ಸದಸ್ಯ:Amritha Nairy/ನನ್ನ ಪ್ರಯೋಗಪುಟ4

ಭೂತಾರಾಧನೆಯಲ್ಲಿ ವರ್ಣಸಾಂಗತ್ಯ

ಬದಲಾಯಿಸಿ

ತುಳುನಾಡಿನ ಜಾನಪದ ಮತ್ತು ಸಾಂಸ್ಕೃತಿಕ ಅಧ್ಯಯನದಲ್ಲಿ ಭೂತಾರಾಧನೆಗೆ ಮಹತ್ವದ ಸ್ಥಾನವಿದೆ. ಸಾಹಿತ್ಯ, ಸಂಗೀತ, ಚಿತ್ರ, ಶಿಲ್ಪ, ವೇಷಭೂಷಣ, ಬಣ್ಣಗಾರಿಕೆ, ಕುಣಿತದಂತಹ ಕಲೆಯ ಪರಿಕರಗಳನ್ನು ಮೈಗೂಡಿಸಿಕೊಂಡಿರುವ ಭೂತಾರಾಧನೆ ಒಂದು ಧಾರ್ಮಿಕ ರಂಗಭೂಮಿಯಾಗಿ ಬೆಳವಣಿಗೆ ಹೊಂದಿದೆ. ಮನೋರಂಜನೆಯನ್ನು ಗೌಣವಾಗಿ ನೀಡುತ್ತಿರುವ ಈ ಧಾರ್ಮಿಕ ಆಚರಣೆ ಒಂದು ತಾಂತ್ರಿಕ ವಿಧಿಯಾಗಿ, ಆರಾಧನಾ ಪದ್ಧತಿಯಾಗಿ ವಿಕಾಸಗೊಂಡಿದೆ. ತುಳುನಾಡಿನಲ್ಲಿ ನಡೆಯುವ ಭೂತಗಳ ಆರಾಧನೆ ಸತ್ವವಿಲ್ಲದೆ ಬಾಲಿಶವಾದ ಆಚರಣೆಯಲ್ಲ. ಈ ಆರಾಧನೆಯನ್ನು ರಂಗಭೂಮಿಯ ಪರಿಕರಗಳ ಹಿನ್ನೆಲೆಯಾಗಿ ವಿಶ್ಲೇಷಣೆ ಮಾಡಿದರೆ ಈ ‘ಭೂತಾರಾಧನೆ’ ಒಂದು ಧಾರ್ಮಿಕ ರಂಗಭೂಮಿಯಾಗಿ ವಿಕಾಸ ಹೊಂದಿದ ರೋಚಕವಾದ ವಿವರಗಳು ತಿಳಿದುಬರುತ್ತದೆ. ಈ ಆರಾಧನೆಯಲ್ಲಿ ಅಡಗಿರುವ ‘ವಸ್ತು’ ಏನು? ಪಾಡ್ದನಗಳಲ್ಲಿ ಬರುವ ಕಥೆ ಮತ್ತು ಆರಾಧನೆಯ ರೀತಿ, ಅಭಿನಯ, ಬಣ್ಣ, ವೇಷಭೂಷಣಗಳಿಗೆ ಇರುವ ಸಂಬಂಧ ಯಾವುದು? ಭೂತಗಳ ವ್ಯಕ್ತಿತ್ವವನ್ನು ಯಾವ ಬಗೆಯಲ್ಲಿ ಅಭಿವ್ಯಕ್ತಿಗೊಳಿಸಲಾಗುತ್ತದೆ? ವಸ್ತು ಅಥವಾ ಕಥೆಯ ನಿರೂಪಣೆಗಾಗಿ ಕಲಾವಿದರು ಪಡುವ ಪರಿಶ್ರಮದಲ್ಲಿ ಬಳಕೆಯಾಗುವ ಬಣ್ಣಗಳ ಸಂಯೋಜನೆ ಯಾವ ಕ್ರಮದಲ್ಲಾಗುತ್ತದೆ? ಬೇರೆ ಬೇರೆ ಅಂತಸ್ತಿನ ಭೂತಗಳ ವೈಶಿಷ್ಟ್ಯ, ಗುಣ, ಸ್ವಭಾವ, ಜನಪ್ರಿಯತೆಯನ್ನು ಚಿತ್ರಿಸಲು ಕಲಾವಿದರು ಉಪಯೋಗಿಸುವ ಕಪ್ಪು, ಕೆಂಪು, ಹಳದಿ ಬಣ್ಣಗಳು, ಕಪ್ಪು ಬಿಳಿ ರೇಖೆಗಳು, ನಾಮಗಳು, ವರ್ತುಲಗಳು ಹೇಗೆ ಸಹಕಾರಿಯಾಗಿವೆ? ಈ ನಿಟ್ಟಿನಲ್ಲಿ ಯೋಚಿಸಿ ಬೇರೆ ಬೇರೆ ವರ್ಗದ ಬೇರೆ ಬೇರೆ ವಲಯದ ಭೂತಗಳ ಆರಾಧನೆಯನ್ನು ವಿಶ್ಲೇಷಿಸಿದಾಗ ಅಲ್ಲಿ ಬಳಕೆಯಾಗಿರುವ ರಂಗಪರಿಕರಗಳು ಸಾಧಿಸಿರುವ ವರ್ಣಸಾಂಗತ್ಯದ ಮಹತ್ವ, ಉದ್ದೇಶ ಮತ್ತು ಔಚಿತ್ಯ ಮನವರಿಕೆಯಾದೀತು[]

