ಶಿಶುನಾಗ ರಾಜವಂಶ
ಶಿಶುನಾಗ ರಾಜವಂಶವು ಪ್ರಾಚೀನ ಭಾರತದ ಒಂದು ಸಾಮ್ರಾಜ್ಯವಾಗಿದ್ದ ಮಗಧವನ್ನು ಆಳಿದ ಮೂರನೇ ರಾಜವಂಶವೆಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಈ ರಾಜವಂಶವು ಬೃಹದ್ರಥನಿಂದ ಸ್ಥಾಪಿತವಾದ ಪುರಾಣಾಧಾರಿತ ರಾಜವಂಶದ ನಂತರ ಬಂದಿತು ಮತ್ತು ಮಗಧವನ್ನು ಆಳಿದ ಎರಡನೇ ರಾಜವಂಶವಾಗಿತ್ತು.[೧]
ಈ ರಾಜವಂಶದ ಸಂಸ್ಥಾಪಕನಾದ ಶಿಶುನಾಗನು ಆರಂಭದಲ್ಲಿ ಹರ್ಯಂಕ ರಾಜವಂಶದ ಕೊನೆಯ ಅರಸ ನಾಗದಾಸಕನ ಅಮಾತ್ಯನಾಗಿದ್ದನು ಮತ್ತು ಒಂದು ಜನಪ್ರಿಯ ಬಂಡಾಯದ ನಂತರ ಸು. ಕ್ರಿ.ಪೂ. ೪೧೩ರಲ್ಲಿ ಸಿಂಹಾಸನವೇರಿದನು.[೨] ಆರಂಭದಲ್ಲಿ ಈ ರಾಜವಂಶದ ರಾಜಧಾನಿ ರಾಜ್‍ಗೀರ್ ಆಗಿತ್ತು; ಆದರೆ ಆಮೇಲೆ ಇಂದಿನ ಪಟ್ನಾದ ಹತ್ತಿರದ ಪಾಟಲಿಪುತ್ರಕ್ಕೆ ಕಾಕವರ್ಣನ ಆಳ್ವಿಕೆಯ ಕಾಲದಲ್ಲಿ ಸ್ಥಳಾಂತರಗೊಂಡಿತು. ಸಂಪ್ರದಾಯದ ಪ್ರಕಾರ, ಕಾಕವರ್ಣನ ನಂತರ ಅವನ ಹತ್ತು ಪುತ್ರರು ಉತ್ತರಾಧಿಕಾರಿಗಳಾದರು.[೩] ಈ ರಾಜವಂಶದ ನಂತರ ನಂದ ಸಾಮ್ರಾಜ್ಯವು ಸು. ಕ್ರಿ.ಪೂ. ೩೪೫ರಲ್ಲಿ ಅಧಿಕಾರಕ್ಕೆ ಬಂದಿತು.[೪]
ಪುರಾಣಗಳು ಶಿಶುನಾಗ ರಾಜರನ್ನು ಕ್ಷತ್ರಿಯರೆಂದು ವರ್ಣಿಸುತ್ತದೆ.
ಶಿಶುನಾಗನು ಹಿಂದೆ ವಜ್ಜಿಯ ರಾಜಧಾನಿಯಾಗಿದ್ದ ವೈಶಾಲಿಯಲ್ಲಿ ಎರಡನೇ ರಾಜಧಾನಿಯನ್ನು ಹೊಂದಿದ್ದನು ಎಂದು ಬೌದ್ಧ ಮೂಲಗಳು ಸೂಚಿಸುತ್ತವೆ. ವಜ್ಜಿಯನ್ನು ಮಗಧವು ಗೆದ್ದುಕೊಂಡಿತ್ತು. ಶಿಶುನಾಗ ರಾಜವಂಶವು ಭಾರತೀಯ ಉಪಖಂಡದಲ್ಲಿನ ಅತ್ಯಂತ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದನ್ನು ಆಳುತ್ತಿತ್ತು.
