ವಿಶ್ವದ ಕಮ್ಯೂನಿಸ್ಟ್ ಪಕ್ಷಗಳು
ಕಮ್ಯೂನಿಸ್ಟ್ ಪಕ್ಷಗಳು, ವಿಶ್ವದ : 1917 ಅಕ್ಟೋಬರ್ ಕ್ರಾಂತಿ ಜಯಪ್ರದವಾಗಿ, ರಷ್ಯದಲ್ಲಿ ಕಮ್ಯೂನಿಸ್ಟ್ ಸರ್ಕಾರ ಸ್ಥಾಪಿತವಾದಾಗ, ಇದೇ ವಿಧಾನಗಳಿಂದ ತಮ್ಮತಮ್ಮ ದೇಶಗಳಲ್ಲಿ ರಾಜಕೀಯ ಆರ್ಥಿಕ ಸಾಮಾಜಿಕ ಪರಿವರ್ತನೆಗಳನ್ನು ಸಾಧಿಸುವ ಉದ್ದೇಶದಿಂದ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸ್ಥಾಪಿತವಾದ ಪಕ್ಷಗಳು. ಈ ಎಲ್ಲ ಪಕ್ಷಗಳಿಗೂ ಕಮ್ಯೂನಿಸ್ಟ್ ಸಿದ್ಧಾಂತದ ಮೂಲ ಪುರುಷರಾದ ಮಾಕ್ರ್ಸ್ ಮತ್ತು ಎಂಗೆಲ್ಸರೇ ಅಲ್ಲದೆ ಅನಂತರ ಬಂದ ಲೆನಿನ್, ಸ್ಟಾಲಿನ್, ಮಾವೋತ್ಸಾ-ಟುಂಗ್ ಮೊದಲಾದ ಅನೇಕ ನಾಯಕರು ಕಾಲದಿಂದ ಕಾಲಕ್ಕೆ ಮಾರ್ಗದರ್ಶನ ನೀಡಿದ್ದಾರಲ್ಲದೆ, ಮಾರ್ಕ್ಸ್-ಎಂಗೆಲ್ಸ್ ಪ್ರತಿಪಾದಿತವಾದ ಮೂಲ ತತ್ತ್ವಗಳನ್ನು ಪರಿಷ್ಕರಿಸಿ, ಅಗತ್ಯವಿದ್ದೆಡೆಗಳಲ್ಲಿ ಪುನಃ ರೂಪಿಸಿ ಬೆಳೆಸಲು ಕಾರಣರಾಗಿದ್ದಾರೆ. [೧]
ಸೋವಿಯತ್ ಕಮ್ಯೂನಿಸ್ಟ್ ಪಕ್ಷ
ಬದಲಾಯಿಸಿಮೂಲತಃ ಎಲ್ಲಾ ಪಕ್ಷಗಳಿಗೂ ಸೂಕ್ತ ನಿರ್ದೇಶನ ನೀಡುವ ಹೊಣೆಯನ್ನು ಸೋವಿಯತ್ ಕಮ್ಯೂನಿಸ್ಟ್ ಪಕ್ಷವೇ ನಿರ್ವಹಿಸುತ್ತಿತ್ತಾದರೂ ಎರಡನೆಯ ಮಹಾಯುದ್ಧದ ಅನಂತರದ ಕಾಲದಲ್ಲಿ ಅನೇಕ ಕಮ್ಯೂನಿಸ್ಟ್ ಪಕ್ಷಗಳು ಹೆಚ್ಚು ಹೆಚ್ಚು ಸ್ವತಂತ್ರ ಧೋರಣೆ ತಳೆದಿವೆ. ಪ್ರಾದೇಶಿಕ ಸನ್ನಿವೇಶಗಳು ವಿಶಿಷ್ಟ ಐತಿಹಾಸಿಕ ಕಾರಣಗಳು ಇವುಗಳ ಮೇಲೆ ಪ್ರಬಲ ಪ್ರಭಾವ ಬೀರುತ್ತಿವೆ. ಉತ್ಪಾದನಾ ಸಾಧನಗಳ ಸರ್ಕಾರಿ ಒಡೆತನ, ಸಾಮೂಹಿಕ ಬೇಸಾಯ, ಯೋಜನಾಬದ್ಧ ಆರ್ಥಿಕಾಭಿವೃದ್ಧಿ, ಬಲಪ್ರಯೋಗದಿಂದ ಅಧಿಕಾರ ಸ್ವಾಧೀನ, ಕಾರ್ಮಿಕ ಸರ್ವಾಧಿಕಾರದ ಅನಿವಾರ್ಯತೆ, ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಸಾಮ್ರಾಜ್ಯ ಸ್ಥಾಪನೆ - ಮುಂತಾದ ಅದರ ನಾನಾ ಆದರ್ಶಗಳಲ್ಲಿ ಕಾಲದಿಂದ ಕಾಲಕ್ಕೆ ವ್ಯತ್ಯಾಸ ಗಳುಂಟಾಗಿವೆ. ಬಂಡವಾಳ ವ್ಯವಸ್ಥೆಯ ಅಡಿಯಲ್ಲೇ-ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕವೇ-ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದು, ಪ್ರತಿಗಾಮಿ ಶಕ್ತಿಗಳನ್ನು ಹತ್ತಿಕ್ಕಿ, ಪ್ರಗತಿ ಶಕ್ತಿಗಳನ್ನು ಸಂಘಟಿಸಿ ಪ್ರಬಲಗೊಳಿಸಿ ಸಮಾಜವಾದ ಸ್ಥಾಪಿಸುವ ಸಾಧ್ಯತೆಯನ್ನು ಪ್ರಯೋಗಿಸಿ ನೋಡಲಾಗುತ್ತಿದೆ. ಬಂಡವಾಳವಾದಿ ರಾಷ್ಟ್ರಗಳ ನಡುವೆ ಭದ್ರಕೋಟೆಯಂತೆ ಸೋವಿಯತ್ ದೇಶದ ಸ್ಥಾಪನೆಯಾಗಿರುವುದರಿಂದ ಈ ಹಿರಿಯಣ್ಣನ ಶಕ್ತಿ ದಕ್ಷತೆಗಳು ಸಮಾಜವಾದಿ ವ್ಯವಸ್ಥೆಯ ಹಿರಿಮೆಯನ್ನು ಮನದಟ್ಟು ಮಾಡಿಕೊಟ್ಟು, ಸಂದೇಹಗ್ರಸ್ತರ ಮನಃಪರಿವರ್ತನೆಗೆ ಸಾಧಕವಾಗಬಹುದೆಂಬ ಅಭಿಪ್ರಾಯವೂ ಉಂಟು. [೨]
ಎರಡನೆಯ ಮಹಾಯುದ್ಧ
ಬದಲಾಯಿಸಿಎರಡನೆಯ ಮಹಾಯುದ್ಧವಾದ ಮೇಲೆ ಪುರ್ವ ಯುರೋಪಿನ ರಾಷ್ಟ್ರಗಳಲ್ಲೂ ಚೀನ, ಉತ್ತರ ಕೊರಿಯ, ಉತ್ತರ ವಿಯೆಟ್ನಾಂಗಳು ಕಮ್ಯೂನಿಸ್ಟ್ ಸರ್ಕಾರಗಳು ಬಂದಿರುವುದೇ ಅಲ್ಲದೆ ದೂರದ ಕ್ಯೂಬವು ಕಮ್ಯೂನಿಸ್ಟ್ ಹೊರಸ್ತಂಭಗಳಲ್ಲೊಂದಾಗಿವೆ. ಈ ಕಾರಣಗಳಿಂದಾಗಿ ಭವಿಷ್ಯ ಜಗತ್ತು ಕಮ್ಯೂನಿಸ್ಟರಾದ ತಮ್ಮದು; ತಮ್ಮದು ಬೆಳೆಯುತ್ತಿರುವ ವ್ಯವಸ್ಥೆ; ಆದ್ದರಿಂದ ಹಿಂಸಾತ್ಮಕ ಕ್ರಾಂತಿ ಯಾವಾಗಲೂ ಎಲ್ಲೆಡೆಗಳಲ್ಲೂ ಅನಿವಾರ್ಯವೇನೂ ಅಲ್ಲ-ಎಂಬ ಭಾವನೆಯೂ ಇದೆ. ಆದರೆ ಚೀನಿ ಪಕ್ಷ ಇದಕ್ಕೆ ಸೊಪ್ಪು ಹಾಕುವುದಿಲ್ಲ. ಬಂದೂಕದ ನಳಿಕೆಯೊಳಗಿಂದ ಶಕ್ತಿಯ ಉದ್ಭವವಾಗುವುದೆಂಬುದು ಮಾವೋವಾಣಿ. ಕೈಗಾರಿಕೆಯಲ್ಲಿ ಆತ್ಯಂತಿಕ ಪ್ರಗತಿ ಸಾಧಿಸಿರುವ ಸೋವಿಯತ್ ದೇಶವೀಗ ಕ್ರಮವಾಗಿ ಪರಿಷ್ಕರಣಾವಾದಿಯಾಗಿ ಬಂಡವಾಳ ವ್ಯವಸ್ಥೆಯ ಕಡೆಗೆ ಜಾರಿಹೋಗುತ್ತಿದೆಯೆಂದು ಪಟ್ಟಭದ್ರ ಆಡಳಿತವರ್ಗದ ಕಟ್ಟುಕಟ್ಟಳೆಗಳಿಂದಾಗಿ ಕಮ್ಯೂನಿಸ್ಟ್ ಸರಳ ಸಿದ್ಧಾಂತವೇ ಅಲ್ಲಿ ಬಡವಾಗುತ್ತಿವೆ ಎಂದು ಜಡವಾಗುತ್ತಿದೆ ಎಂದು ಚೀನಿ ಪಕ್ಷದ ವಾದ. ನಾನಾ ಸಿದ್ಧಾಂತಿಕ ಭಿನ್ನತೆಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ವಿಶ್ವ ಕಮ್ಯೂನಿಸ್ಟ್ ಪಕ್ಷಗಳ ಸಹಭಾವ ಕ್ಷಿಪ್ರಾತಿಕ್ಷಿಪ್ರವಾಗಿ ಕ್ಷಯಿಸಿಹೋಗುತ್ತಿದೆ. ಸೋವಿಯತ್ ದೇಶವೇ ಕಮ್ಯೂನಿಸ್ಟರ ಪುಣ್ಯ ಭೂಮಿ, ಪಿತೃಭೂಮಿ; ಮಾಸ್ಕೋ ಅವರ ತೀರ್ಥಕ್ಷೇತ್ರ-ಎಂಬ ವಾದವನ್ನೊಪ್ಪದೆ 1948ರಲ್ಲಿ ಸಿಡಿದೆದ್ದ ಯುಗೋಸ್ಲೋವಿಯಾದ ಕಮ್ಯೂನಿಸ್ಟ್ ಪಕ್ಷದ ನಿಲುವಿಗೆ ಈಗ ಆ ಪಕ್ಷವೇ ನಿರೀಕ್ಷಿಸದಿದ್ದ ಮತ್ತು ಬಂiÀÄಸದಿದ್ದ ರೀತಿಯಲ್ಲಿ ಚೀನೀ ಪಕ್ಷದ ಸಮರ್ಥನೆ ದೊರಕಿದೆ. ಯುಗೋಸ್ಲೋವಿಯವಾದರೋ ಈಗ ಸೋವಿಯತ್ ಪಕ್ಷದ ಕಡೆಗೆ ಹಿಂದಿಗಿಂತ ಹೆಚ್ಚಾಗಿ ಸರಿದುಬಂದಿದೆ.
