ಅಪಾಯಕಾರಿ ಪ್ರಾಣಿಗಳು, ವಸ್ತುಗಳು, ಕಟ್ಟಡಗಳು
ಪ್ರತಿಯೊಬ್ಬ ನಾಗರಿಕನಿಗೂ ಆಸ್ತಿಸಂಗ್ರಹದ ಸಂಪೂರ್ಣ ಹಕ್ಕುಗಳಿದ್ದರೂ ಅವು ನಿರ್ಬಂಧಿತವಾಗಿಲ್ಲ. ತಾನು ಸಂಗ್ರಹಿಸಿದ ಪ್ರಾಣಿಗಳು ವಸ್ತುಗಳು (ಚಾಟೆಲ್ಸ್) ಮತ್ತು ಕಟ್ಟಡಗಳು (ಸ್ಟ್ರಕ್ಚರ್ಸ್)-ಇವುಗಳಿಂದ ಅನ್ಯರಿಗೆ ಅಪಾಯವಾಗದಂತೆ ನೋಡಿಕೊಳ್ಳುವುದು ಆತನ ಮುಖ್ಯ ಕರ್ತವ್ಯ.[೧]
ಅಪಾಯಕಾರಿ ಪ್ರಾಣಿಗಳು
ಬದಲಾಯಿಸಿಪ್ರಾಣಿಗಳಲ್ಲಿ ಕ್ರೂರ ಮತ್ತು ಸಾಧು ಎಂಬ ಎರಡು ಬಗೆಗಳಿವೆ. ಸಾಮಾನ್ಯವಾಗಿ ಕಾಯಿದೆಯ ದೃಷ್ಟಿಯಿಂದ ಸಿಂಹ, ಹುಲಿ, ಆನೆ ಹಾವು ಇತ್ಯಾದಿಗಳು ಮೊದಲನೆಯ ವರ್ಗಕ್ಕೆ ಸೇರಿದರೆ, ಬೆಕ್ಕು, ನಾಯಿ, ಆಕಳು, ಕೋಳಿ, ಕುದುರೆ ಮತ್ತು ಒಂಟೆ ಇತ್ಯಾದಿಗಳು ಎರಡನೆಯ ವರ್ಗಕ್ಕೆ ಸೇರುತ್ತವೆ. ವಸ್ತುಸ್ಥಿತಿ ಹೀಗಿದ್ದರೂ ಪ್ರಣಿಯ ಕ್ರೌರ್ಯ ಸಾಧುತ್ವಗಳ ನಿರ್ಣಯ ಕಾಯಿದೆಯ ಪ್ರಶ್ನೆಯಾಗಿದೆ. ತನ್ನ ಸ್ವಾಧೀನದಲ್ಲಿರತಕ್ಕ ಪ್ರಾಣಿಗಳು ಅನ್ಯರ ಭೂಮಿಯನ್ನು ಅತಿಕ್ರಮಿಸಿದರೆ ಅನ್ಯರಿಗೆ ತೊಂದರೆ ನೀಡಿದರೆ ತನ್ನ ಅಲಕ್ಷ್ಯದ ಮೂಲಕ ಅನ್ಯರಿಗೆ ಹಾನಿಯನ್ನುಂಟುಮಾಡಿದರೆ ಆತ ಆ ಹಾನಿಗೆ ಹೊಣೆಯಾಗುತ್ತಾನೆ.ಸಾಧುಪ್ರಾಣಿಗಳಿಂದ ಅಪಾಯಗೊಂಡ ವಾದಿ ದಾವೆಯನ್ನು ತಂದಾಗ ಅದರ ಒಡೆಯನಿಗೆ ತನ್ನ ಪ್ರಾಣಿಯ ಸಾಧುತ್ವ ಕ್ರೂರತ್ವಗಳ ಬಗ್ಗೆ ತಿಳಿವಳಿಕೆ ಇದೆಯೇ ಎಂಬುದು ಗಮನಿಸಬೇಕಾದ ವಿಷಯ. ಕ್ರೂರಪ್ರಾಣಿಯಿಂದ ಅಪಾಯ ನೇರವಾಗಿ ಸಂಭವಿಸಿದ್ದರೆ, ಅಪಾಯಗೊಂಡ ವಾದಿ ದಾವೆಯನ್ನು ತಂದಾಗ ಅದರ ಒಡೆಯನಿಗೆ ತನ್ನ ಪ್ರಾಣಿಯ ಕ್ರೌರ್ಯ ಸಾಧುತ್ವಗಳ ಬಗ್ಗೆ ತಿಳಿವಳಿಕೆ ಇದೆಯೋ ಇಲ್ಲವೊ ಎಂಬ ಪ್ರಮೇಯವನ್ನು ಎತ್ತಬೇಕಿಲ್ಲ; ಅಪಾಯ ಯಾವ ಸ್ಥಳದಲ್ಲಿ ಜರುಗಿದೆ ಎಂಬುದನ್ನು ವಿಚಾರಿಸಬೇಕಿಲ್ಲ. ಈ ಬಗೆಯ ವ್ಯಾಜ್ಯಪ್ರಸಂಗದಲ್ಲಿ ಅದರ ಒಡೆಯ (ಉದಾ: ಸರ್ಕಸ್ ಒಡೆಯ) ಮತ್ತು ಆ ಪ್ರಾಣಿಯನ್ನು ಸ್ವಾಧೀನದಲ್ಲಿಟ್ಟುಕೊಂಡವ (ಸರ್ಕಸ್ಸಿನ ಹಿಂಸ್ರಪ್ರಾಣಿಗಳಿಗೆ ತರಬೇತಿ ನೀಡುವವ) ಅಪರಾಧಕ್ಕೆ ಹೊಣೆಯಾಗುತ್ತಾರೆ. ಒಂದು ವೇಳೆ ಹಿಂಸ್ರಪ್ರಾಣಿಯೊಂದು ಕೈಮೀರಿ ಹೋಗಿ ಅಪಾಯವೆಸಗುತ್ತ ನಡೆದರೆ ಅದು ತನ್ನ ಮೂಲ ನೆಲೆಯನ್ನು ಸೇರುವವರೆಗೆ ಇಲ್ಲವೆ ಇನ್ನೊಬ್ಬರ ಶಾಶ್ವತ ಸ್ವಾಧೀನಕ್ಕೆ ಒಳಗಾಗುವವರೆಗೆ ಜರುಗಿದ ಎಲ್ಲ ಅಪಾಯಗಳಿಗೂ ಮಾಲೀಕರೇ ಹೊಣೆಯಾಗುತ್ತಾರೆ.ಈ ಅಪಾಯಕ್ಕೆ 1 ಕೇವಲ ವಿಧಿಯ ಕೈವಾಡ; 2 ವಾದಿ ಪ್ರತಿವಾದಿಯರನ್ನುಳಿದು ಮೂರನೆಯವನ ಕೈವಾಸ; 3 ವಾದಿ ಮಾಡಿದ ಪೂರ್ಣ ತಪ್ಪು; 4 ವಾದಿ ಪ್ರತಿವಾದಿ ಇಬ್ಬರ ತಪ್ಪು; 5 ಸಂಭವಿಸಲಿರುವ ಪರಿಣಾಮಗಳಿಗೆಲ್ಲ ತಾನೇ ಹೊಣೆ ಎಂದು ಸಮ್ಮತಿ ನೀಡಿ ಅದರ ಹತ್ತಿರ ಹೋದುದು-ಇವುಗಳಲ್ಲಿ ಯಾವುದಾದರೂ ಕಾರಣವೆಂದು ತೊರಿಸಿಕೊಟ್ಟಲ್ಲಿ ಆ ಪ್ರಾಣಿಯ ಒಡೆಯನಾಗಲಿ ಸ್ವಾಧೀನಗಾರನಾಗಲಿ ಬಾಧ್ಯನಾಗುವುದಿಲ್ಲ.[೨]
ಅಪಾಯಕಾರಿ ವಸ್ತುಗಳು
ಬದಲಾಯಿಸಿಇವುಗಳ ಬಗ್ಗೆ ಉತ್ಪಾದಕ ಮತ್ತು ಒಡೆಯ ಇವರು ವಿಶೇಷ ಎಚ್ಚರಿಕೆ ವಹಿಸಬೇಕೆಂದು ಕಾಯಿದೆ ಆಶಿಸುತ್ತದೆ. ತಪ್ಪಿದಲ್ಲಿ ಸಂಭವಿಸಿದ ಅಪಾಯಗಳಿಗೆ ಅವರು ಹೊಣೆಯಾಗುತ್ತಾರೆ. ಅಪಾಯಕಾರಿ ವಸ್ತುಗಳಲ್ಲಿ ಎರಡು ವಿಧ. 1 ನೈಸರ್ಗಿಕ ನೇರ. ಉದಾ: ವಿಷ, ಮದ್ದುಗುಂಡುಗಳಿಂದ ತುಂಬಿದ ತೋಟ, ಸ್ಫೋಟಕವಸ್ತು ಇತ್ಯಾದಿ. 