ಮುತ್ತುಸ್ವಾಮಿ ದೀಕ್ಷಿತ

ಮುತ್ತುಸ್ವಾಮಿ ದೀಕ್ಷಿತರು (ಮಾರ್ಚ್ ೨೪, ೧೭೭೫) ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಇನ್ನಿಬ್ಬರು ತ್ಯಾಗರಾಜರು ಮತ್ತು ಶ್ಯಾಮಾ ಶಾಸ್ತ್ರಿಗಳು. ಬಹುತೇಕ ವಾಗ್ಗೇಯಕಾರರು ತೆಲುಗಿನಲ್ಲಿ ಹೆಚ್ಚು ಕೃತಿಗಳನ್ನು ರಚಿಸಿದ್ದರೆ ದೀಕ್ಷಿತರ ಕೃತಿಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿರುವುದು ಮಹತ್ವದ ವಿಚಾರವಾಗಿದೆ. ‘ಗುರುಗುಹ’ ಎಂಬ ಕಾವ್ಯನಾಮದ ಹಾಸುಹೊಕ್ಕು ದೀಕ್ಷಿತರ ಕೃತಿಗಳಲ್ಲಿ ಕಂಡುಬರುವುದು ಮತ್ತೊಂದು ಪ್ರಧಾನ ಅಂಶ. ಕರ್ಣಾಟಕ ಸಂಗೀತದಲ್ಲಿ ಹಂಸಧ್ವನಿಯಲ್ಲಿರುವ ‘ವಾತಾಪಿ ಗಣಪತಿಂ ಭಜೇ’ ಕೃತಿಯನ್ನು ಅರಿಯದವರೇ ಇಲ್ಲ. ಅಂತಹ ಅಸಂಖ್ಯಾತ ಮಹಾನ್ ಕೃತಿಗಳ ಕರ್ತಾರರಾದವರು ಮುತ್ತುಸ್ವಾಮಿ ದೀಕ್ಷಿತರು. ಇವರ ಸಂಗೀತ ಶೈಲಿಯನ್ನು ನಾರಿಕೇಳಪಾಕಕ್ಕೆ ಹೋಲಿಸಲಾಗುತ್ತದೆ. ತೆಂಗಿನಕಾಯಿಯಲ್ಲಿ, ಹೇಗೆ ಹೊರಗೆ ಕಠಿಣವಾದ ಕರಟವಿದ್ದು ಒಳಗೆ ಸವಿಯಾದ ಎಳನೀರೂ, ರುಚಿಯಾದ ಕಾಯಿಯೂ ಇರುತ್ತದೋ ಅದೇ ರೀತಿ, ಮೇಲ್ನೋಟಕ್ಕೆ ಇವರ ಕೃತಿಗಳು ಕಠಿಣವಾಗಿ ತೋರಿದರೂ,ಅವುಗಳಲ್ಲಿನ ಸಂಗೀತ ಸಾಹಿತ್ಯದ ಅಂಶಗಳಿಂದಾಗಿ, ಅವರ ಅತಿ ಉತ್ತಮ ದರ್ಜೆಯ ವಾಗ್ಗೇಯಕಾರತ್ವಕ್ಕೆ ನಿದರ್ಶನವಾಗಿವೆ.

ಮುತ್ತುಸ್ವಾಮಿ ದೀಕ್ಷಿತರು
Muthuswami Dikshitar 1976 stamp of India.jpg
ಜನನಮಾರ್ಚ್ ೨೪, ೧೭೭೫
ತಿರುವಾರೂರು, ತಮಿಳುನಾಡು
ಮರಣಅಕ್ಟೋಬರ್ ೨೧, ೧೮೩೫
ಇದಕ್ಕೆ ಖ್ಯಾತರುಕರ್ನಾಟಕ ಶಾಸ್ತ್ರೀಯ ಸಂಗೀತದ ಮಹಾನ್ ವಾಗ್ಗೇಯಕಾರರು

