ಇಂದಬೆಟ್ಟು
ಇಂದಬೆಟ್ಟು
ಬದಲಾಯಿಸಿಇಂದಬೆಟ್ಟು ಇದು ಕರ್ನಾಟಕ ರಾಜ್ಯ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಗ್ರಾಮ. ಹಚ್ಚಹಸಿರಿನಿಂದ ಕಂಗೊಳಿಸುವ ಇಂದಬೆಟ್ಟು ಗ್ರಾಮದಲ್ಲಿ ಧಾರ್ಮಿಕ ಶ್ರದ್ಧೆಯು ಜನಮಾನಸದಲ್ಲಿ ಆಳವಾಗಿ ಬೇರೂರಿದೆ. ಈ ಗ್ರಾಮದಲ್ಲಿ ವ್ಯವಸಾಯ, ನೀರಾವರಿ, ಗುಡಿಕೈಗಾರಿಕೆ, ಶೈಕ್ಷಣಿಕ ಮಟ್ಟ ಅಭಿವೃದ್ಧಿಯನ್ನು ಸಾಧಿಸಿದೆ.
ಗ್ರಾಮದ ಹಿನ್ನೆಲೆ
ಬದಲಾಯಿಸಿದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಪುಟ್ಟ ಗ್ರಾಮವೇ-“ಈಂದ್‍ದ ಬೊಟ್ಟು”. ಈಗಿನ ಇಂದಬೆಟ್ಟು ಗ್ರಾಮವನ್ನು ಹಿಂದೆ “ಈಂದ್‍ದ ಬೊಟ್ಟು” ಎಂದು ಕರೆಯುತ್ತಿದ್ದರು. ಈಂದ್‍ದ ಬೊಟ್ಟು ಎಂಬಲ್ಲಿ ಜೈನ ಧರ್ಮಕ್ಕೆ ಸೇರಿದ ಕುಟುಂಬ ವಾಸವಾಗಿತ್ತು. ಅವರು ತುಂಬಾ ಅನುಕೂಲಸ್ಥರಾಗಿದ್ದರು. ಆ ಪರಿಸರದಲ್ಲಿ ಇಳಿಜಾರು ಬೆಟ್ಟವಿದ್ದು, ಅದರಲ್ಲಿ ಅನೇಕ “ಈಂದ್” ಎಂಬ ಹೆಸರಿನ ಉಪಯುಕ್ತ ವೃಕ್ಷವು ಬೆಳೆದಿತ್ತು. ಈಂದ್ ಮರಗಳು ಸಣ್ಣ ಸಣ್ಣ ಇಳಿಜಾರು ಬೆಟ್ಟಗಳಲ್ಲಿ ಇದ್ದುದರಿಂದ ತುಳುವಿನಲ್ಲಿ ಈಂದ್‍ದಬೊಟ್ಟು ಎಂದು ಕರೆಯುತ್ತಾರೆ. ಜೈನ ಮನೆತನ ಬಹಳ ದೊಡ್ಡದಾಗಿದ್ದುದರಿಂದ ಅವರ ಮನೆಯ ಹೆಸರನ್ನೇ ಮುಂದೆ ಊರಿನ ಹೆಸರಾಗಿ ಕರೆಯುತ್ತಿದ್ದರು. ನಂತರ ಅದೇ ಹೆಸರು ಇಂದಬೆಟ್ಟು ಎಂದು ಕರೆಯಲ್ಪಟ್ಟು ಗ್ರಾಮದ ಹೆಸರಾಯಿತು. ಇಂದಬೆಟ್ಟು ಗ್ರಾಮದ ಒಟ್ಟು ವಿಸ್ತೀರ್ಣ 1310 ಹೆಕ್ಟೇರ್‍ಗಳು. ಇದರಲ್ಲಿ ಬಂಜರು ಭೂಮಿ, ಕೃಷಿಗೆ ಯೋಗ್ಯವಾದ ಭೂಮಿ ಹೀಗೆ ವಿಭಾಗಗೊಂಡಿದೆ. ಕೃಷಿಗೆ ಯೋಗ್ಯವಾದ ಭೂಮಿಯಲ್ಲಿ ಜನರು ನಾನಾ ರೀತಿಯ ಬೆಳೆಗಳನ್ನು ಅಂದರೆ ಅಡಿಕೆ, ತೆಂಗು, ರಬ್ಬರ್, ಬಾಳೆ, ಭತ್ತ, ಗೇರು- ಹೀಗೆ ಮೊದಲಾದ ಬೆಳೆಗಳನ್ನು ಬೆಳೆಸುತ್ತಾರೆ.