ವರ್ಣ ವಿನ್ಯಾಸ

ಬದಲಾಯಿಸಿ

ಭೂತಕಟ್ಟುವ ಸಂದರ್ಭದಲ್ಲಿ ಮುಖಕ್ಕೆ ಬಣ್ಣ ಹಾಕುವಾಗ ಭೂತಗಳ ಕಥೆ ಮತ್ತು ಸ್ವಭಾವಕ್ಕನುಸಾರವಾಗಿ ರೇಖಾ ವಿನ್ಯಾಸಗಳನ್ನು (ಮುಖ್ಯವಾಗಿ ಸರಳರೇಖೆ ಮತ್ತು ವಕ್ರರೇಖೆ) ಎಳೆಯುತ್ತಾರೆ. ಕೆಂಪು, ಹಳದಿ, ಕಪ್ಪು, ಬಿಳಿ ಬಣ್ಣಗಳನ್ನು ಮುಖವರ್ಣಿಕೆಯಲ್ಲಿ ಬಳಸುತ್ತಾರೆ. ಮುಖವರ್ಣಿಕೆಯನ್ನು ಬಿಡಿಸುವ ಸಂದರ್ಭದಲ್ಲಿ ಕಲಾವಿದನ ಜನಪದ ಕಲಾಪ್ರಜ್ಞೆ, ಸ್ವಭಾವ ಜ್ಞಾನ, ಲೋಕಾನುಭವ, ಸಾಂಪ್ರಾದಾಯಿಕ ದೃಷ್ಟಿಗಳು ಕಂಡು ಬರುತ್ತದೆ. ತಂದೆ ಮುಖವರ್ಣಿಕೆ ಬರೆಯುವುದನ್ನು ನೋಡಿ ಕಲಿತ ಮಗನು ಕೂಡ ಮುಂದೆ ಅದೇ ಪರಂಪರೆಯನ್ನು ಮುಂದುವರೆಸುತ್ತಾನೆ. ತಾನು ಕಲಿತುಕೊಂಡಿರುವ ಬಣ್ಣಗಾರಿಕೆಯ ಪ್ರಭೇದಗಳನ್ನು ಮರೆಯದೆ ಉಳಿಸಿಕೊಂಡು ಬರುತ್ತಾನೆ. ಪ್ರಾಣಿಸೂಚಕ ಭೂತಗಳ ಮುಖವರ್ಣಿಕೆ, ಹೆಣ್ಣು ದೈವಗಳ ಮುಖವರ್ಣಿಕೆ, ರಾಜಸ್ವಭಾವದ ರಾಜನ್ ದೈವಗಳ ಮುಖವರ್ಣಿಕೆ, ಐತಿಹಾಸಿಕ ಅತಿಮಾನುಷ ವ್ಯಕ್ತಿಗಳು ಸತ್ತು ಆದ ಭೂತಗಳ ಮುಖವರ್ಣಿಕೆ ಹೀಗೆ ಮುಖ್ಯವಾಗಿ ಕೆಲವು ಪ್ರಭೇದಗಳನ್ನು ಗುರುತಿಸಬಹುದು. ಭೂತಗಳನ್ನು ಕಟ್ಟುವ ಜಾತಿಯ ಆಧಾರದಿಂದ ನಲಿಕೆ, ಅಜಿಲರು ಕಟ್ಟುವ ಭೂತಗಳ ಬಣ್ಣಗಾರಿಕೆ ಮತ್ತು ಪರವ ಪದಂಬರು ಕಟ್ಟುವ ಭೂತಗಳ ಬಣ್ಣಗಾರಿಕೆಯೆಂದೂ ವ್ಯತ್ಯಾಸ ಮಾಡಬಹುದು. ಈ ಬಗೆಯ ಮುಖವರ್ಣಿಕೆಗೆ ಶಿಷ್ಟ ಶಾಸ್ತ್ರ ಲಿಖಿತ ದಾಖಲೆಗಳೇನೂ ಇಲ್ಲದಿರುವುದರಿಂದ ಮತ್ತು ಜನಪದ ಕಲಾವಿದ ಹಲವು ಮಿತಿಯೊಳಗೆ ತನ್ನ ಕೆಲಸ ಮಾಡಬೇಕಾಗಿ ಬಂದುದರಿಂದ ಪ್ರತಿಯೊಂದು ಭೂತಕ್ಕೂ ಅದರದ್ದೇ ಆದ ವಿಶಿಷ್ಟವಾದ ಬಣ್ಣಗಾರಿಕೆಯನ್ನು ಸೃಷ್ಟಿ ಮಾಡಿದ್ದು ಕಂಡುಬರುವುದಿಲ್ಲ. ಆದರೆ ಕಲ್ಕುಡ-ಕಲ್ಲುರ್ಟಿಗೆ ಬಣ್ಣ ಹಾಕುವಾಗ ಕಪ್ಪು ಬಿಳಿ ವಿನ್ಯಾಸವೇ ಇರುತ್ತದೆಯಲ್ಲದೇ ಅರ್ದಲ ಹಾಕುವ ಕ್ರಮವಿಲ್ಲ ಎಂಬ ಮೂಲಭೂತ ಎಚ್ಚರವನ್ನು ಉದ್ದಕ್ಕೂ ಪಾಲಿಸಿಕೊಂಡು ಬಂದಿದ್ದಾರೆ. ಹಣೆ, ಗಲ್ಲದಲ್ಲಿ ರೇಖಾ ವಿನ್ಯಾಸ ಮೂಡಿಸುವಾಗ, ಬಣ್ಣದಲ್ಲಿ ಚುಟ್ಟಿಯನ್ನು ಬರೆಯುವಾಗ, ಕಣ್ಣನ್ನು ಕೆಂಪು ಮತ್ತು ಕಪ್ಪು ಬಣ್ಣದಿಂದ ತುಂಬುವಾಗ, ಹಣೆಯಲ್ಲಿ ಅಂಕಣ, ಸೂರ್ಯಚಂದ್ರ, ನಾಮ, ಅಡ್ಡಪಟ್ಟಿಗಳನ್ನು ಬಿಡಿಸುವಾಗ ಬಣ್ಣ ಮತ್ತು ರೇಖೆಗಳ ಸಂಯೋಜನೆಯಲ್ಲಿ ಸುಂದರವಾದ ಕಲಾವಂತಿಕೆಯನ್ನು ಸಾಧಿಸುತ್ತಾರೆ. ಭೂತಗಳ ಉಗ್ರತೆ, ಕ್ರೂರ ಸ್ವಭಾವ, ಅಮಾನುಷ ಗುಣ, ಅತಿಮಾನುಷ ವ್ಯಕ್ತಿತ್ವವನ್ನು ಕಡು ಕೆಂಪು ಬಣ್ಣ ಮತ್ತು ವಕ್ರ ರೇಖಾ ವಿನ್ಯಾಸಗಳಿಂದ ಚಿತ್ರಿಸುತ್ತಾರೆ. ಭೂತದ ವೇಷದಲ್ಲಿ ಬಣ್ಣಗಾರಿಕೆ ಎಂದರೆ ಕೆಲವು ಗೆರೆಗಳು, ಕೆಲವು ಗೆರೆ ಚುಟ್ಟಿಗಳು ಮತ್ತು ಮುದ್ರೆಗಳು. ನೇಮ ಅಥವಾ ಕೋಲ ಪ್ರಧಾನದೈವಕ್ಕೆ ನಡೆಯುವುದಾದರೆ ಬಣ್ಣದ ಕೆಲಸವನ್ನು ಹೆಚ್ಚು ಶ್ರದ್ಧೆಯಿಂದ ಮಾಡುತ್ತಾರೆ. ಕಟ್ಟುಕಟ್ಟಳೆಯ ದೈವವಾದರೆ ಬಣ್ಣಗಾರಿಕೆಯಲ್ಲಿಯೂ ಕಟ್ಟಕಟ್ಟಳೆ ಮಾತ್ರ ಇರುತ್ತದೆ. ಉತ್ಸಾಹ, ಶೌರ್ಯ, ಧೈರ್ಯ, ಸಾಹಸಗಳನ್ನು ಪ್ರತಿಪಾದಿಸುವ ಹಳದಿ ಬಣ್ಣವನ್ನು ಮುಖಕ್ಕೆ ಪೂರ್ತಿಯಾಗಿ ಹಚ್ಚಿಕೊಳ್ಳುವುದರಿಂದ ಆಯಾ ಭೂತದ ಅತಿಮಾನುಷ ವ್ಯಕ್ತಿತ್ವ ಸ್ಪಷ್ಟವಾಗಿ ಬಿಂಬಿತವಾಗುತ್ತದೆ. ಸೂಟೆ ದೊಂದಿ ಪಂಚದೀವಟಿಕೆಗಳ ಹೊನಲು ಬೆಳಕಿನಲ್ಲಿ ಈ ಚಿನ್ನದ ಬಣ್ಣದ ಮೆರುಗಿಗೆ ಕೆಂಪುಗೆರೆಗಳು, ಬಿಳಿ ಚುಟ್ಟಿಗಳು, ಬಣ್ಣದ ರೇಖಾ ವಿನ್ಯಾಸಗಳು, ಆಯತ ತ್ರಿಕೋನಾಕೃತಿಗಳು ಆಕರ್ಷಕವಾಗಿ ಸಹಕರಿಸುತ್ತವೆ. ಮುಖಕ್ಕೆ ಬಣ್ಣವನ್ನು ಬಳಿದುಕೊಳ್ಳುವಾಗ ಬೆಳಕಿನ ಹಿನ್ನೆಲೆ, ಪ್ರದರ್ಶನಗೊಳ್ಳುವ ಪರಿಸರ, ಬಣ್ಣದ ಅರ್ಥವನ್ನು ಸೂಕ್ಷ್ಮವಾಗಿ ತಿಳಿದುಕೊಂಡಿರುತ್ತಾರೆ. ಸಂಪ್ರದಾಯಕ್ಕನುಸಾರವಾಗಿ ಕೆಲವು ಸ್ಥಳಗಳಲ್ಲಿ ಎರಡು ಮೂರು ಭೂತಗಳಿಗೆ ಒಂದೇ ರೀತಿಯ ಬಣ್ಣಗಾರಿಕೆಯಿರುತ್ತದೆ. ಕಣಂದೂರಿನ ದುರ್ಗಲಾಯ, ತೋಡ ಕುಕ್ಕಿನಾರ್, ಪಿಲಿಚಾಮುಂಡಿ ಈ ಮೂರು ದೈವಗಳ ಬಣ್ಣಗಾರಿಕೆಯಲ್ಲಿ ವ್ಯತ್ಯಾಸವಿಲ್ಲ. ಒಂದೇ ಬಗೆ, ಒಂದೇ ಬಣ್ಣ. ಕಡು ಹಳದಿ ತಳಹಳದಿಯ ಬಣ್ಣದ ಮೇಲೆ ಹಲಸಿನ ಕೊಂಬು ಮತ್ತು ಸುಣ್ಣದಿಂದ ಚುಟ್ಟಿಯನ್ನು ಹಣೆಯಲ್ಲಿ ಬರೆಯಲಾಗುತ್ತದೆ. ಗಲ್ಲದಲ್ಲಿ ಮುದ್ರೆಯ ಬದಲಾಗಿ ಕೆಂಪು ಬಣ್ಣದ ಮೂರು ಚುಕ್ಕಿಗಳು, ಹಣೆಯಲ್ಲಿ ಸೂರ್ಯ ಚಂದ್ರ ತ್ರಿಕೋನಾಕೃತಿಯಲ್ಲಿ ಕೆಂಪು ತಿಲಕ. ಮುಖದ ಪರಿಧಿಯಲ್ಲಿ ಸಾಗುವ ಕಪ್ಪು ಬಣ್ಣದ ಸಮಾನಾಂತರದ ಗೆರೆಗಳು ಮತ್ತು ಅದರೊಳಗೆ ಅಂಕಣಗಳು.

