ಒಡೆಯರ್
ಒಡೆಯರ್ ವಂಶ ೧೩೯೯ ರಿಂದ ೧೯೪೭ ರವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ರಾಜವ೦ಶ. ೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯಕ್ಕೆ ಮೈಸೂರು ಸಂಸ್ಥಾನ ಸೇರಿದ ನಂತರ ಒಡೆಯರ್ ವಂಶದ ಆಡಳಿತ ಕೊನೆಗೊಂಡಿತು. ಒಡೆಯರ್ ಎನ್ನುವ ಪದದ ಮೂಲ ಒಡೆಯ. ಒಡೆಯರ್ ದೊರೆಗಳು ಯದುವಂಶ ಅಥವಾ ಯಾದವ ವಂಶಕ್ಕೆ ಸೇರಿದವರು.


ಪ್ರಾಥಮಿಕ ಚರಿತ್ರೆಸಂಪಾದಿಸಿ
ಒಡೆಯರ್ ವಂಶದ ಸ್ಥಾಪಕ ವಿಜಯ, ದ್ವಾರಕೆಯಿಂದ ಮೈಸೂರಿಗೆ ಬಂದನೆಂದು ಹೇಳಲಾಗುತ್ತದೆ. ವಿಜಯ ನಂತರ ದೇವರಾಯ ಎಂಬ ಹೆಸರನ್ನು ಪಡೆದು ೧೩೯೯ ರಿಂದ ೧೪೨೩ ರ ವರೆಗೆ ಮೈಸೂರನ್ನು ಆಳಿದನು. ಮುಂದಿನ ಎರಡು ಶತಮಾನಗಳ ಕಾಲ ಮೈಸೂರು ಸಂಸ್ಥಾನ ಒಡೆಯರ್ ವಂಶದ ಅನೇಕ ಅರಸರಿಂದ ಆಳಲ್ಪಟ್ಟಿತು. ಆದರೆ ಆಗಿನ ಕಾಲದಲ್ಲಿ ಮೈಸೂರು ಸಂಸ್ಥಾನ ಸ್ವತಂತ್ರ ರಾಜ್ಯವಾಗಿರಲಿಲ್ಲ. ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದು ಮೈಸೂರಿನ ಅರಸರು ವಿಜಯನಗರದ ಸಾಮಂತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಿಕ್ಕಮಗಳೂರು ಮೂಲದ ಗಜಪಡೆಯ ಸೇನಾಧಿಪತಿ ಹೂವಾಡಿಗ ಮಲ್ಲಣ್ಣ ನವರು ದೇವರಾಯ ಒಡೆಯರ್ ಅವರಿಗೆ ಸೈನ್ಯ ಬಲವನ್ನು ತುಂಬುವ ಮೂಲಕ ಸಹಾಯಕರಾದರು.ಅದರ ಜೊತೆಗೆ ಅಲಅಮೇಲಮ್ಮನ ಶಾಪವಿತ್ತು.
ವಿಸ್ತರಣೆಸಂಪಾದಿಸಿ
- ವಿಜಯನಗರ ಸಾಮ್ರಾಜ್ಯ ೧೫೬೫ ರಲ್ಲಿ ಪತನಗೊಂಡಿತು. ಆಗ ಉಂಟಾದ ಅವಕಾಶಗಳ ಲಾಭ ಪಡೆದು ಅಂದಿನ ಮೈಸೂರು ಅರಸನಾದ ರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಹಿಗ್ಗಿಸಿ ೧೫೭೮ ರಿಂದ ೧೬೧೭ರ ವರೆಗೆ ಆಡಳಿತ ನಡೆಸಿದನು. ಮೈಸೂರು ಸಂಸ್ಥಾನದ ರಾಜಧಾನಿಯನ್ನು ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತು. ಇದಕ್ಕೆ ಕಾರಣ ಕಾವೇರಿ ನದಿಯ ನಡುವೆ ಇರುವುದರಿಂದ ಶ್ರೀರಂಗಪಟ್ಟಣಕ್ಕೆ ದೊರೆಯವ ನೈಸರ್ಗಿಕ ರಕ್ಷಣೆ.
