ಕನ್ನಡ ನವೋದಯದ ಮುಂಗೋಳಿ ಎಂದು ಪ್ರಸಿದ್ಧರಾದ. ಮುದ್ದಣ (೧೮೭೦-೧೯೦೧) - ಕನ್ನಡ ಸಾಹಿತ್ಯಲೋಕದಲ್ಲಿ ಮಹಾಕವಿ ಎಂದು ಖ್ಯಾತಿಪಡೆದ ಕವಿ/ಸಾಹಿತಿ. ಮುದ್ದಣ ಅವರ ನಿಜ ನಾಮಧೇಯ ಲಕ್ಷ್ಮೀನಾರಣಪ್ಪ. ಹುಟ್ಟೂರು ನಂದಳಿಕೆಯಾದ್ದರಿಂದ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬ ಹೆಸರು ಕೂಡ ಇವರಿಗಿದೆ[]. ರತ್ನಾವತಿ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ ಮತ್ತು ಶ್ರೀ ರಾಮಾಶ್ವಮೇಧ ಮುದ್ದಣ ಅವರು ಬರೆದಿರುವ ಕೆಲವು ಮುಖ್ಯವಾದ ಕೃತಿಗಳು. ಅನಾರೋಗ್ಯ ಮತ್ತು ಬಡತನದಿಂದ ಬಳಲಿದ ಮುದ್ದಣ, ಕಿರಿಯ ವಯಸ್ಸಿಗೆ ಇಹಲೋಕ ಯಾತ್ರೆ ಮುಗಿಸಿದರು. ಕರ್ನಾಟಕದಲ್ಲಿನ ಶಾಲಾ ಕಾಲೇಜುಗಳಲ್ಲಿನ ಕನ್ನಡ ಸಾಹಿತ್ಯ ಪಠ್ಯಗಳಲ್ಲಿ ಮುದ್ದಣನವರ ಪದ್ಯ/ಗದ್ಯಗಳು ಹಾಸು ಹೊಕ್ಕಾಗಿವೆ.

ಮುದ್ದಣ
ನಂದಳಿಕೆ ಲಕ್ಷ್ಮಿನಾರಣಪ್ಪ
ಜನನಜನವರಿ 24, 1870
ನಂದಳಿಕೆ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
ಮರಣಫೆಬ್ರವರಿ 15, 1901
ಮೈಸೂರು, ಕರ್ನಾಟಕ, ಭಾರತ
ಅಂತ್ಯ ಸಂಸ್ಕಾರ ಸ್ಥಳಉಡುಪಿ
ಕಾವ್ಯನಾಮಮುದ್ದಣ
ವೃತ್ತಿಕವಿ, ದೈಹಿಕ ಶಿಕ್ಷಕ
ರಾಷ್ಟ್ರೀಯತೆಕನ್ನಡಿಗ
ಕಾಲ೧೯ನೆಯ ಶತಮಾನ
ಪ್ರಕಾರ/ಶೈಲಿಮಹಾಕಾವ್ಯ, ಯಕ್ಷಗಾನ ಪ್ರಸಂಗಗಳು
ಬಾಳ ಸಂಗಾತಿಕಮಲಾ ಬಾಯಿ
ಮಕ್ಕಳುರಾಧಾಕೃಷ್ಣ


