ಶುಭ ಶುಕ್ರವಾರವು ಕ್ರೈಸ್ತರಿಗೆ ಒಂದು ಪವಿತ್ರವಾದ ದಿನ. ಕ್ರಿಸ್ಮಸ್ ಹೇಗೆ ಯೇಸುಕ್ರಿಸ್ತನ ಜನನವನ್ನು ಸೂಚಿಸುತ್ತೆಯೋ ಹಾಗೆ ಶುಭ ಶುಕ್ರವಾರವು ಯೇಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಈ ದಿನವನ್ನು ಕಪ್ಪು ಶುಕ್ರವಾರ, ಪವಿತ್ರ ಶುಕ್ರವಾರ, ದೊಡ್ಡ ಶುಕ್ರವಾರ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ. ಪವಿತ್ರ ಸಪ್ತಾಹದ ಅಂಗವಾದ ಶುಭ ಶುಕ್ರವಾರವು ಯೆಹೂದ್ಯರ ಆಚರಣೆಯಾದ ಪಾಸ್ಕದೊಂದಿಗೆ ತಳುಕು ಹಾಕಿಕೊಳ್ಳುತ್ತದೆ.[]

ಶುಭ ಶುಕ್ರವಾರ
ರೀತಿಕ್ರೈಸ್ತಧರ್ಮ
ಮಹತ್ವಯೇಸುಕ್ರಿಸ್ತನ ಶಿಲುಬೆ ಯಾತನೆ ಮತ್ತು ಮರಣವನ್ನು ಸ್ಮರಿಸುವ ದಿನ
ಆಚರಣೆಗಳುಸಾಂಭ್ರಮಿಕ ಆಚರಣೆಗಳಿಲ್ಲ
ಆಚರಣೆಗಳುಆರಾಧನೆ, ಪ್ರಾರ್ಥನೆ ಹಾಗೂ ಜಾಗರಣೆ ವಿಧಿಗಳು, ಉಪವಾಸ, ದಾನಧರ್ಮ
ದಿನಾಂಕಈಸ್ಟರ್ ಭಾನುವಾರಕ್ಕೆ ಮುಂಚೆ ಬರುವ ಶುಕ್ರವಾರ

ಅಧಿಕೃತ ಶುಭಸಂದೇಶಗಳ ಪ್ರಕಾರ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ್ದು ಶುಕ್ರವಾರವೆನ್ನಲಾಗಿದೆ.[] ಶುಭ ಶುಕ್ರವಾರ ಕ್ರಿಸ್ತಶಕ ೩೩ ರಲ್ಲಿ ಸಂಭವಿಸಿತೆಂದು ಇತ್ತಂಡಗಳು ಅಂದಾಜಿಸಿವೆ, ಆದರೆ ಪವಿತ್ರ ಬೈಬಲ್ ಮತ್ತು ಜೂಲಿಯನ್ ಕ್ಯಾಲೆಂಡರ್ಗಳ ನಡುವಿನ ವ್ಯತ್ಯಾಸಗಳು ಹಾಗೂ ಚಂದ್ರನ ಚಲನೆಯನ್ನು ಅಭ್ಯಸಿಸಿದ ಐಸಾಕ್ ನ್ಯೂಟನ್ ಪ್ರಕಾರ ಅದು ಕ್ರಿಸ್ತಶಕ ೩೪.[][][][][][] ಮೂರನೇ ವಿಧಾನದಲ್ಲಿ ಚಂದ್ರಚಲನೆಯ ವೀಕ್ಷಣೆಯನ್ನು ಪರಿಗಣಿಸಿ (ಶಿಲುಬೆಗೇರಿಸಿದ ಸಂದರ್ಭದ ಸಂಪೂರ್ಣ ಸೂರ್ಯಗ್ರಹಣ ಆಧರಿಸಿ) ಹಾಗೂ ಪವಿತ್ರ ಬೈಬಲ್ಲಿನ ಪ್ರೇಷಿತರ ಕಾರ್ಯಕಲಾಪಗಳು ಭಾಗದಲ್ಲಿ ಯೇಸುವಿನ ಶಿಷ್ಯ ಪೇತ್ರನು ದಾಖಲಿಸಿದ ರಕುತ ಚಂದ್ರಮನ ಪ್ರಸ್ತಾಪವನ್ನು ಅನುಸರಿಸಿ ಶುಭಶುಕ್ರವಾರವು ಕ್ರಿಸ್ತಶಕ ೩೩ನೇ ವರ್ಷದ ಏಪ್ರಿಲ್ ೩ಕ್ಕೆ ಸರಿಹೊಂದುವುದೆನ್ನಲಾಗಿದೆ.[][೧೦]

ಬೈಬಲ್ ಟಿಪ್ಪಣಿಗಳು

ಬದಲಾಯಿಸಿ
 
The Judas Kiss by Gustave Doré, 1866

ಶುಭಸಂದೇಶಗಳ ಪ್ರಕಾರ ಜೆರುಸಲೇಮ್ ದೇವಾಲಯದ ಕಾವಲುಪಡೆಯವರು ಯೇಸುವಿನ ಶಿಷ್ಯ ಜೂದಾಸ್ ಇಸ್ಕಾರಿಯೋತನನ್ನು ಮುಂದಿಟ್ಟುಕೊಂಡು ಬಂದು ಗೆತ್ಸೆಮನೆ ತೋಟದಲ್ಲಿ ಯೇಸುವನ್ನು ಬಂಧಿಸಿದರು. ಅದಕ್ಕಾಗಿ ಜೂದಾಸನು ೩೦ ಬೆಳ್ಳಿನಾಣ್ಯಗಳನ್ನು ಲಂಚವಾಗಿ ಪಡೆದಿದ್ದನು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕಾರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿ “ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಆ ವ್ಯಕ್ತಿ, ಅವನನ್ನು ಹಿಡಿದುಕೊಳ್ಳಿ” ಸೂಚಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ನಿಗದಿಮಾಡಿ ಕೊಟ್ಟರು. ಯೇಸುವನ್ನು ಬಂಧಿಸಿ ಪ್ರಧಾನಗುರು ಕಾಯಫನ ಮಾವನಾದ ಅನ್ನಾಸನ ಮನೆಗೆ ಕರೆತಂದು ಅಲ್ಲಿ ಪ್ರಶ್ನಿಸಿದಾಗ ಏನೂ ಉತ್ತರ ದೊರೆಯಲಿಲ್ಲವಾದ ಕಾರಣ ಕಾಯಫನ ನೇತೃತ್ವದ ಸೆನ್ಹೆದ್ರಿನ್ ಎಂಬ ನ್ಯಾಯಸ್ಥಾನದ ಮುಂದೆ ತಂದು ನಿಲ್ಲಿಸಿದರು.

ವಿಚಾರಣೆ ವೇಳೆಯಲ್ಲಿ ಹಲವಾರು ಮಂದಿ ಸುಳ್ಳು ಆರೋಪಗಳನ್ನು ಮಾಡಿದರೂ ಯೇಸು ಮೌನವಾಗಿದ್ದರು. ಕೊನೆಗೆ ಪ್ರಧಾನಗುರುವು “ದೇವರ ಹೆಸರಿನಲ್ಲಿ ಪ್ರಮಾಣಮಾಡಿ ಕೇಳುತ್ತೇನೆ, ’ನೀನು ದೇವಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕನೋ?’ ಎಂಬ ಪ್ರಶ್ನೆಗೆ ನೀನು ಉತ್ತರಿಸಲೇಬೇಕು” ಎಂದು ಜುಲುಮೆ ಮಾಡಿದನು. ಯೇಸು ಉತ್ತರಿಸುತ್ತಾ “ಅದು ನಿನ್ನ ಬಾಯಿಂದಲೇ ಬಂದಿದೆ, ಮೇಘಾವೃತವಾದ ಸ್ವರ್ಗದಲ್ಲಿ ದೇವಪುತ್ರನು ಸರ್ವಶಕ್ತನ ಬಲಗಡೆ ಕುಳಿತಿರುವುದನ್ನು ನೀನು ಕಾಲಾಂತರದಲ್ಲಿ ನೋಡುವಿ” ಎಂದರು. ಕೂಡಲೇ ಸಿಟ್ಟಾದ ಕಾಯಫನು ಇದು ಧರ್ಮನಿಂದನೆ ಎಂದು ಅಬ್ಬರಿಸಿ ಯೇಸುವಿಗೆ ಮರಣದಂಡನೆ ವಿಧಿಸಿದನು.

