ಇಕ್ಕೇರಿ ವಾಸ್ತುಶಿಲ್ಪ

ಇಕ್ಕೇರಿ ಅರಸರ ಆಳ್ವಿಕೆಗೆ ಸಂಬಂಧಿಸಿದ ಶಿವತತ್ತ್ವರತ್ನಾಕರ, ಕೆಳದಿ ನೃಪವಿಜಯ ಮುಂತಾದ ಸ್ಥಳೀಯ ಕೃತಿಗಳಲ್ಲೂ ಪಯೆಸ್, ಡೆಲ್ಲವಲ್ಲೆ ಮುಂತಾದ ವಿದೇಶೀಯರ ಬರಹಗಳಲ್ಲೂ ಅನೇಕ ಸಮಕಾಲೀನ ಕೋಟೆ-ಕೊತ್ತಳಗಳ, ಸುಂದರ ನಗರಗಳ, ವೈಭವಯುತ ಅರಮನೆ, ದೇವಾಲಯಗಳ ವರ್ಣನೆಗಳು ದೊರಕುತ್ತವೆ. ಆ ವಾಸ್ತುಕೃತಿಗಳಲ್ಲಿ ಹಲವು ಇಂದಿಗೂ ಉಳಿದುಬಂದಿವೆ. ಆದರೆ ಅವುಗಳಲ್ಲಿ ಬಹುಮಟ್ಟಿನವು ಈಗ ಅತ್ಯಂತ ಶಿಥಿಲಾವಸ್ಥೆಯಲ್ಲಿವೆ. ಅವುಗಳ ವಿಶೇಷ ಅಧ್ಯಯನವೇನೂ ನಡೆದಿಲ್ಲದಿರುವುದರಿಂದ ಆ ಉಚ್ಛ್ರಾಯ ಕಾಲದ ಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸುವುದು ಕಷ್ಟಸಾಧ್ಯ.

