ಫ್ರೆಡ್ರಿಕ್ ಎಂಗೆಲ್ಸ್
ಫ್ರೆಡ್ರಿಕ್ ಎಂಗೆಲ್ಸ್ 1820-1895. ಸಾಮೂಹಿಕ ಸ್ವಾಮ್ಯವಾದಿ (ಕಮ್ಯೂನಿಸ್ಟ್). ಶ್ರಮಜೀವಿಗಳ ನಾಯಕ. ಕಾರ್ಲ್ ಮಾರ್ಕ್ಸ್ ನೊಡನೆ ಸಹಕರಿಸಿ ಚಾರಿತ್ರಿಕ ಭೌತವಾದ ಬೆಳೆಸಿದವನು.
ಬಾಲ್ಯ
ಬದಲಾಯಿಸಿಜರ್ಮನಿಯ ಬಾರ್ಮೆನ್ ಕೈಗಾರಿಕಾ ಪಟ್ಟಣದಲ್ಲಿ 1820ರ ನವೆಂಬರ್ 28ರಂದು ಜನಿಸಿದ; ಲಂಡನ್ನಿನಲ್ಲಿ ಸತ್ತ ತಂದೆಯ ಎಂಟು ಮಕ್ಕಳ ಪೈಕಿ ಎಂಗೆಲ್ಸನೇ ಹಿರಿಯ. ತಂದೆ ಹತ್ತಿಗಿರಣಿಯೊಂದರ ಒಡೆಯ; ಇನ್ನೊಂದರ ಪಾಲುದಾರ; ವ್ಯವಹಾರವಿದೆ. ಎಂಗೆಲ್ಸ್ ಬೆಳೆದದ್ದು ಸಾಂಪ್ರದಾಯಿಕ ಮತದ ವಾತಾವರಣದಲ್ಲಿ. ಬಾರ್ಮೆನ್, ಎಲ್ಬರ್‍ಫೆಲ್ಡ್‍ಗಳಲ್ಲಿ ಈತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿದ ಮೇಲೆ ನ್ಯಾಯಶಾಸ್ತ್ರ ವ್ಯಾಸಂಗ ಮಾಡಬೇಕೆಂಬ ಉದ್ದೇಶದಿಂದ ಮೊದಲು ತನ್ನ ತಂದೆಯ ಉದ್ಯಮದಲ್ಲೂ ಅನಂತರ ಬ್ರೆಮೆನ್‍ನಲ್ಲೂ ವ್ಯಾಪಾರ ಸಮಸ್ಯೆಗಳನ್ನು ಕುರಿತು ಅಧ್ಯಯನ ನಡೆಸಿದ. ಆಮೇಲೆ ಒಂದು ವರ್ಷ ಸೈನ್ಯಸೇವೆಯನ್ನೂ ಸಲ್ಲಿಸಿದ್ದುಂಟು. ಅದೇ ಸಂದರ್ಭದಲ್ಲಿ ಬಲಿಗನ್ ವಿಶ್ವವಿದ್ಯಾಲಯದಲ್ಲಿ ಮತಧರ್ಮಗಳ ಇತಿಹಾಸವನ್ನು ವಿಶೇಷ ಅಧ್ಯಯನದ ವಿಷಯವಾಗಿ ಆಯ್ದುಕೊಂಡು ಅಭ್ಯಾಸ ಮಾಡಿದ. ಅಲ್ಲಿ ಶೆಲ್ಲಿಂಗನ ವಿಜ್ಞಾನ ವಿರೋಧಿ ನಿಲುವನ್ನು ಅಂಧಶ್ರದ್ಧೆ ಮತ್ತು ಗುಲಾಮಿ ಭಕ್ತಿಯೆಂದು ಕಟುವಾಗಿ ಟೀಕಿಸಿದ ಎಂಗೆಲ್ಸ್. 1842ರಲ್ಲಿ ಮತ್ತೆ ತನ್ನ ವಾಣಿಜ್ಯ ತರಬೇತಿ ಮುಂದುವರಿಸಿ ತಂದೆಯ ಪ್ರತಿನಿಧಿಯಾಗಿ ಮ್ಯಾಂಚೆಸ್ಟರಿನಲ್ಲಿ (ಇಂಗ್ಲೆಂಡ್) ನೆಲೆಸಿ ಅರಳೆಯ ವ್ಯಾಪಾರದಲ್ಲಿ ನಿರತನಾದ. ಅದು ಹೆಚ್ಚು-ಕಡಿಮೆ ಎಂಗೆಲ್ಸನ ಬಾಳು ಕವಲೊಡೆದ ಕಾಲ. ಆಗಲೆ ಎಂಗೆಲ್ಸ್ ಹತ್ತಾರು ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿಕೊಂಡಿದ್ದ.
ಮಧ್ಯಮವರ್ಗದ ಕ್ಯಾಲ್ವಿನಿಸ್ಟ್ ದೈವಜ್ಞಾನಿಗಳ ಶ್ರದ್ಧಾಭಕ್ತಿ ಪುರಸ್ಸರವಾದ ತೃಪ್ತ ಮನೋಭಾವವೂ ಕುಡುಕ ಕಾರ್ಮಿಕವರ್ಗದ ಕಷ್ಟನಿಷ್ಠುರಗಳೂ ಎಳೆವಯಸ್ಸಿನ ಎಂಗೆಲ್ಸನ ಮೇಲೆ ತೀವ್ರ ಪರಿಣಾಮ ಬೀರಿದವು. ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಈತ ಆಸ್ವಾಲ್ಡ್ ಎಂಬ ಲೇಖನ ನಾಮದಿಂದ ಈ ಪರಿಸ್ಥಿತಿಯನ್ನು ಬಣ್ಣಿಸಿ ಬರೆದ. ಆಗಲೇ ಎಂಗೆಲ್ಸನ ಬರೆವಣಿಗೆಯ ಶಕ್ತಿ ಪ್ರಕಟವಾಯಿತು. ಕ್ರಮಕ್ರಮವಾಗಿ ಎಂಗೆಲ್ಸ್ ಮತಶ್ರದ್ಧೆಯ ಮನೋಭಾವದಿಂದ ಸಿಡಿದು ದೂರ ಸಾಗಿದ. 1842ರಲ್ಲಿ ಇದು ಸಂಪೂರ್ಣವಾಯಿತು. ಈ ದೃಷ್ಟಿಯಿಂದಲೂ ಆ ವರ್ಷ ಎಂಗೆಲ್ಸನ ಬಾಳಿನಲ್ಲಿ ಮಹತ್ತ್ವದ್ದು. ವಿಶ್ವವಿದ್ಯಾನಿಲಗಳಿಂದ ಯಾವ ದೊಡ್ಡ ಪದವಿಯನ್ನೂ ಪಡೆಯದೆ ತನ್ನ ಮೇಧಾವಿತನವನ್ನು ಬೆಳಗಿಸಿರುವ ಮಹಾನ್ ಚಿಂತಕರ ಸಾಲಿನಲ್ಲಿ ಎಂಗೆಲ್ಸ್‍ಗೆ ಖಚಿತವಾದ ಸ್ಥಾನವಿದೆ.
