ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೪೬
ಭಾರತದ ಸ್ವಾತಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿ ಈಸ್ಟ್ ಇಂಡಿಯ ಕಂಪನಿಯು, ವಂಗದ ಅಧಿಕಾರವನ್ನು ಪಡೆದುಕೊಂಡಿತು. ಅಲ್ಲಿಂದ ಮುಂದೆ ಬಹುಬೇಗೆ ತಮ್ಮ ರಾಜಕೀಯ ನೀತಿಗಳಿಂದ ಭಾರತದ ಬಹುಭಾಗವನ್ನು ಕೈವಶ ಮಾಡಿಕೊಂಡಿತು. ೧೦೦ ವರ್ಷಗಳ ನಂತರ ೧೮೫೭ರಲ್ಲಿ ಆಂಗ್ಲರ ದಬ್ಬಾಳಿಕೆಯ ವಿರುದ್ಧ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ವ್ಯವಸ್ಥಿತವಾದ ಯೋಜನೆಯಿಲ್ಲದಿದ್ದರಿಂದ ವಿಫಲವಾಯಿತು. ೧೮೮೫ರಲ್ಲಿ ಸ್ಥಾಪಿತವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತೀಯರಿಗೆ ಹೆಚ್ಚು ಹಕ್ಕು-ಪ್ರಾತಿನಿಧ್ಯಗಳಿಗಾಗಿ ಹೋರಾಟ ಪ್ರಾರಂಭಿಸಿತು. ೨೦ನೇ ಶತಮಾನದ ಪ್ರಾರಂಭದ ವೇಳೆಗೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು, ಸಂಸ್ಕೃತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗತು.
೧೯೧೮ ಹಾಗು ೧೯೨೨ರ ನಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಅಹಿಂಸಾತ್ಮಕ ಅಸಹಕಾರ ಚಳವಳಿಯು ಹೋರಾಟಕ್ಕೆ ಮಹತ್ವದ ದಿಕ್ಕು ನೀಡಿತು. ೧೯೪೨ರಲ್ಲಿ ಬ್ರಿಟಿಷರು "ಭಾರತ ಬಿಟ್ಟು ತೊಲಗಿ" ಎನ್ನುವ ಒತ್ತಾಯದ ಬೇಡಿಕೆಯನ್ನು ಕಾಂಗ್ರೆಸ್ ಮಾಡಿತು. ೧೯೪೨ರಲ್ಲಿ ಸುಭಾಷಚಂದ್ರ ಬೋಸ್ರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಯಿತು. ಎರಡನೇ ಮಹಾಯುದ್ಧದ ನಂತರ ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತ ಹಾಗು ಪಾಕಿಸ್ತಾನವೆಂದು ಇಬ್ಭಾಗಿಸುವ ದೇಶವಿಭಜನೆಯ ಬೆಲೆ ತೆತ್ತ ಬಳಿಕ, ಭಾರತವು ೧೯೪೭ರ ಆಗಸ್ಟ್ ೧೫ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆಯಿತು.