ಶುಂಗ ಸಾಮ್ರಾಜ್ಯ ಸುಮಾರು ಕ್ರಿ.ಪೂ. ೧೮೭ರಿಂದ ೭೮ರ ವರೆಗೆ ಭಾರತೀಯ ಉಪಖಂಡದ ಮಧ್ಯ ಹಾಗೂ ಪೂರ್ವದ ಪ್ರದೇಶಗಳನ್ನು ನಿಯಂತ್ರಿಸುತ್ತಿದ್ದ ಮಗಧದ ಒಂದು ಪ್ರಾಚೀನ ಭಾರತೀಯ ರಾಜವಂಶವಾಗಿತ್ತು. ಮೌರ್ಯ ಸಾಮ್ರಾಜ್ಯದ ಪತನದ ನಂತರ, ಈ ರಾಜವಂಶವನ್ನು ಪುಷ್ಯಮಿತ್ರ ಶುಂಗನು ಸ್ಥಾಪಿಸಿದನು. ಇದರ ರಾಜಧಾನಿ ಪಾಟಲಿಪುತ್ರವಾಗಿತ್ತು, ಆದರೆ ಭಗಭದ್ರನಂತಹ ನಂತರದ ಸಾಮ್ರಾಟರು ಪೂರ್ವ ಮಾಲ್ವಾದಲ್ಲಿನ ಬೇಸ್‍ನಗರ್‍ನಲ್ಲೂ (ಆಧುನಿಕ ವಿದಿಶಾ) ಆಸ್ಥಾನ ನಡೆಸಿದರು.[]

ಪುಷ್ಯಮಿತ್ರ ಶುಂಗನು ೩೬ ವರ್ಷ ರಾಜ್ಯಭಾರ ಮಾಡಿದನು ಮತ್ತು ಇವನ ನಂತರ ಇವನ ಮಗ ಅಗ್ನಿಮಿತ್ರನು ಉತ್ತರಾಧಿಕಾರಿಯಾದನು. ಒಟ್ಟು ಹತ್ತು ಶುಂಗ ರಾಜರಿದ್ದರು. ಆದರೆ, ಈ ರಾಜವಂಶದ ಎರಡನೇ ರಾಜನಾದ ಅಗ್ನಿಮಿತ್ರನ ಮರಣದ ನಂತರ, ಈ ಸಾಮ್ರಾಜ್ಯವು ವೇಗವಾಗಿ ವಿಭಜನೆಗೊಂಡಿತು: ಉತ್ತರ ಮತ್ತು ಮಧ್ಯ ಭಾರತದ ಬಹುತೇಕ ಭಾಗ ಯಾವುದೇ ಶುಂಗ ಆಧಿಪತ್ಯದಿಂದ ಸ್ವತಂತ್ರವಾಗಿದ್ದ ಸಣ್ಣ ರಾಜ್ಯಗಳು ಮತ್ತು ನಗರ ರಾಜ್ಯಗಳನ್ನು ಹೊಂದಿತ್ತು ಎಂದು ಶಾಸನಗಳು ಮತ್ತು ನಾಣ್ಯಗಳು ಸೂಚಿಸುತ್ತವೆ. ಈ ರಾಜವಂಶವು ವಿದೇಶಿ ಮತ್ತು ಸ್ಥಳೀಯ ಶಕ್ತಿಗಳೊಂದಿಗಿನ ಅಸಂಖ್ಯಾತ ಯುದ್ಧಗಳಿಗೆ ಗುರುತಿಸಲ್ಪಟ್ಟಿದೆ. ಇವರು ಕಲಿಂಗ, ಶಾತವಾಹನ ರಾಜವಂಶ, ಇಂಡೊ-ಗ್ರೀಕ್ ರಾಜ್ಯ ಮತ್ತು ಸಂಭಾವ್ಯವಾಗಿ ಪಾಂಚಾಲರು ಹಾಗೂ ಮಥುರರ ವಿರುದ್ಧ ಸೆಣಸಿದರು.

