ಶ್ಯಾಮಾ ಶಾಸ್ತ್ರಿ

ಶ್ಯಾಮಾ ಶಾಸ್ತ್ರಿ (ಏಪ್ರಿಲ್ ೨೬, ೧೭೬೨ - ೧೮೨೭) ಕರ್ನಾಟಕ ಸಂಗೀತ ಪದ್ಧತಿಯ ತ್ರಿಮೂರ್ತಿಗಳಲ್ಲಿ ಒಬ್ಬರು.

Syamasastri.JPG

ಕರ್ನಾಟಕ ಸಂಗೀತದ ಇನ್ನಿಬ್ಬರು ತ್ರಿಮೂರ್ತಿಗಳಂತೆ ತಮಿಳುನಾಡಿನ ತಿರುವಾರೂರಿನಲ್ಲಿ ಜನಿಸಿದ ಶ್ಯಾಮಾ ಶಾಸ್ತ್ರಿಯವರ ಮೂಲ ಹೆಸರು ವೆಂಕಟಕೃಷ್ಣ. ಇವರ ಮನೆಮಾತು ತೆಲುಗು. ಇವರ ಪೂರ್ವಜರು ಅರ್ಚಕ ವೃತ್ತಿಯವರಾಗಿದ್ದರು. ಬಾಲಕ ವೆಂಕಟಕೃಷ್ಣನಿಗೆ ಬಹಳ ಸುಮಧುರವಾದ ಧ್ವನಿಯಿದ್ದುದರಿಂದ, ರೂಢಿಯ ಸಂಸ್ಕೃತದ ಜೊತೆ ಸ್ವಲ್ಪ ಸಂಗೀತದ ಬಾಲಪಾಠಗಳೂ ಆದವು. ಸುಮಾರು ಎಂಟುವರ್ಷವಾದ ನಂತರ ವೆಂಕಟಕೃಷ್ಣನ ಕುಟುಂಬ ತಂಜಾವೂರಿಗೆ ತೆರಳಿದರು. ಅಲ್ಲಿ, ಸಂಗೀತಸ್ವಾಮಿ ಎಂಬಾತರು ಈ ಬಾಲಕನ ಕಂಠಸಿರಿಗೆ ಮಾರುಹೋಗಿ ಕೆಲವೇ ಸಮಯದಲ್ಲಿ ಈತನನ್ನು ಉತ್ತಮ ಸಂಗೀತಗಾರನನ್ನಾಗಿ ಮಾಡಿದರು.

ಕಾಂಚೀಪುರದ ಕಾಮಾಕ್ಷಿಯ ಭಕ್ತರಾದ ಶ್ಯಾಮಾಶಾಸ್ತ್ರಿಯವರ ಬಹುಪಾಲು ಕೃತಿಗಳು ಕಾಮಾಕ್ಷಿಯನ್ನು ಕುರಿತವು. ತಂಜಾವೂರಿನ ಬಂಗಾರು ಕಾಮಾಕ್ಷಿ ದೇವಾಲಯದಲ್ಲಿ ಅರ್ಚಕರಾಗಿದ್ದ ಇವರು ಪಚ್ಚಮಿರಿಯಮ್ ಆದಿ ಅಪ್ಪಯ್ಯ ಅವರ ಶಿಷ್ಯರು. ಇವರು ಒಟ್ಟು ೩೦೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರೆಂದು ಹೇಳಿಕೆಯಿದ್ದರೂ ಈಗ ಲಭ್ಯವಿರುವುದು ಸುಮಾರು ೬೦-೭೦. ಇವರ ಕೃತಿಗಳು ಹೆಚ್ಚಾಗಿ ತೆಲುಗು, ಮತ್ತು ಸ್ವಲ್ಪ ಮಟ್ಟಿಗೆ ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿವೆ. ಮದುರೆಯ ಮೀನಾಕ್ಷಿಯನ್ನು ಕುರಿತು "ನವರತ್ನಮಾಲಿಕೆ"ಯನ್ನು ಸಹ ಶ್ಯಾಮಾ ಶಾಸ್ತ್ರಿಯವರು ರಚಿಸಿದರು.

ಇವರ ಕೃತಿಗಳು ಶಾಮಕೃಷ್ಣ ಎಂಬ ಅಂಕಿತ ಹೊಂದಿವೆ.