ಸಿ.ವಿ.ಶಿವಶಂಕರ್

ಸಿ ವಿ ಶಿವಶಂಕರ್(ಚಿಟ್ಟನಹಳ್ಳಿ ವೆಂಕಟಕೃಷ್ಣಭಟ್ಟ ಶಿವಶಂಕರ್)ಅವರು ೧೯೩೩ ಮಾರ್ಚಿ ೨೩ರಂದು ತಿಪಟೂರಿನಲ್ಲಿ ಜನಿಸಿದರು. ಇವರ ತಾಯಿ ವೆಂಕಟಲಕ್ಷ್ಮಮ್ಮ ; ತಂದೆ ರಾಮಧ್ಯಾನಿ ವೆಂಕಟಕೃಷ್ಣಭಟ್ಟ. ಖ್ಯಾತ ಚಲನಚಿತ್ರಸಾಹಿತಿಗಳಾದ ಚಿ.ಸದಾಶಿವಯ್ಯ ಹಾಗೂ ಚಿ.ಉದಯಶಂಕರ್ ಅವರೂ ಈಗ ಚಂದ್ರಶೇಖರಪುರವೆಂದು ಕರೆಯಲ್ಪಡುವ ಇದೇ ಊರಿಗೆ ಸೇರಿದವರು. ಚಿಕ್ಕಂದಿನಿಂದ ಸಾಹಿತ್ಯ, ನಾಟಕ, ನಟನೆಯತ್ತ ಒಲವಿದ್ದ ಶಿವಶಂಕರ್, ವಂಶಪಾರಂಪರ್ಯವಾದ ಪೌರೋಹಿತ್ಯ, ಜ್ಯೋತಿಷ, ಶಾಸ್ತ್ರಾಧ್ಯಯನವಿರಲಿ, ಪ್ರೌಢಶಿಕ್ಷಣವನ್ನೂ ಅರ್ಧದಲ್ಲೇ ಬಿಟ್ಟು ಗುಬ್ಬಿವೀರಣ್ಣ ನಾಟಕಮಂಡಲಿ, ಅಲ್ಲಿಂದ ಸುಬ್ಬಯ್ಯನಾಯ್ಡುರವರ ಕರ್ನಾಟಕ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ ಸೇರಿದರು. ಹಲವಾರು ನಾಟಕಗಳನ್ನು ಬರೆದು, ಪ್ರಕಟಿಸಿ, ನಟಿಸಿ, ಭೇಷೆನಿಸಿಕೊಂಡರು. ಹೊರಗಡೆ ಕಲ್ಲುತೂರಾಟವಿದ್ದರೂ, ಮದರಾಸಿನಲ್ಲಿ ಕನ್ನಡ ನಾಟಕಗಳನ್ನಾಡಿಸಿದ ಕೆಚ್ಚೆದೆಯ ಕನ್ನಡಿಗ ಇವರೆನ್ನುವುದಕ್ಕೆ ಹೆಮ್ಮೆಯೆನಿಸುತ್ತದೆ.[೧]