ಜೀವನಸಂಪಾದಿಸಿ

ಮುತ್ತುಸ್ವಾಮಿ ದೀಕ್ಷಿತರು ಜನಿಸಿದ ದಿನ ಮಾರ್ಚ್ ೨೪, ೧೭೭೫. ಮುತ್ತುಸ್ವಾಮಿ ದೀಕ್ಷಿತರ ಪೂರ್ವಜರು ತಮಿಳುನಾಡು ಆಂಧ್ರಪ್ರದೇಶಗಳ ಗಡಿ ಪ್ರದೇಶವಾದ ವಿರಿಂಚಿಪುರಂನಲ್ಲಿದ್ದವರು. ದೀಕ್ಷಿತರ ತಂದೆ ರಾಮಸ್ವಾಮಿ ದೀಕ್ಷಿತರೂ ಮಹಾನ್ ಮೇಧಾವಿ ಸಂಗೀತ ವಿದ್ವಾಂಸರು. ಇನ್ನೆರಡು ಸಂಗೀತ ತ್ರಿಮೂರ್ತಿಗಳಂತೆ ಮುತ್ತುಸ್ವಾಮಿ ದೀಕ್ಷಿತರು ಜನಿಸಿದ್ದೂ ತಮಿಳುನಾಡಿನ ತಿರುವಾರೂರಿನಲ್ಲಿ. ಇವರು ತಮ್ಮ ಜೀವನಕಾಲದಲ್ಲಿ ಹಲವಾರುಕಡೆ ಪ್ರಯಾಣಿಸಿ, ಹಲವೆಡೆ ವಾಸಿಸಿ, ಕೊನೆಗೆ ತಿರುನೆಲ್ವೇಲಿ ಬಳಿಯ ಎಟ್ಟಯಪುರಮ್ ನ ಆಸ್ಥಾನದಲ್ಲಿ ಆಶ್ರಯ ಪಡೆದವರು. ಮುತ್ತುಸ್ವಾಮಿ ದೀಕ್ಷಿತರು ತಮ್ಮ 16ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿಷ್ಯ ಶಾಸ್ತ್ರ, ವೈದ್ಯ ಮತ್ತು ಮಂತ್ರಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು.

ದೈವಾನುಗ್ರಹಸಂಪಾದಿಸಿ

ಇವರು ತಮ್ಮ ಗುರುಗಳ ಅಣತಿಯಂತೆ ಕಾಶಿಯ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಯಿತಂತೆ. ನಿಷ್ಣಾತ ವೈಣಿಕರಾಗಿದ್ದ ದೀಕ್ಷಿತರು ಪಂಚದಶ ಗಮಕಗಳನ್ನೂ ಪ್ರಯೋಗಮಾಡಿ ತೋರಿಸಿದ್ದರು. ಇವರು ತಿರುತ್ತಣಿಯ ಷಣ್ಮುಖನ ಆರಾಧಕರೂ ಮತ್ತು ಸುಬ್ರಹ್ಮಣ್ಯನನ್ನು ಒಲಿಸಿಕೊಂಡವರೂ ಆಗಿದ್ದರು. ಸ್ವಾಮಿ ಇವರಿಗೆ ವಲ್ಲಿ-ದೇವಯಾನಿ ಸಮೇತ, ಮಯೂರ ವಾಹನನಾಗಿ ಸಾಕ್ಷಾತ್ಕಾರವಿತ್ತಿದ್ದರೆಂಬ ಪ್ರತೀತಿಯಿತ್ತು. ತಾವು ಈ ’ಗುರುಗುಹ’ನ ದಾಸ, ಅವನ ಪಾದಧೂಳಿಯಿಂದ ಅನುಗ್ರಹ್ರೀತರಾದರೆಂಬ ಭಕ್ತಿಭಾವದಿಂದ ತಮ್ಮ ಮೊಟ್ಟ ಮೊದಲ ಕೃತಿ "ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ.." ರಚನೆಯನ್ನು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಈ ಕೃತಿಯಲ್ಲಿ ಭಗವಂತನ ಚರಣ ಒಂದೇ ಎಲ್ಲದಕ್ಕೂ ಆಶ್ರಯ ಎಂಬ ಪುನೀತಭಾವದ ಅಭಿವ್ಯಕ್ತಿಯಿದೆ.

