ಕನ್ನಡದಲ್ಲಿ ರಗಳೆ ಸಾಹಿತ್ಯ :-- ನಡುಗನ್ನಡ ಕಾವ್ಯದ ಛಂದಸ್ಸಿನ, ದೇಸಿಯ ಕಾವ್ಯ ಪದ್ಧತಿಯ ಬಹುಮುಖ್ಯ ಪ್ರಕಾರ. ಇದು ಮಾತ್ರಾಗಣ ಘಟಿತವಾದ ಪದ್ಯಜಾತಿ. ಹರಿಹರನ ರಗಳೆಯ ಆದಿ ಮತ್ತು ಅಂತ್ಯದಲ್ಲಿ ವಿರೂಪಾಕ್ಷ ಮುದ್ರಿಕೆಯ ಕಂದಪದ್ಯ ಇರುತ್ತದೆ. ಈ ಛಂದಸ್ಸಿನಲ್ಲಿ ಹರಿಹರನಾದಿಯಾಗಿ ಅನೇಕ ಕವಿಗಳು ಕಾವ್ಯರಚನೆ ಮಾಡಿದ್ದಾರೆ. ರಗಳೆಯನ್ನು ಹರಿಹರ ಜನಸಾಮಾನ್ಯರ ಚಂಪೂ ಎಂದು ಕರೆದಿದ್ದಾನೆ.[೧]

೯ನೇ ಶತಮಾನದಿಂದ ಅಪಭ್ರಂಶದಲ್ಲಿ ಕಥನಕಾವ್ಯ ರಚನೆಗೆ ಬಳಸುತ್ತಿರುವ ಚತುಷ್ಪದಿ ವರ್ಗದ ಪ್ರಮುಖ ವೃತ್ತವೇ ರಗಳೆ. ಸಂಸ್ಕೃತದಿಂದ ವೃತ್ತಗಳು, ಬೇರೆ ಪ್ರಾಕೃತ ಭಾಷೆಗಳಿಂದ ಕಂದಪದ್ಯ ಕನ್ನಡಕ್ಕೆ ಬಂದಂತೆ ಪ್ರಾಯಶಃ ಅಪಭ್ರಂಶದಿಂದ ರಗಳೆ ಪ್ರಭೇದಗಳು ಕನ್ನಡಕ್ಕೆ ಬಂದಿವೆ (ಕನ್ನಡವೂ ಪ್ರಾಕೃತ ಭಾಷೆಗಳಲ್ಲಿ ಒಂದು). ರಘಟ> ರಘಡ> ರಗಳ> ರಗಳೆ ಯಾಗಿದೆ. ರಘಟಾ ಎಂದರೆ ಪಾದ ಸಂಖ್ಯಾ ನಿಯಮವಿಲ್ಲದ ಒಂದು ಪದ್ಯಗುಚ್ಛ. ತೆಲಗು ಭಾಷೆಯಲ್ಲಿ ರಗಳೆ ಎಂಬುದಕ್ಕೆ 'ರಗಡ' ಎಂಬ ಪದದ ಬಳಕೆ ಇದೆ. ಆ ಭಾಷೆಯಲ್ಲಿ ರಗಡ ಎಂಬುದು ಒಂದು ಪದ್ಯ ಜಾತಿ.

ರಗಳೆಯ ವಿಧಗಳು

ಬದಲಾಯಿಸಿ

ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಅನಿಯಮಿತ ಪಾದಸಂಖ್ಯೆಗಳೂ ಆದಿ ಅಥವಾ ಅಂತ್ಯ ಪ್ರಾಸಗಳೂ ಎಲ್ಲಾ ರಗಳೆಗಳಿಗೂ ಸಾಮಾನ್ಯ ಅಂಶಗಳು.
ಇದರಲ್ಲಿ ಮೂರು ಮುಖ್ಯ ವಿಧಗಳನ್ನು ಕಾಣಬಹುದು
೧.ಉತ್ಸಾಹ ರಗಳೆ
೨.ಮಂದಾನಿಲ ರಗಳೆ
೩.ಲಲಿತ ರಗಳೆ

೧.ಉತ್ಸಾಹ ರಗಳೆ - ೧೨

ಬದಲಾಯಿಸಿ

ಇದರಲ್ಲಿ ಮುಖ್ಯವಾಗಿ ಮೂರು ಮಾತ್ರೆಗಳಂತೆ ಗಣ ವಿಂಗಡನೆಯಾಗುತ್ತದೆ.
ಇದರಲ್ಲಿಯೂ ಹಲವು ಪ್ರಕಾರಗಳಿವೆ.
ಒಂದು ಪ್ರಕಾರದಲ್ಲಿ "೩+೩+೩+೩" ಮಾತ್ರೆಗಳಂತೆ ಗಣವಿಂಗಡನೆಯಾಗುವುದು
ಇನ್ನೊಂದು ಪ್ರಕಾರದಲ್ಲಿ "೩+೩+೩+ಗುರು" ಮಾತ್ರೆಗಳಂತೆ ಗಣವಿಂಗಡನೆಯಾಗುವುದು
ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ.
ಸಾಮಾನ್ಯನಿಯಮದಂತೆ ಯಾವಗಣವೂ ಮೊದಲಲ್ಲಿ ಲಘು ಹಾಗೂ ಅನಂತರ ಗುರು ಇರುವ (U _) ವಿನ್ಯಾಸ ಹೊಂದಿರುವುದಿಲ್ಲ.

೨. ಮಂದಾನಿಲ ರಗಳೆ - ೧೬

ಬದಲಾಯಿಸಿ

ಇದರಲ್ಲಿಯೂ ಹಲವು ಪ್ರಕಾರಗಳಿವೆ.
ಮೊದಲನೆಯ ಪ್ರಕಾರದಲ್ಲಿ ಆದ್ಯಂತ ಪ್ರಾಸನಿಯಮಗಳ ಜೊತೆಯಲ್ಲಿ ಪ್ರತಿಪಾದದಲ್ಲಿಯೂ ನಾಲ್ಕು ಮಾತ್ರೆಯ ನಾಲ್ಕು ಗಣಗಳಿರುತ್ತವೆ.
ಅಂದರೆ ಗಣವಿಭಾಗದಲ್ಲಿ "೪+೪+೪+೪" ಎಂಬ ವಿನ್ಯಾಸವಿರುತ್ತದೆ.
ಇನ್ನೊಂದು ಪ್ರಕಾರದಲ್ಲಿ ಮೂರು ಮತ್ತು ಐದು ಮಾತ್ರೆಗಳ ಗಣಗಳು ಎರಡು ಬಾರಿ ಪುನರಾವರ್ತನೆಯಾಗುತ್ತವೆ.
ಅಂದರೆ ಗಣವಿಭಾಗದಲ್ಲಿ "೩+೫+೩+೫" ಎಂಬ ವಿನ್ಯಾಸವಿರುತ್ತದೆ.
ಈ ವಿಧಗಳಲ್ಲಿಯೂ ಕೂಡ ಮೊದಲು ಲಘು, ಅನಂತರ ಗುರು ಇರುವ ಗಣವಿನ್ಯಾಸ ಬರಬಾರದು.
ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ.

೩.ಲಲಿತರಗಳೆ - ೨೦

ಬದಲಾಯಿಸಿ

ಇದರಲ್ಲಿಯೂ ಬೇರೆ ಬೇರೆ ವಿಧಗಳಿದ್ದರೂ ಮುಖ್ಯವಾಗಿ ನಾಲ್ಕು ಪಂಚಮಾತ್ರಾಗಣಗಳಿಂದ ಕೂಡಿರುತ್ತದೆ.
ಎಲ್ಲ ರಗಳೆಗಳ ನಿಯಮದಂತೆ ಇದರಲ್ಲಿಯೂ ಯಾವಗಣದಲ್ಲಿಯೂ ಮೊದಲು ಲಘು, ಅನಂತರ ಗುರು ಇರುವಂತಹ (U _ UU ಅಥವಾ U _ _)ವಿನ್ಯಾಸವಿರಬಾರದು
ಆದ್ಯಂತಪ್ರಾಸಗಳಿರುವ ಉದಾಹರಣೆ:-
ಏನವ್ವ ಸಂಪಗೆಯೆ ಶಿವನ ಸಿರಿಮುಡಿಗಿಂದು
ನೀನೀವ ಪೊಸ ಪೂಗಳಂ ನೀಡು ನೀಡೆಂದಂ||
(ಹರಿಹರನ ಪುಷ್ಪರಗಳೆ)

ಧವನವೇ ಶಿವನ ಪರಿಮಳದ ಹಬ್ಬವೆ ಭಾರ
ಭುವನದೊಳ್ ನಿನಗೆ ಸರಿಯಿಲ್ಲ ಸೌರಭಸಾರ||
(ಹರಿಹರನ ಪುಷ್ಪರಗಳೆ)

ಅಂತ್ಯಪ್ರಾಸ ಮಾತ್ರವಿರುವ ಉದಾಹರಣೆ:-
ಗಂಧರ್ವನಗರಲೇಖೆಯ ತೆರದೆ ಕಂಡಂತೆ
ಕಾಣಲ್ಕೆ ಮಾರನಿರ್ದಾಯೆಡೆಯೊಳಿರ್ದಂತೆ
ವಿಷಯವಿಷವಲ್ಲಿಯಂ ಪೆರ್ಚಿಸುವ ಜಲಧಾರೆ
ಸಾಧುತ್ವಮಂ ಕಿಡಿಸಿ ನಡೆಸುವ ದುರಾಚಾರೆ
ಕಪಟನಾಟಕತತಿಗೆ ತಾನೆ ನೆಲೆಯೆನಿಸುವಳ್
ಕೋಪಗ್ರಹಾವೇಶ ಜನ್ಮನಿಧಿಯೆನಿಸುವಳ್||
(ನಾಗವರ್ಮನ ಕರ್ಣಾಟ ಕಾದಂಬರಿ)

