ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದ ಧರ್ಮಾಧಿಕಾರಿ
(ವೀರೇ೦ದ್ರ ಹೆಗ್ಗಡೆ ಇಂದ ಪುನರ್ನಿರ್ದೇಶಿತ)

ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಕ್ಷೇತ್ರದಲ್ಲಿರುವ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು. ಸಮಾಜ ಸೇವೆಗೆ ಇವರು ಪ್ರಸಿದ್ಧರಾಗಿದ್ದಾರೆ.

ಡಾ. ವೀರೇಂದ್ರ ಹೆಗ್ಗಡೆ
Bornನವೆಂಬರ್ ೨೫, ೧೯೪೮
Nationalityಭಾರತೀಯ
Other namesಕಾವಂದರು, ರಾಜರ್ಷಿ
Occupationಧರ್ಮಾಧಿಕಾರಿ
Known forಸಮಾಜಸೇವೆ
Titleಡಾ.
Spouseಹೇಮಾವತಿ
Childrenಶ್ರದ್ಧಾ ಅಮಿತ್
Parent(s)ರತ್ನವರ್ಮ ಹೆಗ್ಗಡೆ, ರತ್ನಮ್ಮ ಹೆಗ್ಗಡೆ
Relativesಡಿ ಹರ್ಷೇಂದ್ರ, ಡಿ ಸುರೇಂದ್ರ, ಡಿ ರಾಜೇಂದ್ರ
ವೀರೇಂದ್ರ ಹೆಗ್ಗಡೆ

ವಿದ್ಯಾಭ್ಯಾಸ

ಬದಲಾಯಿಸಿ
  • ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಉಜಿರೆಯಲ್ಲಿ ಪ್ರೌಢ ಶಿಕ್ಷಣ. ಸಿದ್ಧವನ ಗುರುಕುಲದಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ, ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ. ೧೯೬೩ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆ. ಬೆಂಗಳೂರಿನ ಸೈಂಟ್ ಜೋಸೆಫ್ ಜೂನಿಯರ್ ಕಾಲೇಜಿನಲ್ಲಿ ಕಾಮರ್ಸ್ ಶಿಕ್ಷಣ. ಕಾಮರ್ಸ್ ಬೇಡ ಅನ್ನಿಸಿ, ಪಿಯುಸಿ ಬಳಿಕ ಕಲಾ ವಿಭಾಗವನ್ನು ಅವರು ಪ್ರವೇಶಿಸಿದರು. ನಂತರ ಬಿ.ಎ ಪದವೀಧರರಾದರು.
  • ಕಾನೂನು ಪದವಿ ಪಡೆವ ಅವರ ಆಸೆಗೆ ಅರ್ಧಕ್ಕೆ ತೆರೆ ಬಿತ್ತು. ಅವರ ಬದುಕಿನಲ್ಲಿ ಅದು ಮಹತ್ವದ ತಿರುವು. ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರು ಅನಾರೋಗ್ಯಕ್ಕೆ ಗುರಿಯಾದರು. ಅವರ ಆರೈಕೆಯಲ್ಲಿ ವೀರೇಂದ್ರ ಹೆಗ್ಗಡೆ ತೊಡಗಿಸಿಕೊಂಡರು. ೧೯೬೮ರಲ್ಲಿ ರತ್ನವರ್ಮ ಹೆಗ್ಗಡೆ ನಿಧನರಾದರು. ಆಮೇಲೆ ಇದೇ ವರ್ಷ ಅ.೨೪ರಂದು ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಯಾಗಿ ನೇಮಕಗೊಂಡರು. ತಮ್ಮ ೨೦ನೇ ವಯಸ್ಸಿನಲ್ಲಿಯೇ ಅವರು ಧರ್ಮಸ್ಥಳ ಶ್ರೀಕ್ಷೇತ್ರದ ೨೧ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು.

ವೀರೇಂದ್ರ ಹೆಗ್ಗಡೆಯವರು ನವೆಂಬರ್ ೨೫, ೧೯೪೮ ರಂದು ಜನಿಸಿದರು. ಅವರು ೨೦ ವರ್ಷದವರಿರುವಾಗಲೆ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು. ಸ್ವತಃ ಜೈನರಾಗಿ ಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯ ನಿರ್ವಹಿಸುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎಂದು ಹೆಸರು ಬರುವಂತೆ ಮಾಡಿದ್ದಾರೆ.ಧರ್ಮಸ್ಥಳದ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಇವರೇ. ಧರ್ಮಸ್ಥಳದಲ್ಲಿ ಪ್ರತಿ ದಿನ ಆಗಮಿಸುವವರೆಲ್ಲರಿಗೂ ಉಚಿತ ಊಟದ ವ್ಯವಸ್ಥೆಯುಂಟು. ಪ್ರತಿ ದಿನವೂ ಸುಮಾರು ೩೦೦೦ ಜನರ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪರಿಹಾರ ಕಾರ್ಯಕ್ರಮಗಳು

ಬದಲಾಯಿಸಿ
  • ನಂತರ ಧರ್ಮಸ್ಥಳ ಮತ್ತು ಇತರ ವಿವಿಧೆಡೆಗಳಲ್ಲಿ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕ್ಷಾಮ ಬಂದಾಗ ಅಗತ್ಯವಿದ್ದವರಿಗೆ ಪರಿಹಾರ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೯೭೪ ರ ಪ್ರವಾಹ ಮತ್ತು ಗದಗ್ ನಲ್ಲಿ ೧೯೯೨ ರಲ್ಲಿ ಪ್ರವಾಹ ಉಂಟಾದಾಗಲೂ ಪುನರ್ನಿರ್ಮಾಣ ಕಾರ್ಯ ಮತ್ತು ಪರಿಹಾರಗಳಿಗಾಗಿ ಸಹಾಯ ಮಾಡಿದರು. ಮಂಗಳೂರಿನಲ್ಲಿ ಇತ್ತೀಚಿನ ಪ್ರವಾಹದ ಸಮಯದಲ್ಲೂ ಸುಮಾರು ೨ ಲಕ್ಷ ಇಟ್ಟಿಗೆಗಳನ್ನು ಪುನರ್ನಿರ್ಮಾಣಕ್ಕಾಗಿ ಒದಗಿಸಿಕೊಟ್ಟರು.

ಗ್ರಾಮೀಣಾಭಿವೃದ್ಧಿ

ಬದಲಾಯಿಸಿ

ವೀರೇಂದ್ರ ಹೆಗ್ಗಡೆಯವರು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ೧೯೮೨ ರಲ್ಲಿ ಆರಂಭಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬೆಳ್ತಂಗಡಿಯ ೮೧ ಗ್ರಾಮಗಳಲ್ಲಿ ೧೮,೦೦೦ ಮನೆತನಗಳಿಗೆ ಸಹಾಯವನ್ನೊದಗಿಸುತ್ತಿದೆ. ೧೯೭೨ ರಿಂದ ಆರಂಭಗೊಂಡು ಧರ್ಮಸ್ಥಳದಲ್ಲಿ "ಸಾಮೂಹಿಕ ವಿವಾಹ"ಗಳನ್ನು ಆರಂಭಿಸಿದರು. ಈಗ ವಾರ್ಷಿಕವಾಗಿ ೫೦೦ಕ್ಕೂ ಹೆಚ್ಚು ದಂಪತಿಗಳು ಧರ್ಮಸ್ಥಳದಲ್ಲಿ ವಿವಾಹವಾಗುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ವಿಧಿಯನುಸಾರ ವಿವಾಹ ನಡೆಸಲಾಗುತ್ತದೆ. ಈಗ 28 ಜಿಲ್ಲೆಗಳಲ್ಲಿ ಯೋಜನೆ ಇದೆ. ನಮ್ಮ ರಾಜ್ಯ ಅಲ್ಲದೇ ಪಕ್ಕದ ಕೇರಳ ರಾಜ್ಯಕ್ಕೂ ಯೋಜನೆ ವಿಸ್ತರಣೆಯಾಗಿದೆ.

ಆರೋಗ್ಯ

ಬದಲಾಯಿಸಿ

ಆರೋಗ್ಯ ವಿಕಾಸಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಬಹಳಷ್ಟು ದುಡಿದಿದ್ದಾರೆ. ಸಂಚಾರಿ ಆಸ್ಪತ್ರೆಗಳು, ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಸಂಸ್ಥೆಯವರು ನಡೆಸುವ ಕ್ಷಯರೋಗ ಚಿಕಿತ್ಸಾಲಯ (ಮಂಗಳೂರು), ಉಡುಪಿ ಮತ್ತು ಹಾಸನಗಳಲ್ಲಿ ಆಯುರ್ವೇದ ಆಸ್ಪತ್ರೆ, ಮಂಗಳೂರಿನ ಎಸ್ ಡಿ ಎಮ್ ಕಣ್ಣಿನ ಆಸ್ಪತ್ರೆ ಮತ್ತು ದಂತ ಚಿಕಿತ್ಸಾಲಯ, ಯೋಗ ತರಬೇತಿ ಶಿಬಿರಗಳು ಮೊದಲಾಗಿ ಅನೇಕ ಸಂಸ್ಥೆ-ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