ನಾಟಕರಂಗದಲ್ಲಿನ ದಿಗ್ಗಜರ ಒಡನಾಟ, ಡಾ||ರಾಜ್ ರಂತಹ ನಟರ ಸಹಯೋಗದಲ್ಲಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತದನಂತರ, ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಾ, ಸಂಭಾಷಣೆ-ಗೀತಸಾಹಿತ್ಯದತ್ತ ಒಲವು ಬೆಳೆಸಿಕೊಂಡರು. ಶುದ್ಧವಾದ ಹಾಗೂ ಸ್ಪಷ್ಟ ಉಚ್ಚಾರಣೆಯ ಇವರ ಭಾಷೆಗೆ ಮರುಳಾದ ಹಲವು ನಿರ್ದೇಶಕರು, ಆಗ ಮದರಾಸಿನಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಸುಲಭವಾಗಿ ಸಿಗುವ ತಮಿಳು ನಟ-ನಟಿಯರಿಗೆ ಕನ್ನಡ ಕಲಿಸಲು ಶಿವಶಂಕರರನ್ನು ನೇಮಿಸಿಕೊಂಡರು. ಅಲ್ಲಿಂದ ಆರಂಭಗೊಂಡ ಈ ಉಪಾಧ್ಯಾಯವೃತ್ತಿ, ಹಲವು ಗೀತಸಾಹಿತಿಗಳ ಸಾಹಿತ್ಯವನ್ನು ತಿದ್ದಿಕೊಟ್ಟು ಸೊಗಸಾದ ಚಿತ್ರಗೀತೆಗಳನ್ನು ನೀಡುವ ಕೆಲಸಕ್ಕೂ ಕರೆದೊಯ್ದಿತು. ಅಷ್ಟೇ ಅಲ್ಲದೆ ಈ 'ಮೇಷ್ಟ್ರು', ಹುಣಸೂರು ಕೃಷ್ಣಮೂರ್ತಿಯವರಂಥ ನಿರ್ದೇಶಕರ ಮನೆಯಲ್ಲೇ ಬಿಡಾರ ಹೂಡಿ ಚಿತ್ರಕತೆ ತಿದ್ದುತ್ತಾ, ತಮ್ಮ ಸಾಮರ್ಥ್ಯದಿಂದ ಅವರ ಸಹಾಯಕ ನಿರ್ದೇಶಕರಾಗುವ ಮಟ್ಟಕ್ಕೂ ಹೋದರು. ತದನಂತರ ತಾನೇ ನಿರ್ದೇಶಕನಾಗಿ, ನಿರ್ಮಾಪಕನಾಗಿ ಸ್ವಪ್ರಯತ್ನದಿಂದ ಮೇಲೆಬಂದ ಇವರು, ತಮ್ಮ ಕನ್ನಡಾಭಿಮಾನದ ಚಿತ್ರಗಳಿಂದ, ಗೀತೆಗಳಿಂದಲೇ ಜನರ ಮನವನ್ನು ಗೆದ್ದರು.

ಮಂಜುಳಾ, ದ್ವಾರಕೀಶ್, ತೂಗುದೀಪ ಶ್ರೀನಿವಾಸ್, ಕಲ್ಪನಾ, ಧೀರೇಂದ್ರ ಗೋಪಾಲ್ ರಂಥ ಹಲವು ಪ್ರತಿಭಾವಂತರನ್ನು ಮೊಟ್ಟಮೊದಲು, ಬಾಲನಟರನ್ನಾಗಿಯೋ, ಪ್ರಥಮವಾಗಿಯೋ, ಪೂರ್ಣಪ್ರಮಾಣದ ನಾಯಕ/ನಾಯಕಿಯರಾಗಿಯೋ ತೆರೆಗೆ ತಂದ ಕೀರ್ತಿ ಇವರದು. ವಿದ್ಯಾಸಾಗರ ಎಂಬ ಹೆಸರಿನ ಮುನಿಚೌಡಪ್ಪನನ್ನು ಕನ್ನಡಿಗರಿಗೆ 'ರಾಜೇಶ್' ಆಗಿ ಪರಿಚಯಿಸಿದ್ದು ಸಿ.ವಿ.ಶಿವಶಂಕರರೇ ಎಂದು ಬಹುಮಂದಿಗೆ ತಿಳಿದಿಲ್ಲ. ರತ್ನಂ ಎಂಬ ಸಂಗೀತರತ್ನವನ್ನು ಚಲನಚಿತ್ರಕ್ಕೆ ಕೊಟ್ಟ ವ್ಯಕ್ತಿಯೂ ಇವರೇ! ಇದಲ್ಲದೆ, ಗಿರಿಜಾ ಲೋಕೇಶ್, ಮಂಜುಳಾರಂಥ ನಟಿಯರಿಗೆ ನಾಟ್ಯ-ನಟನೆ ಕಲಿಸಿದ ಗುರು ಇವರು. ಇಂತಹ ಬಹುಮುಖ ವ್ಯಕ್ತಿತ್ವದ ಈ ಕನ್ನಡ ಕುವರ, ಹಲವಾರು ನಾಟಕಗಳನ್ನು ಬರೆದು ಪ್ರಕಟಿಸಿದ್ದೂ ಅಲ್ಲದೆ, ರೇಡಿಯೋ-ದೂರದರ್ಶನಕ್ಕಾಗಿ ಅವನ್ನು ನಿರ್ಮಿಸಿ, ನಿರ್ದೇಶಿಸಿ ಜನಪ್ರಿಯರಾದವರು. ಆಕಾಶವಾಣಿಯ 'ಕಂಪನಿಯ ಪೆಂಪು-ಇಂಪು' ಸರಣಿಯನ್ನು ನಡೆಸಿಕೊಡುತ್ತಾ ರಂಗದ ಪರದೆಯ ಒಳಗಿನ ನಾಟಕವನ್ನು ಹಾಸ್ಯದ ಮೂಲಕ ಬಿಚ್ಚಿಟ್ಟು ಹಳ್ಳಿಹಳ್ಳಿಯಲ್ಲೂ ಜನಪ್ರಿಯರಾದವರು ಇವರು.ಇವರ ಕನ್ನಡದ ಸಾಧನೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ ಇವರಿಗೆ "ಕನ್ನಡ ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಿತು.