2 ಉತ್ಪಾದನೆಯ ದೋಷದಲ್ಲಿ ಅಡಗಿರುವುದು. ಉದಾ: ವಿಷಘಟಕಗಳನ್ನೊಳಗೊಂಡ ಪೇಯ, ಬಟ್ಟೆ ಇತ್ಯಾದಿ ಮತ್ತು ಅನಿರೀಕ್ಷಿತ ವಿಷಘಟಕಗಳನ್ನೊಳಗೊಂಡ ಪೇಯ, ಆಹಾರ, ಇತ್ಯಾದಿ.ಇವುಗಳಲ್ಲಿ ಎರಡನೆಯದು ನಿರಪಾಯಕಾರಿಯೆಂಬ ಭ್ರಮೆಯನ್ನುಂಟುಮಾಡಿ ಬಹಳ ಸಲ ಮೊದಲಿನದಕ್ಕಿಂತ ಹೆಚ್ಚು ಹಾನಿಯನ್ನುಂಟುಮಾಡುತ್ತದೆ. ವಸ್ತುಸ್ಥಿತಿ ಹೀಗಿದ್ದರೂ ಸಾಮಾನ್ಯವಸ್ತುಗಳಿಂದ ಸಹ ಅಪಾಯ ಜರಗುವ ಸಂಭವವಿದೆ. ಉದಾ: ಮೂರುಕಾಲಿನ ಕುರ್ಚಿ ಇತ್ಯಾದಿ.ಇಂಥ ವಸ್ತುಗಳ ಅಪಾಯದ ಹೊಣೆ ಮಾರಾಟಗಾರ ಮತ್ತು ಗ್ರಾಹಕ ಇವರ ನಡುವಿನ ವ್ಯಾಪಾರನಿಬಂಧನೆಗಳಿಗನುಸರಿಸಿ ವಿವಿಧವಾಗಿರುತ್ತದೆ. ಗ್ರಾಹಕ ತಾನು ಸ್ವೀಕರಿಸಿದ ವಸ್ತುವಿನಿಂದುಂಟಾದ ಅಪಾಯಕ್ಕೆಲ್ಲ ತಾನೇ ಹೊಣೆ ಎಂದು ಒಪ್ಪಿಗೆ ನೀಡಿದರೆ ಮಾರಾಟಗಾರ ತನಗೆ ಗೊತ್ತಿದ್ದ ಅದರ ಗುಪ್ತದೋಷಗಳನ್ನು ಸಹ ವ್ಯಕ್ತಗೊಳಿಸುವ ಆವಶ್ಯಕತೆ ಇಲ್ಲ. ಆದರೆ ವಸ್ತುವೊಂದನ್ನು ಪುಕ್ಕಟೆಯಾಗಿ ಶಾಶ್ವತವಾಗಿ ಇಲ್ಲವೆ ಕೆಲಕಾಲದವರೆಗೆ ಕೊಡುವವನು ತನಗೆ ಗೊತ್ತಿದ್ದ ಅದರ ದೋಷಗಳನ್ನು ವ್ಯಕ್ತಗೊಳಿಸಬೇಕಾದ್ದು ಆತನ ಕರ್ತವ್ಯ.ಒಂದು ವಸ್ತುವಿನಿಂದುಂಟಾದ ಅಪಾಯಕ್ಕೆ ದುರುದ್ದೇಶವಾಗಲಿ ದುರ್ಲಕ್ಷ್ಯವಾಗಲಿ ಕಾರಣವಿರಬಹುದು. ಉತ್ಪಾದಕನ ದುರುದ್ದೇಶದ ಹೊಣೆಯ ಬಗ್ಗೆ ಎಂದು ಸಂಶಯವಿದ್ದಿಲ್ಲ. ಉತ್ಪಾದಕನ ದುರ್ಲಕ್ಷ್ಯದ ವಿಷಯದಲ್ಲಿ ಕಾಯಿದೆ ಸಂದಿಗ್ಧವಾಗಿತ್ತು. 