ವೇಶ್ಯಾವೃತ್ತಿ
ವೇಶ್ಯಾವೃತ್ತಿ ಎಂದರೆ ಹಣಕಾಸಿನ ಪ್ರತಿಫಲಕ್ಕಾಗಿ ಲೈಂಗಿಕ ಚಟುವಟಿಕೆ ಯಲ್ಲಿ ತೊಡಗುವ ಕ್ರಿಯೆ (ಪ್ರಾಸ್ಟಿಟ್ಯೂಶನ್). ಪ್ರಪಂಚಾದ್ಯಂತ ಇದು ರೂಢಿಯಲ್ಲಿದೆ. ವಿಶೇಷವಾಗಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಇದು ಕಂಡುಬರುತ್ತದೆ. ಈ ವೃತ್ತಿಯಲ್ಲಿ ಮಹಿಳೆಯರು ತೊಡಗಿಸಿ ಕೊಂಡಿದ್ದರೂ ಪುರುಷರ ಪ್ರಮಾಣವೂ ಇದೆ. ಮಕ್ಕಳ ವೇಶ್ಯಾ ವಾಟಿಕೆಯೂ ಇದ್ದು ಇದನ್ನು ಬಾಲ ವೇಶ್ಯಾವಾಟಿಕೆ ಅಥವಾ ಶಿಶುಕಾಮ (ಪೀಡಫಿಲಿಯ) ಎನ್ನುತ್ತಾರೆ.
ವೇಶ್ಯೆಯರು ಸ್ವತಃ ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು, ತಲೆಹಿಡುಕಿ (ಕುಂಟಣಿ) ಅಥವಾ ತಲೆಹಿಡುಕರಿಗಾಗಿ ಕೆಲಸಮಾಡ ಬಹುದು. ಕೆಲವು ದೇಶಗಳಲ್ಲಿ ವ್ಯವಸ್ಥಿತ ವೇಶ್ಯಾಗೃಹಗಳಿರುತ್ತವೆ. ಕರೆ ಸೇವಾಕೇಂದ್ರ (ಕಾಲ್ಸೆಂಟರ್) ಅಥವಾ ವೇಶ್ಯಾಗೃಹಗಳ ಹೆಸರಿನಲ್ಲಿ (ಬ್ರಾತೆಲ್) ಇವು ಕಾರ್ಯನಿರ್ವಹಿಸುತ್ತವೆ. ಇವು ಗ್ರಾಹಕರನ್ನು ಒದಗಿಸುವ, ದರ ನಿಗದಿಗೊಳಿಸುವುದರ ಜೊತೆಗೆ ಅಪಾಯಕಾರಿ ಗ್ರಾಹಕರಿಂದ ವೇಶ್ಯೆಯರನ್ನು ರಕ್ಷಿಸುವ ಕೆಲಸವನ್ನೂ ಮಾಡುತ್ತವೆ.
ಬಹುಪಾಲು ಪಾಶ್ಚಾತ್ಯ ದೇಶಗಳಲ್ಲಿ ವೇಶ್ಯಾವಾಟಿಕೆ ಮಾದಕದ್ರವ್ಯ ವ್ಯವಹಾರಗಳೊಂದಿಗೆ ಸಂಬಂಧ ಪಡೆದಿದೆ. ಅಮೆರಿಕದಲ್ಲಿ ಲೈಂಗಿಕ ಸೇವೆಯನ್ನು ಮಾದಕದ್ರವ್ಯಗಳೊಂದಿಗೆ ಒದಗಿಸಲಾಗುತ್ತದೆ. ಎಳವೆಯಲ್ಲಿ ಭಾವನಾತ್ಮಕ, ದೈಹಿಕ ಅಥವಾ ಲೈಂಗಿಕ ದುರ್ಬಳಕೆಗೆ ಒಳಗಾದ ಜನರು ಇಂಥ ಚಟಗಳಿಗೆ ಒಳಗಾಗುತ್ತಾರೆಂದು ಮನೋ ವಿಜ್ಞಾನಿಗಳು ಹಾಗೂ ಸಮಾಜಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನವೇ ವೇಶ್ಯಾವಾಟಿಕೆಗೆ ಮುಖ್ಯ ಕಾರಣವೆಂದೂ ಹೇಳಲಾಗಿದೆ.
ಕೆಲವು ರಾಷ್ಟ್ರಗಳಲ್ಲಿ ಇದನ್ನು ಕಾನೂನುಬದ್ಧ ವ್ಯವಹಾರವೆಂದು ಪರಿಗಣಿಸಲಾಗಿದೆ. ಅಮೆರಿಕದ ನೇವಡದಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರವಲ್ಲ. ಇದಕ್ಕಾಗಿ ಪ್ರತಿ ಕೌಂಟಿಯಲ್ಲೂ ಅಧಿಕೃತ ವೇಶ್ಯಾಗೃಹ ಹೊಂದುವ ಅವಕಾಶವಿದೆ. ಕೆನಡದಲ್ಲಿ ಕರೆ ಸೇವಾಕೇಂದ್ರಗಳು (ಕಾಲ್ಸೆಂಟರ್) ಕಾನೂನುಬದ್ಧವಾಗಿವೆಯಾದರೂ ವೇಶ್ಯಾಗೃಹ ನಡೆಸುವುದು ಅಪರಾಧವಾಗಿದೆಯಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಹಕರನ್ನು ಸೆಳೆಯುವುದೂ ಅಪರಾಧವಾಗಿದೆ. ದಕ್ಷಿಣ ಅಮೆರಿಕ ಹಾಗೂ ಏಷ್ಯದ ಕೆಲವು ಭಾಗಗಳಲ್ಲಿ ಇದು ಕಾನೂನುಬದ್ಧ ವ್ಯವಹಾರ ವಾಗಿದೆ. ಯುರೋಪಿನ ಬಹಳಷ್ಟು ದೇಶಗಳು ವೇಶ್ಯಾವಾಟಿಕೆಯನ್ನು ಪ್ರಾಯೋಗಿಕವಾಗಿ ಕಾನೂನುಬದ್ಧಗೊಳಿಸಿ ಪರಿಣಾಮಗಳನ್ನು ಪರೀಕ್ಷಿಸಿವೆ.
ವೇಶ್ಯಾವಾಟಿಕೆಯನ್ನು ಸಕ್ರಮಗೊಳಿಸುವ ಬಗ್ಗೆ ಜನರಲ್ಲಿ ಒಮ್ಮತವಿಲ್ಲ. ಕೆಲವರು ಇದನ್ನು ಧಾರ್ಮಿಕ ಹಾಗೂ ನೈತಿಕ ದೃಷ್ಟಿಯಲ್ಲಿ ಅಲ್ಲಗಳೆದರೆ, ಕೆಲವರು ಲೈಂಗಿಕ ರೋಗಹರಡುವ ಭೀತಿಯಿಂದ ಅಲ್ಲಗಳೆಯುತ್ತಾರೆ. ಲೈಂಗಿಕ ರೋಗನಿಯಂತ್ರಣ ಹಾಗೂ ವೇಶ್ಯೆಯರ ನಿರಂತರ ಪರೀಕ್ಷೆಗೆ ಅನುಕೂಲವಾಗುವುದರಿಂದ ಇದು ಸಕ್ರಮಗೊಳ್ಳಬೇಕೆಂದು ಇನ್ನು ಕೆಲವರು ವಾದಿಸುತ್ತಾರೆ.
ವೇಶ್ಯಾವೃತ್ತಿ ಮಾನವ ಸಮಾಜದ ಆದಿ ಚರಿತ್ರೆಯ ಕಾಲದಿಂದಲೂ ಕಂಡುಬರುತ್ತದೆ. ಇದಕ್ಕೆ ಕಾಲ-ದೇಶಗಳ ಮಿತಿ ಇಲ್ಲ. ಪ್ರಾಚೀನ ಅಸ್ಸೀರಿಯ, ಈಜಿಪ್ಟ್, ರೋಮ್, ಗ್ರೀಸ್, ಚೀನ ಮತ್ತು ಭಾರತ ದೇಶಗಳಲ್ಲಿ ಈ ಬಗ್ಗೆ ಸಾಕಷ್ಟು ಪುರಾವೆಗಳು ಲಭಿಸುತ್ತವೆ. ವೇಶ್ಯೆಯರಿಗೆ ಪ್ರಾಚೀನ ಕಾಲದಲ್ಲಿ ಉನ್ನತ ಸ್ಥಾನಮಾನಗಳೂ ಲಭಿಸುತ್ತಿದ್ದವು.