 
ಮುಂಬಯಿ ನಗರದಲ್ಲಿ ಭಾರತೀಯ ಕ್ರೈಸ್ತರು ನಡೆಸುತ್ತಿರುವ ಶುಭ ಶುಕ್ರವಾರದ ಶಿಲುಬೆಯಾತ್ರೆಯ ಒಂದು ದೃಶ್ಯ

ಮರು ಬೆಳಗ್ಗೆ ಅವರು ಯೇಸುವಿನ ಮೇಲೆ ಪಿತೂರಿ ಹಾಗೂ ದೇಶದ್ರೋಹದ ಆರೋಪ ಹೊರಿಸಿ ರೋಮನ್ ರಾಜ್ಯಪಾಲ ಪೋಂಶಿಯಸ್ ಪಿಲಾತುಸ್ ಬಳಿಗೆ ಕರೆತಂದರು. (Luke 23:1-2). ಪಿಲಾತನು ಇದು ನಿಮ್ಮ ಧರ್ಮಕ್ಕೆ ಸಂಬಂಧಪಟ್ಟ ವಿಷಯವಾದುದರಿಂದ ನೀವೇ ಕ್ರಮ ಕೈಗೊಳ್ಳಿ ಎಂದ. ಅದಕ್ಕವರು ತಾವು ರೋಮನ್ ರಾಜ್ಯಾಳ್ವಿಕೆಗೆ ಒಳಪಟ್ಟಿರುವುದರಿಂದ ಮರಣದಂಡನೆ ನೀಡುವ ಅಧಿಕಾರ ಹೊಂದಿಲ್ಲ ಎಂದುತ್ತರಿಸಿದರು. (John 18:31).

ರಾಜ್ಯಪಾಲನು ವಿಚಾರಣೆ ನಡೆಸಿ ಮರಣಶಿಕ್ಷೆಗೆ ಅರ್ಹವಾದ ಯಾವ ತಪ್ಪನ್ನೂ ಕಾಣದೆ, ಯೇಸು ಗಲಿಲೇಯದವನಾದುದರಿಂದ ಅಲ್ಲಿಯ ರಾಜನಲ್ಲಿಗೆ ಹೋಗಿ ನಿವೇದಿಸಿಕೊಳ್ಳಿ ಎಂದು ಕಳಿಸಿಬಿಡುತ್ತಾನೆ. ಗಲಿಲೇಯದ ರಾಜ ಹೆರೋದನು ಯೇಸುವನ್ನು ಪ್ರಶ್ನಿಸಿ ಏನೂ ಉತ್ತರ ಪಡೆಯದೆ ಮತ್ತೆ ರಾಜ್ಯಪಾಲನಲ್ಲಿಗೆ ಕಳುಹಿಸುತ್ತಾನೆ. ರಾಜ್ಯಪಾಲನು ಯೇಸುವಿಗೆ ಚಾಟಿಯೇಟಿನ ಶಿಕ್ಷೆ ನೀಡಿ ಬಿಟ್ಟುಬಿಡುತ್ತಾನೆ. (Luke 23:3-16) ಆಗ ಜನರಗುಂಪು ಯೇಸುವಿನ ಬದಲಿಗೆ ಬರಬ್ಬನೆಂಬ ಕುಖ್ಯಾತ ಕೈದಿಯನ್ನು ಬಿಟ್ಟುಬಿಡಿ ಯೇಸುವನ್ನು ಶಿಲುಬೆಗೇರಿಸಿ ಎಂದು ಕೂಗುತ್ತದೆ. (Mark 15:6-14). ಪೋಂಶಿಯಸ್ ಪಿಲಾತನ ಹೆಂಡತಿಯು ಯೇಸುವನ್ನು ನೋಡಿ ಕನಿಕರಗೊಂಡು ನಿರಪರಾಧಿಯನ್ನು ಶಿಕ್ಷಿಸಬೇಡಿ ಎಂದು ತನ್ನ ಗಂಡನನ್ನು ಕೇಳಿಕೊಳ್ಳುತ್ತಾಳೆ. (Matthew 27:19). ಆಗ ಪಿಲಾತನು ಯೇಸುವನ್ನು ಬಿಡುಗಡೆ ಮಾಡಲೆತ್ನಿಸುತ್ತಾನಾದರೂ ಪ್ರಧಾನಗುರುವು ಅವನು ದೇವರಪುತ್ರ ಎಂದು ಹೇಳಿರುವುದರಿಂದ ಮರಣದಂಡನೆ ನೀಡಲೇಬೇಕು ಎಂದು ವಿನಂತಿಸುತ್ತಾನೆ. ಅದನ್ನು ಕೇಳಿದ ಪಿಲಾತನು ಯೇಸುವನ್ನು ಒಳಗೆ ಕರೆದೊಯ್ದು ಆತನಾರೆಂದು ವಿಚಾರಿಸುತ್ತಾನೆ. (John 19:1-9).

 
ಆಂಟೊನಿಯೊ ಸಿಸೆರಿಯು ೧೯ನೇ ಶತಮಾನದಲ್ಲಿ ಚಿತ್ರಿಸಿದ ಪಿಲಾತನರಮನೆಯಲ್ಲಿ ಯೇಸುವಿನ ಪ್ರದರ್ಶನ

ಗುಂಪಿನೆದುರು ಕೊನೆಯ ಬಾರಿಗೆ ಬರುವ ಪಿಲಾತ ಯೇಸು ನಿರಪರಾಧಿಯೆಂದು ಘೋಷಿಸಿ ಅವನನ್ನು ಶಿಕ್ಷಿಸಲು ಯಾವುದೇ ಸಕಾರಣಗಳಿಲ್ಲ ಅವನ ರಕ್ತಕ್ಕೆ ನಾನು ಹೊಣೆಯಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾನೆ. ಯೇಸುವನ್ನು ಶಿಲುಬೆಗೇರಿಸಲು ಆ ಜನರಿಗೊಪ್ಪಿಸುವುದರಿಂದ ಮುಂದಾಗಬಹುದಾದ ಗಲಭೆಯನ್ನು ತಡೆಯುವುದಲ್ಲದೆ ತನ್ನ ಸ್ಥಾನ ಉಳಿಸಿಕೊಳ್ಳಲು ಸಾಧ್ಯ ಎಂಬ ಭಾವನೆ ಅವನದು. (Matthew 27:24-26) ಯೇಸುವಿನ ತಲೆಗೆ ಮುಳಿನ ಕಿರೀಟ ತೊಡಿಸಿ ನೇರಳೆ ಬಣ್ಣದ ಬಟ್ಟೆ ತೊಡಿಸಿದರು ಇಗೋ ಇವನನ್ನು ನಿಮ್ಮ ಕಡೆಗೆ ಕೊಡುತ್ತೇನೆ ಎಂದು ಜನರಿಗೆ ಒಪ್ಪಿಸಿದನು. ಯೇಸು ಶಿಲುಬೆ ಹೊತ್ತು ಮೂರು ಸಲ ನೆಲಕ್ಕೆ ಬಿದ್ದು ಮತ್ತೆ ಎದ್ದು ನಡೆಯುತ್ತರೆ . ಶಿಲುಬೆ ಹೊತ್ತು ವಧಾಸ್ಥಾನವಾದ ಕಪಾಲಬೆಟ್ಟಕ್ಕೆ ಹೋಗುತ್ತಾರೆ. ಶಿಲುಬೆ ಹೊರಲು ಕೆಲಕಾಲ ಅವರಿಗೆ ಸಿರೇನ್ ಊರಿನ ಸಿಮೋನ್ ಎಂಬಾತ ಸಹಾಯ ಮಾಡುತ್ತಾನೆ. ಕಪಾಲ ಬೆಟ್ಟವು ತಲೆಬುರುಡೆಯಾಕಾರದಲ್ಲಿದ್ದು ಗ್ರೀಕಿನಲ್ಲಿ ಗೊಲ್ಗೊಥಾ ಎಂದೂ ಲತೀನಿನಲ್ಲಿ ಕಲ್ವಾರಿ ಎಂದೂ ಕರೆಯುತ್ತಿದ್ದರು. ಅಲ್ಲಿ ಯೇಸುವನ್ನು ಇತರ ಇಬ್ಬರು ಅಪರಾಧಿಗಳೊಂದಿಗೆ ಶಿಲುಬೆಗೇರಿಸಲಾಯಿತು . (John 19:17-22).

