ವಿಕ್ರಮ್ ಸಾರಾಭಾಯಿ
ವಿಕ್ರಮ್ ಸಾರಾಭಾಯಿ (೧೨ ಆಗಸ್ಟ್ ೧೯೧೯ - ೨೬ ಡಿಸೆಂಬರ್ ೧೯೭೧) ಭಾರತದ ವಿಜ್ಞಾನಿ ಮತ್ತು ಬಾಹ್ಯಾಕಾಶ ಸಂಶೋಧಕರು.[೧][೨] ಇವರನ್ನು ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ.[೩]
ವಿಕ್ರಮ್ ಸಾರಾಭಾಯಿ | |
---|---|
Born | ವಿಕ್ರಂ ಅಂಬಾಲಾಲ್ ಸಾರಾಭಾಯಿ ೧೨ ಆಗಸ್ಟ್ ೧೯೧೯ |
Died | ೩೧ ಡಿಸೆಂಬರ್ ೧೯೭೧ |
Nationality | ಭಾರತೀಯ |
Alma mater | ಕೆಂಬ್ರಿಡ್ಜ್ ವಿಶ್ವವಿದ್ಯಾಲಯ |
Known for | ಭಾರತೀಯ ಅಂತರಿಕ್ಷ ಕಾರ್ಯಕ್ರಮ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ, ಅಹ್ಮದಾಬಾದ್ |
Spouse | ಮೃಣಾಲಿನಿ ಸಾರಾಭಾಯಿ |
Awards | ಪದ್ಮಭೂಷಣ (೧೯೬೬) ಪದ್ಮವಿಭೂಷಣ (ಮರಣೋತ್ತರ) (೧೯೭೨) |
ಭಾರತದ ವ್ಯೋಮ ಸಂಶೋಧನೆ, ಉದ್ಯಮ ಮತ್ತು ಸಾಮಾಜಿಕ ಕಾರ್ಯಗಳಿಗೆ ಚಾಲನೆ ನೀಡಿದ ಭೌತವಿಜ್ಞಾನಿ. ಖ್ಯಾತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು ಮುಂಬಯಿ ಮತ್ತು ಕೇಂಬ್ರಿಜ್‍ಗಳಲ್ಲಿ ಶಿಕ್ಷಣ ಪಡೆದರು. ತದನಂತರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ವಿಶ್ವಕಿರಣ, ಭೂಕಾಂತತೆ, ಅಂತರಗ್ರಹ ವ್ಯೋಮ, ಸೂರ್ಯ-ಭೂಮಿ ಸಂಬಂಧ ಮುಂತಾದವುಗಳ ಕುರಿತು ಸಂಶೋಧನೆ ಮಾಡಿದರು. ಇದಕ್ಕೆ ಮಾರ್ಗದರ್ಶನ ಮಾಡಿದವರು ಸಿ. ವಿ. ರಾಮನ್ (1888-1979). ಉಷ್ಣವಲಯದಲ್ಲಿ ವಿಶ್ವಕಿರಣಗಳು ಎಂಬ ವಿಷಯ ಕುರಿತಾದ ಇವರ ಸಂಶೋಧನೆಗೆ ಕೇಂಬ್ರಿಜ್ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿತು (1947).
ಜನನ
ಬದಲಾಯಿಸಿಇವರ ಜನನ ಗುಜರಾತಿನ ಅಹ್ಮದಾಬಾದ್‌ನ ಶ್ರೀಮಂತ ಕುಟುಂಬದಲ್ಲಿ. ತಂದೆ ಅಂಬಾಲಾಲ್ ಸಾರಾಭಾಯ್. ತಾಯಿ ಸರಳಾದೇವಿ. ಚಿಕ್ಕಂದಿನಿಂದಲೇ ಬುದ್ಧಿವಂತನಾಗಿದ್ದ ಬಾಲಕ ಸಾಹಸಪ್ರಿಯ ಕೂಡಾ. ಇವರ ಮನೆಗೆ ಬರುತ್ತಿದ್ದ ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸಿ.ವಿ.ರಾಮನ್ ಮುಂತಾದ ಮಹನೀಯರುಗಳ ವ್ಯಕ್ತಿತ್ವ ಈ ಧೀಮಂತ ಬಾಲಕನ ಮೇಲೆ ಸಾಕಷ್ಟು ಪ್ರಭಾವ ಬೀರಿತು.
