ಗೊಲ್ಗೊಥಾ
"ಗೊಲ್ಗೊಥಾ ಅಥವಾ ಯೇಸುವಿನ ಕಡೆಯ ದಿನಎಂಬುದು ಕನ್ನಡದ ಪ್ರಪ್ರಥಮ "ರಾಷ್ಟ್ರಕವಿ"ಗಳಾದ ಶ್ರೀಯುತ ಮಂಜೇಶ್ವರ ಗೋವಿಂದ ಪೈ ಅವರು ರಚಿಸಿರುವ ಖಂಡಕಾವ್ಯವಾಗಿದೆ. ("ವೈಶಾಖಿ"ಯು ಅವರ ಇನ್ನೊಂದು ಖಂಡಕಾವ್ಯ . ) ಇದನ್ನು ಅವರು ೧೯೩೧ರಲ್ಲಿ ರಚಿಸಿದರು. ಅವರು ಅದರ ಮುನ್ನುಡಿಯಲ್ಲೆಲ್ಲೂ ಅದನ್ನು ಖಂಡಕಾವ್ಯ ಎಂದು ಹೆಸರಿಸಿಲ್ಲ , ಬದಲಾಗಿ ಕವಿತೆ ಎಂದು ಕರೆದಿದ್ದಾರೆ. ನಂತರ ಅವೆರಡನ್ನೂ ಖಂಡಕಾವ್ಯ ಎಂದೇ ಗುರುತಿಸಲಾಗಿದೆ. ಅದನ್ನು ಎಲ್ಲರೂ ಒಪ್ಪಿದ್ದಾರೆ.
ಈ ಕಾವ್ಯದ ವಿಶೇಷತೆಗಳು
ಬದಲಾಯಿಸಿ- ಗೊಲ್ಗೊಥಾವು ಖಂಡಕಾವ್ಯವಾಗಿಯೂ ಕನ್ನಡದ ಮಟ್ಟಿಗೆ ಸಾಂಸ್ಕೃತಿಕವಾಗಿಯೂ ಉಲ್ಲೇಖನೀಯವಾಗಿದೆ. ಇದು ಯೇಸುವಿನ ಪ್ರಸ್ಥಾನದ ಕುರಿತಾದದ್ದು. ಯೇಸುವಿನ ಕೊನೆಯ ದಿನದ ವಿವರಗಳನ್ನು ಈ ಕಾವ್ಯ ಆಧಾರವಾಗಿಟ್ಟುಕೊಂಡಿದೆ. ಯೇಸುವು ದೇವರಮಗನಾಗಿದ್ದರೂ ಮನುಷ್ಯ ಸಹಜ ಬವಣೆಗಳಿಗೊಳಗಾಗಿ ಇಲ್ಲಿ ಜನನಾಯಕನಾಗಿ ಧೀರೋದಾತ್ತತೆ ಮೆರೆಯುತ್ತಾನೆ. ಯೇಸುವಿನ ಕೊನೆಯ ದಿನವು ಅನೇಕ ದಾರುಣ ನಾಟಕೀಯ ಘಟನೆಗಳಿಂದ ಕೂಡಿದೆ.
- ಕಯ್ಯಾರ ಕಿಞ್ಞಣ್ಣ ರೈ ಅವರು ಹೇಳುವಂತೆ ರುದ್ರರಮಣೀಯತೆಯೊಂದು ಇಡೀ ರಚನೆಯಲ್ಲಿ ಪಸರಿಸಿದೆ.
- ಕನ್ನಡ ಕಾವ್ಯ ಪರಂಪರೆಗೆ ವಿಧರ್ಮೀಯ ಎಂದು ಹೇಳಬಹುದಾದ ಮೊತ್ತಮೊದಲ ಕಾವ್ಯ ಎಂದು ಹೇಳಬಹುದಾಗಿದೆ.
- ಗೊಲ್ಗೊಥಾವು ಯೇಸುವನ್ನು ಶಿಲುಬೆಗೇರಿಸಿದ ಸ್ಥಳದ ಹೆಸರಾಗಿದೆ.
- ಗೊಲ್ಗೊಥಾವು ಬೈಬಲ್ನ ಕಥೆಯನ್ನು ಆಧರಿಸಿದ್ದರೂ ಧಾರ್ಮಿಕ ಕಾವ್ಯವಲ್ಲ ; ಆದರೆ ಲೌಕಿಕ ಕಾವ್ಯವೇ ಆಗಿದೆ. ಇದರಲ್ಲಿ ನಾವು ಕಾಣುವುದು ಮರ್ತ್ಯದ ತುಮುಲಗಳನ್ನು.. ದೈವಿಕತೆಯು ಈ ಕಾವ್ಯದ ಉದ್ದೇಶವಲ್ಲ; ಉತ್ತಮ ಮಾನವರಾಗಿ ಬಾಳುವುದು ಹೇಗೆ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತದೆ ಅಲ್ಲದೆ . ಕ್ರಿಸ್ತಮತದ ಉಪದೇಶ ಮಾಡುವುದಿಲ್ಲ.
- ಬೈಬಲ್ ನ ಪ್ರಕಾರ ಶಿಲುಬೆಗೇರಿಸಿದ ನಂತರ ಅವನ ಕಳೇಬರವನ್ನು ಕೆಳಗಿಳಿಸಿ ಗೋರಿಯಲ್ಲಿ ಇರಿಸಲಾಗುತ್ತದೆ. ಪೈಯವರ ಗೊಲ್ಗೊಥಾ ಕಾವ್ಯದಲ್ಲಿ ಕಳೇಬರವು ಶಿಲುಬೆಯಲ್ಲೇ ಇರುತ್ತದೆ. ಇದು ತಾವು ಬಳಸಿಕೊಂಡ ಕವಿಸಮಯ ಎಂದು ಅವರೇ ಹೇಳಿದ್ದಾರೆ.
- ಇಲ್ಲಿ ಹಳೆಗನ್ನಡ , ನಡುಗನ್ನಡ ,ಹೊಸಗನ್ನಡಗಳು ಸಹಸಜವಾಗಿ ಬೆರೆತಿವೆ.
- ಇಲ್ಲಿ ಕನ್ನಡಪರಂಪರೆಯ ವಿವಿಧ ಕಾವ್ಯಧ್ವನಿಗಳು ಅನುರಣಿಸುತ್ತವೆ.
- ಈ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಟಿಪ್ಪಣಿಗಳನ್ನು ಕವಿಯೇ ಕೊಟ್ಟಿದ್ದಾರೆ.
ಪೈಯವರು ಕನ್ನಡವನ್ನು ನೋಡುವ ದೃಷ್ಟಿ ಸಂಕುಚಿತವಾಗಿರಲಿಲ್ಲ , ವಿಶಾಲವಾಗಿತ್ತು. ಕನ್ನಡಕ್ಕೆ ಎಲ್ಲವೂ ಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.