ಸದಸ್ಯ:Mithila N S/ನನ್ನ ಪ್ರಯೋಗಪುಟ
ಗದ್ಯ ಕಾವ್ಯ
ಬದಲಾಯಿಸಿ" ಗದ್ಯಂ ಕವೀನಾಂ ನಿಕಷಂ ವದಂತಿ" ಗದ್ಯರಚನೆ ಕವಿಯ ಪ್ರತಿಭೆಯನ್ನು ಪರೀಕ್ಷಿಸಬಹುದಾದ ಒರೆಗಲ್ಲೆಂಬ ಮಾತು , ಎಷ್ಟು ಪ್ರಾಚೀನವೋ ಅಷ್ಟೇ ನೂತನವೂ ಹೌದು. ಒಂದು ಗದ್ಯವು ಕಾವ್ಯದ ಗುಣಗಳನ್ನು, ಕಾವ್ಯದ ರಸಾಸ್ವಾದವನ್ನು
ನೀಡುವಂತಿದ್ದರೆ ಅದೇ ಗದ್ಯ ಕಾವ್ಯ. ಚಮತ್ಕಾರಯುತವಾದ ಪದಪ್ರಯೋಗ, ಅಲಂಕಾರಗಳ ಶೃಂಗಾರ, ವಿಶಿಷ್ಟ ವಾಕ್ಯ ರಚನೆ ಮತ್ತು ಛಂದಸ್ಸಿನ ಸಂಮೋಹಕತೆಯಿಂದಾಗಿ ಪದ್ಯ ಆಕರ್ಷಣೀಯವಾಗುವುದರಲ್ಲಿ ಆಶ್ಚರ್ಯವೇನಿಲ್ಲ.ಆದರೆ ಇವಾವುವನ್ನು ಆಪೇಕ್ಷಿಸದ, ಆಡುಮಾತಿಗೆ ಹತ್ತಿರವಾಗಿರುವ, ನಿರಾಭರಣವಾದ ಗದ್ಯ ಆಕರ್ಷಣೀಯವಾಗಬೇಕಾದರೆ ಕವಿ ತನ್ನ ಶಕ್ತಿ ಸಾಮರ್ಥ್ಯ್ಯಗಳನ್ನೆಲ್ಲ ಮೀರಿ, ಕಾವ್ಯವನ್ನು ರಚಿಸಬೇಕು . ಗದ್ಯ ಕಾವ್ಯವು ಭಾವಾರ್ಥಾನುಗುಣವಾದ ಲಯದಲ್ಲಿರುತ್ತದೆ. ಕಾವ್ಯಕ್ಕೆ ವಿಷಯ ಗೌಣವಾದರೂ ಚಿಂತೆಯಿಲ್ಲ, ಕಾವ್ಯಕ್ಕೆ ಶೈಲಿ ಬಹಳ ಮುಖ್ಯ. ಗದ್ಯಕಾವ್ಯದಲ್ಲಿ ವಿಷಯದ ಸಂಘಟನೆ, ಭಾಷೆಯ ರಚನೆ ಹಾಗೂ ಅಭಿವ್ಯಕ್ತಿ ಕ್ರಮದಲ್ಲಿ ವಿಶಿಷ್ಟತೆ ಇರುತ್ತದೆ. ಗದ್ಯವು ನಡೆದಾಡುವ ಕ್ರಿಯೆ ಆದರೆ ಪದ್ಯವು ನೃತ್ಯ ಮಾಡುವ ಕ್ರಿಯೆ ಎಂದು ಪರಿಣಿತರು ಪದ್ಯ ಹಾಗೂ ಗದ್ಯಗಳ ಸ್ವರೂಪವನ್ನು ಸೂಚ್ಛವಾಗಿ ಹೇಳಿದ್ದಾರೆ. 'ಗದ್' ಎಂದರೆ ಮಾತನಾಡುವುದು ಎಂದರ್ಥವಾಗುವುದು: ಪ್ರಾಸ, ಗುಣ ಈ ನಿಯಮವಿಲ್ಲದೆ ಅರ್ಥ ಸಹಿತವಾದ ಶಬ್ದಗಳಿಂದ ಕೂಡಿದ ವಾಕ್ಯಗಳಿಂದ ಬರೆಯಲ್ಪಡುವುದಕ್ಕೆ ಗದ್ಯವೆನ್ನಬಹುದು. ಆದರೆ ಈ ಅರ್ಥವನ್ನು ಮೀರಿದ ' ಗದ್ಯ ಕಾವ್ಯ' ವೆಂಬ ಅರ್ಥ ಸಂಸ್ಕೃತ ವಾಙ್ಮಯದಲ್ಲಿದೆ. ಕನ್ನಡದಲ್ಲಿಯೂ ಗದ್ಯವೂ ಸಾಹಿತ್ಯದ ಒಂದು ಪ್ರಕಾರವೆಂದು ಕವಿರಾಜಮಾರ್ಗದಿಂದಲೇ ತಿಳಿದುಬರುತ್ತದೆ.