ದೀಕ್ಷಿತರು ಶ್ರೀವಿದ್ಯೆಯ ಉಪಾಸಕರೂ ಆಗಿದ್ದರು. ಅವರು ರಚಿಸಿದ ಕೃತಿಗಳಲ್ಲಿ ಅವರ ವಿದ್ವತ್ಪೂರ್ಣ ಪಾಂಡಿತ್ಯಗಳ ಅನುಭಾವ ಕಾಣಸಿಗುತ್ತದೆ. ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಸಹಾ ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಒಂದು ವಿಶೇಷತೆಯೇ.

ಅದ್ಭುತ ರಚನಾಶಕ್ತಿಸಂಪಾದಿಸಿ

ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ. ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ. ನವಗ್ರಹ ಕೃತಿಗಳಲ್ಲಿ ಗ್ರಹಗಳ ಪರಿಚಯ ಮತ್ತು ಸ್ಥಾನಗಳನ್ನು ವಿವರಿಸಿದ್ದಾರೆ. ಮೋಕ್ಷ ಸಾಧನೆಗೆ ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗಗಳನ್ನು ಅನುಸರಿಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ನಮ್ಮಲ್ಲಿಯೇ ನಮಗೆ ಆಗಬೇಕಾದರೆ, ನಾವು ಮಾಯೆಯನ್ನು ಜಯಿಸಬೇಕೆಂದು ತೋರಿಸಿದವರು.ದೀಕ್ಷಿತರು ಎಲ್ಲಾ ೭೨ ಮೇಳಕರ್ತ ರಾಗಗಳಲ್ಲೂ ರಚಿಸಿದ್ದಾರೆ.

ನಾದೋಪಾಸನೆಸಂಪಾದಿಸಿ

ದೀಕ್ಷಿತರು ತಮ್ಮ ಜೀವಿತದ ಕೊನೆಯ ಉಸಿರಿರುವವರೆಗೂ ಪರಮಾತ್ಮನ ಧ್ಯಾನದಲ್ಲಿ ನಿರತರಾಗಿದ್ದವರು. ಬಹಳ ಮೃದು ಹೃದಯಿಗಳೂ, ಕರುಣಾಮಯಿಯೂ ಆಗಿದ್ದರು. ತಮ್ಮ ಶಿಷ್ಯನೊಬ್ಬನ ಹೊಟ್ಟೆ ಶೂಲೆಯನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು, ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರಂತೆ. ಅನ್ಯಕುಲದವನಾದ ತಾನು ನವಗ್ರಹ ಶಾಂತಿ ಮಾಡುವುದಾದರೂ ಹೇಗೆ ಎಂದು ವ್ಯತಿಥನಾಗಿದ್ದ ಆತನಿಗೆ ಸ್ವಯಂ ಈ ಕೃತಿಗಳನ್ನು ಬೋಧಿಸಿದರಂತೆ. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಅಂತೆಯೇ ಅದನ್ನು ಸಂಗೀತ ಮುಖೇನ ಕೂಡಾ ಮಾಡಲು ಸಾಧ್ಯವೆಂಬುದನ್ನು ಶಿಷ್ಯನಿಗೆ ತಿಳಿಸಿಕೊಟ್ಟರಂತೆ. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು. ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಠ ಕೃತಿಗಳೆನಿಸಿವೆ.

