ಹಳೆಪೈಕ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹಳೆ ಪೈಕ ಅಥವಾ ನಾಮಧಾರಿ ನಾಯ್ಕ ಉತ್ತರ ಕನ್ನಡ,ಉಡುಪಿ ಮತ್ತು ದಕ್ಶಿಣ ಕನ್ನಡಜಿಲ್ಲೆಗಳಲ್ಲಿ ಹರಡಿಕೊಂಡಿರುವ ಒಂದು ವೈಷ್ಣವ ಸಂಪ್ರದಾಯ ಅನುಸರಿಸುವ ಜನರ ಪಂಗಡ. ಭಾರತದಲ್ಲಿ ಸಮುದಾಯ ಅಧ್ಯಯನಗಳು ಮಾನವ ಶಾಸ್ತ್ರದ ಶೈಕ್ಶಣಿಕ ಚಟವಟಿಕೆಗಳ ಭಾಗವಾಗಿ ರೂಪಗೊಂಡವು. ವಸಾಹತು ಆಡಳಿತದ ಭಾಗವಾಗಿ ನಡೆದ ಈ ಸಮುದಾಯ ಅಧ್ಯಯನಗಳಿಗೆ ಸರಿ ಸುಮಾರು ನೂರು ವರ್ಶಗಳ ಇತಿಹಾಸವಿದೆ. ಭಾರತಕ್ಕೆ ಸಂಬಂಧಪಟ್ಟ ಅಧ್ಯಯನಗಳು ೧೭೭೪ರಲ್ಲಿ ಕಲ್ಕತ್ತಾದಲ್ಲಿ ಪ್ರಾರಂಭವಾದ " ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ " ಸಂಸ್ಥೆಯ ಮೂಲಕ ಪ್ರಾರಂಭವಾದವು. ವಸಾಹತು ಆಡಳಿತದ ರಾಜಕೀಯಾರ್ಥಿಕ ಚಟವಟಿಕೆಗಳ ಭಾಗವಾಗಿ ಪ್ರಾರಂಭವಾದ ಈ ಅಧ್ಯಯನಗಳಿಗೆ ಶುದ್ಧ ಶೈಕ್ಶಣಿಕ ಕಾರಣವಾಗಲಿ, ಹಿಂದುಳಿದ ಸಮುದಾಯಗಳ ಅಭಿವ್ರದ್ದಿಯ ಕಾಳಜಿಯಾಗಲಿ ಇರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಭಾರತದ ಮೊದಲ ಸ್ವಾತಂತ್ರ ಸಂಗ್ರಾಮದ ನಂತರ ವಸಾಹತು ಆಡಳಿತಕ್ಕೆ ಸ್ತಳೀಯ ಸಮುದಾಯಗಳ ಅಮೂಲಾಗ್ರ ವಿವರಗಳ ಅಗತ್ಯ ಕಂಡಿತು, ಮತ್ತು ಆ ಕುರಿತು ವಿವರಗಳನ್ನು ಕಲೆ ಹಾಕಲು ತನ್ನ ಆಡಳಿತ ವಿವಿದ ಶಾಖೆಗಳಲ್ಲಿ ಕೆಲಸ ಮಾಡುತಿದ್ದ ಅಧಿಕಾರಿಗಳನ್ನೆ ಸಮುದಾಯಗಳ ವಿವರಗಳನ್ನು ಸಂಗ್ರಹಿಸಲು ನೇಮಕ ಮಾಡಿತು. ೧೮೯೪ರಲ್ಲಿ ಈ ಕಾರ್ಯಚರಣೆಯು ಭಾರತದಲ್ಲಿ ಆರಂಭವಾಯಿತು. ಹರ್ಬರ್ಟ್ ರಿಸ್ಲೆ ಯಂತ ಅಧಿಕಾರಿಯನ್ನು ಈ ಸರ್ವೆ ಕೆಲಸದ ಸುಪೆರಿಡೆಂಟ್ ಆಗಿ ನೇಮಿಸಲಾಯಿತು. ೧೯೦೧ರಲ್ಲಿ " ಎತ್ನೋಗ್ರಾಫಿಕ್ ಸರ್ವೆ ಆಫ್ ಇಂಡಿಯ " ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಈ ಸಂಸ್ಥೆಯ ಹುಟ್ಟು ಭಾರತದಲ್ಲಿ ಮಾನವ ಶಾಸ್ತ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿತು. ಮುಂದೆ ಭಾರತದ ಎಲ್ಲಾ ಪ್ರಾಂತ್ಯಗಳ ಜಾತಿ ಮತ್ತು ಬುಡಕಟ್ಟುಗಳ ಕುರಿತ ವಿವರಗಳು ಹಲವು ಸಂಪುಟಗಳಲ್ಲಿ ಪ್ರಕಟಗೊಂಡವು. ಗೆಜೆಟಿಯರ್ ಅಫ್ ಇಂಡಿಯ ದ ಇಪ್ಪತ್ತಾರು ಸಂಪುಟಗಳು ಪ್ರಕಟಗೊಂಡವು. ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಆರಂಭಿಸಿದವರೆಲ್ಲ ಕಂಪನಿ ಆಡಳಿತದ ಅಧಿಕಾರಿಗಳು. ಇವರು ಕಲೆ ಹಾಕಿದ ಮಾಹಿತಿಗಳು ಮತ್ತು ಅವುಗಳ ವಿಶ್ಲೇಶಣೆಯ ತಾತ್ವಿಕ ಚೌಕಟ್ಟಿನಲ್ಲಿಯೆ ಸಮಾಜ ಶಾಸ್ತ್ರ ಮತ್ತು ಮಾನವ ಶಾಸ್ತ್ರವು ಜಗತ್ತಿನ ಶೈಕ್ಶಣಿಕ ವಲಯದಲ್ಲಿ ಪ್ರವರ್ದಮಾನಕ್ಕೆ ಬಂದವು. ಆದರೆ ಬೇರೆ ಬೇರೆ ಉದ್ದೇಶಗಳಿಗಾಗಿ ಇಂಡಿಯಾ ಬಂದ ಕಂಪನಿ ಅಧಿಕಾರಿಗಳನ್ನೆ ತಾತ್ಕಾಲಿಕವಾಗಿ ಮಾನವ ಶಾಸ್ತ್ರಜ್ಞರನ್ನಾಗಿ ರೂಪಾಂತರಿಸಿ ಭಾರತದಲ್ಲಿ ಸಮಾಜ ಅಧ್ಯಯನಕ್ಕೆ ತೊಡಗಿಸಲಾಯಿತು. ರಿಸ್ಲೆ, ಎಂಥೋವನ್, ಥರ್ಶ್ಟನ್ ಮತ್ತು ಎಲ್ಲೊ ಪೋಲಿಸ್ ಅಧಿಕಾರಿಯಾಗಿ ಕೆಲಸ ಮಾಡುತಿದ್ದ ಫಾಸೆಟ್ ರಂತಹ ಅಧಿಕಾರಿಗಳನ್ನು ತಂದು ಸಮುದಾಯಗಳ ಅಧ್ಯಯನ ಮಾಡಲು ಕಂಪನಿ ಆಡಳಿತ ಆಜ್ಞಾಪಿಸಿತು.
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
---|---|
ಭಾಷೆಗಳು | |
ಕನ್ನಡ | |
ಧರ್ಮ | |
ಹಿಂದೂ ಧರ್ಮ | |
ಸಂಬಂಧಿತ ಜನಾಂಗೀಯ ಗುಂಪುಗಳು | |
ದ್ರಾವಿಡರು · ಕನ್ನಡಿಗ · |
ಹರ್ಬರ್ಟ್ ರಿಸ್ಲೆ ಯ ನಾಯಕತ್ವದಲ್ಲಿ ರಚನೆಯಾದ ಎತ್ನೋಗ್ರಾಫಿಕ್ ಸರ್ವೆ ಅಫ್ ಇಂಡಿಯ ಸಂಸ್ಥೆಯು ಆನಂತರ ಪೂರ್ಣಪ್ರಮಾಣದಲ್ಲಿ ಮಾನವಶಾಸ್ತ್ರೀಯ ವಿವರಗಳನ್ನು ಕಲೆಹಾಕಲಾರಂಬಿಸಿತು. ಜಾತಿಗಳ ಮತ್ತು ಆಧಿವಾಸಿಗಳ [ಕ್ಯಾಸ್ಟ್ ಅಂಡ್ ಟ್ರೈಬ್ಸ್] ಅಧ್ಯಯನಗಳು ವ್ಯಾಪಕವಾಗಿ ಪ್ರಾರಂಭವಾದವು.
