ್ನಮ್ಮಾಜಿ ಎಲ್ಲ ಕಷ್ಟ ಕೋಟಲೆಗಳನ್ನೂ ಮೆಟ್ಟಿಕ್ಕಿ, ಹದಿನಾರು ವರ್ಷ ಕಾಲ ದಕ್ಷತೆಯಿಂದ ಆಳಿ, ವಂಶದ ಕೀರ್ತಿಯನ್ನು ಎತ್ತಿಹಿಡಿದಳು.

ಇವಳ ಮಗ ಬಸವಪ್ಪನಾಯಕ (1691-1714) ದೇಶದಲ್ಲಿ ಹಲವಾರು ಧರ್ಮ ಕಾರ್ಯಗಳಿಗೆ ಉತ್ತೇಜನ ಕೊಟ್ಟು ಧರ್ಮಪ್ರಭುವೆನಿಸಿದ. ಬಸವಪ್ಪನಾಯಕನ ಕುಮಾರ ಇಮ್ಮಡಿ ಸೋಮಶೇಖರನಾಯಕ (1715-1739) ಶಿರಾದ ಮೇಲೆ ದಾಳಿ ಮಾಡಿ ಅಜ್ಜಂಪುರ, ಸಂತೇಬೆನ್ನೂರು ಮುಂತಾದ ಪ್ರದೇಶಗಳನ್ನು ಮೊಗಲರಿಂದ ವಶಪಡಿಸಿಕೊಂಡ. ಇವನ ಅನಂತರ ಸೋಮಶೇಖರನ ತಮ್ಮನ ಮಗ ಎರಡನೆಯ ಬಸವಪ್ಪನಾಯಕ ರಾಜ್ಯವಾಳಿದ (1739-1755). 1748ರಲ್ಲಿ ಚಿತ್ರದುರ್ಗದ ಪಾಳೆಯ ಪಟ್ಟನ್ನು ನಿರ್ನಾಮ ಮಾಡಿದ್ದಲ್ಲದೆ, ಅದೇ ಸಂದರ್ಭದಲ್ಲಿ ಆರ್ಕಾಟಿನ ನವಾಬ ಚಂದಾಸಾಹೇಬನನ್ನೂ ಸೆರೆಹಿಡಿದ.

ಇವನ ಮರಣಾನಂತರ, ಇವನ ದತ್ತುಪುತ್ರ ಚನ್ನಬಸವನಾಯಕ (1755-56) ದುರ್ಮರಣಕ್ಕೀಡಾಗಲು, ಎರಡನೆಯ ಬಸವಪ್ಪನಾಯಕನ ಹೆಂಡತಿ ವೀರಮ್ಮಾಜಿ ರಾಜ್ಯಾಡಳಿತವನ್ನು ವಹಿಸಿಕೊಂಡಳು. ಸೋಮಶೇಖರನೆಂಬುವನನ್ನು ದತ್ತು ಸ್ವೀಕರಿಸಿ ಅವನಿಗೆ ಪಟ್ಟಕಟ್ಟಿದ್ದರೂ ರಾಜ್ಯದ ಕಾರುಬಾರೆಲ್ಲ ಇವಳ ವಶದಲ್ಲೇ ಇತ್ತು. ಇವಳ ನಡವಳಿಕೆ ಅಹಿತಕರವಾಗಿತ್ತು. ಈಕೆ ಸುಲಿಗೆ ಮತ್ತು ಕ್ರೂರ ಆಡಳಿತದಲ್ಲಿ ನಿರತಳಾಗಿದ್ದಳು. ಆದ್ದರಿಂದ ಇವಳು ಪ್ರಜೆಗಳಿಗೆ ಅಪ್ರಿಯಳಾದಳು. ಇಂಥ ಸಂದರ್ಭವನ್ನೇ ಕಾಯುತ್ತಿದ್ದ ಮೈಸೂರು ಅರಸರ ಸೈನ್ಯಾಧಿಕಾರಿ ಹೈದರ್ ಆಲಿ, ಕ್ಷುಲ್ಲಕ ನೆಪಮಾಡಿಕೊಂಡು 1763ರಲ್ಲಿ ಬಿದನೂರನ್ನು ವಶಪಡಿಸಿಕೊಂಡ. ಒಂದೂವರೆ ಶತಮಾನ ಕಾಲ ಪಶ್ಚಿಮ ಕರ್ನಾಟಕದಲ್ಲಿ ವಿಜಯನಗರದ ಉತ್ತರಾಧಿಕಾರಿಯಂತೆ ವೈಭವದಿಂದ ರಾಜ್ಯವಾಳಿದ ಈ ರಾಜವಂಶ ಅಳಿಯಿತು.