ಕಾರ್ಲ್ ಮಾರ್ಕ್ಸ್ ಜತೆ ಸಹಯೋಗ
ಬದಲಾಯಿಸಿ1842ರಲ್ಲಿ ಎಂಗೆಲ್ಸ್ ಇಂಗ್ಲೆಂಡಿಗೆ ಬಂದಾಗ ಅಲ್ಲಿನ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳು ಈತನ ತೀವ್ರ ಪರಿಶೀಲನೆಗೆ ಒಳಗಾದುವು. ಕಾರ್ಮಿಕ ಸ್ಥಿತಿ ಸುಧಾರಣೆಗಾಗಿ ಇಂಗ್ಲೆಂಡಿನಲ್ಲಿ ನಡೆಯುತ್ತಿದ್ದ ಚಳುವಳಿಗಳಿಂದ ಎಂಗೆಲ್ಸನ ಆಸಕ್ತಿ ಕೆರಳಿತು. ಅಲ್ಲಿನ ಪತ್ರಿಕೆಗಳಿಗೆ ಎಂಗೆಲ್ಸ್ ಲೇಖನ ಬರೆದ. ಯೂರೋಪಿನ ಪರಿಸ್ಥಿತಿಯ ಬಗ್ಗೆ ಕಣ್ಣಾರೆ ಕಂಡ ಅನುಭವಕ್ಕೆ ಆಗ ಈತ ಇಂಗ್ಲೆಂಡಿನ ಅರ್ಥಶಾಸ್ತ್ರಜ್ಞರ ವಿಚಾರಗಳನ್ನು ಜೋಡಿಸಿ ನೋಡಿದ. ಇಂಗ್ಲೆಂಡಿನ ಕೆಲಸಗಾರರ ಸ್ಥಿತಿಗತಿಗಳನ್ನು ಕುರಿತು ಒಂದು ಗ್ರಂಥವನ್ನೂ ಅರ್ಥಶಾಸ್ತ್ರವನ್ನು ವಿಮರ್ಶಿಸಿ ಇನ್ನೊಂದು ಗ್ರಂಥವನ್ನೂ ಬರೆದ. ಶ್ರಮ ಜೀವಿಗಳಿಗೆ ಉತ್ತಮ ಭವಿಷ್ಯವಿದೆಯೆಂದೂ ಇವರು ಚರಿತ್ರಾರ್ಹ ಚಳವಳಿ ಕೈಕೊಳ್ಳುವ ಅರ್ಹತೆ ಪಡೆದಿದ್ದಾರೆಂದು ಎಂಗೆಲ್ಸ್ ಈ ಗ್ರಂಥಗಳಲ್ಲಿ ಪ್ರತಿಪಾದಿಸಿದ್ದಾನೆ. ಸಾಮಾಜಿಕ ಪ್ರಕ್ರಿಯೆಗಳಲ್ಲಿ ಅಡಗಿರುವ ಭೌತವಾದ ಪ್ರೇರಣೆಗಳನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ. ಕಾರ್ಲ್ ಮಾಕ್ರ್ಸನೂ ಹೆಗೆಲನ ಪಂಥದವನಾಗಿದ್ದ ಆರ್ನಾಲ್ಡ್ ರೂಜûನೂ ಸಂಪಾದಿಸಿ ಪ್ರಕಟಿಸುತ್ತಿದ್ದ ಪತ್ರಿಕೆಯೊಂದಕ್ಕೆ ಎಂಗೆಲ್ಸ್ ಬರೆದ ಲೇಖನವೊಂದು (1844) ಮಾಕ್ರ್ಸನ ಗಮನ ಸೆಳೆಯಿತು. ವೈಜ್ಞಾನಿಕ ಸಮಾಜವಾದದ ಸಾಮಾನ್ಯ ತತ್ತ್ವಗಳನ್ನು ಈ ವಯಸ್ಸಿನಲ್ಲೇ ಈತ ಚೆನ್ನಾಗಿ ತಿಳಿದುಕೊಂಡಿದ್ದಾನೆಂದು ಮಾರ್ಕ್ಸ್ ಹೊಗಳಿದ. ಉದಾರವಾದಿ ಆರ್ಥಿಕ ಸಿದ್ಧಾಂತಗಳಲ್ಲಿನ ವಿರೋಧಾಭಾಸಗಳನ್ನು ಈತ ಇಲ್ಲಿ ಎತ್ತಿ ತೋರಿಸಿದ್ದಾನಲ್ಲದೆ, ಎಲ್ಲ ಆರ್ಥಿಕ ಘಟನೆಗಳೂ ಖಾಸಗಿ ಸ್ವತ್ತನ್ನೇ ಆಧರಿಸಿರುವುದರಿಂದ ಅದನ್ನು ರದ್ದು ಮಾಡಬೇಕೆಂದೂ ವಾದಿಸಿದ್ದಾನೆ. ಈ ಲೇಖನದಿಂದಾಗಿ ಮಾರ್ಕ್ಸ್-ಎಂಗೆಲ್ಸ್‍ರ ಪರಿಚಯ ಪತ್ರಮುಖೇನ ಬೆಳೆಯಿತು. ಅದೇ ವರ್ಷ ಇಬ್ಬರೂ ಪ್ಯಾರಿಸಿನಲ್ಲಿ ಭೇಟಿಯಾದರು. ಪ್ರಥಮ ಸಂದರ್ಶನದಲ್ಲೇ ಒಬ್ಬರನ್ನೊಬ್ಬರು ಸಂಪೂರ್ಣ ಅರಿತುಕೊಂಡರು; ಒಬ್ಬರೊಂದಿಗೊಬ್ಬರು ಬೆರೆತುಕೊಂಡರು.