ಬಾಂಬೆ ಪ್ರೆಸಿಡೆನ್ಸಿಯ ಭಾಗದಲ್ಲಿ ಕಾರ್ಯನಿರತನಾಗಿದ್ದ ಆರ್. ಇ. ಎಂಥೋವನ್ " ದಿ ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ ಆಫ್ ಬಾಂಬ್" ಎಂಬ ಶೀರ್ಶಿಕೆಯಲ್ಲಿ ಮೂರು ಸಂಪುಟಗಳನ್ನು ೧೯೨೦ರಲ್ಲಿ ಪ್ರಕಟಿಸಿದನು. ಸ್ಥಳೀಯ ಬ್ರಾಹ್ಮಣ ಪಂಡಿತರ ನೆರವನ್ನು ಪಡೆದ ಎಂಥೋವನ್ ತನ್ನ ಸಮಕಾಲೀನ ಅಧ್ಯಯನಕಾರರಿಗಿಂತ ಹೆಚ್ಚು ಹೆಚ್ಚು ನಿಖರ ಮಾಹಿತಿಗಳನ್ನು ಕೊಡಲು ಪ್ರಯತ್ನಿಸುತ್ತಾನೆ. ಮೂಲತಃ ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತಿದ್ದ ಎಂಥೋವನ್ ಆಗಿನ ಬಾಂಬೆ ಕರ್ನಾಟಕದ ಪಶ್ಚಿಮ ಭಾಗದ ಅಂದರೆ ಈಗಿನ ಮಲೆನಾಡಿನ ಮತ್ತು ಕರಾವಳಿ ಜಿಲ್ಲೆಗಳಲ್ಲಿನ ಸಮುದಾಯಗಳ ಅಪರೂಪದ ವಿವರಗಳನ್ನು ತನ್ಮಯತೆಯಿಂದ ಸಂಗ್ರಹಿಸಿದ್ದಾನೆ. ಆ ಭಾಗದ ಕುಡುಬಿ, ಹಾಲಕ್ಕಿ-ಒಕ್ಕಲು, ಹಳೆಪೈಕ, ಗೌಳಿ ಮುಂತಾದ ಸಮುಧಾಯಗಳ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಮಾಹಿತಿಗಳನ್ನು ಆಸ್ತೆಯಿಂದ ಸಂಗ್ರಹಿಸಿರುವುದು ಈತನ ಹೆಚ್ಚುಗಾರಿಕೆ. ಆರ್.ಇ.ಎಂಥೋವನ್ ನ "ದಿ ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ ಆಫ್ ಬಾಂಬೆ" ಎಂಬ ಗ್ರಂಥಗಳ ಎರಡನೆ ಸಂಪುಟದಲ್ಲಿ " ಹಳೆಪೈಕ" ಸಮುದಾಯದ ಬಗ್ಗೆ ಇರುವ ವಿವರಗಳನ್ನು ಇಲ್ಲಿ ಕನ್ನಡಕ್ಕೆ ಅನುವಾದಿಸಲಾಗಿದೆ.
ಹಳೆಪೈಕ
ಬದಲಾಯಿಸಿಹಳೆಪೈಕರು ಹೆಂಡ ಇಳಿಸುವ ಜನಾಂಗದವರಾಗಿದ್ದು ೧೯೦೧ರ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ ೫೧೯೩೦ ಇದೆ. ೨೬೮೦೫ ಗಂಡಸರು ಹಾಗೂ ೨೫೧೨೫ ಹೆಂಗಸರು ಇದ್ದಾರೆ. ಅಲ್ಪ ಸ್ವಲ್ಪ ಇತರೆ ಜನಸಂಖ್ಯೆಯನ್ನು ಬಿಟ್ಟರೆ ಇಡೀ ಕೆನರಾ ಜಿಲ್ಲೆಯಲ್ಲಿ ವ್ಯಾಪಿಸಿದ್ದಾರೆ. ಇವರು ದಕ್ಶಿನ ಕನ್ನಡ ಜಿಲ್ಲೆಯ "ಬಿಲ್ಲವರು" ಅಥವಾ "ದೀವರು", ಮಲಬಾರಿನ ತಿಯಾನರುಗಳಿಗೆ ಸಂಬಂಧವಿದ್ದವರಾಗಿದ್ದಾರೆ. ಈ ಜಾತಿಯ ಮೂಲಸ್ತಳದ ಬಗ್ಗೆ ಯಾವುದೆ ಮಾಹಿತಿ ಸಿಗುವುದಿಲ್ಲ. ಆದರೆ ಈ ಜನಾಂಗದ ಒಂದು ಪಂಗಡದ ಒಬ್ಬ ಸ್ವಾಮಿ ಅಥವಾ ಗುರು, ವಿಜಯನಗರದ ಆನೆಗುಂದಿಯಲ್ಲಿದ್ದನೆಂಬ ಆದಾರದ ಮೇಲೆ ಈ ಜನಾಂಗದ ಸಂಪ್ರದಾಯವು ವಿಜಯನಗರ ಸಾಮ್ರಜ್ಯಕ್ಕೆ ಸಂಬಂಧಿಸಿದಂತೆ ಕಾಣುತ್ತದೆ. ಬಹುಶಃ ವಿಜಯನಗರ ಸಾಮ್ರಾಜ್ಯದ ಭಾಗದ ಹಿಂದೂ ಸಮ್ರಾಜ್ಯದಲ್ಲಿ ನೌಕರರಾಗಿದ್ದರೆಂದೂ ಅತ್ಯುತ್ತಮ ಸೈನಿಕ ಪಡೆಯವರಾಗಿದ್ದರೆಂದೂ ಊಹಿಸಲಾಗಿದೆ. ವರ್ತಮಾನದಲ್ಲಿ ಅವರು ಕರಾವಳಿ ತಾಲ್ಲೂಕುಗಳಾದ ಅಂಕೋಲಾ,ಕುಮಟ,ಹೊನ್ನಾವರ ಹಾಗೂ ಘಟ್ಟದ ಮೇಲಿನ ಸಿರ್ಸಿ ಹಾಗೂ ಸಿದ್ದಾಪುರಗಳಲ್ಲಿ ವ್ಯಾಪಕವಾಗಿ ಇದ್ದಾರೆ.
ಇವರ ಮೂಲದ ಬಗ್ಗೆ ಇದ್ದ ಹಲವಾರು ದಂತ ಕತೆಗಳು ಅಥವಾ ಕಟ್ಟು ಕತೆಗಳನ್ನು ಹೊರತುಪಡಿಸಿದರೆ ಇವರಲ್ಲಿರುವುದು ಎರಡು ಸ್ವಗೋತ್ರ ಪಂಗಡಗಳು [೧] ತೆಂಗಿನ ದೀವರು ಅಥವಾ ತೆಂಗಿನ ಮಕ್ಕಳು [೨] ಬಯಿನೆ ದೀವರು ಅಥವಾ ಕಾನು ದೀವರು. ತೆಂಗಿನ ದೀವರು ಅಥವಾ ತೆಂಗಿನ ಮರದ ಮಕ್ಕಳು ಕರಾವಳಿಯಲ್ಲಿ ವಾಸವಾಗಿದ್ದಾರೆ. ಅವರನ್ನು ನಾಮದಾರಿಗಳು ಅಥವಾ ತ್ರಿನಾಮದಾರಿಪೈಕರೆಂದು ಕರೆದುಕೊಳ್ಳುತ್ತಾರೆ. ಬಯಿನು ಹಳೆಪೈಕರು ಅಂದರೆ ಬಗಿನಿ ಅಥವಾ ಬಯಿನಿ ದೀವರು ಘಟ್ಟದ ಮೇಲಿದ್ದಾರೆ. ಇವೆರಡೂ ಪಂಗಡಗಳ ನಡುವೆ ಅಂತರ್ಮದುವೆಗಳು ಆಗುವುದಿಲ್ಲ. ಇದಕ್ಕಿರುವ ಅಡ್ಡಿಯೆಂದರೆ ಕೊಂಕಣಿ ಮತ್ತು ದೇಶಸ್ಟ ಮರಾಠರಲ್ಲಿರುವಂತೆ ಭೌಗೋಳಿಕ ಮೂಲದ್ದು. ನವನಾಗರೀಕರಾಗಿ, ನಾಗರೀಕ ಪ್ರದೇಶವಾದ ಕರಾವಳಿಯಲ್ಲಿ ವಾಸಮಾಡುತ್ತಿದ್ದ ತೆಂಗಿನ ದೀವರಿಗೆ, ನಾಗರೀಕತೆ ಕಡಿಮೆ ಇದ್ದಂತೆ ಕಾಣುತ್ತಿದ್ದ; ಘಟ್ಟದ ಮೇಲಿನ ಕಾಡುಗಳಲ್ಲಿ ವಾಸ ಮಾಡುತಿದ್ದ ಕಾನು ದೀವರ ಬಗ್ಗೆ ಅಸಹ್ಯ ಭಾವನೆಗಳಿದ್ದವು. ತೆಂಗಿನ ದೀವರು ತಾವು ನಾಮಧಾರಿಗಳೆಂದೂ ಹಾಗೂ ತ್ರಿನಾಮದಾರಿಗಳೆಂದು ಕರೆದುಕೊಂಡು,ಹೆಚ್ಚು ಬೆಡಗನ್ನು ಬೆಳಿಸಿಕೊಂಡು ತಾವು ಕಾನುದೀವರಿಗಿಂತ ಶ್ರೇಶ್ಠ್ರರೆಂಬ ಅಭಿಪ್ರಾಯವನ್ನು ಬೆಳೆಸಿಕೊಂಡರು.
ನಾಮದಾರಿ ಅಥವಾ ತ್ರಿನಾಮದಾರಿ ಎಂಬ ಈ ಸಮುದಾಯದ ಹೆಸರು ಶ್ರೀ ರಾಮಾನುಜರ ಪಂಥದವರಿಂದ ಬಂದದ್ದಾಗಿದೆ. ತ್ರಿನಾಮದಾರಿಗಳು, ನಾಮದಾರಿಗಳಿಗಿಂತ ಸಾಮಾಜಿಕವಾಗಿ ಶ್ರೇಶ್ಠರೆಂದು ಹೇಳಿಕೊಳ್ಳುತ್ತಾರೆ. ಆದರೆ ೧೯೦೧ರ ಜನ ಗಣತಿಯ ಪ್ರಕಾರ ಹೆಚ್ಚಿನವರು ತಾವು ನಾಮದಾರಿಗಳೆಂದೆ ಹೇಳಿಕೊಂಡಿದ್ದಾರೆ. " ಹಳೆ " ಎಂದರೆ ಹಳೆಯ ಅಥವಾ ಪುರಾತನ ಎಂದರ್ಥ." ಪೈಕ " ಎಂದರೆ ಸೈನಿಕ ಎಂದರ್ಥ ಕೆನರಾ ಜಿಲ್ಲೆಯ ಇನ್ನೊಂದು ಜಾತಿಯಾದ ಕೊಮಾರ ಪೈಕ ದಿಂದ ಈ ಪದ ಬಂದಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಬ್ರಿಟಿಶ್ ಆಡಳಿತದ ಕಾಲದಲ್ಲಿ ಹಳೆಪೈಕ ಹಾಗು ಕೊಮಾರ ಪೈಕ ಇವೆರಡು ಪಂಗಡದವರು ಮೂಲತಃ ಯೋದರಾಗಿದ್ದು, ಬ್ರಿಟೀಶರಿಗೆ ಸಮಸ್ಯೆಯಾಗಿದ್ದರೆಂಬ ಕುಖ್ಯಾತಿಯನ್ನು ಹೊಂದಿದ, ಸಮಸ್ಯಾತ್ಮಕ ಬುಡಕಟ್ಟಿನವರಾಗಿ ತಲೆದೋರಿದ್ದರು. ಒಂದಾನೊಂದು ಕಾಲದಲ್ಲಿ, ವಿಜಯನಗರದ ಅರಸರಿಗೆ ಹಾಗು ಕರಾವಳಿಯ ಪಾಳೆಗಾರರಿಗೆ ಸೈನ್ಯಕ್ಕೆ ಯೊಗ್ಯವಾದ ಹಿನ್ನೆಲೆಯನ್ನುಳ್ಳ ಜನಾಂಗವಾಗಿದ್ದವು. " ದೀವರು " ಎನ್ನುವ ಪದ " ತೀವರು " ಅಂದರೆ ದ್ವೀಪದಿಂದ ಬಂದವರು ಎನ್ನುವ ಪದಕ್ಕೆ ಸಮಾನಾರ್ಥವಾಗಿದೆ. ಮಲಬಾರಿನ ತಿಯಾನರು ಮತ್ತು ಇರವರು ಎನ್ನುವ ಪದಗಳು ತೀವರು ಹಾಗು ಬಿಲ್ಲವರು ಎಂದು ರೂಪಾಂತರವಾಗಿದೆ.
ಮಲಬಾರಿನ ಕೆಲವು ದ್ರಾವಿಡ ಬುಡಕಟ್ಟು ಸಮುದಾಯಗಳು ಶ್ರೀಲಂಕಾಕ್ಕೆ ವಲಸೆ ಹೋಗಿ ಪುನಃ ತಿರುವಾಂಕೂರಿನ ಕಡೆ ಬಂದು ಉತ್ತರದ ಕರಾವಳಿ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಬಗ್ಗೆ ಮಲಬಾರಿನ ಪರಂಪರೆ ಹೇಳುತ್ತದೆ. ಆದ್ದರಿಂದ ಇವರನ್ನು ದ್ವೀಪದವರೆಂದು ಹೇಳಲಾಗುತ್ತದೆ. ಮಾನವ ವಿಕಾಸ ವಿಜ್ಞಾನದ ಅಧ್ಯಯನವು ಹಳೆಪೈಕರಿಗೂ ಹಾಗು ತೀಯಾನರಿಗೂ ಸಾಮ್ಯ ತೆ ಇರುವುದರ ಬೆಳಕನ್ನು ಚೆಲ್ಲುತ್ತದೆ.
ಹಳೆಪೈಕರು ಕರಾವಳಿಯ ಆಡುಭಾಷೆಯನ್ನು ಮಾತನಾಡುತ್ತಾರೆ. ಕರಾವಳಿಯ ಪಕ್ಕದಲ್ಲಿ ಇರುವವರು ಕೊಂಕಣಿಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ಈ ಜನಾಂಗದಲ್ಲಿ ಸಾಮಾನ್ಯವಾಗಿ ಬಳಸುವ ಹೆಸರುಗಳೆಂದರೆ ಮರಿಯಾ, ತಿಮ್ಮ, ಈರ, ಹನುಮ, ವೆಂಕ, ಗಿಡ್ಡ, ಶಿವ, ಕ್ರಿಷ್ಣ ಇತ್ಯಾದಿ. ಹೆಣ್ಣು ಮಕ್ಕಳಿಗೂ ಇದೆ ತರದ ಹೆಸರುಗಳು ಸ್ತ್ರೀಲಿಂಗ ರೂಪದಲ್ಲಿರುತ್ತವೆ. ತಮ್ಮ ಹೆಸರಿನ ಕೊನೆಯಲ್ಲಿ ನಾಯ್ಕ[ಅಂದರೆ ಮುಖಂಡ ಅಥವಾ ಮುಖಂಡ] ಎಂದು ಇಟ್ಟುಕೊಳ್ಳುತ್ತಾರೆ.
ವಿಬಿನ್ನ ಗೋತ್ರ ವಿಭಜನೆ
ಬದಲಾಯಿಸಿಹಳೆಪೈಕರಲ್ಲಿ ವಿಭಿನ್ನ ಗೋತ್ರಗಳ ಸಾಮಾಜಿಕ ಗುಂಪುಗಳಿರುತ್ತವೆ. ಈ ಭಿನ್ನ ಗೋತ್ರದ ಸಮೂಹಕ್ಕೆ " ಬಳಿ "[ಬಳ್ಳಿ-ಹಬ್ಬುವ] ಎಂದು ಕರೆಯುತ್ತಾರೆ. ಈ ಬಳಿಯ ಹೆಸರುಗಳು ಯಾವುದಾದರು ಮರ, ಹಾವು ಅಥವಾ ಪ್ರಾಣಿಯ ಹೆಸರುಗಳನ್ನು ಆದರಿಸಿರುತ್ತವೆ. ಈ ಮರ, ಹಾವು, ಪ್ರಾಣಿಗಳು ಅಯಾಯ ಬಳಿಯ ಪೂರ್ವಿಕರಗಿದ್ದರೆಂದೂ, ಅವುಗಳಿಗೆ ಯಾವುದೇ ಗಾಯವಾಗುವ ಹಾಗಿಲ್ಲವೆಂಬ ನಂಬಿಕೆಯಿದೆ. ಉದಾಹರಣೆಗೆ " ನಾಗ ಬಳಿ " ಯವರು ನಾಗಸಂಪಿಗೆ ಹೂವನ್ನು ಮುಡಿಯುವ ಹಾಗಿಲ್ಲ ಹಾಗು ಆ ಮರವನ್ನು ಕಡಿಯುವ ಹಾಗಿಲ್ಲ.
ತೆಂಗಿನ ದೀವರ ಬಳಿಗಳು
೧] ಶೆಟ್ಟಿ ಬಳಿ ಶೆಟ್ಲಿ ಅಥವಾ ಶೆಟ್ಟಿ - ಮೀನು ೨] ಹೊನ್ನೆ ಬಳಿ ಹೊನ್ನೆ - ಮರ ೩] ಚೆಂಡಿ ಬಳಿ ಚೆಂಡಿ - ಮರ ೪] ತೋಳನ ಬಳಿ ತೋಳ- ಪ್ರಾಣಿ ೫] ದೇವನ ಬಳಿ ದೇವನ - ಮರ ೬] ಹೊಳೆ ಬಳಿ ಹೊಳೆ - ನದಿ ೭] ಭೈರನ ಬಳಿ ಭೈರನ - ಪಕ್ಷಿ ೮] ಕೆಂಡಿ ಬಳಿ ಕೆಂಡಿ - ಮರ ೯] ಹಂದಿ ಬಳಿ ಹಂದಿ ೧೦] ನಾಗ ಬಳಿ ನಾಗಸಂಪಿಗೆ - ಮರ ೧೧] ವಾಲಿ ಬಳಿ ವಾಲಿ - ಬಳ್ಳಿ ೧೨] ಶೀಗೆ ಬಳಿ ಶೀಗೆ - ಬಳ್ಳಿ ೧೩] ಅಜ್ಜಾನೆ ಬಳಿ ಅಜ್ಜಾನೆ - ಮರ ೧೪] ಕನ್ನೆ ಬಳಿ ಕನ್ನಾ - ಮರ ೧೫] ಶಿವನೆ ಬಳಿ ಶಿವನೆ - ಮರ ೧೬] ಗಂಗಾ ಬಳಿ ಗಂಗಾವಳಿ - ನದಿ ೧೭] ಸಲ್ಯಾನ ಬಳಿ ಸಾಲೆ - ಮುಳ್ಳು ಹಂದಿ ೧೮] ಮಾನಾಟ್ ಬಳಿ ಮನಾಟ್ - ಮರ ೧೯] ಶಿರೇನ್ ಬಳಿ ಶಿರೇನ್ - ಮರ ೨೦] ಅರಶಿನ ಬಳಿ ಅರಶಿನ - ಸಸ್ಯ
ಬಯಿನೆ ದೀವರ ಬಳಿಗಳು
೧] ಮಹಾರ್ ಬಳಿ ಮಹಾರ್, ಮಾದರ-ಕೀಳು ಜಾತಿ, ಎಣ್ಣೆಯ ಮರ ೨] ಬಂಗಾರ ಬಳಿ ಬಂಗಾರ,ಚಿನ್ನ- ಆಭರಣ
೩] ಕಡವೆ ಬಳಿ ಕಡ-ಪ್ರಾಣಿ ೪] ಸರ್ಪನ ಬಳಿ ಸರ್ಪ - ಹಾವು ೫] ಶೆಟ್ಟಿ ಬಳಿ ಶೆಟ್ಟಿ - ಮೀನು ೬] ಹೊನ್ನೆ ಬಳಿ ಹೊನ್ನೆ - ಮರ ೭] ಚೆಂಡಿ ಬಳಿ ಚೆಂದಿ - ಮರ ೮] ತೋಳನ ಬಳಿ ತೋಳ - ಪ್ರಾಣಿ
೯] ದೇವನ ಬಳಿ ದೇವನ - ಮರ ೧೦] ಹೊಳೆ ಬಳಿ ನದಿ
ಬಳಿಗಲ್ಲಿ ಮಹಾರ ಹಾಗೂ ಹೊಳೆ ಬಳಿಗಳು ಸಾಮಾಜಿಕವಾಗಿ ಕೀಳು ಗೋತ್ರಗಳು. ಈ ಬಳಿಗಳ ಹೆಣ್ಣು ಮಕ್ಕ್ಕಳನ್ನು ಮಾತ್ರ ಬೇರೆ ಬಳಿಯವರು ಮದುವೆ ಮಾಡಿಕೊಳ್ಳುತ್ತಾರೆ. ಈ ಸಮುದಾಯದ ಬಳಿಗಳ ವಿಶೇಷತೆಯೆಂದರೆ, ಬಳಿಗಳ ಮೂಲ ಹಿಡಿಯುವುದು ಹೆಣ್ಣಿನಿಂದ;ಗಂಡಿನಿಂದಲ್ಲ. ಈ ಪದ್ಧತಿಯನ್ನು ಗಮನಿಸಿದರೆ, "ಭಹುಪತಿತ್ವ" ರೂಡಿಯಲ್ಲಿದ್ದ ದಕ್ಷಿಣ ಭಾರತದಲ್ಲಿ, ಈ ಸಮುದಾಯದ ಮೂಲವಿದೆ ಎಂದು ತೋರುತ್ತದೆ. ಇದೆ ರೀತಿಯ ಬಳಿಗಳು ಉತ್ತರಕೆನರಾ ಜಿಲ್ಲೆಯ ಇತರ ಸಮುದಾಯಗಳಲ್ಲೂ ಇವೆ. ಹಾಲಕ್ಕಿವಕ್ಕಲಿಗ, ಗಾಮೊಕ್ಕಲು, ಕೋಟೇಕಾರ್, ಕರೆವಕ್ಕಲಿಗ ಹೀಗೆ ಇತರ ಜಾತಿಗಳಲ್ಲೂ ಇವೆ. ಅಗೇರ್, ಹಸ್ಲೆರ್,ಮುಕ್ರಿ, ಕುಂಬಾರ, ಸುಪ್ಪಲಿಗ, ಅಂಬಿಗ, ಹರಿಕಂತ, ಮೊಗೇರ್, ಉಪ್ಪಾರ ಈ ಜಾತಿಗಳಲ್ಲೂ ಕೂಡ ಹೆಣ್ಣಿನ ಮುಖಾಂತರವೇ ಬಳಿ ಹರಿಯುತ್ತದೆ.