ಲಕ್ಷ್ಮಿನಾರಣಪ್ಪ ೧೮೭೦ರ ಜನವರಿ ೨೪ರಂದು ನಂದಳಿಕೆಯಲ್ಲಿ ಜನಿಸಿದರು.ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಸೇರಿದ ಒಂದು ಗ್ರಾಮ. ಈತನ ತಂದೆ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಶ್ಮಿ. ತಂದೆ ಕ್ರಿ. ಶ. ೧೮೩೯ರಲ್ಲಿ ಹುಟ್ಟಿದರೆಂದೂ, ತಾಯಿ ಕ್ರಿ. ಶ. ೧೮೫೪ರಲ್ಲಿ ಹುಟ್ಟಿದರೆಂದೂ ಹೇಳುತ್ತಾರೆ. ಇವರು ಮದುವೆಯಾಗಿ ಸಂಸಾರ ಹೂಡಿ ನಂದಳಿಕೆಯಲ್ಲಿ ನೆಲೆಯಾಗಿ ನಿಂತ ವೇಳೆ ತಿಮ್ಮಪ್ಪಯ್ಯ ಊರ ದೇವಸ್ಥಾನದಲ್ಲಿ ಪಾಟಾಲಳಿಯಾಗಿ ಕೆಲಸದಲ್ಲಿ ಇದ್ದರೆಂದು ಹೇಳುತ್ತಾರೆ. ಗಂಡ ದೇವರ ಊಳಿಗದಲ್ಲಿ ತೊಡಗಿದಂದು ಹೆಂಡತಿ ಗಂಡನ ಸೇವೆ, ದೇವರ ಸೇವೆ, ಮನೆಗೆಲಸಗಳಲ್ಲಿ ನಿರತಳಾಗಿದ್ದಳೆಂದು ಊಹಿಸಬಹುದಾಗಿದೆ. ತಿಮ್ಮಪ್ಪಯ್ಯನವರಿಗೆ ಮೂವತ್ತು ವರ್ಷವೂ, ಮಹಾಲಕ್ಷ್ಮಮ್ಮನವರಿಗೆ ಹದಿನೈದು ವರ್ಷವೂ ವಯಸ್ಸಾಗಿದ್ದಾಗ ಇವರ ಹಿರಿಯಮಗನಾಗಿ ಲಕ್ಶ್ಮೀನಾರಾಯಣನು ಹುಟ್ಟಿದನು. ಈತ ಹುಟ್ಟಿದ್ದು ಶುಕ್ಲ ಸಂ||ರದ ಪುಷ್ಯ ಬಹುಳ ಅಷ್ಟಮಿ ಸೋಮವಾರ. ಮುದ್ದಾಗಿ ಕಾಣುತ್ತಿದ್ದನಾದ್ದರಿಂದ ಆತನನ್ನು ಎಲ್ಲರೂ ಮುದ್ದಣ ಎಂದು ಕರೆಯಲು ಪ್ರಾರಂಭಿಸಿದರು ಎಂದು ತಿಳಿದು ಬಂದಿದೆ. ಹುಡುಗ ಬೆಳೆದು ಬುದ್ಧಿ ತಿಳಿದ ಮೇಲೆ ತನ್ನ ತಾಯಿ ಪ್ರೀತಿಯಿಂದ ಕರೆದ ಹೆಸರನ್ನೇ ತನ್ನ ಕಾವ್ಯ ನಾಮವನ್ನಾಗಿ ಆರಿಸಿಕೊಂಡನು.

ಪ್ರಾರಂಭಿಕ ದಿನಗಳು

ಬದಲಾಯಿಸಿ

ನಂದಳಿಕೆಯಲ್ಲಿ ಮುರೂರು ಚರಡಪ್ಪನವರು ಸ್ಥಾಪಿಸಿದ ಪಾಠಶಾಲೆಯಲ್ಲಿ ಇವರ ಪ್ರಾಥಮಿಕ ಶಿಕ್ಷಣ ನಡೆಯಿತು. ಉಡುಪಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಬಳಿಕ ಬಿಟ್ಟು ಶಿಕ್ಷಕರ ತರಬೇತಿ ಶಾಲೆಗೆ ಸೇರಿದರು. ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನು ಮನೆಯಲ್ಲಿಯೇ ಕಲಿಯತೊಡಗಿದರು. ಶಿಕ್ಷಕರ ತರಬೇತಿ ಶಾಲೆಯಲ್ಲಿ ಉತ್ತೀರ್ಣರಾಗುವುದರ ಜೊತೆಗೆ ಯಕ್ಷಗಾನವನ್ನು ರಚಿಸುವ ಸಾಮರ್ಥ್ಯವನ್ನೂ ಪಡೆದರು. ಗಟ್ಟಿ ಮುಟ್ಟಾಗಿ ಕಂಡುಬಂದ ಇವರನ್ನು ಸ್ಕೂಲಿನ ಮುಖ್ಯೋಪಾಧ್ಯಾಯರು ಅಂಗಸಾಧನೆಯಲ್ಲಿ ಹೆಚ್ಚಿನ ಪರಿಶ್ರಮ ಗಳಿಸುವ ಸಲುವಾಗಿ ಮದರಾಸಿಗೆ ಕಳುಹಿಸಿಕೊಟ್ಟರು. ಮದರಾಸಿನಲ್ಲಿ (ಇಂದಿನ ಚೆನ್ನೈ) ಅಂಗಸಾಧನೆಯ ಜೊತೆಗೆ ತಮಿಳು ಮಲೆಯಾಳಿ ಭಾಷಾ ಸಾಹಿತ್ಯಗಳ ಪರಿಚಯವನ್ನೂ ಪ್ರಯತ್ನಿಸಿದಂತೆ ತೋರುತ್ತದೆ. ಶ್ರೀ ಎಚ್. ನಾರಾಯಣ ರಾಯರು, , ಶ್ರೀ ಬೆನಗಲ್ ರಾಮರಾಯರು ಮುಂತಾದವರ ಸಹಾಯದಿಂದ ದ್ರಾವಿಡ ಭಾಷೆಗಳಿಗೆ ಸಂಬಂಧಪಟ್ಟ ಅನೇಕ ಟಿಪ್ಪಣಿಗಳನ್ನು ರಚಿಸಿದ್ದರೆಂದು ಹೇಳುತ್ತಾರೆ. ಮದರಾಸಿನಿಂದ ಹಿಂದಿರುಗಿದ ಮೇಲೆ ಉಡುಪಿಯ ಹೈಸ್ಕೂಲಿನಲ್ಲಿ ಲಕ್ಶ್ಮೀನಾರಾಯಣನಿಗೆ ವ್ಯಾಯಾಮ ಶಿಕ್ಷಕನ ಕೆಲಸ ದೊರೆಯಿತು. ದೈಹಿಕ ಶಿಕ್ಷಕನಾಗಿ ಉಡುಪಿಯಲ್ಲಿ ನೆಲೆಸಿದ್ದು ೧೮೮೯ನೆಯ ಮೇ ತಿಂಗಳಲ್ಲಿ. ಈ ವೃತ್ತಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಇಲ್ಲಿ ಇದ್ದರೆಂದು ತೋರುತ್ತದೆ. ಈ ಅವಧಿಯಲ್ಲಿ ಮಳಲಿ ಸುಬ್ಬರಾಯರೆಂಬ ಅದೇ ಶಾಲೆಯ ಉಪಾಧ್ಯಾಯರ ಪರಿಚಯ ಇವರಿಗಾಯಿತು. ಸುಬ್ಬರಾಯರೂ ಗ್ರಂಥಕರ್ತರು. ಅವರು ತಾವು ರಚಿಸಿದ ಕೃತಿಗಳನ್ನು ಲಕ್ಶ್ಮೀನಾರಾಯಣರಿಗೆ ಓದಲು ಕೊಟ್ಟರು. ತಮ್ಮ ಸ್ವಕೀಯ ಪುಸ್ತಕಭಂಡಾರದ ಗ್ರಂಥಗಳನ್ನೂ ಕೊಟ್ಟರು. ಲಕ್ಶ್ಮೀನಾರಾಯಣರು ಅನೇಕ ಯಕ್ಷಗಾನ ಪ್ರಸಂಗಗಳನ್ನು ಓದಿದರು. ಬಳಿಕ ಸುಬ್ಬರಾಯರ ಮಾರ್ಗದರ್ಶನದಲ್ಲಿ ಲಕ್ಶ್ಮೀನಾರಾಯಣಪ್ಪ `ರತ್ನಾವತಿ ಕಲ್ಯಾಣ' ಎಂಬ ಕೃತಿಯನ್ನು ರಚಿಸಿದರು. ಮುದ್ದಣ ಉಡುಪಿಯ ಕ್ರಿಶ್ಚ್ಯನ್ ಹೈಸ್ಕೂಲ್‍ನಲ್ಲಿ ಕೂಡ ಸೇವೆ ಸಲ್ಲಿಸಿದ್ದರು.

