ಪಾಟಲಿಪುತ್ರ ಮೌರ್ಯ ಸಾಮ್ರಾಜ್ಯ ಮತ್ತು ಗುಪ್ತ ಸಾಮ್ರಾಜ್ಯದ ರಾಜಧಾನಿಯಾಗಿತ್ತು.ಇದು ಈಗಿನ ಪಾಟ್ನಾ ನಗರದ ಬಳಿಯಿದೆ. ಇದನ್ನು ಕ್ರಿ.ಪೂ.೪೯೦ರಲ್ಲಿ ಮಗಧ ದೊರೆ ಅಜಾತಶತ್ರುವು ಗಂಗಾನದಿಯ ಸಮೀಪ ಪಾಟಲಿಗ್ರಾಮ ಎಂಬ ಹೆಸರಿನಲ್ಲಿ ನಿರ್ಮಿಸಿದನು.[] ಪಾಟ್ನಾದ ಸುತ್ತಮುತ್ತ ವ್ಯಾಪಕವಾಗಿ ಉತ್ಖನನ ನಡೆಸಲಾಗಿದೆ.[] ಇದರ ಪರಿಣಾಮವಾಗಿ ಈ ಸ್ಥಳಗಳಲ್ಲಿ ದೊಡ್ಡ ಗೋಡೆಗಳ ಕುರುಹುಗಳು, ಮರದ ದೊಡ್ಡ ತೊಲೆಗಳು ಇತ್ಯಾದಿ ದೊರೆಕಿವೆ. ಇದು ಈ ಪ್ರದೇಶದಲ್ಲಿ ಪಾಟಲೀಪುತ್ರ ಪಟ್ಟಣದ ಅಸ್ಥಿತ್ವವನ್ನು ಸಾರುತ್ತವೆ.[] ಈ ಪಟ್ಟಣವು ಹಲವಾರು ಶತಮಾನಗಳ ಕಾಲ ಹಲವಾರು ರಾಜವಂಶಜರ ರಾಜಧಾನಿಯಾಗಿ ಮೆರೆದಿತ್ತು.

ಪಾಟಲಿಪುತ್ರ
Ancient city
ಈಗಿನ ಪಾಟ್ನಾದ ನಕ್ಷೆಯೊಂದಿಗೆ ಹಿಂದಿನ ಪಾಟಲಿಪುತ್ರದ ನಕ್ಷೆಯ ತುಲನೆ
ಈಗಿನ ಪಾಟ್ನಾದ ನಕ್ಷೆಯೊಂದಿಗೆ ಹಿಂದಿನ ಪಾಟಲಿಪುತ್ರದ ನಕ್ಷೆಯ ತುಲನೆ
ದೇಶಭಾರತ
ರಾಜ್ಯಬಿಹಾರ
ಪ್ರಾಂತ್ಯಮಗಧ
ವಿಭಾಗಪಾಟ್ನಾ
ಜಿಲ್ಲೆಪಾಟ್ನಾ
Government
 • BodyPatna Municipal Corporation
Elevation
೫೩ m (೧೭೪ ft)



ಪಾಟಲಿಪುತ್ರ ಭಾರತದ ಪ್ರಾಚೀನತಮವೂ ಮುಖ್ಯವೂ ಆದ ನಗರಗಳಲ್ಲಿ ಒಂದು. ಇದು ಮಥುರಾ, ವಾರಣಾಸಿ, ಅಯೋಧ್ಯ, ರಾಜಗೃಹಗಳಿಗಿಂತ ಈಚಿನದೆಂದು ತಿಳಿದುಬಂದಿದೆ. ಆದರೆ ಭಾರತದ ದೊಡ್ಡ ಚಕ್ರಾಧಿಪತ್ಯಗಳ ರಾಜಧಾನಿಯಾಗಿತ್ತೆಂಬ ಗೌರವ ಇದರದು. ಪ್ರಾಚೀನಕಾಲದಲ್ಲಿ ಇದಕ್ಕೆ ಪುಷ್ಪಪುರ ಕುಸುಮಪುರ ಎಂದೂ ಹೆಸರುಗಳಿದ್ದುವು. ಈಗ ಈ ಸ್ಥಳದಲ್ಲಿರುವ ನಗರದ ಹೆಸರು ಪಟ್ನಾ.