ಮದ್ರಾಸಿನ ತಿಯಾನರಿಗೂ ಹಳೆಪೈಕರಿಗೂ ಬಹಳಷ್ಟು ಹೋಲಿಕೆಯಿದೆ. ಹೆಣ್ಣಿನ ಮುಖಾಂತರ ಬಳಿ ಹರಿದು ತಮ್ಮ ಮೂಲವನ್ನು ಹುಡುಕುವ ಪದ್ದತಿಯಲ್ಲಿ, ಹೆಂಡ ಇಳಿಸುವ ವ್ರತ್ತಿಯಲ್ಲಿ, ರೂಪ ಹಾಗೂ ಆಕಾರದಲ್ಲಿ ಪರಸ್ಪರ ಹೋಲಿಕೆಯಿದೆ. ಮಲಬಾರಿನಲ್ಲಿ, ತಿಯಾನರು, ಈಗಲೂ ಕೂಡ "ಬಹುಪತಿತ್ವ"ವನ್ನು ರೂಡಿಯಲ್ಲಿಟ್ಟುಕೊಂಡಿದ್ದಾರೆ. ತಿಯಾನರು, ತೆಂಗಿನ ಮರವನ್ನು, ಐದನೇ ಶತಮಾನದ ಮಧ್ಯ ಭಾಗದಲ್ಲಿ, ಭಾರತಕ್ಕೆ ತಂದರು. ಕರಾವಳಿಯ ಹಾಗೂ ಘಟ್ಟದ ಮೇಲಿನ ಹಳೆಪೈಕರು ಪರಸ್ಪರ ಮದುವೆಯಾಗುವುದಿಲ್ಲ ಹಾಗೂ ಊಟ ಮಾಡುವುದಿಲ್ಲ. ಕರಾವಳಿಯ ಪೈಕರು ಅಂದರೆ ತೆಂಗಿನ ದೀವರಲ್ಲಿ ಎರಡು ಗುಂಪು-ನಾಮಧಾರಿ ಹಾಗೂ ತ್ರಿನಾಮಧಾರಿಗಳು.ಈ ಎರಡು ಗುಂಪುಗಳಲ್ಲಿ ಪರಸ್ಪರ ಮದುವೆಗಳು ನಡೆಯುತ್ತವೆ; ಆದರೆ ಮದುವೆಯಾಗುವಾಗ ಎರಡೂ ಗುಂಪುಗಳ ವದು-ವರರು ಮುದ್ರಾಧಾರಣ ಮಾಡಿಕೊಳ್ಳಬೇಕು[ಅಂದರ ಶಂಖ ಮತ್ತು ಚಕ್ರ ದ ಮುದ್ರೆ ಒತ್ತಿಸಿಕೊಳ್ಳುವುದು]. ತ್ರಿನಾಮದಾರಿಯ ಹುಡುಗ ಸ್ವಗುಂಪಿನಲ್ಲಿ ಮದುವೆಯಾಗುವುದಾದರೆ ಮುದ್ರಾಧಾರಣದ ಅಗತ್ಯವಿಲ್ಲ. ನಾಮದಾರಿಗಳು ಹಣೆಯ ಮೇಲೆ ಮೂರು ನಾಮ ಹಾಕುವ ಹಾಗಿಲ್ಲ. ಆದರೆ ತ್ರಿನಾಮದಾರಿಗಳು ಮಾತ್ರ ಮೂರು ನಾಮ ಹಾಕುತ್ತಾರೆ. ಆದ್ದರಿಂದ ತ್ರಿನಾಮಧಾರಿಗಳು ಜಾತಿಯಲ್ಲಿ ಶ್ರೇಷ್ಥ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಕೋನಳ್ಳಿಯ ನಾಮದಾರಿ-ತ್ರಿನಾಮದಾರಿಗಳಲ್ಲಿ ಯಾವುದೆ ಬೇದವಿಲ್ಲ. ಅವರು ಪರಸ್ಪರ ಸಹಜವಾಗಿಯೆ ಮದುವೆಯಾಗುತ್ತಾರೆ.
ಒಂದೇ ಬಳಿಯಲ್ಲಿ ಅಂತರ್ಮದುವೆಯಾಗುವ ಹಾಗಿಲ್ಲ. ಬಳಿಗಳು ಬೇರೆ ಬೇರೆ ಇದ್ದರೂ ತಂದೆ ಕಡೆಯಿಂದ ಚಿಕ್ಕಪ್ಪ, ದಾಯಾದಿ ಚಿಕ್ಕಪ್ಪರನ್ನು ಮದುವೆಯಾಗುವಹಾಗಿಲ್ಲ. ಆದರೆ ತಾಯಿಯ ಸೋದರನ ಮಗಳನ್ನು ಅಥವಾ ಮರಣ ಹೊಂದಿದ ಹೆಂಡತಿಯ ತಂಗಿಯನ್ನು ಮದುವೆಯಾಗಬಹುದು.
ಜಾತಿಯ ಮೂಲ
ಬದಲಾಯಿಸಿಹಳೆಪೈಕರ ಗುರುವಾದ ಮೈಸೂರು ಪ್ರಾಂತ್ಯದ, ಸಾಗರದ ಲೋಕಾಚಾರ್ಯನು ಇವರ ಮೂಲದ ಬಗ್ಗೆ ಒಂದು ಕತೆಯನ್ನು ಹೇಳುತ್ತಾನೆ: ವಿಜಯ ನಗರದ ಅರಸು ವಿಜಯರಾಮ ಭೂಪಾಲನ ಕಾಲದಲ್ಲಿ ಅವರ ಸೇವಕನಾದ ರಂಗನಾಯ್ಕ ಹಾಗೂ ಅವನ ಹೆಂಡತಿ ಭಾಮಿನಿಗೆ ಶ್ರೀಲಕ್ಷ್ಮಿಯ ಅನುಗ್ರಹದಿಂದ ಒಂದು ಗಂಡು ಮಗುವಾಗುತ್ತದೆ. ಅದು ಕುಮಾರಕ್ಷೇತ್ರ ಎನ್ನುವ ಸ್ಥಳ. ಸುಮಾರು ೧೧೪೩ನೇ ಶಖ ವರ್ಷದಲ್ಲಿ ಕಾರ್ತಿಕದ ಏಳನೇ ದಿನ ಆ ಮಗುವಿಗೆ ನಾರಾಯಣ ಎಂದು ಹೆಸರಿಡುತ್ತಾರೆ. ಒಂದು ದಿನ ನಾರಾಯಣನೆಂಬ ಆ ಮಗು ಬೀದಿಯಲ್ಲಿ ಆಡುತ್ತಿರುವಾಗ ವಿಜಯರಾಮ ಭೂಪಾಲನ ಮಗ ಗೋಪಾಲಕ್ರಷ್ಣ ರಾಜನು ರಥದ ಮೇಲೆ ಆ ಹಾದಿಯಲ್ಲಿ ಹಾದು ಹೋಗುತ್ತಿರುವಾಗ ಈ ಮಗುವನ್ನು ನೋಡುತ್ತಾನೆ. ಆ ಮಗುವಿನಲ್ಲಿದ್ದ ರಾಜಕಳೆಯನ್ನು ನೋಡಿ, ಎತ್ತಿಕೊಂಡು ಹೋಗಿ ಅರಮನೆಯಲ್ಲಿ ಬೆಳೆಸುತ್ತಾನೆ. ಆ ಮಗುವಿನ ಹದಿನಾರನೆ ವಯಸ್ಸಿಗೆ, ರಾಜಕುಮಾರನಿಗೆ ಕೊಡಿಸುವ ಶಿಕ್ಷಣವನ್ನು ಕೊಡಿಸುತ್ತಾನೆ. ಅವನನ್ನು ಆಡಳಿತದಲ್ಲಿ ಪ್ರಮುಖ ವಿಷಯಗಳನ್ನು ನಿರ್ವಹಿಸಲು ನೇಮಕ ಮಾಡಲಾಗುತ್ತದೆ. ನಂತರ ಅವನನ್ನು ಸೇನಾದಂಡನಾಯಕನನ್ನಾಗಿ ಮಾಡುತ್ತಾರೆ. ಅವನ ಅಪ್ರತಿಮ ಸಾಹಸ ಕಾರ್ಯವನ್ನು ಮೆಚ್ಚಿ ಗೌರವಿಸಲಾಗುತ್ತದೆ. ಈ ಸಮಯದಲ್ಲಿ, ನಾರಾಯಣನ ತಂದೆ ರಂಗನಾಯ್ಕನು ಹೇಗೋ ಮಾಡಿ ನಾರಾಯಣನನ್ನು ಭೇಟಿ ಮಾಡುತ್ತಾನೆ. ನಾರಾಯಣನಿಗೆ , ರಂಗನಾಯ್ಕ ಹಾಗೂ ಭಾಮಿನಿಯ ಕಳೆದು ಹೋದ ಮಗ ತಾನೆ ಎಂದು ಗೊತ್ತಾಗುತ್ತದೆ. ರಂಗನಾಯ್ಕನು ಮಗನನ್ನು ಕಳೆದುಕೊಂಡ ಚಿಂತೆಯಲ್ಲಿ ಸೊರಗಿ ಹೋಗಿರುತ್ತಾನೆ. ರಾಜ ಗೋಪಾಲಕ್ರಷ್ಣನಿಗೆ ನಾರಾಯಣನ ದೈನ್ಯತೆಯ ಮೂಲ ತಿಳಿಯುತ್ತದೆ. ನಂತರ ರಾಜನು, ನಾರಾಯಣನಿಗೆ ಟಂಕಶಾಲೆಯ ಉಸ್ತುವಾರಿಯನ್ನು ವಹಿಸಿಕೊಟ್ಟು, "ಹಳೆಪೈಕ" ಎಂಬ ಹಳ್ಳಿಯನ್ನು ಅವನಿಗೂ ಹಾಗೂ ಅವನ ಪೂರ್ವಜರಿಗೂ ಅನುಭವಿಸಲು ಜಾಗೀರು ಕೊಡುತ್ತಾನೆ. ಈ ಸಮಯದಲ್ಲಿ ನಾರಾಯಣನ ವಂಶಸ್ಥರಲ್ಲಿ ಕೆಲವರು ಯಾತ್ರೆಗೆ ಹೋಗುತ್ತಾರೆ. ಅವರು ರಾಮೇಶ್ವರ, ಕಾಶಿ, ತಿರುಪತಿ, ಶ್ರೀರಂಗ, ಉಡುಪಿ, ಗೋಕರ್ಣ ಹಾಗೂ ವಿಜಯನಗರದ ಸಾಮಂತರಾದ ಇಕ್ಕೇರಿಯ ವೆಂಕಟಪ್ಪನಾಯ್ಕ ಹಾಗೂ ಕೆಳದಿ ಸಂಕಣ್ಣನಾಯ್ಕನ ಆಸ್ಥಾನಕ್ಕೂ ಬೇಟಿ ಕೊಡುತ್ತಾರೆ. ಅಲ್ಲಿ, ಅವರನ್ನು ಆನೆಗುಂದಿ ಹಾಗೂ ಚಂದಾವರದ ಆಸ್ಥಾನದಲ್ಲಿ ಪ್ರಮುಖ ಖಾತೆಗಳನ್ನು ಕೊಟ್ಟು ಇರಿಸಿಕೊಳ್ಳಲಾಯಿತು. ಆದ್ದರಿಂದ ಅವರು ಕುಮಟ ತಾಲ್ಲೂಕಿನ ಚಂದಾವರದಲ್ಲಿ ವಾಸಿಸತೊಡಗಿದರು.
ಆದರೆ ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಈ ಕತೆಗೆ ಪೂರಕವಾದ ಅದಾರ ಸಿಗುವುದಿಲ್ಲ. ಕುಮಾರ ಕ್ಷೇತ್ರ ಅಥವಾ ಹಳೆಪೈಕ ಎನ್ನುವ ಹಿನ್ನೆಲೆ ಇರುವ ಹಳ್ಳಿಗಳು ಕಂಡು ಬರುವುದಿಲ್ಲ. ಈ ಕತೆ ಸ್ರಷ್ಠಿಯಾದದ್ದು ಶಕವರ್ಷ ೧೧೪೩ ಅಂದರೆ ಕ್ರಿ.ಶ. ೧೨೨೧ನೇ ಇಸವಿಯಲ್ಲಿ. ಆಗ ವಿಜಯನಗರ ಸಾಮ್ರಾಜ್ಯವೇ ಇರಲ್ಲಿಲ್ಲ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿದ್ದು ಕ್ರಿ.ಶ.೧೩೩೬ನೇ ವರ್ಷ.
ಈ ಜಾತಿಯವರು ಒಂದು ಕಡೆ ಸ್ಥಿರವಾಗಿ ನೆಲೆನಿಂತವರು. ಅಲೆಮಾರಿಗಳಲ್ಲ. ಕೆನರಾ ಜಿಲ್ಲೆಯಲ್ಲಿನ ಹಳೆಪೈಕರು ಸುಸಂಘಟಿತ ಸಮುದಾಯವಾಗಿದ್ದು ತಮ್ಮ ಸರಹದ್ದನ್ನು ಹನ್ನೆರಡು ಸೀಮೆಗಳಾಗಿ ವಿಭಜಿಸಿಕೊಂಡಿದ್ದಾರೆ. ಅವುಗಳು ಕರಾವಳಿ ಹಳೆಪೈಕರ ಸೀಮೆಗಳು:
೧] ಚಂದಾವರ ೨] ಮಿರ್ಜನ ೩] ಗೇರುಸೊಪ್ಪ ೪] ಅಂಕೋಲ
ನಾಲ್ಕು ಸೀಮೆಗಳಲ್ಲಿ ಚಂದಾವರ ಸೀಮೆಯು ಮೊದಲಿನದು. ಚಂದಾವರದ ಹತ್ತಿರದಲ್ಲಿರುವ ಕೋನಳ್ಳಿ ಈ ಜನಾಂಗದ ಕೇಂದ್ರ ಸ್ಥಳ. ಇದಕ್ಕೆ ತಾಯಿಸ್ಥಳ ಎನ್ನುತ್ತಾರೆ. ಅವರು ವಾಸಿಸುವ ಮನೆಗಳಲ್ಲಿ ವಿಚಿತ್ರವಾದದ್ದು,ವಿಶೇಷವದದ್ದು ಏನೂ ಇಲ್ಲ.
ಘಟ್ಟದ ಮೇಲಿನ ಹಳೆಪೈಕರ ಸೀಮೆಗಳು .
೧) ಯಲ್ಲಾಪುರ 2) ಸೋಂದ೩) ಕರೂರು೪) ಸಿರಸಿ ೫) ಹೇಳೂರು ೬) ಬನವಾಸಿ ೭) ಇಸ್ಲೂರು ೮) ಬಿಳಗಿ ಈ ಎಂಟು ಸೀಮೆಗಳಲ್ಲಿ ಬಿಳಗಿ ಸೀಮೆಗೆ ಉನ್ನತ ಸ್ಥಾನವಿದೆ. ಇದರ ಕೇಂದ್ರ ಸ್ಥಳ ಬೆಲ್ಲಹಳ್ಳಿ (ಬೆಲ್ಹಾಳಿ-BELLHALI). ಅಲ್ಲೊಂದು ಮಠವಿದ್ದು ಅಲ್ಲಿ ಒಬ್ಬ ತ್ರಿನಾಮದಾರಿ ಗುರುವಿರುತ್ತಾನೆ. ಒಂದೊಂದು ಸೀಮೆಗೂ ಹಲವಾರು ಹಳ್ಳಿಗಳು ಸೇರುತ್ತವೆ. ಪ್ರತಿ ಸೀಮೆಗೆ "ಬುದ್ದವಂತ"ನೆಂಬ ಮುಖ್ಯಸ್ಥನಿರುತ್ತಾನೆ.( ಮುಖ್ಯಸ್ಥ್ಯನಾಗುವುದು ವಂಶ ಪಾರಂಪರ್ಯವಾಗಿ). ಈ ಜನಾಂಗದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸೇರುವ ಸಭೆಗೆ ಇವನೇ ಮುಖ್ಯಸ್ಥನಾಗಿರುತ್ತಾನೆ. ಪರಿಹರಿಸಲಾಗದ ಸಮಸ್ಯೆಗಳನ್ನು ಯಜಮಾನನಿಗೆ ವಹಿಸಲಾಗುತ್ತದೆ. ಯಜಮಾನ ಹಲವು ಸೀಮೆಗಳಿಗೆ ಮುಖ್ಯಸ್ಥನಾಗಿರುತ್ತಾನೆ. ಹಳೆಪೈಕರು ಬೇರೆ ಜಾತಿಯವರನ್ನು ತಮ್ಮ ಜಾತಿಗೆ ಸೇರಿಸಿಕೊಳ್ಳುವುದಿಲ್ಲ.