ಸಾಮಾನ್ಯವಾಗಿ ಶಾಸನಗಳೆಲ್ಲ ಗದ್ಯ ಪದ್ಯ ಸಮ್ಮಿಶ್ರಿತವಾಗಿದೆ . ಅಲ್ಲೊಂದು ಇಲ್ಲೊಂದು ಮಾತ್ರ ಪೂರ್ಣ ಪ್ರಮಾಣದ ಗದ್ಯಮಯವಾಗಿವೆ. ಕೆಲವೊಮ್ಮೆ ಕವಿಗಳೇ ಶಾಸನ ರಚಕರಾದಾಗ ಕಾವ್ಯಗುಣಗಳು ಯಥೇಷ್ಟವಾಗಿರುತ್ತವೆ. ಆದರೆ ಶಾಸನಗಳಲ್ಲಿ ಕಾವ್ಯಾಂಶಗಳನ್ನು ಹುಡುಕುವುದು ಹತ್ತಿಯ ಹೂವಿನಲ್ಲಿ ಪರಿಮಳವನ್ನರಸಿದಂತೆ ಆಗುತ್ತದೆ. ವೀರಗಲ್ಲು, ಮಾಸ್ತಿಕಲ್ಲುಗಳಲ್ಲಂತು ಗದ್ಯರಚನೆಯೇ ಪ್ರಧಾನ. ಉದಾಹರಣೆಗೆ:- ಹಲ್ಮಿಡಿ ಶಾಸನ ಗದ್ಯದಲ್ಲಿದ್ದರೂ ಅನಂತರದ ಬಹುತೇಕ ಶಾಸನಗಳು ಗದ್ಯ-ಕಾವ್ಯ ಮಿಶ್ರಿತವಾಗಿದೆ. ಅಲ್ಲೊಂದು ಇಲ್ಲೊಂದು ಪೂರ್ಣ ಗದ್ಯ ರೂಪದ ಶಾಸನಗಳು ಲಭ್ಯವಾಗಿದೆ. ಇವುಗಳ ಗದ್ಯವೂ ಕೂಡಾ " ಶ್ರೀಮಂತರ ಮನೆಯ ತೊತ್ತಿನಂತೆ" ಪದ್ಯ ಶಾಸನಗಳ ನಡುವೆ ಸಂಕಷ್ಟದಲ್ಲಿದ್ದುದನ್ನು ಹು.ಕಾ.ಜಯದೇವ್ ತೋರಿಸುತ್ತಾರೆ. ಸುಮಾರು ಕ್ರಿ.ಶ.೮೦೦ ರ ಸೊರಬದ ವೀರಗಲ್ಲು ಶಾಸನ ಮುಂತಾದ ಕೆಲವು ಶಾಸನಗಳಲ್ಲಿ ಭಾಷೆಯು ನಾಟಕೀಯತೆ , ವರ್ಣನೆ, ದೃಷ್ಟಾಂತ , ದೃಶ್ಯಕಲ್ಪನೆ ಮುಂತಾದ ಸಾಹಿತ್ಯಕವಾದ ಅಂಶಗಳನ್ನು ಒಳಗೊಂಡಿರುವುದನ್ನು ನಾವು ಗಮನಿಸಬಹುದಾಗಿದೆ, ಈ ಗುಣ ಇಲ್ಲಿಂದ ಮುಂದಿನ ಶಾಸನಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿ ಕೊಂಡಿದೆ. ಇದು ಭಾಷೆಗೆ ಭಾವಾಭಿವ್ಯಕ್ತಿಯ ಕನಸು ಕಾಲನುಕ್ರಮದಲ್ಲಿ ಕೈಗೂಡುತ್ತಿರುವುದನ್ನು ಸೂಚಿಸುವ ಅಂಶವಾಗಿದೆ. ಇದರೊಂದಿಗೆ " ಗದ್ಯ-ಪದ್ಯಾತ್ಮಕ ಶಾಸನಗಳ ಗದ್ಯ ಭಾಗ ಕೂಡಾ ಗಮನಾರ್ಹವಾದುದಾಗಿದೆ. ಇಲ್ಲಿ ಗದ್ಯವನ್ನು ಕೇವಲ ಇತಿವೃತ್ತನಿರೂಪಣೆಗೆ ಬಳಸುವುದು ಸಾಮನ್ಯ ವಾದರೂ , ಸಂಸ್ಕೃತ ಕನ್ನಡಗಳ ಹಿತಮಿತ ಮಿಶ್ರಣ ಶಾಸನ ಗದ್ಯಕ್ಕೆ ಹೊಸಚೆಲುವನ್ನು ದೊರಕಿಸಿಕೊಟ್ಟಿರುವುದುಂಟು. ಪದ್ಯದ ಕಾವ್ಯಗುಣ ಇಂಥ ಕಡೆ ಗದ್ಯದ ಬಳಕೆಯಲ್ಲಿಯೂ ಪ್ರಭಾವ ಬೀರಿರುವುದುಂಟು.