1932ರಲ್ಲಿ ಡೊನೋಗ್ ಪ್ರತಿ ಸ್ಟಿವನ್ ಸನ್ ದಾವೆಯ ನಿರ್ಣಯದ ಅನಂತರ ಉತ್ಪಾದಕ ಕೊನೆಯ ಗ್ರಾಹಕನವರೆಗೂ ತನ್ನ ದುರ್ಲಕ್ಷ್ಯದಿಂದಾಗುವ ಹಾನಿಗೆ ಜವಾಬ್ದಾರ ಎಂಬ ನಿರ್ಣಯವಾಯಿತು.ಉತ್ಪಾದನೆಯಲ್ಲಿ ಯೋಗ್ಯ ಎಚ್ಚರಿಕೆ ವಹಿಸುವುದು ಉತ್ಪಾದಕನ ಕರ್ತವ್ಯ. ಒಂದುವೇಳೆ ಆ ಉತ್ಪಾದನೆಯಲ್ಲಿ ದೋಷವಿದ್ದರೆ ವಾದಿ ಅದನ್ನು ಸಿದ್ಧಮಾಡಿಕೊಡಬೇಕು. ಆದರೂ ಪ್ರತಿವಾದಿ ಉತ್ಪಾದನೆಯ ಮಟ್ಟಿಗೆ ಅನ್ಯರಿಗೆ ಅಪಾಯವಾಗದಂತೆ ಯೋಗ್ಯ ಎಚ್ಚರಿಕೆ ವಹಿಸಿರುವನೆಂದು ಸಿದ್ಧಮಾಡಿ ಕೊಟ್ಟಲ್ಲಿ ದೋಷಮುಕ್ತನಾಗುತ್ತಾನೆ.[೩]
ಅಪಾಯಕಾರಿ ಕಟ್ಟಡಗಳು
ಬದಲಾಯಿಸಿಕಟ್ಟಡ ಎಂಬ ಶಬ್ದದಲ್ಲಿ ಬಯಲುಭೂಮಿ, ಮನೆ, ರೈಲು ನಿಲ್ದಾಣ, ಸೇರುವೆ ಮೊದಲಾದ ಸ್ಥಾವರವಸ್ತುಗಳು ಅಲ್ಲದೆ ಕಾಯಿದೆ ಪ್ರಕಾರ ಮೋಟಾರು, ಬಸ್ಸು, ರೈಲು ಡಬ್ಬಿ, ವಿದ್ಯುತ್ ತೊಟ್ಟಿಲು ಮುಂತಾದ ಜಂಗಮವಸ್ತುಗಳೂ ಸೇರಿವೆ. ಇವುಗಳ ಸುಸ್ಥಿತಿಯ ಬಗ್ಗೆ ಯೋಗ್ಯ ಎಚ್ಚರ ವಹಿಸುವುದು ಸ್ವಾಧೀನಸ್ಥನ ಕರ್ತವ್ಯ. ಈ ಕರ್ತವ್ಯವಿಮುಖತೆಯಿಂದ ನೆರೆಹೊರೆಯವರಿಗೆ, ಸಾರ್ವಜನಿಕರಿಗೆ ಸಂಭವಿಸುವ ಅಪಾಯಕ್ಕೆ ಆತ ಹೊಣೆಯಾಗುತ್ತಾನೆ. ಈ ಹೊಣೆ ಸಾರ್ವಜನಿಕ ಮನ್ನಣೆ, ಆಮಂತ್ರಿತ ರೂಪದ ಮನ್ನಣೆಗಳ ಪ್ರಸಂಗದಲ್ಲಿ ಉದ್ಭವಿಸುತ್ತದೆ.ಇಂಥ ಕಟ್ಟಡವನ್ನು ಪ್ರವೇಶಮಾಡುವ ವ್ಯಕ್ತಿಗಳು ನಾನಾ ಬಗೆಯವರಾಗಿರುತ್ತಾರೆ. ಕರಾರುರೂಪದಲ್ಲಿ ವ್ಯವಹರಿಸುವ ವ್ಯಕ್ತಿ, ಸ್ವಹಿತಸಾಧಿಸಿಕೊಳ್ಳಲು ಮನ್ನಣೆ ಪಡೆದುಬಂದ ವ್ಯಕ್ತಿ, ಮನ್ನಣೆ ಪಡೆಯದೆ ಅತಿಕ್ರಮಣರೂಪದಲ್ಲಿ ಬಂದವ್ಯಕ್ತಿ, ಹೀಗೆ. ಇಂಥವರ ವಿಷಯದಲ್ಲಿ ಕಟ್ಟಡದಿಂದಾಗಬಹುದಾದ ಅಪಾಯದ ಬಗ್ಗೆ ಕಟ್ಟಡದ ಮಾಲೀಕನ ಜವಾಬ್ದಾರಿ ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ. ನಾಲ್ಕನೆಯವನ ವಿಷಯದಲ್ಲಿ ಮಾಲೀಕನ ಜವಾಬ್ದಾರಿ ಏನೂ ಇಲ್ಲವೆನ್ನಬಹುದು.