ಸೇಡಿಯಾಪು ಕೃಷ್ಣಭಟ್ಟ

ಸೇಡಿಯಾಪು ಕೃಷ್ಣಭಟ್ಟರು (ಜೂನ್ ೮, ೧೯೦೨ - ಜೂನ್ ೮, ೧೯೯೬) ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕನ್ನಡ ವ್ಯಾಕರಣದ ಬಗ್ಗೆ, ಛಂದಸ್ಸಿನ ಬಗ್ಗೆ ವಿಶೇಷವಾದ ಅಧ್ಯಯನಗಳನ್ನು ನಡೆಸಿ, ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.

ಸೇಡಿಯಾಪು ಕೃಷ್ಣಭಟ್ಟ
ಜನನಜೂನ್ ೮. ೧೯೦೨
ಬಂಟ್ವಾಳ ತಾಲ್ಲೂಕಿನ ಹಿಂದೆ ಪುತ್ತೂರಿಗೆ ಸೇರಿದ್ದ ವಿಟ್ಲ ಪೇಟೆಗೆ ಹತ್ತಿರದ ಸೇಡಿಯಾಪು ಹಳ್ಳಿಯಲ್ಲಿ
ಮರಣಜೂನ್ ೮, ೧೯೯೬
ವೃತ್ತಿಶಿಕ್ಷಕರು, ಸಾಹಿತಿಗಳು

‘ಪಾಂಡಿತ್ಯತವನಿಧಿ’, ‘ಕನ್ನಡದ ಕಾವ್ಯಾಯನ’, ‘ಸಾಹಿತ್ಯದ ಮೇರು’, ‘ಪಂಡಿತ ಪಂಕ್ತಿಯಲ್ಲಿ ಶಿಖರ ಸದೃಶ’, ‘ಪರಂಪರೆಯ ಸಾರ್ವಕಾಲಿಕ ಪ್ರತಿನಿಧಿ’ ಹೀಗೆ ಹಲವು ವಿಶೇಷಣಗಳಿಂದ ಪ್ರಸಿದ್ಧಿ ಪಡೆದ ವಿದ್ವಾಂಸರು ಸೇಡಿಯಾಪು ಕೃಷ್ಣಭಟ್ಟರು. ತಮ್ಮ ಈ ವಿದ್ವಾಂಸ ಮಿತ್ರರೆಂದರೆ ಡಾ. ಶಿವರಾಮ ಕಾರಂತರಿಗೆ ಅಚ್ಚುಮೆಚ್ಚು. ಸೇಡಿಯಾಪು ಕೃಷ್ಣಭಟ್ಟರ ಜನ್ಮದಿನದ ಸಂದರ್ಭದಲ್ಲಿ ಈ ಮಿತ್ರರನ್ನು ಕುರಿತು ಕಾರಂತರು ಹೀಗೆ ಬಣ್ಣಿಸಿದ್ದರು: “ಪರಿಚಿತರೆಂದರೆ ಹೀಗಿರುತ್ತಾರೆ ಎಂದು ನಾನು ಸಂತೋಷದಿಂದ ಬೆರಳೆತ್ತಿ ತೋರಬಹುದಾದವರು ಕೃಷ್ಣಭಟ್ಟರು. ಅವರ ವೇಷ ಭೂಷಣಗಳಂತೆಯೇ ಅವರ ನಡೆನುಡಿ. ನಿರ್ಮಲ ವ್ಯಕ್ತಿತ್ವದ ವಿದ್ವಾಂಸ ಸೇಡಿಯಾಪು”. ಹೀಗೆ ಸೇಡಿಯಾಪು ಕೃಷ್ಣಭಟ್ಟರದು ಶುಭ್ರಸುಂದರ ವ್ಯಕ್ತಿತ್ವ, ಉದ್ದಾಮ ಪಾಂಡಿತ್ಯ.

ಸೇಡಿಯಾಪು ಕೃಷ್ಣಭಟ್ಟರು [] ಜನಿಸಿದ್ದು ಈಗಿನ ಬಂಟ್ವಾಳ ತಾಲ್ಲೂಕಿನ ಹಿಂದೆ ಪುತ್ತೂರಿಗೆ ಸೇರಿದ್ದ ವಿಟ್ಲ ಪೇಟೆಗೆ ಹತ್ತಿರದ ಸೇಡಿಯಾಪು ಹಳ್ಳಿಯಲ್ಲಿ, ಜೂನ್ ೮, ೧೯೦೨ರಲ್ಲಿ. ತಂದೆ ಪಂಜಿಗುಡ್ಡೆ ರಾಮಭಟ್ಟರು, ತಾಯಿ ಮೂಕಾಂಬಿಕೆ[] . ಹಳ್ಳಿ ಶಾಲೆಯಲ್ಲಿ ಕಾಗುಣಿತವನ್ನು ಕಲಿತು, ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಒಂಭತ್ತನೆಯ ತರಗತಿಯ ತನಕ ಓದಿದರು. - ಆ ಹೊತ್ತಿಗಾಗಲೇ ದೇಶ ಸ್ವಾತಂತ್ರ್ಯ ಮಹಾಪೂರವಾಗಿ ಹಳ್ಳಿ ಹಳ್ಳಿಗೂ ನುಗ್ಗಿತ್ತು. ಗಾಂಧೀಜಿಯ ಶಾಂತವ್ಯಕ್ತಿತ್ವ ಆಬಾಲವೃದ್ಧರನ್ನೂ ಆಕರ್ಷಿಸಿತ್ತು. ಗಾಂಧೀಜಿಯ ಕರೆ ಕೃಷ್ಣಭಟ್ಟರ ಕಿವಿದೆರೆಗೆ ದೊಡ್ಡದಾಗಿ ಬಡಿಯಿತು. ಶಾಲೆಯಿಂದ ಹೊರಬಂದರು.