- ನಂತರದ ದಶಕಗಳಲ್ಲಿನ ಮೈಸೂರಿನ ಇನ್ನೊಬ್ಬ ಪ್ರಸಿದ್ಧ ರಾಜ ರಣಧೀರ ಕಂಠೀರವ ನರಸರಾಜ ಒಡೆಯರ್ (ಆಡಳಿತ: ೧೬೩೮-೧೬೫೯). ಈ ಕಾಲದಲ್ಲಿ ಮೈಸೂರು ಸಂಸ್ಥಾನ ತಮಿಳುನಾಡಿನ ತಿರುಚಿನಾಪಳ್ಳಿಯ ವರೆಗೆ ಹಬ್ಬಿತು. ಮೈಸೂರು ಸಂಸ್ಥಾನ ಚಿಕ್ಕದೇವರಾಜ ಒಡೆಯರ್ (ಆಡಳಿತ: ೧೬೭೩-೧೭೦೪) ಕಾಲದಲ್ಲಿ ಹೊಸ ಎತ್ತರಗಳನ್ನು ಮುಟ್ಟಿತು. ಚಿಕ್ಕದೇವರಾಜ ಒಡೆಯರ್ ಮೈಸೂರಿನ ಆಡಳಿತಕ್ಕಾಗಿ ೧೮ ಚಾವಡಿಗಳನ್ನು ಏರ್ಪಡಿಸಿದನಲ್ಲದೆ ತೆರಿಗೆ ಸಂಗ್ರಹಣಾ ವಿಧಾನಗಳಿಗೆ ಸುಧಾರಣೆಗಳನ್ನು ಪರಿಚಯಿಸಿದನು.
ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ಸಂಪಾದಿಸಿ
ಒಡೆಯರ್ ವಂಶ ೧೮ನೆಯ ಶತಮಾನದಲ್ಲಿ ತಾತ್ಕಾಲಿಕವಾಗಿ ತನ್ನ ಪ್ರಭಾವವನ್ನು ಕಳೆದುಕೊಂಡಿತು. ಹೈದರ್ ಅಲಿ ಮೈಸೂರು ಸೈನ್ಯದ ಸಾಧಾರಣ ಸೈನಿಕನಾಗಿ ಪ್ರಾರಂಭಿಸಿ ಮೇಲಕ್ಕೇರಿ ಸೇನಾನಾಯಕನಾಗಿ ನೇಮಿತನಾದ. ನಂತರ, ಮೈಸೂರಿ ನ ಅರಸರ ಪ್ರಭಾವ ಇಳಿದು ಸರ್ವಾಧಿಕಾರಿಯಾದ. ಹೈದರ್ ಅಲಿ ಸ್ವತಃ ಸಿಂಹಾಸನವನ್ನೇರದಿದ್ದರೂ ರಾಜ್ಯಭಾರದ ಸಂಪೂರ್ಣ ಅಧಿಕಾರ ಆತನ ಕೈಯಲ್ಲಿದ್ದು ಮೈಸೂರು ಮಹಾರಾಜರು ಹೆಸರಿಗೆ ಮಾತ್ರ ಮಹಾರಾಜರಾಗಿ ಉಳಿದರು. ಹೈದರನ ನಂತರ ಅವನ ಮಗ ಟಿಪ್ಪು ಸುಲ್ತಾನ್ ಸ್ವತಃ ಸಿಂಹಾಸನವನ್ನೇರಿ ೧೭೮೨ ರಿಂದ ೧೭೯೯ ರಲ್ಲಿ ಅವನ ಮರಣದವರೆಗೆ ಮೈಸೂರನ್ನು ಆಳಿದ.
ಬ್ರಿಟಿಷ್ ಆಡಳಿತಸಂಪಾದಿಸಿ
- ೧೭೯೯ ರಲ್ಲಿ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಗೆದ್ದ ನಂತರ ಬ್ರಿಟಿಷರು ಒಡೆಯರ್ ವಂಶದ ಅರಸರನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು. ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮತ್ತೆ ಮೈಸೂರಿಗೆ ವರ್ಗಾಯಿಸಲಾಯಿತು. ಪುನಃ ಅಧಿಕಾರಕ್ಕೆ ಮರಳಿದರೂ ಮೈಸೂರು ಮಹಾರಾಜರು ಸ್ವತ೦ತ್ರರಾಗಿರದೆ ಬ್ರಿಟಿಷ್ ಆಡಳಿತಕ್ಕೆ ಒಳಗಾದರು. ೧೯ನೆಯ ಶತಮಾನದ ಉದ್ದಕ್ಕೂ ಮೈಸೂರು ಮಹಾರಾಜರು ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
- ಈ ಪ್ರೋತ್ಸಾಹದ ಪರಿಣಾಮವಾಗಿ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಸರು ಪಡೆದಿದೆ. ಅನೇಕ ಸಂಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸಂಸ್ಥಾನದಿಂದ ಪ್ರೋತ್ಸಾಹ ಪಡೆದು ಬೆಳಕಿಗೆ ಬಂದರು. ಒಡೆಯರ್ ವಂಶದ ಕೊನೆಯ ಮಹಾರಾಜರು ಜಯಚಾಮರಾಜ ಒಡೆಯರ್, ೧೯೪೦ ರಿಂದ ಭಾರತದ ಸ್ವಾತಂತ್ರ್ಯದ ವರೆಗೆ ಇವರ ಆಡಳಿತ ನಡೆಯಿತು.
