ಸ್ವಾಮಿ ವಿಷ್ಣು ತೀರ್ಥರು
ಮುನಿಲಾಲ್ ಸ್ವಾಮಿ ಎಂದೂ ಕರೆಯಲ್ಪಡುತ್ತಿದ್ದ ಸ್ವಾಮಿ ವಿಷ್ಣು ತೀರ್ಥರು (೧೯೮೮-೧೯೬೯) ಒಬ್ಬ ಸನ್ಯಾಸಿ, ಲೇಖಕ ಮತ್ತು ಸಿದ್ಧಯೋಗದ ಶಕ್ತಿಪಾತ ಪರಂಪರೆಯಲ್ಲಿ ಪ್ರಮುಖ ಸ್ಥಾನಪಡೆದ ಗುರುವೂ ಆಗಿದ್ದರು. ವಿಷ್ಣುತೀರ್ಥರು ೧೮೮೮ರ ಅಕ್ಟೋಬರ್ ತಿಂಗಳ ೧೫ರಂದು ಹರಿಯಾಣ ರಾಜ್ಯದ ಝಜ್ಜರ್ ನಲ್ಲಿ ಜನಿಸಿದರು. ಇವರ ತಂದೆ ಪಂಡಿತ್ ಚೇತ್ ರಾಮ್ ಸ್ವಾಮಿ ಮತ್ತು ತಾಯಿ ಸರೋಜಾ ದೇವಿ. ಚೇತ್ ರಾಮ್ ಅವರು, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಸ್ಟೇಷನ್ ಮಾಸ್ಟರ್ ಆಗಿದ್ದರು.
ಮುನಿ ಲಾಲ್ ಸ್ವಾಮಿಯವರು ತಮ್ಮ ಐದನೇ ವಯಸ್ಸಿನಲ್ಲಿ, ಆರಂಭಿಕ ಶಿಕ್ಷಣವನ್ನು ಮೌಲ್ವಿಯೊಬ್ಬರಿಂದ ಉರ್ದುಭಾಷೆಯಲ್ಲಿ ಪಡೆದಿದ್ದು ಆಶ್ಚರ್ಯಕರ ಸಂಗತಿಯಾದರೂ ಕೂಡ ಸತ್ಯ. ಅಲ್ಲಿಂದ ೨ ವರ್ಷಗಳ ಬಳಿಕ ಮುನಿಲಾಲರ ತಂದೆಯವರಿಗೆ ಝಜ್ಜರ್ ನಿಂದ ರಾಜಗಢಕ್ಕೆ ವರ್ಗಾವಣೆಯಾಯಿತು. ರಾಜಗಢದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಮುನಿಲಾಲ್, ನಂತರದ ದಿನಗಳಲ್ಲಿ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿ ಅಲ್ಲಿ ತಮ್ಮ ಚಿಕ್ಕಪ್ಪನ ಆಶ್ರಯದಲ್ಲಿದ್ದುಕೊಂಡು ಬಿ.ಎಸ್ಸಿ ಪದವಿಗೆ ಸೇರಿಕೊಂಡರು. ಆದರೆ, ಆ ಪರೀಕ್ಷೆಯಲ್ಲಿ ನಪಾಸಾದ ಮುನಿಲಾಲ್, ಬಿಲಾಸ್ ಪುರದ(ಈಗಿನ ಚತ್ತೀಸ್ ಗಢ ರಾಜ್ಯದಲ್ಲಿನ ಪಟ್ಟಣ) ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇರಿಕೊಂಡರು ಮತ್ತು ಯೋಗ ಸಾಧನೆಯಲ್ಲೂ ತೊಡಗಿಕೊಂಡರು. ಈ ನಡುವೆ, ಅವರಿಗೆ ನಂದ ಕುಮಾರಿ ದೇವಿ ಜೊತೆ ವಿವಾಹವಾಯಿತು. ನಂತರದ ಸಮಯದಲ್ಲಿ, ಆ ದಂಪತಿಗೆ ಒಬ್ಬ ಮಗ ಮತ್ತು ಮಗಳು ಜನಿಸಿದರು.