"ಪ್ರಾಚೀನ ಸಾಹಿತ್ಯದಲ್ಲಿನ ಗದ್ಯ-ಪದ್ಯವೆಂಬ ಪ್ರಕಾರಗಳು ಛಂದಸ್ಸುನ್ನು ಬಳಸುವ ಹಾಗೂ ಬಳಸದ ಎರಡು ಅಭಿವ್ಯಕ್ತ ವಿಧಾನಗಳು ಅಷ್ಟೆ. ಪದ್ಯಕ್ಕೂ ಕಾವ್ಯಕ್ಕೂ ಕಡ್ಡಾಯ ಸಂಬಂಧವಿಲ್ಲ. ಪದ್ಯವು ಛಂದಸ್ಸಿನ ನಿಯಮಗಳಿಗೆ ಅನುಸಾರವಾಗಿ ರಚನೆಯಾಗುತ್ತಿದ್ದರೆ, ಗದ್ಯವು ಈ ನಿಯಮಗಳನ್ನು ಅನುಸರಿಸದೆ ಮುಕ್ತವಾಗಿ ರಚನೆಯಾಗಿತ್ತು. ಹೀಗಾಗಿ ಪದ್ಯವು ಕಾವ್ಯಕ್ಕಿಂತ ಹೆಚ್ಚಾಗಿ ವ್ಯಾಕರಣ, ಛಂದಸ್ಸು ಮುಂತಾದ ಶಾಸ್ತ್ರಗಳ ಅಭಿವ್ಯಕ್ತಿಗೆ ಬಳಸಲಾಯಿತು." ೨೦ನೇ ಶತಮಾನದ ಆದಿಯಲ್ಲಿ ಮಹಾಕವಿ ಮುದ್ದಣ ರಚಿಸಿದ ಹಳಗನ್ನಡದ ಗದ್ಯ ಕಾವ್ಯ 'ರಾಮಾಶ್ವಮೇಧ' .ರಾಮಾಶ್ವಮೇಧ, ರಾಮನ ಅಶ್ವಮೇಧಯಾಗದ ಕಥೆಯಾದರೂ , ಮುದ್ದಣ ಮತ್ತು ಅವನ ಪತ್ನಿ ಮನೋರಮೆ ಆ ಕಾವ್ಯದೊಳಗೆ ಸೂತ್ರಧಾರ ನಟಿಯರಂತೆ ಬಂದು ಪಾತ್ರವಹಿಸುತ್ತಾರೆ. ಹಾಗಾಗಿ ಮುದ್ದಣ ಮನೋರಮೆಯ ಸಂಭಾಷಣೆ ಒಂದು ಗದ್ಯ ಕಾವ್ಯದಂತೆ ಇದೆ. ಮುದ್ದಣ ತನ್ನ ಶ್ರೀ ರಾಮಾಶ್ವಮೇಧದಲ್ಲಿ ಮನೋರಮೆಗೆ ಕಥೆ ಹೇಳತೊಡಗುತ್ತಾನೆ. ಪದ್ಯದಲ್ಲಿ ಹೇಳಲೋ ಗದ್ಯದಲ್ಲೋ ಎಂದು ಕೇಳಿದಾಗ ಆಕೆ " ಪದ್ಯಂ ವಧ್ಯಂ, ಗದ್ಯಂ ಹೃದ್ಯಂ, ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು" ಎನ್ನುತ್ತಾಳೆ. ಹೀಗೆ ' ಗದ್ಯದಲ್ಲಿ ಕಥೆ ಹೇಳಿದರೆ ನನಗೇನು ಕೊಡುವೆ?' ಎಂದು ಕವಿ ಕೇಳುವ ಮಾತಿನಲ್ಲಿ ಗದ್ಯವು ದುಡಿಮೆ, ಗೌರವ, ಮಾನ-ಸನ್ಮಾನಗಳಿಗೆ ಅರ್ಹವಾಗಿರಲಿಲ್ಲವೆಂಬ ಭಾವ ಅಂತರ್ಗತವಾಗಿರುವಂತೆ ಕಾಣುತ್ತದೆ. 'ವಸುದೇವ ಹಿಂಡಿ' ಪ್ರಾಕೃತದ ಬಹು ವಿಶಾಲವಾದ ಗದ್ಯ ಗ್ರಂಥವಾದರೆ, 'ಕಹಾವಲಿ' ಯು ನಡುನಡುವೆ ಕ್ವಚಿತ್ತಾಗಿ ಪದ್ಯಗಳನ್ನು ಒಳಗೊಂಡಿದೆ.
ಕನ್ನಡದ ಮೊಟ್ಟಮೊದಲ ಗದ್ಯಕಾವ್ಯ ವಡ್ಡಾರಾಧನೆ. ಇದು ಶಿವಕೋಟ್ಯಾಚಾರ್ಯರು ಕ್ರಿ.ಶ.೯೩೦ ರಲ್ಲಿ ರಚಿಸಿದರು. ಇದರಲ್ಲಿ ಹತ್ತೊಂಬತ್ತು ಕಥೆಗಳಿವೆ. ದುರ್ಗನರಸಿಂಹನ 'ಪಂಚತಂತ್ರ' ದ ಕಥೆಯಲ್ಲಿ ಬರುವ ಆರಂಭಿಕ ಸಾಲುಗಳು ನಾಂದಿಪದ್ಯವನ್ನೇ ಹೋಲುವಂತಿದೆ. ಉದಾ:- 'ಒಂದು ಮಹಾಟವಿಯೊಳ್ ಕಂಬಳಕನೆಂಬ ಪುಲಿ ತನ್ನ ನಟ್ಟಿವರೆ ದೆಸೆಗಾಣದೆ ಪುರಾಣಕೂಪದೊಳ್ ಬಿರ್ದಂ' ಈ ಸಾಲುಗಳು ಹಳೆಗನ್ನಡ ರೂಪದಲ್ಲಿದ್ದರೂ ಸಾಹಿತ್ಯಾತ್ಮಕವಾಗಿ ಪದ್ಯಕ್ಕೆ ಹಾಗೂ ಸಂಗೀತಕ್ಕೆ ಅಳವಡಿಸಿ ಹಾಡಬಹುದು. ಆದ್ದರಿಂದ ಇದನ್ನು ಗದ್ಯ ಕಾವ್ಯ ಎನ್ನಬಹುದು. ಹಳೆಗನ್ನಡದಲ್ಲಿ ಗದ್ಯ ಪದ್ಯಗಳ ಎರಡೂ ಪ್ರಕಾರಗಳನ್ನು ಉಪಯೋಗಿಸಿದ ಕಾವ್ಯ ಪ್ರಕಾರ ಚಂಪೂ ಕಾವ್ಯ . ಇದರಲ್ಲಿ ಪ್ರಾಚೀನ ಗ್ರಂಥಗಳಾದ ಜಾತಕಮಾಲ, ಪಂಚತಂತ್ರ ಮುಂತಾದ ಕಥೆಗಳಲ್ಲಿ ಗದ್ಯಪದ್ಯ ಮಿಶ್ರಣ ಕಂಡುಬರುತ್ತದೆ. ಅವುಗಳಲ್ಲಿ, ಗದ್ಯದಲ್ಲಿ ವಿವರಿಸಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಪದ್ಯಗಳನ್ನು ಬಳಸಲಾಗುತ್ತದೆ.ಚಂಪೂ ಸಾಹಿತ್ಯದಲ್ಲಿ ಹಲವಾರು ಕಥೆಗಳು ಗದ್ಯಪದ್ಯಗಳ ಮಿಶ್ರಣಗೊಂಡಿದೆ.ಅದಲ್ಲದೆ, ಗದ್ಯಕ್ಕಿಂತ ಪದ್ಯವೇ ಹೆಚ್ಚಾಗಿರುತ್ತದೆ. ಚಂಪೂವಿನಲ್ಲಿ ಆರು ವೃತ್ತಗಳು ಹೆಚ್ಚಾಗಿ ಬಳಕೆಯಾಗಿದ್ದು. ತ್ರಿಪದಿ, ಅಕ್ಕರ, ರಗಳೆಗಳೂ ಪ್ರಯೋಗಗೊಂಡಿವೆ.
ಸತ್ವದ ದೃಷ್ಟಿಯಿಂದ ಪ್ರತಿಭಾಪೂರ್ಣ ಗದ್ಯ- ಪದ್ಯಗಳ ನಡುವೆ ಅಂಥಾ ವ್ಯತ್ಯಾಸವಿರುವಂತೆ ಗೋಚರಿಸುವುದಿಲ್ಲ. ಅದೇನಿದ್ದರೂ ಸಾಮಾನ್ಯ ಓದುಗರ ಪಾಲಿಗೆ ಸರಳ- ಸುಲಭದ ಗ್ರಹಿಕೆಗೆ ಅನುವಾಗುವ ಹಾಗೂ ಅನುವಾಗದಿರುವ ಸಂಗತಿಯಷ್ಟ.