ಜನಜೀವನ
ಬದಲಾಯಿಸಿಈ ಗ್ರಾಮದಲ್ಲಿ ಕ್ರೈಸ್ತ, ಮುಸಲ್ಮಾನ, ಜೈನ, ಹಿಂದು-ಹೀಗೆ ಹಲವಾರು ಧರ್ಮದ ಜನರು ವಾಸಿಸುತ್ತಾರೆ. ಪ್ರತಿಯೊಂದು ಧರ್ಮವೂ ತನ್ನದೇ ಆದ ಧಾರ್ಮಿಕ ಮಂದಿರಗಳನ್ನು ಹೊಂದಿದೆ. ಹಲವು ಜಾತಿ-ಧರ್ಮಗಳನ್ನು ಹೊಂದಿದ್ದರೂ ಗ್ರಾಮದ ಜನರು ಪರಸ್ಪರ ಸ್ನೇಹ-ವಿಶ್ವಾಸಗಳಿಂದ ಜೀವನ ನಡೆಸುತ್ತಿದ್ದಾರೆ.
ವ್ಯವಸಾಯ
ಬದಲಾಯಿಸಿಈ ಗ್ರಾಮದ ಜನರು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ವಾಣಿಜ್ಯ ಬೆಳೆಗಳಿಗೆ ಮೊದಲನೇ ಪ್ರಾಶಸ್ತ್ಯ. ಅಡಿಕೆ, ರಬ್ಬರ್, ಕರಿಮೆಣಸು, ಗೇರು ಮೊದಲಾದವುಗಳು ಇಲ್ಲಿನ ಪ್ರಮುಖ ಬೆಳೆಗಳು. ಒಂದು ಕಾಲದಲ್ಲಿ ಆಹಾರ ಬೆಳೆಗಳಿಗೆ ಪ್ರಾಧಾನ್ಯತೆ ನೀಡಿದ್ದ ಈ ಗ್ರಾಮದ ಜನರು ವಾಣಿಜ್ಯ ಬೆಳೆಗಳನ್ನು ಅವಲಂಬಿಸಿದಾಗಿನಿಂದ ಆರ್ಥಿಕವಾಗಿ ಮುಂದೆ ಬಂದಿದ್ದಾರೆ. ಜೊತೆಗೆ ಗ್ರಾಮವು ತುಂಬಾ ಅಭಿವೃದ್ಧಿಯನ್ನು ಕಂಡಿದೆ. [೧] ತರಕಾರಿ ಬೆಳೆಗಳಾದ ಸೌತೆಕಾಯಿ, ತೊಂಡೆಕಾಯಿ, ಬದನೆ, ಕುಂಬಳಕಾಯಿ, ಹರಿವೆ, ಬಸಳೆ, ಅಲಸಂಡೆ ಮುಂತಾದ ಅಲ್ಪಾವಧಿ ಬೆಳೆಗಳನ್ನು ರೈತರು ಧಾರಾಳವಾಗಿ ಬೆಳೆಸುತ್ತಿದ್ದು ಸಂಪೂರ್ಣವಾಗಿ ಇದನ್ನೇ ಜೀವನೋಪಾಯಕ್ಕಾಗಿ ಅಳವಡಿಸಿಕೊಂಡಿಲ್ಲ. ಇಷ್ಟೇ ಅಲ್ಲದೆ ಈ ಗ್ರಾಮದ ಜನರು ತಮ್ಮ ಜೀವನವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬೇಕೆಂಬ ಉದ್ದೇಶದಿಂದ ಹೈನುಗಾರಿಕೆ, ಕೋಳಿಸಾಕಣೆ, ಮೀನುಗಾರಿಕೆ, ಆಡು ಸಾಕಣೆ ಮುಂತಾದ ಕಸುಬುಗಳನ್ನು ಮಡುತ್ತಿದ್ದಾರೆ. ಈ ಮೂಲಕ ಜನರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತಿದ್ದಾರೆ.
ಗುಡಿಕೈಗಾರಿಕೆ
ಬದಲಾಯಿಸಿಈ ಗ್ರಾಮದ ಜನರು ಕೇವಲ ಕೃಷಿ ಅಥವಾ ಹೈನುಗಾರಿಕೆಯಿಂದಲೇ ತಮ್ಮ ಜೀವನ ನಡೆಸುತ್ತಿಲ್ಲ. ತಮ್ಮ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಸುಧಾರಿಸಲು ಹಲವಾರು ಗುಡಿಕೈಗಾರಿಕೆಗಳನ್ನು ಅವಲಂಬಿಸಿದ್ದಾರೆ. ಬುಟ್ಟಿ ಹೆಣೆಯುವುದು, ಬೀಡಿ ಕಟ್ಟುವುದು, ಮಣ್ಣಿನ ಇಟ್ಟಿಗೆ ತಯಾರಿಸುವುದು, ಮಡಕೆ ಮಾಡುವುದು ಮೊದಲಾದ ಸಾಂಪ್ರದಾಯಿಕ ಹಾಗೂ ಆಧುನಿಕ ಕೈಗಾರಿಕೆಗಳನ್ನು ಮನೆಯಲ್ಲೇ ಕೂತು ತಯಾರಿಸುವ ಕೈಚಳಕವನ್ನು ಹೊಂದಿದ್ದಾರೆ. ಮುಖ್ಯವಾಗಿ ಇಲ್ಲಿನ ಕೊರಗ ಜನಾಂಗ ಬುಟ್ಟಿ ತಯಾರಿಸುವ ಗುಡಿಕೈಗಾರಿಕೆಯನ್ನು ಮಾಡುತ್ತಿದ್ದು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರೊಂದಿಗೆ ಅಳಿದು ಹೋಗುತ್ತಿರುವ ಕಲೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇದಲ್ಲದೆ ಚಾಪೆ ತಯಾರಿಸುವುದನ್ನು ತಮ್ಮ ಗುಡಿಕೈಗಾರಿಕೆಯಲ್ಲಿ ಬಳಸುತ್ತಿದ್ದರು. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಅದು ಅಳಿದು ಹೋಗಿದೆ ಎನ್ನಬಹುದು. ಒಟ್ಟಿನಲ್ಲಿ ಈ ಗ್ರಾಮದ ಜನರು ಸಾಂಪ್ರದಾಯಿಕತೆಯೊಂದಿಗೆ ಆಧುನಿಕತೆ ಅವಲಂಬಿಸಿದ್ದಾರೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.