ಬಾಲ್ಯದಿಂದಲೂ ಹಲವಾರು ಅಲೌಕಿಕ ಅನುಭವಗಳಿಗೆ ಒಳಗಾಗಿದ್ದ ಮುನಿಲಾಲರು, ದೆಹಲಿಯ ಕಾಳ್ಕಾಜಿ ದೇಗುಲದಲ್ಲಿ ನೆಲೆಸಿದ್ದ ಬಂಗಾಳಿ ಸಂತರೊಬ್ಬರಿಂದ ಯೋಗ ಸಾಧನೆಯ ಸೂಕ್ಷ್ಮಗಳನ್ನು ತಿಳಿಯುತ್ತಾರೆ. ಆ ಬಳಿಕ ತೀರ್ಥಯಾತ್ರೆಗಾಗಿ ಅಯೋಧ್ಯೆಗೆ ತೆರಳುವ ಮುನಿಲಾಲರು ಅಲ್ಲಿ, ಸೀತಾರಾಮ್ ದಾಸ್ ಓಂಕಾರ್ ನಾಥ್ ಎಂಬ ಸಂತರನ್ನು ಭೇಟಿಯಾಗುತ್ತಾರೆ. ಅವರು, “ನಿನ್ನ ಜೀವನದ ಉದ್ದೇಶದ ಸಾಧನೆಗಾಗಿ ಸಂಸ್ಕೃತವನ್ನು ಕಲಿತುಕೋ ” ಎಂದು ಮುನಿಲಾಲರಿಗೆ ಸಲಹೆ ನೀಡುತ್ತಾರೆ.
ಆ ಬಳಿಕ ಮುನಿಲಾಲರು ಸಂಸ್ಕೃತ ಭಾಷೆಯಲ್ಲಿ ಬಿ.ಎ ಪದವಿ ಪಡೆದರು. ನಂತರ ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಲ್.ಎಲ್. ಬಿ ಪದವಿ ಪಡೆದರು. ನಂತರದ ದಿನಗಳಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಮುಂದೆ ಭಾರತದ ಪ್ರಧಾನಿಯಾಗಿ ಹೆಸರಾದ ದಿವಂಗತ ಚೌಧರಿ ಚರಣ್ ಸಿಂಗ್ ಅವರು ಮುನಿಲಾಲ್ ಸ್ವಾಮಿ ಅವರ ಬಳಿ ಸಹಾಯಕ ವಕೀಲರಾಗಿ ಕೆಲಸ ಮಾಡಿದ್ದರು. ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಆಂದೋಲನಕ್ಕೆ ಸೇರ್ಪಡೆಯಾದ ಮುನಿಲಾಲ್, ೧೯೩೧ರಲ್ಲಿ ಮೀರತ್ ನಲ್ಲಿ ಸೆರೆವಾಸವನ್ನೂ ಅನುಭವಿಸಿದರು.
ಈ ಮಧ್ಯೆ ಮುನಿಲಾಲರ ಪತ್ನಿ ತೀರಿಕೊಳ್ಳುತ್ತಾರೆ. ಆ ನಂತರದ ಒಂದೆರಡು ವರ್ಷಗಳ ಒಳಗೆ, ತಮ್ಮ ಮಗ ಜನಾರ್ಧನ್ ಸ್ವಾಮಿ ಮತ್ತು ಮಗಳು ಯಶವತಿಯ ವಿವಾಹ ನೆರವೇರಿಸಿದ ಮುನಿಲಾಲರು, ಕೌಟುಂಬಿಕ ಜವಾಬ್ದಾರಿಗಳಿಂದ ಸಂಪೂರ್ಣ ಮುಕ್ತಿ ಪಡೆಯುತ್ತಾರೆ.
