ವ್ಯತಿಕರಣಮಾಪಕ
ವ್ಯತಿಕರಣಮಾಪಕವು ಒಂದು ದೃಗುಪಕರಣ (ಇಂಟರ್‌ಫೆರೋಮೀಟರ್).[೧] ಬೆಳಕಿನ ಆಕರದಿಂದ ಪ್ರಸಾರವಾಗುವ ದೂಲ ಇದರ ಮೂಲಕ ಹಾಯುವಾಗ ಎರಡು ಇಲ್ಲವೇ ಹೆಚ್ಚಿನ ದೂಲಗಳಾಗಿ ಒಡೆದುಹೋಗುತ್ತದೆ. ಭಿನ್ನ ಪಥಗಳಲ್ಲಿ ಮುಂದೆ ಸಾಗುವ ಇವು ಮತ್ತೆ ಒಗ್ಗೂಡಿ ವ್ಯತಿಕರಣ (ಇಂಟರ್‌ಫರೆನ್ಸ್) ವಿದ್ಯಮಾನವನ್ನು ಪ್ರದರ್ಶಿಸುತ್ತವೆ. ಇಂಥ ಉಪಕರಣಗಳ ಆಲೇಖ್ಯ ಮತ್ತು ಬಳಕೆಗಳಿರುವ ಒಟ್ಟು ತಂತ್ರದ ಹೆಸರು ವ್ಯತಿಕರಣಮಾಪನೆ (ಇಂಟರ್‌ಫೆರೋಮೆಟ್ರಿ).[೨] ಸಾಮಾನ್ಯವಾಗಿ ದೃಗ್ ವ್ಯತಿಕರಣಮಾಪಕಗಳು ದ್ವಿದೂಲ ವ್ಯತಿಕರಣ ಹಾಗೂ ಬಹುದೂಲ ವ್ಯತಿಕರಣ ವಿಧಾನಗಳನ್ನು ಬಳಸಿಕೊಳ್ಳುತ್ತವೆ.
ಒಂದರ ಮೇಲೊಂದು ಅಧ್ಯಾರೋಪಿಸಿದ (ಸೂಪರ್‌ಪೋಸ್ಡ್) ಎರಡು ಇಲ್ಲವೇ ಹೆಚ್ಚಿನ ಸಂಸಕ್ತ (ಕೊಹಿರೆಂಟ್) ಬೆಳಕುದೂಲಗಳ ಪ್ರಾವಸ್ಥೆಗಳನ್ನು (ಫೇಸ಼ಸ್) ತುಲನೆ ಮಾಡುವುದು ವ್ಯತಿಕರಣಮಾಪಕದಲ್ಲಿಯ ಸಾಮಾನ್ಯ ಕ್ರಮ. ದೂಲಗಳು ಸಂಸಕ್ತವಾಗಬೇಕಾದರೆ ಒಂದೊಂದು ದೂಲವೂ ಅತ್ಯಗತ್ಯವಾಗಿ ಒಂದೇ ಆವೃತ್ತಿಯವಾಗಿರಬೇಕು. ಅಲ್ಲದೆ ಒಂದರೊಡನೆ ಇನ್ನೊಂದು ನಿಗದಿಪಡಿಸಿದ ಪ್ರಾವಸ್ಥಾ ಸಂಬಂಧ ಹೊಂದಿರಬೇಕು. ಈ ನಿಬಂಧನೆಯನ್ನು ಪರಿಪಾಲಿಸಬೇಕಾದಲ್ಲಿ ಎಲ್ಲ ದೂಲಗಳೂ ಒಂದೇ ಆಕರದಿಂದ ಉಗಮಿಸಿರಬೇಕಾದದ್ದು ಅತ್ಯಗತ್ಯ. ಮುಂದೆ ಅವನ್ನು ಒಡೆದು ಅರ್ಧಪಾರದರ್ಶಕವಾಗಿರುವಂಥ ಕನ್ನಡಿಗಳ ಸಹಾಯದಿಂದ ಬೇರೆ ಬೇರೆ ಪಥಗಳ ಮೂಲಕ ಸಾಗಿಸಬೇಕಾಗುತ್ತದೆ. ತರುವಾಯ ಸಂಸೂಚಕ (ಡಿಟೆಕ್ಟರ್) ಇರುವೆಡೆಯಲ್ಲಿ ಈ ದೂಲಗಳು ಮತ್ತೆ ಒಗ್ಗೂಡಿದಾಗ, ಅಧ್ಯಾರೋಪಣೆಗೊಂಡ ದೂಲಗಳ ತೀವ್ರತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಅವುಗಳ ಪ್ರಾವಸ್ಥೆಗಳು ಪೊರ್ದಿಕೊಂಡಿರುತ್ತವೆ (ಇನ್‌ಫೇಸ್). ಪ್ರಾವಸ್ಥೆಗಳು ಪೊರ್ದಿಕೊಂಡಿರದಿದ್ದಾಗ (ಔಟ್-ಆಫ್-ಫೇಸ್) ಅವುಗಳ ತೀವ್ರತೆ ಕಡಿಮೆಯಾಗಿರುತ್ತದೆ.
ಮೈಕಲ್ಸನ್-ಮಾರ್ಲೆ ಪ್ರಯೋಗ
ಬದಲಾಯಿಸಿಅಮೆರಿಕದ ಭೌತವಿಜ್ಞಾನಿ ಆಲ್ಬರ್ಟ್ ಏಬ್ರಹ್ಯಾಮ್ ಮೈಕಲ್‌ಸನ್ (1852-1931) ಮತ್ತು ಅಮೆರಿಕದ ರಸಾಯನವಿಜ್ಞಾನಿ ಎಡ್ವರ್ಡ್ ವಿಲಿಯಮ್ಸ್ ಮಾರ್ಲೆ (1838-1923) ಎಂಬವರು ಇಂಥದೊಂದು ವ್ಯತಿಕರಣಮಾಪಕವನ್ನು ಬಳಸಿ, ಕಾಲ್ಪನಿಕ ಮಾಧ್ಯಮ ಎನಿಸಿರುವ ಈಥರನ್ನು ಕುರಿತಂತೆ ಭೂಮಿಗೆ ಲಂಬದಿಶೆಯಲ್ಲಿ ಆಗಲಿ ಅಥವಾ ತನ್ನ ಚಲನೆಯ ದಿಶೆಯಲ್ಲಾಗಲಿ ಚಲಿಸುವ ಬೆಳಕಿನ ವೇಗದಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡರು. ಈಥರ್ ಎಂಬ ವಸ್ತು ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿ ಆಧುನಿಕ ಸಾಪೇಕ್ಷತಾಸಿದ್ಧಾಂತಕ್ಕೆ ಬುನಾದಿ ಹಾಕಿದರು. ಇದೇ ಪ್ರಖ್ಯಾತವಾದ ಮೈಕಲ್‌ಸನ್-ಮಾರ್ಲೆ ಪ್ರಯೋಗ. ಮೈಕಲ್‌ಸನ್ ವ್ಯತಿಕರಣಮಾಪಕದಲ್ಲಿ ಬೆಳಕಿನ ಆಕರ, ಪ್ರತಿಫಲಿಸುವ ಫಲಕಗಳು, ಪ್ರತಿಫಲಿಸುವ ಕನ್ನಡಿಗಳು, ಸಾಂದ್ರೀಕರಿಸುವ ಮಸೂರಗಳು ಮುಂತಾದ ಸಲಕರಣೆಗಳೆಲ್ಲ ಇರುತ್ತವೆ.[೩]
