ಹಿರಿಯಂಗಡಿ ಬೃಹತ್ ಮಾನಸ್ತಂಭ

ಹಿರಿಯಂಗಡಿ ಬೃಹತ್ ಮಾನಸ್ತಂಭವು ಕರ್ನಾಟಕದ ಮಂಗಳೂರಿನ ಈಶಾನ್ಯಕ್ಕೆ ೫೩ ಕಿ.ಮೀ.[೧] ದೂರದಲ್ಲಿರುವ ಕಾರ್ಕಳದ ಹಿರಿಯಂಗಡಿಯ ನೇಮಿನಾಥ ಬಸದಿಯ ಮುಂಭಾಗದಲ್ಲಿದೆ. ಈ ನೇಮಿನಾಥ ಬಸದಿಯನ್ನು ೧೯೪೬ ರಲ್ಲಿ ನವೀಕರಿಸಲಾಯಿತು.[೨] ಮಾನಸ್ತಂಭವು ನೂರಾರು ವರ್ಷಗಳಷ್ಟು ಹಳೆಯದು.[೩] ೧೫ ನೇ ಶತಮಾನದ ಆರಂಭದಲ್ಲಿ ರಾಜ ವೀರ ಪಾಂಡ್ಯ ದೇವನಿಂದ ನಿರ್ಮಿಸಲ್ಪಟ್ಟ ಸ್ತಂಭವು ಅನೇಕ ಬಸದಿಗಳಿಂದ ಆವೃತವಾಗಿದೆ.[೪]

ಹಿರಿಯಂಗಡಿಯು ಆಶ್ರಮಗಳು ಮತ್ತು ಪುಣ್ಯ ಕ್ಷೇತ್ರಗಳ ಸಮೂಹವನ್ನು ಹೊಂದಿರುವ ಕಾರ್ಕಳದ ಒಂದು ತಾಣವಾಗಿದೆ. ಸಹ್ಯಾದ್ರಿ ಪರ್ವತ ಶ್ರೇಣಿಗಳ ಕಲ್ಲಿನ ವಿಸ್ತರಣೆಯಿಂದ ಸುತ್ತುವರೆದಿರುವ ನೇಮಿನಾಥ ಬಸದಿ ಸಂಕೀರ್ಣಕ್ಕೆ ಈ ಸ್ಥಳವು ಹೆಸರುವಾಸಿಯಾಗಿದೆ. ಈ ಸಂಕೀರ್ಣವು ಆದಿನಾಥ ಸ್ವಾಮಿ ದೇವಾಲಯ, ಭುಜಬಲಿ ಬ್ರಹ್ಮಾಚಾರ್ಯ ಆಶ್ರಮ, ಅನಂತನಾಥ ದೇವಾಲಯ, ಪದ್ಮಾವತಿ ಬಸದಿಗಳು, ಭಗವಾನ್ ಮಹಾವೀರ ದೇವಾಲಯ ಮತ್ತು ಚಂದ್ರನಾಥ ಸ್ವಾಮಿ ದೇವಾಲಯ ಸೇರಿದಂತೆ ಹಲವಾರು ಪ್ರಸಿದ್ಧ ದೇವಾಲಯಗಳಿಂದ ಅಲಂಕರಿಸಲ್ಪಟ್ಟಿದೆ. ೫೨ ಅಡಿ ಎತ್ತರದ ಮಾನಸ್ತಂಭವು ಸಂಕೀರ್ಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.[೫]