ಶಿಕ್ಷಣ

ಬದಲಾಯಿಸಿ

ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನಾ ಕೇಂದ್ರವು ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಾ ಬಂದಿದೆ. ಅನೇಕ ಸಮಕಾಲೀನ ಮತ್ತು ಪ್ರಾಯೋಗಿಕ ಶೈಕ್ಷಣಿಕ ಸಂಸ್ಥೆ - ಕಾರ್ಯಕ್ರಮಗಳನ್ನೂ ಹೆಗ್ಗಡೆಯವರು ನಡೆಸುತ್ತಿದ್ದಾರೆ. ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ....

ಸಂಸ್ಕೃತಿ

ಬದಲಾಯಿಸಿ

ಕರ್ನಾಟಕದ ವಿಶಿಷ್ಟ ನೃತ್ಯ ಪದ್ಧತಿಯಾದ ಯಕ್ಷಗಾನದ ಬೆಳವಣಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಾಗೆಯೇ ಇತರ ಕುಶಲ ಕಲೆಗಾರಿಕೆಗಳಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಧರ್ಮೋತ್ಥಾನ ಟ್ರಸ್ಟ್‌

ಬದಲಾಯಿಸಿ
  • ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಡಾ.ಡಿ. ವೀರೇಂದ್ರ ಹೆಗ್ಗಡೆ, ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವನ್ನು ೧೯೯೧ರಿಂದ ಧರ್ಮೋತ್ಥಾನ ಟ್ರಸ್ಟ್‌ನಿಂದ ಕೈಗೊಳ್ಳಲಾಗುತ್ತಿದೆ. ಧರ್ಮೋತ್ಥಾನ ಟ್ರಸ್ಟ್ ನಾಡಿನಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಕೈಗೆತ್ತಿಕೊಂಡಿದೆ. ಪೂಜೆ ನಡೆಯುವ ದೇವಸ್ಥಾನಕ್ಕೆ ಮೊದಲ ಆದ್ಯತೆ. ಈಗ ಈ ಸಂಖ್ಯೆ ೧೭೧ ದಾಟಿದೆ. ಇವುಗಳಲ್ಲಿ ೧೫೪ ದೇವಸ್ಥಾನಗಳ ಕೆಲಸ ಪೂರ್ಣಗೊಂಡಿದೆ.
  • ೧೬ ದೇವಸ್ಥಾನಗಳಲ್ಲಿ ಪೂಜಾವಿಧಿ ಪ್ರಾರಂಭವಾಗಬೇಕು. ೧೧೨ ದೇವಸ್ಥಾನಗಳ ಕೆಲಸಕ್ಕೆ ಪ್ರಾಚ್ಯವಸ್ತು ಇಲಾಖೆ ಸಹಭಾಗಿತ್ವ ಸಿಕ್ಕಿದೆ. ಈವರೆಗೆ ಟ್ರಸ್ಟ್ ರು. ೧೪೯೪ ಲಕ್ಷ ವೆಚ್ಚ ಮಾಡಿದ್ದು, ರು. ೫೬೧ ಲಕ್ಷ ಟ್ರಸ್ಟ್‌ನಿಂದ, ರು. ೪೪೯ ಲಕ್ಷ ಸರ್ಕಾರಿ ಅನುದಾನದಿಂದ, ರು. ೪೮೪ ಲಕ್ಷ ದೇವಸ್ಥಾನ ಸಮಿತಿಯಿಂದ ಭರಿಸಲಾಗಿದೆ. ೨೫ ಜಿಲ್ಲೆಗಳಲ್ಲಿ ಧರ್ಮೋತ್ಥಾನ ಟ್ರಸ್ಟ್ ಕೆಲಸ ನಡೆಯುತ್ತಿದೆ.

ಗೌರವ, ಪ್ರಶಸ್ತಿಗಳು

ಬದಲಾಯಿಸಿ

ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಸ್ಥೆಗಳು ಅವರಿಗೆ ಪ್ರಶಸ್ತಿ-ಗೌರವಗಳನ್ನು ಇತ್ತಿವೆ.