ವಿದ್ಯಾಭ್ಯಾಸ
ಬದಲಾಯಿಸಿಭಾರತದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ತಮ್ಮ ೨೦ನೇ ವಯಸ್ಸಿನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ 'ಪ್ರಕೃತಿವಿಜ್ಞಾನ'ದಲ್ಲಿ ಟ್ರೈಪಾಸ್ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾದರು.೧೯೪೭ರಲ್ಲಿ ಕೇಂಬ್ರಿದ್ಜ್‌ನಿಂದ ಪಿಹೆಚ್‌ಡಿ ಪದವಿ ಪಡೆದರು.
ಸಂಶೋಧನೆ
ಬದಲಾಯಿಸಿಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ವಿಜ್ಞಾನಿ ಸಿ.ವಿ.ರಾಮನ್‌ರೊಂದಿಗೆ ಸಂಶೋಧನೆಯಲ್ಲಿ ತೊಡಗಿದರು. ವಿಶ್ವ ಕಿರಣಗಳ ತೀಕ್ಷ್ಣತೆಯಲ್ಲುಂಟಾಗುವ ಬದಲಾವಣೆಗಳ ಬಗ್ಗೆ ಸಂಶೋಧನೆ ನಡೆಸಿದರು ಹಾಗೂ ಅವುಗಳ ಕಾಲ ತೀಕ್ಷ್ಣತೆ ದಿನಕ್ಕೆ ೨ ಬಾರಿ ಬದಲಾಗುವುದನ್ನು ಕಂಡುಹಿಡಿದು,ಅದರ ಬಗ್ಗೆ ಪ್ರಬಂಧ ಬರೆದು ಪ್ರಕಟಿಸಿದರು.ಈ ವಿಚಾರ ಬಾಹ್ಯಾಕಾಶ ಸಂಶೋಧನೆಗಳಿಗೆ ಸಹಾಯಕವಾಯಿತು. (ವಸ್ತುಗಳನ್ನು ಒಡೆದಾಗ ದೊರೆಯುವ ಋಣ ವಿದ್ಯುತ್ಕಣ,ಧನ ವಿದ್ಯುತ್ಕಣ,ವಿದ್ಯುತ್ ಹೀನಕಣಗಳಲ್ಲದೆ, ಬೇರೆ ರೀತಿಯ ಬೇರೆ ತೂಕದ ಮೆಸಾನ್ ಕಣಗಳೂ ಇರುತ್ತವೆ. ಇವು ಕೂಡ ವಿಶ್ವಕಿರಣಗಳಿಂದ ಉತ್ಪತ್ತಿಯಾಗುತ್ತವೆ ಹಾಗೂ ನಿಮಿಷಕ್ಕೆ ೬೦ರಂತೆ ಪ್ರತಿಯೊಬ್ಬನ ದೇಹವನ್ನು ಹಾದು ಹೋಗುತ್ತವೆ.)
ಉದ್ಯೋಗ,ಸಾಧನೆ
ಬದಲಾಯಿಸಿಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೊರೆಟರಿಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಇವರು ಮುಂದೆ ಅದರ ನಿರ್ದೇಶಕರೂ ಆದರು (1965). ಹೈಡ್ರೊಜನಿನ ದೈನಿಕ ವ್ಯತ್ಯಯ ಅಯಾನುಗೋಳದಲ್ಲಿ ಆಗುವ ಬದಲಾವಣೆಗಿಂತಲೂ ಹೆಚ್ಚಾಗಿ ಕಾಂತಗೋಳದಲ್ಲಿ ಆಗುವ ಬದಲಾವಣೆಗಳನ್ನು ಅವಲಂಬಿಸಿದೆ ಎಂದು ಸೂಚಿಸಿದ ಖ್ಯಾತಿ ಇವರದ್ದು. ಮೀಸಾನ್ ದೂರದರ್ಶಕ ರಚನೆ; ಕೊಡೈಕೆನಾಲ್, ತಿರುವನಂತಪುರ ಮತ್ತು ಗುಲ್ಮಾರ್ಗ್‍ಗಳಲ್ಲಿ ಸಂಶೋಧನಾ ಠಾಣ್ಯ ಸ್ಥಾಪನೆ - ಇವು ಇವರ ವಿಶಿಷ್ಟ ಕೊಡುಗೆಗಳು. ಅಹಮದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ವಸ್ತ್ರೋದ್ಯಮ ಸಂಶೋಧನಸಂಸ್ಥೆ, ನೆಹರೂ ಫೌಂಡೇಶನ್ ಮತ್ತು ಕಮ್ಯೂನಿಟಿ ಸೈನ್ಸ್ ಸೆಂಟರ್‍ನಂಥ ಹಲವು ಸಂಸ್ಥೆಗಳ ಸ್ಥಾಪನೆಗೆ ಕಾರಣೀಭೂತರೂ ಆದರು.