ಪುರಾಣಗಳ ಪ್ರಕಾರ, ಶಿಶುನಾಗನ ನಂತರ ಅವನ ಮಗ ಕಾಕವರ್ಣನು ಉತ್ತರಾಧಿಕಾರಿಯಾದನು ಮತ್ತು ಸಿನ್ಹಲ ಕಾಲಾನುಕ್ರಮಣಿಕೆಗಳ ಪ್ರಕಾರ ಅವನ ಮಗ ಕಾಲಶೋಕನು ಉತ್ತರಾಧಿಕಾರಿಯಾದನು. ಅಶೋಕಾವದಾನದ ಸಾಕ್ಷ್ಯಾಧಾರದ ಮೇಲೆ, ಇಬ್ಬರೂ ಒಂದೇ ವ್ಯಕ್ತಿ ಎಂದು ಅನೇಕ ವಿದ್ವಾಂಸರು ತೀರ್ಮಾನಿಸಿದರು. ಶಿಶುನಾಗನ ಆಳ್ವಿಕೆಯ ಕಾಲದಲ್ಲಿ, ಕಾಲಶೋಕನು ವಾರಾಣಸಿಯ ಪ್ರಾಂತಾಧಿಪತಿಯಾಗಿದ್ದನು. ಇವನ ಆಳ್ವಿಕೆಯ ಎರಡು ಅತ್ಯಂತ ಗಮನಾರ್ಹ ಘಟನೆಗಳೆಂದರೆ ಕ್ರಿ.ಪೂ. ೩೮೩ರಲ್ಲಿ ವೈಶಾಲಿಯಲ್ಲಿ ಎರಡನೇ ಬೌದ್ಧ ಸಂಗೀತಿ ನಡೆದಿದ್ದು ಮತ್ತು ಪಾಟಲಿಪುತ್ರಕ್ಕೆ ತನ್ನ ರಾಜಧಾನಿಯ ಅಂತಿಮ ಸ್ಥಳಾಂತರ. ಹರ್ಷಚರಿತದ ಪ್ರಕಾರ, ಇವನು ತನ್ನ ಗಂಟಲಲ್ಲಿ ತಿವಿದ ಬಾಕಿನಿಂದ ತನ್ನ ರಾಜಧಾನಿಯ ಸಮೀಪದಲ್ಲಿ ಸತ್ತನು. ಬೌದ್ಧ ಸಂಪ್ರದಾಯದ ಪ್ರಕಾರ, ಇವನಿಗೆ ಒಂಭತ್ತು ಅಥವಾ ಹತ್ತು ಪುತ್ರರಿದ್ದರು. ಇವರನ್ನು ಮಹಾಪದ್ಮ ನಂದನು ಸ್ಥಾನಭ್ರಷ್ಟ ಮಾಡಿದನು.
ಸಂಪ್ರದಾಯದ ಪ್ರಕಾರ, ಕಾಲಶೋಕನ ಹತ್ತು ಪುತ್ರರು ಏಕಕಾಲದಲ್ಲಿ ಆಳ್ವಿಕೆ ನಡೆಸಿದರು. ಮಹಾಬೋಧಿವಂಶವು ಅವರ ಹೆಸರುಗಳು ಭದ್ರಸೇನ, ಕೋರಂಡವರ್ಣ, ಮಂಗುರ, ಸರ್ವಂಜಹ, ಜಾಲಿಕ, ಉಭಕ, ಸಂಜಯ, ಕೋರವ್ಯ, ನಂದಿವರ್ಧನ ಮತ್ತು ಪಂಚಮಕ ಎಂದು ಹೇಳುತ್ತದೆ. ಪೌರಾಣಿಕ ಪಟ್ಟಿಗಳಲ್ಲಿ, ಕೇವಲ ಒಬ್ಬನ ಹೆಸರನ್ನು, ನಂದಿವರ್ಧನದು ಉಲ್ಲೇಖಿಸಲಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ Raychaudhuri 1972, p. 103.
- ↑ Raychaudhuri 1972, pp. 193, 201.
- ↑ Raychaudhuri 1972, p. 196.
- ↑ Raychaudhuri 1972, p. 201.