ಶ್ರೀಚಕ್ರಉಪಾಸನೆಸಂಪಾದಿಸಿ

ಶ್ರೀ ಚಕ್ರ ಉಪಾಸನೆಯಲ್ಲಿ ದೇವಿಯನ್ನು ನಾನಾ ವಿಧವಾಗಿ ಅತ್ಯಂತ ಭಕ್ತಿಯಿಂದ ಆರಾಧಿಸುವ ಅನುಷ್ಠಾನಗಳಿವೆ. ಇದರಲ್ಲಿ ಒಂಭತ್ತು ಆವರಣಗಳಿವೆ. ಪ್ರತಿಯೊಂದು ಆವರಣದಲ್ಲೂ ಪೂಜೆಯ ವಿಧಾನಕ್ಕೆ ಬೇರೆಯದೇ ಆದ ಹೆಸರೂ ಮತ್ತು ಆ ಆವರಣದ ಅಧಿದೇವತೆಗಳೂ ಇದ್ದಾರೆ. ಇಲ್ಲಿರುವ ಒಂಭತ್ತು ಆವರಣಗಳನ್ನೂ ಪೂಜಿಸಿದ ನಂತರ ಶ್ರೀಚಕ್ರದ ಮಧ್ಯದಲ್ಲಿರುವ "ಬಿಂದು"ವಿನಲ್ಲಿ ನೆಲೆಸಿರುವ ದೇವಿಯ ಅನುಗ್ರಹ ನಮಗೆ ಲಭಿಸುವುದು. ಈ ನವ ಆವರಣಗಳಿಂದ ಕೂಡಿದ "ಶ್ರೀಚಕ್ರ"ದ ಉಪಾಸನೆಯೇ "ಶ್ರೀವಿದ್ಯೆ". ಆ ಲಲಿತಾಂಬಿಕೆ, ಜಗನ್ಮಾತೆ, ಪರಾಶಕ್ತಿ, ಬಿಂದು ಸ್ವರೂಪಳಾಗಿ ಶ್ರೀ ಚಕ್ರದಲ್ಲಿ ಕುಳಿತಿದ್ದಾಳೆ. ಶ್ರಿ ಚಕ್ರದ ಒಂಬತ್ತು ಆವರನಗಳ ಆರಾಧನೆಗಾಗಿ "ಕಮಲಾಂಬ ನವಾವರಣ" ಕೃತಿಗಳ ಗುಚ್ಛವನ್ನು ದೀಕ್ಷಿತರು ರಚಿಸಿದ್ದಾರೆ. ಸಾಟಿಯಿಲ್ಲದ ಅತ್ಯಂತ ಉತ್ಕೃಷ್ಟವಾದ ನವಾವರಣ ಕೃತಿಗಳಲ್ಲಿ ದೀಕ್ಷಿತರು ಬೀಜಾಕ್ಷರಗಳನ್ನು ಅಳವಡಿಸಿ, ಹಂತಹಂತವಾಗಿ ದೇವಿಯ ಪಾದಾರವಿಂದಗಳಲ್ಲಿ ಶರಣಾಗುವುದನ್ನು ವಿದ್ವತ್ ಪೂರ್ಣವಾಗಿ ತಿಳಿಸಿದ್ದಾರೆ.