ಶಾಲೆಬಿಟ್ಟ ಕೃಷ್ಣಭಟ್ಟರು ನೇರವಾಗಿ ಸ್ವಾತಂತ್ರ್ಯ ಸಮರದ ಮಹಾಪೂರಕ್ಕೆ ದುಮುಕಲಿಲ್ಲ – ಕಾರಣ ಅವರ ಅನಾರೋಗ್ಯ. ಆದುದರಿಂದ ತಮ್ಮ ಊರಲ್ಲೇ ಖಾದಿ ಪ್ರಚಾರ ಇತ್ಯಾದಿ ಗಾಂಧೀಜಿಗೆ ಪ್ರಿಯವಾಗಿದ್ದ ವಿಧಾಯಕ ಕಾರ್ಯಗಳಲ್ಲಿ ನಿರತರಾದರು. ಜೊತೆಗೆ ಮನೆಯಲ್ಲೇ ಓದನ್ನು ಮುದುವರೆಸಿದರು. ಹಳ್ಳಿ ಶಾಲೆಯಲ್ಲಿ ಮಾಸ್ತರಿಕೆಯನ್ನು ಮಾಡಿದರು. ಈ ಮೂರರೊಂದಿಗೆ ವೈದ್ಯಪದ್ಧತಿಯನ್ನೂ ಚೆನ್ನಾಗಿ ಅರಿತುಕೊಂಡರು. 1920ನೆಯ ದಶಕದ ಕೊನೆಯಲ್ಲಿ ಅವರು ಮಂಗಳೂರಿನಲ್ಲಿ ಸೇರಿ ಅಲ್ಲೊಂದು ದವಾಖಾನೆಯನ್ನು ತೆರೆದರು. ಅಲ್ಲಿ ಅವರಿಗೆ ಮಹಾಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಸಾಮೀಪ್ಯವೂ, ತರುಣ ಕವಿ ಕಡೆಂಗೊಂಡ್ಲು ಶಂಕರಭಟ್ಟರ ಸಹಚಾರ್ಯವೂ ಒದಗಿದವು. ಮದ್ದಿನಂಗಡಿಯಲ್ಲಿ ಕುಳಿತೇ ಕನ್ನಡ – ಸಂಸ್ಕೃತಗಳಲ್ಲಿ ಪ್ರಭುತ್ವವನ್ನು ಪಡೆದ ಕೃಷ್ಣಭಟ್ಟರು ಮದರಾಸು ಸರ್ಕಾರ ನಡೆಸುತ್ತಿದ್ದ ‘ವಿದ್ವಾನ್’ ಪರೀಕ್ಷಾ ಪಾರಂಗತರಾದರು. ಆ ಪದವಿಯ ಬಲದಿಂದ ಅವರಿಗೆ ಮಂಗಳೂರು ಸೆಂಟ್ ಅಲೋಸಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿ ಲಭಿಸಿತು. ಸುಮಾರು ಇಪ್ಪತ್ತು ವರ್ಷಗಳಲ್ಲಿ ಕನ್ನಡ ಪಂಡಿತರಾಗಿದ್ದ ಕೃಷ್ಣಭಟ್ಟರು 1950ರಲ್ಲಿ ಅಲೋಸಿಯಸ್ ಕಾಲೇಜಿನಲ್ಲಿ ಕನ್ನಡ ‘ಟ್ಯೂಟರ್’ ಆಗಿ ನಿಯುಕ್ತರಾದರು. ಮುಂದೆ ‘ಲೆಕ್ಚರರ್’ ಸ್ಥಾನಾರೂಢರಾದರು. 1957ರಲ್ಲಿ, ಅನಾರೋಗ್ಯ ಕಾರಣವಾಗಿ, ಅವಧಿ ಪೂರ್ವದಲ್ಲೇ ಅಧ್ಯಾಪನ ನಿವೃತ್ತರೂ ಆದರು. ಕೇವಲ ಹೈಸ್ಕೂಲು ಒಂಭತ್ತನೆಯ ತರಗತಿಯವರೆಗೆ ಓದಿ, ‘ಫೋರ್ಥ್ ಫಾರ್ಮ್ ಪೋಸ್ಟ್ ಗ್ರಾಜುಯೇಟ್ ಡಿಗ್ರಿ’ ಹಿಡಿದು ಹೈಸ್ಕೂಲಿನಿಂದ ಹೊರಬಂದವರಾಗಿದ್ದರೂ ಅಧ್ಯಾಪಕನಾಗಿಯೇ ಕಾಲೇಜು ಮೆಟ್ಟಿಲನ್ನು ಏರಿದುದು ಕೃಷ್ಣಭಟ್ಟರ ಒಂದು ವಿಶೇಷತೆ.

ಬರವಣಿಗೆ

ಬದಲಾಯಿಸಿ

ಸೇಡಿಯಾಪು ಕೃಷ್ಣಭಟ್ಟರ ಒಂದು ಲೇಖನಸೂತ್ರ ಇದೆ. ಅದನ್ನು ಅವರೇ ಪದ್ಯರೂಪದಲ್ಲಿ ಹೀಗೆ ಹೇಳಿದ್ದಾರೆ:

ಹೆಚ್ಚು ಬರೆದವನಲ್ಲ

ನಿಚ್ಚ ಬರೆವವನಲ್ಲ

ಮೆಚ್ಚಿಸಲು ಬರೆಯುವಭ್ಯಾಸವಿಲ್ಲ

ಇಚ್ಚೆಗೆದೆಯೊಪ್ಪಿ ಬಗೆ

ಬಿಚ್ಚಿದರೆ, ಕಣ್ಗೆ ಮಯ್

ವಿಚ್ಚುವಂದದಿ ತೀಡಿ ತಿದ್ದಿ ಬರೆವೆ.