ಕ್ಷಿಪ್ರದಲ್ಲೇ ಅವರಿಬ್ಬರಲ್ಲಿ ಅನುಪಮ ಸ್ನೇಹಭಾವ ಬೆಳೆಯಿತು. ಅಲ್ಲಿಂದ ಮುಂದೆ ಸುಮಾರು ನಲವತ್ತು ವರ್ಷಕಾಲ- ಕಾರ್ಲ್ ಮಾಕ್ರ್ಸನ ಅಂತ್ಯಕಾಲದ ವರೆಗೆ-ಇಬ್ಬರೂ ಸೇರಿ ಚಾರಿತ್ರಿಕ ಭೌತವಾದವನ್ನು ರೂಪಿಸಿದರಲ್ಲದೆ ಶ್ರಮಜೀವಿಗಳ ವಿಮೋಚನೆಗಾಗಿ ಕ್ರಾಂತಿಕಾರಿ ಚಳವಳಿ ಪ್ರಾರಂಭಿಸಿದರು. ಇವರು ಕೂಡಿ ಬರೆದ ಹೋಲಿ ಫ್ಯಾಮಿಲಿ ಎಂಬ ಗ್ರಂಥ 1844ರಲ್ಲೂ ದಿ ಜರ್ಮನ್ ಐಡಿಯಾಲಜಿ 1846ರಲ್ಲೂ ಪ್ರಕಟವಾದವು. ತತ್ತ್ವಶಾಸ್ತ್ರದ ಗ್ರಹಿಕೆಗಳನ್ನು ಯುವ ಹೆಗೆಲಿಯನ್ನರು "ವಿಮರ್ಶಾತ್ಮಕ ವಿಮರ್ಶೆ" ಎಂಬ ಹೆಸರಿನಲ್ಲಿ ಪ್ರಚುರಪಡಿಸುತ್ತಾ ಆತ್ಯಂತಿಕ ಸ್ವಯಂ ಪ್ರಜ್ಞೆಯನ್ನು ವೈಭವೀಕರಿಸುತ್ತಿದ್ದರು. ಅಮೂರ್ತ ವಿಷಯಗಳ ಜಿಜ್ಞಾಸೆಯೇ ಪರಮಾರ್ಥ ಸಾಧನೆಯೆಂಬ ಅವರ ನಿಲುವನ್ನು ಖಂಡತುಂಡವಾಗಿ ವಿರೋಧಿಸುವ ಗ್ರಂಥ "ದಿ ಹೋಲಿ ಫ್ಯಾಮಿಲಿ", "ದಿ ಜರ್ಮನ್ ಐಡಿಯಾಲಜಿ"ಯಲ್ಲಿ ಚಾರಿತ್ರಿಕ ಭೌತವಾದದ ಪರಿಕಲ್ಪನೆಯನ್ನು ವಿಸ್ತಾರವಾಗಿ ಚರ್ಚಿಸಲಾಗಿದೆ ಮತ್ತು ಅದು ವೈಜ್ಞಾನಿಕ ಸಾನ್ಯವಾದಕ್ಕೆ ದಾರ್ಶನಿಕ ಬುನಾದಿಯನ್ನು ರಚಿಸಿಕೊಟ್ಟಿತೆಂದು ಪರಿಗಣನೆಗೆ ಬಂದಿದೆ.
1847ರಲ್ಲಿ ಇವರು ಸಾಮೂಹಿಕ ಸ್ವಾಮ್ಯವಾದಿ ಒಕ್ಕೂಟ (ಕಮ್ಯೂನಿಸ್ಟ್ ಲೀಗ್) ಸ್ಥಾಪಿಸಿದ್ದಲ್ಲದೆ ಮರುವರ್ಷ ಕಮ್ಯೂನಿಸ್ಟ್ ಪಕ್ಷದ ಪ್ರಣಾಳಿಕೆಯನ್ನು ಘೋಷಿಸಿದರು. ವಿಶ್ವದ ಕೆಲಸಗಾರರೇ, ಒಂದುಗೂಡಿ-ಎಂಬುದು ಇದರ ಮುಖ್ಯ ಘೋಷಣೆ. ಅದರ ಮನೋಜ್ಞ ಭಾಷೆ, ಪ್ರಬಲವಾದ ರೂಪಕಗಳು, ಕಾವ್ಯಾತ್ಮಕ ಶೈಲಿ ಮತ್ತು ಚಾರಿತ್ರಿಕ ವಿಶ್ಲೇಷಣೆಗಳು ಪ್ರಣಾಲಿಕೆಗೆ ಒಂದು ಅನನ್ಯತ್ವವನ್ನು ತಂದುಕೊಟ್ಟಿವೆ. ಮಾನವ ಜನಾಂಗದ ಭವಿಷ್ಯದ ಬಗೆಗಿನ ಕನಸು-ಕಾಳಜಿಗಳು, ಆ ಭವಿಷ್ಯದ ನಿರ್ಮಿತಿಗೆ ಸಂಘಟನೆಯ ಕೊಡುಗೆ, ಕಾರ್ಮಿಕ ವರ್ಗದ ಐತಿಹಾಸಿಕ ಪಾತ್ರ, ಸಾಮಾಜಿಕ ವಿಕಾಸದ ವೈಜ್ಞಾನಿಕ ವಿವರಣೆ ಮತ್ತು ಸಾಂದ್ರವಾದ ಮಾನವೀಯತೆಯ ಪ್ರಕಾಶ, ಇವೆಲ್ಲಾ ಪ್ರಣಾಲಿಕೆಯನ್ನು ಒಂದು ಅಸಾಧಾರಣ ಕೃತಿಯನ್ನಾಗಿಸಿದೆ. ಇದೇ ಕಾಲದಲ್ಲಿ ಎಂಗೆಲ್ಸ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಶ್ರಮಜೀವಿಗಳ ಪರವಾಗಿ ಪ್ರಜಾಪ್ರಭುತ್ವ ಪಕ್ಷದ ಬೆಂಬಲ ದೊರಕಿಸಿಕೊಂಡ. 1848ರ ಕ್ರಾಂತಿಯ ಅನಂತರ ಎಂಗೆಲ್ಸನೂ, ಮಾಕ್ರ್ಸನೂ ಕೊಲೋನ್‍ಗೆ ಹೋದರು. ಎಂಗೆಲ್ಸ್ ಅಲ್ಲಿ ಪತ್ರಿಕೆಯೊಂದರ ಸಂಪಾದಕನಾದ. ಮಾಕ್ರ್ಸನೇ ಈ ಪತ್ರಿಕೆಯ ಪ್ರಕಾಶಕ. ಮಾಕ್ರ್ಸನಿಗಿಂತ ಎಂಗೆಲ್ಸನಿಗೆ ಪತ್ರಿಕೋದ್ಯಮವೆಂಬುದು ನೀರು ಕುಡಿದ ಹಾಗೆ ಸುಲಭವಾಗಿತ್ತು. ಈ ಸಮಯದಲ್ಲಿ ಎಂಗೆಲ್ಸ್ ಬರೆದ ಲೇಖನಗಳಿಗಾಗಿ ಈತನನ್ನು ದಸ್ತಗಿರಿಮಾಡಲು ಅನೇಕ ಬಾರಿ ವಾರೆಂಟು ಹೊರಟಿತ್ತು. ಎಲ್ಟರ್‍ಫೆಲ್ಡಿನಲ್ಲಿ ನಡೆದ ಪ್ರಜೆಗಳ ಬಂಡಾಯವೊಂದರಲ್ಲಿ ಎಂಗೆಲ್ಸನ ಕೈಯೂ ಇತ್ತು. ಜರ್ಮನಿಯು ಐಕ್ಯಗೊಂಡು ಒಂದು ರಾಹ್ಯ ಪ್ರಭುತ್ವವಾಗಬೇಕೆಂಬುದು ಅಂದಿನ ಘೋಷಣೆಯಾಗಿತ್ತು, ಫ್ರಾಂಕ್‍ಫರ್ಟ್‍ನಲ್ಲಿದ್ದ ರಾಷ್ಟ್ರೀಯ ಶಾಸನಸಭೆಯು ಆ ನಿಟ್ಟಿನಲ್ಲಿ ಒಂದು ಸಂವಿಧಾನವನ್ನು ರೂಪಿಸಿತ್ತು. ಪ್ರಷ್ಯ ಮುಂತಾದ ಭಾಗಗಳ ಸರ್ಕಾರಗಳು ಅದನ್ನು ತಿರಸ್ಕರಿಸಿದ್ದರಿಂದ ಪ್ರಜಾಪ್ರಭುತ್ವವಾದಿಗಳು ಹೋರಾಟಕ್ಕಿಳಿದಿದ್ದರು. ಡ್ರೆಸ್ಡೆನ್‍ನಲ್ಲಿ ಆರಂಭವಾದ ಹೋರಾಟವು ಇಡೀ ದೇಶವನ್ನು ವ್ಯಾಪಿಸಿತ್ತು. ಬಾರ್ಮೆನ್‍ನ ಬಂಡುಕೋರರ ಅಪೇಕ್ಷೆಯಂತೆ ಏಂಗೆಲ್ಸ್ ನಾಯಕತ್ವವನ್ನು ತೊರೆಯಬೇಕಾಯಿತು. ಎಂಗೆಲ್ಸ್ ಎದೆಗುಂದಲಿಲ್ಲ. ಜರ್ಮನಿಯಲ್ಲಿ ಅಲ್ಲಲ್ಲಿ ನಡೆದ ಸಶಸ್ತ್ರ ದಂಗೆಗಳನ್ನು ಇಡೀ ಜರ್ಮನಿಗೇ ವಿಸ್ತರಿಸಿ ಕ್ರಾಂತಿ ಸಂಭವಿಸುವಂತೆ ಮಾಡಬೇಕೆಂದು ಈತನೂ ಮಾಕ್ರ್ಸನೂ ಕೂಡಿ ಶ್ರಮಿಸಿದರು. ಆದರೆ ಈ ಬಂಡಾಯವೂ ಮುರುಟಿಕೊಂಡಿತು. ಎಂಗೆಲ್ಸ್ ಆ ದೇಶ ಬಿಟ್ಟ. ಲಂಡನ್ನಿಗೆ ಹೋಗಿ ಅಲ್ಲಿ ತನ್ನ ಈ ಅನುಭವಗಳನ್ನು ಕುರಿತು ಲೇಖನ ಮಾಲೆ ಬರೆಯುವುದರಲ್ಲಿ ಉದ್ಯುಕ್ತನಾದ. ಜರ್ಮನಿಯ ರೈತಯುದ್ಧವನ್ನು