ಆಗ ನಡುಮಧ್ಯಾಹ್ನದಿಂದ ಮೂರುಗಂಟೆಯವರೆಗೆ ನಾಡಿನಲ್ಲೆಲ್ಲಾ ಕತ್ತಲೆ ಆವರಿಸಿತು.[೧೧] ಯೇಸು ಇವರನ್ನು ಮಾಡುತ್ತಿದ್ದಾರೆ ಎಂದು ಅವರು ಅರಿಯರು ಅವರನ್ನು ಮನ್ನಿಸಿ ಎಂದು ಗಟ್ಟಿಯಾಗಿ ಕೂಗಿ ಪ್ರಾಣ ಬಿಟ್ಟರು. ಆಗ ಭೂಕಂಪವಾಯಿತು, ಸಮಾಧಿಗಳು ತೆರೆದುಕೊಂಡವು, ಮಹಾದೇವಾಲಯದ ಪರದೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಇಬ್ಭಾಗವಾಯಿತು, ಕಾವಲಿಗಿದ್ದ ಶತಾಧಿಪತಿಯು ’ನಿಜವಾಗಿಯೂ ಈ ಮನುಷ್ಯ ದೇವರಪುತ್ರನೇ ಹೌದು!’ ಎಂದು ಉದ್ಗರಿಸಿದ. (Matthew 27:45-54)

ಸೆನ್ಹೆದ್ರಿನ್ ಸಭೆಯ ಸದಸ್ಯನೂ ಯೇಸುವಿನ ಅಭಿಮಾನಿಯೂ ಯೇಸುವಿನ ಮರಣಶಿಕ್ಷೆಯನ್ನು ವಿರೋಧಿಸಿದವನೂ ಆಗಿದ್ದ ಅರಿಮಥಾಯದ ಜೋಸೆಫ್ ಎಂಬಾತ, ಪಿಲಾತನ ಬಳಿಗೆ ಹೋಗಿ ಯೇಸುವಿನ ಶವಕ್ಕಾಗಿ ಮನವಿ ಸಲ್ಲಿಸುತ್ತಾನೆ. (Luke 23:50-52). ಅದೇ ರೀತಿ ಮತ್ತೊಬ್ಬ ಅಭಿಮಾನಿಯೂ ಸೆನ್ಹೆದ್ರಿನ್ ಸದಸ್ಯನೂ ಆದ ನಿಕೊದೆಮುಸ್ ಎಂಬುವನು ಯೇಸುವಿನ ದೇಹಕ್ಕೆ ಹಚ್ಚಲು ರಕ್ತಬೋಳ ಹಾಗೂ ಅಗರು ಕಲಸಿದ ಮೂವತ್ತು ಕಿಲೊಗ್ರಾಮಿನಷ್ಟು ಚೂರ್ಣವನ್ನು ತಂದನು. (John 19:39-40). ಪಿಲಾತನು ಶತಾಧಿಪತಿಯತ್ತ ನೋಡಿ ಯೇಸು ಸತ್ತದ್ದನ್ನು ಖಚಿತಪಡಿಸಿಕೊಂಡನು. (Mark 15:44). ಸೈನಿಕನೊಬ್ಬ ಈಟಿಯಿಂದ ಯೇಸುವಿನ ಪಾರ್ಶ್ವವನ್ನು ತಿವಿದು ನೋಡಿದನು, ಅಲ್ಲಿಂದ ರಕ್ತವೂ ನೀರೂ ಹೊರಬಂತು, (John 19:34), ಶತಾಧಿಪತಿಯು ಯೇಸು ಸತ್ತಿರುವ ಕುರಿತು ಪಿಲಾತನಿಗೆ ಮಾಹಿತಿ ನೀಡಿದನು. (Mark 15:45).

ಯೇಸುವಿನ ಶರೀರವನ್ನು ಪಡೆದುಕೊಂಡಾಗ ನಿಕೊದೆಮನು ಸಹಾ ಅವನೊಂದಿಗೆ ಸೇರಿ ಯೇಸುವಿನ ಶರೀರಕ್ಕೆ ಯೆಹೂದ್ಯ ಶವಸಂಸ್ಕಾರ ಪದ್ಧತಿಯಂತೆ ಸುಗಂಧದ್ರವ್ಯಗಳನ್ನು ಪೂಸಿದರು. (John 19:39-40). ಅರಿಮಥೆಯದ ಜೋಸೆಫನು ಆ ದೇಹವನ್ನು ಶುಭ್ರವಾದ ನಾರುಮಡಿಯಿಂದ ಸುತ್ತಿ ಸನಿಹದ ತೋಟದಲ್ಲಿ ತನಗಾಗಿಯೇ ಕಲ್ಲಿನಲ್ಲಿ ಕೊರೆಯಿಸಿಕೊಂಡಿದ್ದ ಸಮಾಧಿಯಲ್ಲಿರಿಸಿದನು.(Matthew 27:59-60) ಆಮೇಲೆ ಇಬ್ಬರೂ ದೊಡ್ಡ ಬಂಡೆಯೊಂದನ್ನು ಉರುಳಿಸಿ ಸಮಾಧಿಯ ಬಾಗಿಲನ್ನು ಮುಚ್ಚಿದರು. (Matthew 27:60). ಆಗಲೇ ಸೂರ್ಯಾಸ್ತವಾಗುತ್ತಿದ್ದುದರಿಂದಲೂ ಮರುದಿನ ಸಬ್ಬತ್ ದಿನವಾದುದರಿಂದಲೂ ಅವರು ಮನೆಗೆ ಹಿಂದಿರುಗಿ ವಿರಮಿಸಿದರು. (Luke 23:54-56). ಮೂರನೇ ದಿನ, ಅಂದರೆ ಭಾನುವಾರದ ಮುಂಜಾನೆ, ಯೆಹೂದ್ಯರ ಪಾಸ್ಕ ಹಬ್ಬ, ಯೇಸು ಪುನರ್ಜೀವಂತನಾದನು. ಆ ದಿನವನ್ನೇ ಈಸ್ಟರ್ ಎಂದು ಆಚರಿಸಲಾಗುತ್ತದೆ.

ರೋಮನ್ ಕ್ಯಾಥೊಲಿಕ್ ಸಂಪ್ರದಾಯದಲ್ಲಿ

ಬದಲಾಯಿಸಿ

ಉಪವಾಸದ ದಿನ

ಬದಲಾಯಿಸಿ
 
Crucifix ಅಂತಿಮ ನಮನಕ್ಕೆ ಸಿದ್ಧತೆ

ಕಥೋಲಿಕ ಧರ್ಮಸಭೆಯು ಶುಭಶುಕ್ರವಾರವನ್ನು ಉಪವಾಸದ ದಿನವೆಂದು ಘೋಷಿಸಿದೆ. ಅಂದರೆ ಒಂದು ಹೊತ್ತು ಮಾತ್ರ ಮಿತಾಹಾರ ಸೇವಿಸುವಂತೆಯೂ ಮಾಂಸಾಹಾರವನ್ನು ವರ್ಜಿಸುವಂತೆಯೂ ವಿಧಿಸಿದೆ.

ದಿನದ ಸಾಂಗ್ಯಗಳು

ಬದಲಾಯಿಸಿ

ಲತೀನ್ ಪದ್ಧತಿಯ ಪ್ರಕಾರ ದೊಡ್ಡಗುರುವಾರದ ಪೂಜೆಯಾದ ಮೇಲೆ ಪಾಸ್ಕ ಜಾಗರಣೆಯವರೆಗೂ ಯಾವುದೇ ಪೂಜೆ ಇರುವುದಿಲ್ಲ. ಸಾವಿನಂಚಿನಲ್ಲಿರುವವರಿಗೆ ದೀಕ್ಷಾಸ್ನಾನ, ಪ್ರಾಯಶ್ಚಿತ್ತವಿಧಿ, ಅಂತಿಮ ಅಭ್ಯಂಗಗಳಿಗೆ ಇದು ಅನ್ವಯಿಸುವುದಿಲ್ಲ. ಈ ಅವಧಿಯಲ್ಲಿ ಚರ್ಚಿನೊಳಗಿನ ಶಿಲುಬೆ, ದೀಪಸ್ತಂಭ, ಪೀಠವಸ್ತ್ರಗಳನ್ನು ತೆಗೆದುಹಾಕಿ ಪೀಠವನ್ನು ಬರಿದುಗೊಳಿಸಲಾಗುತ್ತದೆ. ಪವಿತ್ರ ತೀರ್ಥದ ಕುಂಡಗಳನ್ನೂ ತೀರ್ಥದಾನಿಗಳನ್ನೂ ಬರಿದುಗೊಳಿಸಲಾಗುತ್ತದೆ.[೧೨] ಈ ಅವಧಿಯಲ್ಲಿ ದೇವಾಲಯದ ಗಂಟೆಗಳನ್ನೂ ನುಡಿಸುವುದಿಲ್ಲ.