ಪತ್ರಿಕಾ ಬರಹಗಳು

ಬದಲಾಯಿಸಿ

ಕೃಷ್ಣಭಟ್ಟರು ತೊಂಭತ್ತೈದು ವರ್ಷಗಳ ಜೀವತಾವಧಿಯಲ್ಲಿ ಎಪ್ಪತ್ತು ವರ್ಷ ಸಾಹಿತ್ಯ ಕೃಷಿ ಮಾಡಿದರು. ಸೇಡಿಯಾಪು ಕೃಷ್ಣಭಟ್ಟರ ಲೇಖನಕಾರ್ಯ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಪ್ರಾರಂಭವಾಗಿತ್ತು. ಅಂದಿನ .ಕಾಲಧರ್ಮದಂತೆ ಅವರೂ ಒಂದು ಇಂಗ್ಲೀಷ್ ಪದ್ಯ – Road after Motor – ಎಂಬುದನ್ನು ಹೊಸೆದಿದ್ದರು. ಆದರೆ ಗುರುಗಳಾದ ಉಗ್ರಾಣ ಮಂಗೇಶರಾಯರು ಅಂತಹ ಪ್ರಯತ್ನವನ್ನು ಪ್ರೋತ್ಸಾಹಿಸಲಿಲ್ಲ. ಕನ್ನಡದಲ್ಲೇ ಬರೆಯುವಂತೆ ಪ್ರೇರೇಪಿಸಿದರು. ಆಮೇಲೆ ಕೃಷ್ಣಭಟ್ಟರು ಲೇಖಕನಾಗಿ ಕನ್ನಡಿಗರಿಗೆ ಕಾಣಿಸಿದ್ದು ಕನ್ನಡಕುಲ ಪುರೋಹಿತ ಆಲೂರ ವೆಂಕಟರಾಯರ ‘ಜಯಕರ್ನಾಟಕ’ದಲ್ಲಿ. ಅವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಬರೆದ ‘ಕರ್ನಾಟಕ ಕವಿತಾ ಪ್ರಪಂಚ’ ವೆಂಬ ಲೇಖನ ಅಚ್ಚಾಯಿತು. ಬೆಳೆಯ ಗುಣವನ್ನು ಮೊಳಕೆಯಲ್ಲೇ ಗುರುತಿಸಿದ ವೆಂಕಟರಾಯರು, ಮುಂದೊಂದು ದಿನ ಕೃಷ್ಣಭಟ್ಟರನ್ನು ಕಂಡಾಗ, “ನಿಮ್ಮ ಲೇಖನ ಓದಿ ನಿಮ್ಮ ಅಭಿಪ್ರಾಯಗಳನ್ನು ಗಮನಿಸಿದಾಗ ಪ್ರಾಯದಲ್ಲಿ ನೀವು ಇಷ್ಟು ಸಣ್ಣವರೆಂದು ತಿಳಿಯಲಿಲ್ಲ” ಎಂದು ಉದ್ಗರಿಸಿ ಅವರನ್ನು ಆಲಂಗಿಸಿ ಆಶೀರ್ವದಿಸಿದರಂತೆ. 1932ರಲ್ಲಿ ಮಡಿಕೇರಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ, ಡಿ. ವಿ. ಗುಂಡಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಆ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಕೃಷ್ಣಭಟ್ಟರು ‘ಕನ್ನಡ ಛಂದಸ್ಸು’ ಎಂಬ ದೀರ್ಘ ಪ್ರಬಂಧವನ್ನು ಓದಿದರು. ೧೯೪೪ರಲ್ಲಿ ‘ಪ್ರಬುದ್ಧ ಕರ್ಣಾಟಕ’ದ ದೀಪಾವಳಿ ಸಂಚಿಕೆಯಲ್ಲಿ ಕೃಷ್ಣಭಟ್ಟರ ‘ಪಂಚಮೀ ವಿಭಕ್ತಿ’ ಎಂಬ ಲೇಖನ ಪ್ರಚಾರವಾಯಿತು. ಪಂಚಮೀ ವಿಭಕ್ತಿ ಇದೆಯೋ ಇಲ್ಲವೋ ಎಂಬ ಜಿಜ್ಞಾಸೆ ನಡೆಯುತ್ತಿದ್ದ ಆ ಕಾಲದಲ್ಲಿ ಕೃಷ್ಣಭಟ್ಟರು ‘ಕನ್ನಡದಲ್ಲಿ ಪಂಚಮೀ ವಿಭಕ್ತಿ ಸಹಜವಾಗಿಯೇ ಇದೆ’ ಎಂಬುದನ್ನು ಅನೇಕ ಆಧಾರಗಳಿಂದ ಪ್ರಬಲವಾಗಿ ಸಮರ್ಥಿಸಿ ನಿಸ್ಸಂದಿಗ್ಧವಾಗಿ ಸಾಧಿಸಿದರು. ಕನ್ನಡ ವಿದ್ವಾಂಸ ವಲಯದಲ್ಲಿ ವ್ಯಾಕರಣ ಮಾತು ಛಂದಸ್ಸು ಈ ಎರಡೂ ಶಾಸ್ತ್ರಪ್ರಕಾರಗಳಲ್ಲೂ ಅವರಿಗೆ ಸಮಾನ ಆಸಕ್ತಿ ಮತ್ತು ಪ್ರಭುತ್ವ ಎಂಬುದೂ ಸ್ಥಾಪಿತವಾಯಿತು. ಪರಿಣಾಮವಾಗಿ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆ ಒಂದು ವಿಶೇಷ ಉಪನ್ಯಾಸ ಮಾಲಿಕೆಗೆ ಅವರನ್ನು ಆಮಂತ್ರಿಸಿತು. ಆ ಸಂಸ್ಥೆಯ ಆಶ್ರಯದಲ್ಲಿ ಕೃಷ್ಣಭಟ್ಟರು ಮಾಡಿದ ಮೂರು ಉಪನ್ಯಾಸಗಳು ‘ಕನ್ನಡ ವರ್ಣಗಳು’ ಎಂಬ ಶೀರ್ಷಿಕೆಯಲ್ಲಿ ಮುದ್ರಿತವಾಯಿತು.