ಕೊಡುಗೆಗಳು

ಬದಲಾಯಿಸಿ

ಇಕ್ಕೇರಿಯ ಅರಸರು ರಾಜ್ಯಾಡಳಿತದಲ್ಲಿ ಮಾತ್ರವಲ್ಲದೆ ಇತರ ರಂಗಗಳಲ್ಲೂ ವಿಜಯನಗರದ ಉತ್ತರಾಧಿಕಾರಿಗಳು ಎನ್ನಬಹುದು. ವ್ಯಾಪಾರ, ಉದ್ಯಮಗಳಿಂದ ದೇಶದ ಸಂಪತ್ತು ಅಭಿವೃದ್ಧಿಹೊಂದಿತು. ಮಠ ದೇವಾಲಯಗಳು ಧರ್ಮದತ್ತಿಗಳಿಂದ ಪೋಷಿತವಾದುವು. ವಾಸ್ತುಶಿಲ್ಪ, ನೃತ್ಯ, ಸಂಗೀತಾದಿ ಕಲೆಗಳು ಉತ್ತೇಜನ ಪಡೆದುವು. ಈ ಕಾಲದಲ್ಲಿ ಅನೇಕ ಕವಿ, ವಿದ್ವಾಂಸರು ರಾಜಾಶ್ರಯ ಗಳಿಸಿದರು. ಈ ಅರಸರು ಸ್ವತಃ ವೀರಶೈವ ಪಂಥೀಯರಾದರೂ ಎಲ್ಲ ಧರ್ಮಗಳನ್ನೂ ಸಮಾನತೆಯಿಂದ ರಕ್ಷಿಸುತ್ತಿದ್ದರು. ಇವರ ಮನೆದೇವರು ಕೊಲ್ಲೂರು ಮೂಕಾಂಬಿಕೆ. ಅದ್ವೈತಪೀಠಗಳಾದ ಶೃಂಗೇರಿ, ಮುಳಬಾಗಿಲು ಮಠಗಳೂ, ಉಡುಪಿ, ಕೊಡಲಿ ಮುಂತಾದ ದ್ವೈತಮಠಗಳೂ ವೀರಶೈವ ಧರ್ಮದ ಮಠಗಳಾದ(ರಂಭಾಪುರಿ ಪೀಠದ)ಬಾಳೆಹೊನ್ನೂರು ಕವಲೆದುರ್ಗ ಮುಂತಾದ ಶೈವಮಠಗಳೂ ಇವರಿಂದ ದತ್ತಿಗಳನ್ನು ಪಡೆದ ಬಗ್ಗೆ ಅನೇಕ ದಾಖಲೆಗಳು ದೊರಕುತ್ತವೆ. ರಾಷ್ಟ್ರದಲ್ಲಿ ನೆಲೆಸಿದ್ದ ಸೌಖ್ಯ ಸಮೃದ್ಧಿಗಳನ್ನು ಡೆಲ್ಲವೆಲ್ಲೆ, ಪಯೆಸ್ ಮುಂತಾದ ಅನೇಕ ವಿದೇಶಿ ಪ್ರವಾಸಿಗಳು ಕೊಂಡಾಡಿದ್ದಾರೆ. ಇವರ ಕಾಲದಲ್ಲಿ ಕಟ್ಟಲಾದ ಕೆಳದಿಯ ರಾಮೇಶ್ವರ ಮತ್ತು ವೀರಭದ್ರ ದೇವಾಲಯಗಳು, ಇಕ್ಕೇರಿಯ ಅಘೋರೇಶ್ವರ ದೇವಾಲಯ, ಹಳೆಯ ನಗರದಲ್ಲಿರುವ ಅರಮನೆಯ ಅವಶೇಷಗಳು, ಕವಲೆದುರ್ಗ, ಭುವನಗಿರಿ ಮುಂತಾದ ಕೋಟೆಗಳು ಆ ಕಾಲದ ವಾಸ್ತುವೈಭವವನ್ನು ಇಂದಿಗೂ ಸಾರುತ್ತಿವೆ. ಕೆಳದಿಯ ವೀರಭದ್ರ ದೇವಾಲಯದ ಭುವನೇಶ್ವರಿಯಲ್ಲಿ ಕೆತ್ತಿರುವ ಗಂಡಭೇರುಂಡವಂತೂ ಅಮೋಘ ಶಿಲ್ಪಕೃತಿಯೆಂದು ಪ್ರಸಿದ್ಧವಾಗಿದೆ.