ವಕೀಲರಾಗಿದ್ದ ಮುನಿಲಾಲರ ಪ್ರಾಮಾಣಿಕತೆ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಗಮನಿಸಿದ್ದ ಹೈ ಕೋರ್ಟ್ ನ್ಯಾಯಮೂರ್ತಿ ಕಾಶೀನಾಥ್ ಮಿಶ್ರ, ಆ ಕಾಲದ ಪ್ರಸಿದ್ಧ ಯೋಗಿ ಯೋಗಾನಂದರ ಬಗ್ಗೆ ಮಾಹಿತಿ ನೀಡಿ ಅವರಿಂದ ಮಾರ್ಗದರ್ಶನ ಪಡೆಯಲು ತಿಳಿಸುತ್ತಾರೆ. ಹಿಮಾಲಯದ ಪವಿತ್ರ ಕ್ಷೇತ್ರ ಹೃಷಿಕೇಶದಲ್ಲಿನ ಸ್ವರ್ಗಾಶ್ರಮದಲ್ಲಿ ನೆಲೆಸಿದ್ದ ಯೋಗಾನಂದರನ್ನು ಪತ್ರ ಮುಖೇನ ಸಂಪರ್ಕಿಸಿದ ಮುನಿಲಾಲರು, ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಆ ಬಳಿಕ ಹೃಷಿಕೇಶಕ್ಕೆ ತೆರಳಿದ ಮುನಿಲಾಲರಿಗೆ ೧೯೩೩ರಲ್ಲಿ ಶಕ್ತಿಪಾತ ದೀಕ್ಷೆ ಪಡೆಯುತ್ತಾರೆ.
ನಂತರ ಬದರೀನಾಥ, ಕೇದಾರನಾಥ ಇತ್ಯಾದಿ ಪವಿತ್ರ ಕ್ಷೇತ್ರಗಳಲ್ಲಿ ಸಂಚರಿಸುತ್ತಾ ಆಧ್ಯಾತ್ಮ ಸಾಧನೆಯಲ್ಲಿ ತೊಡಗುತ್ತಾರೆ. ೧೯೩೯ರಲ್ಲಿ ಸನ್ಯಾಸ ದೀಕ್ಷೆ ಪಡೆಯುವ ತಮ್ಮ ಇಂಗಿತವನ್ನು ಸ್ವಾಮಿ ಯೋಗಾನಂದರ ಬಳಿ ವ್ಯಕ್ತಪಡಿಸುತ್ತಾರೆ. ಅವರು, ಮುನಿಲಾಲರನ್ನು ಕಾಶಿಯಲ್ಲಿದ್ದ ಸ್ವಾಮಿ ಶಂಕರ ಪುರುಷೋತ್ತಮ ತೀರ್ಥರ ಬಳಿಗೆ ಕಳಿಸುತ್ತಾರೆ. ಪುರುಷೋತ್ತಮ ತೀರ್ಥರು, ಹರಿದ್ವಾರದಲ್ಲಿ ಗಂಗಾ ನದಿಯ ತೀರದ ಮೋಹನ ಆಶ್ರಮದಲ್ಲಿ ಮುನಿಲಾಲರಿಗೆ ಸನ್ಯಾಸ ದೀಕ್ಷೆ ನೀಡುತ್ತಾರೆ. ಆ ಬಳಿಕ ವಿಷ್ಣು ತೀರ್ಥ ಎಂಬ ಅಭಿದಾನವನ್ನು ಪಡೆಯುವ ಮುನಿಲಾಲರು, ಇಂದೋರ್ ಗೆ ತೆರಳುತ್ತಾರೆ. ಅಂತಿಮವಾಗಿ ಮಧ್ಯಪ್ರದೇಶದ ದೇವಾಸ್ ಬಳಿ ನೆಲೆಸಿದ ವಿಷ್ಣು ತೀರ್ಥರು, ನಾರಾಯಣ ಕುಟಿ ಸನ್ಯಾಸಾಶ್ರಮಕ್ಕೆ ಸ್ಥಾಪಿಸುತ್ತಾರೆ.
ಮಹೋನ್ನತ ವ್ಯಕ್ತಿತ್ವದವರಾಗಿದ್ದ ಸ್ವಾಮಿ ವಿಷ್ಣು ತೀರ್ಥರು, ಸಿದ್ಧ ಯೋಗದಲ್ಲಿ ಪ್ರವೀಣರು. ಅವರು, ಆಧ್ಯಾತ್ಮಿಕ ಒಲವು ಹೊಂದಿದ್ದ ಹಲವರಿಗೆ ಶಕ್ತಿಪಾತ ದೀಕ್ಷೆ ನೀಡಿದರು. ವಿಷ್ಣು ತೀರ್ಥರು ಹಲವಾರು ಪುಸ್ತಕಗಳನ್ನು ಬರೆದಿದ್ದು, ಆದಿ ಶಂಕರಾಚಾರ್ಯರ ಸೌಂದರ್ಯ ಲಹರಿಗೆ, ಅವರು ಬರೆದಿರುವ ವ್ಯಾಖ್ಯಾನ ಅತಿ ವಿಶಿಷ್ಟವಾಗಿದ್ದು, ಮಹಾಮಹೋಪಾಧ್ಯಾಯ ಗೋಪಿನಾಥ ಕವಿರಾಜ್ ರವರಂಥವರಿಂದ ಪ್ರಶಂಸೆ ಪಡೆದಿದೆ.