ಇತಿಹಾಸ

ಬದಲಾಯಿಸಿ

ಕಾರ್ಕಳ ಅಥವಾ ಪ್ರಾಚೀನ ಪಾಂಡ್ಯನಗರಿಯು ಸುಮಾರು ೧೦ ರಿಂದ ೧೧ ನೇ ಅವಧಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಸಂತಾರ ಮುಖ್ಯಸ್ಥರ ವಂಶಸ್ಥರು ಅಂದರೆ ಹದಿನಾಲ್ಕನೆಯ ಶತಮಾನದ ಉತ್ತರಾರ್ಧದಲ್ಲಿ ಕಾರ್ಕಳ ಪ್ರದೇಶದಲ್ಲಿ ಅಧಿಪತ್ಯವನ್ನು ಸ್ಥಾಪಿಸಿದ ಭೈರವನು ಕಾರ್ಕಳದಲ್ಲಿ ಈ ನೇಮಿಶ್ವರ ಚೈತಾಲಯವನ್ನು (ನೇಮಿನಾಥ ಬಸದಿ) ನಿರ್ಮಿಸಿದುದಾಗಿ ಶಾಸನದಿಂದ ಕಂಡುಬರುತ್ತದೆ. ಮುಂದೆ ೧೫ ನೇ ಶತಮಾನದ ಮಧ್ಯಭಾಗದಲ್ಲಿ ಅವನ ಮೊಮ್ಮಗ ಪಾಂಡ್ಯನು ನೇಮಿನಾಥ ಬಸದಿಯ ಎದುರಿನಲ್ಲಿ ಮಾನಸ್ತಂಭವೊಂದನ್ನು ನಿರ್ಮಿಸಿದನು.[೬]

ಎತ್ತರದ ಸ್ವತಂತ್ರ ಏಕಶಿಲೆಯ 'ಶ್ರೇಷ್ಠತೆಯ ಸ್ತಂಭಗಳು' ಜೈನ ವಾಸ್ತುಶಿಲ್ಪದ ಪ್ರಮುಖ ಭಾಗವಾಗಿದೆ. ಇದು ಅನೇಕ ಜೈನ ದೇವಾಲಯಗಳು ಅಥವಾ ಬಸದಿಗಳ ಮುಂದೆ ಕಂಡುಬರುತ್ತವೆ. ಅವುಗಳನ್ನು ಪವಿತ್ರ ಸ್ತಂಭಗಳೆಂದು ಪರಿಗಣಿಸಲಾಗುತ್ತದೆ. ಕೆಲವು ರಚನೆಯ ಮೇಲೆ ದೇವತೆಯ ಸಣ್ಣ ಪ್ರತಿಮೆಯನ್ನು ಹೊಂದಿವೆ. ಮಾನಸ್ತಂಭಗಳನ್ನು ತೀರ್ಥಂಕರರ ಜಯಸ್ತಂಭಗಳೆಂದು ಪರಿಗಣಿಸಲಾಗುತ್ತದೆ. ೫೨ ಅಡಿ ಎತ್ತರದಲ್ಲಿ ನಿಂತಿರುವ ಇದು ಕರ್ನಾಟಕದ ಎರಡನೇ ಅತಿ ಎತ್ತರದ ಮಾನಸ್ತಂಭವಾಗಿದೆ. ಚಂದ್ರಗಿರಿಯಲ್ಲಿ ೬೫ ಅಡಿ ಎತ್ತರದ ಮಾನಸ್ತಂಭವನ್ನು ಜಿನ ಪಾರ್ಶ್ವ ದೇವಾಲಯದ ಮುಂದೆ ಇರಿಸಲಾಗಿದೆ. ಸ್ತಂಭವನ್ನು ಮೂಲತಃ ಮೂಡಬಿದ್ರಿಯಲ್ಲಿರುವ ತ್ರಿಭುವನ ಚೂಡಾಮಣಿಯ ಸಾವಿರ ಕಂಬಗಳ ಬಸದಿಯ ಮುಂಭಾಗದಲ್ಲಿ ಸ್ಥಾಪಿಸಲು ಕಲ್ಪಿಸಲಾಗಿತ್ತು. ಸ್ಥಳೀಯ ಸಂಪ್ರದಾಯದ ಪ್ರಕಾರ ಮೂಡಬಿದ್ರಿ ಪ್ರದೇಶದ ಸ್ಥಳೀಯ ಆಡಳಿತಗಾರರಾದ ಚೌಟರು ನುರಿತ ಶಿಲ್ಪಿಗಳ ಆದೇಶದಂತೆ ಮಾನಸ್ತಂಭವನ್ನು ಪಡೆದರು. ಆದರೆ ಕಲಾವಿದರು ಅದನ್ನು ಪರಿಪೂರ್ಣಗೊಳಿಸಿದ ನಂತರ ಅದರ ಗಾತ್ರ ಮತ್ತು ತೂಕದ ಕಾರಣದಿಂದಾಗಿ ಸಾರಿಗೆ, ವಿಶೇಷವಾಗಿ ನದಿಯನ್ನು ದಾಟುವುದು ಅಸಾಧ್ಯವೆಂದು ಕಂಡುಬಂದಿತು. ಇಷ್ಟವಿಲ್ಲದಿದ್ದರೂ ಅದನ್ನು ಹಿರಿಯಂಗಡಿಯಲ್ಲಿ ಇಡಲಾಯಿತು. ಇದನ್ನು ಮನಗಂಡ ಕಾರ್ಕಳದ ಭೈರವರಸನು ತಕ್ಷಣವೇ ಕಾರ್ಯಪ್ರವೃತ್ತನಾದನು. ಭವ್ಯವಾದ ಮಾನಸ್ತಂಭಕ್ಕೆ ಪೂರಕವಾಗಿ ಹಿರಿಯಂಗಡಿಯಲ್ಲಿ ನೇಮಿಶ್ವರ ಬಸದಿ ಎಂಬ ಹೊಸ ದೇವಾಲಯವನ್ನು ನಿಯೋಜಿಸಿದನು. ನೇಮಿನಾಥ ಬಸದಿಯು ಅದರ ಹೊರ ಗೋಡೆಗಳ ಮೇಲೆ ಆಂಜನೇಯ, ಗಣೇಶ, ಕೃಷ್ಣ ಮತ್ತು ಇತರ ಹಿಂದೂ ದೇವರುಗಳ ಕೆತ್ತನೆಗಳನ್ನು ಹೊಂದಿದೆ.[೭] ಭಗವಾನ್ ಬಾಹುಬಲಿಗೆ ಮಹಾಮಸ್ತಾಭಿಷೇಕ ಮಾಡುವ ಮೊದಲು ನೇಮಿನಾಥ ಸ್ವಾಮಿಗೆ ಮೊದಲ ಪೂಜೆ ಸಲ್ಲಿಸಬೇಕು ಎಂದು ಹೇಳಲಾಗುತ್ತದೆ. [೮]