ಕೋಟೆ-ಅರಮನೆ

ಬದಲಾಯಿಸಿ

ಸಮಕಾಲೀನ ಕೋಟೆಗಳ ಪೈಕಿ, ಶಿವಮೊಗ್ಗ ಜಿಲ್ಲೆಯ ನಗರದಲ್ಲಿರುವ (ಬಿದನೂರು) ಕೋಟೆ ಇದ್ದುದರಲ್ಲಿ ಸುಮಾರು ಒಳ್ಳೆಯ ಸ್ಥಿತಿಯಲ್ಲಿ ಉಳಿದಿದೆ. ಇಕ್ಕೇರಿ ಅರಸರು ತಮ್ಮ ರಾಜಧಾನಿಯನ್ನು 1638ರ ಹೊತ್ತಿಗೆ ಅಲ್ಲಿಗೆ ಬದಲಾಯಿಸಿದ್ದರು. ಈಗ ಅಲ್ಲಿರುವ ಬಹುತೇಕ ಕಟ್ಟಡಗಳನ್ನು ಶಿವಪ್ಪನಾಯಕನ ಕಾಲದಲ್ಲಿ ಕಟ್ಟಿರಬಹುದೆಂಬ ನಂಬಿಕೆ ಇದೆ. ಇಕ್ಕೇರಿ ರಾಜವಂಶದ ಪತನದ (1763) ಅನಂತರ, ಹೈದರ್ ಆಲಿ ಮತ್ತು ಟಿಪ್ಪುಸುಲ್ತಾನರ ಕಾಲದಲ್ಲೂ ಈ ಕೋಟೆ ಊರ್ಜಿತಸ್ಥಿತಿಯಲ್ಲಿದ್ದು, ಅನಂತರ ಶಿಥಿಲವಾಗಲಾರಂಭಿಸಿತು. ಕೋಟೆ ಪೂರ್ಣವಾಗಿ ಕಲ್ಲುಕಟ್ಟಡ; ವಿನ್ಯಾಸದಲ್ಲಿ ಮಾವಿನಕಾಯಿಯಂತಿದ್ದು ಸುತ್ತಲೂ ಕಂದಕದಿಂದ ಆವೃತವಾಗಿದೆ. ಮೇಲೆ ಹೋದಂತೆಲ್ಲ ಕಿರಿದಾಗುವ ಅದರ ಗೋಡೆಯ ಮೇಲ್ಭಾಗದಲ್ಲಿ, ಬಂದೂಕನ್ನು ಉಪಯೋಗಿಸಲು ಅನುಕೂಲವಾಗುವಂತೆ ಮಧ್ಯೆ ಮಧ್ಯೆ ಸ್ಥಳಗಳನ್ನು ಬಿಟ್ಟು ದಂತಪಂಕ್ತಿಯಂತೆ ಎತ್ತಿರುವ ಕೈಪಿಡಿಗೋಡೆಯಿದೆ. ಕೋಟೆಗೋಡೆಯ ಹೊರ ಮೈ ಹೆಚ್ಚು ಕಡಿಮೆ ನೇರವಾಗಿದ್ದರೂ ಅಲ್ಲಲ್ಲಿ ದುಂಡನೆಯ ಒತ್ತುಗೋಡೆಗಳಿವೆ. ಕೋಟೆಯ ಉತ್ತರ ಭಾಗದಲ್ಲಿ ಅದರ ಮುಖ್ಯದ್ವಾರವಿದೆ. ಅದನ್ನು ತಲುಪಲು ಕಂದಕದ ಮೇಲೆ ಸೇತುವೆಯೊಂದಿದೆ. ದ್ವಾರದ ಎರಡು ಪಕ್ಕಗಳಲ್ಲೂ ದುಂಡನೆಯ ಬತೇರಿಗಳಿವೆ. ಅವುಗಳಲ್ಲೊಂದರಲ್ಲಿ ಒಂದು ಸಣ್ಣ ದಿಡ್ಡಿಬಾಗಿಲಿದೆ. ಕೋಟೆಯ ಒಳಭಾಗದಲ್ಲಿ ಅರಮನೆಯ ಭಾಗಗಳಷ್ಟನ್ನೇ ಆವರಿಸುವಂತೆ ಒಂದು ಒಳಕೋಟೆಯಿದೆ. ರಕ್ಷಣೆಯ ಅವಶ್ಯಕತೆಗೆ ತಕ್ಕಂತೆ ಆಯಕಟ್ಟಿನ ಸ್ಥಳಗಳಲ್ಲಿ ಕಾವಲುಗಾರರ ಕೋಟೆಗಳೂ ಬತ್ತೇರಿಗಳೂ ಬಾವಿಗಳೂ ನೀರಿನ ತೊಟ್ಟಿಗಳೂ ಮದ್ದಿನ ಮನೆಗಳೂ ಇದ್ದುವು. ಅದೇ ಜಿಲ್ಲೆಯ ಚನ್ನಗಿರಿಯಲ್ಲಿ ಎರಡು ಸುತ್ತಿನ ಕೋಟೆಯಿದೆ. ಅದು ರಾಣಿ ಚೆನ್ನಮ್ಮಾಜಿ ಕಟ್ಟಿಸಿದ್ದೆಂದು ತಿಳಿದುಬರುತ್ತದೆ. ಹಾಗೆಯೇ ಕವಲೆದುರ್ಗ, ಹೊನ್ನಾವರ, ಕುಮಟ, ಭಾರಂಗಿ ಮುಂತಾದೆಡೆಗಳಲ್ಲೂ ಆ ಕಾಲದ ಕೋಟೆಗಳ ಅವಶೇಷಗಳಿವೆ.