ಕಮ್ಯೂನಿಸ್ಟ್ ಚಳವಳಿ
ಬದಲಾಯಿಸಿಕಮ್ಯೂನಿಸ್ಟ್ ಚಳವಳಿಯ ಅಂಕುರಾರ್ಪಣವಾದದ್ದು 19ನೆಯ ಶತಮಾನದ ಅಂತ್ಯಕಾಲದಲ್ಲಿ. ಕೈಗಾರಿಕಾ ಕ್ರಾಂತಿಯ ವೈಪರೀತ್ಯಗಳ ಪರಿಣಾಮವಾಗಿ ಪಶ್ಚಿಮ ಯುರೋಪಿನಲ್ಲೆಲ್ಲ ಆಗ ಕಾರ್ಮಿಕ ಅಶಾಂತಿ ಹಬ್ಬಿತ್ತು. ರಷ್ಯದಲ್ಲಿ ಕೈಗಾರಿಕೆಗಳು ಅಷ್ಟೇನು ಬೆಳೆದಿರಲಿಲ್ಲ. ಆದರೆ ಅಲ್ಲಿ ಕ್ರಾಂತಿಗೆ ಎಲ್ಲವೂ ಅಣಿಯಾಗಿತ್ತು. ಇಡೀ ರಷ್ಯದಲ್ಲಿ ಆಗ ಕೇವಲ 24 ಲಕ್ಷ ಮಂದಿ ಕಾರ್ಮಿಕರಿದ್ದರೂ ಅವರಲ್ಲಿ ಪಶ್ಚಿಮದಿಂದ ಬಂದ ಮಾಕಿರ್ಸ್‌ಸ್ಟ್ ಸಾಹಿತ್ಯ ಪ್ರಚಾರವಾಗಿತ್ತು. 1889ರಲ್ಲಿ ಐರೋಪ್ಯಕಾರ್ಮಿಕರು ರಚಿಸಿಕೊಂಡಿದ್ದ ದ್ವಿತೀಯ ಅಂತಾರಾಷ್ಟ್ರೀಯದಲ್ಲಿ ರೂಪಿತವಾಗಿದ್ದ ಭಾವನೆಗಳು ರಷ್ಯದಲ್ಲೂ ಹಬ್ಬಿದ್ದವು. ಶಾಂತಿಯುತ ವಿಧಾನಗಳಿಂದ ಸಮಾಜವಾದದ ಸ್ಥಾಪನೆ ಸಾಧ್ಯವಾದೀತೆಂದೇ ಇವರ ಆಸೆ. ಆದರೆ ರಷ್ಯದ ಪರಿಸ್ಥಿತಿಗಳು ಈ ನಿರೀಕ್ಷೆಯನ್ನು ಸುಳ್ಳಾಗಿಸಿದವು. 1895ರಲ್ಲಿ ಸೇಂಟ್ ಪೀಟರ್ಸ್ ಬರ್ಗಿನಲ್ಲಿ ಕಾರ್ಮಿಕ ವರ್ಗ ವಿಮೋಚನಾ ಸಮರ ಸಂಘದ ಸ್ಥಾಪನೆಯಾದಾಗ ಅದರ ದಾರಿ ಬೇರೆಯಾಯಿತು. ಲೆನಿನ್ ಇದರ ಸ್ಥಾಪಕರಲ್ಲೊಬ್ಬ.ಇತರ ನಗರಗಳಲ್ಲೂ ಈ ಬಗೆಯ ಸಂಘಗಳು ಸ್ಥಾಪಿತವಾದವು. 1898ರಲ್ಲಿ ಮಿನ್ಸ್‌್ಕನಲ್ಲಿ ಸೇರಿದ್ದ ಈ ನಾನಾ ಸಂಘಗಳ ಪ್ರತಿನಿಧಿಗಳ ಸಭೆಯಲ್ಲಿ ರಷ್ಯನ್ ಸಮಾಜವಾದಿ ಪ್ರಜಾಸತ್ತಾತ್ಮಕ ಕಾರ್ಮಿಕ ಪಕ್ಷದ ಸ್ಥಾಪನೆಯಾಯಿತು. ಆಗಲೇ ಕಮ್ಯೂನಿಸ್ಟ್ ಪಕ್ಷ ಜನ್ಮ ತಳೆಯಿತೆನ್ನಬಹುದು. ದಬ್ಬಾಳಿಕೆ ಮತ್ತು ಬಂಡವಾಳಗಳ ವಿರುದ್ಧ ಹೋರಾಟ ನಡೆಸಬೇಕೆಂದು ಆ ಸಭೆಯಿಂದ ಒಂದು ಪ್ರಣಾಳಿಕೆ ಹೊರಬಿತ್ತು. ಆದರೆ ಅನಂತರ ಪಕ್ಷದ ನಾಯಕರನೇಕರು ಸೆರೆಯಾದರು. ಉಳಿದ ಕೆಲವರು ಭೂಗತರಾದರು.
ಇತಿಹಾಸ
ಬದಲಾಯಿಸಿ19ನೆಯ ಶತಮಾನದ ಅವಸಾನಕಾಲದಲ್ಲಿ ಯುರೋಪಿನಲ್ಲೆಲ್ಲ ವ್ಯಾಪಿಸಿದ ಕೈಗಾರಿಕಾ ಮುಗ್ಗಟ್ಟು ರಷ್ಯಕ್ಕೆ ಹೊರತಾಗಿಲ್ಲ. ದಿವಾಳಿತನ ನಿರುದ್ಯೋಗಗಳು ಸಾರ್ವತ್ರಿಕವಾದವು. ಪ್ರದರ್ಶನಗಳು ಪ್ರತಿಭಟನೆಗಳು, ಮುಷ್ಕರಗಳು ಪರಿಸ್ಥಿತಿಯನ್ನು ವಿಷಮಗೊಳಿಸಿದವು. 1897ರಲ್ಲಿ ಸೈಬೀರಿಯಕ್ಕೆ ಗಡಿಪಾರಾಗಿದ್ದ ಲೆನಿನ್ ರಷ್ಯಕ್ಕೆ ಹಿಂದಿರುಗಿ ಮತ್ತೆ ತನ್ನ ಕಲಾಪಗಳಲ್ಲಿ ತೊಡಗಿದ. ರಷ್ಯನ್ ಸಮಾಜವಾದಿ ಪ್ರಜಾಸತ್ತಾತ್ಮಕ ಪಕ್ಷ ಮತ್ತೆ ಸ್ಥಾಪನೆಯಾಯಿತು (1903). ಇದಾದದ್ದು ರಷ್ಯದಲ್ಲಲ್ಲ, ಬೆಲ್ಜಿಯಂನ ಬ್ರೆಸೆಲ್ಸಿನಲ್ಲಿ. ರಷ್ಯದಲ್ಲಿ ನಾಯಕರು ಮತ್ತೆ ದಸ್ತಗಿರಿಯಾಗುವ ಸಂಭವವಿತ್ತು. ಬ್ರೆಸಲ್ಲಿನ ಅಧಿವೇಶನವು ಪೊಲೀಸರ ಕಣ್ಣಿಗೆ ಬಿದ್ದುದ್ದರಿಂದ ಕಲಾಪಗಳ ಮಧ್ಯದಲ್ಲೇ ಲಂಡನ್ನಿಗೆ ಹೋದರು. ಆದರೆ ಆಗಲೂ ಈ ಪಕ್ಷವನ್ನು ಎಡಬಲ ಗುಂಪುಗಳು ಕಾಡಿಸದಿರಲಿಲ್ಲ. ಲೆನಿನ್ನನದು ವಾಮಪಕ್ಷ. ಕೇಂದ್ರ ಶಿಸ್ತಿನ ಹೋರಾಟ ಪಡೆಯಂತೆ ಪಕ್ಷದ ವ್ಯವಸ್ಥೆಯಾಗಬೇಕೆಂಬುದು ಲೆನಿನ್ ಅಭಿಪ್ರಾಯ. ಪಕ್ಷದ ಶಿಸ್ತಿಗೆ ಬದ್ಧರಾದವರು ಅದರ ಕಾರ್ಯಕ್ರಮಗಳನ್ನು ನಿರ್ವಹಿಸುವವರು ಚಂದಾ ಸಲ್ಲಿಸುವವರು ಸದಸ್ಯರು. ಪಕ್ಷದ ನೀತಿಯಲ್ಲಿ ಕೇವಲ ಸಹಾನುಭೂತಿಯಿರುವವರು ಸದಸ್ಯರಾಗತಕ್ಕದ್ದಲ್ಲ. ಇದು ಲೆನಿನ್ ವಾದ. ಟ್ರಾಟ್ಸ್ಕಿಯದು ಇದಕ್ಕೆ ವಿರೋಧವಾದ ಅಭಿಪ್ರಾಯ. ಆತ ಬಲಗುಂಪಿನ ನಾಯಕ. ಪಕ್ಷದ ಕಾರ್ಯಕ್ರಮವನ್ನೊಪ್ಪುವ, ಅದಕ್ಕೆ ಪ್ರತ್ಯಕ್ಷ, ಪರೋಕ್ಷ ನೆರವು ನೀಡುವ ಎಲ್ಲರು ಸದಸ್ಯರಾಗಬಹುದೆಂದು ಅವನ ವಾದ. ತತ್ಕಾಲದಲ್ಲಿ ಬಲಗುಂಪಿಗೆ ಬಹುಮತವಿತ್ತು. ಆದರೆ ಮುಂದೆ ಅದರ ಕೆಲವು ಧೋರಣೆಗಳನ್ನೊಪ್ಪದವರು ಹೊರಬಂದಿದ್ದರಿಂದ ಕೇಂದ್ರಸಮಿತಿಯಲ್ಲಿ ಎಡಗುಂಪಿನ ಕೈ ಮೇಲಾಯಿತು. ಬಹುಸಂಖ್ಯಾತರಾದ ಈ ಗುಂಪಿನವರು ತಮ್ಮನ್ನು ಬಾಲ್ಷಿವಿಸ್ಟರೆಂದು ಕರೆದುಕೊಂಡರು. ಅಲ್ಪಸಂಖ್ಯಾತರಾದ ಬಲಗುಂಪಿನವರು ಮೆನ್ಷೆವಿಷ್ಟರು. ಮುಂದೆ ಅನೇಕ ಸಾರಿ ಅಧಿಕಾರ ಇವುಗಳ ನಡುವೆ ಲಾಳಿಯಂತೆ ಅಡ್ಡಾಡುತ್ತಿತ್ತು. ಕೊನೆಗೆ 1905ರ ವೇಳೆಗೆ ಈ ಭಿನ್ನತೆ ಬಹಳ ಹೆಚ್ಚಿ, ಇವೆರಡೂ ಪ್ರತ್ಯೇಕವಾಗಿ-ಮೆನ್ಷೆವಿಸ್ಟರು ಜಿನೀವದಲ್ಲೂ ಬಾಲ್ಷಿವಿಸ್ಟರು ಲಂಡನ್ನಿನಲ್ಲೂ -ಸಭೆ ಸೇರಿದರು. ಲಂಡನ್ ಸಭೆಯಲ್ಲಿ ಲೆನಿನ್ ಸೂತ್ರಕ್ಕೆ ಒಪ್ಪಿಗೆಯ ಮುದ್ರೆ ಬಿತ್ತು. ಈ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಮುಂದುವರಿದುವು. ರಷ್ಯದಲ್ಲಿ ಕ್ರಾಂತಿ ಸಂಭವಿಸಿ ಬಾಲ್ಷಿವಿಸ್ಟರ ಅಧಿಕಾರ ಸ್ಥಾಪಿತವಾದಾಗ ಕೆಲವು ಮೆನ್ಷೆವಿಸ್ಟ ನಾಯಕರು ಬಾಲ್ಷಿವಿಸ್ಟರ ಕಡೆ ಸೇರಿದರು. ಸೋವಿಯತ್ ದೇಶದಲ್ಲಿ ಮೆನ್ಷೆವಿಸ್ಟ್ ಗುಂಪು ಅಂತರ್ದಾನವಾಯಿತು. ಪಕ್ಷದ ಹೆಸರು 1918ರಲ್ಲಿ ರಷ್ಯನ್ ಕಮ್ಯೂನಿಸ್ಟ್ ಪಕ್ಷವೆಂದೂ 1924ರಲ್ಲಿ ಅಖಿಲ ಒಕ್ಕೂಟ ಕಮ್ಯೂನಿಸ್ಟ್ ಪಕ್ಷ (ಬಾಲ್ಷೆವಿಕ್) ಎಂದೂ 1952ರಲ್ಲಿ ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷ ಎಂದು ಬದಲಾವಣೆಯಾಯಿತು.