ಯುರೇನಿಯಮ್ ಅದುರಿನ ಅನ್ವೇಷಣೆಗೆ ಆದ್ಯತೆ ನೀಡಿಕೆ, ಕಲ್ಪಾಕಮ್‍ನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಮಾಣದ ವೇಗವರ್ಧನೆ ಮತ್ತು ಭಾರತೀಯ ಸಂಪನ್ಮೂಲಗಳಿಂದಲೇ ಕೊಲ್ಕತಾದ ಸೈಕ್ಲೊಟ್ರಾನ್ ಸ್ಥಾಪನೆಗೆ ಚಾಲನೆ - ಇವು ವಿಕ್ರಮ್‍ರವರು ಭಾರತದ ಪರಮಾಣು ಶಕ್ತಿ ಮಂಡಲಿಯ ಅಧ್ಯಕ್ಷರಾದ(1966) ಅನಂತರ ಮಾಡಿದ ಸಾಧನೆಗಳು. ಭಾರತದ ಎಲೆಕ್ಟ್ರಾನಿಕ್ ಆಯೋಗದ ಹಾಗೂ ಸಂಯುಕ್ತ ರಾಷ್ಟ್ರ ಸಂಸ್ಥೆ ಸಂಘಟಿತ ಬಾಹ್ಯ ವ್ಯೋಮದ ಶಾಂತಿಯುತ ಉಪಯೋಗಗಳು ಅಧಿವೇಶನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.
ಊಧ್ರ್ವ ನಿಯಂತ್ರಣವನ್ನೊಳಗೊಂಡ ಅನುಕ್ರಮಶ್ರೇಣಿಯ ಸಾಂಸ್ಥಿಕ ಸಂರಚನೆಗಳು ಭಾರತಕ್ಕೆ ತಕ್ಕದ್ದಲ್ಲ ಎಂದು ದೃಢವಾಗಿ ನಂಬಿದ್ದ ಇವರು ಕ್ಷಿತಿಜೀಯ ನಿಯಂತ್ರಣ ಮತ್ತು ನಿರ್ವಹಣ ವ್ಯವಸ್ಥೆಗಳನ್ನು ಬೆಂಬಲಿಸಿದರು. ವ್ಯೋಮ ಸಂಶೋಧನೆಯಲ್ಲಿ ಭಾರತ ಸಾಧಿಸಿದ ಯಶಸ್ಸಿಗೆ ಅವರು ಸ್ಥಾಪಿಸಿದ ಇಂಥ ನಿರ್ವಹಣ ವ್ಯವಸ್ಥೆ ಕಾರಣವಾಯಿತು. ಭಾರತದ ಆವಶ್ಯಕತೆಗಳಿಗೆ ಪ್ರಸ್ತುತವಾದ ತಂತ್ರವಿದ್ಯಾಯೋಜನೆಯೊಂದನ್ನು ಇವರು ಹಾಕಿದ್ದರು. ಗದ್ದಲದಲ್ಲೂ ಸಂಗೀತವನ್ನು ಕೇಳಬಲ್ಲೆವಾದರೆ ನಾವು ಮಾಡುವ ಕೆಲಸ ಫಲಪ್ರದವಾಗುವುದು ನಿಶ್ಚಿತ ಎಂಬ ಇವರ ಹೇಳಿಕೆ ಇವರ ವೈಯಕ್ತಿಕ ಜೀವನದರ್ಶನದ ತಿರುಳು.
ಸಾಮಾನ್ಯವಾಗಿ ಪ್ರತಿ ದಿನ 16-18 ಗಂಟೆಗಳ ಕಾಲ ಕಾರ್ಯನಿರತರಾಗಿರುತ್ತಿದ್ದ ವಿಕ್ರಮ್ ಸಾರಾಭಾಯಿಯವರು ಕಾರ್ಯನಿಮಿತ್ತ ತುಂಬಾ ರಾಕೆಟ್ ಉಡಾವಣಾಕೇಂದ್ರಕ್ಕೆ ತೆರಳಿದ ಸಂದರ್ಭದಲ್ಲಿ ರಾತ್ರಿ ನಿದ್ರಿಸುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು (1971 ಡಿಸೆಂಬರ್ 30). ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯಿ ವ್ಯೋಮಕೇಂದ್ರ ಮತ್ತು ಪುಣೆಯ ಸಮೀಪದ ಆರ್ವಿಯಲ್ಲಿರುವ ವಿಕ್ರಮ್ ಭೂಠಾಣ್ಯ - ಇವು ಈ ಸ್ವದೇಶಪ್ರೇಮೀ ಭಾರತೀಯ ವಿಜ್ಞಾನಿಗೆ ರಾಷ್ಟ್ರ ಸಲ್ಲಿಸಿದ ಕೃತಜ್ಞತೆಯ ಪ್ರತೀಕಗಳು.