ಯೇಸುವಿನ ಶಿಲುಬೆಯಾತನೆಯ ಸ್ಮರಣೆಯನ್ನು ಮಧ್ಯಾಹ್ನ ಮೂರುಗಂಟೆಯ ವೇಳೆಗೆ ಶುರುಮಾಡಲಾಗುವುದು. ಗುರುಗಳು ಕೆಂಪು ವಸ್ತ್ರಗಳನ್ನು ಧರಿಸುತ್ತಾರೆ. ೧೯೫೫ಕ್ಕೆ ಮೊದಲು ಕಪ್ಪು ವಸ್ತ್ರಗಳನ್ನು ಬಳಸುತ್ತಿದ್ದರು.[೧೩]

ಆರಾಧನಾ ವಿಧಿ

ಬದಲಾಯಿಸಿ
 
ಫಿಲಡೆಲ್ಫಿಯಾದ ಲೂರ್ದು ಮಾತೆಯಾಲಯದಲ್ಲಿ ಶುಭಶುಕ್ರವಾರದ ಆಚರಣೆ

ಇಂದಿನ ಆರಾಧನಾ ವಿಧಿಯಲ್ಲಿ ಮೂರು ಭಾಗಗಳಿದ್ದು, ದೈವನುಡಿ, ಶಿಲುಬೆಗೆ ನಮನ ಹಾಗೂ ಸತ್ಪ್ರಸಾದ ವಿತರಣೆ ಇರುತ್ತವೆ.

  • ದೈವನುಡಿಯ ವಿಧಿಯಲ್ಲಿ ಮೊದಲಿಗೆ ಗುರುಗಳು ಹಾಗೂ ಅವರ ಸಹಾಯಕರು ಮೌನವಾಗಿ ಆಲಯ ಪ್ರವೇಶ ಮಾಡುತ್ತಾರೆ. ಹಾಡನ್ನು ಸಹಾ ಹಾಡುವುದಿಲ್ಲ. ಅವರು ಕೆಲಹೊತ್ತು ಬೋರಲಾಗಿ ಮಲಗಿ ಸಮುದಾಯದ ಪರವಾಗಿ ದುಃಖ ಮತ್ತು ಪ್ರಾಯಶ್ಚಿತ್ತವನ್ನು ವ್ಯಕ್ತಪಡಿಸುತ್ತಾರೆ.[೧೪] ಆಮೇಲೆ ಸಮುದಾಯದ ಪ್ರಾರ್ಥನೆಯಿದ್ದು ಅನಂತರ ದೈವನುಡಿಗಳನ್ನು ಪಠಿಸಲಾಗುವುದು. Isaiah 52:13-53:12, Hebrews 4:14-16, 5:7-9, ಕೊನೆಯಲ್ಲಿ ಯೋಹಾನನ ಶುಭಸಂದೇಶದಿಂದ ಯೇಸುವಿನ ಯಾತನೆಯನ್ನು ಮೂರು ಮಂದಿ ವಿಂಗಡಿಸಿಕೊಂಡು ಓದುತ್ತಾರೆ ಅಥವಾ ರಾಗವಾಗಿ ಪಾರಾಯಣ ಮಾಡುತ್ತಾರೆ.[೧೫] ಧಾರ್ಮಿಕ ವಿಧಿಯ ಈ ಭಾಗವು ಸಾಮೂಹಿಕ ಪ್ರಾರ್ಥನೆಗಳೊಂದಿಗೆ ಕೊನೆಗೊಳ್ಳುತ್ತದೆ. ಈ ಪ್ರಾರ್ಥನಾವಿಧಿಯಲ್ಲಿ ಪೋಪರಿಗೆ, ದೀಕ್ಷಾರ್ಥಿಗಳಿಗೆ, ಕ್ರೈಸ್ತರ ಒಗ್ಗಟ್ಟಿಗೆ, ಯೆಹೂದ್ಯರಿಗೆ, ಕ್ರಿಸ್ತನನ್ನು ನಂಬದವರಿಗೆ, ಸರ್ಕಾರಿ ನೌಕರರಿಗೆ, ನಾಸ್ತಿಕರಿಗೆ ಒಟ್ಟಿನಲ್ಲಿ ಸರ್ವರ ಒಳಿತಿಗೆ ಹಾಗೂ ಎಲ್ಲ ಒಳ್ಳೆಯ ಅಗತ್ಯಗಳಿಗಾಗಿ ಪ್ರಾರ್ಥಿಸಲಾಗುವುದು.[೧೬] ಪ್ರತಿ ಪ್ರಾರ್ಥನಾಂತ್ಯದಲ್ಲಿ ಕೆಲಕಾಲ ಎಲ್ಲರೂ ಮೊಣಕಾಲೂರಿ ಧ್ಯಾನಿಸಿದ ಮೇಲೆ ಗುರುಗಳು ಘೋಷವಾಕ್ಯ ನುಡಿಯುತ್ತಾರೆ.
    ಶಿಲುಬೆಗೆ ನಮನ, ಸಲ್ಲಿಸಲು ಮುಖ್ಯ ಶಿಲುಬೆಯೊಂದಿಗೆ ಹಲವಾರು ಪುಟ್ಟ ಪುಟ್ಟ ಶಿಲುಬೆಗಳನ್ನು ಸಮುದಾಯದ ಸುಲಭ ಸಂಚಾರಕ್ಕೆ ಅನುವಾಗುವಂತೆ ವಿವಿಧೆಡೆಗಳಲ್ಲಿಟ್ಟು ಜನರು ಸಾಲಾಗಿ ಬಂದು ಶಿಲುಬೆಗೆ ವಂದಿಸುವಂತೆ ಅನುವು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಜನರು ಶೋಕಗೀತೆಗಳನ್ನು ಹಾಡುತ್ತಾರೆ.[೧೭]
    ಸಾಂಗ್ಯದ ಅಂತಿಮ ಭಾಗವಾಗಿ ಸತ್ಪ್ರಸಾದ ವಿತರಣೆ ಇರುತ್ತದೆ. "ಪರಲೋಕ ಜಪ"ದೊಂದಿಗೆ ಪ್ರಾರಂಭಿಸಿ "ಲೋಕದ ಪಾಪಗಳ ಪರಿಹಾರಕ" ಹಾಡಿ "ರೊಟ್ಟಿ ಮುರಿ"ದು, ಹಿಂದಿನ ರಾತ್ರಿ ಕೊನೇ ಭೋಜನದ ಸಂಸ್ಕಾರದಲ್ಲಿ ಸಂಗ್ರಹಿಸಿದ್ದ ಸತ್ಪ್ರಸಾದವನ್ನು ಎಲ್ಲರಿಗೂ ವಿತರಿಸಲಾಗುತ್ತದೆ.[೧೮] ಆಮೇಲೆ ಜನರು ಮೌನವಾಗಿ ನಿರ್ಗಮಿಸುತ್ತಾರೆ. ಪೀಠದ ಮೇಲಿನ ವಸ್ತ್ರಗಳನ್ನು ತೆಗೆದು ಶಿಲುಬೆ ಮತ್ತು ಉರಿವ ಮೇಣದಬತ್ತಿಗಳನ್ನು ಮಾತ್ರವೇ ಅಲ್ಲಿ ಬಿಡಲಾಗುತ್ತದೆ.[೧೯]