ಸಾಂಸಾರಿಕ ಜೀವನ

ಬದಲಾಯಿಸಿ

೧೮೯೩ರಲ್ಲಿ ಲಕ್ಷ್ಮಿನಾರಣಪ್ಪರ ವಿವಾಹ ಕಮಲಾಬಾಯಿ ಎಂಬರೊಂದಿಗೆ ನಡೆಯಿತು. ಇವರು ಮೈಸೂರು ಸೀಮೆಯ ಶಿವಮೊಗ್ಗ ಜಿಲ್ಲೆಯ ಕಾಗೇಗೋಡುಮಗ್ಗಿಯವರು. ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕ. ರಾಮಾಶ್ವಮೇಧಗಳನ್ನು ಇವರು ಮದುವೆಯ ಬಳಿಕವಷ್ಟೇ ಬರೆದದ್ದು ಎನ್ನಲಾಗಿದೆ. ರಾಮಾಶ್ವಮೇಧದಲ್ಲಿ ಬರುವ ಮುದ್ದಣ-ಮನೋರಮೆಯರ ಸರಸ ಸಂವಾದ ಭಾಗ ರಸಿಕ ಲಕ್ಶ್ಮೀನಾರಾಯಣರ ಸರಸ ಸಂಸಾರ ಚಿತ್ರದ ಒಂದು ಮುಖ ಎನ್ನುತ್ತಾರೆ. ೧೮೯೮ ಇವರಿಗೆಒಬ್ಬ ಮಗ ಹುಟ್ಟಿದನು. ಈತನಿಗೆ ರಾಧಾಕೃಷ್ಣನೆಂದು ಹೆಸರಿಟ್ಟರು.

ಕ್ಷಯ ರೋಗ ಮತ್ತು ತೀವ್ರ ಬಡತನದಿಂದ ಅಂತಿಮ ದಿನಗಳನ್ನು ಕಳೆದ ಮುದ್ದಣ, ೩೧ರ ಕಿರಿಯ ವಯಸ್ಸಿನಲ್ಲಿ ೧೫ ಫೆಬ್ರುವರಿ ೧೯೦೧ರಂದು ಮರಣ ಹೊಂದಿದರು.