ರ್‍ಯಾಲೇ ವ್ಯತಿಕರಣಮಾಪಕ
ಬದಲಾಯಿಸಿಇಂಗ್ಲಿಷ್ ಭೌತವಿಜ್ಞಾನಿ ಜಾನ್ ವಿಲಿಯಮ್ ಸ್ಟ್ರೇಟ್ ರೇಲಿ (1842-1919) ರೂಪಿಸಿದ ವ್ಯತಿಕರಣಮಾಪಕ ಸರಳಬಗೆಯದು. ಪಾರದರ್ಶಕ ವಸ್ತುವಿನ ವಕ್ರೀಭವನಾಂಕವನ್ನು ಈ ತೆರನ ವ್ಯತಿಕರಣಮಾಪಕದಿಂದ ನಿರ್ಧರಿಸಲಾಗುವುದು. ಬೆಳಕಿನ ದೂಲ ವಸ್ತುವಿನ ಮೂಲಕ ಹಾದು ಬರುತ್ತದೆ. ವಾಯುವಿನ ಮೂಲಕ ಅದೇ ದಿಶೆಯಲ್ಲಿ ಹಾದುಬರುವ ಇನ್ನೊಂದು ಬೆಳಕಿನ ದೂಲದ ಪ್ರಾವಸ್ಥೆಯೊಂದಿಗೆ ಮೊದಲ ದೂಲದ ಪ್ರಾವಸ್ಥೆ ತುಲನೆಯಾಗುತ್ತದೆ. ವಸ್ತುವಿನಲ್ಲಿ ಬೆಳಕಿನ ವೇಗ ಕಡಿಮೆಯಾಗುವುದನ್ನು (ಇದು ಸಂಸೂಚಕದೆಡೆಯಲ್ಲಿ ಪ್ರಾವಸ್ಥಾ ವ್ಯತ್ಯಯನ ರೂಪದಲ್ಲಿ ಕಂಡುಬರುತ್ತದೆ) ಈ ವಿಧಾನದಿಂದ ಅಳೆಯಬಹುದು. ಈ ಉಪಕರಣಕ್ಕೆ ರ‍್ಯಾಲೇ ವ್ಯತಿಕರಣಮಾಪಕ ಎಂದು ಹೆಸರು.
ಇತರ ಬಗೆಗಳ ವ್ಯತಿಕರಣಮಾಪಕಗಳು ಮತ್ತು ಉಪಯೋಗಗಳು
ಬದಲಾಯಿಸಿತೆಳುಪೊರೆ ಮಾದರಿಯ ವ್ಯತಿಕರಣಮಾಪಕ. ಇದೆ ಫ್ಯಾಬ್ರಿ-ಪೆರಾಟ್ ವ್ಯತಿಕರಣಮಾಪಕವೆಂದು ಹೆಸರು. ಇದು ಮೈಕಲ್‌ಸನ್-ವ್ಯತಿಕರಣ ಮಾಪಕಕ್ಕಿಂತಲೂ ಸರಳವಾದದ್ದು. ಪೊರೆಮಂದದ ಎರಡರಷ್ಟು ಮಂದದ ಅಲೆಯುದ್ದ ಇರುವ ಬೆಳಕಿನ ಬಣ್ಣವೊಂದರ ಆಯ್ಕೆ ಈ ಉಪಕರಣದಲ್ಲಿ ನಡೆಯುತ್ತದೆ. ಇದೇ ತತ್ತ್ವವನ್ನು ಮಸೂರಗಳ ಮೇಲೆ ಲೇಪಿಸಿರುವ ಪೊರೆಗಳಲ್ಲಿ ಕೂಡ, ಪ್ರತಿಫಲನವನ್ನು ಕಡಿಮೆ ಮಾಡುವ ಸಲುವಾಗಿ ಬಳಸುವುದಿದೆ.
