ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ ೫೫೨ ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ ೫೩೦ ಸದಸ್ಯರು ಚುನಾಯಿತರಾಗುತ್ತಾರೆ. ೨೦ ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ ೨೫ ವರ್ಷ ವಯಸ್ಸಾಗಿರಬೇಕು.
ಲೋಕಸಭೆಯ ಸದಸ್ಯರು ಒಬ್ಬರನ್ನು "ಸಭಾಧ್ಯಕ್ಷ(ಸ್ಪೀಕರ್) ಅಥವಾ ಸಭಾಪತಿ" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷ(ಸ್ಪೀಕರ್) ರ ಮುಖ್ಯ ಕೆಲಸ. ಸಭಾಧ್ಯಕ್ಷ(ಸ್ಪೀಕರ್) ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪಸಭಾಧ್ಯಕ್ಷ(ಡೆಪ್ಯುಟಿ ಸ್ಪೀಕರ್)ರು ನಿರ್ವಹಿಸುತ್ತಾರೆ. ಇವರಲ್ಲದೇ ಇವರಿಬ್ಬರ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ನಿರ್ವಹಿಸಲು ೧೦ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರು ನೇಮಕ ಮಾಡುತ್ತಾರೆ. ಮೀರಾ ಕುಮಾರ್ ರವರು ಸಧ್ಯ ಲೋಕಸಭೆಯ ಸಭಾಧ್ಯಕ್ಷರಾಗಿದ್ದಾರೆ. ಇವರು ಲೋಕ ಸಭೆಯ ಮೊದಲ ಮಹಿಳಾ ಸಭಾದ್ಯಕ್ಷರು.
ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ.
ಸ್ಪೀಕರ್: ಮೀರಾ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸಸಾರಾಮ್, ಬಿಹಾರ
ಉಪ ಸ್ಪೀಕರ್: M.Thambidurai, ಎಐಎಡಿಎಂಕೆ, ಕರೂರ್, ತಮಿಳುನಾಡು
ಸದನದ ನಾಯಕ: ಸುಶೀಲ್ ಕುಮಾರ್ ಶಿಂಧೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸೋಲಾಪುರ್, ಮಹಾರಾಷ್ಟ್ರ
ಸೋನಿಯಾ ಗಾಂಧಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ರಾಯ್ಬರೇಲಿ, ಉತ್ತರ ಪ್ರದೇಶ
ವಿರೋಧಪಕ್ಷದ ನಾಯಕ: ಸುಷ್ಮಾ ಸ್ವರಾಜ್, ಭಾರತೀಯ ಜನತಾ ಪಾರ್ಟಿ, ವಿದಿಶಾ, ಮಧ್ಯಪ್ರದೇಶ