ಬರವಣಿಗೆಗಳು ಮತ್ತು ಕೃತಿಗಳು

ಬದಲಾಯಿಸಿ

ಕಿರಿಯ ವಯಸ್ಸಿನಲ್ಲಿಯೇ ಪ್ರತಿಭಾವಂತ ಕವಿಯಾಗಿ ರೂಪುಗೊಂಡಿದ್ದ ಮುದ್ದಣನವರು ನಾಚಿಕೆ ಸ್ವಭಾವದವರೂ ಹಾಗು ಅತ್ಯಂತ ವಿನಯವಂತರೂ ಆಗಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣದಿಂದ ಅವರು ತಮ್ಮ ಅದ್ಭುತ ರಾಮಾಯಣಂ(ಹೊಸಗನ್ನಡ ಗದ್ಯಶೈಲಿ), ಶ್ರೀರಾಮ ಪಟ್ಟಾಭಿಷೇಕಂ (೨೪೨ ಷಟ್ಪದಿ ಶೈಲಿ ಪದ್ಯಗಳು), ಹಾಗೂ ಶ್ರೀ ರಾಮಾಶ್ವಮೇಧಂ (ಮುದ್ದಣನ ಶ್ರೇಷ್ಠ ಕೃತಿಯೆಂದು ವಿಮರ್ಶಕರು ಅಭಿಪ್ರಾಯಪಟ್ಟಿರುವ) ಕೃತಿಗಳನ್ನು ಬೇರೊಬ್ಬರ ಹೆಸರಿನಲ್ಲಿ ಪ್ರಕಾಶನಕ್ಕೆ ಕಳಿಸಿದರು. ಈ ಕೃತಿಗಳು ಪ್ರಾಚೀನ ಸಾಹಿತಿಗಳಿಂದ ರಚಿತವಾದದ್ದೆಂದೂ, ಅವರ ವಂಶಸ್ಥರಿಂದ ತನಗೆ ದೊರೆತದ್ದೆಂದು, ಆ ವಂಶಸ್ಥರ ಬಗ್ಗೆ ಈಗ ಯಾವುದೇ ಮಾಹಿತಿಗಳಿಲ್ಲವೆಂದೂ ಪ್ರಕಾಶಕರಿಗೆ ತಿಳಿಸಿದರು. ಈ ಕೃತಿಗಳನ್ನು ಮೊದಲ ಬಾರಿಗೆ, ೧೮೯೫, ೧೮೯೬ ಮತ್ತು ೧೮೯೯-೧೯೦೧ರಲ್ಲಿ, ಮೈಸೂರಿನಲ್ಲಿರುವ ಶ್ರೀ ಎಂ.ಎ.ರಾಮಾನುಜ ಅಯ್ಯಂಗಾರ್ ಮತ್ತು ಶ್ರೀ ಎಸ್.ಜಿ.ನರಸಿಂಹಾಚಾರ್ ಅವರು ಪ್ರಕಾಶಿಸುವ ಕರ್ನಾಟಕ ಕಾವ್ಯ ಮಂಜರಿ ಮತ್ತು ಕರ್ನಾಟಕ ಕಾವ್ಯ ಕಲಾನಿಧಿ ಎಂಬ ಪತ್ರಿಕೆಗಳಲ್ಲಿ ಪ್ರಕಟಿಸಲಾಯಿತು. ಮುದ್ದಣನು ಇದಕ್ಕೆ ಮುಂಚೆಯೇ ಹಲವಾರು ಬಾರಿ ಪ್ರಾಚೀನ ಕೃತಿಗಳನ್ನು ಪ್ರಕಟಣೆಗಾಗಿ ಕಳಿಸಿದ್ದರಿಂದ, ಪ್ರಕಾಶಕರು ಈ ಮೂರೂ ಕೃತಿಗಳೂ ಕೂಡ ಪ್ರಾಚೀನವಾದುವೇ! ಎಂದು ನಂಬಿದರು. ನಂತರ ನಿಜ ವಿಷಯ ಬೆಳಕಿಗೆ ಬಂದದ್ದು, ವರ್ಷ ೧೯೨೯ರಲ್ಲಿ (ಅಂದರೆ, ಮುದ್ದಣನ ಮರಣವಾಗಿ ೨೮ ವರ್ಷಗಳ ನಂತರ) ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಮುದ್ದಣ ಸ್ಮರಣ ಸಂಚಿಕೆಯನ್ನು ಪ್ರಕಟಿಸಿದರು.ಆ ಸಂದರ್ಭದಲ್ಲಿ, ಮುದ್ದಣನ ಸ್ನೇಹಿತರೂ, ಸಮೀಪವರ್ತಿಗಳೂ ಆಗಿದ್ದ ಪಂಜೆ ಮಂಗೇಶರಾಯರು, ಬೆನೆಗಲ್ ರಾಮರಾವ್, ಹುರಳಿ ಭೀಮರಾವ್ ಮತ್ತು ಮಳಲಿ ಸುಬ್ಬರಾವ್ ಅವರುಗಳು ಮುದ್ದಣನೊಂದಿಗಿನ ತಮ್ಮ ಒಡನಾಟಗಳನ್ನು ಕಲೆಹಾಕಿ, ಈ ಮೂರೂ ಕೃತಿಗಳು ಮುದ್ದಣನಿಂದಲೇ ಸ್ವಯಂರಚಿತ ವಾಗಿರುವುದನ್ನು ಪ್ರತಿಪಾದಿಸಿದರು. ಇವರು ಕನ್ನಡವನ್ನು "ಕನ್ನಡ೦ ಕಸ್ತೂರಿಯ೦ತೆ" ಎಂದು ಮುಕ್ತ ಕ೦ಠದಿ೦ದ ಹೊಗಳಿದ್ದಾರೆ[]. ಕಬ್ಬಗರ ಬಲ್ಲಹಂ ಎಂಬ ಬಿರುದೂ ಇವರಿಗಿದೆ.[] ಸಾಹಿತಿ ಪಂಜೆ ಮಂಗೇಶರಾಯರುರ ಪ್ರಕಾರ "ಮುದ್ದಣನವರಿಗಿಂತ ಒಳ್ಳೆಯ ಕವಿ ಬೇರಾರಿಲ್ಲ".