ಪಾಟಲಿಪುತ್ರ ಎಂಬ ಹೆಸರಿನ ಮೂಲದ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಇದನ್ನು ಕುರಿತು ಅನೇಕ ಐತಿಹ್ಯಗಳಿವೆ. ದುಷ್ಟ ರಾಜನೊಬ್ಬ ಕತ್ತರಿಸಿದ ಜೆಯತಿಯ ರುಂಡದಲ್ಲಿ ಬೆಳೆದ ಪಾಟಲಿ ವೃಕ್ಷದಿಂದ ಈ ಹೆಸರು ಹುಟ್ಟಿತೆಂದು ಜೈನ ಗ್ರಂಥವಾದ ಪರಿಸಿಷ್ಟಪರ್ವ ತಿಳಿಸುತ್ತದೆ. ಚಂಪಾ ನಗದ ರಾಜ ಉದಾಯಿ ಕ್ರಿ.ಪೂ 460ರ ಸುಮಾರಿನಲ್ಲಿ ಹೊಸ ರಾಜಧಾನಿಯ ನೆಲೆಯನ್ನು ಹುಡುಕುತ್ತಿದ್ದಾಗ ಆ ಪ್ರಾಂತ್ಯದಲ್ಲಿ ಅಪರೂಪವಾದ ಪಾಟಲಿ ವೃಕ್ಷದ ಮೇಲೆ ಕುಳಿತ ಚಾಷಾ ಪಕ್ಷಿ ಸ್ವಪ್ರಯತ್ನವಿಲ್ಲದೆ ಆಹಾರವನ್ನು ಪಡೆಯುತ್ತಿದ್ದುದನ್ನು ನೋಡಿ ಅದರಿಂದ ಆಕರ್ಷಿತರಾದ ರಾಜಪವಾರದವರು ಆ ನೆಲೆಯನ್ನು ಹೊಸ ರಾಜಧಾನಿಯಾಗಿ ಆರಿಸಿಕೊಂಡು ಅಲ್ಲಿ ನಿರ್ಮಿಸಲಾದ ನಗರಕ್ಕೆ ಪಾಟಲಿಪುತ್ರವೆಂದು ಹೆಸರಿಟ್ಟರೆಂದೂ ಐತಿಹ್ಯವಿದೆ. ವಿರಕ್ತ ಮುನಿಕುಮಾರನೊಬ್ಬ ತನ್ನ ಗೆಳೆಯರ ಚೇಷ್ಟೆಯ ಫಲವಾಗಿ ಪಾಟಲಿವೃಕ್ಷವನ್ನು ವಿವಾಹಮಾಡಿಕೊಂಡನೆಂದೂ ವಿವಾಹದ ರಾತ್ರಿ ವೃಕ್ಷದೇವತೆ ತನ್ನ ಪುತ್ರಿಯನ್ನು ಅವನಿಗೆ ಅರ್ಪಿಸಿದಳೆಂದೂ ಆ ಮುನಿಕುಮಾರನಿಗೆ ಅವಳಲ್ಲಿ ಹುಟ್ಟಿದ ಪುತ್ರನಿಗೆ ಪಾಟಲಿಪುತ್ರನೆಂದು ಹೆಸರಾಗಿ ಅಲ್ಲಿ ಬೆಳೆದ ನಗರಕ್ಕೆ ಪಾಟಲಿಪುತ್ರವೆಂದು ಹೆಸರಾಯಿತೆಂದೂ ಇನ್ನೊಂದು ಕಥೆಯಿದೆ. ಬ್ರಾಹ್ಮಣಕುಮಾರ ಪುತ್ರಕನೆಂಬವನು ಪಾಟಲಿ ಎಂಬ ರಾಜಕುಮಾರಿಯನ್ನು ಪ್ರೀತಿಸಿ ತನ್ನ ಅತಿಮಾನುಷ ಶಕ್ತಿಯಿಂದ ಆಕೆಯನ್ನು ಗಗನಮಾರ್ಗವಾಗಿ ಎತ್ತಿಕೊಂಡು ಹೋಗಿ ಗಂಗಾನದಿಯ ತೀರಲ್ಲಿ ಈ ಸ್ಥಳದಲ್ಲಿ ನೆಲೆಸಿದನೆಂದೂ ಇದು ಪಾಟಲಿಪುತ್ರವಾಯಿತೆಂದೂ ಇನ್ನೊಂದು ಕಥೆ ತಿಳಿಸುತ್ತದೆ.

ನಿರ್ಮಾಣ

ಬದಲಾಯಿಸಿ

ಇಂಥ ಅಚಾರಿತ್ರಿಕ ಸಂಗತಿಗಳನ್ನು ಬಿಟ್ಟರೆ, ಕ್ರಿ.. ಪೂ. 495-470ರಲ್ಲಿ ಮಗಧ ರಾಜ್ಯವನ್ನಾಳುತ್ತಿದ್ದ ಅಜಾತಶತ್ರು ವೈಶಾಲಿಯ ಲಿಚ್ಛವಿ ಗಣರಾಜ್ಯದ ಉಪದ್ರವಗಳಿಂದ ಬೇಸತ್ತು ರಾಜಗೃಹದ ಬದಲು ಹೊಸ ರಾಜಧಾನಿಯಾಗಿ ಈ ನೆಲೆಯನ್ನು ಇದರ ಆಯಕಟ್ಟಿನ ಸನ್ನಿವೇಶದ ದೃಷ್ಟಿಯಿಂದ ಆರಿಸಿದನೆಂದು ಹೇಳಲಾಗಿದೆ. ಗಂಗಾ ಮತ್ತು ಶೋಣಾ ನದಿಗಳ ಸಂಗಮದಲ್ಲಿ-ಅವುಗಳ ಮತ್ತು ಗಂಡಕೀ ಹಾಗೂ ಪುನ್-ಪುನ್ ನದಿಗಳ ಮಾರ್ಗವಾಗಿ ನಡೆಯುತ್ತಿದ್ದ ವ್ಯಾಪಾರ ಸಂಪರ್ಕಗಳಿಂದಾಗಿ ಇದು ಮಹತ್ತ್ವದ ಕೇಂದ್ರವಾಗಿತ್ತು. ಈ ನಗರದ ಸುತ್ತ ಕೋಟೆಯನ್ನು ನಿರ್ಮಿಸಲಾಯಿತು. ಗೌತಮ ಬುದ್ಧ ಈ ಮಾರ್ಗವಾಗಿ ಕ್ರಮಿಸಿದಾಗ ಇದು ಪ್ರಾಮುಖ್ಯ ಪಡೆದಿರಲಿಲ್ಲವಾದರೂ ವ್ಯಾಪಾರದ ದೃಷ್ಟಿಯಿಂದ ಇದೊಂದು ಮುಖ್ಯ ನಗರವಾಗುತ್ತದೆಂದು ಬುದ್ಧ ಹೇಳಿದನೆನ್ನಲಾಗಿದೆ. ಆದರೆ ಅಜಾತಶತ್ರುವಿನ ಉತ್ತರಾಧಿಕಾರಿಯಾದ ಉದಾಯಿ ಇಲ್ಲಿಗೆ ರಾಜಧಾನಿಯನ್ನು ಸ್ಥಳಾಂತರಿಸಿದುದಾಗಿ ತಿಳಿದುಬರುತ್ತದೆ. ಆಗ ಹೊಸ ಕಟ್ಟಡಗಳೂ ದೇವ ಮಂದಿರಗಳೂ ಇಲ್ಲಿ ನಿರ್ಮಾಣವಾದುವೆಂದು ಜೈನಮೂಲಗಳು ಮತ್ತು ಪುರಾಣ ಗ್ರಂಥಗಳು ತಿಳಿಸುತ್ತವೆ. ಆಯಕಟ್ಟಿನ ಮಹತ್ತ್ವದ ದೃಷ್ಟಿಯಿಂದ ಇದನ್ನು ಆರಿಸಲಾಯಿತೆಂದೇ ಸಮಕಾಲೀನ ಬೌದ್ಧ ಸಾಹಿತ್ಯವೂ ತಿಳಿಸುತ್ತದೆ. ಉದಾಯಿಯ ಅನಂತರ ಅನಿರುದ್ಧ ಮತ್ತು ಮುಂಡ ಇವರು ಪಾಟಲಿಪುತ್ರದಿಂದ ಆಳುತ್ತಿದ್ದರೆಂದು ಅಂಗುತ್ತರನಿಕಾಯದಿಂದ ಗೊತ್ತಾಗುತ್ತದೆ. ಅನಂತರ ಆಳಿದ ರಾಜ ನಾಗದಾಸಕನೆಂಬುವನು ಪುರಾಣಗಳಲ್ಲಿ ಉಕ್ತನಾದ ಶಿಶುನಾಗನೆಂದೂ ಅವನ ಕಾಲದಲ್ಲಿ ರಾಜಧಾನಿಯನ್ನು ಪಾಟಲಿಪುತ್ರದಿಂದ ರಾಜಗೃಹಕ್ಕೆ ಬದಲಾಯಿಸಲಾಯಿತೆಂದೂ ಕೆಲವು ವಿದ್ವಾಂಸರು ವಾದಿಸಿದ್ದಾರೆ. ಆದರೆ ಉದಾಯಿ ಮತ್ತು ಅಜಾತಶತ್ರುವಿಗಿಂತ ಶಿಶುನಾಗ ಹಿಂದಿನವನೆಂದೂ ಅವನ ಕಾಲದಲ್ಲಿ ರಾಜಗೃಹವೇ ರಾಜಧಾನಿಯಾಗಿತ್ತೆಂದೂ ಪುರಾಣಗಳಿಂದ ಶ್ರುತಪಡುತ್ತದೆ. ಆವಂತಿಯ ದೊರೆಯೊಂದಿಗೆ ನಾಗದಾಸಕ ಯುದ್ಧದಲ್ಲಿ ನಿರತನಾಗಿ, ಆ ರಾಜ್ಯಕ್ಕೆ ಸೇರಿದ್ದ ಕೌಶಾಂಬಿಯನ್ನು ಆಕ್ರಮಿಸಿಕೊಳ್ಳಲು ಪಾಟಲಿ ಪುತ್ರದಿಂದ ಜಲಮಾರ್ಗವಾಗಿ ಸೈನ್ಯವನ್ನು ಕಳಿಸಿದ್ದನೆಂದು ತಿಳಿದುಬರುತ್ತದೆ.