ಈ ಅವಧಿಯಲ್ಲಿ ಸುಟ್ಟ ಕೆಂಜೇಡಿ ಮಣ್ಣಿನ ಸಣ್ಣ ವಿಗ್ರಹಗಳು, ಹೆಚ್ಚು ದೊಡ್ಡ ಕಲ್ಲಿನ ಶಿಲ್ಪಗಳು, ಮತ್ತು ಭರ್ಹುತ್‍ನ ಸ್ತೂಪ ಹಾಗೂ ಸಾಂಚಿಯ ಪ್ರಖ್ಯಾತ ಮಹಾ ಸ್ತೂಪದಂತಹ ವಾಸ್ತುಶಿಲ್ಪ ಸ್ಮಾರಕಗಳು ಸೇರಿದಂತೆ ಕಲೆ, ಶಿಕ್ಷಣ, ತತ್ವಶಾಸ್ತ್ರ ಮತ್ತು ಕಲಿಕೆಯ ಇತರ ರೂಪಗಳು ವಿಕಸಿಸಿದವು. ರಾಜವಂಶದಿಂದ ಕಲಿಕೆ ಮತ್ತು ಕಲೆಯ ಪ್ರಾಯೋಜಕತ್ವದ ಪರಂಪರೆಯನ್ನು ಸ್ಥಾಪಿಸಲು ಶುಂಗ ಅರಸರು ನೆರವಾದರು. ಈ ಸಾಮ್ರಾಜ್ಯವು ಬ್ರಾಹ್ಮಿ ಲಿಪಿಯ ಒಂದು ರೂಪಾಂತರವನ್ನು ಲಿಪಿಯಾಗಿ ಬಳಸುತ್ತಿತ್ತು ಮತ್ತು ಇದನ್ನು ಸಂಸ್ಕೃತ ಬರೆಯಲು ಬಳಸಲಾಗುತ್ತಿತ್ತು.

ಶುಂಗ ಸಾಮ್ರಾಜ್ಯವು ಹಿಂದೂ ಚಿಂತನೆಯಲ್ಲಿ ಕೆಲವು ಅತ್ಯಂತ ಮುಖ್ಯ ಬೆಳವಣಿಗೆಗಳು ಆಗುತ್ತಿದ್ದ ಕಾಲದಲ್ಲಿ ಸಂಸ್ಕೃತಿಯನ್ನು ಪ್ರೋತ್ಸಾಹಿಸುವಲ್ಲಿ ಅತ್ಯಗತ್ಯ ಪಾತ್ರವಹಿಸಿತು. ಪತಂಜಲಿಮಹಾಭಾಷ್ಯದ ರಚನೆ ಈ ಕಾಲದಲ್ಲಾಯಿತು. ಮಥುರಾ ಕಲಾ ಶೈಲಿಯ ಏಳಿಗೆಯೊಂದಿಗೆ ಕಲೆಗಾರಿಕೆಯೂ ಪ್ರಗತಿ ಹೊಂದಿತು.

ಶುಂಗರ ನಂತರ ಕಾಣ್ವ ರಾಜವಂಶವು ಸುಮಾರು ಕ್ರಿ.ಪೂ. ೭೩ರಲ್ಲಿ ಅಧಿಕಾರಕ್ಕೆ ಬಂದಿತು.

ಶುಂಗ ರಾಜವಂಶವು ಒಂದು ಬ್ರಾಹ್ಮಣ ರಾಜವಂಶವಾಗಿತ್ತು ಮತ್ತು ಅಶೋಕನ ಮರಣದ ಸುಮಾರು ೫೦ ವರ್ಷ ನಂತರ ಸ್ಥಾಪನೆಗೊಂಡಿತು. ಮೌರ್ಯ ಸಾಮ್ರಾಜ್ಯದ ಕೊನೆಯ ಅರಸ ಸಾಮ್ರಾಟ್ ಬೃಹದ್ರಥ ಮೌರ್ಯನನ್ನು ಅವನ ಸೇನಾನಿ ಪುಷ್ಯಮಿತ್ರ ಶುಂಗನು ಹತ್ಯೆಮಾಡಿದನು. ರಾಜನು ತನ್ನ ಪಡೆಗಳ ಗೌರವ ರಕ್ಷೆಯನ್ನು ಪರಿಶೀಲಿಸುತ್ತಿದ್ದಾಗ ಈ ಹತ್ಯೆನಡೆಯಿತು.

ಉಲ್ಲೇಖಗಳು

ಬದಲಾಯಿಸಿ
  1. Stadtner, Donald (1975). "A Śuṅga Capital from Vidiśā". Artibus Asiae. 37 (1/2): 101–104. doi:10.2307/3250214. JSTOR 3250214.