- ೧೯೬೬ರಲ್ಲಿ ಅಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜಹಾಂಗೀರ್ ಭಾಭಾ ನಿಧನ ಹೊಂದಿದಾಗ, ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡವರು ವಿಕ್ರಮ್ ಸಾರಾಭಾಯಿ. ಈ ಸ್ಥಾನದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅವರು ಒಳ್ಳೆಯ ಆಡಳಿತಗಾರರೆಂದು ಹೆಸರು ಪಡೆದರು. ಅಧ್ಯಕ್ಷ ಸ್ಥಾನದಲ್ಲಿದ್ದು ಕೊಂಡೇ ಅಹರ್ನಿಶಿ ಸಂಶೋಧನೆಗಳನ್ನು ಮಾಡಿದರು.
- ಅಹ್ಮದಾಬಾದಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ,ಕೆಲಕಾಲ ಅದರ ನಿರ್ದೇಶಕರಾಗಿದ್ದರು. ೧೯೫೫ರಲ್ಲಿ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ವಿಶ್ವಕಿರಣಗಳ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ತಮ್ಮ ೪೦ನೇ ವಯಸ್ಸಿನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನಡೆಸಿದ ಸಮ್ಮೇಳನವೊಂದರಲ್ಲಿ ಭೌತ ವಿಜ್ಞಾನ ವಿಭಾಗದ ಅಧ್ಯಕ್ಷತೆ ವಹಿಸಿದ್ದರು. ಇಷ್ಟೇ ಅಲ್ಲದೆ ಹಲವು ಸಂಘ,ಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ಅವು ಹೀಗಿವೆ:
- ಗ್ರೂಪ್ ಫಾರ್ ಇಂಪ್ರೂವ್‌ಮೆಂಟ್ ಆಫ್ ಸೈನ್ಸ್ ಎಜುಕೇಷನ್
- ನೆಹರೂ ಫೌಂಡೇಷನ್
- ಕಮ್ಯೂನಿಟಿ ಸೈನ್ಸ್ ಸೆಂಟರ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಪುರಸ್ಕಾರಗಳು
ಬದಲಾಯಿಸಿ- ೧೯೬೨-ಭಾರತ ಸರ್ಕಾರದ ಭಾಟ್ನಾಗರ್ ಸ್ಮಾರಕ ಪಾರಿತೋಷಕ
- ೧೯೬೬-ಪದ್ಮಭೂಷಣ
- ೧೯೭೨-(ಮರಣೋತ್ತರ)ಪದ್ಮವಿಭೂಷಣ
ವ್ಯಕ್ತಿತ್ವ
ಬದಲಾಯಿಸಿವಿಕ್ರಮ್ ಸಾರಾಭಾಯಿಯವರು ಎಲ್ಲಾ ಮನುಷ್ಯರನ್ನೂ ಸಮಾನವಾಗಿ ನೋಡುವ ವಿಶಾಲ ಮನೋಭಾವ ಹೊಂದಿದ್ದರು. ವ್ಯವಸಾಯ, ಕೈಗಾರಿಕೆ, ಹವಾಮಾನ ವೀಕ್ಷಣೆ, ಖನಿಜ ಶೋಧನೆ-ಹೀಗೆ ಎಲ್ಲಾವುದಕ್ಕೂ ಅಣುಶಕ್ತಿ ಕೇಂದ್ರಗಳು ಉಪಯೋಗವಾಗಬೇಕು ಎಂಬುದು ಇವರ ಅಭಿಪ್ರಾಯ ವಾಗಿತ್ತು. ಹೋಮಿಭಾಭಾ ಕಂಡ ಕನಸನ್ನು ನನಸಾಗಿಸುವಲ್ಲಿ ಅಪಾರ ಪರಿಶ್ರಮ ವಹಿಸಿದ್ದಾರೆ. ಒಟ್ಟಾರೆ ಅವರು ಭಾರತ ದೇಶದ ಒಬ್ಬ ದೊಡ್ಡ ವಿಜ್ಞಾನಿ.
ಉಲ್ಲೇಖಗಳು
ಬದಲಾಯಿಸಿ- ↑ http://www.mapsofindia.com/who-is-who/science-technology/vikram-sarabhai.html, Vikram Sarabhai Biography mapsofindia.com
- ↑ http://www.iloveindia.com/indian-heroes/vikram-sarabhai.html Vikram Sarabhai iloveindia.com
- ↑ cite news | url=https://www.prajavani.net/news/article/2017/08/12/513054.html | accessdate=12 ಆಗಸ್ಟ್ 2019