ಅಭಿವೃದ್ಧಿ

ಬದಲಾಯಿಸಿ

ಅನಂತರ ನಂದರು ಅಧಿಕಾರಕ್ಕೆ ಬಂದರು. ಇವರು ವಾಯವ್ಯದಲ್ಲಿ ಪಂಜಾಬಿನವರೆಗೂ ತಮ್ಮ ಚಕ್ರಾಧಿಪತ್ಯವನ್ನು ವಿಸ್ತರಿಸಿದರು. ಇವರ ರಾಜಧಾನಿಯಾಗಿ ಪಾಟಲಿಪುತ್ರದ ಘನತೆ ಹೆಚ್ಚಿತು. ಸೈನಿಕ ಕೇಂದ್ರವಾಗಿದ್ದ ಇದರ ಸುತ್ತ ಮರದ ಕಟಕಟೆಯ ಬೇಲಿ, ಬುರುಜುಗಳು ಮತ್ತು ಕಂದಕಗಳು ನಿರ್ಮಿತವಾದುವು. ಅವು ಸುಭದ್ರಸ್ಥಿತಿಯಲ್ಲಿದ್ದುವೆಂದು ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್ ವರ್ಣಿಸಿದ್ದಾನೆ. ಪಾಟಲಿಪುತ್ರ ಆ ಕಾಲದ ಅತ್ಯಂತ ದೊಡ್ಡ ಸಾಮ್ರಾಜ್ಯದ ರಾಜಧಾನಿಯಾಗಿದ್ದುದಲ್ಲದೆ ಪ್ರಮುಖ ವಿದ್ಯಾಕೇಂದ್ರವಾಗಿತ್ತು. ಭಾರತದ ಎಲ್ಲ ಭಾಗಗಳಿಂದಲೂ ವಿದ್ಯಾವಂತರನ್ನು ಆಕರ್ಷಿಸಿತ್ತು. ಪಾಟಲಿಪುತ್ರದಲ್ಲಿ ಪಿಂಗಳ, ಪಾಣಿನಿ, ವ್ಯಾಧಿ, ವರ್ಷ, ಉಪವರ್ಷ, ಕಾತ್ಯಾಯನ ಮುಂತಾದ ಪ್ರಮುಖ ವಿದ್ವಾಂಸರು ಬಂದು ತಂಗಿ ತಮ್ಮ ವಿದ್ವತ್ತನ್ನು ಬೆಳಗಿಸಿಕೊಂಡರೆಂದು ಕಾಶ್ಮೀರದ ಇತಿಹಾಸಕಾರ ರಾಜಶೇಖರ (10ನೆಯ ಶತಮಾನ) ಹೇಳಿದ್ದಾನೆ. ಜೈನಪಂಡಿತ ಸ್ಥೂಲಭದ್ರನ ನೇತೃತ್ವದಲ್ಲಿ ಇಲ್ಲಿ ಸೇರಿದ್ದ ಜೈನಧರ್ಮ ಸಭೆಯಲ್ಲಿ ಆ ಧರ್ಮದ ತತ್ತ್ವಗಳನ್ನು ಸ್ಥಿರೀಕರಿಸಲಾಯಿತಲ್ಲದೆ ಅಶೋಕ ಮೌರ್ಯನ ಕಾಲದಲ್ಲಿ ಮೂರನೆಯ ಬೌದ್ಧಧರ್ಮ ಸಮ್ಮೇಳನ ಇಲ್ಲಿ ಸಮಾವೇಶಗೊಂಡಿತ್ತು. ಹೀಗೆ ಪಾಟಲಿಪುತ್ರ ಜೈನ, ಹಿಂದು ಮತ್ತು ಬೌದ್ಧ ಧರ್ಮಗಳ ಕೇಂದ್ರವಾಗಿತ್ತು.

ಯಾತ್ರಿಕರ ವರ್ಣನೆ

ಬದಲಾಯಿಸಿ

ಕ್ರಿ. ಪೂ. 300ರ ಸುಮಾರಿನಲ್ಲಿ ಪಾಟಲಿಪುತ್ರ ಹೇಗಿತ್ತೆಂಬುದನ್ನು ಮೆಗಾಸ್ತನೀಸನ ಬರೆವಣಿಗೆಗಳಿಂದ ತಿಳಿಯಬಹುದು. ಗಂಗಾ-ಶೋಣಾ ನದಿಗಳ ಸಂಗಮದ ಬಳಿ, ಗಂಗಾ ನದಿಯ ದಡದ ಉದ್ದಕ್ಕೂ ಇದು ಹಬ್ಬಿತ್ತು. ಇದು 14.4 ಕಿಮೀ ಉದ್ದ ಮತ್ತು 3.8 ಕಿಮೀ ಅಗಲವಾಗಿತ್ತು. ಇದರ ಸುತ್ತಳತೆ 36ಕಿಮೀ. ಇದು ಹೆಚ್ಚು ಕಡಿಮೆ ಈಗಿನ ಪಟ್ನಾ ನಗರಕ್ಕೆ ಸಮವಾಗಿತ್ತು. ಇದರ ಪೂರ್ವದ ಮೇರೆ ಸುಪ್ರಸಿದ್ಧ ಸುಂದರ ಯಕ್ಷಿಯ ವಿಗ್ರಹ ಸಿಕ್ಕಿರುವ ದೀದಾರ್‍ಗಂಜ್ ವರೆಗೂ ಪ್ರಸರಿಸಿತ್ತು. ರಾಜಧಾನಿಯ ಸುತ್ತಲೂ 183 ಮೀ ಅಗಲ ಮತ್ತು 13.7 ಮೀ ಆಳದ ಕಂದಕವಿತ್ತೆಂದೂ ಅದರೊಳಕ್ಕೆ ನಗರದ ಚರಂಡಿ ನೀರನ್ನು ಬಿಡಲಾಗುತ್ತಿತ್ತೆಂದೂ ಮೆಗಾಸ್ತನೀಸ್ ಹೇಳಿದ್ದಾನೆ. ಈ ಕಂದಕಕ್ಕೆ ಗಂಗಾ-ಶೋಣಾ ನದಿಗಳ ನೀರನ್ನು ಬಿಡುತ್ತಿದ್ದರು. ಶತ್ರುಗಳು ದೋಣಿಗಳ ಸಹಾಯದಿಂದ ಕಂದಕವನ್ನು ದಾಟುವ ಯತ್ನಮಾಡಿದರೆ ನೀರು ಬಸಿದು ಹೋಗುವಂತೆ ಮಾಡಿ ಕಂದಕದ ಕೆಸರನ್ನು ದಾಟಲು ಅಸಾಧ್ಯವಾಗುವಂತೆ ಮಾಡುತ್ತಿದ್ದರು. ಕಂದಕದ ಒಳಪಾಶ್ರ್ವದಲ್ಲಿ 31ರಿಂದ 46 ಸೆ.ಮೀ ವ್ಯಾಸದ ಮತ್ತು ಸುಮಾರು 5 ಮೀ ಎತ್ತರದ ಮರದ ಕಂಬಗಳನ್ನು ಹೂತು ಕೋಟೆಯನ್ನು ನಿರ್ಮಿಸಿದ್ದರು. ಈಚಿನ ಭೂಶೋಧನೆಗಳಲ್ಲಿ ಮರದ ಕೋಟೆಬೇಲಿಯ ಅವಶೇಷಗಳು ಪಶ್ಚಿಮದಲ್ಲಿ ಲೋಹಾನಿಪುರದಿಂದ ಬಹದ್ದೂರಪುರ, ಬುಲಂದಿಬಾಫ್, ಕುಮ್ರಹರ ಮಹಾರಾಜಖಂಡ ಪ್ರದೇಶಗಳ ಮೂಲಕ ಪೂರ್ವದಲ್ಲಿ ಸೆವಾಯಿಕೊಳ ಮತ್ತು ಗಾಂಧಿಕೊಳದ ವರೆಗಿನ ವಿಸ್ತಾರ ಪ್ರದೇಶದಲ್ಲಿ ಕಂಡುಬಂದಿವೆ. ಮೆಗಾಸ್ತನೀಸ್ ನೀಡಿರುವ ವರ್ಣನೆಗೆ ಇವು ಮೂಕ ಸಾಕ್ಷಿಗಳಾಗಿವೆ. ಆದರೆ ಕ್ರಿ,. ಶ. 4ನೆಯ ಶತಮಾನದ ವೇಳೆಗೆ ಇದರ ವಿಸ್ತೀರ್ಣ ಕಡಿಮೆಯಾಯಿತು. ಆಗಿನ ಪ್ರಾಚೀನ ನಗರ ಗಂಗಾ ನದಿಯ ದಂಡೆಯಿಂದ ಸ್ವಲ್ಪ ದೂರದಲ್ಲಿ ಇತ್ತೆಂದು ಕಾಣುತ್ತದೆ. ಗಂಗಾ ನದಿಯಿಂದ 8 ಕಿಮೀ ನಡೆದು ನಗರವನ್ನು ತಲುಪಬೇಕಾಯಿತೆಂದು ಚೀನೀ ಬೌದ್ಧ ಯಾತ್ರಿಕ ಫಾಹಿಯಾನ್ ಹೇಳಿದ್ದಾನೆ.

