ಶ್ರೀ ತ್ಯಾಗರಾಜರು (ತೆಲುಗು:త్యాగరాజు) ಕರ್ನಾಟಕ ಸಂಗೀತ ಪದ್ಧತಿಯ ಮುಖ್ಯ ರಚನಕಾರರಲ್ಲಿ ಒಬ್ಬರು. ಮುತ್ತುಸ್ವಾಮಿ ದೀಕ್ಷಿತ ಮತ್ತು ಶ್ಯಾಮಾ ಶಾಸ್ತ್ರಿ ಇವರ ಜೊತೆಯಲ್ಲಿ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಅವರು ಶ್ರೀರಾಮನ ಪರಮ ಭಕ್ತರಾಗಿದ್ದರು. ದಕ್ಷಿಣ ಭಾರತದ ಎಲ್ಲ ಮುಖ್ಯ ದೇವಸ್ಥಾನಗಳಿಗೆ ಭೇಟಿಯಿತ್ತ ತ್ಯಾಗರಾಜರು ಅಲ್ಲಿನ ದೇವ-ದೇವತೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಏಳುನೂರು ಕೃತಿಗಳನ್ನು ರಚಿಸಿರುವ ತ್ಯಾಗರಾಜರು ಕರ್ನಾಟಕ ಸಂಗೀತದ ಮೂಲಪುರುಷರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ.

ಶ್ರೀ ತ್ಯಾಗರಾಜರು (೧೭೬೭? - ೧೮೪೭)

ಮೇ ೪, ೧೭೬೭ (ಕೆಲವು ಚರಿತ್ರಜ್ಞರ ಪ್ರಕಾರ ೧೭೫೯) ರಲ್ಲಿ ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ರಾಮಬ್ರಹ್ಮಮ್ ಮತ್ತು ಸೀತಮ್ಮನವರ ಪುತ್ರರಾಗಿ ತ್ಯಾಗರಾಜರು ಜನಿಸಿದರು. ಇವರ ಅಜ್ಜ ಗಿರಿರಾಜ ಕವಿ ತಂಜಾವೂರಿನ ಆಸ್ಥಾನದಲ್ಲಿ ಕವಿ-ಸಂಗೀತಗಾರರಾಗಿದ್ದರು. ತ್ಯಾಗರಾಜರ ಮೊದಲ ಪತ್ನಿ ಪಾರ್ವತಮ್ಮ - ಇವರ ನಿಧನದ ನಂತರ ಕಮಲಾಂಬಾರನ್ನು ಮದುವೆಯಾದರು.

ತ್ಯಾಗರಾಜರು ಸಂಗೀತದ ಮೊದಲ ಶಿಕ್ಷಣವನ್ನು ಶ್ರೀ ಸೊಂಟಿ ವೆಂಕಟರಮಣಯ್ಯನವರಿಂದ ಪಡೆದರು. ದೇವರನ್ನು ಅನುಭವಿಸುವ ದಾರಿಯಾಗಿ ಸಂಗೀತವನ್ನು ಕಂಡ ತ್ಯಾಗರಾಜರು ಭಾವ ಪೂರ್ಣ ಸಂಗೀತಕ್ಕೆ ರಾಗ- ಮತ್ತು ತಾಳ-ಬದ್ಧ ಸಂಗೀತಕ್ಕಿ೦ತ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದವರು. ೧೩ ನೇಯ ವಯಸ್ಸಿನಲ್ಲಿಯೇ ತಮ್ಮ ಕೃತಿಗಳಲ್ಲಿ ಒಂದಾದ "ನಮೋ ನಮೋ ರಾಘವ" ವನ್ನು ರಚಿಸಿದರು. ಇವರ "ಎಂದರೋ ಮಹಾನುಭಾವುಲು" ಕೃತಿಯನ್ನು ಕೇಳಿದ ನಂತರ ಸೊಂಟಿ ವೆಂಕಟರಮಣಯ್ಯನವರು ತಂಜಾವೂರಿನ ರಾಜರಿಗೆ ಇವರ ಬಗ್ಗೆ ಪ್ರಭಾವೀ ಸಲಹೆ ನೀಡಿದರು. ಆದರೆ ತ್ಯಾಗರಾಜರು ಮಹಾರಾಜರ ಆಸ್ಥಾನ ಸಂಗೀತಗಾರರಾಗುವ ಆಹ್ವಾನವನ್ನು ನಿರಾಕರಿಸಿದರು. ಅವರು ಶ್ರೀ ನಾರದರಿಂದ ತಮ್ಮ ಸಂಗೀತದ ಪಾಂಡಿತ್ಯಕ್ಕಾಗಿ ಆಶೀರ್ವಾದವನ್ನು ಪಡೆದ ಸಂದರ್ಭದಲ್ಲಿ ಶ್ರೀ ನಾರದ ಮುನಿ ಕೃತಿಯನ್ನು ಹಾಡಿದರು ಎಂಬ ನಂಬಿಕೆ.