ಕುರಿತ ಕೃತಿ ಹೊರಬಿದ್ದದ್ದು ಲಂಡನ್ನಿನಲ್ಲಿ (1850). ರೈತರ ಕ್ಷೋಭೆಯಿಂದ ಜರ್ಮನಿಯಲ್ಲಿ ಕ್ರಾಂತಿ ಸಂಭವಿಸುವುದೆಂಬುದು ಈತನ ಆಸೆಯಾಗಿತ್ತು. ಮಾರ್ಟಿನ್ ಲೂಥರ್ ಮತ್ತು ಥಾಮಸ್ ಮುನ್ಸರ್ ನಡುವಿನ ವ್ಯತ್ಯಾಸವನ್ನು ನಿರೂಪಿಸುವ ಗ್ರಂಥದಲ್ಲಿ ಇದನ್ನು ಆಮೂಲಾಗ್ರವಾಗಿ ಪರಿಶೀಲಿಸಲಾಗಿದೆ. ರೈತಾಪಿ ಜನರನ್ನು ತೀವ್ರ ಹೋರಾಟಕ್ಕೆ ಸಜ್ಜುಗೊಳಿಸಿದ್ದ ಮುನ್ಸರನನ್ನು ಲೂಥರ್ ವಿರೋಧಿಸಿದ, ಅವನನ್ನು ಸೈತಾನನ ಪ್ರತಿನಿಧಿಯೆಂದು ಬಣ್ಣಿಸಿದ. ಅತ್ಯಂತ ಕ್ರಾಂತಿಕಾರಿ ಘಟ್ಟದಲ್ಲಿ ಜರ್ಮನಿಯ ರೈತಾಪಿ ಜನ ಸೋತುಹೋದರು. ಅದನ್ನು ಸ್ಮರಿಸುತ್ತಾ ಎಂಗೆಲ್ಸ್ ಮತ್ತೆ ಅಂತಹ ಸ್ಥಿತಿ ಮರುಕಳಿಸದಿರುವಂತೆ ಹೋರಾಟವನ್ನು ರೂಪಿಸಲು ಮುಂದಾದ. 1792ರ ಅನಂತರದ ಫ್ರೆಂಚ್ ಕ್ರಾಂತಿಯ ಯುದ್ಧಗಳನ್ನು ಕುರಿತು ಎಂಗೆಲ್ಸ್ ಅಭ್ಯಾಸ ನಡೆಸಿ, ಭಾವೀ ಕ್ರಾಂತಿಯ ಸೈನಿಕ ನಾಯಕತ್ವದ ಬಗ್ಗೆ ಅನೇಕ ಸೂತ್ರ ರಚಿಸಿದ. ಈ ಕುರಿತು ಎಂಗೆಲ್ಸ್ ಬರೆದ ಲೇಖನಗಳು ಮಾಕ್ರ್ಸನವೆಂದು ಆಗ ತಪ್ಪಾಗಿ ಬಗೆಯಲಾಗಿತ್ತು.
1854 ರಿಂದ 1870ರ ವರೆಗೆ ಎಂಗೆಲ್ಸ್ ಮ್ಯಾಂಚೆಸ್ಟರಿನಲ್ಲಿ ತನ್ನ ತಂದೆಯ ಉದ್ಯಮದಲ್ಲಿ ಮೊದಲು ಉದ್ಯೋಗಿಯಾಗಿಯೂ ಆಮೇಲೆ ಪಾಲುದಾರನಾಗಿಯೂ ಕೆಲಸ ಮಾಡಿದ. ಆ ಉದ್ಯಮದಲ್ಲೂ ಈತ ನಿಷ್ಣಾತ. ಆದರೆ ಇವನಿಗೆ ಅದರಲ್ಲಿ ಆಸ್ಥೆಯೇನೂ ಇರಲಿಲ್ಲ. ಈ ಕಾಲದಲ್ಲಿ ಎಂಗೆಲ್ಸ್ ಸೈನಿಕ ವಿಜ್ಞಾನ ಕುರಿತು ಬರೆದ ಲೇಖನಗಳಿಗೆ ಎಲ್ಲ ಕ್ಷೇತ್ರಗಳಿಂದಲೂ ಪ್ರಶಂಸೆ ಹರಿದು ಬಂತು. ಜನರಲ್ ಎಂದು ಈತನ ಸ್ನೇಹಿತರು ಇವನನ್ನು ಸಂಬೋಧಿಸಲಾರಂಭಿಸಿದರು. ಸೈನ್ಯದ ನಾನಾ ವಿಭಾಗಗಳನ್ನು ಕುರಿತು ನ್ಯೂ ಅಮೆರಿಕನ್ ವಿಶ್ವಕೋಶಕ್ಕೆ ಕೂಡ ಈತ ಲೇಖನಗಳನ್ನು ಬರೆದ. ನಾನಾ ದೇಶಗಳ ಸೈನಿಕ ಶಕ್ತಿಗಳ ಬಗ್ಗೆ ಎಂಗೆಲ್ಸ್ ಮಾಡಿರುವ ವಿವೇಚನೆ ಶಾಸ್ತ್ರೀಯವಾದದ್ದು. ಈ ಕಾಲದಲ್ಲಿ ಮಾಕ್ರ್ಸನೊಡನೆ ಈತ ಪತ್ರ ಸಂಪರ್ಕ ಇಟ್ಟುಕೊಂಡಿದ್ದ.