ಬುಲಂದಿಬಾಫ್ ಬಳಿ ನಡೆದ ಉತ್ಖನನದಲ್ಲಿ 4.4 ಮೀ ಅಂತರದಲ್ಲಿ ನೆಟ್ಟಿದ್ದ ಮರದ ಕಂಬಗಳು ಎರಡು ಸಾಲುಗಳು ಕಂಡುಬಂದುವು. ಮರದ ದಿಮ್ಮಿಗಳನ್ನು ತಲಾ 0.3 ಮೀ ದೂರದಲ್ಲಿ ಸಮತಲವಾಗಿ ಅವಕ್ಕೆ ಜೋಡಿಸಲಾಗಿತ್ತು. ಈ ಸಮತಲ ದಿಮ್ಮಿಗಳ ತುದಿಗಳನ್ನು ಕಂಬಗಳೊಳಗೆ ಹುಗಿಸಲಾಗಿತ್ತು. ಗಟ್ಟಿಸಿದ ಜಲ್ಲಿಕಲ್ಲಿನ ನೆಲಗಟ್ಟಿನ ಮೇಲೆ, ನೆಲದಲ್ಲಿ 1.5 ಮೀ. ಆಳಕ್ಕೆ ಹಾಸಲಾಗಿದ್ದ ಮರದ ಹಲಗೆಗಳಲ್ಲಿ ಕಂಬಗಳನ್ನು ನೆಟ್ಟು ಭದ್ರಪಡಿಸಲಾಗಿತ್ತು. ಮರದ ಕೋಟೆಯ ಹೊರ ಮೈಗೆ ಕಬ್ಬಿಣದ ತಗಡು ಮತ್ತು ಮರದ ಹಲಗೆಗಳನ್ನು ಬಡಿದು ಬಿಗಿಪಡಿಸಲಾಗಿತ್ತು. ಮರದ ಕಂಬಗಳ ಎರಡು ಸಾಲುಗಳ ನಡುವೆ ರಕ್ಷಣಾಯೋಧರ ಚಲನಕ್ಕೆ ಅಗತ್ಯವಾದ ದಾರಿಯಿತ್ತೆಂದು ತಿಳಿದುಬರುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಇಂಥ ದಾರಿಯನ್ನು ದೇವರಪಥವೆಂದು ಕರೆಯಲಾಗಿದೆ. ಪಾಟಲಿಪುತ್ರದ ಈ ಮರದ ಕೋಟೆ ಗಮನಾರ್ಹವಾಗಿತ್ತು. ನಗರಕ್ಕೆ ಭೇಟಿ ನೀಡಿದ ಯಾತ್ರಿಕರು ತಪ್ಪದೆ ಇದನ್ನು ವರ್ಣಿಸುವಂತಿತ್ತು. ಈ ಕೋಟೆಯ ಮೇಲೆ ಸುಮಾರು 67 ಮೀ ದೂರಕ್ಕೆ ಒಂದರಂತೆ 570 ಉನ್ನತ ಗೋಪುರಗಳಿದ್ದುವು. ಕೋಟೆಯ ಗೋಡೆ ಮತ್ತು ಕೊತ್ತಲಗಳಲ್ಲಿ ರಕ್ಷಣಾಯೋಧರು ಶತ್ರುಗಳ ಮೇಲೆ ಬಾಣಪ್ರಯೋಗ ಮಾಡಲು ಸಹಾಯಕವಾದ ರಂಧ್ರಗಳಿದ್ದುವು.

ಕೋಟೆಗೆ 64 ಬಾಗಿಲುಗಳಿದ್ದುವೆಂದು ಮೆಗಾಸ್ತನೀಸ್ ತಿಳಿಸಿದ್ದಾನೆ. ಬುಲಂದಿಬಾಫ್ ಬಳಿಯ ಉತ್ಖನನದಲ್ಲಿ ಕಂಡುಬಂದ ಒಂದು ಕೋಟೆಬಾಗಿಲಿನ ಇಬ್ಬದಿಗಳಲ್ಲಿ ಎಂಟು ಪಾಶ್ರ್ವಗಳಿದ್ದ ಮರದ ಕಂಬಗಳಿದ್ದುವು. ಬಾಗಿಲು ಬಹುಶಃ ಸುಮಾರು 4.5 ಮೀ ಅಗಲವಾಗಿತ್ತು. ಮುದ್ರಾರಾಕ್ಷಸ ನಾಟಕದಲ್ಲಿ ಚಂದ್ರಗುಪ್ತ ಮೌರ್ಯನ ಅರಮನೆಯನ್ನು ಸುಗಾಂಗವೆಂದು ಕರೆಯಲಾಗಿದೆ. ಅದರ ನಿರ್ದಿಷ್ಟ ನೆಲೆ ತಿಳಿದು ಬಂದಿಲ್ಲ. ನಗರದೊಳಗಿನ ರಸ್ತೆಗಳ ವಿವರ ಈ ವರೆಗೆ ತಿಳಿದುಬಂದಿಲ್ಲ. ಆದರೆ ಉತ್ಖನನದಲ್ಲಿ ಮರದ ಹಲಗೆಗಳಿಂದ ನಿರ್ಮಿಸಿದ ಒಳಚರಂಡಿ ವ್ಯವಸ್ಥೆಯ ಅವಶೇಷಗಳು ಕಂಡುಬಂದಿವೆ. ಒಳಚರಂಡಿಯ ಒಂದು ಭಾಗ ಮರದ ಕೋಟೆಗೋಡೆಯ ಮೂಲಕ ಹಾಯ್ದು ಹೊರಗಡೆಗೆ ಹೋಗುತ್ತದೆ.