ಇಂಗ್ಲಿಷ್ ಭಾಷೆಯಲ್ಲಿ ಅವರು ರಚಿಸಿರುವ ದೇವಾತ್ಮ ಶಕ್ತಿ ಗ್ರಂಥವು ಅತ್ಯಂತ ಸ್ಮರಣೀಯವಾದ ಕೃತಿಯಾಗಿದೆ. ಇದು ದೈವಿಕ ಶಕ್ತಿ, ಅಂದರೆ ಕುಂಡಲಿನಿ ಮತ್ತು ಶಕ್ತಿಪಾತ ವಿಜ್ಞಾನದ ಅಧ್ಯಯನದ ಫಲವಾಗಿದೆ. ಸ್ವಾನುಭವಗಳು ಮತ್ತು ಅದಕ್ಕೆ ಪೂರಕವಾಗಿ ಪುರಾತನ ಗ್ರಂಥಗಳಲ್ಲಿ ದಾಖಲಾಗಿರುವ ಸಂಪ್ರದಾಯಗಳನ್ನು ಆಧರಿಸಿ ಈ ಗ್ರಂಥವನ್ನು ರಚಿಸಿದ್ದಾರೆ. “ಒಬ್ಬ ವ್ಯಕ್ತಿಯು ತನ್ನೊಳಗಿನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸದ ಹೊರತು, ಆಧ್ಯಾತ್ಮಿಕ ಮಾರ್ಗದಲ್ಲಿ ನಿಜವಾದ ಪ್ರಗತಿ ಸಾಧ್ಯವಿಲ್ಲ” ಎಂದು ಹೇಳುವ ವಿಷ್ಣು ತೀರ್ಥರು, ಗುರುವಿನ ಮೂಲಕ ಶಕ್ತಿಪಾತಕ್ಕೆ ಪ್ರವೇಶ ಪಡೆಯುವುದೇ ಈ ಶಕ್ತಿಯನ್ನು ಜಾಗೃತಗೊಳಿಸಬಹುದಾದ ಸುಲಭ ಮಾರ್ಗವೆಂದು ಅಭಿಪ್ರಾಯಪಡುತ್ತಾರೆ. [೧]
ಪವಿತ್ರವಾದ ಗಂಗಾ ನದಿಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ವಿಷ್ಣು ತೀರ್ಥರು, ಪ್ರತಿವರ್ಷವೂ ಕೆಲತಿಂಗಳ ಕಾಲವನ್ನು ಹೃಷಿಕೇಶದ ಯೋಗ ಶ್ರೀ ಪೀಠದ ಆಶ್ರಮದಲ್ಲಿ ಕಳೆಯುತ್ತಿದ್ದರು. ವಿಷ್ಣು ತೀರ್ಥರ ಗುರುಗಳಾದ ಸ್ವಾಮಿ ಯೋಗಾನಂದರು, ಈ ಆಶ್ರಮ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಕೊಡುಗೆಯಾಗಿ ನೀಡಿದ್ದರು. ವಿಷ್ಣು ತೀರ್ಥರ ಶಿಷ್ಯರಾದ ಸ್ವಾಮಿ ಶಿವೋಂ ತೀರ್ಥ ಮತ್ತು ಇತರರು ೧೯೬೫ರಲ್ಲಿ ಈ ಆಶ್ರಮವನ್ನು ನಿರ್ಮಾಣ ಮಾಡಿದ್ದರು. ೧೯೬೯ರಲ್ಲಿ ತಮ್ಮ ೮೧ನೇ ವಯಸ್ಸಿನಲ್ಲಿ ದೈಹಿಕ ಶರೀರವನ್ನು ತೊರೆದ ವಿಷ್ಣುತೀರ್ಥರು ಪರಮಾತ್ಮನಲ್ಲಿ ಒಂದಾದರು.