ಆಫ್ರಿಕದ ಸ್ಲೇವ್ ಕರಾವಳಿಯ ಯೂ ಭಾಷೆಯ ಜನರಲ್ಲಿ ಹತ್ತರಿಂದ ಹನ್ನೆರಡು ವರ್ಷದ ಹುಡುಗಿಯರಿಗೆ ತರಬೇತಿ ನೀಡಿ ದೇವಾಲಯಗಳಲ್ಲಿರಿಸುತ್ತಿದ್ದರು. ಇವರು ಪೂಜಾರಿ ಮತ್ತು ಧರ್ಮಗುರು ವಿನೊಂದಿಗೆ ಸಂಬಂಧ ಇಟ್ಟುಕೊಳ್ಳುತ್ತಿದ್ದರು. ಸಿರಿಯದ ದೇವಾಲಯ ಗಳಲ್ಲಿ ವೇಶ್ಯಾವೃತ್ತಿ ಒಂದು ಸಂಪ್ರದಾಯವಾಗಿತ್ತು; ಈ ವೃತ್ತಿಯಲ್ಲಿ ಮೇಟ್ರನ್‍ಗಳಿರುತ್ತಿದ್ದರು. ಬ್ಯಾಬಿಲಾನ್ ಮತ್ತು ಸಿರಿಯದ ವೇಶ್ಯೆಯರು ಉಡುಗೊರೆಗಳನ್ನು ಸ್ವೀಕರಿಸುತ್ತಿದ್ದರು. ಈ ಪದ್ಧತಿ ಸೈಪ್ರಸ್, ಫಿನಿಷಿಯ, ಗ್ರೀಸ್, ಮೆಸೊಪೊಟೇಮಿಯ, ಈಜಿಪ್ಟ್, ಅರೇಬಿಯ, ಆಗ್ನೇಯ ಏಷ್ಯ ಮುಂತಾದೆಡೆ ಪ್ರಚುರವಾಗಿತ್ತು.
ಭಾರತದಲ್ಲಿ ಈ ಪದ್ಧತಿ ಸಾಮಾನ್ಯವಾಗಿತ್ತು. ಸಿಂಧೂ ಬಯಲಿನ ನಾಗರಿಕತೆಯ ಮಾತೃದೇವತಾ ಗುಡಿಯಲ್ಲಿ ಸ್ತ್ರೀ-ಪುರುಷ ಗುಲಾಮರಿದ್ದ ರೆಂದೂ ಇದು ಅಂದಿನ ಸಮಾಜದಲ್ಲಿ ಪ್ರತಿಷ್ಠೆಯ ಮಾತಾಗಿತ್ತೆಂದೂ ತಿಳಿದುಬರುತ್ತದೆ. ಮೊಹೆಂಜೊದಾರೊ ಉತ್ಖನನದಲ್ಲಿ ದೊರೆತ ಸ್ತ್ರೀ ಪ್ರತಿಮೆಯೊಂದರಲ್ಲಿ ನರ್ತಕಿಯ ಲಕ್ಷಣಗಳಿವೆ. ಈ ಪ್ರತಿಮೆ ನಗ್ನವಾಗಿದ್ದು, ಒಂದು ತೋಳಿನ ತುದಿಯವರೆಗೂ ಬಳೆಗಳಿವೆ, ಕುತ್ತಿಗೆಯಲ್ಲಿ ಮಣಿಸರವಿದೆ. ತಲೆಗೂದಲು ಸಡಿಲವಾಗಿ ಇಳಿಬಿದ್ದಿದೆ. ಕಣ್ಣುಮುಚ್ಚಿ ನರ್ತಿಸುತ್ತಿರುವ ಆಕೆಯಲ್ಲಿ ಭಕ್ತಿಭಾವ ಹೊಮ್ಮಿದೆ. ಈಕೆ ದೇವದಾಸಿಯೇ ಇರಬೇಕೆಂಬ ವಾದವಿದೆ.