ಸೇಡಿಯಾಪು ಕೃಷ್ಣಭಟ್ಟರು ಒಬ್ಬ ತಜ್ಞ ವೈಯಾಕರಣ, ಛಂದಶ್ಯಾಸ್ತ್ರಜ್ಞ ಮಾತ್ರವಲ್ಲ ಅವರೊಬ್ಬ ಸರಸಕವಿ ಮತ್ತು ಕಥನಕುಶಲಿ ಎಂಬುದನ್ನು ನಿದರ್ಶಿಸುವಂತೆ ಅವರ ಕೆಲವು ಕಾವ್ಯಗಳೂ ಕತೆಗಳೂ ೧೯೩೦ ಮತ್ತು ೪೦ರ ದಶಕದಲ್ಲಿ ಪ್ರಕಟವಾದವು. ಕಥನಕವನ ಅಥವಾ ಚರಿತ ಕಾವ್ಯದಲ್ಲಿ ಕೃಷ್ಣಭಟ್ಟರದು ಸಿದ್ಧಹಸ್ತವೆಂಬುದನ್ನು ಅವರ ತರುಣ ಧಮನಿ, ಅಶ್ವಮೇಧ, ಕೃಷ್ಣಕುಮಾರಿ, ಪುಣ್ಯಲಹರಿಗಳೆಂಬ ನೀಳ್ಗವಿತೆಗಳು ಸಮರ್ಥಿಸುತ್ತವೆ. ಬೇರೆ ಬೇರೆ ಸಾಲುಗಳಲ್ಲಿ ಬಿಡಿಬಿಡಿಯಾಗಿ ಅಚ್ಚಾದ ಈ ಕಾವ್ಯಗಳು ‘ಕೆಲವು ಸಣ್ಣ ಕಾವ್ಯಗಳು’ ಎಂಬ ಹೆಸರಿನಲ್ಲಿ ಸಂಗ್ರಹಗೊಂಡು ಪ್ರಕಟವಾದವು. ವಸ್ತು, ನಿರೂಪಣಾಕ್ರಮ ಮತ್ತು ಛಂದೋಬಂಧಗಳಲ್ಲಿ ಅನನ್ಯವೂ ಆಗಿರುವ ನಾಲ್ಕು ಸಣ್ಣ ಕಾವ್ಯಗಳಲ್ಲಿ ‘ಪುಣ್ಯಲಹರಿ ಅಥವಾ ಶಬರಿ’ ಎಂಬುದು ರಾಮಾಯಣದ ಒಂದು ಹೃದಯಸ್ಪರ್ಶಿ ಸನ್ನಿವೇಶದಲ್ಲಿ ವಿನೂತನವಾಗಿ, ಪರಿಚಿತನಾದ ಆದರೆ ಬಹುಪ್ರಾಚೀನವಾದ ಪಿರಿಯಾಕಾರವೆಂಬ ಛಂದಸ್ಸಿನಲ್ಲಿ ರಸನಿರ್ಭಾರವಾಗಿ ವರ್ಣಿತವಾಗಿದೆ. ‘ಅಶ್ವಮೇಧ ಅಥವಾ ನಾಯಿಯ ಕತೆ’ ಎಂಬುದು ಪ್ರಾಸರಹಿತ ಉತ್ಸಾಹರಗಳೆಯಲ್ಲಿರುವು ಕಥನಕಾವ್ಯಕ್ಕೆ ತನ್ನ ಒಡೆಯನಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮತ್ತು ಅವನ ಕೈಯಿಂದಲೇ ಪ್ರಾಣವನ್ನು ಕಳಕೊಂಡ ನಾಯಿಯೊಂದರ ಸ್ವಾಮಿಭಕ್ತಿಯನ್ನು ಓದುಗನ ಕಣ್ಣೀರು ಕೊಡಿ ಹರಿಯುವಂತೆ ಚಿತ್ರಿಸಲಾಗಿದೆ. ನಾಯಿಗೆ ‘ಅತಿಮಾನುಷತೆ’ಯನ್ನು ಆರೋಪಿಸದೆಯೇ ರಸಸೃಷ್ಟಿ ಮಾಡಿರುವುದು ಈ ಕಾವ್ಯದ ವೈಶಿಷ್ಟ್ಯ. ‘ಕೃಷ್ಣಕುಮಾರಿ’ ಎಂಬುದು ರಾಜಸ್ಥಾನದ ನಾರೀಮಣಿಯೊಬ್ಬಳ ವೀರಗಾಥೆ – ಅದೂ ಪ್ರಾಸರಹಿತ ಭಾಮಿನಿ ಷಟ್ಪದಿಯಲ್ಲಿ ಬಣ್ಣನೆಗೊಂಡು ಕರುಳನ್ನು ಹಿಂಡುತ್ತದೆ. ನಾಲ್ಕನೆಯದಾದ ‘ತರುಣಧಮನಿ’ ವಿಜಯನಗರದ ಕೊನೆಯ ದೊರೆ ರಾಮರಾಜ ಮತ್ತು ಮಿಹಿರೆಯೆಂಬವಳ ರಮಣೀಯ ಪ್ರಣಯಪ್ರಸಂಗವನ್ನು ವರ್ಣಿಸುವ ತರಳಗತಿಯ ಸರಸ ಕಾವ್ಯ. ಅದರಲ್ಲಿ ಶೃಂಗಾರರಸ ಮಡುಗಟ್ಟಿ ನಿಂತಿದೆ. ಆದರೆ ಅದು ಎಲ್ಲೂ ಅತಿಯೆನಿಸುವುದಿಲ್ಲ. ಅಶ್ಲೀಲವೂ ಆಗುವುದಿಲ್ಲ. ಪ್ರಾಚೀನ ಸಂಸ್ಕೃತ ಮಹಾಕಾವ್ಯಗಳ ಮಾದರಿಯಲ್ಲಿ ರೂಪಾಂತರಿತ ಶರ ಷಟ್ಪದಿಯಲ್ಲಿ ಕೃಷ್ಣಭಟ್ಟರು ಮಾಡಿದ ಒಂದು ಶ್ಲಾಘನೀಯ ಪ್ರಯತ್ನವೇ ಈ ಕಾವ್ಯಖಂಡ.