ಪುರಂದರದಾಸರ ಪ್ರಭಾವ

ಬದಲಾಯಿಸಿ

ತ್ಯಾಗರಾಜರು ಚಿಕ್ಕಂದಿನಲ್ಲಿ, ಅವರ ತಾಯಿ ಹಾಡುತ್ತಿದ್ದ ಪುರಂದರದಾಸರ ದೇವರನಾಮಗಳಿಂದ ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ. ಇವರ ಹಲವು ಕೃತಿಗಳು ಪುರಂದರದಾಸರ ಕೆಲವು ಪದಗಳಲ್ಲಿ ಇರುವ ಭಾವನೆಯನ್ನೇ ವ್ಯಕ್ತ ಪಡಿಸುವುದು ಗಮನಾರ್ಹ. ಉದಾಹರಣೆಗೆ ರೇವಗುಪ್ತಿ ರಾಗದ ಗ್ರಹಬಲಮೇಮಿ ಎಂಬ ಕೃತಿ ಪುರಂದರರ ಸಕಲ ಗ್ರಹಬಲನೀನೆ ಎಂಬ ರಚನೆಯನ್ನು ಹೋಲುತ್ತಿದ್ದರೆ, ಜಿಂಗಲ ರಾಗದ ಅನಾಥುಡನು ಗಾನು ಎಂಬ ರಚನೆ ಪುರಂದರ ದಾಸರ ನಿನ್ನಂಥ ತಾಯಿ ಎನಗುಂಟು ನಿನಗಿಲ್ಲ ಎಂಬ ಉಗಾಭೋಗದ ಭಾವನೆಯನ್ನೇ ಹೇಳುತ್ತದೆ. ತ್ಯಾಗರಾಜರು ಅವರ ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ, ಪುರಂದರದಾಸರನ್ನು ಸ್ಮರಿಸಿದ್ದಾರೆ.

ಪಂಚರತ್ನ ಕೃತಿಗಳು

ಬದಲಾಯಿಸಿ

ತ್ಯಾಗರಾಜರು ಅವರ ಕಾಲದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಖರಹರಪ್ರಿಯ, ಹರಿಕಾಂಭೋಜಿ ಮೊದಲಾದ ಕೆಲವು ಮೇಳಕರ್ತರಾಗಗಳನ್ನು ಪ್ರಸಿದ್ಧಿಗೆ ತಂದವರು ತ್ಯಾಗರಾಜರೇ. ಘನರಾಗಗಳಾದ ನಾಟ,ಗೌಳ,ಆರಭಿ,ವರಾಳಿ ಮತ್ತು ಶ್ರೀ ರಾಗಗಳಲ್ಲಿ ಇವರು ರಚಿಸಿರುವ ವಿಶೇಷ ಕೃತಿಸಮೂಹಕ್ಕೆ ಘನರಾಗ ಪಂಚರತ್ನ ಎಂದು ಕರೆಯಲಾಗುತ್ತೆ. ಹೀಗೇ ತಿರುವೊಟ್ರಿಯೂರಿನ ತ್ರಿಪುರಸುಂದರಿಯ ಮೇಲೆ, ಕೋವೂರು ಸುಂದರೇಶ್ವರನ ಮೇಲೆ, ಮತ್ತು ಶ್ರೀರಂಗಂ ನ ರಂಗನಾಥನಮೇಲೆ ಇವರು ರಚಿಸಿರುವ ಐದೈದು ಕೃತಿಗಳ ಗುಂಪುಗಳು, ತಿರುವೊಟ್ರಿಯೂರ್ ಪಂಚರತ್ನ, ಕೋವೂರು ಪಂಚರತ್ನ ಮತ್ತು ಶ್ರೀರಂಗಂ ಪಂಚರತ್ನ ಕೃತಿಗಳೆಂದೇ ಪ್ರಸಿದ್ಧವಾಗಿವೆ.

ತ್ಯಾಗರಾಜರು ತಮ್ಮ ಕಡೆಗಾಲದವರೆಗೂ ಕೃತಿಗಳನ್ನು ರಚಿಸುತ್ತಿದ್ದರೆಂದು ತಿಳಿದುಬಂದಿದೆ. ಮನೋಹರಿ ರಾಗದ ಪರಿತಾಪಮುಕನಿಯಾಡಿನ, ಶಹಾನ ರಾಗದ ಗಿರಿಪೈನೆಲಕೊನ್ನ, ಮತ್ತು ವಾಗಧೀಶ್ವರಿ ರಾಗದ ಪರಮಾತ್ಮುಡು ವೆಲಿಗೇ ಎಂಬ ಕೃತಿಗಳನ್ನು ಅವರು ತಮ್ಮ ಜೀವನದ ಕಡೆಯ ಹತ್ತು ದಿನಗಳಲ್ಲಿ ರಚಿಸಿದರೆಂದು ಅಭಿಪ್ರಾಯ ಪಡಲಾಗಿದೆ.

ತ್ಯಾಗರಾಜ ಆರಾಧನೆ

ಬದಲಾಯಿಸಿ

ಕರ್ನಾಟಕ ಸಂಗೀತಕ್ಕೆ ತ್ಯಾಗರಾಜರ ಕಾಣಿಕೆಯ ನೆನಪಾಗಿ ಪ್ರತಿ ವರ್ಷ ತಿರುವಯ್ಯಾರಿನಲ್ಲಿ ಪುಷ್ಯ ಬಹುಳ ಪಂಚಮಿಯಂದು (ಜನವರಿ ಅಥವಾ ಫೆಬ್ರವರಿ ತಿ೦ಗಳುಗಳ ಸಮಯ) "ತ್ಯಾಗರಾಜ ಆರಾಧನೆ" ಉತ್ಸವ ನಡೆಯುತ್ತದೆ. ಅನೇಕ ಮುಖ್ಯ ಸಂಗೀತಗಾರರ ಕಛೇರಿಗಳು ಈ ಸಮಯದಲ್ಲಿ ನಡೆಯುವುದುಂಟು. ವರ್ಷದ ಬೇರೆಬೇರೆ ಸಮಯಗಳಲ್ಲಿ ಅಮೆರಿಕದಲ್ಲೂ ವಿವಿಧೆಡೆಗಳಲ್ಲಿ ತ್ಯಾಗರಾಜ ಆರಾಧನೆ ನಡೆಯುತ್ತದೆ!

ತ್ಯಾಗರಾಜರು ಜನವರಿ ೬, ೧೮೪೭ ರಂದು ನಿಧನರಾದರು.