ಮದುವೆ ಸಂಪ್ರದಾಯಗಳು
ಬದಲಾಯಿಸಿಕರಾವಳಿಯ ಹಳೆಪೈಕರಲ್ಲಿ ಹುಡುಗಿಯನ್ನು, ರುತುಮತಿಯಾಗುವುದರೊಳಗೆ ಮದುವೆ ಮಾಡುತ್ತಾರೆ. ಸುಮಾರು ೫ರಿಂದ ೧೨ ವರ್ಷವಿರುವಾಗಲೆ ಮದುವೆ ಮಾಡುತ್ತಾರೆ. ಗಂಡಸರಿಗೆ ವಯಸ್ಸಿನ ಮಿತಿಯಿಲ್ಲ. ಅವನು ತನ್ನ ಬಳಿಯಲ್ಲದವರನ್ನು ಯಾರನ್ನಾದರೂ ಮದುವೆಯಾಗಬಹುದು. ವಿಧವೆಯನ್ನು ಮದುವೆಯಾಗುವನು, ಈ ಮೊದಲು ಮದುವೆಯಾಗಿರುವವನೇ ಆಗಬೇಕು. ಅವನ ಹೆಂಡತಿ ಇರಲಿ ಇಲ್ಲದಿರಲಿ, ಅವನು ಇನ್ನೊಂದು ಮದುವೆಯಾಗಬಹುದು. ವಿಧವೆಯನ್ನು ಮದುವೆಯಾಗುವವನು ಜಾತಿಯ ಮುಖಂಡನಿಗೆ ರೂ.೧೨/- ಕಟ್ಟಿ ನಂತರ ಮದುವೆಯಾಗಬಹುದು. ಈ ಮದುವೆಯನ್ನು ಮಧ್ಯರಾತ್ರಿಯೇ ಮಾಡಬೇಕು. ಮದುವೆಯಾಗುವವರನ್ನು ತುಳಸಿ ಕಟ್ಟೆಯ ಎದುರಿಗೆ ತೆಂಗಿನ ಗರಿಯ( COCOA PALM LEAVES) ಮೇಲೆ ಕೂರಿಸಿ; ನಾಲ್ಕು ಅಥವಾ ಐದು ವಿಧವೆಯರು, ಮದುವೆಯಾಗುವ ವಿಧವೆಗೆ ಬಳೆ,ಮೂಗುತಿ, ಹಾಗೂ ಸೀರೆಯನ್ನು ( ಇವನ್ನೆಲ್ಲ ಗಂಡನಾಗುವವನು ತಂದಿರುತ್ತಾನೆ.) ಕೊಡುತ್ತಾನೆ. ವಿಧವೆ ಇವನ್ನೆಲ್ಲಾ ಧರಿಸುತ್ತಾಳೆ. ಮದುವೆ ಅಲ್ಲಿಗೆ ಮುಗಿಯುತ್ತದೆ. ಮದುವೆಯಾದ ಜೋಡಿ ಬೆಳಗಾಗುವದರೊಳಗೆ ಮನೆಗೆ ಹೋಗಬೇಕು. ಮದುವೆಯಾದ ವಿಧವೆ ನಂತರ ಹಣೆಯಲ್ಲಿ ಕುಂಕುಮ ಇಟ್ಟುಕೊಳ್ಳುತ್ತಾಳೆ. ಹೀಗೆ ಮದುವೆಯಾದ ಗಂಡು ತನ್ನ ಜಾತಿಯ ಯಾವುದೇ ಪವಿತ್ರವೆನ್ನುವ ಕಾರ್ಯಗಳಿಗೆ ಹೋಗುವಹಾಗಿಲ್ಲ. ಗಂಡ ಹೆಂಡತಿ ಇಬ್ಬರು ಯಾವುದೇ ಪವಿತ್ರವೆನ್ನುವ ಕಾರ್ಯಗಳಲ್ಲ್ಲಿಭಾಗವಹಿಸುವ ಹಾಗಿಲ್ಲ. ವಿದವೆಯನ್ನು ಮದುವೆಯಾದವನು ತನ್ನ ಮಕ್ಕಳ ಮದುವೆಯ ಕಾರ್ಯವನ್ನು ಮಾಡುವ ಹಾಗಿಲ್ಲ. ಮದುವೆಯಾದ ಜೋಡಿಯು, ವಿದವೆಯ ಮರಣ ಹೊಂದಿದ ಗಂಡನ ಕಡೆಯವರ ಸಂಬಂಧವಿಟ್ಟುಕೊಳ್ಳುವಹಾಗಿಲ್ಲ. ಇದು ಮಿರ್ಜನ ಸೀಮೆಯವರ ಅಭಿಪ್ರಾಯ. ಮಿರ್ಜನ, ಕೋಡ್ಕಣಿ, ಹಿರೆಗುತ್ತಿ, ಬಾರ್ಗಿ, ಸಾಣೆಕಟ್ಟ, ಹಣೆಹಳ್ಳಿಗಳಲ್ಲಿ ವಿದವಾ ವಿವಾಹವಾದ ನಿದರ್ಶನಗಳಿವೆ. ಆದರೆ ಚಂದಾವರ ಸೀಮೆಯಲ್ಲಿ ವಿಧವಾ ವಿವಾಹಕ್ಕೆ ಅವಕಾಶವಿಲ್ಲ, ಒಂದು ವೇಳೆ ಆದರೆ ಜಾತಿಯಿಂದ ಬಹಿಷ್ಕ್ರತರೆಂದು ತೀರ್ಮಾನಿಸಲಾಗುತ್ತದೆ.
ಬಿಳಿಗಿ ಸೀಮೆಯಲ್ಲಿ, ವಿದವೆಯರು ಹಾದಿತಪ್ಪಿ ನಡೆದರೆ ಅಂತವರನ್ನು ಬೆಲ್ಲಹಳ್ಳಿ ಮಠಕ್ಕ್ಕೆ( ಸಿದ್ದಾಪುರ ) ಕರೆದುಕೊಂಡು ಹೋಗಿ ಹೆಂಡತಿ ಬೇಕಾದ ವಿದುರನಿಗೆ ಎಷ್ಟೋ ದರಕ್ಕೆ ಕೊಡಲಾಗುತ್ತದೆ. ಈ ರೂಡಿ ಬಿಳಗಿ ಸೀಮೆಯವರಿಗೆ ಮಾತ್ರ ಸೀಮಿತ. ಮದುವೆಯ ಮೊದಲು ಲೈಂಗಿಕ ಪರವಾನಗಿಯನ್ನು ಗುರುತಿಸಿಲ್ಲ ಹಾಗು ಸಹಿಸುವುದಿಲ್ಲ. ಘಟ್ಟದ ಮೇಲಿನ ಹಳೆಪೈಕರಲ್ಲಿ ಹದಿನಾರನೇ ವಯಸ್ಸಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡುತ್ತಾರೆ. ಬಹು ಪತ್ನಿತ್ವಕ್ಕೆ ಅವಕಾಶವಿದೆ ಆದರೆ ಬಹು ಪತಿತ್ವಕ್ಕೆ ಅವಕಾಶವಿಲ್ಲ. ಒಬ್ಬ ಗಂಡಸು ಎಷ್ಟಾದರು ಹೆಂಡತಿಯರನ್ನು ಇಟ್ಟುಕೊಳ್ಳಬಹುದು. ಮದುವೆಯಾದ ಹೆಂಗಸು ಮಾತ್ರ ಗಂಡನಿರುವಾಗಲೇ ಇನ್ನೊಂದು ಮದುವೆಯಾಗುವಹಾಗಿಲ್ಲ.
ಮದುವೆಯಾಗುವ ಹುಡುಗ ಮತ್ತು ಹುಡುಗಿಯ ಜೋಡಿ, ತಂದೆ ತಾಯಿಯರಿಗೆ ಒಪ್ಪಿಗೆಯಾದ ನಂತರ ಹುಡುಗ ಹುಡುಗಿಯ ಜಾತಕ ಹೊಂದಿಕೆಯಾಗಬೇಕು. ಆನಂತರ ಪ್ರಾದೇಶಿಕ ಗ್ರಾಮದೇವತೆಯಲ್ಲಿ ಹೋಗಿ ಪ್ರಸಾದ ಕೇಳುತ್ತಾರೆ. ದೇವರ ಮೈಮೇಲೆ ಮುಡಿಸಿರುವ ಹೂವು ಬಲಗಡೆಯಿಂದ ಬಿದ್ದರೆ, ದೇವರಿಗೆ ಸಮ್ಮತಿಯಿದೆಯೆಂದು ತಿಳಿಯುತ್ತಾರೆ. ಇವಿಷ್ಟು ಸಾಂಗವಾಗಿ ನೆರವೇರಿದರೆ, ಹುಡುಗನ ತಂದೆ, ಸಂಬಂಧಿಕರು ಹಾಗೂ ಸ್ನೇಹಿತರು ಹರಿವಾಣದಲ್ಲಿ ಹೂವು ತುಂಬಿಕೊಂಡು ಹುಡುಗಿಯ ಮನೆಗೆ ಬರುತ್ತಾರೆ. ಹೂವನ್ನು ವದುವಿಗೆ ಮುಡಿಸುತ್ತಾರೆ. ನಂತರ ವದುವಿನ ತಂದೆ ತಾಯಿ ಆ ಹರಿವಾಣದಲ್ಲಿ ವಿಳ್ಳೆಯದೆಲೆ ಮತ್ತು ಅಡಿಕೆಯನ್ನು ಇಟ್ಟು ವರನ ತಂದೆಗೆ ಕೊಡುತ್ತಾರೆ. ಮಾರನೆ ದಿವಸ ಅಥವಾ ಮದುವೆಯ ದಿನ ನಿಗದಿಯಾದ ದಿವಸ ವರನು ಕೈಯಲ್ಲಿ ತೆಂಗಿನಕಾಯಿ, ಎಲೆ ಅಡಿಕೆ ಹಾಗು ಒಂದು ಸಣ್ಣ ಕತ್ತಿಯನ್ನು ಹಿಡಿದು ಬರುತ್ತಾನೆ. ನಂತರ ಅದನ್ನು ತುಳಸಿ ಕಟ್ಟೆಯ ಮೇಲಿಟ್ಟು ಪೂಜಿಸಲಾಗುತ್ತದೆ. ನಂತರ ಅವನನ್ನು ಮೆರವಣಿಗೆಯಲ್ಲಿ ವಧುವಿನ ಮನೆಗೆ ಕರೆದುಕೊಂಡು ಹೋಗುತ್ತಾರೆ. ತುಳಸಿ ಕಟ್ಟೆಯ ಎದುರಿಗೆ ವದು ವರರನ್ನು ನಿಲ್ಲಿಸುತ್ತಾರೆ. ನಂತರ ಮದುವೆಯ ಶಾಸ್ತ್ರಗಳು ಪ್ರಾರಂಭವಾಗುತ್ತವೆ.
೧) ಮದುವೆಯ ಪ್ರಮುಖ ಸಂಪ್ರದಾಯಗಳೆಂದರೆ: ವದೂ ವರರ ಕೈಸೇರಿಸಿ ಕೈ ಮೇಲೆ ಹಾಲು ಸುರಿಯುವುದು. ಇದಕ್ಕೆ ದಾರೆ ಸಂಪ್ರದಾಯ ಎನ್ನುತ್ತಾರೆ. ೨) ವದೂ-ವರರ ಬಟ್ಟೆಯನ್ನು ಸೋದರಮಾವ ಗಂಟು ಹಾಕುತ್ತಾನೆ. ೩) ಪುರೋಹಿತರು ಹಾಗೂ ಹಿರಿಯರು ಅಕ್ಕಿಯನ್ನು ಅಕ್ಷತೆ ಹಾಕುವುದು. ೪) ವದು-ವರರು ಪರಸ್ಪರ ಹಾರ ಹಾಕಿಕೊಳ್ಳುವುದು.
ಹಾರವನ್ನು ಬದಲು ಮಾಡಿಕೊಂಡ ನಂತರ ಮದುವೆ ಮುಗಿಯುವುದಿಲ್ಲ. ಈ ಸಮಯದಲ್ಲಿ ಮದುವೆ ಯಾವಾಗ ಬೇಕಾದರೂ ಮುರಿದು ಬೀಳಬಹುದು. ಇನ್ನೂ ಎರಡು ಅಥವಾ ಮೂರು ದಿನಗಳ ಕಾಲ ಮದುವೆಯ ಕಾರ್ಯ ಮುಂದುವರಿಯುತ್ತದೆ. ನಾಲ್ಕನೇ ದಿನ ಬಾಸಿಂಗವನ್ನು ವರನ ಮನೆಯೊಳಗಿನ ಪ್ರಮುಖ ತೊಲೆಗೆ ಕಟ್ಟುತ್ತಾರೆ. ಇಲ್ಲಿಗೆ ಮದುವೆ ಸಂಪ್ರದಾಯಗಳು ಮುಗಿಯುತ್ತವೆ.
ವರನು ವದುವಿನ ತಂದೆ-ತಾಯಿಗೆ ೨೦/- ರೂಪಾಯಿಯಿಂದ ೧೦೦/- ರೂಪಾಯಿಯ ತನಕ " ತೆರ " ಕೊಡಬೇಕಾಗುತ್ತದೆ. ಈ "ತೆರ" ದ ಮೊತ್ತವನ್ನು ಕಡಿಮೆ ಮಾಡಿಕೊಳ್ಳಲಿಕ್ಕಾಗಿ ಕೆಲವೊಮ್ಮೆ ಒಂದೇ ಬಾರಿ ಎರಡು ಮದುವೆಗಳನ್ನು ಮಾಡುತ್ತಾರೆ. ವರನ ಕಡೆಯ ಹುಡುಗಿ ಅಥವಾ ಹತ್ತಿರ ಸಂಬಂಧದ ಹುಡುಗಿಯನ್ನು ವದುವಿನ ಕಡೆಯ ಹುಡುಗನಿಗೆ ಕೊಟ್ಟು, ಒಂದೇ ಚಪ್ಪರದಲ್ಲಿ ಎರಡು ಮದುವೆ ಮಾಡುತ್ತಾರೆ. ಈ ರೀತಿ ಪರಸ್ಪರ ಒಪ್ಪಿಗೆಯಿಲ್ಲದಿದ್ದರೆ, ವರನನ್ನು ಮನೆ ಅಳಿಯನನ್ನಾಗಿ ಮಾಡಿಕೊಳ್ಳುತ್ತಾರೆ.ಮನೆಅಳಿಯನನ್ನಾಗಿ ಮಾಡಿಕೊಂಡರೆ "ತೆರ" ಕೊಡಬೇಕಾಗಿಲ್ಲ. ಮನೆಅಳಿಯನಾದರೆ ವರನು ವದುವಿನ ಮನೆಯಲ್ಲಿದ್ದುಕೊಂಡು ಕೆಲಸ ಕಾರ್ಯ ಮಾಡಬೇಕಾಗುತ್ತದೆ. ಅವನು ವದುವಿನ ತಂದೆ-ತಾಯಿಯ ಆಸ್ತಿಯನ್ನು ಅನುಭವಿಸಬಹುದು.
ವಿದವಾ ಪುನಃರ್ವಿವಾಹಕ್ಕೆ ಅವಕಾಶವಿದ್ದರೂ ಸಮಾಜ ಅಷ್ಟು ಗೌರವಿಸುವುದಿಲ್ಲ. ವಿದವೆಯಾದವಳು, ತನ್ನ, ಮರಣಹೊಂದಿದ ಗಂಡನ ತಮ್ಮ ಅಥವಾ ಅಣ್ಣನನ್ನು ಮದುವೆಯಾಗುವಹಾಗಿಲ್ಲ.
ವಿಚ್ಛೇದನಕ್ಕೆ ಯಾವುದೇ ನಿಯಮ ಹಾಗೂ ಚೌಕಟ್ಟುಗಳು ಇಲ್ಲದಿದ್ದರೂ, ವಿಚ್ಛೇದನ ಗಂಡನ ಇಷ್ಟಕ್ಕೆ ಬಿಟ್ಟ ವಿಷಯವಾಗಿದೆ. ವಿಚ್ಛೇದಿತಳಾದ ಹೆಣ್ಣು, ಗಂಡ ಬದುಕಿರುವವರೆಗೆ ಬೇರೆ ಮದುವೆಯಾಗುವಹಾಗಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತರಾಧಿಕಾರದ ಹಕ್ಕು ಹಿಂದೂ ಕಾನೂನಿನ ಪ್ರಕಾರ ನಡೆಯುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಳಿಯಸಂತಾನ ಪದ್ಧತಿ ರೂಡಿಯಲ್ಲಿದೆ.
ಧರ್ಮ
ಬದಲಾಯಿಸಿಇವರು ಹಿಂದೂ ಧರ್ಮದವರಾಗಿದ್ದು, ರಾಮಾನುಜರ ಅನುಯಾಯಿಗಳಾಗಿದ್ದಾರೆ. ತಿರುಪತಿ ವೆಂಕಟರಮಣ ಹಾಗೂ ಅವನ ಭಂಟ ಹನುಮಂತ ಈ ಜನಾಂಗದ ಮುಖ್ಯ ಆರಾಧ್ಯಧೈವಗಳು. ಇದಕ್ಕೆ, ಇವರು ರಾಮಾನುಜರ ಅನುಯಾಯಿಗಳು ಎನ್ನುವುದನ್ನು ಬಿಟ್ಟರೆ ಬೇರಾವ ಕಾರಣಗಳು ಇಲ್ಲ. ಉತ್ತರಕನ್ನಡದಲ್ಲಿ ಹೆಚ್ಚಾಗಿ ಎಲ್ಲಾ ಶೂದ್ರ ಸಮುದಾಯಗಳು ಈ ದೇವರುಗಳನ್ನು ಪ್ರಮುಖವಾಗಿ ಆರಾಧಿಸುತ್ತಾರೆ.ಈ ಭಾಗದಲ್ಲಿ ರಾಮಾನುಜರ ವೈಷ್ನವ ಪಂತವನ್ನು ಹಳೆಪೈಕರು ತಂದಿದ್ದಾರೆ ಎನ್ನುವುದಕಿಂತ ರಾಮಾನುಜ ಪಂತವೇ ಈ ಜಿಲ್ಲೆಯಲ್ಲಿ ಆಮದಾಗಿ ಬಂದು ಹಬ್ಬಿಕೊಂಡಿದೆ ಎನ್ನುವುದು ಸೂಕ್ತವಾಗಿದೆ. ತಿರುಪತಿಯಲ್ಲಿ ವಾಸವಾಗಿದ್ದ ತಾತಾಚಾರಿ ಎಂಬುವುವನು ನಾಮದಾರಿ ಜನಾಂಗದ ಗುರುವಾಗಿದ್ದ. ಹಾಗೆಯೇ ಮೈಸೂರು ಸಂಸ್ತಾನದ, ಸಾಗರ ಜಿಲ್ಲೆಯಲ್ಲಿ, ತಿರುಕೋಲಮ್ ನಲ್ಲಿ ವಾಸವಾಗಿದ್ದ ಲೋಕಾಚಾರಿಯು ತ್ರಿನಾಮಧಾರಿಗಳ ಗುರು. ಆದರೆ ಎರಡೂ ಗುಂಪಿನವರು ಈ ಇಬ್ಬರೂ ಗುರುಗಳನ್ನು ಗೌರವಿಸುತ್ತಾರೆ. ನಾಮದಾರಿಯಾದವನು, ಮುದ್ರೆ ಒತ್ತಿಸಿಕೊಂಡು, ಹೊಸಪೇಟೆ ಅಯ್ಯನವರಿಂದ ತೀರ್ಥ ಹಾಕಿಸಿಕೊಂಡರೆ, ತ್ರಿನಾಮಧಾರಿಯಾಗಬಹುದು.
ಘಟ್ಟದ ಮೇಲಿನ ಹಳೆಪೈಕದವರು ಗುರು ಆನೆಗುಂದಿಯಲ್ಲಿದ್ದಾನೆ. ಅವನು ಅಗಾಗ ಈ ಜಿಲ್ಲೆಗೆ ಬೇಟಿ ಕೊಟ್ಟು, ವಿಭೂತಿಯನ್ನು ಮಾರಾಟ ಮಾಡಿ ಹೋಗುತ್ತಾನೆ. ಕೆನರಾದಲ್ಲಿ ಸಾಮಾನ್ಯವಾಗಿ, ಘಟ್ಟದ ಮೇಲಿನ ಹಳೆಪೈಕರನ್ನು, ಸಿದ್ಧಾಪುರ ಬಳಿ ಇರುವ ಬೆಲ್ಹಳ್ಳಿ(BELLHALI) ಮಠದ ತ್ರಿನಾಮಧಾರಿಗಳು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ. ಆ ಮಠದ ಸ್ವಾಮಿಯನ್ನು ಇವರು ಗುರು ಅಥವಾ ಸ್ವಾಮಿ ಎನ್ನುತ್ತಾರೆ. ಆದರೆ ಈ ಸ್ವಾಮಿಯು ಆನೆಗುಂದಿ ಮಠದ ಸ್ವಾಮಿಯ ಅದೀನನಾಗಿರುತ್ತಾನೆ.