ಇಪ್ಪತ್ತು ವರ್ಷಗಳ ಅನಂತರ ಈ ನಾಲ್ಕು ನೀಳ್ಗವನಗಳೊಂದಿಗೆ ಕೃಷ್ಣಭಟ್ಟರು ಯಥಾವತ್ತಾಗಿ ಬರೆದ ಹದಿನೆಂಟು ಬಿಡಿಕವಿತೆಗಳನ್ನು ಸೇರಿಸಿ ‘ಚಂದ್ರಖಂಡ’ವೆಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಮುಂದೆ 1985ರಲ್ಲಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅದು ಪುರ್ನರ್ಮುದ್ರಣಗೊಂಡಿತು. ಮತ್ತೆ 1994ರಲ್ಲಿ ಅದು ಪರಿವರ್ಧಿತವೂ ಅನುಬಂಧಿತವೂ ಆಗಿ ಅಚ್ಚಾಯಿತು. ಬೆಳಗಿನ ತಂಗಾಳಿ, ನೌಕೆಯಲೆನ್ನ ಕುಳ್ಳಿರಿಸು, ತಣ್ಣನೆ ಹೊಯ್ಯಮ್ಮ ದೀಪಕ್ಕೆ, ತುಳುನಾಡ ಹಾಡು, ಜಯ ಭಾರತಪುತ್ರನೇ ಮೊದಲಾದ ಹತ್ತಾರು ಭಾವಬಂಧುರ ಕವಿತೆಗಳನ್ನು ಈ ಸಂಕಲನದಲ್ಲಿ ಕಾಣುತ್ತೇವೆ.

ಸೇಡಿಯಾಪು ಕೃಷ್ಣಭಟ್ಟರು ರೋಚಕವಾದ ಕತೆಗಳನ್ನೂ ಬರೆಯಬಲ್ಲರೆಂದು ಅವರ ‘ಪಳಮೆಗಳು’ ಎಂಬ ಸಂಗ್ರಹವು ಪುಷ್ಟೀಕರಿಸುತ್ತದೆ. ‘ಚಿನ್ನದ ಚೇಳು’, ‘ಚೆನ್ನಮಣೆ’, ‘ಧರ್ಮಮ್ಮ’ ಮತ್ತು ‘ನಾಗಬೆತ್ತ’ವೆಂಬ ನಾಲ್ಕು ಕತೆಗಳು, ಯಾವುವೋ ಹೇಳಿಕೆಗಳನ್ನು ಹಿಡಿದು ಬರೆದವುಗಳು. ಕೆಲವು ಅಂಧವೋ ಅನುಭವವೋ ಆದ ವಿಶ್ವಾಸಗಳನ್ನವಲಂಭಿಸಿ ಬೆಳೆದವುಗಳು. ಇವುಗಳಲ್ಲಿ ಚಿತ್ರಿತವಾದ ಜೀವನ ಇಂದಿನದಲ್ಲ. ಆದುದರಿಂದ ‘ಪಳಮೆಗಳು’ ಎಂದು ಲೇಖಕ ಕೃಷ್ಣಭಟ್ಟರು ವಿವರಣೆಯನ್ನು ನೀಡಿದ್ದಾರೆ. ಆದರೆ ನಾಲ್ಕು ಕತೆಗಳ ವಸ್ತು ವೈವಿಧ್ಯ, ಕಥನಕೌಶಲ ಮತ್ತು ಭಾಷಾ ಸೌಂದರ್ಯಗಳಿಂದಾಗಿ ಅವು ಎಲ್ಲ ಕಾಲಕ್ಕೂ ಹೊಸತಾಗಿಯೇ ಉಳಿಯುತ್ತದೆ. ಓದುಗನ ರಸಜಿಹ್ವೆಗೆ ಬಗೆ ಬಗೆಯ ರುಚಿಗಳನ್ನು ಇಳಿಸುತ್ತವೆ. ನಾಲ್ಕು ಕತೆಗಳಿಗೆ ಅವುಗಳದೇ ಆಗಿರುವ ಸೊಗಸಿದ್ದರೂ ‘ಚೆನ್ನಮಣೆ’ ಮತ್ತು ‘ನಾಗರಬೆತ್ತ’ ಕನ್ನಡಕ್ಕೆ ಅತ್ಯುತ್ತಮ ಕಥೆಗಳೊಂದಿಗೆ ಸಮಾನ ಪಂಕ್ತಿ. ‘ನಾಗರಬೆತ್ತ’ ಇಂಗ್ಲೀಷಿಗೂ ಅನುವಾದಿತವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿರುವ ‘Anthology’ಯೊಂದರಲ್ಲಿ ಸೇರಿದೆ. 1947ರಲ್ಲಿ ಮೊದಲಸಲ ಅಚ್ಚಾದ ಈ ಕತೆಗಳ ಕಟ್ಟು ಬಹಳಷ್ಟು ಮರು ಹುಟ್ಟುಗಳನ್ನು ಕಂಡಿದೆ ಎಂದರೆ ಕತೆಗಳ ಕಮನೀಯತೆ ಮನವರಿಕೆಯಾಗುತ್ತದೆ.