ರಷ್ಯನ್ ಕ್ರಾಂತಿ
ಬದಲಾಯಿಸಿರಷ್ಯನ್ ಕ್ರಾಂತಿಯ ಪರಿಣಾಮವಾಗಿ ಅನೇಕ ದೇಶಗಳಲ್ಲಿ ಕಮ್ಯೂನಿಸ್ಟ್ ಪಕ್ಷಗಳ ಉದಯವಾದವು. ಇವುಗಳಲ್ಲಿ ಕೆಲವು ರಷ್ಯನ್ ಕ್ರಾಂತಿಪುರ್ವಕಾಲದ ಮಾಕಿರ್ಸ್‌ಸ್ಟ್ ಪ್ರಭಾವವನ್ನೇ ತಳೆದಿದ್ದವು. 1917ರಲ್ಲಿ ಸ್ವೀಡನ್ನಿನ ಕೆಲವರು ಕಮ್ಯೂನಿಸ್ಟ್ ಪಕ್ಷವನ್ನು ಕಟ್ಟಿದರು. ಜರ್ಮನಿ, ಆಸ್ಟ್ರಿಯ, ಹಂಗೇರಿ, ಗ್ರೀಸ್, ಯುಗೋಸ್ಲೋವಿಯ, ಪೋಲೆಂಡ್, ಬಲ್ಗೇರಿಯ, ಅರ್ಜೆಂಟೈನ, ಮೆಕ್ಸಿಕೊ, ಡೆನ್ಮಾರ್ಕ್, ಸಂಯುಕ್ತ ಸಂಸ್ಥಾನಗಳಲ್ಲಿ ಪಕ್ಷಗಳು ಸ್ಥಾಪನೆಯಾದವು. 1919ರಲ್ಲಿ ಲೆನಿನ್ ರಷ್ಯದಲ್ಲಿ ಕಮ್ಯೂನಿಸ್ಟ್ ಅಂತಾರಾಷ್ಟ್ರೀಯವನ್ನು ಸ್ಥಾಪಿಸಿದ್ದರಿಂದ ಕಮ್ಯೂನಿಸ್ಟ್ ವಿಧಾನದಲ್ಲಿ ನುರಿತ ಕಾರ್ಯಕರ್ತರ ಸರಬರಾಜು ವರ್ಧಿಸಿತು. ವಿಶ್ವದಾದ್ಯಂತ ಕಮ್ಯೂನಿಸ್ಟ್ ಕ್ರಾಂತಿಗೆ ಸೂಕ್ತ ತಳಹದಿ ಹಾಕುವುದು ಇದರ ಉದ್ದೇಶವಾಗಿತ್ತು.1920ರ ಅನಂತರ ಕಮ್ಯೂನಿಸ್ಟ್ ಪಕ್ಷಗಳ ಸಂಖ್ಯೆ ಅಧಿಕಗೊಂಡುವು. ಆ ವರ್ಷ ಫ್ರಾನ್ಸ್, ಬ್ರಿಟನ್, ತುರ್ಕಿ, ಆಸ್ಟ್ರೇಲಿಯ, ಇರಾನ್, ಈಸ್ಟ್ ಇಂಡೀಸ್, ಉರುಗ್ವೆಗಳಲ್ಲೂ ಮರುವರ್ಷ ಇಟಲಿ, ಸ್ಪೇನ್, ಬ್ರೆಜಿಲ್, ಚಿಲಿ, ಸ್ವಿಟ್ಜರ್ಲೆಂಡ್, ರೊಮೇನಿಯ, ಜೆಕೊಸ್ಲೋವಾಕಿಯ, ಚೀನ, ಮಂಗೋಲಿಯಗಳಲ್ಲೂ 1922ರಲ್ಲಿ ಜಪಾನ್, ನಾರ್ವೆಗಳಲ್ಲೂ ಎರಡು ವರ್ಷಗಳ ಅನಂತರ ನ್ಯೂಜಿಲೆಂಡಿನಲ್ಲೂ 1925ರಲ್ಲಿ ಕ್ಯೂಬ ಮತ್ತು ಕೊರಿಯಗಳಲ್ಲೂ 1928ರಲ್ಲಿ ಏಕ್ವಾಡಾರ್ ಮತ್ತು ಪೆರಗ್ವೇಗಳಲ್ಲೂ 1930ರಲ್ಲಿ ಸಿರಿಯ-ಲೆಬನನ್, ಕಾಸ್ಟರೀಕ, ಇಂಡೋ-ಚೀನಗಳಲ್ಲೂ 1934ರಲ್ಲಿ ಆಲ್ಜೀರಿಯದಲ್ಲೂ 1934ರಲ್ಲಿ ಶ್ರೀಲಂಕ, ಮೊರಾಕ್ಕೋಗಳಲ್ಲೂ 1946ರಲ್ಲಿ ಪುರ್ವಜರ್ಮನಿಯಲ್ಲೂ 1948ರಲ್ಲಿ ಇಸ್ರೇಲಿನಲ್ಲೂ 1949ರಲ್ಲಿ ಬೊಲೀವಿಯದಲ್ಲೂ 1951ರಲ್ಲಿ ನೇಪಾಲ ಮತ್ತು ವಿಯೆಟ್ನಾಂಗಳಲ್ಲೂ ಕಮ್ಯೂನಿಸ್ಟ್ ಪಕ್ಷಗಳ ಸ್ಥಾಪನೆಯಾಯಿತು.
ವರ್ಗಶಕ್ತಿಯ ಮನವರಿಕೆ
ಬದಲಾಯಿಸಿಬ್ರಿಟನಿನ ಕಾರ್ಮಿಕರಿಗೆ ತಮ್ಮ ವರ್ಗಶಕ್ತಿಯ ಮನವರಿಕೆಯಾಗಿರುವುದಾದರೂ ಅವರ ಒಲವು ಹೆಚ್ಚಾಗಿ ಫೇಬಿಯನ್ ಸಮಾಜವಾದದಲ್ಲಿ ನಂಬಿಕೆ ಇಟ್ಟಿರುವ ಕಾರ್ಮಿಕ ಪಕ್ಷದತ್ತ. ಚುನಾವಣೆಗಳಲ್ಲಿ ಅದು ಸ್ಪರ್ಧಿಸುತ್ತದೆಯಾದರೂ ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಅದು ಪಡೆಯಲಾಗಲಿಲ್ಲ. ಜರ್ಮನಿಯ ಕಮ್ಯೂನಿಸ್ಟ್ ಪಕ್ಷ ಬೆಳೆದು ತಮ್ಮ ಪಕ್ಷಕ್ಕೆ ಬೆಂಬಲ ನೀಡುವುದೆಂದು ಲೆನಿನನ ಭಾವನೆಯಾಗಿತ್ತು. ಆದರೆ 1919ರಲ್ಲಿ ಅದು ಸಂವಿಧಾನಸಭೆಯ ಮೇಲೆ ಹತೋಟಿ ಪಡೆಯಲು ಅಸಮರ್ಥವಾಯಿತು. 1919ರಲ್ಲಿ ಅದರ ನಾಯಕರಾದ ರೋಸಾ ಲಕ್ಸೆಂಬರ್ಗ್ ಮತ್ತು ಕಾರ್ಲ್ ಲೀಪ್ನೆಕ್ಟ್‌ರ ಕೊಲೆಯಾಯಿತು. ಆಗ ಅದರ ಶಕ್ತಿ ಕ್ಷೀಣಿಸತೊಡಗಿತ್ತು; ಮುಂದೆ ಜರ್ಮನಿಯ ಆರ್ಥಿಕ ದುಸ್ಥಿತಿಯ ಕಾಲದಲ್ಲಿ ಜನಸಾಮಾನ್ಯರಲ್ಲಿ ಮತ್ತೆ ಅದು ಪ್ರಭಾವ ಗಳಿಸಲಾರಂಭಿಸಿತು. 1933ರ ವೇಳೆಗೆ ಅದಕ್ಕೆ ಅಲ್ಲಿಯ ಶಾಸನ ಸಭೆಯಲ್ಲಿ 81 ಸ್ಥಾನಗಳು ದೊರಕಿದ್ದವು. ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಬಂದಮೇಲೆ ಕಮ್ಯೂನಿಸ್ಟ್ ಪಕ್ಷವನ್ನಡಗಿಸಿದ. ಅದು ಭೂಗತವಾಯಿತು. ಎರಡನೆಯ ಮಹಾಯುದ್ಧದಲ್ಲಿ ಜರ್ಮನಿಗೆ ಪರಾಜಯವಾದಾಗ(1945) ಜರ್ಮನಿಯ ವಿಭಜನೆಯಾಯಿತು. ಸೋವಿಯತ್ ರಾಜ್ಯದ ಬೆಂಬಲದಿಂದ ಕಮ್ಯೂನಿಸ್ಟರು ಪುರ್ವ ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದರು. ಪಶ್ಚಿಮ ಜರ್ಮನಿಯಲ್ಲಿ ಕಮ್ಯೂನಿಸ್ಟ್ ಪಕ್ಷ ಕಾನೂನುಬಾಹಿರವೆಂದು ಪರಿಗಣಿತವಾಯಿತು. 1954ರಲ್ಲಿ ಸಂವಿಧಾನ ನ್ಯಾಯಾಲಯವು ಈ ತೀರ್ಮಾನವನ್ನೇ ಎತ್ತಿ ಹಿಡಿಯಿತು.