ಕನ್ನಡ ಪದಗಳಿಗೆ ಒತ್ತು

ಬದಲಾಯಿಸಿ

ಮುದ್ದಣ ಅವರು ತಮ್ಮ ನಲ್ಬರಹಗಳಲ್ಲಿ ಹೆಚ್ಚಿನ ಕನ್ನಡದ್ದೇ ಪದಗಳನ್ನು ಬಳಸಿ ಕನ್ನಡದ ಒಲವು ಮೆರೆದವರು. ಸಂಸ್ಕೃತ ಪದಗಳ ಹಂಗಿಲ್ಲದೆ ಕೂಡ ಒಳ್ಳೆಯ ಮೇಲ್ಮಟ್ಟದ ಕನ್ನಡ ನಲ್ಬರಹಗಳನ್ನು ಬರೆಯಬಹುದು ಎಂಬುದನ್ನು ಮುದ್ದಣ ತೋರಿಸಿ ಕೊಟ್ಟರು.

ವಿಶೇಷ ಮಾಹಿತಿಗಳು

ಬದಲಾಯಿಸಿ
  • ಮಳಲಿ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗವಾದಾಗ ೧೮೯೨ನೆ ಮಾರ್ಚಿನಲ್ಲಿ ಲಕ್ಶ್ಮೀನಾರಾಯಣನೂ ಕಷ್ಟಪಟ್ಟು ಅದೇ ಊರಿಗೆ ವರ್ಗ ಮಾಡಿಸಿಕೊಂಡನು. ಕನ್ನಡ`ಅದ್ಭುತ ರಾಮಾಯಣ'ವೆಂಬ ಗದ್ಯ ಕಾವ್ಯ ಈ ವೇಳೆಗೆ ಪೂರ್ತಿಯಾಯಿತು. ೧೮೯೫ನೆ ಮಾರ್ಚ್ ೨ರಲ್ಲಿ ಲಕ್ಶ್ಮೀನಾರಾಯಣನು ಈ ಕೃತಿಯನ್ನು ಮೈಸೂರಿನ ಕಾವ್ಯಮಂಜರಿ ಸಂಪಾದಕರಿಗೆ ಮುದ್ರಣಕ್ಕಾಗಿ ಕಳುಹಿಸಿಕೊಟ್ಟರು. ೧೮೯೫ನೆ ಜುಲೈ ತಿಂಗಳ ಸಂಚಿಕೆಯಲ್ಲಿ ಮುದ್ರಣ ಪ್ರಾರಂಭವಾಗಿ ಅಕ್ಟೋಬರ್ ತಿಂಗಳ ಸಂಚಿಕೆಯಲ್ಲಿ ಮುಕ್ತಾಯವಾಯಿತು.
  • ಈ ವೇಳೆಗೆ ಲಕ್ಶ್ಮೀನಾರಾಯಣನರಿಗೆ ಬವುಲಾಡಿ ವೆಂಕಟರಮಣ ಹೆಬ್ಬಾರರು ಎಂಬ ವಿದ್ವಾಂಸರೊಬ್ಬರ ಪರಿಚಯವಾಯಿತು. ಈ ಮಹನೀಯರಲ್ಲಿ ಲಕ್ಶ್ಮೀನಾರಾಯಣ ತಾನು ಕನ್ನಡ ಜೈಮಿನಿ ಭಾರತದ ಮಾದರಿಯಲ್ಲಿ ಬರೆಯಲು ತೊಡಗಿದ್ದ `ರಾಮಾಶ್ವಮೇಧ' ಎಂಬ ದೊಡ್ಡ ಗ್ರಂಥದ ಮೊದಮೊದಲಿನ ಕೆಲವು ಪದ್ಯಗಳನ್ನು ಓದಿ ಹೇಳಿದರಂತೆ. ಹೆಬ್ಬಾರರು ಪದ್ಯಬಂಧದಲ್ಲಿ ಕಾಣ ಬರುವ ರಸಹೀನತೆಯನ್ನು ತೋರಿಸಿಕೊಟ್ಟು ಪ್ರಾಚೀನ ಗ್ರಂಥಗಳಲ್ಲಿ ದೊರೆಯದ ಶಬ್ದರೂಪಗಳಿಗೆ ಆಧಾರಗಳನ್ನು ಕೇಳುತ್ತ ಬಂದರಂತೆ. ಮೂರು ನಾಲ್ಕು ವರ್ಷಗಳು ಕಳೆದ ಮೇಲೆ ಮತ್ತೊಮ್ಮೆ ಲಕ್ಶ್ಮೀನಾರಾಯಣನರು ಹೆಬ್ಬಾರರನ್ನು ಸಂಧಿಸಿದಾಗ ಅವರಿಗೆ ಆ ರಾಮಾಶ್ವಮೇಧದ ಇನ್ನೂಕೆಲವು ಪದ್ಯಗಳನ್ನು ಓದಿದರಂತೆ. ಆಗ ಅವರು `ನೀವು ಹೀಗೆ ಬರೆಯುವುದಕ್ಕಿಂತ ಛಂದಸ್ಸಿನ ಗೊಡವೆ ಬಿಟ್ಟು ವಚನ ರೂಪದಲ್ಲಿ ಏಕೆ ಬರೆಯಬಾರದು' ಎಂದು ಕೇಳಿದರಂತೆ. ಮತ್ತೆ ಮೂರು ವರ್ಷಗಳ ಮೇಲೆ ಇನ್ನೊಮ್ಮೆ ಸಂಧಿಸಿದಾಗ ಲಕ್ಶ್ಮೀನಾರಾಯಣರು ತನ್ನ ಅಚ್ಚಾದ `ಅದ್ಭುತ ರಾಮಾಯಣ'ದ ಪ್ರತಿಯೊಂದನ್ನು ಹೆಬ್ಬಾರರಿಗೆ ಕೊಟ್ಟಾಗ ಅವರು ಓದಿ ನೋಡಿ ಸಂತೋಷಪಟ್ಟರಂತೆ. ಇನ್ನೊಮ್ಮೆ ಸಂಧಿಸಿದಾಗ `ರಾಮಪಟ್ಟಾಭಿಷೇಕ' ಮುಗಿಯಿತೆಂದೂ ಮುಂದಿನ ಭಾಗವನ್ನು ಗದ್ಯದಲ್ಲಿ ಬರೆಯುವೆನೆಂದೂ ಈ ಕವಿ ಹೆಬ್ಬಾರರಿಗೆ ಹೇಳಿದ್ದರಂತೆ. ಅಲ್ಲದೇ ಪಟ್ಟಾಭಿಷೇಕ ಕಾಲದಲ್ಲಿ ರಾಮನ ಸ್ತುತಿ ಪರವಾದ ಕೆಲವು ಪದ್ಯಗಳನ್ನು ಹೆಬ್ಬಾರರೆ ಕೊಡಬೇಕೆಂದು ಕೇಳಿಕೊಂಡರಂತೆ. ಅದಕ್ಕೆ ಹೆಬ್ಬಾರರು ಒಪ್ಪಿ `ಭೂರಮೆ ಭುಜಾಗ್ರದೊಳ್ ಭುಜಮಧ್ಯದೊಳ್' ಎಂಬ ಪದ್ಯವನ್ನು ಆರಂಭಿಸಿ `ಇಂತು ಮೃದುಮಧುರವಚನರಚನೆಗಳಂ' ಎಂಬ ಪದ್ಯದವರೆಗೆ ನಡುವಣ ೩೩ ಪದ್ಯಗಳನ್ನು ಬರೆದುಕೊಟ್ಟರಂತೆ. ಅಲ್ಲದೇ ಒಟ್ಟಿನಲ್ಲಿ ಕಾವ್ಯವನ್ನು ಒಮ್ಮೆ ಕೈಯಾಡಿಸಿದರಂತೆ. ಹೀಗೆ ಹೆಬ್ಬಾರರ ಸಲಹೆ ಸಹಕಾರಗಳಿಂದ ಲಕ್ಶ್ಮೀನಾರಾಯಣನು `ಶ್ರೀರಾಮಪಟ್ಟಾಭಿಷೇಕ' ವನ್ನು ಪೂರ್ತಿಗೊಳಿಸಿದನು. ೨೫-೯-೧೮೯೫ರಲ್ಲಿ `ಮಹಾಲಕ್ಶ್ಮಿಯೆಂಬಾಕೆಯಿಂದ ರಚಿತವಾದ ರಾಮಪಟ್ಟಾಭಿಷೇಕ ವೆಂಬ ಷಟ್ಪದಿ ಗ್ರಂಥವು ಸಿಕ್ಕಿದೆ. ಅದರಲ್ಲಿ ಪದ್ಯಗಳು ೨೫೦ರೊಳಗಿವೆ. ಗ್ರಂಥವು ಬಹಳಚೆನ್ನಾಗಿದೆ. ಮುದ್ರಿಸಲು ಯೋಗ್ಯವೆಂದು ಭಾವಿಸುತ್ತೇನೆ' ಎಂದು ಕಾವ್ಯಮಂಜರಿಯವರಿಗೆ ಬರೆದರು. ೧೮೯೫ನೆಯನವೆಂಬರ್ ೪೪ನೆ ಸಂಚಿಕೆಯಲ್ಲಿ ಎಂದರೆ `ಅದ್ಭುತ್ ರಾಮಾಯಣ' ವನ್ನು ಮುಗಿಸಿದ ಸಂಚಿಕೆಯಲ್ಲಿಯೇ ರಾಮಪಟ್ಟಾಭಿಷೇಕವನ್ನು ಆರಂಭ ಮಾಡಿ ೧೮೯೬ನೆಯ ಜನವರಿ ೪೬ನೆಯ ಸಂಚಿಕೆಯಲ್ಲಿ ಮುಗಿಸಿದರು.