ನಗರದ ಒಳಕೋಟೆಯ ಒಳಭಾಗದಲ್ಲಿದ್ದ ಶಿವಪ್ಪನಾಯಕನ ಕಾಲದ ಅರಮನೆಯ ಕೆಲವು ಕಂಬಗಳು ಮತ್ತು ಅಡಿಪಾಯಗಳು ಮಾತ್ರವೇ ಉಳಿದಿದ್ದು, ಅವುಗಳಲ್ಲಿ ದರ್ಬಾರು ಹಜಾರ, ಒಳಕೋಣೆ ಮುಂತಾದುವು ಇದ್ದ ಸ್ಥಳಗಳನ್ನು ಮಾತ್ರ ಗುರುತಿಸಬಹುದು. ಇಕ್ಕೇರಿ ಮತ್ತು ಕೆಳದಿಯ ಅರಮನೆಗಳಲ್ಲಿ ಏನೂ ಉಳಿದಿಲ್ಲವೆಂದೇ ಹೇಳಬಹುದು.

ಕೊಳಗಳು

ಬದಲಾಯಿಸಿ

ಇಕ್ಕೇರಿಯ ವೈಭವದ ದ್ಯೋತಕವಾಗಿ, ಆ ಕಾಲದ ಕೆಲವು ಕೊಳಗಳು ಇನ್ನೂ ಒಳ್ಳೆಯ ಸ್ಥಿತಿಯಲ್ಲಿ ಉಳಿದಿವೆ. ಇವುಗಳಲ್ಲಿ ನಗರದ ಸಮೀಪದಲ್ಲಿರುವ ದೇವಗಂಗೆ ಒಂದು ವಿಚಿತ್ರರೀತಿಯ ಕೊಳ. ಇಲ್ಲಿ 285' ಉದ್ದ 98' ಅಗಲದ ಪ್ರಾಂಗಣದ ಮಧ್ಯೆ ಅನೇಕ ಕೊಳಗಳು ನಿರ್ಮಿತವಾಗಿವೆ. ಇವುಗಳಲ್ಲಿ ಅತಿ ದೊಡ್ಡದು 83' ಉದ್ದ ಮತ್ತು 68' ಅಗಲವಿದೆ. ಇದರ ಮಧ್ಯಭಾಗದಲ್ಲಿ ಒಂದು ಚಿಕ್ಕ ಮಂಟಪವಿದ್ದು ಅದಕ್ಕೆ ಹೋಗಲು ಒಂದು ಸಣ್ಣ ಸೇತುವೆಯೂ ಇದೆ. ಇಲ್ಲಿನ ಇತರ ಕೆಲವು ಕೊಳಗಳ ತಳವಿನ್ಯಾಸ ಪದ್ಮ, ನಕ್ಷತ್ರ ಮುಂತಾದ ಆಕಾರಗಳಲ್ಲಿವೆ. ಇವೆಲ್ಲಕ್ಕೂ ಬೆಟ್ಟದೆಡೆಯಿಂದ ಹರಿಯುತ್ತಿದ್ದ ಚಿಕ್ಕ ಝರಿಯೊಂದನ್ನು ತಿರುಗಿಸಿ ನೀರೊದಗಿಸಲಾಗುತ್ತಿತ್ತು. ಈ ಕೊಳಗಳು ಅಂತಃಪುರದವರ ಜಲಕ್ರೀಡೆಗಾಗಿ ಕಟ್ಟಲಾಗಿತ್ತೆಂದು ಪ್ರತೀತಿ. ಚಂಪಕಾಸರಸ್ಸು ಎಂದು ಕರೆಯುವ ಇನ್ನೊಂದು ಸುಂದರ ಕೊಳ ಶಿವಮೊಗ್ಗ ಜಿಲ್ಲೆಯ ಆನಂದಾಪುರದಲ್ಲಿದೆ.