ಇಟಲಿಯ ಕಮ್ಯೂನಿಸ್ಟ್ ಪಕ್ಷ
ಬದಲಾಯಿಸಿಇಟಲಿಯಲ್ಲಿ 1921ರಲ್ಲಿ ಕಮ್ಯೂನಿಸ್ಟ್ ಪಕ್ಷ ಪ್ರಭಾವಶಾಲಿಯಾಗಿ ಅಲ್ಲಿಯ ಸಂಸತ್ತಿನಲ್ಲಿ 13 ಸ್ಥಾನ ಗಳಿಸಿತ್ತು. ಆದರೆ ಅನಂತರ ಬಂದ ಬೆನಿಟೊ ಮುಸ್ಸೋಲಿನಿ ಇದನ್ನು ಅಡಗಿಸಿದ (1924). ಎರಡನೆಯ ಮಹಾಯುದ್ಧದ ನಂತರ ಇದು ಮತ್ತೆ ತಲೆಯೆತ್ತಿ ಪಾಲ್ಮಿರೋಟೊಲ್ಯಾಟಿಯ ನಾಯಕತ್ವದಲ್ಲಿ ವಾಮಪಕ್ಷವಾಗಿ ಪ್ರಬಲವೂ ಜನಪ್ರಿಯವೂ ಆಗಿ ಬೆಳೆಯಿತು. ಇಟಲಿಯದು ವಿಶ್ವದ ಮುಖ್ಯ ಕಮ್ಯೂನಿಸ್ಟ್ ಪಕ್ಷಗಳಲ್ಲೊಂದು. ಮಾರಿಸ್ ಥಾರೆಜ಼ನ ನೇತೃತ್ವದಲ್ಲಿ ಫ್ರೆಂಚ್ ಕಮ್ಯೂನಿಸ್ಟ್ ಪಕ್ಷ 1934ರಲ್ಲಿ ಸಮಾಜವಾದಿ ಮತ್ತು ತೀವ್ರಗಾಮಿ ಸಮಾಜವಾದಿ ಪಕ್ಷಗಳೊಂದಿಗೆ ಸೇರಿ ಬಲಪಕ್ಷಗಳನ್ನೆದುರಿಸಿತು. ಈ ರಂಗಕ್ಕೆ 1963ರ ಚುನಾವಣೆಗಳಲ್ಲಿ ಜಯ ಲಭಿಸಿದಾಗ ಸಮಾಜವಾದಿ ನಾಯಕ ಲಿಯಾನ್ ಬ್ಲೂಮ್ ಪ್ರಧಾನಿಯಾದ. ಕಮ್ಯೂನಿಸ್ಟರು ಮಂತ್ರಿಗಳಾಗದಿದ್ದರೂ ಸರ್ಕಾರಕ್ಕೆ ಬೆಂಬಲ ನೀಡಿದರು. ಒಂದು ವರ್ಷವಾದ ಮೇಲೆ ಬ್ಲೂಮ್ ಸರ್ಕಾರದ ಪತನವಾಯಿತು. ತೀವ್ರಗಾಮಿ ಸಮಾಜವಾದಿಗಳು ಕಮ್ಯೂನಿಸ್ಟ್ ಮೈತ್ರಿಯನ್ನು ಮುಂದುವರಿಸಲೊಪ್ಪಲಿಲ್ಲ. ಎರಡನೆಯ ಮಹಾಯುದ್ಧ ಕಾಲದಲ್ಲಿ ಹಿಟ್ಲರ್ ಸೋವಿಯತ್ ದೇಶದ ಆಕ್ರಮಣ ನಡೆಸಿದಾಗ ಫ್ರೆಂಚ್ ಕಮ್ಯೂನಿಸ್ಟರೂ ಫ್ರಾನ್ಸಿನ ವಿಮೋಚನಾ ಚಳವಳಿಗೆ ದುಮುಕಿ, ಯುದ್ಧಾಂತ್ಯದ ವೇಳೆಗೆ ಜನಪ್ರಿಯತೆ ಗಳಿಸಿದರು. ಅವರದು ಫ್ರಾನ್ಸಿನ ಪ್ರಧಾನ ರಾಜಕೀಯ ಪಕ್ಷಗಳಲ್ಲೊಂದಾಯಿತು. 1958ರಲ್ಲಿ ಜನರಲ್ ಡ ಗಾಲ್ ಚುನಾವಣೆಯಲ್ಲಿ ಗೆದ್ದು ಬಂದ. ಚುನಾವಣಾ ಪದ್ಧತಿಯಲ್ಲಿ ಬದಲಾವಣೆಗಳಾದವು. ಇದರಿಂದಾಗಿ ಶಾಸನ ಸಭೆಯಲ್ಲಿ ಕಮ್ಯೂನಿಸ್ಟರ ಬಲ ಕುಂದಿತು.ಆದರೂ ಫ್ರಾನ್ಸಿನ ಕಮ್ಯೂನಿಸ್ಟ್ ಪಕ್ಷ ತಕ್ಕಮಟ್ಟಿಗೆ ಪ್ರಭಾವಶಾಲಿಯಾಗಿದೆ.