ಸ್ವಾಮಿ ಶಿವೋಂ ತೀರ್ಥರು ರಚಿಸಿರುವ “ಚರ್ನಿಂಗ್ ಆಫ್ ದಿ ಹಾರ್ಟ್” (ಭಾಗ 1, 2, 3) ಮತ್ತು “ಸಾಧನ್ ಶಿಖರ್ ” ಪುಸ್ತಕಗಳ ಮೂಲಕ, ವಿಷ್ಣು ತೀರ್ಥರ ಮೇರು ಸದೃಶ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳಬಹುದಾಗಿದೆ. ಈ ಪುಸ್ತಕಗಳಿಂದ, ಗುರುವು ಒಬ್ಬ ಸಾಮಾನ್ಯ ಮನುಷ್ಯನನ್ನು ಶಿಷ್ಯೋತ್ತಮನಾಗಿ ರೂಪಿಸುವ ಪ್ರಕ್ರಿಯೆ ತಿಳಿಯುತ್ತದೆ.
“ವಿಷ್ಣು ತೀರ್ಥರು ಯಾವುದೇ ಪಾಪದ ಸುಳಿವೇ ಇಲ್ಲದ ವ್ಯಕ್ತಿ” ಎಂದು ಅವರ ಗುರು ಬಂಧುಗಳಲ್ಲಿ ಒಬ್ಬರಾದ (ಗುರು ಯೋಗಾನಂದರ ಮತ್ತೊಬ್ಬಶಿಷ್ಯರು) ದೇವೇಂದ್ರಜೀ ವಿಜ್ಞಾನಿ ಮಹಾರಾಜ್ ಅವರು ಕೊಂಡಾಡಿದ್ದಾರೆ.
ಗ್ರಂಥ ಸೂಚಿ
ಬದಲಾಯಿಸಿ- ದೇವಾತ್ಮ ಶಕ್ತಿ (ಕುಂಡಲಿನಿ) ಡಿವೈನ್ ಪವರ್ (ಇಂಗ್ಲಿಷ್ ಭಾಷೆಯಲ್ಲಿ) ಡಿಸೆಂಬರ್ 1948, ಯೋಗ ಶ್ರೀ ಪೀಠ ಟ್ರಸ್ಟ್, ಭಾರತ.
- ಅಧ್ಯಾತ್ಮ ವಿಕಾಸ್
- ಆತ್ಮ ಪ್ರಬೋಧ್
- ಗೀತಾತತ್ವಾಮೃತ್
- ಪ್ರಾಣ ತತ್ವ
- ಪ್ರೀತ್ಯಾಭಿಗ್ಯಹೃದ್ಯಂ (ವ್ಯಾಖ್ಯಾನ)
- ಸಾಧನಾ ಸಂಕೇತ್
- ಸೌಂದರ್ಯ ಲಹರಿ (ವ್ಯಾಖ್ಯಾನ)
- ಶಕ್ತಿಪಥ್
- ಶಿವ ಸೂತ್ರ ಪ್ರಬೋಧಿನಿ
- ಉಪನಿಷತ್ ವಾಣಿ
ಹೆಚ್ಚಿನ ಮಾಹಿತಿ
ಬದಲಾಯಿಸಿ- ಸ್ವಾಮಿ ವಿಷ್ಣು ತೀರ್ಥ, ದೇವಾತ್ಮ ಶಕ್ತಿ(ಕುಂಡಲಿನಿ) ಡಿವೈನ್ ಪವರ್, ಅಧ್ಯಾಯ “ಸೀಕ್ರೆಟ್ ಉಪಾಸನ(ವರ್ಷಿಪ್)”, (ದೆಹಲಿ, ಸ್ವಾಮಿ ಶಿವೋಂ ತೀರ್ಥ, ೧೯೯೩) ೧೨೯ ಪುಟಗಳು
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Swami Vishnu Tirtha, Devatma Shakti (Kundalini) Divine Power, Chapter "Secret of Upasana (Worship)" (Delhi, India, Swami Shivom Tirtha, 1993), p. 129.