ಮೌರ್ಯ ಸಾಮ್ರಾಜ್ಯ ಬಲಗೊಂಡಂತ ಪಾಟಲಿಪುತ್ರ ಉಚ್ಛ್ರಾಯ ಸ್ಥಿತಿಗೆ ಬರುತ್ತಿತ್ತು. ಅಶೋಕನ ಆಳ್ವಿಕೆಯ ಕಾಲದಲ್ಲಿ ಪಾಟಲಿಪುತ್ರದ ವ್ಯಾಪಾರ ಎಷ್ಟು ಪ್ರಾಮುಖ್ಯ ಗಳಿಸಿತ್ತೆಂದರೆ ಇದರ ದಿನಂಪ್ರತಿ ಆಕ್ಟ್ರಾಯಿ ಸುಂಕ 4 ಲಕ್ಷ ಕಾರ್ಷಾಪಣಗಳಷ್ಟಿತ್ತು. ಬಹುಶಃ ಚಂದ್ರಗುಪ್ತ ಮೌರ್ಯನ ಕಾಲದಲ್ಲಿಯೇ ಯೋಜಿಸಿ ನಿರ್ಮಿಸಲಾದ ವೈಭವೋಪೇತವಾದ 80 ಕಂಬಗಳ ಹಜಾರ ಅದರ ಘನತೆಗೆ ತಕ್ಕುದಾದ ವಿಶಾಲ ಅರಮನೆ. ಅಶೋಕ ನಿರ್ಮಿಸಿದನೆಂದು ಹೇಳಲಾದ ಅಸಂಖ್ಯಾತ ಸ್ತೂಪಗಳು, ಚೈತ್ಯಗಳು ಮತ್ತು ವಿಹಾರಗಳು-ಇವು ಈ ನಗರದ ಶ್ರೀಮಂತಿಕೆಯ ಪ್ರತೀಕಗಳಾಗಿದ್ದುವು. ಬೌದ್ಧ ಸ್ತೂಪಗಳಲ್ಲಿ ಬುದ್ಧನ ದೇಹಾವಶೇಷವನ್ನು ಹುಗಿದಿದ್ದ ಸ್ತೂಪ, ಬೌದ್ಧ ಸಂಘಕ್ಕೆ ಆಮಲಕಫಲ ನೀಡಿದ ಸ್ಥಳದಲ್ಲಿ ನಿರ್ಮಿಸಿದ ಸ್ತೂಪ, ಬುದ್ಧ ಇಲ್ಲಿಗೆ ಭೇಟಿ ಕೊಟ್ಟಾಗ ತಂಗಿದ್ದ ಸ್ಥಳದ ಸ್ತೂಪ ಮತ್ತು ಪಾಟಲಿಪುತ್ರದ ಏಳಿಗೆಯ ಬಗ್ಗೆ ಭವಿಷ್ಯ ನುಡಿದ ಸ್ಥಳದಲ್ಲಿ ನಿರ್ಮಿಸಿದ ಸ್ತೂಪ ಇವು ಬೌದ್ಧ ಸ್ತೂಪಗಳ ಪೈಕಿ ಪ್ರಧಾನವಾಗಿದ್ದುವೆಂದು ಹೇಳಲಾಗಿದೆ. ಅಶೋಕ ನೆಡಿಸಿದ, ಶಾಸನ ಸಹಿತವಾದ ಶಿಲಾಸ್ತಂಭ 7 ನೆಯ ಶತಮಾನದಲ್ಲಿ ಅಲ್ಲಿತ್ತೆಂದು ಹ್ಯೂಯೆನ್‍ತ್ಸಾಂಗ್ ತಿಳಿಸಿದ್ದಾನೆ. ಅಶೋಕ ಕಟ್ಟಿಸಿದ ಅಶೋಕಾರಾಮ ವಿಹಾರದಲ್ಲಿ ಮೂರನೆಯ ಬೌದ್ಧ ಸಮ್ಮೇಳನ ನಡೆಯಿತಂತೆ. ಮೊಗ್ಗಲಿ ಪುತ್ತತಿಸ್ಸ (ಉಪಗುಪ್ತ) ಅದರ ಅಧ್ಯಕ್ಷತೆ ವಹಿಸಿದ್ದ.

ಮೌರ್ಯರ ಪತನಾನಂತರ ಕ್ರಿ.ಪೂ 2ನೆಯ ಶತಮಾನದಲ್ಲಿ ಇದರ ಉಚ್ಛ್ರಾಯಕ್ಕೆ ಸ್ವಲ್ಪ ಕುಂದುಂಟಾಯಿತು. ಆ ಶತಮಾನದ ಪ್ರಾರಂಭದಲ್ಲಿ ಗ್ರೀಕರು ಪಾಟಲಿಪುತ್ರವನ್ನು ವಶಪಡಿಸಿಕೊಂಡರೂ ಇದು ಮತ್ತೆ ಸ್ವತಂತ್ರವಾಯಿತು. ಉತ್ತರ ಭಾರತದ ಪ್ರಮುಖ ನಗರವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ಮುಂದುವರಿಯಿತು. ಈ ನಗರ ಬೌದ್ಧ ಧರ್ಮದ ಕೇಂದ್ರವಾಗಿದ್ದರೂ ಇಲ್ಲಿ ಆಳಿದ ಶುಂಗ ದೊರೆಗಳು ಬೌದ್ಧಮತ ದ್ವೇಷಿಗಳಾಗಿದ್ದರೆಂದು ಹೇಳಲಾಗಿದ್ದರೂ ಇಲ್ಲಿ ಅನೇಕ ವಿಹಾರಗಳು ಇದ್ದುವು. ಮಿನ್ಯಾಂಡರನ ಬೌದ್ಧ ಗುರುವಾದ ನಾಗಸೇನ ಕ್ರಿ.ಪೂ 2ನೆಯ ಶತಮಾನದಲ್ಲಿ ಪಾಟಲಿಪುತ್ರದ ಅಶೋಕ ವಿಹಾರದಲ್ಲಿ ವಿದ್ಯಾಭ್ಯಾಸ ಮಾಡಿದನೆಂದು ಹೇಳಲಾಗಿದೆ. ಬೌದ್ಧರು ಈ ನಗರದಿಂದ ಬೌದ್ಧ ಕ್ಷೇತ್ರಗಳಿಗೆ ಯಾತ್ರೆ ಮಾಡಿ ದಾನಧರ್ಮಗಳನ್ನು ಮಾಡುತ್ತಿದ್ದರು.

ಜೈನ ಧರ್ಮವೂ ಇಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಜೈನ ಸಂತ ಧರ್ಮಸಮ್ಮೇಳನವನ್ನು ನಡೆಸಿದುದಾಗಿಯೂ ಅವನ ಗೌರವಾರ್ಥವಾಗಿ ಇಲ್ಲಿ ಒಂದು ಮಂದಿರವನ್ನು ನಿರ್ಮಿಸಿದುದಾಗಿಯೂ ತಿಳಿದು ಬಂದಿದೆ. ನಗರದ ಬಡಾವಣೆಯಾದ ಲೋಹಾನಿಪುರದಲ್ಲಿ ಮೌರ್ಯರ ಕಾಲದ ಕಲ್ಲಿನ ತೀರ್ಥಂಕರನ ಶಿಲ್ಪ ಸಿಕ್ಕಿದೆ.