ಹಳೆಪೈಕರು ಇತರ ಎಲ್ಲಾ ಶೂದ್ರರಂತೆ ಹಿಂದೂ ಧರ್ಮದ ದೇವರುಗಳನ್ನು ಹಾಗೂ ಪ್ರಾದೇಶಿಕ ಗ್ರಾಮದೇವತೆಗಳಾದ ಮಾಸ್ತಿ, ಜಟಗಾ ಇತ್ಯಾದಿ ದೇವರುಗಳನ್ನು ಆರಾಧಿಸುತ್ತಾರೆ. ದಸರ, ದೀಪಾವಳಿ ಹಾಗೂ ಚೌತಿ ಹಬ್ಬವನ್ನು ಅಚರಿಸುತ್ತಾರೆ. ಧಾರ್ಮಿಕ ಕಾರ್ಯಗಳಿಗೆ ತ್ರಿನಾಮಧಾರಿ ವೈಷ್ಣವ ಬ್ರಾಹ್ಮಣರನ್ನು ನೇಮಿಸಿಕೊಂಡಿರುತ್ತಾರೆ. ಅದರೆ ಕೆನರಾದಲ್ಲಿ ವೈಷ್ಣವ ಬ್ರಾಹ್ಮಣರನ್ನು ಬ್ರಾಹ್ಮಣರೆಂದು ಗೌರವಿಸುವುದಿಲ್ಲ. ಅವರನ್ನು ತೀರ್ಥ ಕೊಡುವವರು ಅಥವಾ ಅಯ್ಯಗಳೆಂದು ಕರಯುತ್ತಾರೆ. ಪ್ರಾದೇಶಿಕವಾಗಿ ಸಾಕ್ಲಾಪುರಿ(SAKLAPURI) ಹಾಗೂ ಕರ್ನಾಟಕ ಬ್ರಾಹ್ಮಣರನ್ನು ಬಿಟ್ಟರೆ ಬೇರಾರೂ ಇವರಿಗೆ ಪುರೋಹಿತರಾಗಿ ನಡೆದುಕೊಳ್ಳುವುದಿಲ್ಲ. ಹವ್ಯಕ ಹಾಗೂ ಇತರ ಬ್ರಾಹ್ಮಣರು ಈ ಜನಾಂಗದವರನ್ನು ಮೈಮುಟ್ಟಿಸಿಕೊಳ್ಳದಿರುವುದರಿಂದ, ನೊಂದು ಇವರನ್ನು ಪುರೋಹಿತರಾಗಿ ಒಪ್ಪಿಕೊಳ್ಳುವುದಿಲ್ಲ.
ಶವಸಂಸ್ಕಾರ
ಬದಲಾಯಿಸಿಮರಣ ಹೊಂದಿದವರನ್ನು ಸುಡುತ್ತಾರೆ. ಆದರೆ ಸಿಡಿಬುನಿಂದ ಸತ್ತವರನ್ನು ಹೂಳುತ್ತಾರೆ.ಹೆಣವನ್ನು ಮುಖ ಮೇಲೆ ಮಾಡಿಸಿ ಮಲಗಿಸಿ ಸುಡುತ್ತಾರೆ ಅಥವಾ ಹೂಳುತ್ತಾರೆ. ಹೆಣವನ್ನು ಸುಟ್ಟ ಮೂರನೇ ದಿವಸ ಬೂದಿಯನ್ನು ತಂದು ಹೊಳೆಗೆ ಹಾಕುತ್ತಾರೆ. ತ್ರಿನಾಮದಾರಿಗಳು ಸತ್ತ ಪೂರ್ವಜರಿಗಾಗಿ ಮಹಾಲಯ ಅಮವಾಸೆಯಲ್ಲಿ ಹಾಗೂ ಭಾದ್ರಪದ ಉತ್ತರಾರ್ಧದಲ್ಲಿ ಶ್ರಾದ್ಧ್ಹ ಮಾಡುತ್ತಾರೆ. ನಾಮದಾರಿಗಳು ಮಹಾಲಯ ಅಮವಾಸೆಯಲ್ಲಿ ಮಾತ್ರ ಶ್ರಾದ್ಧ್ಹ ಮಾಡುತ್ತಾರೆ. ಮಕ್ಕಳಿಲ್ಲದೆ ಸತ್ತವರಿಗೆ ಹಾಗೂ ದುರ್ಮರಣ ಹೊಂದಿದವರಿಗೆ ವಿಷೇಶವಾದ ಶ್ರಾದ್ಧವಿರುವುದಿಲ್ಲ. ಕೋನಳ್ಳಿ ಹಾಗೂ ಚಂದಾವರ ಸೀಮೆಯಲ್ಲಿ ಈ ಶಾಸ್ತ್ರಕ್ಕೆ ಹೆಚ್ಚಾಗಿ ಬ್ರಾಹ್ಮಣರನ್ನು ಅನುಕರಿಸುತ್ತಾರೆ.
ಉದ್ಯೋಗ
ಬದಲಾಯಿಸಿಇವರು ತಮ್ಮ ಮೂಲ ಉದ್ಯೋಗವಾದ ವ್ಯವಸಾಯವನ್ನು ನಂಬಿಕೊಂಡಿದ್ದಾರೆ. ಇವರ ವಂಶಪರ್ಯವಾದ ಉದ್ಯೋಗ ಹೆಂಡ ಇಳಿಸುವುದಾಗಿತ್ತು. ಅರಣ್ಯ ಇಲಾಖೆ ಹಾಗೂ ಅಬ್ಕಾರಿ ಇಲಾಖೆಯವರ ಕಿರುಕುಳದಿಂದ ಅನ್ಯ ಉದ್ಯೋಗಗಳನ್ನು ಹುಡುಕಿಕೊಂಡಿದ್ದಾರೆ. ಕರಾವಳಿಯ ಹಳೆಪೈಕರೂ ಕೂಡ ಹೆಂಡ ಇಳಿಸುವುದು ಅಂತಹ ಗೌರವಾನ್ವಿತ ಉದ್ಯೋಗವಲ್ಲವೆನಿಸಿ, ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿದ್ದಾರೆ. ಈಗಿನ ಅವರ ಉದ್ಯೋಗಗಳು ವ್ಯವಸಾಯ, ಹೆಂಡ ಇಳಿಸುವುದು, ಕ್ವಾರೆಕೆಲಸ, ಕಲ್ಲುಕಡಿಯುವುದು, ಮರಗೆಲಸ, ಕಮ್ಮಾರಿಕೆ, ವ್ಯಾಪಾರ, ಗಾಡಿ ಹೊಡೆಯುವುದು, ಸರ್ಕಾರಿ ಉದ್ಯೋಗ ಇತ್ಯಾದಿ.
ಇವರಲ್ಲಿ ಕೆಲವರು ಸರ್ಕಾರಿ ಭೂಮಿಯನ್ನು ಗೇಣಿ ಮಾಡುತಿದ್ದಾರೆ. ಗೇಣಿದಾರರು ಈ ಜನಾಂಗದಲ್ಲಿ ಬಹಳ ಇದ್ದಾರೆ. ಅವರಲ್ಲಿ ಕೆಲವರು ಭೂಮಿಯಿಲ್ಲದ ಕ್ರಷಿ ಕಾರ್ಮಿಕರು. ಇವರಲ್ಲಿ ಯಾರೂ ಕೂಡಾ ಅಲೆಮಾರಿ ಉದ್ಯೋಗಗಳಲ್ಲಿ ತೊಡಗಿಕೊಂಡಿಲ್ಲ.ಚರ್ಮದ ಕೆಲಸವನ್ನು ಬಿಟ್ಟು ಮರ ಹಾಗೂ ಲೋಹದ ಕೆಲಸಗಳಲ್ಲಿ ನಿಪುಣರಾದವರಿದ್ದಾರೆ. ಬೇಟೆ ಇವರ ಮುಖ್ಯ ಉದ್ಯೋಗವಲ್ಲದಿದ್ದರೂ ಮೊಲ, ಜಿಂಕೆ, ಕಾಡುಕುರಿ, ಹಂದಿ, ಕಡವೆ ಹಾಗೂ ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಆದರೆ ಕೋನಳ್ಳಿಯ ಹಳೆಪೈಕರು ಯಾವುದೆ ಪ್ರಾಣಿಗಳನ್ನು ಬೇಟೆ ಮಾಡುವುದಿಲ್ಲ.ಇವರ ಯಾವ ಉದ್ಯೋಗವು ಇವರನ್ನು ಇತರ ಜನಾಂಗದವರಿಗಿಂತ ಉನ್ನತ ಸ್ಥಾನಕ್ಕೆ ಏರಿಸಿಲ್ಲ.
ಇವರಲ್ಲಿ,ಮದುವೆಯಾಗಿರಲಿ ಆಗದೇ ಇರಲಿ ವೇಶ್ಯಾವ್ರತ್ತಿ ಮಾಡಿಕೊಂಡಿಲ್ಲ.
ಇವರು ತಿನ್ನುವ ಮಾಂಸ ಹಕ್ಕಿಯ ಮಾಂಸ, ಕುರಿ, ಕಾಡುಹಂದಿ, ಮೀನು(ಬಂಗ್ಡೆ) ತೋರಿ, ಶೆಟ್ಳಿ, ತೋರ, ಮಡ್ಬಲಿ ಇತ್ಯಾದಿ. ಮೊಲ, ಆಮೆ, ಕಡವೆ ಹಾಗೂ ಜಿಂಕೆ. ಇವರು ತಿನ್ನದೇ ಇರುವ ಮಾಂಸ ಮಂಗ, ದನ, ಮೊಸಳೆ, ಹಾವು, ಹಲ್ಲಿ, ಅಳಿಲು, ಇಲಿ ಹಾಗೂ ಕೀಟಗಳು. ಬ್ರಾಂಡಿಗಳನ್ನು ಕುಡಿಯುವುದಿಲ್ಲ.