ಎಂಗೆಲ್ಸನ ಕಾರ್ಯ ಚಟುವಟಿಕೆಯ ಮುಂದಿನ ಘಟ್ಟ ಲಂಡನ್ನಿನಲ್ಲಿ (1870). 1864ರಲ್ಲಿ ಸ್ಥಾಪಿತವಾಗಿದ್ದ ಮೊದಲನೆಯ ಅಂತರರಾಷ್ಟ್ರೀಯಕ್ಕೆ (ಫಸ್ಟ್ ಇಂಟರ್‍ನ್ಯಾಷನಲ್) ಈತ ಸದಸ್ಯನಾದ. ಈತ ಎರಡು ಗ್ರಂಥ ಬರೆದನಲ್ಲದೆ ಇಂಗ್ಲೆಂಡಿಗೆ ಹೋಗಿ ಮಾಕ್ರ್ಸನೊಡನೆ ಸಮಾಲೋಚನೆ ನಡೆಸಿ ಮೊದಲನೆಯ ಅಂತರರಾಷ್ಟ್ರೀಯ ಸ್ಥಾಪಿಸಿದ. ಮಾರ್ಕ್ಸ್ ತನ್ನ ಮಹಾಗ್ರಂಥವಾದ ಬಂಡವಾಳ ಎಂಬ ಗ್ರಂಥವನ್ನು ಬೇಗ ಮುಗಿಸಲು ಅವನಿಗೆ ಎಲ್ಲ ಬಗೆಯ ಸಲಹೆ ಸಹಾಯ ನೀಡಿದವನು ಎಂಗೆಲ್ಸ್. ಮಾಕ್ರ್ಸನ ಮರಣಾನಂತರ ಈತ ಈ ಮಹಾಗ್ರಂಥದ ಎರಡನೆಯ ಮತ್ತು ಮೂರನೆಯ ಸಂಪುಟಗಳನ್ನು ಸಂಪಾದಿಸಿ ಅವುಗಳಿಗೆ ಒಂದು ವಿದ್ವತ್ಪೂರ್ಣವಾದ ಸಂಶೋಧನಾತ್ಮಕ ಮುನ್ನುಡಿ ಬರೆದು ಪ್ರಕಟಿಸಿದ. ತನ್ನ ಈ ಗ್ರಂಥಗಳನ್ನು ಯೂರೋಪಿನ ಇತರ ಭಾಷೆಗಳಿಗೆ ಅನುವಾದ ಮಾಡಲು ಈತ ಪಟ್ಟ ಶ್ರಮ ಅಗಾಧ. ಸ್ವತಃ ಯೂರೋಪಿನ ಹತ್ತು ಭಾಷೆಗಳಲ್ಲಿ ಎಂಗೆಲ್ಸನಿಗೆ ಪರಿಶ್ರಮವಿದ್ದದ್ದರಿಂದ ಈ ಗ್ರಂಥದ ಅನುವಾದಗಳು ಬಹಳ ಮಟ್ಟಿಗೆ ಯಶಸ್ವಿಯಾದುವೆನ್ನಬಹುದು. ಮಾರ್ಕ್ಸ್ ಪ್ರಣೀತ ಸಮಾಜವಾದದ ಬಗ್ಗೆ ಒಂದು ಪ್ರಮಾಣ ಗ್ರಂಥವಾದ ಆಂಟಿ-ಡ್ಯೂರಿಂಗ್ ರಚನೆ ಈತನ ದೊಡ್ಡ ಸಾಧನೆಗಳಲ್ಲೊಂದು. ಮಾರ್ಕ್ಸ್‍ವಾದಿ ತತ್ತ್ವಶಾಸ್ತ್ರದ ಪರಿಚಯ ಮಾಡಿಕೊಡುವ ಒಂದು ಮೌಲಿಕ ಗ್ರಂಥ ಇದು. ಸಾಮಾಜಿಕ ವಿಕಾಸದಲ್ಲಿ ಕೆಲವು ಅಬಾಧಿತ ನಿಯಮಗಳಿವೆಯೆಂಬುದನ್ನು ಪ್ರತಿಪಾದಿಸುತ್ತಾ ಗತಿತಾರ್ಕಿಕ ಭೌತವಾದದ ಮೂಲಸೂತ್ರಗಳನ್ನಿಲ್ಲಿ ವಿವರಿಸಲಾಗಿದೆ. ವಿರೋಧ ಧರ್ಮಗಳ (ಅಂದರೆ, ಸ್ವಭಾವಗಳ) ಐಕ್ಯತೆ ಮತ್ತು ಸಂಘರ್ಷ, ಪರಿಮಾಣಾತ್ಮಕ ಬದಲಾವಣೆಯಿಂದ ಗುಣಾತ್ಮಕ ಬದಲಾವಣೆ ಉಂಟಾಗುವುದು, ಮತ್ತು ನಿಷೇಧದ ನಿಷೇಧದಿಂದ ಕ್ರಮೇಣ ಉನ್ನತ ಹಂತಗಳತ್ತ ಸಾಗುವುದು-ಇವು ಪ್ರಮುಖ ಸೂತ್ರಗಳೆಂದು ನಿರೂಪಿಸಲಾಗಿದೆ. ಈ ವಿಶ್ಲೇಷಣೆಯನ್ನು ಮುಂದುವರಿಸಿ ಪ್ರಾಕೃತಿಕ ವಿಜ್ಞಾನದ ಕ್ಷೇತ್ರಕ್ಕೂ ಎಂಗೆಲ್ಸ್ ಈ ಗತಿತಾರ್ಕಿಕತೆಯನ್ನು ಅನ್ವಯಿಸಿ ಅರ್ಥೈಸಿದನು. ಮಾಕ್ರ್ಸನ ಮರಣಕ್ಕೆ ಮುಂಚೆ ಎಂಗೆಲ್ಸ್ ಬರೆದ ಈ ವಿಷಯದ ಮಹದ್ ಗ್ರಂಥವೆಂದರೆ ಡೈಯಲೆಕ್ಟಿಕ್ಸ್ ಆಫ್ ನೇಚರ್ (1873-1883). ದಿ ಆರಿಜಿನ್ ಆಫ್ ದಿ ಫ್ಯಾಮಿಲಿ, ಪ್ರೈವೇಟ್ ಪ್ರಾಪರ್ಟಿ ಅಂಡ್ ದಿ ಸ್ಟೇಟ್ (1884) ಎಂಬುದು ಮಾಕ್ರ್ಸನ ಕೊನೆಯಿಚ್ಫೆಗಳಲ್ಲೊಂದರ ಪೂರೈಕೆಗಾಗಿ ಈತ ಬರೆದದ್ದೆನ್ನಬಹುದು. ಲಡ್ವಿಗ್ ಫೇವರ್‍ಬಾಕ್ ಅಂಡ್ ದಿ ಔಟ್‍ಕಂ ಆಫ್ ಕ್ಲಾಸಿಕಲ್ ಜರ್ಮನ್ ಫಿಲಾಸಫಿ (1886) ಎಂಗೆಲ್ಸ್ ಬರೆದ ಇನ್ನೊಂದು