  • ರಾಮಪಟ್ಟಾಭಿಷೇಕ ಕಾವ್ಯದಲ್ಲಿ ನಾಂದಿ ಸಂಧಿಯಲ್ಲಿ ಬರುವ ಪ್ರತಿ ಪದ್ಯದ ಅಕ್ಷರವನ್ನು ಜೋಡಿಸುತ್ತ ಹೋದರೆ `ಶ್ರೀ ರಾಮಚಂದ್ರಾಯ ನಮಾಮಿ' ಎಂದಾಗುತ್ತದೆ. ಈ ಗೂಢರಚನೆಯ ಸ್ವಾರಸ್ಯವನ್ನು ಈತನೇ ಹೆಬ್ಬಾರರಿಗೆ ತೋರಿಸಿ ಕೊಟ್ಟಿದ್ದರಂತೆ. `ರಾಮಾಶ್ವಮೇಧ' ಎಂದು ಪ್ರಾರಂಭವಾದ ಕೃತಿ ಹೀಗೆ`ರಾಮಪಟ್ಟಾಭಿಷೇಕ ಕಾವ್ಯವಾಗಿ ಬೇರ್ಪಟ್ಟಾಗ ಅದಕ್ಕೆ ಅನುಗುಣವಾಗಿ ಅಲ್ಲಲ್ಲಿ ಪದಗಳ ಬದಲಾವಣೆ ಆಗಬೇಕಾಯಿತು. `ಶ್ರೀಕಾಂತನಧ್ವರದಚಾರಿತ್ರ್ಯಮಂ' ಎನ್ನುವ ಕಡೆ ಬದಲಾವಣೆಯಾಗದಿದ್ದುದನ್ನು ಹೆಬ್ಬಾರರು ತೋರಿಸಿಕೊಟ್ಟು `ಅಭ್ಯುದಯಚಾರಿತ್ರ್ಯಮಂ' ಎಂದು ತಿದ್ದಿದರಂತೆ. ಮುಂದೆ ಲಕ್ಶ್ಮೀನಾರಾಯಣನಿಗೆ ಮತ್ತೆ ಉಡುಪಿಗೆ ವರ್ಗವಾದುದರ ಪರಿಣಾಮವಾಗಿ ಹೆಬ್ಬಾರರ ಸಂಪರ್ಕ ಕಡಿಮೆಯಾಗಿ ಬರಬರುತ್ತ ಕಡೆಗೊಮ್ಮೆ ಕಡಿದೇ ಹೋಯಿತೆಂದು ತೋರುತ್ತದೆ.
  • `ಪದ್ಯಂ ವಧ್ಯಂ ಗದ್ಯಂ ಹೃದ್ಯಂ; ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು' ಎಂದು ಮುಂದೆ ಕವಿ ನಿರ್ಧರಿಸಿದನು. ಹೆಬ್ಬಾರರ ಪ್ರೇರಣೆಯಿಂದ ಈ ನಿರ್ಧಾರಕ್ಕೆ ಬಂದು ಅದರಂತೆ ರಾಮಪಟ್ಟಾಭಿಷೇಕದ ಮುಂದಣ ಕಥೆಯನ್ನು ಶ್ರೀ ರಾಮಾಶ್ವಮೇಧ ಎಂಬ ಹೆಸರಿನಲ್ಲಿ ಗದ್ಯದಲ್ಲಿ ಬರೆಯುತ್ತಾನೆ. ಜೈಮಿನಿ ಭಾರತದ ಹೃದ್ಯವಾದ ಸೀತಾಪರಿತ್ಯಾಗದ ಕಥೆಯನ್ನು ರಾಮನ ಅಶ್ವಮೇಧ ವೃತ್ತಾಂತವನ್ನು ಸುಂದರೆವಾಗಿ ಗದ್ಯದಲ್ಲಿ ಹೇಳಿದನು. ಆ ಕಾದಂಬರಿಯ ಕಥೆಯ ಸಂವಾದ ಸ್ವಾರಸ್ಯವನ್ನು ಗ್ರಹಿಸಿ ಮುದ್ದಣ-ಮನೋರಮೆಯರ ಅಪೂರ್ವವಾದ ಮುದ್ದಣ-ಮನೋರಮೆಯರ ಸರಸ ಸಲ್ಲಾಪವನ್ನು ಕಥೆಯಲ್ಲಿ ಬಳಸಿಕೊಂಡು ಕಥೆ ಹೇಳಿದನು. 'ಎಡೆ ಎಡೆಯಲ್ಲಿ ಸಕ್ಕದ ಕನ್ನಡ ನಲ್ನುಡಿ'ಯನ್ನು ಮೆರೆಯಲು ತಿರುಳ್ಗನ್ನಡದಲ್ಲಿ ಈ ಕಥೆ ಬರೆದನು. ಈ ಗ್ರಂಥವೂ ಮೈಸೂರಿನ ಕಾವ್ಯಕಲಾನಿಧಿಯವರಿಂದ ೧೯೧೧ರಲ್ಲಿ ಬೆಳಕಿಗೆ ಬಂದಿತು. ಮುದ್ದಣ-ಮನೋರಮೆಯರ ಸರಸ ಸಲ್ಲಾಪ ಸಂವಾದದ ವಾಕ್ಯಗಳು ಜನಪ್ರಿಯವಾದವು. ಎಲ್ಲ ಪತ್ರಿಕೆಗಳೂ ಕೃತಿಯನ್ನು ಕತೃವನ್ನು ಹೊಗಳಿದವು. ಕೆಲವು ಇಂಗ್ಲಿಷ್ ಪತ್ರಿಕೆಗಳು ಈ ಕವಿಯ ಕೃತಿಯನ್ನು ಕೊಂಡಾಡಿದವು.