ವಿಶೇಷತೆ

ಬದಲಾಯಿಸಿ

ಬೆಳ್ತಂಗಡಿ ತಾಲೂಕಿನ ಪೆರಣಮಂಜ ಎಂಬಲ್ಲಿಯ ಪಿಲಿಚಾಮುಂಡಿ ದೈವಕ್ಕೆ ಬಣ್ಣ ಹಾಕುವಾಗಲೂ ಕಡುಹಳದಿಯನ್ನು ತಳಹಳದಿಯ ಬಣ್ಣವಾಗಿ ಉಪಯೋಗಿಸುತ್ತಾರೆ. ಹಣೆಯಲ್ಲಿ ಬಿಳಿ ಗೆರೆಯಿಂದಾವೃತವಾದ ಕೆಂಪು ನಾಮವನ್ನೆಳೆದು ಎರಡು ಗಲ್ಲಗಳಲ್ಲಿ ಕೆಂಪು ಬಿಳಿ ಮುದ್ರೆ ಬರೆಯುತ್ತಾರೆ. ಎರಡು ಹುಬ್ಬುಗಳ ಮೇಲೆ ಹಣೆಯ ಉದ್ದಕ್ಕೆ ಸಮಾನಾಂತರವಾದ ಎರಡು ಕಪ್ಪು ಗೆರೆಗಳು ಮತ್ತು ಅದರಲ್ಲಿ ಅಂಕಣಗಳಿರುತ್ತವೆ. ಇದರ ಮೇಲಿನಿಂದ ಕೆಂಪು ಬಿಳಿ ಚುಟ್ಟಿಯ ಸಾಲು ಇರುತ್ತದೆ. ಇದೇ ಸ್ಥಳದ ಭೈರವನ ಮುಖವರ್ಣಿಕೆ ಬಹಳ ಸರಳ. ಹಣೆಯಲ್ಲಿ ಕೆಂಪು ತಿಲಕ ಬರೆದು ಅದರ ಸುತ್ತು ಬಿಳಿ ಚುಟ್ಟಿ ಹಾಕಿದ ಚಂದ್ರಿಕೆ, ಕಡು ಕಪ್ಪುಗೊಳಿಸಿದ ಹುಬ್ಬು, ಕಣ್ಣಿನ ಕೆಳ ಭಾಗದಲ್ಲಿ ಕೆಂಪು ಬಿಳಿ ಗೆರೆ ಇಲ್ಲಿಗೆ ಬಣ್ಣದ ಕೆಲಸ ಮುಗಿಯುತ್ತದೆ. ಪಿಲಿಭೂತಕ್ಕೆ ಬಣ್ಣಹಾಕುವ ಸಂದರ್ಭದಲ್ಲಿ ಕಲಾವಿದ ಹಣೆಯ ವಿಸ್ತಾರವನ್ನು ಪೂರ್ತಿಯಾಗಿ ಉಪಯೋಗಿಸಿಕೊಂಡು ಬಣ್ಣ, ನಾಮ, ತಿಲಕ, ಚುಟ್ಟಿ, ಮುದ್ರೆಗಳಿಂದ ಅಲಂಕರಿಸಿಕೊಳ್ಳುತ್ತಾನೆ. ಮೂಗು ಗಲ್ಲಗಳ ಮೇಲೆ ಕೆಂಪು ಮುದ್ರೆಗಳು, ಬಿಳಿಯಚುಟ್ಟಿಗಳು, ಕೆಂಪು ಕಣ್ಣು, ತೀವ್ರವಾಗಿ ಕಪ್ಪುಗೊಳಿಸಿದ ಹುಬ್ಬು ಮತ್ತು ಕಣ್ಣಿನ ಕೆಳ ಬದಿ ಹಣೆಯಲ್ಲಿ ಕೆಂಪಾಗಿ ಚಾಚಿದ ನಾಲಗೆಯಂತಿರುವ ಕೆಂಪುಬಣ್ಣದ ನಾಮದ ಚಿತ್ರ. ಸುಳಿಗಳು, ಬಿಂದುಗಳು ಹೀಗೆ ಕೆನ್ನಾಲಿಗೆಯ ಹುಲಿಯ ಚಿತ್ರವನ್ನು ಸಾಂಕೇತಿಕವಾಗಿ ಚಿತ್ರಿಸುವುದನ್ನು ಸುಳ್ಯ ತಾಲೂಕಿನ ಕುಡೇಕಲ್ಲಿನ ಪಿಲಿಭೂತ ನೇಮದಲ್ಲೂ ಕಾಣಬಹುದು.[] ಲೆಕ್ಕೆಸಿರಿ, ಉಳ್ಳಾಕುಳು, ಪಾಷಾಣಮೂರ್ತಿ, ನಂದಿಗೋಣೆ, ಧರ್ಮದೈವ ರುದ್ರಾಂಡಿ, ಕಾರಿಕಬಿಲ, ಬಿಲ್ಲರಾಯ, ಕೋಟಿ ಚೆನ್ನಯ ಕಾಂಜವೆರ್, ಜಟಾಧಾರಿ, ಪಂಜಣತ್ತಾಯ, ಗುಳಿಗ, ಜುಮಾದಿ, ಕೊರಗನತಯ, ಶಿರಾಡಿಭೂತ ಮೊದಲಾದ ಭೂತಗಳ ಬಣ್ಣಗಾರಿಕೆಯಲ್ಲಿ ಸ್ವಭಾವಕ್ಕೆ ತಕ್ಕಂತೆ ವೈವಿಧ್ಯಗಳಿವೆ. ಕಾಲಕ್ಕನುಗುಣವಾದ ಪ್ರಭಾವಗಳಿವೆ. ಕಲಾವಿದನ ಕಾಣ್ಕೆ ಇದೆ; ಮನೋಭಾಷದ ಅಭಿವ್ಯಕ್ತಿ ಇದೆ.

ಉಲ್ಲೇಖ

ಬದಲಾಯಿಸಿ
ಭೂತಾರಾಧನೆ- ಡಾ.ಕೆ.ಚಿನ್ನಪ್ಪಗೌಡ
 ಜಾಲಾಟ- ಡಾ.ಕೆ.ಚಿನ್ನಪ್ಪಗೌಡ
  1. http://www.shastriyakannada.org/DataBase/KannwordHTMLS/CLASSICAL%20KANNADA%20RELIGION%20HTML/BHUTHARADHANE%20HTML.htm/
  2. https://en.wikivoyage.org/wiki/Sullia