1975ರಲ್ಲಿ ಕೃಷ್ಣಭಟ್ಟರ ‘ಕೆಲವು ದೇಶನಾಮಗಳು’ ಎಂಬ ಗ್ರಂಥ ಪ್ರಕಟವಾಯಿತು. ಅದರಲ್ಲಿ ಅವರು ಬಹುವಿಧದ ವ್ಯಾಖ್ಯಾನ – ವಿವರಣೆಗಳಿಗೆ ಒಳಗಾದ ‘ತುಳು’ ಎಂಬ ಶಬ್ದಾರ್ಥ ವಿವೆಚನೆಯನ್ನು ಚೇರ, ಕೊಂಕಣ ಮತ್ತು ಪಾಂಡ್ಯ ಎಂಬ ದೇಶವಾಚಕಗಳ ನಿಷ್ಪತ್ತಿ ನಿರೂಪಣೆಯನ್ನು ನಿಸ್ಸಂದಿಗ್ಧವಾಗಿ ಮಾಡಿದ್ದಾರೆ. 1985ರಲ್ಲಿ ಪ್ರಕಟಗೊಂಡ ‘ಛಂದೋಗತಿ’ಯೆಂಬ ಗ್ರಂಥ ಪ್ರಕಟವಾದ ನಾಲ್ಕುವರ್ಷದ ನಂತರ ಮುದ್ರಿತವಾಗಿದ್ದು ‘ಕನ್ನಡ ಛಂದಸ್ಸು’ ಎಂಬ ಗ್ರಂಥ.

ಸೇಡಿಯಾಪು ಕೃಷ್ಣಭಟ್ಟರು ತಮ್ಮ ತೊಂಬತ್ತನೆಯ ಹುಟ್ಟುಹಬ್ಬದ ನೆನಪಿಗೆಂಬಂತೆ ಕನ್ನಡಿಗರಿಗೆ ನೀಡಿದ ಕೊಡುಗೆಯೆಂದರೆ ‘ತಥ್ಯದರ್ಶನ’ ಎಂಬ ಅಪೂರ್ವ ಅಸಾಮಾನ್ಯ ಪುಸ್ತಕ. ಅದು ‘ಅಪೂರ್ವ ಮಾತ್ರವಲ್ಲ, ಅಪಶ್ಚಿಮ ಕೂಡಾ ಎಂದರೂ ತಪ್ಪಾಗಲಿಕ್ಕಿಲ್ಲ’ವೆಂದು ಹೇಳಿದ್ದಾರೆ ಖ್ಯಾತ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಏಕೆಂದರೆ ಅನೇಕ ವರ್ಷಗಳಿಂದ ಅನೇಕ ಪಾಶ್ಚಾತ್ಯ ಪೌರಸ್ತ ಇತಿಹಾಸಜ್ಞರು, ಪುರಾತತ್ವ ಶಾಸ್ತ್ರಿಗಳು, ಸಂಶೋಧಕರು ಮತ್ತು ವಿದ್ವತ್ ಪ್ರಭೃತಿಗಳು ದೊಡ್ಡದಾಗಿ ಹೇಳುತ್ತಾ ಬಂದಿದ್ದ ಗಟ್ಟಿಯಾಗಿ ನಂಬಿದ್ದ ‘ಆರ್ಯ’ರೆಂದರೆ ಒಂದು ಜನಾಂಗ, ವರ್ಣ ಮತ್ತು ಜಾತಿ ಎಂದರೆ ಏಕಾರ್ಥ, ಲಿಂಗ ಎಂದರೆ ಜನನೇಂದ್ರಿಯ ಎಂದು ಮುಖ್ಯವಾಗಿ ಅರ್ಥಕತೀ ಪದಚತುಷ್ಟಯದ ನಿಜವಾದ ಅರ್ಥಾನುಸಂಧಾನವನ್ನು ಕೃಷ್ಣಭಟ್ಟರು ಈ ಪುಸ್ತಕದಲಿ ಮಾಡಿದ್ದಾರೆ. ಹೊಸ ನೆಲೆಗಟ್ಟಿನಲ್ಲಿ ನಿಂತು ಮಾಡಿದ್ದಾರೆ. ಆ ನಾಲ್ಕುಪದಗಳ ಮೇಲೆ ಹೊಸ ಬೆಳಕನ್ನು ಚೆಲ್ಲಿದ್ದಾರೆ ಮತ್ತು ಅವುಗಳ ಹುರುಳನ್ನು ತೋರಿ ಹೊಸಬೆಲೆಯನ್ನು ಕಾಣಿಸಿದ್ದಾರೆ. ಆರ್ಯವೆಂಬುದು ಜನಾಂಗವಾಚಕವಲ್ಲ. ಅದು ಸಂಸ್ಕೃತಿ ಸೂಚಕವೆಂದು ಅವರು ಪ್ರತಿಪಾದಿಸಿರುವ ರೀತಿ ವಿನೂತನ, ಆಶ್ಚರ್ಯಕರ, ವಿಚಾರಕ್ಷಮ ಮತ್ತು ಸ್ವೀಕಾರ್ಹ. ಪ್ರಾಯಃ ಸಮಸ್ತ ಭಾರತೀಯ ವಾಙ್ಮಯ್ದಲ್ಲೇ ಈ ಬಗೆಯ ಪುಸ್ತಕಗಳಲ್ಲಿ ಇದೇ ಮೊದಲನೆಯದು ಎಂದು ಹೇಳಬಹುದಾಗಿದೆ. ಪುಸ್ತಕದ ಇಂಗ್ಲಿಷ್ ಅನುವಾದವೂ ‘Discovery of Facts’ ಎಂಬ ಹೆಸರಿನಲ್ಲಿ, 1996ರ ಜೂನ್ 8ರಂದು ಕೃಷ್ಣಭಟ್ಟರ ತೊಂಬತ್ತೈದನೆಯ ಜನ್ಮದಿನದಂದು ಬಿಡುಗಡೆಗೊಂಡಿತು.

ಗ್ರಂಥಗಳು

ಬದಲಾಯಿಸಿ

1975ರಲ್ಲಿ ಕೃಷ್ಣಭಟ್ಟರ ಕೆಲವು ದೇಶನಾಮಗಳು ಎಂಬ ಗ್ರಂಥ ಪ್ರಕಟವಾಯಿತು. ಅದರಲ್ಲಿ ಅವರು ಬಹುಕಾಲದಿಂದ ಬಹುವಿಧದ ವ್ಯಾಖ್ಯಾನ-ವಿವರಣೆಗಳಿಗೆ ಒಳಗಾದ ‘ತುಳು’ ಎಂಬ ಶಬ್ದಾರ್ಥ ವಿವೇಚನೆಯನ್ನು ಚೇರ, ಕೊಂಕಣ ಮತ್ತು ಪಾಂಡ್ಯ ಎಂಬ ದೇಶವಾಚಕಗಳ ನಿಷ್ಪತ್ತಿ ನಿರೂಪಣೆಯನ್ನು ನಿಸ್ಸಂದಿಗ್ಧವಾಗಿ ಮಾಡಿದ್ದಾರೆ. ಆ ಕುರಿತು ಅನೇಕ ವಿದ್ವಾಂಸರು ಮಾಡಿದ ತರ್ಕ, ಮುಟ್ಟಿದ ನಿಗಮಗಳನ್ನು ಸಮಗ್ರವಾಗಿ ವಿಶ್ಲೇಷಿಸಿ ಸಾಧಾರಣವಾಗಿ ತಿರಸ್ಕರಿಸಿದ್ದಾರೆ. ಅವರದು ವಸ್ತುನಿಷ್ಠವಾದ ಕಥೈಕ ದೃಷ್ಟಿಯಲ್ಲದೆ ಅಭಿಮಾನ, ವ್ಯಕ್ತಿದ್ವೇಷ, ಪೂರ್ವಗ್ರಹಗಳಲ್ಲಿ. ಸೇಡಿಯಾಪು ಕೃಷ್ಣಭಟ್ಟರ 1985ರಲ್ಲಿ ಪ್ರಕಟಗೊಂಡ ‘ಛಂದೋಗತಿ’ ಯೆಂಬ ಗ್ರಂಥ. ‘ಛಂದೋಗತಿ’ ಪ್ರಕಟವಾದ ನಾಲ್ಕುವರ್ಷ ಅನಂತರ ಮುದ್ರಿತವಾದದ್ದು ‘ಕನ್ನಡ ಛಂದಸ್ಸು’ ಎಂಬ ಗ್ರಂಥ. 1932ರಲ್ಲಿ ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಕೃಷ್ಣಭಟ್ಟರು ಬರೆದ ಅದೇ ಹೆಸರಿನ ನಿಬಂಧದ ಪರಿಷ್ಕೃತವಾಗಿ ನಾಲ್ಕು ಪರಿಶಿಷ್ಟ, ನಾಲ್ಕು ಅನುಬಂಧ ಮತ್ತೊಂದು ಅವಶಿಷ್ಟ ಸಹಿತವಾಗಿ ನೂರ ಐವತ್ತೇಳು ಪುಟಗಳಷ್ಟು ಪುಟ ವಿಸ್ತರವಾಗಿದೆ. ‘ಈಶ್ವರ ಸಂಕಲ್ಪ ಅಥವಾ ದೈವಲೀಲೆ’ ಯೆಂಬ ಪುಸ್ತಕವನ್ನು ರಚಿಸಿದ್ದಾರೆ.ಕೃಷ್ಣಭಟ್ಟರು ಮಾಡಿರುವ ಉಪನ್ಯಾಸಗಳು, ಮುನ್ನುಡಿಗಳು ಮುಂತಾದವುಗಳನ್ನೆಲ್ಲಾ ಸೇರಿಸಿ ‘ವಿಚಾರ ಪ್ರಪಂಚ’ ಎಂಬ ಹೆಸರಿನಲ್ಲಿ ೧೯೯೨ರಲ್ಲಿ ಪ್ರಕಟಿಸಲಾಯಿತು. ಒಂದು ಸಂದರ್ಭದಲ್ಲಿ ‘ಕನ್ನಡ ಕಾದಂಬರೀ ಸಾಮ್ರಾಟ’ ಅ. ನ. ಕೃಷ್ಣರಾಯರು ಕೃಷ್ಣಭಟ್ಟರನ್ನು ‘ಶಬ್ದನಿಧಿ’ಯೆಂದು ಕರೆದಿದ್ದರು. ಕನ್ನಡದಲ್ಲಿ ತಮ್ಮಿಬ್ಬರು ಗೆಳೆಯರ ಜೊತೆಗೂಡಿ ‘ಕನ್ನಡ ನಿಘಂಟು’ ಒಂದನ್ನು ಕೂಡಾ ಕೃಷ್ಣಭಟ್ಟರು ಸಂಪಾದಿಸಿದ್ದರು. ತಮ್ಮ ಜೀವನದ ಕೆಲವು ವಿಶಿಷ್ಟಘಟನೆಗಳನ್ನು ನಿರೂಪಿಸುವ ‘ಈಶ್ವರ ಸಂಕಲ್ಪ’ ಅಥವಾ ‘ದೈವಲೀಲೆ’ ಎಂಬುವ ಪುಸ್ತಕವನ್ನೂ ರಚಿಸಿದ್ದಾರೆ.