ದೇವಾಲಯಗಳು

ಬದಲಾಯಿಸಿ

ಇಕ್ಕೇರಿ ಅರಸರ ಆಳ್ವಿಕೆಯ ಕಾಲದಲ್ಲಿ, ಅವರು ಆಳುತ್ತಿದ್ದ ಮಲೆನಾಡಿನ ಭಾಗಗಳಲ್ಲಿ ಒಂದು ವಿಶಿಷ್ಟರೀತಿಯ ದೇವಾಲಯ ರಚನಾ ಶೈಲಿ ಬೆಳೆದುಬಂದಿತು. ಇದೇ ಕಾಲದಲ್ಲಿ ದಕ್ಷಿಣಭಾರತದ ಇತರೆಡೆಗಳಲ್ಲಿ ಪ್ರಚಲಿತವಾಗಿದ್ದ ವಿಜಯನಗರ ರೀತಿಯ ದ್ರಾವಿಡ ವಾಸ್ತುಶೈಲಿಯ ಮತ್ತು ಹಿಂದೆ ಇದೇ ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಮೆರೆದಿದ್ದ ಹೊಯ್ಸಳ ವಾಸ್ತುಶೈಲಿಯ ಮಿಶ್ರಣ ಇಲ್ಲಿ ಕಂಡುಬರುತ್ತದೆ. ಈ ಸಂಕರಶೈಲಿಯನ್ನು ಇಕ್ಕೇರಿ ಶೈಲಿ ಅಥವಾ ಮಲೆನಾಡು ಶೈಲಿಯೆಂದು ಕರೆಯುವ ರೂಢಿಯಿದೆ.

ಕ್ರಿ. ಶ. ಸು. 1520ರಲ್ಲಿ ಕಟ್ಟಲಾಗಿರುವ ಇಕ್ಕೇರಿಯಲ್ಲಿರುವ ಅಘೋರೇಶ್ವರ ದೇವಾಲಯ ಈ ಶೈಲಿಗೆ ಒಳ್ಳೆಯ ಉದಾಹರಣೆ. ಇದು 5 ದಪ್ಪ ದಿಂಡುಗಳನ್ನೊಳಗೊಂಡ ಆರು ಅಡಿ ಎತ್ತರದ ಜಗಲಿಯ ಮೇಲೆ ಇದ್ದು, ಅಡಿದಿಂಡಿನ ಮೇಲೆ ಒಂದರಲ್ಲಿ ಕೀರ್ತಿಮುಖಗಳ ಮತ್ತು ಇನ್ನೊಂದರಲ್ಲಿ ಮೇಲೆ ಸಿಂಹಸಾಲುಗಳ ಅಲಂಕರಣವಿದೆ. ತಳವಿನ್ಯಾಸದಲ್ಲಿ ಈ ಜಗತಿ ಚತುರಸ್ರಾಕಾರವಾಗಿದ್ದರೂ ಪರಿಘದ ಓಟವನ್ನು ಅಲ್ಲಲ್ಲಿ ಹಿಂದಕ್ಕೆ ಮುಂದಕ್ಕೆ ಜಗ್ಗಿರುವುದರಿಂದ ಅಂಚುಗಳು ದಂತ ಪಂಕ್ತಿಯಂತೆ ಕಾಣುತ್ತವೆ. ಈ ಅಂಗಗಳಲ್ಲೆಲ್ಲಾ ಹೊಯ್ಸಳ ಶೈಲಿಯ ಸ್ವರೂಪವನ್ನೇ ಅನುಕರಿಸಿದ್ದರೂ ಜಗತಿಯ ಅಗಲ ಬಹಳ ಕಿರಿದಾಗಿದ್ದು, ಅದಕ್ಕೆ ಹತ್ತಲು ಮೆಟ್ಟಿಲುಗಳೂ ಇಲ್ಲದಿರುವುದರಿಂದ, ಈ ಜಗತಿ ಹೊಯ್ಸಳ ದೇವಾಲಯಗಳಲ್ಲಿರುವಂತೆ ಪ್ರದಕ್ಷಿಣೆಗೆ ಅನುವಾಗುವಂತೆ ಕಟ್ಟಲಾಗಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಜಗತಿಯ ಮೇಲಿನ ಗುಡಿಭಾಗದಲ್ಲಿ ಒಂದು ಚತುರಸ್ರಾಕಾರದ ಗರ್ಭಗೃಹವೂ ಅದರ ಮುಂದೆ ತೆರೆದ ಸುಕನಾಸಿಯೂ ಇದ್ದು ಅದಕ್ಕೂ ಮುಂದೆ 25 ಅಂಕಣಗಳ ಮಂಟಪವಿದೆ. ಗರ್ಭಗೃಹದ ಹೊರಭಿತ್ತಿಯ ಮೇಲೆ ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಪಾರ್ಶ್ವಗಳಲ್ಲಿ ದೇವಕೋಷ್ಟಕಗಳಿದ್ದು, ಅವುಗಳ ಮೇಲೆ ಸಿಂಹಪಟ್ಟಿಕೆ ಮತ್ತು ಗೋಪುರಗಳ ಅಲಂಕರಣವಿದೆ. ಸೂರಿನ ಭಾಗದಲ್ಲಿ s ಆಕಾರದ ಕಪೋತವಿದೆ. ಗರ್ಭಗೃಹದ ಮೇಲಿನ ಗೋಪುರ ಎರಡು ತಲಗಳಲ್ಲಿದ್ದು ಚಿಕ್ಕ ಗೋಪುರಗಳ ಮತ್ತು ನಿಂತ ಸಿಂಹಗಳ ಶಿಲ್ಪಗಳಿಂದ ಅಲಂಕೃತವಾಗಿದೆ. ಕೆಳತಲದ ಪೂರ್ವಭಾಗದಲ್ಲಿ, ಗೋಪುರದ ಒಳಗಿನ ಬರಿ ಕೋಣೆಗೆ ಹೋಗಲು ಒಂದು ದ್ವಾರವೂ ಉತ್ತರದಲ್ಲಿ ಸುಕನಾಸಿಯ ಮೇಲಿನ ಭಾಗದವರೆಗೆ ಗೋಪುರದ ಚಾಚಣಿಕೆಯೂ ಇದೆ.

ಮಂಟಪದ ಹೊರಗೋಡೆಯ ಮೇಲೂ ಅಲ್ಪ ಉಬ್ಬಿನ ಶಿಲ್ಪಗಳ ಅಲಂಕರಣವಿದೆ. ಇಲ್ಲಿ ಆರು ಪಟ್ಟಿಕೆಗಳಿದ್ದು, ಕೆಳಗಿನದರಲ್ಲಿ, ಮಧ್ಯೆ ಮಧ್ಯೆ ಸಿಂಹ, ಕೋತಿ, ಕಾಮಕೇಳಿಯ ಚಿತ್ರಗಳನ್ನೊಳಗೊಂಡಿರುವ ಹಂಸಗಳ ಸಾಲೂ, ಎರಡನೆಯದರಲ್ಲಿ ಕಂಬಗಳ ಮೇಲೆ ಎತ್ತಿರುವ ಗೋಪುರಗಳ ಸಾಲೂ ಇವೆ. ಇದರ ಮೇಲುಗಡೆ ಜಾಲಂದ್ರಗಳನ್ನುಳ್ಳ ಕಿಟಕಿಗಳ ಅಲಂಕರಣವಿದ್ದು, ಇವುಗಳ ಮಧ್ಯೆ ಕಮಾನಿನಾಕೃತಿಯ ಕೋಷ್ಟಕಗಳಿವೆ. ಕೋಷ್ಟಕಗಳಲ್ಲಿ ಯಕ್ಷರು, ದಿಕ್ಪಾಲಕರು, ವಿಷ್ಣು, ಭೈರವ ಇತ್ಯಾದಿ ಶಿಲ್ಪಗಳಿವೆ. ಇದರ ಮೇಲೆ ಕಿನ್ನರಿಯರು, ಪುರುಷಾಮೃಗ, ಹುಲಿಯನ್ನೇರಿರುವ ಯೋಗಿ ಇತ್ಯಾದಿ ಶಿಲ್ಪಗಳ ಸಾಲೂ 5ನೆಯ ಪಟ್ಟಿಕೆಯಲ್ಲಿ ಹೂಗಳೂ 6ನೆಯದರಲ್ಲಿ ಎಲೆಯಾಕಾರದ ನಕಾಶೆಯ ಸಾಲೂ ಇವೆ. ಈ ಭಿತ್ತಿಯ ಅಲಂಕರಣ ವಿನ್ಯಾಸ ಹೊಯ್ಸಳ ದೇವಾಲಯಗಳ ನೆನಪನ್ನು ತರುತ್ತದೆ; ಆದರೆ ಹೊಯ್ಸಳ ಶಿಲ್ಪಗಳಲ್ಲಿನ ನಯ, ನಾಜೂಕು ಇಲ್ಲಿಲ್ಲ. ಇದೇ ಹೊಯ್ಸಳ ಶೈಲಿಯ ಅಂಶಗಳು. ಮಂಟಪ ನಿಂತಿರುವ ಜಗತಿಯಲ್ಲೂ ದ್ವಾರಾಲಂಕರಣದಲ್ಲೂ ಒಳಗಿನ ಕಂಬಗಳಲ್ಲಿಯೂ ಎದ್ದು ಕಾಣುತ್ತವೆ. ಸುಕನಾಸಿ ತೆರೆದಂತೆ ಇದ್ದು ಇದರ ದ್ವಾರಾಲಂಕರಣ ಸುಂದರವಾಗಿದೆ. ಸುಕನಾಸಿಯಿಂದ ಗರ್ಭಗೃಹವನ್ನು ಸುತ್ತಿ ಬರಲು ಪ್ರದಕ್ಷಿಣಾ ಪಥವಿದೆ. ಈ ದೇವಾಲಯದಲ್ಲಿ ಆಳವಾಗಿ ಕೆತ್ತಿದ ದಿಂಡುಗಳ ನರಗಳುಳ್ಳ ಜಗತಿ, ಸುಕನಾಸಿಯ ಮೇಲೆ ಚಾಚಣಿಕೆಯಿರುವ ಕಲ್ಲಿನ ಶಿಖರ, ಗುಂಡಾದ ಮತ್ತು ಷೋಡಶ ಮುಖದ ಕಂಬಗಳು ಮತ್ತು ಹೊರಗೋಡೆಯ ಅಲಂಕರಣ ವಿನ್ಯಾಸಗಳು ಹೊಯ್ಸಳಶೈಲಿಯ ಅಂಶಗಳನ್ನೂ ತಲಗಳು ಮತ್ತು ದ್ವಾರವಿರುವ ಗೋಪುರ, ಚತುರಸ್ರಾಕಾರದ ಮಂಟಪ, ಸಿಂಹ ಬೋದಿಗೆಯನ್ನುಳ್ಳ ಅನೇಕ ಕಂಬಗಳು ಮತ್ತು ಅರೆಕಂಬಗಳು ಮತ್ತು ಸುಕನಾಸಿಯಿಂದಾರಂಭವಾಗುವ ಪ್ರದಕ್ಷಿಣಾ ಪಥ, ಇವು ದ್ರಾವಿಡಶೈಲಿಯ ಅಂಶಗಳನ್ನೂ ತೋರಿಸುತ್ತವೆ.