ನೀರಾವರಿ
ಬದಲಾಯಿಸಿಮರಳು ಮಿಶ್ರಿತ ಕೆಂಪು ಮಣ್ಣನ್ನು ಒಳಗೊಂಡ ಈ ಭೂಮಿಯು ಅಡಿಕೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆಯಲು ಯೋಗ್ಯವಾಗಿದ್ದು, ಇಲ್ಲಿ ನೀರಾವರಿಗಾಗಿ ಜನರು ಕೆರೆ-ಬಾವಿ-ನದಿಗಳನ್ನು ಅವಲಂಬಿಸಿದ್ದಾರೆ. ಈ ನೀರನ್ನು ಅಣೆಕಟ್ಟುಗಳನ್ನು ಕಟ್ಟಿಕೊಂಡು ಅಥವಾ ಕಣಿವೆಗಳ ಮೂಲಕ ನೇರವಾಗಿ ತೋಟಗಳಿಗೆ ಹಾಯಿಸುವುದು, ವಿದ್ಯುತ್ ಮತ್ತು ಡೀಸೆಲ್ ಪಂಪುಗಳ ಮೂಲಕ ತೋಟಕ್ಕೆ ನೀರನ್ನು ಹಾಯಿಸುವುದು ಮೊದಲಾದ ವಿಧಾನಗಳಿಂದ ಹರಿಯುವ ನೀರು ವ್ಯರ್ಥವಾಗದಂತೆ ಬಹುತೇಕವಾಗಿ ಕೃಷಿಗೆ ಬಳಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಕೆರೆ-ಬಾವಿಗಳನ್ನು ಹೊಂದಿದ್ದಾರೆ. ಅಲ್ಲದೆ ಹನಿ ನೀರಾವರಿ ಪದ್ದತಿಯನ್ನು ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಗ್ರಾಮದ ಜನರಿಗೆ ಕೆರೆ-ಬಾವಿ-ನದಿಗಳನ್ನು ಜೀವನಾಡಿಯಾಗಿವೆ.
ಹರಿಯುವ ನದಿ
ಬದಲಾಯಿಸಿಈ ಗ್ರಾಮದಲ್ಲಿ ಹರಿಯುವ ಪ್ರಮುಖ ನದಿಯೆಂದರೆ 'ನೇತ್ರಾವತಿ'. ಈ ನದಿಯು ಗ್ರಾಮದ ಒಂದು ಪಾಶ್ರ್ವದಲ್ಲಿ ಹರಿದು ಮುಂದೆ ಸಾಗುತ್ತದೆ. ಇದು ವರ್ಷವಿಡೀ ಹರಿಯುತ್ತಿದ್ದು ಈ ಗ್ರಾಮದ ರೈತರಿಗೆ ವರವಾಗಿ ಪರಿಗಣಿಸಲ್ಪಟ್ಟಿದೆ. ಇದು ರೈತರ ಜೀವನಾಡಿಯಾಗಿದೆ. ನಾಗರಿಕತೆಯ ಮೆಟ್ಟಿಲಾಗಿದೆ. ಮಾತ್ರವಲ್ಲದೆ ಹೊಸತನಕ್ಕೂ, ಹಳೆಯತನಕ್ಕೂ ಸಂಬಂಧ ಬೆಸೆಯುವ ಕೊಂಡಿಯಾಗಿದೆ. ಕುದುರೆಮುಖದಿಂದ ಹರಿದು ಬರುವ ನೇತ್ರಾವತಿ ಇಂದಬೆಟ್ಟು ಗ್ರಾಮದಿಂದ ಹರಿದು ಮುಂದೆ ಸಾಗುತ್ತದೆ. ಈ ನದಿಯಿಂದಾಗಿ ಈ ಗ್ರಾಮದ ಭೂಮಿಯನ್ನು ವರ್ಷಪೂರ್ತಿ ತಣ್ಣಗಿರುವಂತೆ ಮಾಡುತ್ತದೆ. [೨]