ಬಸದಿಯ ಮುಂಭಾಗದಲ್ಲಿ ನಿರ್ಮಿಸಲಾದ ಬೃಹತ್ ಕಲ್ಲಿನ ಕಂಬಗಳನ್ನು ಮಾನಸ್ತಂಭಗಳು ಎಂದು ಕರೆಯಲಾಗುತ್ತದೆ. ಮಾನಸ್ತಂಭವು ಹಿಂದೂ ದೇವಾಲಯಗಳ ಮುಂದೆ ನಿರ್ಮಿಸಲಾದ ಧ್ವಜಸ್ತಂಭಕ್ಕೆ ಸಮಾನವಾಗಿದೆ. ಮಾನಸ್ತಂಭದ ಮೂರನೇ ಮತ್ತು ಅತಿ ಎತ್ತರದ ಭಾಗವನ್ನು ಮುಕುಟ ಅಥವಾ ಕಿರೀಟ ಎಂದು ಕರೆಯಲಾಗುತ್ತದೆ. ಮೇಲ್ಭಾಗದಲ್ಲಿರುವ ಮುಕುಟವು ಮಂಟಪವನ್ನು ಹೊಂದಿದ್ದು ಅಲ್ಲಿ ತೀರ್ಥಂಕರ ಅಥವಾ ಅವನ ಮೇಲೆ ಇರುವ ಚಿಕ್ಕ ದೇವತೆಯಾದ ಬ್ರಹ್ಮ ಯಕ್ಷನ ಚಿತ್ರವನ್ನು ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಅದನ್ನು ಬ್ರಹ್ಮದೇವ ಸ್ತಂಭ ಎಂದು ಕರೆಯಲಾಗುತ್ತದೆ.[೯] ಮಾನಸ್ತಂಭವನ್ನು ಪಿರಮಿಡ್ ಕ್ರಮದಲ್ಲಿ ಸಾಂಪ್ರದಾಯಿಕ ಆಕೃತಿಯೊಂದಿಗೆ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಎತ್ತರದ ವೇದಿಕೆಯು ಅಧಿಷ್ಠಾನದ (ಆಸನ, ವಾಸಸ್ಥಾನ) ಎಲ್ಲಾ ಅಂಗಗಳನ್ನು ಹೊಂದಿದೆ. ಉದಾಹರಣೆಗೆ ಉಪಾನ (ಅಧಿಷ್ಠಾನದ ಪಾದ), ಜಗತಿ (ಎತ್ತರದ ವೇದಿಕೆ), ವೃತ್ತ-ಕುಮುದ, ಕಂಠ (ಅಚ್ಚುಗಳ ನಡುವಿನ ಬಿಡುವು) ಮತ್ತು ಪ್ರತಿ (ಹಲಗೆ ಅಚ್ಚು). ಕಂಬದ ತುದಿಯು ಸಣ್ಣ ಗೋಪುರದ ದೇವಾಲಯವನ್ನು ಹೊಂದಿದೆ. ದೇಗುಲದ ಒಳಗೆ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಯಕ್ಷನ ಸುಂದರ ಕೆತ್ತನೆ ಇದೆ.[೧೦]