ಅಮೆರಿಕ ಸಂಯುಕ್ತಸಂಸ್ಥಾನ
ಬದಲಾಯಿಸಿಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಸಮಾಜವಾದಿ ಪಕ್ಷದಲ್ಲಿದ್ದ ವಾಮಪಂಥೀಯರು ರಷ್ಯನ್ ಕ್ರಾಂತಿಯ ಅನಂತರ ಅಲ್ಲಿಯ ಕಮ್ಯೂನಿಸ್ಟರ ಪ್ರೋತ್ಸಾಹದ ಬಲದಿಂದ ಪ್ರತ್ಯೇಕವಾದರು. ಅದರ ಅಮೆರಿಕೇತರ ಸದಸ್ಯರು ಅಮೆರಿಕದಿಂದ ಗಡಿಪಾರಾದರು. 1921ರಲ್ಲಿ ಕಾನೂನುಬದ್ಧವಾಗಿ ವ್ಯವಹರಿಸುವ ಉದ್ದೇಶದಿಂದ ಕರ್ಮಚಾರಿಗಳ (ವರ್ಕರ್ಸ್) ಪಕ್ಷವೆಂಬ ಬಹಿರಂಗ ಪಕ್ಷವೊಂದು ಸ್ಥಾಪಿತವಾಯಿತು. ಕಮ್ಯೂನಿಸ್ಟ್ ಪಕ್ಷ ರಹಸ್ಯ ಪಕ್ಷವಾಗಿ ಮುಂದುವರಿಯಿತು. ಇದನ್ನು ಸಂಪುರ್ಣವಾಗಿ ವಿಸರ್ಜಿಸಬೇಕೆಂದು 1923ರಲ್ಲಿ ಮಾಸ್ಕೋ ನಿರ್ದೇಶನ ನೀಡಿತು. ಕಾನೂನುಬದ್ಧ ಪಕ್ಷದಲ್ಲಿ ಒಳಜಗಳಗಳಿದ್ದೇ ಇದ್ದವು. 1929ರಲ್ಲಿ ಮಾಸ್ಕೋ ನಡುವೆ ಪ್ರವೇಶಿಸಿ ಶಿಸ್ತನ್ನು ಸ್ಥಾಪಿಸಿತು. ಕಮ್ಯೂನಿಸ್ಟ್ ಅಂತಾರಾಷ್ಟ್ರೀಯದ ಅಂಗವಾಗಿ ಅಮೆರಿಕ ಸಂಯುಕ್ತಸಂಸ್ಥಾನದ ಕಮ್ಯೂನಿಸ್ಟ್ ಪಕ್ಷವನ್ನು ಆಗ ಮತ್ತೆ ರಚಿಸಲಾಯಿತು.
ಸೋವಿಯತ್ ರಾಜ್ಯ
ಬದಲಾಯಿಸಿಎರಡನೆಯ ಮಹಾಯುದ್ಧಕಾಲದಲ್ಲಿ ಪಶ್ಚಿಮದ ರಾಷ್ಟ್ರಗಳೂ ಸೋವಿಯತ್ ರಾಜ್ಯವೂ ಒಂದಾಗಿ ಹಿಟ್ಲರನನ್ನೆದುರಿಸಬೇಕಾದಾಗ ಕಮ್ಯೂನಿಸ್ಟ್ ಅಂತಾರಾಷ್ಟ್ರೀಯವನ್ನು ವಿಸರ್ಜಿಸಿದ್ದರ (1943) ಫಲವಾಗಿ ಅಮೆರಿಕನ್ ಕಮ್ಯೂನಿಸ್ಟ್ ಪಕ್ಷದ ಅಂಗರಚನೆಯಲ್ಲೂ ಸೂಕ್ತ ಬದಲಾವಣೆಗಳಾದವು. ಎರಡನೆಯ ಮಹಾಯುದ್ಧದ ಅನಂತರದ ಕಾಲದಲ್ಲಿ ಅಮೆರಿಕದ ಕಮ್ಯೂನಿಸ್ಟ್ ಪಕ್ಷದ ಕಲಾಪಗಳು ಸರ್ಕಾರದ ತೀವ್ರಗಮನ ಸೆಳೆದವು. ಅಮೆರಿಕ-ಚೀನ ವಿರಸ, ಕೊರಿಯ ಯುದ್ಧ ಮುಂತಾದ ಕಾರಣಗಳಿಂದಾಗಿ ಅಮೆರಿಕನ್ ಕಮ್ಯೂನಿಸ್ಟರು ಉಗ್ರ ಕ್ರಮಗಳಿಗೊಳಗಾದರು. ಸ್ಟಾಲಿನ್ ಅನುಸರಿಸುತ್ತಿದ್ದ ಅನೇಕ ವಿಪರೀತ ಕ್ರಮಗಳು ಆತನ ಮರಣಾನಂತರ ಬಂiÀÄಲಾದಾಗ ಅನೇಕ ಕಮ್ಯೂನಿಸ್ಟರು ಭ್ರಮನಿರಸನಗೊಂಡು ಪಕ್ಷಕ್ಕೆ ರಾಜೀನಾಮೆಯಿತ್ತರು. ಅಮೆರಿಕದ ಹಲವಾರು ಕಾಯಿದೆಗಳೂ ಅಮೆರಿಕಾನುಚಿತ ಕಲಾಪಗಳ (ಅನ್-ಅಮೆರಿಕನ್ ಆಕ್ಟಿವಿಟೀಸ್) ವಿಚಾರಣೆಗಳೂ ನಡೆದವು. ಕಮ್ಯೂನಿಸ್ಟ್ ಪಕ್ಷಕ್ಕೂ ಸರ್ಕಾರಕ್ಕೂ ನಡುವೆ ದೀರ್ಘ ಹೋರಾಟವೇ ನಡೆಯಿತು. ಬುಡಮೇಲು ಮಾಡುವ ಚಳವಳಿಯ ನಿವಾರಣೆಗಾಗಿ ಸರ್ಕಾರ ತಂದ ನಿರ್ಬಂಧ ಕಾಯಿದೆಯನ್ನು (1950) ಅಲ್ಲಿಯ ಪರಮೋಚ್ಛನ್ಯಾಯಾಲಯವೂ ಎತ್ತಿಹಿಡಿಯಿತು (1961).ಆ ಕಾಯಿದೆಗೆ ಅನುಸಾರವಾಗಿ ನೋಂದಾಯಿಸಿಕೊಳ್ಳಲು ಪಕ್ಷ ನಿರಾಕರಿಸಿತು. ಅನೇಕ ನಾಯಕರು ಭೂಗತರಾದರು.