ಪಂಪ ಪ್ರಶಸ್ತಿ

ಬದಲಾಯಿಸಿ

ಕೃಷ್ಣಭಟ್ಟರ ‘ವಿಚಾರಪ್ರಪಂಚ’ಕ್ಕೆ ಪಂಪ ಪ್ರಶಸ್ತಿ ನೀಡಲಾಯಿತು.

ಸೇಡಿಯಾಪು ಕೃಷ್ಣಭಟ್ಟರ ತೀಡಿ ತಿದ್ದಿದ ಬರವಣಿಗೆಯಂತೆ ಅವರ ಬದುಕೂ ಸಹಾ ಸ್ಫಟಿಕ ಸದೃಶ. ಗಾಂಧೀಜಿಯವರ ‘ಪದಧ್ವನಿ’ಯಿಂದ ಪ್ರೇರಿತರಾಗಿದ್ದ ಕೃಷ್ಣಭಟ್ಟರು ಜೀವನಪೂರ್ತಿ ಅವರ ಮಾರ್ಗವನ್ನೇ ಅನುಸರಿಸಲು ಪ್ರಯತ್ನಿಸಿದರು. ಸೇಡಿಯಾಪು ಕೃಷ್ಣಭಟ್ಟರು ಬಾಲ್ಯದಿಂದಲೂ ಅನಾರೋಗ್ಯಪೀಡಿತ ದುರ್ಬಲ ಶರೀರಿಯಾಗಿದ್ದರೂ ಕೇವಲ ಸಂಕಲ್ಪಶಕ್ತಿ, ಮನೋದಾರ್ಢ್ಯಗಳಿಂದಾಗಿಯೇ ತೊಂಬತ್ತೈದು ವರ್ಷಗಳ ನಿಡುಗಾಲ ಬದುಕಿದರು. ತಮ್ಮ ‘ತಥ್ಯದರ್ಶನ’ದ ಆಂಗ್ಲ ಅನುವಾದ ಪ್ರಕಟವಾಗಬೇಕೆಂಬುದು ಅವರ ಆಸೆಯಾಗಿತ್ತ್ತು. ಅದನ್ನು ಜೂನ್ ೮, ೧೯೯೬ರಂದು ಪೂರೈಸಿದರು. ಅಂದೇ ಅವರ ತೊಂಬತ್ತೈದನೆಯ ಜನ್ಮದಿನವೂ ಆಗಿತ್ತು. ಕೃಷ್ಣಭಟ್ಟರ ಸನ್ಮಿತ್ರ ಡಾ. ಶಿವಾರಾಮಕಾರಂತರು ಆ ಅನುವಾದವವನ್ನು ಅನಾವರಣಗೊಳಿಸಿ, ಕೃಷ್ಣಭಟ್ಟರ ಕೈಗೊಪ್ಪಿಸಿದರು. ಅವರು ಪುಸ್ತಕದ ಪುಟಗಳ ಮೇಲೆ ಕೈಯಾಡಿಸಿ ಸಂತೋಷಪಟ್ಟರು. ಅಂದೇ ಮಧ್ಯರಾತ್ರಿ ಅವರ ಸಾರ್ಥಕ ಜೀವ ದುರ್ಬಲ ಶರೀರವನ್ನು ತ್ಯಜಿಸಿ ಪರಲೋಕವನ್ನು ಸೇರಿತು.

ಮಾಹಿತಿ ಕೃಪೆ

ಬದಲಾಯಿಸಿ

ಪ್ರೊ. ಎಮ್. ರಾಮಚಂದ್ರ ಅವರು ಬರೆದಿರುವ ಸೇಡಿಯಾಪು ಕೃಷ್ಣಭಟ್ಟರ ಕುರಿತಾದ ಸಾಲು ದೀಪಗಳು ಕೃತಿಯಲ್ಲಿನ ಲೇಖನ

ಕೃತಿಗಳು ಮತ್ತು ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ

ಚಂದ್ರಖಂಡ ಮತ್ತು ಇತರ ಕಾವ್ಯಗಳು ಇವರ ಮಹತ್ವದ ಕಾವ್ಯಸಂಗ್ರಹ, 'ಪಳಮೆಗಳು' ಕಥಾ ಸಂಕಲನ.

ಇವರು ಬರೆದ ವಿಚಾರ ಪ್ರಪಂಚ ಕೃತಿಗೆ ೧೯೯೪ರಲ್ಲಿ ಪಂಪ ಪ್ರಶಸ್ತಿ ಲಭಿಸಿತು.

ಛಂದೋಗತಿ ಕೃತಿಗೆ ವರ್ಧಮಾನ ಪ್ರಶಸ್ತಿ ದೊರೆತಿದೆ.

ಕೆಲವು ದೇಶನಾಮೆಗಳು ಕೃತಿಗೆ ಮೈಸೂರು ವಿಶ್ವವಿದ್ಯಾಲಯಸ್ವರ್ಣಮಹೋತ್ಸವ ಪುರಸ್ಕಾರ ಲಭಿಸಿದೆ.

ಕನ್ನಡ ಛಂದಸ್ಸುಗಳು ಇವರ ಮತ್ತೊಂದು ಮಹತ್ವದ ಕೃತಿ.

೧೯೭೨ರಲ್ಲಿ ಕರ್ನಾಟಕ ಸರ್ಕಾರ ಇವರನ್ನು ಶ್ರೇಷ್ಠ ವಿದ್ವಾಂಸರೆಂದು ಗೌರವಿಸಿದೆ.

ಪೂರಕ ಮಾಹಿತಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2005-01-19. Retrieved 2014-04-06.
  2. "ಸೇಡಿಯಾಪು ಕೃಷ್ಣಭಟ್ಟ". kanaja.in/. Retrieved 7-2-2014. {{cite web}}: Check date values in: |accessdate= (help)