ದೇವಾಲಯಗಳು
ಬದಲಾಯಿಸಿಇಂದಬೆಟ್ಟು ಕೇವಲ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ವೈವಿಧ್ಯತೆಗಳನ್ನು ತನ್ನೊಳಗೆ ಅಳವಡಿಸಿಕೊಂಡಿದ್ದಲ್ಲ, ಬದಲಾಗಿ ಧಾರ್ಮಿಕವಾಗಿಯೂ ವೈಶಿಷ್ಟ್ಯತೆಯನ್ನು ಹೊಂದಿದ್ದು, ಅರ್ಥಪೂರ್ಣ ಗ್ರಾಮವಾಗಿದೆ. ಪ್ರಮುಖವಾಗಿ ಈ ಗ್ರಾಮ ನಾಲ್ಕು ದೇವಾಲಯಗಳನ್ನು ಹೊಂದಿದೆ. ಹಾಗೆಯೇ ಎರಡು ದೈವಸ್ಥಾನಗಳನ್ನು ಹೊಂದಿದೆ, ಒಂದು ಜೈನ ದೇವಾಲಯವೂ ಇದೆ. ಒಟ್ಟಿನಲ್ಲಿ ಈ ಗ್ರಾಮವು ಹಲವಾರು ಧಾರ್ಮಿಕ ಚಟುವಟಿಕೆಗಳ ಆಗರವಾಗಿದೆ. [೩] [೪]
ಅರ್ಧನಾರೀಶ್ವರ ದೇವಾಲಯ
ಬದಲಾಯಿಸಿಬೆಳ್ತಂಗಡಿ ತಾಲೂಕಿನ, ಇಂದಬೆಟ್ಟು ಗ್ರಾಮದಲ್ಲಿ ಬರುವ ಒಂದು ಪ್ರಸಿದ್ದ ಕ್ಷೇತ್ರ 'ಅರ್ಧನಾರೀಶ್ವರ' ದೇವಾಲಯ. ಈ ದೇವಾಲಯದ ಸುತ್ತಮುತ್ತಲಿನ ಆವರಣವನ್ನೊಳಗೊಂಡ ಪ್ರದೇಶವನ್ನು 'ದೇವನಾರಿ' ಎಂದು ಕರೆಯುತ್ತಾರೆ. ಇಲ್ಲಿ 'ಈಶ್ವರ' ಹಾಗೂ 'ಪಾರ್ವತಿ' ದೇವರುಗಳು ಒಂದೇ ಶರೀರವನ್ನು ಹೊಂದಿ ಶಿಲೆಯಾಗಿ ಈ ಪುಣ್ಯ ಸ್ಥಳದಲ್ಲಿ ಅರ್ಧನಾರೀಶ್ವರರಾಗಿ ಐಕ್ಯರಾದರು ಎಂಬ ನಂಬಿಕೆ ಇದೆ. ಈ ನಂಬಿಕೆಯಂತೆ ಅರ್ಧಶರೀರ ಈಶ್ವರ(ಶಿವ) ಪುರುಷದೇವನಾಗಿದ್ದು, ಇನ್ನರ್ಧ ಶರೀರ ಪಾರ್ವತಿ ಸ್ತ್ರೀ ದೇವಿಯಾದ್ದರಿಂದ 'ಈಶ್ವರ'ನಿಗೆ 'ದೇವ' ಎಂತಲೂ 'ಪಾರ್ವತಿ'ಗೆ 'ನಾರಿ' ಎಂತಲೂ ಹೆಸರಿಟ್ಟು ಒಟ್ಟಾಗಿ 'ದೇವನಾರಿ' ಎಂದು ಕರೆದರು. ಇನ್ನೊಂದು ಅರ್ಥದಲ್ಲಿ ಸ್ತ್ರೀಯರು ಪುರುಷರಷ್ಟೇ ಶ್ರೇಷ್ಠರು ಎಂಬುದನ್ನು ಈ ಮೂರ್ತಿಯನ್ನು ನೋಡಿದಾಗ ಅನ್ನಿಸುತ್ತದೆ. ಮುಂದೆ ಇದು 'ದೇವನಾರಿ' ಎಂದು ಹೆಸರು ಪಡೆದುಕೊಂಡಿತು ಎಂಬ ಪ್ರತೀತಿ ಇದೆ.
