ಡಾ. ಹರಿಲಾಲ ಪವಾರರು ವಿಜಯಪುರ ಜಿಲ್ಲೆಯ ಜಾನಪದ ವಿದ್ವಾಂಸರು, ಲೇಖಕರು ಹಾಗೂ ಸಾಹಿತಿಗಳು.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ರಾಜನಾಳ ತಾಂಡಾದಲ್ಲಿ ೩.೫.೧೯೬೧ ರಲ್ಲಿ ಜನಿಸಿದ ಹರಿಲಾಲ ಖೀರು ಪವಾರ ಅವರು ತಾಂಡಾ ಸಂಸ್ಕೃತಿಯ ಮಡಿಲಲ್ಲಿ ಬೆಳೆದು ತಮ್ಮ ಜನ ಸಮುದಾಯದ ನೋವು ನಲಿವುಗಳನ್ನು ಕಣ್ಣಾರೆ ಕಂಡು ಚೆನ್ನಾಗಿ ಬಲ್ಲರು. ರಾಜನಾಳ ತಾಂಡಾ, ವಿಜಯಪುರ, ಮುಧೋಳ ಹಾಗೂ ಚಡಚಣದಲ್ಲಿ ಬಿ. ಎ. ವರೆಗೆ ಶಿಕ್ಷಣವನ್ನು ಕಲಿತರು. ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದು ಕನ್ನಡ ಅಧ್ಯಯನ ಪೀಠದಲ್ಲಿ ಎಂ. ಎ. ಜನಪದ ಸಾಹಿತ್ಯ ೧೯೮೬ ರಲ್ಲಿ ಗಳಿಸಿದರು. “ಕರ್ನಾಟಕದ ಹೆಳವರು ಒಂದು ಜಾನಪದೀಯ ಅಧ್ಯಯನ” ವಿಷಯ ಕುರಿತು (೧೯೯೧) ಡಾಕ್ಟರೇಟ ಪದವಿಯನ್ನು ಪಡೆದುಕೊಂಡರು. ಈ ಮಹಾಪ್ರಬಂಧದ ವ್ಯಾಪಕವಾದ ಕ್ಷೇತ್ರ ಕಾರ್ಯ ಅನೇಕರ ಮೆಚ್ಚುಗೆ ಪಡೆದುಕೊಂಡಿದೆ. ಈ ಮಹಾಪ್ರಬಂಧವು ೧೯೯೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರದಿಂದ ಪ್ರಕಟವಾಯಿತು.

ಸಾಹಿತ್ಯ

ಬದಲಾಯಿಸಿ

ಹೆಳವರ ಸಂಸ್ಕೃತಿ (೧೯೯೩ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು) ಹೆಳವರ ಹಿನ್ನಲೆ ಆಚರಣೆಗಳು, ಜೀವನ ವಿಧಾನ ಮತ್ತು ಸಾಮಾಜಿಕ ವ್ಯವಸ್ಥೆ, ಭಾಷೆ, ಸಾಹಿತ್ಯ ಕಲೆ ಇತ್ಯಾದಿ ಒಟ್ಟು ೪ ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಹೆಳವರ ಸಂಸ್ಕೃತಿಯನ್ನು ಕುರಿತು ಒಟ್ಟಾರೆ ಅಭ್ಯಸಿಸುವುದಾಗಿದೆ. ಅನುಬಂಧದಲ್ಲಿ ಒಟ್ಟು ೬ ಹಾಡುಗಳಿವೆ. “ಲಂಬಾಣಿಗರಲ್ಲಿ ಮದುವೆ ಸಂಪ್ರದಾಯಗಳು” (೧೯೯೬ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಉಪನ್ಯಾಸ ಮಾಲೆಯಲ್ಲಿ ಪ್ರಕಟವಾದ ಪುಸ್ತಿಕೆ. ಈ ಪುಸ್ತಿಕೆಯನ್ನು ಕುರಿತು ಡಾ. ಗಾಯತ್ರಿ ನಾವಡ ಅವರು ಹೇಳಿರುವ ಅಭಿಪ್ರಾಯ ಹೀಗಿದೆ. “ಸಮುದಾಯದ ಒಳಗಿನವರು ನಡೆಸಿದ ಶೋಧನೆಯಲ್ಲಿ ಸಾಮಾನ್ಯವಾಗಿ ದಟ್ಟವಾದ ಮಾಹಿತಿಗಳಿರುವುದು ಸಹಜ ಅಂತೆಯೇ ಈ ಪುಸ್ತಿಕೆಯಲ್ಲಿ ಲಂಬಾಣಿಗರ ಮದುವೆಯ ಒಂದೊಂದು ವಿಧಿ ವಿಧಾನವನ್ನೂ ವಿವರಿಸುವುದರಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಲಂಬಾಣಿ ಭಾಷೆಯ ಹಾಡುಗಳನ್ನು ನೀಡಿ ಕನ್ನಡ ಸಾರಾಂಶ ನೀಡಿರುವುದು ಕುತೂಹಲಕರವಾಗಿದೆ. ನಿಂತ ನೆಲದ ಸಂಸ್ಕೃತಿಗಿಂತ ಭಿನ್ನ ಚಹರೆಯನ್ನು ಸ್ಪಷ್ಟವಾಗಿ ಅವರ ಆಚರಣೆಗಳನ್ನು ಗುರುತಿಸಬಹುದು, ಸಂಸ್ಕೃತಿಯೊಂದು ಬದಲಾವಣೆಗೆ ಗುರಿಯಾಗದೆ ಮೂಲ ರೂಪದಲ್ಲೇ ಉಳಿಯಬೇಕೆನ್ನುವ “ಮೂಲದ ಕೆಲವು ಪಳೆಯುಳಿಕೆಗಳನ್ನು ಬಲು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವುದು ಇವರ ಸಂಸ್ಕೃತಿ ಪೋಷಣೆಗೆ ಒಂದು ನಿದರ್ಶನವಾಗಿದೆ. ಆದರೆ ಇಂದಿನ ಆಧುನಿಕತೆಯ ದಿನಗಳಲ್ಲಿ ಇದು ಎಷ್ಟು ದಿನ ಮುಂದುವರಿಯುವುದೋ ಕಾಲವೇ ಉತ್ತರಿಸಬೇಕು”. ಎನ್ನುವ ಲೇಖಕರ ಧೋರಣೆ ಅವವಿಕಾಸವಾದೀ ಚಿಂತನೆಗೆ ಒಳ್ಳೆಯ ಉದಾಹರಣೆ. ಮಿಕ್ಕಂತೆ ನಿರೂಪಣೆ ಸರಳವಾಗಿದೆ. ನಿರ್ದಿಷ್ಟವಾಗಿದೆ. (ಜಾನಪದ ವರ್ಷ ೧೯೯೬ ಗಾಯತ್ರಿ ನಾವಡ)

ಲಂಬಾಣಿಗರಲ್ಲಿ ‘ಹೋಳಿ ಹಬ್ಬ’ (೧೯೯೭ ಶಶಿ ಪ್ರಕಾಶನ ಧಾರವಾಡ) ಉತ್ತರ ಕರ್ನಾಟಕದ ಲಂಬಾಣಿಗರ ಹೋಳಿ ಹಬ್ಬದ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಅನುಬಂಧದಲ್ಲಿ ಲಂಬಾಣಿಗರ ಹೋಳಿ ಹಬ್ಬದ ಹಾಡುಗಳಿವೆ. ‘ಡಕ್ಕಲಿಗರು’ (೧೯೯೭ ಪ್ರಸಾರಾಂಗ ಕ.ವಿ.ವಿ. ಧಾರವಾಡ) ‘ಸಂತ ಸೇವಾಲಾಲ’ (೧೯೯೮ ಗ್ರಾಮೀಣ ಸಾಹಿತ್ಯ ಮಾಲೆ, ಡಂಬಳ) ಲಂಬಾಣಿಗರ ಆರಾಧ್ಯ ದೈವ ಸೇವಾಲಾಲನನ್ನು ಕುರಿತ ಕೃತಿ. ಪ್ರಸ್ತಾವನೆ ಒಳಗೊಂಡಂತೆ ೫ ಅಧ್ಯಾಯಗಳನ್ನೊಳಗೊಂಡಿದೆ. (ಬಂಜಾರಾ) ಗೋತ್ರಗಳು (ಪ್ರೀತಮ್ ಪ್ರಕಾಶನ ಧಾರವಾಡ ೨೦೦೨) ‘ಗಾತೆ ಜಾವೋ ಬಂಜಾರಾ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಂಸ್ಕೃತಿಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ಜಾನಪದ ಸಾಹಿತ್ಯ ದರ್ಶನ ಭಾಗ – ೨೧ (೧೯೯೮ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಇದರಲ್ಲಿ “ಲಂಬಾಣಿಗರ ಉಡುಗೆ ತೊಡುಗೆಗಳು” ಮತ್ತು ಜಾನಪದ ಸಾಹಿತ್ಯ ದರ್ಶನ ಭಾಗ – ೨೩ (೧೯೯೯ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಇದರಲ್ಲಿ “ಜನಪದ ನಂಬಿಕೆಗಳ ಹಿನ್ನೆಲೆಯಲ್ಲಿ “ಭೂಮಿ” ವಿಷಯ ಕುರಿತು ಪ್ರಬಂಧ ಪ್ರಕಟವಾಗಿದೆ. ಬೇರೆ ಬೇರೆ ನಿಯತಕಾಲಿಕೆ ಮತ್ತು ನಾಡಿನ ವಿದ್ವತ್ ಪತ್ರಿಕೆಗಳಲ್ಲಿ ೩೫ಕ್ಕೂ ಹೆಚ್ಚಿನ ಸಂಶೋಧನ ಲೇಖನಗಳು ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಬುಡಕಟ್ಟಿನವರನ್ನು ಕುರಿತು ಹಲವಾರು ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಮಟ್ಟದ ಮತ್ತು ಅಂತರ್ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ವಿದ್ವತ್ ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಶ್ವಕೋಶಗಳಲ್ಲಿಯೂ ಲೇಖನಗಳನ್ನು ಬರೆದಿದ್ದಾರೆ. ಕನ್ನಡ ಅಧ್ಯಾಪಕರಾಗಿ ಸೇವೆ ಆರಂಭಿಸಿದ ಇವರು ಸದ್ಯ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಗನ್ನಾಥ ಪವಾರ ಅವರ “ಗೊರೂರೊ ಗೀದ” (೧೯೬೯) ಲಂಬಾಣಿ ಭಜನೆಗಳನ್ನು ಒಳಗೊಂಡಂಥ ಕೃತಿ. ಇದರಲ್ಲಿ ೫ ಗುರುಸ್ತುತಿ ಮತ್ತು ೧೦ ಲಂಬಾಣಿ ಹಾಡುಗಳನ್ನು ಒಳಗೊಂಡಿವೆ. ಡಾ. ಶೈಲಜಾ ಹಿರೇಮಠರ ‘ಪಾತರದವರು’ (೧೯೯೯ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಪಾತರದವರು ಎಂಬ ಜನಾಂಗವನ್ನು ಅಧ್ಯಯನಕ್ಕೆ ಒಳಪಡಿಸಿದ ಕೃತಿ. ಆರು ಅಧ್ಯಾಯಗಳನ್ನು ಒಳಗೊಂಡಿದ್ದು “ಪಾತರದವರ” ಉಗಮ, ವಿಕಾಸ, ಬೆಳವಣಿಗೆ, ಕುಟುಂಬ ಜೀವನ ಸಾಂಸ್ಕೃತಿಕ ಸ್ಥಿತ್ಯಂತರ ಮುಂತಾದವುಗಳ ಬಗ್ಗೆ ಸಂಶೋಧನೆ ಮಾಡಲಾಗಿದೆ. ಶ್ರೀ ಬಾಪುಗೌಡ ಪಾಟೀಲರ ‘ಕಟ್ಟಾಣಿ ಸತಿಯೆಂದು ಕರದೇನ’ (೧೯೮೨ ಕವಿತಾ ಪ್ರಕಾಶನ ತಾಳಿಕೋಟೆ) ಹಳ್ಳಿಯ ಬದುಕಿನ ಪರಿಸರದ ಹಿನ್ನೆಲೆಯಲ್ಲಿ ರಚಿಸಿದ ಸಂಕಲನವಾಗಿದೆ. ಪ್ರಸ್ತುತ ಇದರಲ್ಲಿ ಒಟ್ಟು ೩೫ ಭಾಗಗಳಿಂದ ಆವೃತ್ತವಾಗಿದ್ದು ಇದು ಗಂಡು – ಹೆಣ್ಣಿನ ಪ್ರೇಮವನ್ನು ಚಿತ್ರಿಸುವ ಪ್ರೇಮ ಸಂಕಲನವಾಗಿದೆ. ಇದರಲ್ಲಿ ಒಟ್ಟು ೩೫ ಭಾಗಗಳಿಂದ ಆವೃತ್ತವಾಗಿದೆ. ಶ್ರೀ ಶಂಕರಾನಂದ ಉತ್ಲಾಸರ ಅವರ ಜನಪದ ಒಡಪುಗಳು (೧೯೮೧ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು) ೧೪೦ ಜನಪದ ಒಡಪುಗಳನ್ನು ಒಳಗೊಂಡ ಕೃತಿ. ಡಾ. ಮಲ್ಲಿಕಾರ್ಜುನ ಸಿಂದಗಿಯವರು ‘ಶಿಶುನಾಳ ಶರೀಫ’ ಕುರಿತು ಮಹಾಪ್ರಬಂಧ ಬರೆದು ಪ್ರಕಟಿಸಿದ್ದಾರೆ.