ಶಿಲುಬೆಯಾತ್ರೆ

ಬದಲಾಯಿಸಿ
 
ರೋಮ್ ನಗರದ ಕೊಲೊಸ್ಸಿಯಂ ಬಳಿ ಶುಭಶುಕ್ರವಾರಂದು ನಡೆಸಲಾಗುವ ಶಿಲುಬೆಯಾತ್ರೆ
ಚಿತ್ರ:Canopy erected at the Temple of Venus and Rome during Good Fridayceremonies.JPG
ಶಿಲುಬೆಯಾತ್ರೆಗಾಗಿ ರೋಮ್ ನಗರದ ವೀನಸ್ ಗುಡಿಯ ಮುಂದೆ ನಿಲ್ಲಿಸಲಾಗಿರುವ ಮಂಟಪ

ನಿಗದಿತ ಧಾರ್ಮಿಕ ವಿಧಿಯ ಜೊತೆಗೆ ಚರ್ಚಿನೊಳಗೆ ಅಥವಾ ಹೊರಗೆ ಶಿಲುಬೆಯಾತ್ರೆ ನಡೆಸುವುದು ಸಾಮಾನ್ಯವಾಗಿದೆ. ಮೂರು ಗಂಟೆಗಳ ಶಿಲುಬೆಯಾತನೆಯ ಅವಧಿಯಲ್ಲಿ ಈ ಶಿಲುಬೆಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು. ಮಾಲ್ಟಾ, ಇಟಲಿ, ಫಿಲಿಪ್ಪೀನ್ಸ್, ಪೋರ್ಟೊರೀಕೋ, ಸ್ಪೇನ್ ಮುಂತಾದ ದೇಶಗಳಲ್ಲಿ ಯೇಸುವಿನ ಯಾತನೆಯನ್ನು ಬಿಂಬಿಸುವ ಪ್ರತಿಮೆಗಳನ್ನು ಹೊತ್ತೊಯ್ಯುವುದೂ ರೂಢಿ. ರೋಮಿನಲ್ಲಿ ಪೋಪ್ ಎರಡನೇ ಜಾನ್ ಪಾವ್ಲರು ಕೊಲೊಸಿಯಂ ಎದುರಿನ ವೀನಸ್ ಗುಡಿಯ ಎತ್ತರದ ಪ್ರದೇಶದಲ್ಲಿ ಶಿಲುಬೆಯಾತ್ರೆ ನಡೆಸುವ ಪರಿಪಾಠವನ್ನು ಪ್ರಾರಂಭಿಸಿದರು. ಇದರಿಂದ ಭಾಗವಹಿಸುವ ಸಮುದಾಯಕ್ಕೆ ಚೆನ್ನಾದ ನೋಟ ಲಭ್ಯವಾಯಿತು. ಚಿತ್ರದಲ್ಲಿ ತೋರಿಸಿರುವ ಮಂಟಪದಡಿಯಲ್ಲಿ ಪೋಪರು ಅಲಂಕೃತ ಶಿಲುಬೆಯನ್ನು ಹಿಡಿದು ನಿಂತು ಶಿಲುಬೆಯಾತ್ರೆಯ ವಿವಿಧ ಸ್ಥಳಗಳ ಕುರಿತಂತೆ ವ್ಯಾಖ್ಯಾನಿಸುತ್ತಾರೆ.

ಪೋಲೆಂಡಿನ ಚರ್ಚುಗಳಲ್ಲಿ ಯೇಸುವಿನ ಸಮಾಧಿಯ ಪ್ರತಿಕೃತಿಯನ್ನು ಪ್ರದರ್ಶಿಸುತ್ತಾರೆ. ಜನರು ತುಂಬಾ ಹೊತ್ತಿನವರೆಗೆ ಆ ಸಮಾಧಿಯ ಮುಂದೆ ಸೇರಿ ದುಃಖಿಸುತ್ತಾರೆ. ಯೇಸುವಿನ ಆಳೆತ್ತರದ ಪ್ರತಿಮೆಯ ಮೇಲಿನ ಗಾಯಗಳನ್ನು ಜನ ಸ್ಪರ್ಶಿಸುತ್ತಾ ಪ್ರಾಯಶ್ಚಿತ್ತ ಪಡುತ್ತಾರೆ. ಪ್ರತಿಕೃತಿಗೆ ಪೂರಕವಾಗಿ ಮೇಣದಬತ್ತಿಗಳು, ಹೂಗಳು, ಕಲ್ವಾರಿಗಿರಿ, ಮೂರು ಶಿಲುಬೆಗಳು ಹಾಗೂ ಇನ್ನಿತರ ಪರಿಕರಗಳು ಜೊತೆಯಾಗುತ್ತವೆ. ಸಮಾಧಿಯನ್ನು ಅಲಂಕರಿಸುವುದರಲ್ಲಿ ವಿವಿಧ ಚರ್ಚುಗಳು ಪೈಪೋಟಿ ನಡೆಸುವುದನ್ನು ಇಲ್ಲಿ ಕಾಣಬಹುದು.

ಪಾಪಕ್ಕೆ ಪ್ರಾಯಶ್ಚಿತ್ತ

ಬದಲಾಯಿಸಿ
 
El Grecoಶಿಲುಬೆ ಹೊತ್ತ ಯೇಸು, 1580

ರೋಮನ್ ಕಥೋಲಿಕ ಪರಂಪರೆಯಲ್ಲಿ ಕೆಲ ನಿಗದಿತ ಪ್ರಾರ್ಥನೆಗಳೊಂದಿಗೆ ಕೆಲ ಆಚರಣೆಗಳೂ ”’ಪಾಪಕ್ಕೆ ಪ್ರಾಯಶ್ಚಿತ್ತ”’ ರೂಪದಲ್ಲಿವೆ. ಇವುಗಳಲ್ಲಿ ಯಾವುದೇ ಬೇಡಿಕೆ ಇರದೆ ತಮ್ಮ ಪಾಪಕ್ಕಾಗಿ ನಿಜವಾದ ಪ್ರಾಯಶ್ಚಿತ್ತ ಕಂಡುಬರುತ್ತದೆ. ಅಂಥ ಕೆಲ ಪ್ರಾರ್ಥನಾ ಪುಸ್ತಕಗಳಲ್ಲಿ ಮರಿಯಮ್ಮನವರಿಗೆ ಸಲ್ಲಿಸುವ ಪ್ರಾಯಶ್ಚಿತ್ತಗಳನ್ನೂ ಉಲ್ಲೇಖಿಸಲಾಗಿದೆ.[೨೦][೨೧][೨೨][೨೩]

ಪೋಪ್ ಪಯಸ್ ೧೧ ಅವರು ತಮ್ಮ ಸುತ್ತೋಲೆಯಲ್ಲಿ ಇಂಥಾ ಪ್ರಾಯಶ್ಚಿತ್ತಗಳನ್ನು ಮಾನ್ಯ ಮಾಡಿ ಯೇಸುವಿಗಾದ ನಿಂದೆ ನೋವಿಗೆ ಸ್ವಲ್ಪಮಟ್ಟಿಗಿನ ಉಪಶಮನಕ್ಕಾದರೂ ಇವನ್ನು ಬಳಸಬೇಕೆಂದು ಕರೆಯಿತ್ತಿದ್ದಾರೆ. [೨೪] ಪೋಪ್ ಎರಡನೇ ಜಾನ್ ಪೌಲರು ಈ ಪ್ರಾಯಶ್ಚಿತ್ತ ಕ್ರಿಯೆಗಳನ್ನು ಯೇಸುವಿನ ಶಿಲುಬೆಯ ಬದಿಯ ಅಸಂಖ್ಯಾತ ಶಿಲುಬೆಗಳ ಮುಗಿಯದ ಸಾಲು ಎಂದು ಬಣ್ಣಿಸಿದ್ದಾರೆ.[೨೫]

ಫಿಲಿಪ್ಪೀನ್ಸ್

ಬದಲಾಯಿಸಿ

ರೋಮನ್ ಕಥೋಲಿಕರೇ ಬಹುಸಂಖ್ಯೆಲ್ಲಿರುವ ಫಿಲಿಪ್ಪೀನ್ಸ್ ದೇಶದಲ್ಲಿ ಈ ದಿನದಂದು ಬೀದಿ ಮೆರವಣಿಗೆಗಳೂ, ಶಿಲುಬೆಯಾತ್ರೆಗಳೂ, ಪ್ಯಾಸಿಯನ್ ಆಲಾಪನೆಗಳೂ, ಸೆನಾಕುಲೊ ಎಂಬ ಯಾತನಾಭಿನಯಗಳೂ ಇರುತ್ತವೆ. ಚರ್ಚಿನ ಗಂಟೆಗಳನ್ನು ನುಡಿಸುವುದಿಲ್ಲ, ಚರ್ಚಿನಲ್ಲಿ ಪೂಜೆ ಇರುವುದಿಲ್ಲ. ಚರ್ಚಿನ ಸಮ್ಮತಿಯಿಲ್ಲದಿದ್ದರೂ ಕೆಲವರು ಶಿಲುಬೆ ಮೇಲೆ ತೂಗಾಡುತ್ತಾರೆ, ಶಿಲುಬೆಯ ಮೇಲೆ ಮೊಳೆ ಹೊಡೆಸಿಕೊಳ್ಳುತ್ತಾರೆ.[೨೬] ಶುಭಶುಕ್ರವಾರದ ಮಧ್ಯಾಹ್ನ ಮೂರು ಗಂಟೆಯ ನಂತರ ಶಿಲುಬೆಗೆ ನಮಿಸಿ ಮೆರವಣಿಗೆಯಲ್ಲಿ ತೆರಳಿ ಯೇಸುವನ್ನು ಮಣ್ಣು ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳುತ್ತಾರೆ.