ವಿವಿಧ ಕವಿಗಳ ದೃಷ್ಠಿಯಲ್ಲಿ ರಗಳೆ

ಬದಲಾಯಿಸಿ
 • ಎಂ.ಎಂ ಕಲಬುರ್ಗಿಯವರು ಹರಿಹರನ ರಗಳೆಗಳನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ.
 1. ಪುರಾತನರ ರಗಳೆಗಳು = ೬೩
 2. ಶರಣರ/ನೂತನರ/ಅಸಂಖ್ಯಾತರ ರಗಳೆಗಳು =೨೮
 3. ಸಂಕೀರ್ಣ ರಗಳೆಗಳು = ೨೬
 • ೨ನೇ ನಾಗವರ್ಮನ 'ಛಂದೋಬುಧಿ'ಯಲ್ಲಿರುವ ಪದ್ಯದಲ್ಲಿ ರಗಳೆಯ ಪ್ರಸ್ತಾಪವಿದೆ.

ಗಣ ನಿಯಮ ವಿಪರ್ಯಾಸದೊ
ಳೆಣೆ ಪದದೊಳ್ ಕೂಡಿ ಮಾತ್ರೆ ಸಮನಾಗೆ ಗುಣಾ
ಗ್ರಣಿಯ ಮತದಿಂದೆ ತಾಳವ
ಗಣನೆಗೊಡಂಬಟ್ಟುದದುವೆ ರಘಟಾ ಬಂಧಂ||

 • ಜಯಕೀರ್ತಿ ಹೇಳುವ ರಗಳೆಯ ಲಕ್ಷಣಗಳೆಂದರೆ-

ಸ್ವಚ್ಛಂದ ಸಂಜ್ಞಾ ರಘಟಾ ಮಾತ್ರಾಕ್ಷರ ಸಮೋದಿತ
ಪಾದದ್ವಂದ್ವ ಸಮಾಕೀರ್ಣಾ ಸುಶ್ರಾವ್ಯ ಸೈವ ಪದ್ದತಿಃ

 • ಕೇಶಿರಾಜನ 'ಶಬ್ದಮಣಿದರ್ಪಣ'ದ ಅಪಭ್ರಂಶ ಪ್ರಕರಣದಲ್ಲಿ 'ರಘಟಾ' ಎಂಬುದರ ತದ್ಭವ ರಗಳೆ ಎಂದಿದ್ದಾನೆ.
 • ಪಂಪಭಾರತದಲ್ಲಿ ಈ ರಗಳೆಯನ್ನು 'ತೋಮ ರಗಳೆ' ಎನ್ನಲಾಗಿದೆ.

ರಗಳೆಯ ಲಕ್ಷಣಗಳು

ಬದಲಾಯಿಸಿ
 1. ಪ್ರತಿಪಾದದಲ್ಲೂ ಮಾತ್ರೆಗಳು ಸಮನಾಗಿರಬೇಕು.
 2. ಪಾದಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ.
 3. ಗಣಗಳ ಯೋಜನೆಯಲ್ಲಿ ಲಯಕ್ಕೆ ಹೊಂದುವ ವೈವಿಧ್ಯ ಇರಬೇಕು.
 4. ಎರಡೆರಡು ಪಾದಗಳ ಅಂತ್ಯದಲ್ಲಿ ಪ್ರಾಸವಿರಬೇಕು.
 5. ಸುಶ್ರಾವ್ಯವಾಗಿ, ತಾಳಬದ್ಧವಾಗಿರಬೇಕು.
 • ಕನ್ನಡದ 'ಲಲಿತ ರಗಳೆ' ಆಂಗ್ಲಭಾಷೆಯ 'ಬ್ಲಾನ್ಕ್ ವರ್ಸಸ್' ಎಂಬ ಛಂದಪ್ರಕಾರದ ಕೆಲವು ಸೌಲಬ್ಯಗಳನ್ನು ಅಳವದಿಸಿಕೊಂಡು 'ಸರಳ ರಗಳೆ', 'ಮಹಾಛಂದಸ್ಸು'ಗಳೆಂಬ ಹೆಸರುಗಳಿಂದ ಆಧುನಿಕ ಸಾಹಿತ್ಯದಲ್ಲಿ ವಿಕಾಸಗೊಂಡಿದೆ. ಸರಳ ರಗಳೆಯನ್ನು ಮಾಸ್ತಿಯವರು 'ಬಿಡಿವೃತ್ತ' ಎಂದು ಕರೆದರು. ಮಹಾಕವಿ ಕುವೆಂಪು ಈ ಛಂದಸ್ಸಿನಲ್ಲೇ 'ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ'ವನ್ನು ಬರೆದಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
 1. Prof. T. V. Venkatachala Shastri, Kannada Chandaswaroopa, DVK Murthy Publication, Mysore 3rd Edition 2008 p.267-315
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರಗಳೆ&oldid=1198759" ಇಂದ ಪಡೆಯಲ್ಪಟ್ಟಿದೆ