ಗೌರವಗಳು

ಬದಲಾಯಿಸಿ
  • ಮುದ್ದಣ ಜಯಂತಿಯನ್ನು ಪ್ರತಿವರ್ಷ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಆಚರಿಸಲಾಗುತ್ತದೆ.
  • ನಂದಳಿಕೆ ಬಾಲಚಂದ್ರರಾವ್ ನೇತೃತ್ವದಲ್ಲಿ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.
  • ಕವಿ ಮುದ್ದಣ ಸ್ಮಾರಕ ಭವನವನ್ನು ೧೯೮೭ರಲ್ಲಿ ನಿರ್ಮಿಸಲಾಯಿತು.
  • ೧೯೭೯ರಲ್ಲಿ ವರಕವಿ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಸ್ಥಾಪಿಸಲಾಯ್ತು. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಸನ್ಮಾನವನ್ನು ಒಳಗೊಂಡಿದೆ.[]
  • ೨೦೧೭ನೇ ಇಸವಿಯಲ್ಲಿ ಮುದ್ದಣ್ಣನ ನೆನಪಿನಲ್ಲಿ ಭಾರತೀಯ ಅಂಚೆ ಇಲಾಖೆ ರೂ ೫ ಮುಖಬೆಲೆಯ ಒಂದು ಸ್ಟಾಂಪ್ ಜಾರಿಗೊಳಿಸಿತು[].

ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. "ಕಣಜ ಜಾಲತಾಣದಲ್ಲಿಯ ಮಾಹಿತಿ". Archived from the original on 2020-06-06. Retrieved 2020-06-06.
  2. ಮುದ್ದಣನ ಸಾಹಿತ್ಯ ಗುರು ಪೀಳಿಗೆಯಲ್ಲಿ ಸಾಹಿತ್ಯ ರತ್ನಗಳು;ಉದಯವಾಣಿ, Apr 16, 2017;ಮಟಪಾಡಿ ಕುಮಾರಸ್ವಾಮಿ
  3. "ಮುದ್ದಣ". Archived from the original on 2017-05-18. Retrieved 2017-05-04.
  4. "ಪ್ರಜಾವಾಣಿ ವರದಿ". Retrieved 6 June 2020.
  5. "ಕವಿ ಮುದ್ದಣ್ಣ, ಕುವೆಂಪು ನೆನಪಿನಲ್ಲಿ ಅಂಚೆ ಚೀಟಿ - Postal stamps on Kavi Muddanna, Kuvempu and MU". bangaloremirror.indiatimes.com. ಬೆಂಗಳೂರು ಮಿರರ್. 5 Feb 2017. Archived from the original (html) on 5 Feb 2017. Retrieved 6 June 2020.
"https://kn.wikipedia.org/w/index.php?title=ಮುದ್ದಣ&oldid=1215176" ಇಂದ ಪಡೆಯಲ್ಪಟ್ಟಿದೆ