ಪೌರ್ವಾತ್ಯ ಕ್ರೈಸ್ತರಲ್ಲಿ

ಬದಲಾಯಿಸಿ
 
ಮೌಂಟ್ ಅಥೋಸಿನ ಸ್ತವ್ರೋನಿಕಿತಾ ಮಠದಲ್ಲಿನ ೧೬ನೇ ಶತಮಾನದ ಕ್ರೀಟನ್ ಥಿಯೊಫೇನ್ಸ್ ವಿರಚಿತ ಶಿಲುಬೆಗುರುತು

ಕಾನ್ಸ್ಟಾಂಟಿನೋಪಲ್ ಪದ್ಧತಿಯನ್ನು ಅನುಸರಿಸುವ ಪೌರ್ವಾತ್ಯ ಕ್ರೈಸ್ತರು ಹಾಗೂ ಆರ್ಥೊಡಾಕ್ಸ್ ಕ್ರೈಸ್ತರು ಮತ್ತು ಗ್ರೀಕ್ ಕಥೋಲಿಕರು ಇವರನ್ನೊಳಗೊಂಡ ಬೈಜಾಂಟೈನ್ ಕ್ರೈಸ್ತರು ಈ ದಿನವನ್ನು "ಮಹಾ ಪವಿತ್ರ ಶುಕ್ರವಾರ" ಅಥವಾ "ಮಹಾ ಶುಕ್ರವಾರ" ಎಂಬುದಾಗಿ ಕರೆಯುತ್ತಾರೆ. ಏಕೆಂದರೆ ಯೇಸುಕ್ರಿಸ್ತನು ಶಿಲುಬೆ ಮೇಲೆ ಬಲಿದಾನವಾಗುವುದರಿಂದ ದಿವ್ಯಬಲಿ (ರೊಟ್ಟಿ ಮತ್ತು ರಸದ ಬಲಿ) ಯನ್ನು ಈ ದಿನ ನಡೆಸದೇ ಇರುವುದರಿಂದ ಇದು ಮಹಾಶುಕ್ರವಾರವೇ ಸರಿ. ಕೆಲ ಚರ್ಚುಗಳು ಸಾಂಪ್ರದಾಯಿಕ ಜೂಲಿಯನ್ ಕ್ಯಾಲೆಂಡರ್ ಅನುಸರಿಸುವುದರಿಂದ ಮಾರ್ಚ್ ೨೫ ಅನ್ನು ಯೇಸುಕ್ರಿಸ್ತನ ವಿಶ್ವರೂಪದ (Annunciation) ದಿನವೆಂದು ಆಚರಿಸುತ್ತವೆ. ಆ ದಿನವೇನಾದರೂ ಮಹಾಶುಕ್ರವಾರಕ್ಕೆ ತಾಳೆಯಾದರೆ ಆ ದಿನವನ್ನು ಬಲಿದಾನದ ದಿನವೆಂದು ಆಚರಿಸುವುದಿಲ್ಲ. ಅಲ್ಲದೆ ಮಹಾಶುಕ್ರವಾರದಂದು ಗುರುಗಳು ಪಶ್ಚಿಮದವರಂತೆ ನೇರಳೆ ಬಣ್ಣದ ಅಥವಾ ರಕ್ತವರ್ಣದ ವಸ್ತ್ರಗಳನ್ನು ಧರಿಸಬೇಕೆಂಬ ಒತ್ತಾಯವೂ ಇಲ್ಲ.[೨೭] ದೊಡ್ಡಗುರುವಾರದಂದು ಪೀಠವಸ್ತ್ರವನ್ನು ತೆಗೆದುಹಾಕುವ ಬದಲಿಗೆ ಪವಿತ್ರಶನಿವಾರದ ಪೂಜಾವಿಧಿಯವರೆಗೂ ಎಲ್ಲ ವಸ್ತುಗಳಿಗೆ ಕಪ್ಪು ಮುಸುಕು ಹಾಕಿಡುತ್ತಾರೆ.

ಯೇಸುಕ್ರಿಸ್ತನ ಮರಣದ ಈ ದಿನದ ಘಟನಾವಳಿಗಳನ್ನು ಪುನರ್ ಮನನ ಮಾಡಿಕೊಳ್ಳಲು ಭಕ್ತಾದಿಗಳು ಆಯ್ದ ಕೀರ್ತನೆಗಳನ್ನು ಶುಭಸಂದೇಶ ವಾಚನಗಳನ್ನು ಹಾಗೂ ಹಾಡುಗಳನ್ನು ಸಂಘಟಿಸುತ್ತಾರೆ. ಇದಕ್ಕಾಗಿ ಪ್ರಾತ್ಯಕ್ಷಿಕೆಗಳ ನೆರವನ್ನೂ ಪಡೆದುಕೊಳ್ಳುತ್ತಾರೆ. ಆರ್ಥೊಡಾಕ್ಸ್ ಧಾರ್ಮಿಕತೆಯಲ್ಲಿ ಪವಿತ್ರವಾರವು ಒಂದು ಸಾಮಾನ್ಯ ವಾರ್ಷಿಕ ಆಚರಣೆಯಾಗಿರದೇ ಯೇಸುಕ್ರಿಸ್ತನ ಮರಣ ಮತ್ತು ಪುನರುತ್ಥಾನಗಳಲ್ಲಿ ನೇರ ಪಾಲ್ಗೊಳ್ಳುವಿಕೆಯೇ ಆಗಿದೆ.

ಈ ದಿನದ ಪ್ರತಿ ಕ್ಷಣವೂ ಪ್ರತಿ ಗಳಿಗೆಯೂ ಹೊಸ ಯಾತನೆಯ ಹಾಗೂ ಯೇಸುವಿನ ನೋವಿಗೆ ಪ್ರಾಯಶ್ಚಿತ್ತದ ಸೋಪಾನವಾಗುತ್ತದೆ. ಹಾಗೂ ನಮ್ಮ ಪೂಜಾವಿಧಿಯ ಪ್ರತಿ ಪದದಲ್ಲೂ ಈ ಯಾತನೆ ಮಾರ್ದನಿಸುತ್ತದೆ; ರಕ್ಷಕರ ಸುಕೋಮಲ ಸ್ಪರ್ಶದ ಹಾಗೂ ಅಪರಿಮಿತ ಕರುಣೆಯ ಆಳ ಅನನ್ಯವಾದುದು ಮತ್ತು ಹೋಲಿಸಲಾಗದ್ದು. ಗೆತ್ಸೆಮನೆಯ ರಕ್ತದ ಬೆವರಿನಿಂದ ಹಿಡಿದು ಗೊಲ್ಗೊಥಾದ ಶಿಲುಬೆ ಮರಣದವರೆಗಿನ ರಕ್ಷಣೆಯ ಹಾದಿಯ ಸಂಪೂರ್ಣ ಚಿತ್ರವನ್ನು ಪವಿತ್ರ ಧರ್ಮಸಭೆಯು ವಿಶ್ವಾಸಿಗಳ ಕಂಗಳ ಮುಂದೆ ತೆರೆದಿಡುತ್ತದೆ. ನಮ್ಮನ್ನು ಶತಮಾನಗಳ ಹಿಂದಕ್ಕೆ ಕರೆದೊಯ್ದು ಗೊಲ್ಗೊಥಾದ ಶಿಲುಬೆಯ ಬುಡದಲ್ಲಿ ನಿಲ್ಲಿಸಿ ನಿಟ್ಟುಸಿರಿನ ಪ್ರತ್ಯಕ್ಷದರ್ಶಿಗಳಾಗುವಂತೆ ಮಾಡುತ್ತದೆ.[೨೮]