ಒಡೆಯರ್ ವಂಶದ ಅರಸರುಸಂಪಾದಿಸಿ
- ದೇವ ರಾಯ (1399 - 1423).
- ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (1423 - 1459)
- ತಿಮ್ಮರಾಜ ಒಡೆಯರ್ (1459 - 1479)
- ಹಿರಿಯ ಚಾಮರಾಜ ಒಡೆಯರ್ (1479 - 1513)
- ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (ಇಮ್ಮಡಿ) (1513 - 1553)
- ಬೋಳ ಚಾಮರಾಜ ಒಡೆಯರ್ (1572 - 1576)
- ಬೆಟ್ಟದ ಚಾಮರಾಜ ಒಡೆಯರ್ (ಮುಮ್ಮಡಿ) (1576 - 1578)
- ರಾಜ ಒಡೆಯರ್ (1578 - 1617)
- ಚಾಮರಾಜ ಒಡೆಯರ್ (1617 - 1637).
- ಇಮ್ಮಡಿ ರಾಜ ಒಡೆಯರ್ (1637 - 1638)
- ರಣಧೀರ ಕಂಠೀರವ ನರಸರಾಜ ಒಡೆಯರ್ (1638 - 1659)
- ದೊಡ್ಡ ದೇವರಾಜ ಒಡೆಯರ್ (1659 - 1673)
- ಚಿಕ್ಕ ದೇವರಾಜ ಒಡೆಯರ್ (1673 - 1704)
- ಕಂಠೀರವ ನರಸರಾಜ ಒಡೆಯರ್ (1704 - 1714)
- ದೊಡ್ಡ ಕೃಷ್ನರಾಜ ಒಡೆಯರ್ (1732 - 1734)
- ಇಮ್ಮಡಿ ಕೃಷ್ಣರಾಜ ಒಡೆಯರ್ (1734 - 1766)
- ಬೆಟ್ಟದ ಚಾಮರಾಜ ಒಡೆಯರ್ (1770 - 1776)
- ಖಾಸಾ ಚಾಮರಾಜ ಒಡೆಯರ್ (1766 - 1796)
- ಮುಮ್ಮಡಿ ಕೃಷ್ಣರಾಜ ಒಡೆಯರು (1799 - 1868)
- ಮುಮ್ಮಡಿ ಚಾಮರಾಜ ಒಡೆಯರ್ (1868 - 1895)
- ನಾಲ್ವಡಿ ಕೃಷ್ಣರಾಜ ಒಡೆಯರು (1895 - 1940)
- ಜಯಚಾಮರಾಜ ಒಡೆಯರ್ (1940 - 1947)
ದತ್ತು ದೊರೆಗಳುಸಂಪಾದಿಸಿ
ಒಡೆಯರ್ ರಾಜಮನೆತನವು ಹಲವು ಬಾರಿ ದತ್ತು ಮಕ್ಕಳನ್ನು ಸ್ವೀಕರಿಸಿದೆ. ಅದರಲ್ಲಿ ನಾಲ್ಕು ಮಂದಿ ಯದುವಂಶದವರೇ ಆಗಿದ್ದು ಮೂರು ಬಾರಿ ಹೊರಗಿನವರಾಗಿದ್ದಾರೆ.
- ರಣಧೀರ ಕಂಠೀರವ -1617
- ಇಮ್ಮಡಿ ಚಿಕ್ಕದೇವರಾಜ ಒಡೆಯರ್ - 1638
- ದೊಡ್ಡಕೃಷ್ಣರಾಜ ಒಡೆಯರ್ -1714
- ಮುಮ್ಮಡಿ ಕೃಷ್ಣರಾಜ ಒಡೆಯರ್ (ರಾಣಿ ಲಕ್ಷ್ಮಮ್ಮಣ್ಣಿ ಆಡಳಿತ, ಬೆಟ್ಟದಕೋಟೆ)-1776
- ಹತ್ತನೇ ಚಾಮರಾಜ ಒಡೆಯರ್ -1868
- ಜಯಚಾಮರಾಜ ಒಡೆಯರ್ -1940
- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್-2015
ಬಾಹ್ಯ ಸಂಪರ್ಕಗಳುಸಂಪಾದಿಸಿ
ವಿಕಿಮೀಡಿಯ ಕಣಜದಲ್ಲಿ Wadiyar dynasty ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- The Wodeyars of Mysore (1578 A.D. to 1947 A.D.)
- History of Mysore Wodeyars
- Mysore - Imperial City of Karnataka
- Genealogy of the Wodeyar Dynasty
- Curse on Wodeyars: Documenting a Legend
- Curse on Wodeyars: ORAL TRADITIONS -Legend and history
- Coins of the Wodeyars
- Sri Kanteerava Narasimharaja Wadiyar
- The Wodeyar / Wadiyar Dynasty (Official Website of Mysore Palace)