ಪುಸ್ತಕ. ಇವೆರಡೂ ಚಾರಿತ್ರಿಕ ಭೌತವಾದದ ಪ್ರತಿಪಾದನೆಗಳು. ಕುಟುಂಬ ಹುಟ್ಟಿದಾಗ ಅದರಲ್ಲಿ ಹೆಂಗಸಿನ ಪಾತ್ರ ಪ್ರಧಾನವಾಗಿತ್ತು. ಕಾಲಾಂತರದಲ್ಲಿ ಗಂಡಸು ಪ್ರಬಲನಾದ. ಕೈಗಾರಿಕೆಯಲ್ಲಿ ಹೆಂಗಸರು ಕೆಲಸಗಾರರಾಗಿ ಸೇರಿದ ಮೇಲೆ, ಅವರು ಸ್ವತಂತ್ರರಾಗಲು ಅನುಕೂಲ ಸನ್ನಿವೇಶ ಒದಗಿದೆ-ಎಂಬುದು ಕುಟುಂಬ ಕುರಿತ ಗ್ರಂಥದ ವಿಚಾರದ ಧಾಟಿ. ಲ್ಯೂಯಿಸ್ ಹೆನ್ರಿ ಮೋರ್ಗನ್ನ "ಪ್ರಾಚೀನ ಸಮಾಜ" ಎಂಬ ಗ್ರಂಥದಿಂದ ವಿಶೇಷವಾಗಿ ಪ್ರೇರಿತವಾಗಿ ಎಂಗೆಲ್ಸ್ ಈ ಪುಸ್ತಕ ರಚಿಸಿದ್ದಾನೆ. ಆದರೆ ಸ್ವತಃ ತಾನು ಆ ಪುಸ್ತಕವನ್ನು ನೋಡಿರಲಿಲ್ಲ. ಚರಿತ್ರೆಯಲ್ಲಿ ಕಾಲಾನುಕ್ರಮವಾಗಿ ಬೆಳೆದುಬಂದ ಸಾಮಾಜಿಕ ಆರ್ಥಿಕ ಸಂರಚನೆಗಳಿಂದಾಗಿ ಸಮಾಜವು ವಿವಿಧ ಹಂತಗಳಲ್ಲಿ ಹಾದು ಬಂದಿದೆ. ಹೀಗೆ ವಿಕಸಿಸುವಾಗ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳು ಹೊಮ್ಮಿವೆ; ಆದರೆ ಅವೇನೂ ಚಿರಂತನವಲ್ಲವೆಂದು ಎಂಗೆಲ್ಸ್ ಇಲ್ಲಿ ವಾದಿಸಿದ್ದಾನೆ.
ಮಾಕ್ರ್ಸ್-ಎಂಗೆಲ್ಸರ ಜೀವನ ಸಹಯೋಗ ಪ್ರಾರಂಭವಾಗುವುದಕ್ಕೂ ಮುಂಚಿನ ಇವರಿಬ್ಬರ ಅನುಭವಗಳೂ ಸ್ಥೂಲವಾಗಿ ಒಂದೇ ತೆರನಾಗಿದ್ದುವು. ಇಬ್ಬರದೂ ಒಂದೇ ಬಗೆಯ ಮನೋಭಾವ. ಇಬ್ಬರಿಗೂ ಕಾವ್ಯದಲ್ಲಿ ತೀವ್ರವಾದ ಅಭಿರುಚಿ. ಇಬ್ಬರೂ ಮತ ಸಂಪ್ರದಾಯಗಳನ್ನು ಪ್ರತಿಭಟಿಸಿದರು; ಹೆಗೆಲನ ವಾಮಪಂಥದಿಂದ ಆರಂಭಿಸಿ ಕಮ್ಯೂನಿಸಮ್ಮಿನಲ್ಲಿ ಕೊನೆಗೊಂಡರು. ತನ್ನ ಸುತ್ತಣ ಕಾರ್ಮಿಕರ ಕಷ್ಟ ಕಾರ್ಪಣ್ಯಗಳನ್ನು ಕಂಡು ಕಡುನೊಂದು ಎಂಗೆಲ್ಸ್ ಕ್ರಾಂತಿಯ ಹಾದಿ ಹಿಡಿದ. ಆದರೆ ಮಾರ್ಕ್ಸ್ ಮತ್ತು ಎಂಗೆಲ್ಸ್‍ರದು ವಿe್ಞÁನ ಮನೋಧರ್ಮ. ಕಾರ್ಮಿಕ ವರ್ಗದ ಕಡುಬಡತನದ ಕಾರಣದಿಂದ ಅನಿವಾರ್ಯವಾಗಿ ಅದು ಕ್ರಾಂತಿಯ ಮುಂಪಡೆಯಾಗುತ್ತದೆಯೆಂಬುದಾಗಿ ಮಾರ್ಕ್ಸ್ ಪರಿಭಾವಿಸಿದ್ದು ಆತನ ಶಾಸ್ತ್ರೀಯ ವಿವೇಚನೆಯ ಫಲ. ಮಾಕ್ರ್ಸನಿಗಿಂತ ಎಂಗೆಲ್ಸ್ ಹೆಚ್ಚು ಭಾವಪರವಶನಾಗುತ್ತಿದ್ದ. ಎಂಗೆಲ್ಸ್ ಮಾಕ್ರ್ಸನಿಗೆ ಎರಡನೆಯವ. ಎಂಗೆಲ್ಸನಿಗಿಂತ ಮಾರ್ಕ್ಸ್ ಅಗಾಧವಾಗಿ ಚಿಂತನಶೀಲನಾಗಿದ್ದ; ಆದರೆ ಇಬ್ಬರೂ ಸಮಾನ ಕ್ರಾಂತಿಕಾರಿ ಮನೋಧರ್ಮದವರು.
ಆದರೂ ಜ್ಞ್ನೇತಿಹಾಸದಲ್ಲಿ ಇವರಿಬ್ಬರ ಸಹಯೋಗ ಮಿಗಿಲಾದದ್ದು. ಉದ್ಯಮಪತಿಯ ಪುತ್ರನಾಗಿದ್ದ ಎಂಗೆಲ್ಸ್ ಮಾಕ್ರ್ಸನಿಗೆ ಜೀವನಾಧಾರಿಯಾಗಿದ್ದ. ಈತನ ಮಿತ್ರ ನಿಷ್ಠೆ ಅನನ್ಯ ಸದೃಶ. ಮಾರ್ಕ್ಸ್ ಸತ್ತಮೇಲೂ ಅವನ ಕುಟುಂಬವನ್ನು ಈತ ರಕ್ಷಿಸಿದ. ಮಾಕ್ರ್ಸನಜ್ಞಾನಭಂಡಾರಕ್ಕೆ ಎಂಗೆಲ್ಸನೇ ಉತ್ತರಾಧಿಕಾರಿ; ಭಾಷ್ಯಕಾರ.