ಕೆಲವೊಂದು ಪ್ರಸಿದ್ಧ ಕೀರ್ತನೆಗಳುಸಂಪಾದಿಸಿ

ಈ ಪರಿಯಾಗಿ ಮುತ್ತುಸ್ವಾಮಿ ದೀಕ್ಷಿತರು ಅಸಂಖ್ಯಾತ ಕೀರ್ತನೆಗಳನ್ನು ರಚಿಸಿದ್ದಾರೆ. ಇದುವರೆಗೆ ಗುರುತಿಸಲಾಗಿರುವ ಅವರ ಕೃತಿಗಳ ಸಂಖ್ಯೆಯೇ ಐದು ನೂರಕ್ಕೂ ಹೆಚ್ಚಿನದು. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಏಕದಂತಂ ಭಜೇಹಂ, ಸಿದ್ದಿ ವಿನಾಯಕಂ ಅನಿಶಂ, ಶ್ರೀಮಹಾ ಗಣಪತಿರವತುಮಾಂ, ವಾತಾಪಿ ಗಣಪತಿಂ, ಸುಬ್ರಮಣ್ಯೇನ ರಕ್ಷಿತೋಹಂ, ಸ್ವಾಮಿನಾಥ ಪರಿಪಾಲಯಾ ಸುಮಾಂ, ಕಾಮಕೋಟಿ ಪೀಠವಾಸಿನಿ ಸೌಗಂಧಿಂ, ಕಂಜದಳಾಯತಾಕ್ಷಿ ಕಾಮಾಕ್ಷಿ, ಶಿವಕಾಮೇಶ್ವರಿಂ ಚಿಂತಯೇಹಂ, ಶ್ರೀವಿಶ್ವನಾಥಂ ಭಜೇಹಂ, ಮಾಮವ ಪಟ್ಟಾಭಿರಾಮ, ಶ್ರೀ ರಾಮಂ ರವಿ ಕುಲಾಬ್ಧಿ ಸೋಮಂ, ಶ್ರೀರಂಗಪುರವಿಹಾರ, ಶ್ರೀವರಲಕ್ಷ್ಮಿ ನಮಸ್ತುಭ್ಯಂ, ಶ್ರೀ ಸರಸ್ವತಿ ನಮೋಸ್ತುತೆ, ವೀಣಾ ಪುಸ್ತಕಧಾರಿಣಿಂ ಆಶ್ರಯೇ, ಸರಸಿಜನಾಭ ಸೋದರಿ ಶಂಕರಿ ಮುಂತಾದವುಗಳು ಜನಸಾಮಾನ್ಯರಲ್ಲೂ ಅತ್ಯಂತ ಜನಪ್ರಿಯವಾಗಿವೆ. ಶ್ರೀ ದೀಕ್ಷಿತರು ಪಂಚ ತತ್ವಗಳನ್ನೊಳಗೊಂಡ ಪ್ರದೇಶಗಳಲ್ಲಿ ಪರಮೇಶ್ವರ ಕುರಿತಾದ ವಿಶೇಷ ಕೃತಿಗಳನ್ನು ರಚಿಸಿದ್ದಾರೆ. ನವಗ್ರಹ ಕೃತಿಗಳು, ನವಾವರಣ ಕೃತಿಗಳು, ನೀಲೋತ್ಪಲಾಂಬಿಕಾ ಕೃತಿಗಳು ಎಂಬ ಅನೇಕ ಗುಚ್ಛಗಳನ್ನು ರಚಿಸಿದ್ದಾರೆ.

ವಿದಾಯಸಂಪಾದಿಸಿ

ಆಶ್ವೀಜ ಬಹುಳ ಚತುರ್ದಶಿ - ನರಕ ಚತುರ್ದಶಿ ದೀಪಾವಳಿ ಪರ್ವ ದಿನವಾದ್ದರಿಂದ ದೀಕ್ಷಿತರು (ಅಕ್ಟೋಬರ್ ೨೧, ೧೮೩೫) ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಯಂಕಾಲ ತಮ್ಮ ಎಲ್ಲಾ ಶಿಷ್ಯರನ್ನೂ ಕರೆದು ತಾವೇ ರಚಿಸಿದ ಪೂರ್ವಿ ಕಲ್ಯಾಣಿ ರಾಗದ "ಮೀನಾಕ್ಷಿ ಮುದಂ ದೇಹಿ" ಕೃತಿಯನ್ನು ವೀಣೆಯಲ್ಲಿ ನುಡಿಸುತ್ತಾ, ಎಲ್ಲರಿಗೂ ಹಾಡಲು ಹೇಳುತ್ತಾರೆ. "ಮೀನಲೋಚನಿ ಪಾಶಮೋಚನಿ" ಎಂಬ ಅನುಪಲ್ಲವಿಯ ಸಾಹಿತ್ಯವನ್ನು ಪದೇ ಪದೇ ಹಾಡಿಸುತ್ತಾ, ವೀಣೆ ಬದಿಗಿಟ್ಟು ತಂಬೂರಿಯ ನಾದ ಕೇಳುತ್ತಾ, ಆ ಜಗನ್ಮಾತೆಯ ಮಡಿಲಿನಲ್ಲಿ ಒರಗಿ ಬಿಡುತ್ತಾರೆ ತಾಯಿಯಲ್ಲಿ ಅವರ ಆತ್ಮ ಲೀನವಾಗಿ ಬಿಡುತ್ತದೆ. ನಮ್ಮ ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು "ದೀಕ್ಷಿತರ ದಿನ" ಎಂದೇ ಆಚರಿಸಲಾಗುತ್ತಿದೆ.

ಆಕರಗಳುಸಂಪಾದಿಸಿ