ಭಾರತದಲ್ಲಿ ದೇವದಾಸಿ ಪದ್ಧತಿಯ ಪ್ರಾಚೀನತೆಯ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ಜಾತಕ ಸಾಹಿತ್ಯದಲ್ಲಿ ಈ ಸಂಪ್ರದಾಯದ ಉಲ್ಲೇಖವಿಲ್ಲ. ಗ್ರೀಕ್ ಪ್ರವಾಸಿ ಲೇಖಕರು ಇದನ್ನು ಹೆಸರಿಸಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗಣಿಕೆಯರ ಹೆಸರು ಪ್ರಸ್ತಾಪವಾಗಿದ್ದರೂ ಅಲ್ಲಿ ದೇವದಾಸಿಯರನ್ನು ಹೇಳಿಲ್ಲ. ಈ ಸಂಪ್ರದಾಯ ಪ್ರಾಯಃ 3ನೆಯ ಶತಮಾನದಲ್ಲಿ ಆರಂಭವಾಗಿರಬಹುದು. ಉಜ್ಜಯಿನಿಯ ಮಹಾಕಾಲ ದೇವಾಲಯದಲ್ಲಿ ನರ್ತಕಿಯರಿದ್ದ ಸಂಗತಿಯನ್ನು ಮೇಘದೂತ ಕಾವ್ಯದಲ್ಲಿ ಕಾಳಿದಾಸ ಹೇಳಿದ್ದಾನೆ. ದೇವಪೂಜೆಯ ಸಂದರ್ಭದಲ್ಲಿ ಸಂಗೀತಕ್ಕಾಗಿ ಸ್ತ್ರೀಯರನ್ನು ಸೇವೆಗಾಗಿ ನೇಮಿಸಿಕೊಳ್ಳ ಬೇಕೆಂದು ಹಲವು ಪುರಾಣಗಳು ಹೇಳುತ್ತವೆ. ಈ ಸ್ತ್ರೀಯರು ಸಾಮಾನ್ಯವಾಗಿ ದೇವದಾಸಿಯರು ಅಥವಾ ವೇಶ್ಯೆಯರು. ಸೂರ್ಯಲೋಕ ಪ್ರಾಪ್ತವಾಗಬೇಕಾದರೆ ವೇಶ್ಯೆಯರನ್ನು ಸೂರ್ಯದೇವಾಲಯಕ್ಕೆ ದಾನ ಮಾಡಬೇಕೆಂದು ಭವಿಷ್ಯಪುರಾಣ ಹೇಳುತ್ತದೆ. ಈ ಸಂಪ್ರದಾಯ 6ನೆಯ ಶತಮಾನದಲ್ಲಿ ಹೆಚ್ಚಾಗಿ ಹರಡಿರಬೇಕು. ಯುವಾನ್ ಚಾಂಗ್ (ನೋಡಿ- ಯುವಾನ್-ಚಾಂಗ್) ಮುಲ್ತಾನಿನ ಸೂರ್ಯ ದೇವಾಲಯದಲ್ಲಿ ಗಾಯಕಿಯರನ್ನು ನೋಡಿದ್ದಾಗಿ ಹೇಳುತ್ತಾನೆ. ಕಾಶ್ಮೀರ ದಲ್ಲಿ 7ನೆಯ ಶತಮಾನದಲ್ಲಿ ಈ ಸಂಪ್ರದಾಯ ಪ್ರಚಲಿತವಾಗಿತ್ತೆಂದು ಕಲ್ಹಣನ ರಾಜತರಂಗಿಣಿಯಿಂದ ತಿಳಿದುಬರುತ್ತದೆ. ಗುಜರಾತಿನ ಸೋಮನಾಥ ದೇವಾಲಯದಲ್ಲಿ 500 ನರ್ತಕಿಯರಿದ್ದುದಾಗಿ ತಿಳಿದು ಬರುತ್ತದೆ.