ಗಂಡುಹೆಣ್ಣುಗಳ ಸಂಬಂಧದ ಬಗ್ಗೆ ಮಾಕ್ರ್ಸನಂತೆ ಎಂಗೆಲ್ಸನೂ ಸಂಪ್ರದಾಯ ಬದ್ಧನಲ್ಲ. ಐರ್ಲೆಂಡಿನ ಒಬ್ಬ ಕಾರ್ಮಿಕ ಹೆಣ್ಣಿನೊಂದಿಗೆ (ಮೇರಿ ಬನ್ರ್ಸ್) ಈತ ಇಪ್ಪತ್ತು ವರ್ಷಕಾಲ ಅವಿವಾಹಿತ ಸಂಬಂಧ ಬೆಳೆಸಿದ್ದ. ಆಕೆ ಸತ್ತಮೇಲೆ (1863) ಅವಳ ತಂಗಿಯೊಡನೆಯೂ (ಲಿಜಿû) ಇಂಥ ಸಂಬಂಧವೇ ಮುಂದುವರಿಯಿತು. 1878ರಲ್ಲಿ ಆಕೆಯ ಮರಣಕಾಲದಲ್ಲಿ ಮಾತ್ರವೇ ಅವಳೊಂದಿಗೆ ವಿವಾಹವಿಧಿ ಪೂರೈಸಿದ್ದು.
ಈತ ಹೂಡಿದ ಕ್ರಾಂತಿ ಯುದ್ಧಗಳು ತಕ್ಷಣದಲ್ಲಿ ಸಫಲವಾಗಿದ್ದರೂ ಎಂಗೆಲ್ಸನಿಗೆ ಆ ಹಾದಿಯಲ್ಲಿ ನಂಬಿಕೆ ಹೋಗಿರಲಿಲ್ಲ. ಆದರೆ ಅವುಗಳ ವಿಧಾನ ಬದಲಾಗಬೇಕೆಂಬುದಾಗಿ ಈತ ನಂಬಿದ್ದ. ಕೆಲವು ಆದರ್ಶವಾದಿಗಳು ಮಾತ್ರವೇ ಸಂಚು ಹೂಡಿ ಗೆಲವು ಸಾಧಿಸುವುದು ಅಸಾಧ್ಯ; ಇದಕ್ಕೆ ಜನಜಾಗೃತಿ ಮುಖ್ಯ-ಎಂಬುದು ಈತನ ಕೊನೆಯರಿವು. ಬರಲಿದ್ದ ಮಹಾಯುದ್ಧವನ್ನೂ ಈತ ಮುಂಗಂಡಿದ್ದ. ಅನರ್ಥ ತಡೆಗಟ್ಟಲು ಶಸ್ತ್ರ ಸಂನ್ಯಾಸವಾಗಲೇಬೇಕೆಂದು ಎಂಗೆಲ್ಸ್ ಭಾವಿಸುತ್ತಿದ್ದ.
ಎಂಗೆಲ್ಸ್ ಕೇವಲ ಆರ್ಥಿಕ ಸಾಮಾಜಿಕ ತತ್ತ್ವದಲ್ಲಿ ಮಾತ್ರ ಆಸಕ್ತನೆಂಬುದು ಸಾಮಾನ್ಯ ಭಾವನೆ. ಪ್ರಕೃತಿ ತತ್ತ್ವಕ್ಕೆ ಸಂಬಂಧಪಟ್ಟ ಇವನ ಸಂಶೋಧನೆಗಳು ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಎಂಗೆಲ್ಸನ ಭೌತಪರತ್ವವೂ ಈತನ ಸಾಮಾಜಿಕ ತತ್ತ್ವದಷ್ಟೇ ಮುಖ್ಯ. ಹಳೆಯ ಭೌತವಾದಿಗಳಂತೆ ಭೌತಶಕ್ತಿ ಕೇವಲ ಯಾಂತ್ರಿಕವೆಂದು ಎಂಗೆಲ್ಸ್ ತಿಳಿದಿರಲಿಲ್ಲ. ಭೌತಿಕ ಸೃಷ್ಟ್ಯಾತ್ಮಕ; ಅದರ ಹೊಟ್ಟೆಯಲ್ಲಿ ಎಣಿಸಲಾಗದಷ್ಟು, ಎಂದೆಂದಿಗೂ ಮುಗಿಯದಷ್ಟು, ನೂತನ ರೂಪಗಳು ಹುದುಗಿವೆ-ಎಂಬುದು ಈತ ಪ್ರತಿಪಾದಿಸಿರುವ ನವೀನ ಭೌತಪರತ್ವ, ಜೀವನದ ಮುಖ್ಯ ಪುರುಷಾರ್ಥಗಳಾದ ಸತ್ಯ, ಸೌಂದರ್ಯ, ಸೌಕರ್ಯ, ಸೌಶೀಲ್ಯ, ಶಾಂತಿಗಳಿಗೆ ಭಾವನಾದಿಗಳು ನೀಡುವುದಕ್ಕಿಂತಲೂ ಒಂದು ಪಟ್ಟು ಮಿಗಿಲಾದ ಪ್ರಾಶಸ್ತ್ಯವನ್ನು ಇಲ್ಲಿ ನೀಡಲಾಗಿದೆ. ಡೈಯಲೆಕ್ಟಿಕ್ಸ್ ಆಫ್ ನೇಚರ್ ಎಂಬ ಗ್ರಂಥದಲ್ಲಿ ಈ ನವೀನ ತತ್ತ್ವದ ಸಮಗ್ರ ವಿವೇಚನೆಯಿದೆ.