ಕೃತಿಗಳುಸಂಪಾದಿಸಿ

ನಾಟಕಸಂಪಾದಿಸಿ

 • ರಾಣಿ-ರಾಜು ಬಿ.ಎ.
 • ಆರೋಗ್ಯಪಿಶಾಚಿ
 • ನಿತ್ರಾಣ ಸುಂದರಿ
 • ಮಾಧೂ ಮಗಳು

ಇತ್ಯಾದಿ

ಕಿರುಚಿತ್ರಸಂಪಾದಿಸಿ

 • ಎಳೆಯರ ಗೆಲುವು

ನಿರ್ದೇಶನಸಂಪಾದಿಸಿ

 • ನಮ್ಮ ಊರು
 • ಮನೆ ಕಟ್ಟಿ ನೋಡು
 • ಪದವೀಧರ
 • ಮಹಡಿಮನೆ
 • ಮಹಾತಪಸ್ವಿ
 • ನಮ್ಮ ಊರ ರಸಿಕರು
 • ಕನ್ನಡಕುವರ

ನಟನೆಸಂಪಾದಿಸಿ

 • ಶ್ರೀಕೃಷ್ಣಗಾರುಡಿ
 • ಭಕ್ತ ಕನಕದಾಸ
 • ಆಶಾಸುಂದರಿ
 • ಸ್ಕೂಲ್ ಮಾಸ್ಟರ್
 • ಸಂತ ತುಕಾರಾಂ

ಇತ್ಯಾದಿ

ಚಲನಚಿತ್ರ ಸಾಹಿತ್ಯಸಂಪಾದಿಸಿ

 • "ಬೆಳೆದಿದೆ ನೋಡಾ ಬೆಂಗಳೂರು ನಗರ..."
 • "ನಾ ನೋಡಿ ನಲಿಯುವ ಕಾರವಾರ..."
 • "ಸಿರಿವಂತನಾದರೂ ಕನ್ನಡನಾಡಲ್ಲೇ..."
 • "ಹೋಗದಿರಿ ಸೋದರರೇ..."
 • "ಕನ್ನಡದಾ ರವಿ ಮೂಡಿ ಬಂದಾ..."
 • "ನಾಡಚರಿತೆ ನೆನಪಿಸುವ ವೀರಗೀತೆಯ..."ಇತ್ಯಾದಿ

ಪುರಸ್ಕಾರಸಂಪಾದಿಸಿ

 • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
 • ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ರಾಜಕುಮಾರ್ ಪ್ರಶಸ್ತಿ.

ಉಲ್ಲೇಖಗಳುಸಂಪಾದಿಸಿ

 1. "C V Shivashankar". chiloka.com ,12 May 2017.