ಅಘೋರೇಶ್ವರದ ಪಶ್ಚಿಮಕ್ಕಿರುವ ಪಾರ್ವತೀ ಗುಡಿಯೂ ಮೇಲಿನದರ ಮಾದರಿಯಲ್ಲಿಯೇ ಇದೆ. ಆದರೆ ನವರಂಗದ ಬಾಗಿಲುವಾಡ ಮತ್ತು ಕಿಟಕಿಗಳಲ್ಲಿ ಚೂಪುತಲೆಯ ಕಮಾನುಗಳನ್ನು ಉಪಯೋಗಿಸಿರುವುದು ಇಲ್ಲಿಯ ವಿಶೇಷ. ಈ ಅಂಶ ಭಾರತೀಯ ಮುಸ್ಲಿಮ್ ವಾಸ್ತುಶೈಲಿಯಿಂದ ಬಂದಿದ್ದಾಗಿದೆ.

ಅಘೋರೇಶ್ವರದ ಮುಂದಿನ ನಂದೀ ಮಂಟಪ ಎತ್ತರವಾದ ಜಗತಿಯ ಮೇಲಿದ್ದು, ಅದರ ಭಿತ್ತಿ ಏಳು ಚೂಪುತಲೆಯ ಕಮಾನುಗಳನ್ನು ಒಳಗೊಂಡಿದೆ. ಕಮಾನುಗಳ ಮಧ್ಯದಲ್ಲಿ ಶಿಲ್ಪಗಳಿವೆ. ಪಾರ್ವತೀಗುಡಿಯೂ ಮುಂದಿನ ನಂದೀ ಮಂಟಪವೂ ಅಘೋರೇಶ್ವರ ಗುಡಿಗಿಂತಲೂ ಕೆಲಕಾಲದ ಅನಂತರ ಕಟ್ಟಿರಬಹುದಾಗಿದೆ.

ಸುಮಾರು 1512ರಲ್ಲಿ ಕಟ್ಟಿರಬಹುದಾದ ಕೆಳದಿಯ ರಾಮೇಶ್ವರ ದೇವಾಲಯ ಇದೇ ಮಿಶ್ರ ಶೈಲಿಯಲ್ಲಿರುವ ಚಿಕ್ಕ ಕಟ್ಟಡ. ಈ ಗುಡಿಯ ಜಗತಿಯ ಹೊರಮೈಯ ಒಂದು ದಿಂಡಿನ ಮೇಲೆ ವಾದ್ಯಗಾರರ ಮತ್ತು ನರ್ತಕರ ಶಿಲ್ಪಗಳಿವೆ. ಮೇಲಿನ ಗರ್ಭಗೃಹದ ಭಿತ್ತಿಯಲ್ಲಿ ಚತುರಸ್ರಾಕಾರದ ಅರ್ಧಕಂಬಗಳ ಅಲಂಕರಣವೂ ಮಧ್ಯೆ ಮಧ್ಯೆ ಕಣ್ಣಪ್ಪ, ಹನುಮಂತ, ಗರುಡ, ಕಾಮಕೇಳಿ ಮುಂತಾದ ಅನೇಕ ಶಿಲ್ಪಗಳೂ ಇವೆ. ಮೇಲಿನ ಗೋಪುರ ಚತುರಸ್ರಾಕಾರದಲ್ಲಿದೆ. ವಿನ್ಯಾಸದಲ್ಲಿ ಗರ್ಭಗೃಹ ಪ್ರದಕ್ಷಿಣ ಪಥಕ್ಕೆಡೆಯಿರುವ ಸುಕನಾಸಿ, ಚಿಕ್ಕ ನವರಂಗ ಮತ್ತು ಮುಖಮಂಟಪವಿರುವ ಈ ಗುಡಿಯ ಮುಂದಿನ ಮಂಟಪದಲ್ಲಿ ಸುತ್ತಲೂ ಒರಗು ಬೆಂಚುಗಳಿರುವುದು ವಿಶೇಷ. ಇದಕ್ಕೆ ಸೇರಿದಂತೆಯೇ ಇರುವ ವೀರಭದ್ರ ದೇವಾಲಯದ (ಸುಮಾರು 1530-40) ವಾಸ್ತುರಚನೆಯಲ್ಲಿ ಹೆಚ್ಚಿನ ಅಂಶಗಳೇನಿಲ್ಲದಿದ್ದರೂ ಇಲ್ಲಿಯ ಕೆತ್ತನೆ ಕೆಲಸ ಬಹು ಉತ್ತಮಮಟ್ಟದ್ದು. ನಗರದ ನೀಲಕಂಠೇಶ್ವರ ಮತ್ತು ಆಂಜನೇಯ ದೇವಾಲಯಗಳೂ ಹಂಪನೂರ ರಂಗನಾಥಸ್ವಾಮಿ ದೇವಸ್ಥಾನವೂ ಮಳಿಗೆಯ ಜೈನ ಬಸದಿಯೂ ಇದೇ ಕಾಲದ ಕಟ್ಟಡಗಳು.

