ಶಿಲುಬೆಯಾತ್ರೆ
[೧]ಶಿಲುಬೆಯಾತ್ರೆ ಯೇಸುಕ್ರಿಸ್ತ ಶಿಲುಬೆಗೇರುವ ಮುನ್ನ ಆತನ ವಿರೋಧಿಗಳು ಅವನನ್ನು ಬಂಧಿಸುವ ಪರಿ, ಆತನ ನ್ಯಾಯವಿಚಾರಣೆ, ಅವನಿಗೆ ನೀಡಿದ ಹಿಂಸೆ, ನಂತರ ಶಿಲುಬೆ ಹೊರಿಸಿ ಮೆರವಣಿಗೆ ಮಾಡಿದ್ದು ಇವೆಲ್ಲವನ್ನೂ ಶುಭಶುಕ್ರವಾರಕ್ಕೆ ಮುಂಚಿನ ೪೦ ದಿನಗಳಲ್ಲಿ ಮತ್ತೆ ಮತ್ತೆ ಸ್ಮರಿಸಿಕೊಳ್ಳುವುದು ಕ್ರೈಸ್ತರಲ್ಲಿ ವಾಡಿಕೆ. ಈ ಸ್ಮರಣೆಯು ಗಾಢವಾಗಿರುವಂತೆ ಮಾಡಲು ಅವರು ಯೇಸುಕ್ರಿಸ್ತ ನ ಆ ಅಂತಿಮ ಕ್ಷಣಗಳ ವೃತ್ತಾಂತವನ್ನು ಪಾರಾಯಣ ಮಾಡುವ ಇಲ್ಲವೇ ಅಭಿನಯಿಸುವ ಪರಿಪಾಠವೂ ಇದೆ. ಶಿಲುಬೆಯಾತ್ರೆ ಯ ವಿವಿಧ ಹಂತಗಳನ್ನು ಸೂಚಿಸುವ ಹದಿನಾಲ್ಕು ಚಿತ್ರಪಟಗಳ ಮುಂದೆ ಮೊಣಕಾಲೂರಿ ಪಾರಾಯಣ ಮಾಡುವ ಸಂಪ್ರದಾಯ, ಕ್ರೈಸ್ತಭಕ್ತರು ತಾವೇ ವಿಧಿಸಿಕೊಂಡ ಒಂದು ಕಡ್ಡಾಯ ಪದ್ಧತಿ. ಚರ್ಚಿನ ನಿಯಮವಿಲ್ಲದೆಯೂ ಈ ಶಿಲುಬೆಯಾತ್ರೆ ದೇಶ ಕಾಲಗಳನ್ನು ಮೀರಿ ನಡೆದುಕೊಂಡು ಬಂದಿದೆ. ಆ ಹದಿನಾಲ್ಕು ಚಿತ್ರಪಟಗಳ ದೃಶ್ಯ ಹಾಗೂ ಶೀರ್ಷಿಕೆಗಳಲ್ಲಿ ಏಕರೂಪತೆ ಇದ್ದರೂ ಪಾರಾಯಣ ಮಾಡುವ ಪಠ್ಯ ಹಾಗೂ ವ್ಯಾಖ್ಯಾನಗಳಲ್ಲಿ ಭಿನ್ನತೆ ಇದೆ. ದೇವಾಲಯಗಳಲ್ಲಿ, ಮನೆಗಳಲ್ಲಿ, ಗುಡ್ಡಗಳಲ್ಲಿ, ರಂಗದಲ್ಲಿ, ಏಕಾಂತದಲ್ಲಿ, ಮೌನದಲ್ಲಿ ಯೇಸುಕ್ರಿಸ್ತ ನ ಶಿಲುಬೆಯಾತ್ರೆ ಯನ್ನು ಧ್ಯಾನಿಸುತ್ತಾ ಕ್ರಿಸ್ತನ ನೋವು ಸಂಕಟಗಳಲ್ಲಿ ತಾವೂ ಭಾಗಿಯಾಗುವ ಮತ್ತು ತನ್ಮೂಲಕ ಆತ್ಮಶೋಧನೆಗೂ ಆತ್ಮೋನ್ನತಿಗೂ ಕಾರಣವಾಗುವ ಈ ಪ್ರಕ್ರಿಯೆ ಕ್ರೈಸ್ತ ಜೀವನದ ಅವಿಭಾಜ್ಯ ಅಂಗ.
ಉಲ್ಲೇಖಗಳು
ಬದಲಾಯಿಸಿ