ಕರಾರು ರೂಪದಲ್ಲಿ ವ್ಯವಹರಿಸಿ ಕಾರ್ಯನಿರ್ವಹಿಸಿಕೊಡುವ ವ್ಯಕ್ತಿ ಕಂಟ್ರ್ಯಾಕ್ಟರ್ ಎನಿಸಿಕೊಳ್ಳುತ್ತಾನೆ. ಉದಾ: ಮನೆಯಲ್ಲಿನ ವಿದ್ಯುದ್ದೀಪವನ್ನು ಸರಿಗೊಳಿಸಲು ಬಂದವ. ಈತನಿಗೆ ಅಪಾಯವಾಗದಂತೆ ತನ್ನ ಕಟ್ಟಡವನ್ನು ಸುಸ್ಥಿತಿಯಲ್ಲಿಡುವುದು ಮಾಲೀಕನ ಪೂರ್ಣಕರ್ತವ್ಯವಾಗಿದೆ. ಒಂದು ವೇಳೆ ಅಪಾಯ ಜರುಗಿದ್ದಲ್ಲಿ ಅದಕ್ಕೆ ಸೇವಕ ಗುತ್ತಿಗೆದಾರ ಇವರು ಕಾರಣರಾಗಿದ್ದರೂ ಮಾಲೀಕನೇ ಹೊಣೆಯಾಗುತ್ತಾನೆ.
ಆಮಂತ್ರಿತ (ಇನ್‍ವೈಟೀ)
ಬದಲಾಯಿಸಿತನ್ನ ಮತ್ತು ಮಾಲೀಕನ ಹಿತಸಾಧನೆಗಾಗಿ ಬರುವವ ಆಮಂತ್ರಿತ (ಇನ್‍ವೈಟೀ) ಎನ್ನಿಸಿಕೊಳ್ಳುತ್ತಾನೆ. ಉದಾ: ವ್ಯಾಪಾರದ ಉದ್ದೇಶದಿಂದ ಆಗಮಿಸಿದ ಗ್ರಾಹಕ. ಕಟ್ಟಡದಿಂದ ಒದಗಬಹುದಾದ ಅಪಾಯಗಳನ್ನು ಆಮಂತ್ರಿತನಿಗೆ ಮೊದಲೇ ತಿಳಿಸಬೇಕಾದ್ದು ಮಾಲೀಕನ ಕರ್ತವ್ಯ. ಇಲ್ಲೂ ಕೂಡ ಸೇವಕ ಇಲ್ಲವೆ ಗುತ್ತಿಗೆದಾರನಿಗಿಂತ ಮಾಲೀಕನ ಹೊಣೆಯೇ ಹೆಚ್ಚು. ಒಂದು ವೇಳೆ ಆಮಂತ್ರಿತನಿಗೆ ಅಪಾಯದ ಪೂರ್ಣಜ್ಞಾನ ಮತ್ತು ಪರಿಣಾಮಗಳ ಅರಿವು ಇದ್ದಲ್ಲಿ ಮಾಲೀಕ ಆತನ ಬಗ್ಗೆ ಎಚ್ಚರವಹಿಸುವ ಕಾರಣವಿಲ್ಲ.ಮಾಲೀಕನ ಗುಪ್ತ ಇಲ್ಲವೆ ವ್ಯಕ್ತ ಅಪ್ಪಣೆ ಪಡೆದು ಕೇವಲ ತನ್ನ ಹಿತಸಾಧನೆಗಾಗಿ ಬರುವವ ಲೈಸೆನ್ಸ್‍ದಾರ. ಉದಾ: ನಮ್ಮ ಸೀಮೆಯಲ್ಲಿಯ ಗೊಬ್ಬರಸಾಗಿಸಲು ಬರುವವ. ತನಗೆ ಗೊತ್ತಿರುವ ಎಲ್ಲ ರೂಪದ ಗುಪ್ತಗಂಡಾಂತರಗಳ ಬಗ್ಗೆ ಲೈಸೆನ್ಸ್ ದಾರನಿಗೆ ಸೂಚನೆ ಕೊಡುವುದು ಮಾಲೀಕನ ಕರ್ತವ್ಯ. ಆದರೆ ಉದ್ದೇಶ ಪೂರ್ವಕವಾಗಿ ಹೊಸ ಗಂಡಾಂತರಗಳನ್ನು ಒಡ್ಡಬಾರದು. ಲೈಸೆನ್ಸ್ ದಾರ ಮಾಲೀಕನಿಗೆ ಗೊತ್ತಿದ್ದು ತನಗೆ ಗೊತ್ತಿರದ ಯಾವುದೇ ಅಪಾಯಕ್ಕೆ ಒಳಗಾದರೂ ಮಾಲೀಕನಿಂದ ಪರಿಹಾರ ಪಡೆಯಬಹುದು.ಉಪಭೋಕ್ತøವಿನ ಅಪ್ಪಣೆ ಇಲ್ಲದೆ ಆತನ ಕಟ್ಟಡವನ್ನು ಉಪಭೋಗಿಸುವವ ಅಕ್ರಮ ಪ್ರವೇಶಕ ಎನಿಸಿಕೊಳ್ಳುತ್ತಾನೆ. ಈತನಿಗೆ ಉಪಭೋಕ್ತøವಿನ ಒಪ್ಪಿಗೆಯಾಗಲೀ ಮನ್ನಣೆಯಾಗಲೀ ಇರುವುದಿಲ್ಲ. ಅಲ್ಲಿಯ ಅಪಾಯಗಳಿಗೆ ಆತನೇ ಹೊಣೆ. ಆತನಿಗೆ ಗಂಡಾಂತರಗಳ ಬಗ್ಗೆ ಉಪಭೋಕ್ತø ಎಚ್ಚರಿಕೆ ಕೊಡಬೇಕಾಗಿಲ್ಲವಾದರೂ ಉದ್ದೇಶಪೂರ್ವಕ ಅಪಾಯಗಳನ್ನು ಒಡ್ಡಕೂಡದು. ಆದರೆ ತನ್ನ ಆಸ್ತಿರಕ್ಷಣೆಯ ಮಟ್ಟಿಗೆ ಯೋಗ್ಯಕ್ರಮ ತೆಗೆದುಕೊಳ್ಳಬಹುದು. ಬಂದವ ಅಕ್ರಮ ಪ್ರವೇಶಕ ಎಂದು ಗೊತ್ತಾದಮೇಲೂ ಆತನಿಗೆ ಉದ್ದೇಶಪೂರ್ವಕ ಯಾವ ಅಪಾಯವಾಗದಂತೆ ಕ್ರಮ ತೆಗೆದುಕೊಳ್ಳುವುದು ಉಪಭೋಕ್ತøವಿನ ಕರ್ತವ್ಯ.
ಉಲ್ಲೇಖಗಳು
ಬದಲಾಯಿಸಿ- ↑ http://v4news.com/%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%AC%E0%B2%B8%E0%B3%8D-%E0%B2%B8%E0%B2%82%E0%B2%9A%E0%B2%BE%E0%B2%B0%E0%B2%95%E0%B3%8D%E0%B2%95%E0%B2%BE%E0%B2%97%E0%B2%BF/
- ↑ http://drjagadishkoppa.blogspot.in/2013_05_01_archive.html
- ↑ http://www.mataharicourse.com/tag/membuat-sabun-cuci-tangan?lang=kn