ಮಹಾಶುಕ್ರವಾರವು ಕಟ್ಟುನಿಟ್ಟಿನ ಉಪವಾಸದ ದಿನ. ಆರೋಗ್ಯವಂತ ವಯಸ್ಕರು ಇಡೀ ದಿನ ಊಟ ಮತ್ತು ನೀರನ್ನು ವರ್ಜಿಸಬೇಕು. "ಈ ದಿನ ಊಟವಿರಲಿ ನೀರೂ ಸಹ ವರ್ಜ್ಯ, ಯಾರಿಗಾದರೂ ಇದು ಸಾಧ್ಯವಾಗದಿದ್ದರೆ ಅಥವಾ ವೃದ್ಧರಾಗಿದ್ದರೆ ಸೂರ್ಯಾಸ್ತದ ನಂತರ ರೊಟ್ಟಿ ಮತ್ತು ನೀರನ್ನು ಕೊಡಬಹುದು, ಈ ಮೂಲಕ ನಾವು ಯೇಸುವಿನ ನೇರ ಶಿಷ್ಯರಿಗೆ ಸಮನಾಗುತ್ತೇವೆ. "[೨೮]

ಶುಭಶುಕ್ರವಾರದ ಜಾಗರಣೆ

ಬದಲಾಯಿಸಿ

ಬೈಜಾಂಟೈನ್ ಕ್ರೈಸ್ತರಲ್ಲಿ ಮಹಾಶುಕ್ರವಾರವು ಅಂದರೆ ಕರ್ತ ಯೇಸುಕ್ರಿಸ್ತರ ಪೂಜ್ಯ ಮತ್ತು ರಕ್ಷಣಾ ಪಾಡುಗಳು, ಗುರುವಾರ ರಾತ್ರಿಯಿಂದಲೇ ಹನ್ನೆರಡು ಜಾವಸ್ತೋತ್ರಗಳೊಂದಿಗೆ ಪ್ರಾರಂಭವಾಗುತ್ತವೆ. ಎಲ್ಲ ನಾಲ್ಕು ಶುಭಸಂದೇಶಗಳಿಂದಾಯ್ದ ವಿಶೇಷ ಘಟನಾವಳಿಗಳನ್ನು ಗಂಟೆಗೊಂದರಂತೆ ಸಂಯೋಜಿಸಿ ಪಾರಾಯಣ ಮಾಡುವ ಈ ಜಾವಸ್ತೋತ್ರಗಳ ಮೂಲಕ ಕೊನೇ ಭೋಜನದಿಂದ ಮೊದಲುಗೊಂಡು ಶಿಲುಬೆಮರಣ ಮತ್ತು ಸಮಾಧಿಸ್ಥಳದ ವರೆಗಿನ ಎಲ್ಲ ಆಗುಹೋಗುಗಳನ್ನೂ ಮನನ ಮಾಡಬಹುದಾಗಿದೆ. ಕೆಲ ದೇವಾಲಯಗಳಲ್ಲಿ ಹನ್ನೆರಡು ಮೇಣದ ಬತ್ತಿಗಳುಳ್ಳ ದೀಪಗುಚ್ಛ ಉರಿಸುತ್ತಾ ಗಂಟೆಗೊಂದು ಮೇಣದ ಬತ್ತಿಯನ್ನು ನಂದಿಸುತ್ತಾ ಹೋಗುತ್ತಾರೆ.

 
ಗ್ರೀಸಿನ ಪವಿತ್ರ ತ್ರಿತ್ವದ ಮಠದಲ್ಲಿರುವ ಶುಭಶುಕ್ರವಾರದ ಶಿಲುಬೆ

ಈ ಹನ್ನೆರಡು ಜಾವಸ್ತೋತ್ರಗಳಲ್ಲಿ ಮೊದಲನೆಯದು ನಾಲ್ಕೂ ಶುಭಸಂದೇಶಗಳಿಂದ ಸಂಸ್ಕರಿತವಾಗಿದ್ದು ಅತಿ ದೀರ್ಘವಾಗಿದೆ. ಯೇಸುವನ್ನು ಶಿಲುಬೆಗೆ ಜಡಿಯುವ ಸನ್ನಿವೇಶದ ಪ್ರಸ್ತಾಪವಿರುವ ಆರನೇ ವಾಚನದ ಪ್ರಾರಂಭದಲ್ಲಿ ಗುರುಗಳು ಪೀಠಸನ್ನಿಧಿಯಿಂದ ದೊಡ್ಡ ಶಿಲುಬೆಯೊಂದನ್ನು ಹೊತ್ತುತಂದು ಭಕ್ತಾದಿಗಳ ನಡುವೆ ಸ್ಥಾಪಿಸುತ್ತಾರೆ. ಅವರ ಮುಂದೆ ಧೂಪ ಮತ್ತು ದೀಪಸ್ತಂಭಗಳನ್ನು ಹೊತ್ತವರಿಯುತ್ತಾರೆ. ಶಿಲುಬೆಯ ಮೇಲೆ ಯೇಸುದೇಹದ ಚಿತ್ರಪಟವನ್ನು ಲಗತ್ತಿಸುತ್ತಾರೆ. (Greek: soma) ಗುರುಗಳು ಶಿಲುಬೆ ಹೊತ್ತೊಯ್ಯುವಾಗ ಗಾಯಕನೊಬ್ಬ Sēmeron Kremātai Epí Xýlou ಎಂದು ರಾಗವಾಗಿ ಹಾಡುತ್ತಾನೆ.

ಭೂಮಿಯನ್ನು ನೀರಿನಿಂದ ಮೇಲೆತ್ತಿ ತೂಗಿದವನು ಇಂದು ಶಿಲುಬೆ ಮೇಲೆ ತೂಗಾಡುತ್ತಿದ್ದಾನೆ (ಮೂರು ಸಾರಿ).
ದೇವದೂತರ ರಾಜನು ಮುಳ್ಳುಗಳ ಕಿರೀಟ ಧರಿಸಿದ್ದಾನೆ.
ಸ್ವರ್ಗರಾಜ್ಯವನ್ನು ಮೇಘಗಳಿಂದ ಆವರಿಸುವವನು ನಕಲಿ ರಾಜವಸ್ತ್ರ ಹೊದ್ದಿದ್ದಾನೆ.
ಯೋರ್ದಾನಿನಲ್ಲಿ ಆದಾಮನನ್ನು ವಿಮುಕ್ತಗೊಳಿಸಿದವನು ಮುಖದ ಮೇಲೆ ಹೊಡೆಸಿಕೊಳ್ಳುತ್ತಿದ್ದಾನೆ.
ಧರ್ಮಸಭೆಯ ವರಮಹಾಶಯನನ್ನು ಮೊಳೆ ಹೊಡೆದು ಬಂಧಿಸಲಾಗಿದೆ.
ಕನ್ಯಾಪುತ್ರನನ್ನು ಈಟಿಯು ತಿವಿದಿದೆ.
ನಿನ್ನ ಯಾತನೆಗೆ ನಮೋ ನಮಃ ಓ ಕ್ರಿಸ್ತ (ಮೂರು ಸಾರಿ).
ನಿನ್ನ ಮಹಿಮಾನ್ವಿತ ಪುನರುತ್ಥಾನದ ದರ್ಶನವನ್ನೂ ನಮಗೆ ಕರುಣಿಸು.[೨೯][೩೦]

ಈ ಸಂದರ್ಭದಲ್ಲಿ ಎಲ್ಲರೂ ಒಬ್ಬೊಬ್ಬರಾಗಿ ಮುಂದೆ ಬಂದು ಶಿಲುಬೆಯ ಪಾದಕ್ಕೆ ಮುದ್ದಿಕ್ಕುತ್ತಾರೆ. ಶ್ಲೋಕದ ನಂತರ ಒಳ್ಳೆಯ ಕಳ್ಳನು ಎಂಬ ಹಾಡನ್ನು ನಿಧಾನವಾಗಿ ಹಾಡುತ್ತಾರೆ.