ಪ್ರಾಚೀನ ಕೃತಿಗಳಲ್ಲಿ ಈ ಏಳು ಬಗೆಯ ದೇವದಾಸಿಯರ ಉಲ್ಲೇಖ ವಿದೆ: ದತ್ತಾ(ದೇವಾಲಯಕ್ಕೆ ತನ್ನನ್ನು ಅರ್ಪಿಸಿಕೊಳ್ಳುವವಳು), ವಿಕ್ರೀತಾ (ದೇವಾಲಯದ ಸೇವಾ ಕಾರ್ಯಕ್ಕೆ ತನ್ನನ್ನು ಮಾರಿಕೊಂಡವಳು), ಭೃತ್ಯಾ(ತನ್ನ ಕುಟುಂಬದವರ ಪೋಷಣೆಯ ಸಲುವಾಗಿ ದೇವದಾಸಿ ಯಾದವಳು), ಭಕ್ತಾ(ಭಕ್ತಿ ಭಾವಗಳಿಂದ ದೇವದಾಸಿಯಾದವಳು), ಹೃತಾ (ಅಪಹೃತಳಾಗಿ ಬಂದವಳು; ದೇವಾಲಯಕ್ಕೆ ಉಡುಗೊರೆಯಾಗಿ ಬಂದವಳು), ಅಲಂಕಾರಾ(ದೇವಾಲಯದ ಅಲಂಕರಣ ಕಾರ್ಯಕ್ಕೆ ರಾಜ ಅಥವಾ ಮಂತ್ರಿಯಿಂದ ನಿಯೋಜಿತಳಾದವಳು), ರುದ್ರಗಣಿಕಾ ಅಥವಾ ಗೋಪಿಕಾ (ನಿಯಮಿತ ವೃತ್ತಿವೇತನ ಪಡೆದು ನೃತ್ಯ, ಗಾಯನ ಮಾಡುವವಳು).
ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗಗ ಳೆಂಬ ಮಾತುಗಳಿವೆ. ವಿಗ್ರಹಕ್ಕೆ ಸಲ್ಲುವ ಸ್ನಾನ, ಗಂಧಲೇಪನ, ಧೂಪ, ದೀಪ, ಪುಷ್ಪ ಮುಂತಾದುವು ಅಂಗಭೋಗಗಳು. ಗರ್ಭಗೃಹದ ಮುಂದಿನ ರಂಗಸ್ಥಳದಲ್ಲಿ ನಡೆಯುತ್ತಿದ್ದ ಗೀತ-ನೃತ್ಯಗಳು ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಅಗತ್ಯಗಳಾಗಿದ್ದರು.
ವೇಶ್ಯೆಯರನ್ನು ದೇವದಾಸಿ, ಸೂಳೆ, ಮಂಗಳಮುಖಿ, ನಿತ್ಯ ಸುಮಂಗಲಿ, ಬಸವಿ, ನಾಯಕಸಾನಿ, ವಾರಾಂಗನೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇಂಗ್ಲಿಷಿನಲ್ಲಿ ಕೋರ್ಟೆಸಾನ್ ಎನ್ನುತ್ತಾರೆ. ಇದು ಫ್ರೆಂಚ್ ಪದ. ತಂಜಾವೂರಿನ ಬೃಹದೀಶ್ವರ ದೇವಸ್ಥಾನದ ಚೋಳರಾಜನ 1004ರ ಶಾಸನವೊಂದರಲ್ಲಿ ದೇವಸ್ಥಾನದ 400 ದೇವದಾಸಿಯರಿಗೆ ದೇವಾಲಯದ ಸುತ್ತ ನಾಲ್ಕು ಬೀದಿಗಳಲ್ಲಿ ಉಚಿತ ವಸತಿ, ತೆರಿಗೆ ವಿನಾಯ್ತಿಯುಳ್ಳ ಜಮೀನನ್ನು ಉಂಬಳಿಯಾಗಿ ನೀಡಿದ ದಾಖಲೆ ಇದೆ. ಇಂದಿಗೂ ದಕ್ಷಿಣ ಆಫ್ರಿಕದ ಕೆಲವು ಬುಡಕಟ್ಟುಗಳಲ್ಲಿ, ದಕ್ಷಿಣ ಭಾರತದ ಹಲವು ಪ್ರಾಂತಗಳಲ್ಲಿ ಈ ಪದ್ಧತಿ ವಿರಳವಾಗಿ ಕಂಡುಬರುತ್ತದೆ. ಒರಿಸ್ಸದ ಪುರಿ ಜಗನ್ನಾಥ ಮಂದಿರದಲ್ಲಿ ಇದು ವಿಶೇಷವಾಗಿದೆ ಎಂದು ಫ್ರೆಂಚ್ ಯಾತ್ರಿಕ ಬರ್ವಿಯರ್ ದಾಖಲಿಸುತ್ತಾನೆ. ಆಂಧ್ರಪ್ರದೇಶದ ತೆಲಂಗಾಣ ಪ್ರದೇಶದಲ್ಲಿ ದೇವದಾಸಿಯಾಗಲಿರುವ ಹುಡುಗಿಯನ್ನು ಬಸವಿ ಎನ್ನುತ್ತಿದ್ದರು. ಕರ್ನಾಟಕದ ಮಲೆಯ ಮಹದೇಶ್ವರ (ನೋಡಿ) ದೇವಸ್ಥಾನದಲ್ಲಿ ಗುಡ್ಡಿ ಹೆಸರಿನ ದೇವದಾಸಿಯರಿದ್ದಾರೆ. ಇವರನ್ನು ದೇವರ ಗುಡ್ಡಿ ಎಂದೂ ಕರೆಯುತ್ತಾರೆ. ತಮಿಳುನಾಡಿನ ರಾಮೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಪೂಜಾರಿಯ ಜೊತೆಗೆ ಒಬ್ಬ ದೇವದಾಸಿ ಬ್ರಾಹ್ಮಣಕನ್ಯೆಯಂತೆ ವೇಷಧರಿಸಿ, ರುದ್ರಾಕ್ಷಿ ಹಾಕಿಕೊಂಡು ಬರುವ ಪದ್ಧತಿ ಇದೆ. ಈಕೆಯನ್ನು ತಮಿಳಿನಲ್ಲಿ ಮುರೈಕಾರೀ ಎನ್ನುತ್ತಾರೆ. ಗೋವದ ಮಂಗೇಶ ದೇವಾಲಯದಲ್ಲಿ ದೇವದಾಸಿಯರಿದ್ದು ಸೋಮವಾ ರದ ಪೂಜೆಯ ಸಂದರ್ಭದಲ್ಲಿ, ಹಬ್ಬಗಳಲ್ಲಿ ಅವರು ಗಾಯನ-ನರ್ತನ ಮಾಡುತ್ತಾರೆ. ಇಲ್ಲಿನ ಮಲ್ಯ ಊರಿನ ವಿಷ್ಣು ದೇವಾಲಯದ ದೇವದಾಸಿಯರನ್ನು ಭಾವಿನ್ ಎನ್ನುತ್ತಾರೆ.
ಕರ್ನಾಟಕದ ಬೆಳಗಾಂವಿ ಬಳಿಯ ಸವದತ್ತಿ ಎಲ್ಲಮ್ಮ ದೇವಾಲಯಕ್ಕೆ ಕನ್ಯೆಯರನ್ನು ದೇವದಾಸಿಯಾಗಿ ಬಿಡುವ ಪದ್ಧತಿ ರೂಢಿಯಲ್ಲಿದೆ. ಇವರಿಗೆ ಜೋಗತಿಯರೆಂದು ಹೆಸರು. ಇಲ್ಲಿ ನಪುಂಸಕರೂ ದಾಸರಾ ಗುತ್ತಾರೆ. ಇವರಿಗೆ ಗಂಡು ಜೋಗ್ಯಾಗಳೆಂದು ಹೆಸರು. ಕೆಳವರ್ಗದ ಜನ ಜೋಗತಿಯರಾದರೆ ಜೋಗ್ಯಾಗಳು ಯಾರಾದರೂ ಆಗಬಹುದು. ದಾಸರಾಟ ಒಂದು ಜನಪದ ಕಲೆಯಾಗಿದ್ದು ಇಲ್ಲಿ ಕಾಣಿಸಿಕೊಳ್ಳುವ ದಾಸಿ ದೇವದಾಸಿಯಾಗಿರುತ್ತಾಳೆ. ಈಕೆಯ ಮಕ್ಕಳು ದಾಸರಾಟವನ್ನು ಮುಂದುವರಿಸುತ್ತಾರೆ. * ಧಾರ್ಮಿಕ ಪರಿವೇಶವುಳ್ಳ ದೇವದಾಸಿ ಪರಿಕಲ್ಪನೆ ಧಾರ್ಮಿಕ ಗುರು ಹಾಗೂ ಧನಿಕರ ಕಾಮಲಾಲಸೆಯ ಪ್ರತೀಕವಾಗಿ ಕಂಡುಬರುತ್ತದೆ. ಭಾರತೀಯ ಸಂಗೀತ-ನೃತ್ಯ ಪರಂಪರೆಯನ್ನು ಉಳಿಸಿ-ಬೆಳೆಸಿದವರು ದೇವದಾಸಿಯರು. ಆದರೆ ಕ್ರಮೇಣ ಈ ಪದ್ಧತಿಯ ನಿಜವಾದ ಉದ್ದೇಶ ನಾಶವಾಗಿ ಹೀನಾರ್ಥ ಪ್ರಾಪ್ತವಾಯಿತು. ವೃತ್ತಿಗೌರವವಿಲ್ಲದ ಈ ಪದ್ಧತಿಯನ್ನು ವೇಶ್ಯಾವಾಟಿಕೆ ಎಂದು ತಿಳಿಯಲಾಗಿದೆ. ಬ್ರಿಟಿಷರ ಅವಧಿಯಲ್ಲಿ ಇದನ್ನು ನಿಷೇಧಿಸುವ ಕಾಯಿದೆಗಳು ಜಾರಿಯಾದುವು. ಮುಂಬಯಿ (1923), ಉತ್ತರ ಪ್ರದೇಶ ಮತ್ತು ಬಂಗಾಲ (1933), ಪಂಜಾಬ್ (1935), ಬಿಹಾರ (1948) ಹಾಗೂ ಮೈಸೂರು ರಾಜ್ಯ (1956) ಗಳಲ್ಲಿ ಇದು ವಿವಿಧ ಹಂತಗಳಲ್ಲಿ ಜಾರಿಗೆ ಬಂದಿತು. ಭಾರತ ಸರ್ಕಾರ ಸ್ತ್ರೀ ಮತ್ತು ಯುವತಿಯರ ಅನೈತಿಕ ವ್ಯವಹಾರ ನಿಷೇಧ ಕಾಯಿದೆಯನ್ನು 1956ರಲ್ಲಿ ದೇಶಾದ್ಯಂತ ಏಕರೂಪವಾಗಿ ಜಾರಿಗೆ ತಂದಿದೆ.
ಆಧುನಿಕ ಸಮಾಜದಲ್ಲಿ ವೇಶ್ಯೆ ಅಥವಾ ಸೂಳೆ ಎಂಬ ಪದದ ಬಗೆಗೂ ಆಕ್ಷೇಪಗಳಿದ್ದು ಇವರನ್ನು ಲೈಂಗಿಕ ಕಾರ್ಯಕರ್ತರು (ಸೆಕ್ಸ್ ವರ್ಕರ್ಸ್) ಎಂದು ಕರೆಯಲಾಗುತ್ತದೆ. ಇವರಲ್ಲಿ ಸಿಫಿಲಿಸ್, ಗೊನೆರಿಯ ಗಳಂಥ ಲೈಂಗಿಕ ರೋಗಗಳ ಬಗ್ಗೆ, ಏಡ್ಸ್‍ನಂಥ ಮಾರಕ ಕಾಯಿಲೆಗಳ ಬಗ್ಗೆ ಸರ್ಕಾರ ಹಾಗೂ ಸರ್ಕಾರೇತರ ಸಾಮಾಜಿಕ ಸಂಘಟನೆಗಳು ಜಾಗೃತಿಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಅನೇಕ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ವೇಶ್ಯಾವಾಟಿಕೆ ತೀವ್ರವಾಗುತ್ತಿದೆ. ಭಾರತ, ಸಿಂಗಪುರ, ಥೈಲೆಂಡ್, ನೇಪಾಲ, ಬ್ಯಾಂಕಾಕ್ ಹಾಗೂ ಮಲೇಷ್ಯಗಳಲ್ಲಿ ಇದು ವ್ಯಾಪಕ ವಾಗುತ್ತಿದೆ ಎನ್ನಲಾಗಿದೆ. ಸರ್ಕಾರಗಳೂ ಇಂಥ ಚಟುವಟಿಕೆಗಳನ್ನು ತಡೆಗಟ್ಟಲು ಜನರಲ್ಲಿ ಜಾಗೃತಿಯನ್ನುಂಟುಮಾಡುತ್ತಿವೆ.