ಧ್ವನಿವಿಜ್ಞಾನ (ಆಕೌಸ್ಟಿಕ್ಸ್) ಮತ್ತು ರೇಡಿಯೊ ಖಗೋಳವಿಜ್ಞಾನಗಳೆರಡರಲ್ಲೂ ಸಂಜ್ಞೆ ಪತ್ತೆಯಾದ ಆಕರದ ದಿಶೆಯನ್ನು ಕರಾರುವಾಕ್ಕಾಗಿ ನಿಗದಿಮಾಡುವುದಕ್ಕೆ ವ್ಯತಿಕರಣಮಾಪಕಗಳು ಬಲು ಸಹಾಯಕ.[೪]: 1–2 ಮೇಸರ್, ಲೇಸರ್ ಮುಂತಾದ ದೃಗುಪಕರಣಗಳಲ್ಲಿ ಇವುಗಳ ಬಳಕೆ ಇದೆ.
ಜಾಮನ್ ವ್ಯತಿಕರಣಮಾಪಕ, ಟೈಮಾನ್-ಗ್ರೀನ್ ವ್ಯತಿಕರಣಮಾಪಕ ಎಂಬ ಸಾಂಪ್ರದಾಯಿಕ ಉಪಕರಣಗಳು ಇವೆ. ಮ್ಯಾಕ್-ಜ಼ೆಂಡರ್ ವ್ಯತಿಕರಣಮಾಪಕ, ಲೇಸರ್ ವ್ಯತಿಕರಣಮಾಪಕ, ಫೀಜ಼ೋ ಬಹುದೂಲ ವ್ಯತಿಕರಣಮಾಪಕ, ವೈಡ್-ಗ್ಯಾಪ್ ಫೀಜ಼ೋ ವ್ಯತಿಕರಣಮಾಪಕ, ಹೋಲೊಗ್ರಾಮ್ ವ್ಯತಿಕರಣಮಾಪಕ ಮೊದಲಾದ ಆಧುನಿಕ ವ್ಯತಿಕರಣ ಮಾಪಕಗಳೂ ಬಳಕೆಯಲ್ಲಿವೆ.
ಅಲೆಯುದ್ದಗಳ ನಿಖರ ಮಾಪನೆಗೆ, ತೀರ ಚಿಕ್ಕ ಚಿಕ್ಕ ದೂರ ಮತ್ತು ಮಂದಗಳ ಅಳತೆಗೆ, ರೋಹಿತರೇಖೆಗಳ ಅತಿಸೂಕ್ಷ್ಮ ರಚನೆಯ ನಿಖರ ಮಾಪನೆಗೆ ಮತ್ತು ವಕ್ರೀಭವನಾಂಕಗಳ ನಿಖರ ಮಾಪನೆಗೆ ಈ ವ್ಯತಿಕರಣಮಾಪಕಗಳನ್ನು ಬಳಸಿಕೊಳ್ಳುವುದಿದೆ. ಯಮಳ ತಾರೆಗಳು ಬೇರ್ಪಟ್ಟಿರುವುದನ್ನು ಅಳೆಯುವುದಕ್ಕೂ, ಬೃಹದ್ಗಾತ್ರದ ನಕ್ಷತ್ರಗಳ ವ್ಯಾಸಗಳನ್ನು ಅಳೆಯುವುದಕ್ಕೂ ಇಂಥ ಉಪಕರಣಗಳು ಉಪಯುಕ್ತ.
ಉಲ್ಲೇಖಗಳು
ಬದಲಾಯಿಸಿ- ↑ Tyson, Robert "Interferometry ." The Gale Encyclopedia of Science. . Encyclopedia.com. 26 Jul. 2023 <https://www.encyclopedia.com>.
- ↑ Bunch, Bryan H; Hellemans, Alexander (April 2004). The History of Science and Technology. Houghton Mifflin Harcourt. p. 695. ISBN 978-0-618-22123-3.
- ↑ Britannica, The Editors of Encyclopaedia. "Michelson interferometer". Encyclopedia Britannica, 7 Jul. 2023, https://www.britannica.com/technology/Michelson-interferometer. Accessed 21 August 2023.
- ↑ Hariharan, P. (2007). Basics of Interferometry. Elsevier Inc. ISBN 978-0-12-373589-8.