ಸಾಂಪ್ರದಾಯಿಕ ದಿಂಡುಗಳಿಂದ ಕೂಡಿ ಮೆಟ್ಟಿಲೋಪಾದಿಯಲ್ಲಿರುವ ಶಿಲಾಅಧಿಷ್ಠಾನದ ಮೇಲೆ ಈ ಉನ್ನತ ಮಾನಸ್ತಂಭ ನಿಂತಿದೆ. ಸ್ತಂಭದ ಎತ್ತರದ ಗಾತ್ರಕ್ಕೆ ಹೋಲಿಸಿದರೆ ಅದರ ಚೌಕಪೀಠವು ತೀರ ಕಿರಿದು. ಸ್ತಂಭದ ದುಂಡನೆಯ ದಂಡಭಾಗವನ್ನು (ದಿಂಡು) ಬಳೆಯಾಕಾರದ ಅಲಂಕೃತ ಪಟ್ಟಿಗಳಿಂದ ಖಂಡಗಳಾಗಿ ವಿಭಜಿಸಿದೆ. ದಂಡಾಗ್ರದಲ್ಲಿ ಕುಚ್ಚಿನಂತಹ ಅಲಂಕರಣದ ಮೇಲೆ ಘಟಭಾಗದಲ್ಲಿ ನಕ್ಷತ್ರಾಕಾರದ ಹಲಗೆಯನ್ನೂ ಅದರ ಮೆಲೆ ಮಂಡಿಯನ್ನಾಧರಿಸಿರುವ ಬೃಹತ್ತಾದ ಪಲಗೈ ಅಥವಾ ಫಲಕವನ್ನೂ ಕೂಡಿಸಿದೆ. ಫಲಕದ ಮೇಲೆ ನಿರ್ಮಿಸಿರುವ ಅಲಂಕೃತ ಕಿರುಕೋಷ್ಟದೊಳಗೆ ಅತ್ಯಂತ ಸುಂದರವಾಗಿ ಕೆತ್ತಿರುವ ಆಸೀನ ಯಕ್ಷಶಿಲ್ಪವಿದೆ. ಕುಸುರಿ ಕೆತ್ತನೆಗಳಿಂದ ಆಕರ್ಷಕರಾಗಿರುವ ಈ ಮಾನಸ್ತಂಭದ ಒಟ್ಟು ಎತ್ತರ ೧೬.೫ ಮೀ.[೧೧]

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
 1. https://www.flickriver.com/photos/trayaan/17491371342/
 2. https://wgbis.ces.iisc.ernet.in/biodiversity/sahyadri/news/0404031.htm
 3. https://www.pinterest.com/pin/554294666614303476/
 4. https://touringwithpk.com/karkala-manasthamba/
 5. https://www.holidify.com/places/karkala/manastambha-of-hiriangadi-sightseeing-4903.html
 6. ARCHAEOLOGICAL SURVEY OF INDIA, Bangalore Circle
 7. https://www.kamat.com/jyotsna/blog/blog.php?BlogID=1059
 8. http://myindiantravel.blogspot.com/2016/02/neminath-basadi-hiriyangadi.html
 9. https://www.kamat.com/jyotsna/blog/blog.php?BlogID=1059
 10. https://www.deccanherald.com/content/48833/miscellany.html
 11. ARCHAEOLOGICAL SURVEY OF INDIA, Bangalore Circle