ಶುಂಗರ ಅನಂತರ ಅಧಿಕಾರಕ್ಕೆ ಬಂದ ಕಾಣ್ವ ದೊರೆಗಳು 45 ವರ್ಷಗಳ ಕಾಲ ಆಳಿದರು. ಪುರಾಣಗಳ ರೀತ್ಯ ಶಾತವಾಹನವಂಶದ ಸ್ಥಾಪಕನಾದ ಸಿಮುಖನೆಂಬುವನು ಕಾಣ್ವರನ್ನು ಸೋಲಿಸಿ ಪಾಟಲಿಪುತ್ರವನ್ನು ಆಕ್ರಮಿಸಿದನೆಂದು ಹೇಳಲಾಗಿದೆ. ಅನಂತರ ಸ್ವಲ್ಪ ಕಾಲ ಪಾಟಲಿಪುತ್ರ ಗಯೆಯಿಂದ ಆಳುತ್ತಿದ್ದ ಮಿತ್ರ ದೊರೆಗಳ ವಶದಲ್ಲಿತ್ತು. ಕ್ರಿ.. ಶ. 1ನೆಯ ಶತಮಾನದ ಉತ್ತರಾರ್ಧದಲ್ಲಿ ಈ ನಗರ ಕುಷಾಣರ ವಶವಾಗಿದ್ದಿರಬಹುದು. ಕುಷಾಣರ ನಾಣ್ಯಗಳೂ ಆ ಕಾಲದ ಕುಷಾಣ ಶೈಲಿಯ ಮಣ್ಣಿನ ಗೊಂಬೆಗಳೂ ದೊರಕಿವೆ. ಹುವಿಷ್ಕನ ಕಾಲದಲ್ಲಿ 150ರ ವೇಳೆಗೆ ಈ ನಗರ ಶಕರ ವಶವಾಯಿತು. ಈ ಕಾಲದಲ್ಲಿ ಉದ್ದಕ್ಕೂ ಇಲ್ಲಿ ಜೈನ ಧರ್ಮ ಪ್ರಬಲವಾಗಿತ್ತು. ಶ್ವೇತಾಂಬರ ಮತ್ತು ದಿಗಂಬರ ಪಂಥಗಳೆರಡಕ್ಕೂ ಪವಿತ್ರವಾದ ಉಮಾಸ್ವಾತಿಯ ತತ್ತ್ವಾರ್ಥಸೂತ್ರವನ್ನು ಇಲ್ಲಿ ರಚಿಸಲಾಯಿತು. ಶಕ ದೊರೆಗಳು ಜೈನ ಧರ್ಮಾನುಯಾಯಿಗಳಾಗಿದ್ದರು.

ಗುಪ್ತ ಸಾಮ್ರಾಜ್ಯದ ಶ್ರೀಗುಪ್ತನ ಕಾಲದಲ್ಲಿ ಪಾಟಲಿಪುತ್ರ ಮತ್ತೆ ರಾಜಧಾನಿಯಾಗಿ ಉತ್ತಮ ಸ್ಥಿತಿಗೆ ಬಂತು. ಆಗ ಬುದ್ಧಪೂರ್ಣಿಮೆಯ ಸಮಯದಲ್ಲಿ 20 ರಥಗಳಲ್ಲಿ ಬುದ್ಧನ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಒಯ್ಯಲಾಗುತ್ತಿತ್ತು. ಅಶೋಕನ ಅರಮನೆ 5ನೆಯ ಶತಮಾನದಲ್ಲೂ ಉಳಿದುಬಂದಿತ್ತೆಂದು ಫಾಹಿಯಾನ್ ತಿಳಿಸಿದ್ದಾನೆ. ಅದೊಂದು ದೈವೀ ನಿರ್ಮಾಣದಂತೆ ಅದ್ಭುತವಾಗಿತ್ತೆಂದು ವರ್ಣಿಸಿದ್ದಾನೆ. ಕುಮ್ರಹರದ ಅಗೆತದಲ್ಲಿ ಮೌರ್ಯರ ಕಾಲದ ಕಂಬಗಳಿರುವ ವಿಶಾಲ ಹಜಾರ ಕಂಡುಬಂದಿದೆ. ಗುಪ್ತಯುಗದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಪಾಟಲಿಪುತ್ರದಲ್ಲಿ ಹಲವು ಶ್ರೀಮಂತದಾನಿಗಳು ವೈದ್ಯಶಾಲೆಗಳನ್ನೂ ಬಡವರಿಗೆ ಅನ್ನಸತ್ರಗಳನ್ನೂ ನಡೆಸುತ್ತಿದ್ದರು. ಆ ಕಾಲದ ವಿಹಾರ ಮತ್ತು ಆಸ್ಪತ್ರೆಯಾಗಿದ್ದ ಕಟ್ಟಡವನ್ನು ಉತ್ಖನನದಲ್ಲಿ ಗುರುತಿಸಲಾಗಿದೆ. 410ರಲ್ಲಿ ಎರಡು ಬೌದ್ಧ ವಿಹಾರಗಳಿದ್ದುದಾಗಿ ಫಾಹಿಯಾನ್ ಹೇಳಿದ್ದಾನೆ. ಅವುಗಳಲ್ಲೊಂದು ಮೇಲೆ ಹೇಳಿದ ಆರೋಗ್ಯ ವಿಹಾರವಾಗಿರಬಹುದು. ಗುಪ್ತರ ಕಾಲದ ವಿಹಾರಗಳ ಗೋಡೆಗಳಲ್ಲಿದ್ದ ಗೂಡುಗಳಲ್ಲಿ ಕುಳಿತ ಬುದ್ಧ, ಹಾರುತ್ತಿರುವ ಗಂಧರ್ವ, ಮಿಥುನ ಮುಂತಾದ ಮಣ್ಣಿನ ವಿಗ್ರಹಗಳಿದ್ದುವು. ಗೋಡೆಯ ಇಟ್ಟಿಗೆಗಳ ಮೇಲೆ ಅಂದವಾದ ಕೆತ್ತನೆಗಳಿದ್ದುವು. ಪಾಟಲಿಪುತ್ರ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಫಾಹಿಯಾನ್ ಮೂರು ವರ್ಷಗಳ ಕಾಲ ಇಲ್ಲಿಯ ಗ್ರಂಥಭಂಡಾರಗಳಲ್ಲಿ ಬೌದ್ಧ ಧರ್ಮದ ಅಧ್ಯಯನ ಮಾಡುತ್ತಿದ್ದುದಾಗಿ ಹೇಳಲಾಗಿದೆ. ಭಾರತದ ಬೇರಾವ ಗ್ರಂಥ ಭಂಡಾರದಲ್ಲೂ ಸಿಕ್ಕದ ವಿಷಯ ಗ್ರಂಥದ ಪ್ರತಿಗಳು ಇಲ್ಲಿ ಸಿಕ್ಕಿದುದೇ ಇದಕ್ಕೆ ಕಾರಣ.