ಕೆಳದಿಯ ಅರಸರು ಅನೇಕ ಕವಿ, ವಿದ್ವಾಂಸರಿಗೆ ಆಶ್ರಯ ನೀಡಿದ್ದುದೇ ಅಲ್ಲದೆ, ಕೆಲವರು ಸ್ವತಃ ಕವಿಗಳಾಗಿದ್ದರು. ಮೊದಲನೆಯ ವೆಂಕಟಪ್ಪನಾಯಕ ಶಿವಗೀತವೆಂಬ ಸಂಸ್ಕøತ ಕಾವ್ಯದ ಕರ್ತೃ. ಇವನ ಕಾಲದಲ್ಲಿ ತಿರುಮಲಭಟ್ಟನೆಂಬುವನು ಶಿವಾಷ್ಟಗೀತೆ ಬರೆದ. ರಂಗನಾಥ ದೀಕ್ಷಿತನೆಂಬುವನು ಆಗಮಗ್ರಂಥ ತಂತ್ರಸಾರಕ್ಕೆ ವ್ಯಾಖ್ಯಾನ ರಚಿಸಿದ. ಅಶ್ವಪಂಡಿತ ಮಾನಪ್ರಿಯ ಎಂಬ ಅಶ್ವಶಾಸ್ತ್ರ ಬರೆದ. ವಿಶಿಷ್ಟಾದ್ವೈತ ಪಂಡಿತ ರಾಮಾನುಜಶ್ರಿಂಗಿ, ಮಾಧ್ವಗುರುಗಳಾದ ವಾದಿರಾಜತೀರ್ಥ ಮತ್ತು ವೇದ ವೇದ್ಯತೀರ್ಥ ಮುಂತಾದವರು ಗೌರವಿತರಾದರು. ಚೆನ್ನಮಾಜಿಯ ದತ್ತು ಮಗ ಒಂದನೆಯ ಬಸವಪ್ಪ ಸಂಸ್ಕøತದಲ್ಲಿ ಶಿವತತ್ತ್ವರತ್ನಾಕರ ಎಂಬ ಬೃಹತ್ ಗ್ರಂಥವನ್ನು ಬರೆದಿದ್ದಾನೆ. ಇವನು ಸುಭಾಷಿತ ಸುರದ್ರುಮ ಎಂಬ ಮತ್ತೊಂದು ಸಂಸ್ಕøತ ಗ್ರಂಥವನ್ನೂ ಸೂಕ್ತಿ ಸುಧಾಕರ ಎಂಬ ಕನ್ನಡ ಗ್ರಂಥವನ್ನೂ ರಚಿಸಿದ್ದಾನೆ. ಕನ್ನಡದಲ್ಲಿ ಶಿವಪೂಜಾವಿಧಾನವನ್ನು ರಚಿಸಿರುವ ನಿರ್ವಾಣಯ್ಯ, ಅನೇಕ ಕನ್ನಡ ಹಾಡುಗಳನ್ನು ಬರೆದಿರುವ ಅಪ್ಪಯ್ಯ ಇವರೂ ಈ ಕಾಲದವರು.[] []


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