ಆಳುಪರು
ಆಳುಪರು : ಕರ್ಣಾಟಕದ ಪ್ರಾಚೀನ ಅರಸು ಮನೆತನ ಒಂದಕ್ಕೆ ಸೇರಿದವರು.[೧] ಇವರನ್ನು ಆಳುಕ ಎಂದೂ ಉಲ್ಲೇಖಿಸಿದೆ. ಇವರದು ನಾಗವಂಶವೆಂಬ ಊಹೆ ಇದೆ. ಟಾಲಮಿಯ ಗ್ರಂಥದಲ್ಲಿ ಬರುವ ಒಲೈಖೋರಾ ಎಂಬ ಪದ ಆಳುಪರಿಗೆ ಸಂಬಂಧಿಸಿದ್ದೆಂದು ತರ್ಕಿಸಿರುವುದರಿಂದ ಇದೇ ಆಳುಪರ ಬಗ್ಗೆ ಮೊಟ್ಟ ಮೊದಲ ಉಲ್ಲೇಖ ಎಂದು ಹೇಳಬಹುದು.
ಆಲುಪರು ಪಶ್ಚಿಮ ಚಾಲುಕ್ಯರು ಮತ್ತು ಹೊಯ್ಸಳರ ಆಳ್ವಿಕೆಯಲ್ಲಿ ಉಡುಪಿ ಮತ್ತು ಮಂಗಳೂರನ್ನು ಆಳಿದರು. ಅವರ ವಿತ್ತೀಯ ಆರ್ಥಿಕತೆಯಿಂದ ನೋಡಿದಾಗ ಆ ಯುಗವು ಸಮೃದ್ಧವಾಗಿದೆ ಎಂದು ತೋರುತ್ತದೆ. ಅವರು ತಮ್ಮ ರಾಜಧಾನಿಯಾದ ಉದ್ಯಾವರದಿಂದ ರಾಜ್ಯವನ್ನು ಆಳಿದರು. ಈಗ ಉಡುಪಿ ಬಳಿ ಇದೆ (ಕಾಪು ನಂತರ, ಮಂಗಳೂರು ಮತ್ತು ಉಡುಪಿ ನಡುವೆ). ಹೊಯ್ಸಳರ ಪತನದ ನಂತರ, ಈ ಪ್ರದೇಶವನ್ನು 1336 ರ ಸುಮಾರಿಗೆ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ವಿಜಯನಗರದ ಅರಸರ ಸಾಮಂತರಾಗಿ ಅಲುಪಸ್ ನಿಧಾನವಾಗಿ ಮರೆಯಾಯಿತು.[೨]
ಇದುವರೆಗೆ ದೊರೆತವುಗಳಲ್ಲಿ ಕನ್ನಡದ ಮೊಟ್ಟ ಮೊದಲನೆಯ ಹಲ್ಮಿಡಿ ಶಾಸನದಲ್ಲಿ ಆಳುಪಗಣ ಪಶುಪತಿ ಎಂಬುವನ ಹೆಸರಿದೆ. ಈಗ ತಿಳಿದಿರುವಂತೆ ಆಳುವ ಮನೆತನಕ್ಕೆ ಸಂಬಂಧಿಸಿದ ಮೊದಲ ವ್ಯಕ್ತಿ ಈತನೇ. ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಆಳುಪರು ಬಲಿಷ್ಠ ಅರಸರಾಗಿದ್ದರು. ಆ ಮನೆತನದ ಕೀರ್ತಿವರ್ಮ 1 ಸೋಲಿಸಿದ ಪ್ರಮುಖ ಅರಸರಲ್ಲಿ ಆಳುಪರೂ ಇದ್ದರು. ಆಳುಪಗಣ ಪಶುಪತಿಯನ್ನು ಬಿಟ್ಟರೆ, ಆಳುಪ ಮನೆತನದ ಮೊದಲ ಅರಸು ಆಳುಪರಸ ಗುಣಸಾಗರ 1 ಇವನ ಮಗ ಚಿತ್ರವಾಹನ 1 ಚಾಲುಕ್ಯ ವಿನಯಾದಿತ್ಯ ಮತ್ತು ವಿಜಯಾದಿತ್ಯರ ಸಮಕಾಲೀನನಾಗಿದ್ದು ವಿಜಯಾದಿತ್ಯನ ತಂಗಿ ಕುಂಕುಮ ಮಹಾದೇವಿಯನ್ನು ಮದುವೆಯಾಗಿದ್ದ. ಹೀಗೆ ಸುಮಾರು 7ನೆಯ ಶತಮಾನದ ಮಧ್ಯದಲ್ಲಿಯೇ ಗಣ್ಯಸ್ಥಾನ ಪಡೆದಿದ್ದ ಈ ಮನೆತನ ಸುಮಾರು 14ನೆಯ ಶತಮಾನದವರೆಗೂ ಅಧಿಕಾರದಲ್ಲಿತ್ತು.
ಆಳುಪರ ಅಧೀನದಲ್ಲಿದ್ದ ಪ್ರದೇಶ ಮುಖ್ಯವಾಗಿ ಆಳ್ವಖೇಡ ಅಂದರೆ ಸುಮಾರು ಈಗಿನ ದಕ್ಷಿಣಕನ್ನಡ ಜಿಲ್ಲೆ. ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಕದಂಬ ಮಂಡಲ ಅಂದರೆ ಇಂದಿನ ಶಿರಸಿ ತಾಲ್ಲೂಕಿನಲ್ಲಿಯ ಬನವಾಸಿಯ ಸುತ್ತಮುತ್ತಲಿನ ಪ್ರದೇಶವೂ ಇವರ ಆಳ್ವಿಕೆಗೊಳಪಟ್ಟಿತ್ತು.
ಮುಖ್ಯವಾಗಿ ದಕ್ಷಿಣಕನ್ನಡ ಜಿಲ್ಲೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವು ಊರುಗಳಲ್ಲಿ ಈ ಮನೆತನದ ಶಾಸನಗಳು ದೊರೆತಿವೆ.