ಸತ್ಯದೇವರಾದ ಕ್ರಿಸ್ತನು ಲೋಕದ ರಕ್ಷಣೆಗಾಗಿ ಉಗುಳು ನಿಂದೆ ಅಪಮಾನಗಳನ್ನು ಸಹಿಸಿ ಶಿಲುಬೆ ಮರಣಕ್ಕೆ ಬಲಿಯಾದವನು, ತನ್ನ ಪವಿತ್ರ ತಾಯಿಯ ಮೂಲಕ, ನಮ್ಮ ಗುರುಗಳ ಮೂಲಕ, ಎಲ್ಲ ಸಂತರ ಮೂಲಕ ನಮಗೆ ದಯೆತೋರಿ ರಕ್ಷಿಸಲಿ, ಏಕೆಂದರೆ ಅವನು ಸುಚರಿತನು ಹಾಗೂ ಮನುಷ್ಯತ್ವವನ್ನು ಮೆಚ್ಚುವವನು.

ಪ್ರಮುಖ ಸಮಯ

ಬದಲಾಯಿಸಿ

ಮರುದಿನ, ಶುಕ್ರವಾರದ ಬೆಳಗ್ಗೆ ಎಲ್ಲರೂ ಮತ್ತೆ ಒಟ್ಟುಗೂಡಿ ರಾಜ ಗಳಿಗೆಯನ್ನು ಜಪಿಸುತ್ತಾರೆ, ಹಿಂದಿನ ರಾತ್ರಿಯಲ್ಲಿ ಮಾಡಿದ ಜಾವಸ್ತೋತ್ರಗಳನ್ನು ಪುನರಾವರ್ತಿಸುತ್ತಾರೆ, ಜೊತೆಗೆ ಪವಿತ್ರ ಬೈಬಲ್ ವಾಚನವೂ ಇರುತ್ತದೆ. ಇವೆಲ್ಲ ಸಾಧಾರಣವಾಗಿರದೆ ಸ್ವಲ್ಪ ಆಡಂಬರವಾಗಿರುವ ಕಾರಣ "ರಾಜಗಳಿಗೆ" ಎನ್ನುವುದು ಸೂಕ್ತವಾಗಿದೆ. ಕ್ರಿಸ್ತರಾಜನು ಮಾನವತೆಯ ಉಳಿವಿಗಾಗಿ ಇಳಿದುಬಂದನು ಎಂಬುದರ ಹಾಗೂ ಹಿಂದೆ ರಾಜರುಗಳು ಈ ಸಂದರ್ಭದಲ್ಲಿ ಹಾಜರಿರುತ್ತಿದ್ದರು ಎಂಬುದನ್ನು ನೆನಪಿಸುವಂತೆ ಇವು ನಡೆಯುತ್ತವೆ.

ಶುಭಶುಕ್ರವಾರದ ಸಂಧ್ಯಾವಂದನೆ

ಬದಲಾಯಿಸಿ
 
ಸಮಾಧಿಗೆ ಮುನ್ನ ಯೇಸುವಿನ ದೇಹವನ್ನು ಸಂಸ್ಕರಿಸುವುದು

ಇವನ್ನೂ ನೋಡಿ

ಬದಲಾಯಿಸಿ

ಟಿಪ್ಪಣಿ ಮತ್ತು ಉಲ್ಲೇಖಗಳು

ಬದಲಾಯಿಸಿ
  1. Bainger, Fleur (1 April 2010). "Fish frenzy for Easter Friday". ABC Online. Retrieved 22 April 2011.
  2. "John 19". Wesley's Notes for the Bible. Biblecommenter.com. Archived from the original on 2009-04-10. Retrieved 2010-04-02. 19:42 ಸಮಾಧಿಯು ಹತ್ತಿರದಲ್ಲೇ ಇದ್ದುದರಿಂದ ಹಾಗೂ ಮರುದಿನ ಪಾಸ್ಕಹಬ್ಬವಾದುದರಿಂದ ಯೇಸುವಿನ ಪಾರ್ಥಿವ ಶರೀರವನ್ನು ಅಲ್ಲೇ ಸಮಾಧಿ ಮಾಡಿದರು
  3. Isaac Newton, 1733, Of the Times of the Birth and Passion of Christ, in "Observations upon the Prophecies of Daniel and the Apocalypse of St. John" (London: J. Darby and T. Browne).
  4. Bradley Schaefer, 1990, Lunar Visibility and the Crucifixion Quarterly. Journal of the Royal Astronomical Society 31.
  5. "Astronomers on the Date of the Crucifixion". Archived from the original on 2011-04-25. Retrieved 2012-03-18.
  6. Astronomers on Date of Christ's Death
  7. John Pratt Newton's Date For The Crucifixion "Quarterly Journal of Royal Astronomical Society", September 1991.
  8. Newton's Date For The Crucifixion
  9. Humphreys, Colin J., and W. G. Waddington, "Dating the Crucifixion", Nature 306 (December 22/29, 1983), pp. 743-46. Dating the Crucifixion Nature.com
  10. Colin J. Humphreys and W. G. Waddington, The Date of the Crucifixion Journal of the American Scientific Affiliation 37 (March 1985) The Date of the Crucifixion Archived 2010-04-08 ವೇಬ್ಯಾಕ್ ಮೆಷಿನ್ ನಲ್ಲಿ. ASA3.org
  11. Matthew 27:45; Mark 15:13; Luke 23:44
  12. Removing Holy Water During Lent Archived 2014-04-19 ವೇಬ್ಯಾಕ್ ಮೆಷಿನ್ ನಲ್ಲಿ. Letter of the Congregation for Divine Worship, 14 March 2003
  13. 1920 typical edition of the Roman Missal Archived 2020-03-01 ವೇಬ್ಯಾಕ್ ಮೆಷಿನ್ ನಲ್ಲಿ..
  14. V. Good Friday Archived 2015-04-02 ವೇಬ್ಯಾಕ್ ಮೆಷಿನ್ ನಲ್ಲಿ., January 16, 1988, Sacred Congregation for Divine Worship.
  15. Congregation of Divine Worship and Discipline of the Sacraments, Paschale Solemnitatis, III, n.66 (cf. n. 33)
  16. Roman Missal: Good Friday, 7-13.
  17. Roman Missal: Good Friday, 14-21.
  18. Roman Missal: Good Friday, 22-31.
  19. Roman Missal: Good Friday, 32-33.
  20. Reparation NewAdvent.org
  21. Raccolta NewAdvent.org
  22. Joseph P. Christopher et al, 2003 The Raccolta St Athanasius Press ISBN 978-0-9706526-6-9.
  23. Ann Ball, 2003 Encyclopedia of Catholic Devotions and Practices ISBN 0-87973-910-X
  24. Vatican.va
  25. Vatican archives.
  26. Marks, Kathy (22 March 2008). "Dozens ignore warnings to re-enact crucifixion". The Independent. London. Retrieved 23 March 2008.
  27. ಕಾನ್ಸ್ಟಾಂಟಿನೋಪಲ್ ಪದ್ಧತಿಯ ಕ್ರೈಸ್ತರಲ್ಲಿ ತಪಸ್ಸುಕಾಲದ ಹಾಗೂ ಪವಿತ್ರವಾರದಲ್ಲಿ ಬಳಸುವ ಪೂಜಾವಸ್ತ್ರಗಳ ಬಣ್ಣಗಳು ಬಲು ವಿಸ್ತಾರವಾಗಿವೆ.
  28. ೨೮.೦ ೨೮.೧ Bulgakov, Sergei V. (1900). "Handbook for Church Servers, 2nd ed" (PDF). Kharkov: Tr. Archpriest Eugene D. Tarris: 543. Archived from the original (PDF) on 24 ಏಪ್ರಿಲ್ 2011. Retrieved 25 October 2007. {{cite journal}}: |contribution= ignored (help); Cite journal requires |journal= (help)
  29. Archimandrite Kallistos (Ware) and Mother Mary (2002). "The Lenten Triodion". South Cannan, Pennsylvania: St. Tikhon's Seminary Press: 587. {{cite journal}}: |contribution= ignored (help); Cite journal requires |journal= (help).
  30. Today He who hung the earth upon the waters Chanted by the Byzantine Choir of Athens


ಹೊರಗಿನ ಕೊಂಡಿಗಳು

ಬದಲಾಯಿಸಿ