ಇಕ್ಕೇರಿ ಶೈಲಿಯ ಶಿಲ್ಪಗಳು ಸಮಕಾಲೀನ ವಿಜಯನಗರ ಮತ್ತು ಅನಂತರದ ಶಿಲ್ಪ ಸಂಪ್ರದಾಯದಲ್ಲೇ ಇವೆ. ವಾಸ್ತುರಚನೆಯಲ್ಲಿ ಹಲವು ಹೊಯ್ಸಳ ಅಂಶಗಳು ಈ ಕಾಲದ ಕಟ್ಟಡಗಳಲ್ಲಿ ಕಂಡುಬಂದರೂ ಅವುಗಳ ರಚನೆಗೆ ಒರಟು ಕಲ್ಲುಗಳನ್ನು ಉಪಯೋಗಿಸಿರುವುದರಿಂದ, ಹೊಯ್ಸಳ ಕಾಲದ ಶಿಲ್ಪಗಳ ನಯ, ನಾಜೂಕು, ಸೂಕ್ಷ್ಮ ಅಲಂಕರಣಗಳು ಇವುಗಳಲ್ಲಿ ಮೂಡಿಬಂದಿಲ್ಲ. ಇಕ್ಕೇರಿ ಶೈಲಿಯ ದೇವಾಲಯಗಳ ಹೊರಗೋಡೆಗಳ ಶಿಲ್ಪಗಳು ವಾಸ್ತುವಿನ್ಯಾಸದಲ್ಲಿ ಹೊಯ್ಸಳ ಶೈಲಿಯ ಸ್ಥಾನವನ್ನೇ ಅಲಂಕರಿಸಿದ್ದರೂ ಒಂದೊಂದೇ ಶಿಲ್ಪಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದರೆ ಇವು ಹೊಯ್ಸಳ ಶಿಲ್ಪಗಳ ಅತಿ ಅಸಮರ್ಪಕ ಅನುಕರಣೆಗಳಂತೆ ಕಾಣುತ್ತವೆ. ಆದರೆ ಇಕ್ಕೇರಿ ದೇವಾಲಯದ ನಂದಿ, ಕೆಳದಿಯ ವೀರಭದ್ರ ದೇವಾಲಯದ ಭುವನೇಶ್ವರಿ ಇವು ಈ ಕಾಲದ ಉತ್ತಮಮಟ್ಟದ ಶಿಲ್ಪಗಳೆನ್ನಬಹುದು. ವೀರಭದ್ರ ದೇವಾಲಯದ ಗಂಡಭೇರುಂಡವಿರುವ ಭುವನೇಶ್ವರಿ ಒಂದು ಅಸದೃಶ ಕಲಾಕೃತಿ. ಈ ಕಾಲದ ದೇವಾಲಯಗಳ ಮೇಲಿರುವ ನರ್ತಕರು, ವಾದ್ಯಗಾರರು ಮುಂತಾದ ಶಿಲ್ಪಗಳೂ ಅನೇಕ ವೀರಗಲ್ಲು ಮತ್ತು ಮಾಸ್ತಿಕಲ್ಲುಗಳೂ ಸಮಕಾಲೀನ ಸಾಮಾಜಿಕ ಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತವೆ.


ಇವನ್ನೂ ನೋಡಿ

ಬದಲಾಯಿಸಿ