ಚೀನ
ಬದಲಾಯಿಸಿರಷ್ಯದ ನಿರ್ದೇಶನದಲ್ಲಿ ಚೀನೀ ಕಮ್ಯೂನಿಸ್ಟ್ ಪಕ್ಷ 1921ರಲ್ಲಿ ಸ್ಥಾಪಿತವಾಯಿತು. ಅಧ್ಯಕ್ಷ ಸುನ್ ಯಾತ್ಸೇನನ ಕೌಮಿಂಟಾಂಗ್ ಪಕ್ಷದೊಂದಿಗೆ ಕಮ್ಯೂನಿಸ್ಟರು ಸಹಕರಿಸುತ್ತಿದ್ದರಾದರೂ ಅವನ ಮರಣದ (1925) ಅನಂತರ ಅಧಿಕಾರಕ್ಕೆ ಬಂದ ಬಲಪಂಥೀಯರ ಆಡಳಿತಕ್ಕೂ ಕಮ್ಯೂನಿಸ್ಟ್ ಪಕ್ಷಕ್ಕೂ ವಿರಸ ಬೆಳೆಯಿತು. ಚಿಯಾಂಗ್ ಕೈ-ಷೆಕ್ ಸರ್ಕಾರ ಕಮ್ಯೂನಿಸ್ಟ್ ಪಕ್ಷವನ್ನು ಬಹಿಷ್ಕರಿಸಿತು. ಚೀನೀ ಕಮ್ಯೂನಿಸ್ಟ್ ಪಕ್ಷದ ಸ್ಥಾಪಕರಲ್ಲೊಬ್ಬನಾದ ಮಾವೊ ಒಳನಾಡಿಗೆ ಹೋಗಿ, ಗ್ರಾಮಗಳನ್ನು ವಿಮೋಚನೆಗೊಳಿಸಿ ಕೊನೆಗೆ ನಗರವನ್ನು ಸುತ್ತುವರಿದು ಆಕ್ರಮಿಸಿಕೊಳ್ಳಬೇಕೆಂಬುದಾಗಿ ಯೋಜನೆ ಹೂಡಿದ. ಈತನ ಗ್ರಾಮೀಣ ಕಮ್ಯೂನಿಸಂ ವಿಧಾನ ಏಷ್ಯನ್ ಮತ್ತು ಇತರ ಹಿಂದುಳಿದ ರಾಷ್ಟ್ರಗಳ ಕಮ್ಯೂನಿಸ್ಟ್ ಚಳವಳಿಗೆ ಮೇಲ್ಪಂಕ್ತಿಯಾಯಿತು. ಕಮ್ಯೂನಿಸ್ಟರ ಪ್ರಭಾವವನ್ನು ಹತ್ತಿಕ್ಕಲು ಕೌಮಿಂಟಾಂಗ್ ಸರ್ಕಾರ ನಾನಾ ಬಗೆಯ ಸಾಹಸಮಾಡಿ ಅವರನ್ನು ಉತ್ತರ ಷೆನ್ಸಿ ಪ್ರಾಂತ್ಯಕ್ಕೆ ಹಿನ್ನಡೆಯುವಂತೆ ಮಾಡಿತು. ಈ ಘಟನೆ ದೀರ್ಘಯಾತ್ರೆ (ಲಾಂಗ್ ಮಾರ್ಚ್) ಎಂದು ಚೀನೀ ಐತಿಹಾಸಿಕ ಪ್ರಾಮುಖ್ಯಗಳಿಸಿದೆ.ಆ ವೇಳೆಗೆ ಜಪಾನ್ ಚೀನದ ಆಕ್ರಮಣದಲ್ಲಿ ತೊಡಗಿತು. ಮಾವೊ ಜಪಾನ್ ವಿರೋಧಿ ಚಳವಳಿ ಹೂಡಿದ. ಜಪಾನನ್ನೆದುರಿಸಲು ಕಮ್ಯೂನಿಸ್ಟರು ಚಿಯಾಂಗನ ಸರ್ಕಾರದೊಂದಿಗೆ ಸಹಕರಿಸಿದರು. ಸರ್ಕಾರದೊಂದಿಗೆ ಹೊಸ ಒಪ್ಪಂದವಾಯಿತು. ಚಿಯಾಂಗ್ ಸರ್ಕಾರದ ಸೈನ್ಯದಲ್ಲಿ ಚೀನೀಕೆಂಪುಸೇನೆಯೂ ಸೇರಿತಾದರೂ ಅದು ತನ್ನ ಪ್ರತ್ಯೇಕತೆಯನ್ನು ಕಾಯ್ದುಕೊಂಡಿತು. ಎರಡು ಪಕ್ಷಗಳೂ ತಂತಮ್ಮ ಶಕ್ತಿ ಬೆಳೆಸಿಕೊಳ್ಳಲು ಪರಸ್ಪರ ಸ್ಪರ್ಧಿಸಿದುವು. ಎರಡನೆಯ ಮಹಾಯುದ್ಧದ ಕೊನೆಯ ಘಟ್ಟಮುಟ್ಟಿ, ಜಪಾನು ಶರಣಾಗತವಾದಾಗ ಕಮ್ಯೂನಿಸ್ಟ್ ಪಕ್ಷದ ಜನತಾ ವಿಮೋಚನಾ ಸೇನೆ ಪ್ರಬಲವಾಗಿ, ಚಿಯಾಂಗ್ ಸರ್ಕಾರದ ವಿರುದ್ಧ ವ್ಯಾಪಕ ಯುದ್ಧ ಹೂಡಿತು. 1949ರಲ್ಲಿ ಚೀನದಲ್ಲಿ ಕಮ್ಯೂನಿಸ್ಟರ ಅಧಿಕಾರ ಸ್ಥಾಪಿತವಾಯಿತು. ಅಲ್ಲಿಂದೀಚೆಗೆ ಚೀನೀ ಕಮ್ಯೂನಿಸ್ಟ್ ಪಕ್ಷದ ಧೋರಣೆ ಮಾಸ್ಕೋವಿನಿಂದ ಪ್ರತ್ಯೇಕವಾಗಿ ತನ್ನ ವಿಶಿಷ್ಟ ಸಂಸ್ಕಾರಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತಿದೆ. ಚೀನ-ಸೋವಿಯತ್ ಕಮ್ಯೂನಿಸ್ಟ್ ಗುಂಪುಗಳ ಸಿದ್ಧಾಂತಿಕ ಭಿನ್ನತೆಯನ್ನು ಈ ಲೇಖನದ ಆದಿಯಲ್ಲಿ ಸ್ಥೂಲವಾಗಿ ವಿವೇಚಿಸಲಾಗಿದೆ (ನೋಡಿ- ಕಮ್ಯೂನಿಸಂ; ಕಮ್ಯುನಿಸ್ಟ್ ಪಕ್ಷಗಳು,-ಭಾರತದಲ್ಲಿ).