ಶ್ರವಣಗುಂಡ
ಬದಲಾಯಿಸಿಇದು ಇಂದಬೆಟ್ಟು ಗ್ರಾಮದ ಬೆದ್ರೊಟ್ಟು ಮತ್ತು ಕಿಲ್ಲೂರು ಮಧ್ಯ ಇದೆ. ಬಂಗಾಡಿಯಿಂದ 3 ಕಿ. ಮೀ. ದೂರ ಇರುವ ಈ ಶ್ರವಣಗುಂಡ ಚಾರಣ ಮುನಿಗಳ ತಪೋಭೂಮಿಯಾಗಿತ್ತಂತೆ. ಇದರ ಕುರುಹಾಗಿ ಇಲ್ಲಿ ಮುನಿ ಪಾದವಿದೆ. ಆಶ್ವಾರೂಢನಾದ ಬ್ರಹ್ಮದೇವನ ಮೂರ್ತಿ ಇದೆ. ಶೀತಲನಾಥ ಸ್ವಾಮಿಯ ಯಕ್ಷನೇ ಈ ಯಕ್ಷ ಬ್ರಹ್ಮ. ಮುನಿವಾಕ್ಯ ಮತ್ತು ಬ್ರಹ್ಮರ ಪವಾಡದಿಂದ ಈ ಕ್ಷೇತ್ರದಲ್ಲಿ ಆರು ನಿಮಿಷಗಳ ಕಾಲ ನೀರ ಮೇಲೆ ಕಲ್ಲುಗುಂಡು ತೇಲುತ್ತಿತ್ತು. ಇದಕ್ಕೆ 'ಗುಂಡುದರ್ಶನ' ಎಂದು ಕರೆಯುತ್ತಿದ್ದರು. ಈ ದರ್ಶನವು ಕ್ರಿ.ಶ. 1911 ರವರೆಗೆ ನಡೆಯುತ್ತಿತ್ತಂತೆ. ಇಲ್ಲಿ ಶ್ರವಣರು ಅಂದರೆ ಜೈನ ಸನ್ಯಾಸಿಗಳು ಎಂದರ್ಥ. ಅಂದರೆ ಇದು ಜೈನ ಮುನಿಗಳ ಸ್ಥಾನವಾಗಿತ್ತು ಮತ್ತು ಇಲ್ಲಿ ಗುಂಡುದರ್ಶನವಾಗಲು ಶ್ರವಣರೇ ಕಾರಣವಾದ್ದರಿಂದ ಈ ಕ್ಷೇತ್ರಕ್ಕೆ 'ಶ್ರವಣಗುಂಡ' ಎಂಬ ಹೆಸರು ಬಂದಿರಬಹುದೆಂದು ಊಹಿಸಲಾಗಿದೆ.
ಶಿಕ್ಷಣ ಸಂಸ್ಥೆಗಳು
ಬದಲಾಯಿಸಿಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿ ಹಲವಾರು ಶಾಲೆಗಳು, ಅಂಗನವಾಡಿಗಳು ಇವೆ. ಈ ಗ್ರಾಮವು ಒಟ್ಟು 7 ಅಂಗನವಾಡಿಗಳನ್ನು, 4 ಕಿರಿಯ ಪ್ರಾಥಮಿಕ ಶಾಲೆಗಳನ್ನು ಮತ್ತು 2 ಫೌಢ ಶಾಲೆಗಳನ್ನು ಹೊಂದಿದೆ. 4 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1 ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಾಗಿದ್ದು ಉಳಿದ 3 ಸರಕಾರಿ ಕನ್ನಡ ಮಾಧ್ಯಮ ಶಾಲೆಯಾಗಿದೆ. 3 ಹಿರಿಯ ಪ್ರಾಥಮಿಕ ಶಾಲೆಗಳು ಬಂಗಾಡಿಯಲ್ಲಿದೆ.
ಉಲ್ಲೇಖಗಳು
ಬದಲಾಯಿಸಿ- ↑ http://prajapragathi.com/%E0%B2%95%E0%B3%83%E0%B2%B7%E0%B2%BF/
- ↑ https://www.revolvy.com/page/Netravati-River
- ↑ https://timesofindia.indiatimes.com/travel/karnataka/travel-guide/do-not-miss-to-visit-these-beautiful-temples-in-south-canara/gs50621857.cms
- ↑ https://kannada.nativeplanet.com/travel-guide/famous-temples-south-india-000102.html