  1. ೨೦೧೫ರಲ್ಲಿ ಭಾರತ ಸರಕಾರದಿಂದ ಪದ್ಮವಿಭೂಷಣ ಪ್ರಶಸ್ತಿ.
  2. ೧೯೮೫ ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮತ್ತು
  3. ೧೯೯೩ ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ರವರಿಂದ "ರಾಜರ್ಷಿ" ಗೌರವ ಇವರಿಗೆ ಸಂದಿವೆ.
  4. ಅನೇಕ ಧಾರ್ಮಿಕ ಮಠಗಳು ಇವರಿಗೆ "ಧರ್ಮರತ್ನ", "ಧರ್ಮಭೂಷಣ". "ಅಭಿನವ ಚಾವುಂಡರಾಯ", "ಪರೋಪಕಾರ ಧುರಂಧರ" ಮೊದಲಾದ ಬಿರುದುಗಳು ಇವರಿಗೆ ಸಂದಿವೆ.
  5. ೧೯೯೪ ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ದೊರಕಿತು.
  6. ಮಂಗಳೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿದೆ.
  7. ಇತ್ತೀಚೆಗೆ ೨೦೦೪ ರ "ವರ್ಷದ ಕನ್ನಡಿಗ" ಗೌರವ ವೀರೇಂದ್ರ ಹೆಗ್ಗಡೆಯವರಿಗೆ ಲಭಿಸಿದೆ.
  8. ಸನ್.೨೦೧೩ ರ, ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ. ಮಧ್ಯಪ್ರದೇಶದ ಇಂದೂರ್ ನಗರದ ಶ್ರೀ ಅಹಿಲೋತ್ಸವ ಸಮಿತಿ ನೀಡುವ ಗೌರವ ಪ್ರಶಸ್ತಿಯಿದು.
  9. ೨೦೧೧ರಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರಿಗೆ ೨೦೦೯ನೇ ಸಾಲಿನ ಕರ್ನಾಟಕ ಸರಕಾರ ಕೊಡಮಾಡುವ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ "ಕರ್ನಾಟಕ ರತ್ನ" ನೀಡಿ ಪುರಸ್ಕರಿಸಲಾಗಿದೆ. ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್.ಯಡಿಯೂರಪ್ಪನವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
  10. ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಪ್ರತಿವರ್ಷ ನೀಡುವ ಸರ್‌ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ೨೦೧೧ನೇ ಸಾಲಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ದೊರೆತಿದೆ.
  11. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಲಂಡನ್‌ನ ಪ್ರತಿಷ್ಠಿತ ‘ಆಶ್ಡೆನ್ ಸಂಸ್ಥೆಯು ನೀಡುವ "ಜಾಗತಿಕ ಹಸಿರು ಆಸ್ಕರ್ "ಎಂದೇ ಪರಿಗಣಿಸಲಾದ ೨೦೧೨ರ "ಆಶ್ಡೆನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ’ಗೆ ಪಾತ್ರವಾಗಿದೆ.
  12. ಖಾಸಗಿ ವಾಹಿನಿಯಾದ ಜೀ ಕನ್ನಡ ವಾಹಿನಿಯಲ್ಲಿ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಲ್ಲಿ ಈ ವರ್ಷದ "ಹೆಮ್ಮೆಯ ಕನ್ನಡಿಗ" ಪ್ರಶಸ್ತಿ ಇವರ ದೊರೆತಿದೆ. (ಪೂರಕ ಮಾಹಿತಿ : ಜೀ ಕನ್ನಡ ವಾಹಿನಿ )
  13. ಏಷ್ಯಾ ವನ್ ಸಂಸ್ಥೆ ಕೊಡಮಾಡುವ ಆರನೇ ಆವೃತ್ತಿಯ '2020-21 ರ ಸಾಲಿನ ಏಷ್ಯಾದ ಶ್ರೇಷ್ಠ ನಾಯಕರು' ಎಂಬ ಗೌರವ []

ಬಾಹ್ಯ ಸಂಪರ್ಕ

ಬದಲಾಯಿಸಿ

ಹೆಗ್ಗಡೆಯವರ ಬಗ್ಗೆ ಪ್ರಜಾವಾಣಿಯಲ್ಲಿನ ಲೇಖನ Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2021-06-03. Retrieved 2021-06-03.