ಗುಪ್ತರ ಕಾಲದಲ್ಲಿ ಸಹಜವಾಗಿಯೇ ಹಿಂದೂ ಧರ್ಮ ಪಾಟಲಿಪುತ್ರದಲ್ಲಿ ಪ್ರಬಲವಾಗಿತ್ತು. ಕಾವ್ಯಮೀಮಾಂಸೆ, ರಾಜನೀತಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ನಿಷ್ಣಾತನಾಗಿದ್ದ 2ನೆಯ ಚಂದ್ರಗುಪ್ತನ ಮಂತ್ರಿ ಶಾಬ ಈ ನಗರದವನಾಗಿದ್ದ. ಗಣಿತ ಮತ್ತು ಜ್ಯೋತಿಶ್ಯಾಸ್ತ್ರ ವಿಶಾರದ ಆರ್ಯಭಟ 399ರಲ್ಲಿ ಈ ನಗರದಲ್ಲಿ ವಾಸವಾಗಿದ್ದ.

ಆದರೆ 637ರಲ್ಲಿ ಹ್ಯೂಯೆನ್‍ತ್ಸಾಂಗ್ ಭೇಟಿ ನೀಡಿದಾಗ ಪಾಟಲಿಪುತ್ರ ಬಹುಮಟ್ಟಿಗೆ ಪಾಳುಬಿದ್ದಿತ್ತು. ಇದು ಗಂಗೆಯ ದಡದಲ್ಲಿ ಕೇವಲ 1,000 ನಿವಾಸಿಗಳ ಕುಗ್ರಾಮವಾಗಿತ್ತೆಂದೂ ಅಶೋಕನ ಅರಮನೆ, ವಿಹಾರಗಳು, ಸ್ತೂಪಗಳು ಮತ್ತು ಹಿಂದು ದೇವಾಲಯಗಳು ಪಾಳು ಬಿದ್ದಿದ್ದುವೆಂದೂ ಅವನು ತಿಳಿಸಿದ್ದಾನೆ. ನಗರದ ಆಗ್ನೇಯಕ್ಕೆ ಪಾಳು ಬಿದ್ದ ಕುಕ್ಕುಟಾರಾಮ ವಿಹಾರ, ಆಮಲಕ ಸ್ತೂಪ, ಚೈತ್ಯ ವಿಹಾರಗಳು ಇದ್ದುವೆಂದು ಅವನು ಹೇಳಿದ್ದಾನೆ. ಸುಮಾರು 575 ರಲ್ಲಿ ಶೋಣಾ ನದಿಯ ಪ್ರವಾಹ ಈ ನಗರವನ್ನು ನಾಶಮಾಡಿತೆಂದು ಜೈನಗ್ರಂಥ ತಿಲ್ಹೊಗಲಿ ಪೈನ್ನಿಯ ತಿಳಿಸುತ್ತದೆ. ಹ್ಯೂಯೆನ್‍ತ್ಸಾಂಗನ ಬರವಣಿಗೆಗಳಿಂದಲೂ ಭೂಶೋಧನೆಯಿಂದಲೂ ದೊರಕಿದ ಮಾಹಿತಿಗಳು ಈ ಜೈನಗ್ರಂಥದ ಹೇಳಿಕೆಯನ್ನು ಸಮರ್ಥಿಸುತ್ತವೆ. ಸುಮಾರು 600ರಿಂದ 1600ರ ವರೆಗೆ ಈ ಪ್ರದೇಶ ಪಾಳುಬಿದ್ದಿತ್ತೆಂದು ಭೂಶೋಧನೆಯ ಮಾಹಿತಿಗಳ ಆಧಾರದಿಂದ ಹೇಳಬಹುದಾಗಿದೆ.

ಆದರೂ ಪಾಟಲಿಪುತ್ರ ಪ್ರಮುಖ ವ್ಯಾಪಾರ ಮತ್ತು ನೌಕಾಯಾನ ಕೇಂದ್ರವಾಗಿತ್ತೆಂದು ಧರ್ಮಪಾಲನ ಕಾಲೀಮ್‍ಪುರ ತಾಮ್ರಶಾಸನ ಹೇಳುತ್ತದೆ. ಅವನು ಇಲ್ಲಿ ಸೈನ್ಯದೊಂದಿಗೆ ತಂಗಿದ್ದಾಗ ಉತ್ತರಭಾರತದ ಅನೇಕ ರಾಜರು ಧರ್ಮಪಾಲನಿಗೆ ತಮ್ಮ ಕಪ್ಪಕಾಣಿಕೆಗಳನ್ನು ನೀಡಿದರೆಂದು ಶಾಸನ ಹೇಳುತ್ತದೆ. ವ್ಯಾಪಾರ ಕೇಂದ್ರವಾದ ಈ ಪಟ್ಟಣ ಗಂಗಾತೀರದ ಹೊಸ ನೆಲೆಯೊಂದರಲ್ಲಿ ಇದ್ದಿರಬೇಕು. ಮುಸ್ಲಿಮರು ಬಿಹಾರವನ್ನು 1200ರ ಸುಮಾರಿನಲ್ಲಿ ಆಕ್ರಮಿಸಿದಾಗ ಪಾಟಲಿಪುತ್ರದ ನೆರೆಯಲ್ಲಿದ್ದ ಬಿಹಾರ್ ಷರೀಫ್ ಪ್ರಮುಖ ನಗರವಾಗಿತ್ತು. ಮತ್ತೆ ಮೊಗಲರ ಮತ್ತು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಈ ಪ್ರಾಚೀನ ನಗರದ ಕೆಲವು ಭಾಗಗಳನ್ನೊಳಗೊಂಡ ಆಧುನಿಕ ಪಟ್ನಾ ನಗರ ಬೆಳೆಯಿತು.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Kulke, Hermann; Rothermund, Dietmar (2004), A History of India, 4th edition. Routledge, Pp. xii, 448, ISBN 0-415-32920-5.
  2. "Patna". Encyclopædia Britannica. Encyclopædia Britannica Online. Encyclopædia Britannica Inc., 2013. Web. 13 Dec. 2013 <http://www.britannica.com/EBchecked/topic/446536/Patna>.
  3. Valerie Hansen Voyages in World History, Volume 1 to 1600, 2e, Volume 1 pp. 69 Cengage Learning, 2012

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: